Tuesday, December 14, 2010

Vishnu sahasranama 811-816

ವಿಷ್ಣು ಸಹಸ್ರನಾಮ:
ಕುಮುದಃ ಕುಂದರಃ ಕುಂದಃ ಪರ್ಜನ್ಯಃ ಪಾವನೋನಿಲಃ
811) ಕುಮುದಃ
ಕು+ಮುದ; ಇಡೀ ಜಗತ್ತಿಗೆ ಆನಂದವನ್ನು ಕೊಡತಕ್ಕಂತಹ ಶಕ್ತಿ. 'ಕು' ಎಂದರೆ ಭೂಮಿ. ಭೂಮಿಗೆ ಮುದವನ್ನಿತ್ತವನು ಕುಮುದಃ. 'ಕು' ಎಂದರೆ 'ಕುಸ್ಸಿತ', ನಮ್ಮನ್ನು ಕುಸ್ಸಿತವಾದ, ಕ್ಷುದ್ರವಾದ, ಆನಂದದ ಬೆನ್ನಹಿಂದೆ ಹೋಗುವಂತೆ ಮಾಡುವವನೂ ಅವನೇ! ಈ ಹಿಂದೆ ಹೇಳಿದಂತೆ ಇದು ಅವನ ಶಿಕ್ಷಣ ಪದ್ಧತಿ. 
812) ಕುಂದರಃ
'ಕುಂದ' ಎನ್ನುವುದು ಒಂದು ಹೂವಿನ ಹೆಸರು(Jasmine flower). ಭಗವಂತನಿಗೆ 'ಕುಂದ' ಪುಷ್ಪ ತುಂಬಾ ಇಷ್ಟ. ಭಗವಂತನ ಮಂದಹಾಸ ಬೀರುವ ತುಟಿಗಳು 'ಕುಂದ' ಪುಷ್ಪದಂತೆ ಎಂದು ಭಾಗವತದಲ್ಲಿ ಈ ರೀತಿ ವರ್ಣನೆ ಮಾಡಿದ್ದಾರೆ:  
ತೇ ವೈ  ಅಮೂಸ್ಯ  ವದನೈಸಿತ ಪದ್ಮ ಕೋಶಂ
ಉದ್ವಿಕ್ಷ್ಯ ಸುಂದರತರಧರ ಕುಂದಹಾಸಂ
ಅಂದರೆ " ಭಗವಂತನ ಸುಂದರ ಮುಖ ತಾವರೆಯಂತೆ, ಆತನ ಮುಗುಳ್ನಗು ಅರಳುತ್ತಿರುವ ಕುಂದ ಪುಷ್ಪದಂತೆ". ಹೀಗೆ ಸದಾ ಮಂದಹಾಸದಿಂದಿರುವ ಆನಂದಮೂರ್ತಿ ಭಗವಂತ ಕುಂದರಃ.
ಕುಂ-ದದಾತೀತಿ ಕುಂದರಃ, ಇಲ್ಲಿ ಕುಂ ಅಂದರೆ ಭೂಮಿ,  ನಮ್ಮ ವಾಸಕ್ಕೊಸ್ಕರ ಭೂಮಿಯನ್ನು ಕೊಟ್ಟು ಅದರಲ್ಲಿ ನೆಲೆಸಿ ಆನಂದವನ್ನು ಕೊಡುವ ಭಗವಂತ ಕುಂದರಃ.    
813) ಕುಂದಃ
ಕುಂ-ದ್ಯತೀತಿ ಕುಂದಃ; ಕುಸ್ಸಿತವಾದ ಕೆಟ್ಟ ಆಲೋಚನೆಯನ್ನು ಹೊಂದಿದ ದುಷ್ಟರನ್ನು ನಿಗ್ರಹಿಸುವ(ದ್ಯತಿ) ಭಗವಂತ ಕುಂದಃ. ಅಂತಹ ಜನರಿಗೆ ನಿಲ್ಲಲು ನೆಲೆ ಕೂಡಾ ಇರದು. 
814) ಪರ್ಜನ್ಯಃ
ಪರ್ಜನ್ಯ ಎಂದರೆ ಪ್ರಸಿದ್ಧವಾದ ಅರ್ಥ ಮೋಡ. ಮಳೆ ಬಾರದಿದ್ದಾಗ ಮಳೆಗಾಗಿ ಪರ್ಜನ್ಯ ಮಂತ್ರ ಜಪ ಮಾಡುತ್ತಾರೆ. ಪರ+ಜನ್ಯ-ಪರ್ಜನ್ಯ, ಯಾವುದರಿಂದ ನಾವು ಬದುಕುತ್ತೆವೋ, ಯಾವುದು ನಮಗೆ ಆಹಾರವೋ ಅದು 'ಪರ'. ಸಸ್ಯಗಳು, ಧಾನ್ಯಗಳು, ಹೂ-ಹಣ್ಣು-ತರಕಾರಿಗಳು 'ಪರ'. ಇಂತಹ ನಮ್ಮನ್ನು ಬದುಕಿಸುವ ಗಿಡಗಳು ಯಾರಿಂದ ಜನ್ಯವೋ ಅವನು ಪರ್ಜನ್ಯಃ. ಈ ಗಿಡಗಳು ಹುಟ್ಟಿ ಬೆಳೆದು ಫಲವನ್ನು ಕೊಡಬೇಕಾದರೆ ಮಳೆ ಬೇಕು. ಇಳೆಗೆ ಮಳೆಯನ್ನು ಕೊಟ್ಟು ಸಲಹುವ ಭಗವಂತ ಪರ್ಜನ್ಯಃ.     
815) ಪಾವನಃ
ನಮ್ಮೊಳಗಿದ್ದು ನಮ್ಮನ್ನು ಪವಿತ್ರಗೊಳಿಸುವ ಭಗವಂತ ಪಾವನಃ. ಆತ ನಮ್ಮೊಳಗಿದ್ದರೆ ಈ ಶರೀರ 'ಶಿವ', ಇಲ್ಲದಿದ್ದರೆ 'ಶವ'
816) ಅನಿಲಃ
ನೆಲೆ ಇರದವನು. ಸರ್ವಾಂತರ್ಯಾಮಿಯಾದ  ಭಗವಂತನಿಗೆ ಇಂತದ್ದೇ ಎನ್ನುವ ನೆಲೆಯೊಂದಿಲ್ಲ. ವಾಯು ಅಥವಾ ಪ್ರಾಣತತ್ವವನ್ನು ಭಜಿಸುವ ಭಕ್ತರು ಆತನಿಗೆ ಅತೀ ಪ್ರೀಯ. 'ಪ್ರಾಣ' ಆತನ ಆತ್ಮೀಯ. ಪ್ರಾಣತತ್ವದಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಅನಿಲಃ.

No comments:

Post a Comment