Sunday, December 19, 2010

Vishnu Sahasranama 888-896

ವಿಷ್ಣು ಸಹಸ್ರನಾಮ:
ಅನಂತೋ ಹುತಭುಗ್ಭೋಕ್ತಾ ಸುಖದೋ ನೈಕಜೋಗ್ರಜಃ
ಅನಿರ್ವಿಣ್ಣಃ ಸದಾಮರ್ಷೀ ಲೋಕಾಧಿಷ್ಠಾನಮದ್ಭುತಃ
888) ಅನಂತಃ
ಎಲ್ಲವುದರ ಕೊನೆಯಾದಾಗಲೂ ಕೊನೆಯಾಗದೇ ಉಳಿಯುವ ಏಕೈಕ ತತ್ವ ಭಗವಂತ ಅನಂತಃ. ಅನಂತ ಅಂದರೆ 'ಶೇಷ' ಶೇಷನ ಅಂತರ್ಯಾಮಿಯಾಗಿರುವ ಅನಂತಶಯನ ಭಗವಂತ ಅನಂತಃ.   
889) ಹುತಭುಗ್ಭೋಕ್ತಾ
ನಾವು ಅಕ್ಕರೆಯಿಂದ ಆಪ್ತನಾಗಿ, ಮನಃಪೂರ್ವಕವಾಗಿ, ಶರಣಾಗತಿಯಿಂದ ಘಜೇಂದ್ರನಂತೆ  ಮೊರೆಯಿಟ್ಟಾಗ ಬಂದು ನಮ್ಮನ್ನು ರಕ್ಷಿಸುವ ಭಗವಂತನ ಕಾಣದ ಕೈ ಸದಾ ನಮ್ಮನ್ನು ಕಾಪಾಡುತ್ತಿರುತ್ತದೆ. ಪ್ರೀತಿಯಿಂದ ನಾವು ಅಗ್ನಿಮುಖೇನ ಕೊಡುವ ಆಹುತಿಯನ್ನು ಸ್ವೀಕರಿಸಿ ರಕ್ಷಿಸುವ, ಜಗತ್ತಿನ ಸಮಸ್ತ ವಿಷಯವನ್ನು ಭೂಗಿಸುವ ಹಾಗು ಎಲ್ಲರಿಗೂ ಸುಖ-ದುಃಖವನ್ನು ಕೊಟ್ಟು ಪಾಲಿಸುವ ಭಗವಂತ ಹುತಭುಗ್ಭೋಕ್ತಾ
890) ಸುಖದಃ
ನಮಗೆ ಸುಖವನ್ನು ಕೊಡುವವನು, ನಮ್ಮ ಸುಖವನ್ನು ಕಸಿದುಕೊಳ್ಳುವವನೂ ಭಗವಂತ! ಇಲ್ಲಿ ಕಸಿದುಕೊಳ್ಳುವುದು ಎಂದರೆ ಹೊಟ್ಟೆಕಿಚ್ಚಿನಿಂದ ಹಿಂದೆ ಪಡೆಯುವುದಲ್ಲ. ತಾಯಿ ತನ್ನ ಮಗುವಿಗೆ ಶಿಕ್ಷೆ ಕೊಟ್ಟು ಒಳ್ಳೆಯವನಾಗಿ ಹೇಗೆ ಬೆಳೆಸುತ್ತಾಳೋ  ಹಾಗೇ ಭಗವಂತ ನಾವು ದಾರಿ ತಪ್ಪಿದಾಗ ನಮಗೆ ದುಃಖ ಕೊಟ್ಟು ಉದ್ಧರಿಸುತ್ತಾನೆ.  
891) ನೈಕಜಃ
ಅನಂತ ರೂಪದಲ್ಲಿ ಅನಂತ ಜೀವರಲ್ಲಿ ತುಂಬಿರುವ ಭಗವಂತ ಏಕ ತತ್ವ. ಹಲವು ಅವತಾರ ತಾಳಿದ ಭಗವಂತ ನೈಕಜ.
892) ಅಗ್ರಜಃ
ಎಲ್ಲಕ್ಕಿಂತ ಮೊದಲು ಚತುರ್ಮೂರ್ತಿಯಾಗಿ ಅವತರಿಸಿ ಈ ಪ್ರಪಂಚ ಸೃಷ್ಟಿ ಮಾಡಿದ  ಭಗವಂತ ಎಲ್ಲರ ಹಿರಿಯಣ್ಣ. 
893) ಅನಿರ್ವಿಣ್ಣಃ
ಭಗವಂತ ಎಂದೂ ಬೇಸರಗೊಳ್ಳದವನು. ಆತನಿಗೆ ಎಂದೂ ವೈರಾಗ್ಯವಿಲ್ಲ. ಸಾಮಾನ್ಯವಾಗಿ ನಮಗೆ ವೈರಾಗ್ಯ ಬರುವುದು ಕೊರತೆಯಿಂದ. ಭಗವಂತನಿಗೆಲ್ಲಿಯ ಕೊರತೆ? ಭಗವಂತನ ಈ ಗುಣವನ್ನು ನಾವು ಆತನ ಕೃಷ್ಣಾವತಾರದಲ್ಲಿ ಕಾಣಬಹುದು. ಗಾಂಧಾರಿ ಕೃಷ್ಣನಿಗೆ ನಿನ್ನ ಯಾದವ ವಂಶ ನಾಶವಾಗಿ ಹೋಗಲಿ ಎಂದು ಶಾಪ ಕೊಟ್ಟಾಗ, ಯಾದವರೆಲ್ಲರು ಹೊಡೆದಾಡಿಕೊಂಡು ಸಾಯುತ್ತಿರುವಾಗಲೂ ಸಹ ಕೃಷ್ಣ ನಗುತ್ತ ನಿಂತಿದ್ದ! ಭಗವಂತ ಎಂದೂ ನಿರ್ವೇದ ಕಾಡದ ಉತ್ಸಾಹದ ಚಿಲುಮೆ, ಆತ ಅನಿರ್ವಿಣ್ಣಃ.
894) ಸದಾಮರ್ಷೀ
ಮರ್ಷಿ ಎಂದರೆ ತಡೆದುಕೊಳ್ಳುವುದು(tolerate), ಭಗವಂತ ಸದಾ 'ಮರ್ಷಿ', ಸಾತ್ವಿಕರಿಂದ ತಿಳಿಯದೆ ತಪ್ಪಾದಾಗ ಅದನ್ನು ಆತ ಕ್ಷಮಿಸುತ್ತಾನೆ. ಆದರೆ ಆತ ಸದಾ 'ಅಮರ್ಷಿ' ಕೂಡಾ ಹೌದು. ಆತ ದುಷ್ಟತನವನ್ನು ಎಂದೂ ತಾಳಿಕೊಳ್ಳುವುದಿಲ್ಲ. ಆತನ ಮೂಲ ಉದ್ದೇಶ ದುಷ್ಟ ನಾಶನ ಶಿಷ್ಟ ರಕ್ಷಣ.     
895) ಲೋಕಾಧಿಷ್ಠಾನಮ್
ಭಗವಂತ ಇಡಿಯ ಲೋಕಕ್ಕೆ ಮೂಲಾಧಾರ. ಆತ ಇಡಿಯ ಜಗತ್ತನ್ನು ಧಾರಣೆ ಮಾಡಿರುವ  ಏಕೈಕ ಕೊನೆಯ ಆಸರೆ.
896) ಅದ್ಭುತಃ
ಭಗವಂತ ಎಲ್ಲಕ್ಕಿಂತ ವಿಸ್ಮಯ. ಆತನನ್ನು ನೋಡಿದವರಿಗೂ ಕೂಡಾ ಆತನ ವರ್ಣನೆ ಸಾಧ್ಯವಿಲ್ಲ. ಏಕೆಂದರೆ ಆತ ಅಚ್ಚರಿಯೊಳಚ್ಚರಿ. ಇದನ್ನು ಗೀತೆಯಲ್ಲಿ ಹೀಗೆ ಹೇಳಿದ್ದಾರೆ:    
ಆಶ್ಚರ್ಯವತ್ಪಶ್ಯತಿ ಕಶ್ಚಿದೇನಮಾಶ್ಚರ್ಯವದ್ವದತಿ ತಥೈವ ಚಾನ್ಯಃ    ।
ಆಶ್ಚರ್ಯವಚ್ಚೈನಮನ್ಯಃ ಶೃಣೋತಿ ಶ್ರುತ್ವಾऽಪ್ಯೇನಂ ವೇದ ನಚೈವ ಕಶ್ಚಿತ್ ॥ಅ-೨, ಶ್ಲೋ-೨೯॥
ಅಂದರೆ "ಯಾರೋ ಒಬ್ಬ ಭಗವಂತನನ್ನು ಅಚ್ಚರಿಯಿಂದ ನೋಡುತ್ತಾನೆ, ಯಾರೋ ಒಬ್ಬ ಅಚ್ಚರಿಗೊಂಡು ಆಡುತ್ತಾನೆ , ಯಾರೋ ಒಬ್ಬ ಅವನನ್ನು ಅಚ್ಚರಿಗೊಂಡು ಕೇಳುತ್ತಾನೆ. ಎಷ್ಟು ಕೇಳಿದರೂ ಅವನನ್ನು ಸರಿಯಾಗಿ ಅರಿತವರು ಯಾರೂ ಇಲ್ಲ" ಆತ ಅದ್ಭುತಃ.

No comments:

Post a Comment