Monday, December 13, 2010

Vishnu Sahasranaama 804-806

ವಿಷ್ಣು ಸಹಸ್ರನಾಮ:
ಸುವರ್ಣಬಿಂದುರಕ್ಷೋಭ್ಯಃ ಸರ್ವವಾಗೀಶ್ವರೇಶ್ವರಃ 
804) ಸುವರ್ಣಬಿಂದು
ಸುವರ್ಣಬಿಂದು ಎಂದರೆ ಬಂಗಾರದ ಚುಕ್ಕೆ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ಸು+ವರ್ಣ; ಅಂದರೆ ವರ್ಣಗಳಲ್ಲಿ ಅತ್ಯಂತ ಶ್ರೇಷ್ಠವಾದ ವರ್ಣ. ಸುವರ್ಣಬಿಂದು ಎಂದರೆ ಓಂಕಾರದ 'ಅ', 'ಉ', 'ಮ' ಹಾಗು 'ನಾದ'ದ ನಂತರ ಬರುವ ಬಿಂದು. ಓಂಕಾರದಲ್ಲಿ ನಮ್ಮ ಕಿವಿಗೆ ಕೇಳುವ ಕೊನೆಯ ವರ್ಣ ಬಿಂದು. ಓಂಕಾರದ ಬಿಂದುವಿನಿಂದ ಪ್ರತಿಪಾಧ್ಯನಾದ ಭಗವಂತ  ಸುವರ್ಣಬಿಂದು. ಓಂಕಾರದಲ್ಲಿ 'ಅ'ಕಾರ ಕೃಷ್ಣ ರೂಪವನ್ನು, 'ಉ'ಕಾರ ರಾಮ ರೂಪವನ್ನು,'ಮ'ಕಾರ ನರಸಿಂಹ ರೂಪವನ್ನು ಪ್ರತಿಪಾದಿಸಿದರೆ, ಬಿಂದು ಭಗವಂತನ ವಿಷ್ಣು ರೂಪವನ್ನು ಪ್ರತಿಪಾದಿಸುತ್ತದೆ.  ಜಗತ್ತಿನ ಸರ್ವ ಸಾಹಿತ್ಯದಲ್ಲಿ ಶ್ರೇಷ್ಠವಾದ ದಿವ್ಯ ಅನುಭೂತಿಯನ್ನು ಹೇಳುವ ಮಹಾಭಾರತ ಹಾಗು ವೇದಗಳಿಂದ ವಾಚ್ಯನಾದ ಭಗವಂತ ಸುವರ್ಣಬಿಂದು.          
805) ಅಕ್ಷೋಭ್ಯಃ
ಭಗವಂತನನ್ನು ಕೆಂಗೆಡಿಸಲು ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ. ಎಲ್ಲರೂ ತಮ್ಮ ಪದವಿಯನ್ನು ಒಂದಲ್ಲ ಒಂದುದಿನ ಕಳೆದುಕೊಳ್ಳಲೇಬೇಕು, ಆದರೆ ಭಗವಂತನ ಪದವಿ ಎಂದು ಬದಲಾಗದು. ಇಂತಹ ಭಗವಂತ ಅಕ್ಷೋಭ್ಯಃ.
806) ಸರ್ವವಾಗೀಶ್ವರೇಶ್ವರಃ
ಒಬ್ಬರ ಭಾವನೆಯನ್ನು ಇನ್ನೊಬ್ಬರಿಗೆ ತಿಳಿಸುವ ನಾದ ಮಾತು ಅಥವಾ 'ವಾಕ್'. ಮನುಷ್ಯ ಮಾತ್ರವಲ್ಲ, ಪ್ರಾಣಿಗಳೂ ಸಹ ನಾದದ ಮುಖೇನ ಮಾತನಾಡಿಕೊಳ್ಳುತ್ತವೆ.ಎಲ್ಲಾ ಮಾತುಗಳ ಒಡತಿ ಸರಸ್ವತಿ. ಪಾರ್ವತಿಯನ್ನೂ ಕೂಡಾ ಒಂದು ನೆಲೆಯಲ್ಲಿ ವಾಗೀಶ್ವರಿ ಎಂದು ಕರೆಯುತ್ತಾರೆ. ಏಕೆಂದರೆ ಮಾತು ಮತ್ತು ಮನಸ್ಸು ದಂಪತಿಗಳಿದ್ದಂತೆ. ಮನಸ್ಸು ಶಿವ, ಮಾತು ಪಾರ್ವತಿ. ಮನಸ್ಸು ಯೋಚಿಸಿದ್ದನ್ನು ಮಾತು ಹೇಳುತ್ತದೆ. ಆದ್ದರಿಂದ ನಮ್ಮೊಳಗಿರುವ ಶಿವಶಕ್ತಿ ಮತ್ತು ಪಾರ್ವತಿ ಶಕ್ತಿಯೇ ನಮ್ಮ ಮನನ ಮತ್ತು ಮಾತುಗಳ ಹಿಂದಿರುವ ಶಕ್ತಿ. ಇಷ್ಟೇ ಅಲ್ಲದೆ ಭಾರತಿ-ಸರಸ್ವತಿ, ಬ್ರಹ್ಮ-ವಾಯು ಇವರೆಲ್ಲರೂ ಸರ್ವವಾಗೀಶ್ವರರು. ಇವರೆಲ್ಲರ ಒಡೆಯ ಸರ್ವಶಬ್ಧ ವಾಚ್ಯನಾದ ಪರಶಕ್ತಿಯಾದ ಭಗವಂತ
ಸರ್ವವಾಗೀಶ್ವರೇಶ್ವರಃ.

No comments:

Post a Comment