Tuesday, December 21, 2010

Vishnu Sahasranama 942-949

ವಿಷ್ಣು ಸಹಸ್ರನಾಮ:
ಅನಾದಿರ್ಭೂರ್ಭುವೋ ಲಕ್ಷ್ಮೀಸ್ಸುವೀರೋ ರುಚಿರಾಂಗದಃ
ಜನನೋ ಜನಜನ್ಮಾದಿರ್ಭೀಮೋ ಭೀಮಪರಾಕ್ರಮಃ
942) ಅನಾದಿಃ
ಭಗವಂತ ಆದಿ-ಅಂತ ಇಲ್ಲದವನು, ಆತನ ಸೃಷ್ಟಿ ಅನಾದಿನಿತ್ಯ. 
943) ರ್ಭೂರ್ಭುವೋ ಲಕ್ಷ್ಮೀಃ
ಈ ನಾಮವನ್ನು ಅನೇಕರೀತಿಯಲ್ಲಿ ಒಡೆದು ಬೇರೆ ಬೇರೆ ಅರ್ಥವನ್ನು ಕಾಣಬಹುದು. ಭೂಃ, ಭುವಃ, ಲಕ್ಷ್ಮೀಃ, ರ್ಭೂಭುವಃ, ಭುವೋ ಲಕ್ಷ್ಮೀಃ, ರ್ಭೂರ್ಭುವೋ ಲಕ್ಷ್ಮೀಃ ಇತ್ಯಾದಿ. ಭೂಃ ಎಂದರೆ ಸದಾ ಭವತಿ, ಎಂದೆಂದೂ ಆನಂದಮಯನಾಗಿರುವ ಪರಿಪೂರ್ಣ ಸ್ವರೂಪ; ಭುವಃ ಎಂದರೆ ಜಗತ್ತಿನಲ್ಲಿರುವ ಸರ್ವ ಉನ್ನತಿಕೆಯ ಉನ್ನತಿಯಲ್ಲಿರುವವನು, ಅದಕ್ಕಿಂತ ಮೇಲಿರುವ ಇನ್ನೊಂದು ವಸ್ತುವಿಲ್ಲ; ಲಕ್ಷ್ಮೀಃ ಎಂದರೆ ಸರ್ವ ಲಕ್ಷಣಗಳ ಸಾಕಾರ ಮೂರ್ತಿ. ರ್ಭೂರ್ಭುವೋ ಲಕ್ಷ್ಮೀಃ ಎಂದರೆ ಭೂಃ, ಭುವಃ ಸುವಃ -ಈ ಮೂರು ಲೋಕಗಳ ಸಂಪತ್ತಿನ ಒಡೆಯ.
944) ಸವೀರಃ
ಪ್ರತಿಯೊಬ್ಬರೊಳಗಿದ್ದು, ಒಬ್ಬೊಬ್ಬರಲ್ಲಿ ಅವರವ ಚೇತನದ ಸ್ಥಿತಿ-ಗತಿಗೆ ತಕ್ಕಂತೆ ಪ್ರೇರಣೆಯನ್ನು ಕೊಟ್ಟು ಆನಂದವನ್ನು ಕೊಡುವವನು ಸವೀರಃ. ಇಂತಹ ಸುಖ ಕಾರ್ಯಕ್ಕೆ ಅಡ್ಡಗಾಲಾಗಿ ಬರುವ ದುಷ್ಟ ಶಕ್ತಿಯನ್ನು ದಮನಮಾಡುವ ವೀರ ಭಗವಂತ ಸವೀರಃ. ಮಹಾ ವೀರರಾದ ಗರುಡ(ವಿ) ಮತ್ತು ಪ್ರಾಣ(ಈರ) ದೇವರಿಂದ ಸದಾ ಸುತ್ತುವರಿದಿರುವ ಭಗವಂತ ಸವೀರಃ.
945) ರುಚಿರಾಂಗದಃ
ಸುಂದರವಾದ ತೊಳ್ಭಂದಿ ತೊಟ್ಟವನು. ಸದಾ ಬೆಳಕನ್ನು ಕೊಡುವ ಜ್ಞಾನಾನಂದಮಯವಾದ ಆಭರಣ ತೊಟ್ಟ ಭಗವಂತ ರುಚಿರಾಂಗದಃ. ಹೀಗೆ ಆನಂದಮಯವಾದ ಸ್ವರೂಪಭೂತವಾದ ಅಂಗವುಳ್ಳ ಭಗವಂತ ನಮಗೆ ಮೋಕ್ಷದಲ್ಲಿ ಸ್ವರೂಪಭೂತ ಶರೀರವನ್ನು ಕರುಣಿಸುವ ಕರುಣಾಮೂರ್ತಿ.
946) ಜನನಃ
ಜನಯತೀತಿ ಜನನಃ; ಇಡೀ ಜಗತ್ತಿನ ಸೃಷ್ಟಿಗೆ ಕಾರಣನಾದ ಭಗವಂತ ಜನನಃ. ಅದೇ ರೀತಿ ಆತ ನಜನಯತಿ ಕೂಡಾ ಹೌದು. ಅಂದರೆ ನಮಗೆ ಹುಟ್ಟು ಇಲ್ಲದ ಮೋಕ್ಷ ಸ್ಥಿತಿಯನ್ನು ದಯಪಾಲಿಸುವವನು.   
947) ಜನಜನ್ಮಾದಿಃ
ಜೀವದ ಹುಟ್ಟಿಗೆ ಮೂಲ ಕಾರಣ ಭಗವಂತ-ಜನಜನ್ಮಾದಿಃ. ಪ್ರತಿಯೊಂದು ಜೀವಕ್ಕೆ ಒಂದು ಜನ್ಮವಿದೆ. ಈ ಜನ್ಮಕ್ಕೆ ಆದಿ ಕಾರಣ ಭಗವಂತ. ಜೀವದ ಹುಟ್ಟನ್ನು ಸ್ವೀಕಾರಮಾಡಿ ಮುಂದೆ ಹುಟ್ಟಿಲ್ಲದ ಮೋಕ್ಷವನ್ನು ಕರುಣಿಸುವ ಭಗವಂತ ಜನಜನ್ಮಾದಿಃ  
948) ಭೀಮಃ
ತಪ್ಪು ಮಾಡಿದವರಿಗೆ ಭಯಂಕರ ಹಾಗು ಸಜ್ಜನರಿಗೆ ಅಭಯಂಕರನಾದ ಭಗವಂತ  ಭೀಮಃ
949) ಭೀಮಪರಾಕ್ರಮಃ
ಭಗವಂತನ ಪೌರುಷಕ್ಕೆ ಸಾಟಿ ಇಲ್ಲ. ಭಯ ಬರಿಸುವ ಪೌರುಷವುಳ್ಳ, ಸಜ್ಜನರಿಗೆ ಅಭಯಪ್ರದನಾದ ಭಗವಂತ
ಭೀಮಪರಾಕ್ರಮಃ

No comments:

Post a Comment