Sunday, December 5, 2010

Vishnu sahasranama 764-768

ವಿಷ್ಣು ಸಹಸ್ರನಾಮ:
ಪ್ರಗ್ರಹೋ ನಿಗ್ರಹೋ ವ್ಯಗ್ರೋ ನೈಕಶೃಂಗೋ ಗದಾಗ್ರಜಃ
764) ಪ್ರಗ್ರಹಃ
ದುರ್ಜನರಿಗೆ ಕಡಿವಾಣ ಹಾಕುವ ಭಗವಂತ ಪ್ರಗ್ರಹಃ. ಎಲ್ಲರ ಮನಸ್ಸಿನೊಳಗೆ ಸನ್ನಿಹಿತನಾಗಿದ್ದು ನಿಯಂತ್ರಿಸುವವ, ಮನಸ್ಸಿನಿಂದ ಅರ್ಪಿಸಿದರೆ ಅದನ್ನು ಸ್ವೀಕರಿಸಿ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವ ಭಗವಂತ ಪ್ರಗ್ರಹಃ
765) ನಿಗ್ರಹಃ
ದುರ್ಜನರನ್ನು ದಮನಿಸುವವನು ನಿಗ್ರಹಃ. ಭಗವಂತನನ್ನು ಒಪ್ಪದೇ ಅಧರ್ಮದ ದಾರಿಯಲ್ಲಿ ನೆಡೆಯುವವರನ್ನು ಶಾಶ್ವತವಾಗಿ ನಿಗ್ರಹಿಸುವ ಭಗವಂತ  ನಿಗ್ರಹಃ. ಇದನ್ನೇ ಗೀತೆಯಲ್ಲಿ ಹೀಗೆ ಹೇಳಿದ್ದಾರೆ:
ತಾನಹಂ ದ್ವಿಷತಃ ಕ್ರೂರಾನ್ ಸಂಸಾರೇಷು ನರಾಧಮಾನ್ |
ಕ್ಷಿಪಾಮ್ಯಜಸ್ರಮಶುಭಾನಾಸುರೀಷ್ವೇವ ಯೋನಿಷು || (ಅ-೧೬; ಶ್ಲೋ-೧೯)
ಆಸುರೀಂ ಯೋನಿಮಾಪನ್ನಾ ಮೂಢಾ ಜನ್ಮನಿ ಜನ್ಮನಿ ।
ಮಾಮಪ್ರಾಪ್ಯೈವ ಕೌಂತೇಯ ತತೋ ಯಾಂತ್ಯಧಮಾಂ ಗತಿಮ್ || (ಅ-೧೬; ಶ್ಲೋ-೨೦)
"ಪರತತ್ವವನ್ನು ದ್ವೇಷಿಸುವ, ಕನಿಕರವಿಲ್ಲದ ಕೊಳಕಾದ ಅಂಥ ನೀಚ ಮನುಜರನ್ನು ನಾನು ನಿರಂತರವಾಗಿ ಬಾಳ ಬವಣೆಗಳಲ್ಲಿ, ಕೆಡುನಡೆಯ ಬಸಿರುಗಳಲ್ಲಿ ಕೆಡುವುತ್ತೇನೆ. ಕೆಡುನಡೆಯ ಬಸಿರಿನಲ್ಲಿ ಮರಳಿ ಮರಳಿ ಹುಟ್ಟಿಬಂದ ಆ ತಿಳಿಗೇಡಿಗಳು ಕೊನೆಗೂ ನನ್ನನ್ನು ಸೇರದೆಯೆ, ಅಲ್ಲಿಂದ ಮತ್ತೆ ಅಧೋಗತಿಯನ್ನು ಪಡೆಯುತ್ತಾರೆ".ಇದು ನಿಗ್ರಹಃ ನಾಮದ ತಾತ್ಪರ್ಯ.
766) ವ್ಯಗ್ರಃ
ದುಷ್ಟರ ದುಷ್ಟತನ ಅತಿರೇಕವನ್ನು ಕಂಡಾಗ ಸಿಟ್ಟಿಗೇಳುವ ಭಗವಂತ ವ್ಯಗ್ರಃ. ಇನ್ನೊಂದು  ಅರ್ಥದಲ್ಲಿ ಅವನು ವಿಗತ+ಅಗ್ರಃ,  ವ್ಯಗ್ರಃ ಎಂದರೆ ಕೊನೆ ಇಲ್ಲದವನು. ಎಲ್ಲವುದರ ಕೊನೆ ಅವನೇ (last destination).
767) ನೈಕಶೃಂಗಃ

ಅನೇಕ  ಕೋಡುಗಳುಳ್ಳವನು! ಶೃಂಗ(ಪರ್ವತ)ಗಳಲ್ಲಿ  ಸನ್ನಿಹಿತನಾದವನು ನೈಕಶೃಂಗಃ . ವೇದದಲ್ಲಿ ಭಗವಂತನನ್ನು ನಾಲ್ಕು ಕೋಡಿನ ಎತ್ತು ಎಂದು ಕರೆದಿದ್ದಾರೆ. ಇಲ್ಲಿ ಕೋಡು ಎಂದರೆ ಗುರುತಿಸುವ ಸಾಧನ. ಭಗವಂತ ನಾಲ್ಕು ಬಗೆಯ ಶಬ್ಧಗಳಿಂದ ವಾಚ್ಯನಾದವ. (೧) ನಾಮಪದ (೨)  ಕ್ರಿಯಾಪದ (೩) ಉಪಸರ್ಗಗಳು (೪) ಅವ್ಯಯಗಳು. ಈ ನಾಲ್ಕು ಸೇರಿ ಆಗಿರುವ ನಾಲ್ಕು ವೇದಗಳು. ಈ ನಾಲ್ಕು ವೇದಗಳಿಂದ  ವಾಚ್ಯನಾದ ಭಗವಂತ ನೈಕಶೃಂಗಃ.
768) ಗದಾಗ್ರಜಃ
ಗದಾ  ಅನ್ನುವವನು ರೋಹಿಣಿಯ ಮಗನಲ್ಲಿ ಒಬ್ಬ. ಆತ ಕೃಷ್ಣನನ್ನು ನೆರಳಂತೆ ಅನುಸರಿಸಿದವನು. ಈ ಕಾರಣಕ್ಕಾಗಿ ಭಗವಂತನನ್ನು ಗದನ ಅಣ್ಣ ಎಂದು ಕರೆಯುತ್ತಾರೆ. ಆದರೆ ಇದು ಕೇವಲ ಕೃಷ್ಣಾವತಾರಕ್ಕೆ ಸಂಬಂಧಪಟ್ಟದ್ದು. ಗದಾ ಎನ್ನುವುದಕ್ಕೆ ಇನ್ನೂ ಅನೇಕ ಅರ್ಥಗಳಿವೆ. ಸ್ಪಷ್ಟವಾದ ಮಾತುಗಾರಿಕೆಗೆ ಗದಾ ಎನ್ನುತ್ತಾರೆ. ಗದ್ಯರೂಪದ ಸಮಸ್ತ ವೇದ ಮಂತ್ರಗಳಿಂದ ವಾಚ್ಯನಾಗಿ, ಯಜುರ್ವೇದದ ಮಂತ್ರಗಳಿಂದ ಅಗ್ನಿರೂಪದಲ್ಲಿ ಅಭಿವ್ಯಕ್ತನಾಗುವ ಭಗವಂತ ಗದಾಗ್ರಜಃ. ಗದೆಯ ತುದಿಯಿಂದ ಅರಿಗಳನ್ನು ತರಿದ ಭಗವಂತ ಗದಾಗ್ರಜಃ.      

No comments:

Post a Comment