Thursday, December 16, 2010

Vishnusahasranama 830-833

ವಿಷ್ಣು ಸಹಸ್ರನಾಮ:
ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತೈಧಾಃ ಸಪ್ತವಾಹನಃ
830) ಸಹಸ್ರಾರ್ಚಿಃ
ಸಹಸ್ರ +ಅರ್ಚಿ; ಇಲ್ಲಿ ಸಹಸ್ರ ಎಂದರೆ ಸಾವಿರಾರು ಅಥವಾ ಅನಂತ; ಅರ್ಚಿ ಎಂದರೆ ಜ್ವಾಲೆ, ಅಂಶು, ಬೆಳಕಿನ ಕಿಡಿಗಳು ಇತ್ಯಾದಿ. ಸೂರ್ಯ ಮಂಡಲದ ಮಧ್ಯದಲ್ಲಿದ್ದು, ಈ ಜಗತ್ತಿಗೆ ಸೌರಶಕ್ತಿಯನ್ನು ಕೊಟ್ಟು ಬದುಕಿಸುವ ಭಗವಂತ ಸಹಸ್ರಾರ್ಚಿಃ. ಸಹಸ್ರಾರು ಅವತಾರಗಳನ್ನು ತಾಳಿ ಜೀವಕೋಟಿಯನ್ನು ರಕ್ಷಿಸುವ ಭಗವಂತ ಸಹಸ್ರಾರ್ಚಿಃ. ಅಂತಹ ಮಹಾನ್ ಜ್ವಾಲೆಯ ಸಣ್ಣ ಅಂಶಗಳಾದ ಅನಂತ ಜೀವರ ಒಳಗಿದ್ದು ರಕ್ಷಿಸುವ ಬಿಂಬರೂಪಿ ಭಗವಂತ ಸಹಸ್ರಾರ್ಚಿಃ.   
831) ಸಪ್ತಜಿಹ್ವಃ
ಜಿಹ್ವ  ಎಂದರೆ ನಾಲಿಗೆ. ಏಳು ನಾಲಿಗೆಗಳುಳ್ಳ ಭಗವಂತ ಸಪ್ತಜಿಹ್ವಃ! ಅಗ್ನಿಯಲ್ಲಿ ಸನ್ನಿಹಿತನಾಗಿರುವ ಭಗವಂತನಿಗೆ ಏಳು ನಾಲಿಗೆಗಳು. ಕಟ್ಟಿಗೆಯಿಂದ ಪ್ರಜ್ವಲಿಸುವ ಅಗ್ನಿಯಲ್ಲಿ ಎಳುವರ್ಣಗಳಿವೆ(Spectrum). ಇದನ್ನು ಪ್ರಾಚೀನರು  ಗುರುತಿಸಿದ್ದಾರೆ. ಹೀಗೆ ಏಳು ಬಣ್ಣದ ನಾಲಿಗೆಯಿಂದ ನಾವು ಕೊಡುವ ಹವಿಸ್ಸನ್ನು ಸ್ವೀಕರಿಸುವ ಭಗವಂತ ಸಪ್ತಜಿಹ್ವಃ. ನಮ್ಮೊಳಗೆ ಅಂತರ್ಯಾಮಿಯಾಗಿರುವ ಭಗವಂತ ನಮ್ಮ ದೇಹದಲ್ಲಿ ಏಳು ಜ್ವಾಲೆಯಾಗಿ ಹವನವನ್ನು ಸ್ವೀಕರಿಸುತ್ತಾನೆ. ಕಣ್ಣು ಎನ್ನುವ ಜ್ವಾಲೆಯಲ್ಲಿ-ರೂಪದ ಹೋಮ, ಕಿವಿಯಲ್ಲಿ-ನಾದದ ಹೋಮ,ಮೂಗಿನಿಂದ ಗಂಧದ ಆಹುತಿ,ನಾಲಿಗೆಯಿಂದ-ಆಹಾರದ ಆಹುತಿ, ತೊಗಲಿನಿಂದ-ಸ್ಪರ್ಶದ ಆಹುತಿ ಹಾಗು ಈ ಐದು ಜ್ಞಾನೇಂದ್ರಿಯಗಳನ್ನು ನಿಯಂತ್ರಿಸುವ ಹಾಗು ಗ್ರಹಿಸುವ ಮನಸ್ಸು ಮತ್ತು ಬುದ್ಧಿ. ಹೀಗೆ ಏಳು ನಾಲಿಗೆಗಳನ್ನು ಜೀವರಿಗೆ ಕೊಟ್ಟು ಅದರಿಂದ ವಿಷಯ ಜ್ಞಾನವನ್ನು ಕೊಡುವ ಭಗವಂತ ಸಪ್ತಜಿಹ್ವಃ.
832) ಸಪ್ತೈಧಾಃ
ಏಳು ಜ್ಞಾನೇಂದ್ರಿಯಗಳಿಗೆ ವಿಷಯಗಳನ್ನಿತ್ತವನು. ಏಳು ಇಂದ್ರಿಯಗಳನ್ನು ಸೃಷ್ಟಿ ಮಾಡಿ, ಜೀವನಿಗೆ ಏಳು ಜ್ವಾಲೆಗಳನ್ನು ಕೊಟ್ಟು, ಆ ಜ್ವಾಲೆಯ ಬೆಳಕಿನಲ್ಲಿ ಏಳು ಅರಿವನ್ನು ಕೊಟ್ಟು, ಏಳು ವಿಷಯಗಳನ್ನು ಸವಿಯುವ ಭಗವಂತ ಸಪ್ತೈಧಾಃ. ಇದನ್ನೇ ಗೀತೆಯಲ್ಲಿ ಹೀಗೆ ಹೇಳಿದ್ದಾರೆ:
ಶ್ರೋತ್ರಂ ಚಕ್ಷುಃ ಸ್ಪರ್ಶನಂ ಚ ರಸನಂ ಘ್ರಾಣಮೇವ ಚ   ।
ಅಧಿಷ್ಠಾಯ ಮನಶ್ಚಾಯಂ ವಿಷಯಾನುಪಸೇವತೇ (ಅ-೧೫; ಶ್ಲೋ-೯)
 
833) ಸಪ್ತವಾಹನಃ
ಭಗವಂತ ಇಡೀ ಪ್ರಪಂಚವನ್ನು ನಿರ್ವಹಿಸುವ ರೀತಿಯನ್ನು ಈ ನಾಮ ತಿಳಿಸುತ್ತದೆ.ಇಲ್ಲಿ ಸಂಖ್ಯೆ ಏಳಕ್ಕೆ ಪ್ರಾಮುಖ್ಯವಿದೆ.ಇದು ವೈದಿಕ ಸಂಖ್ಯಾ ಶಾಸ್ತ್ರ ಕೂಡಾ ಹೌದು. ನಮ್ಮ ದೇಹ ಸಪ್ತ ಧಾತುವಿನಿಂದಾಗಿದೆ ತ್ವಕ್(ಹೊರ ಪದರ), ಚರ್ಮ(ಒಳಪದರ),ಮಾಂಸ, ರಕ್ತ, ಕೊಬ್ಬು, ಎಲುಬು ಹಾಗು ಮಜ್ಜೆ. ನಮ್ಮ ದೇಹದಲ್ಲಿ ಪಂಚ ಜ್ಞಾನೇಂದ್ರಿಯಗಳು ಐದು ಕುದುರೆಗಳು. ಮನಸ್ಸು ಕಡಿವಾಣ ಬುದ್ಧಿ ಸಾರಥಿ. ಸಪ್ತ ಧಾತುವಿನಿಂದಾದ ಈ ದೇಹಕ್ಕೆ ಪಂಚ ಜ್ಞಾನೇಂದ್ರಿಯಗಳೆಂಬ  ಐದು ಕುದುರೆಗಳನ್ನು ಕಟ್ಟಿ, ಮನಸ್ಸೆಂಬ ಕಡಿವಾಣ ಹಾಗು ಬುದ್ಧಿ ಎನ್ನುವ ಸಾರಥಿಯಿಂದ ನಡೆಸುವ ಭಗವಂತ ಸಪ್ತವಾಹನಃ.
ಜಗತ್ತಿನಲ್ಲಿರುವ ಸಮಸ್ಥ ವಾಗ್ಮಯವೂ ಕೂಡಾ ಸಪ್ತ ಸ್ವರಗಳಿಂದಾಗಿದೆ. ಅವುಗಳೆಂದರೆ: ಷಡ್ಜ , ಋಷಭ, ಗಾಂಧಾರ, ಮಧ್ಯಮ, ಪಂಚಮ, ಧೈವತ, ನಿಷಾದ. (ಸ, ರಿ, ಗ, ಮ, ಪ, ಧ, ನಿ). ಈ ಸಪ್ತ ಸ್ವರಗಳಿಗೆ ಸಪ್ತ ಛಂದಸ್ಸುಗಳಾದವು. ಷಡ್ಜಕ್ಕೆ-24 ಅಕ್ಷರದ ಗಾಯತ್ರಿ, ಋಷಭಕ್ಕೆ- 28 ಅಕ್ಷರದ ಉಷ್ಣಿಕ್, ಗಾಂಧಾರಕ್ಕೆ- 32 ಅಕ್ಷರದ ಅನುಷ್ಪುಪ್, ಮಧ್ಯಮಕ್ಕೆ-36 ಅಕ್ಷರದ ಬೃಹತೀ, ಪಂಚಮಕ್ಕೆ-40 ಅಕ್ಷರದ ಪಂಕ್ತಿ, ಧೈವತಕ್ಕೆ-44 ಅಕ್ಷರದ ತ್ರಿಷ್ಪುಪ್ ಮತ್ತು  ನಿಷಾದಕ್ಕೆ-48 ಅಕ್ಷರದ ಜಗತೀ. ಈ ಏಳು ಛಂದಸ್ಸುಗಳೇ ಸೂರ್ಯನ ರಥದ ಏಳು ಕುದುರೆಗಳು. ಅವೇ ಸೂರ್ಯ ಕಿರಣದಲ್ಲಿರುವ ಏಳು ಬಣ್ಣಗಳು.ಅಗ್ನಿಯಲ್ಲಿಯೂ ಕೂಡಾ ಏಳು ಬಣ್ಣಗಳು(ಕಾಳೀ, ಕರಾಳೀ, ಮನೋಜವಾ, ಸುಲೋಹಿತ, ಸುಧೂಮ್ರವರ್ಣಾ, ಸ್ಫಲಿಂಗಿನಿ ಹಾಗು ವಿಶ್ವರುಚೀ). ಮೂಲಭೂತವಾಗಿ ಸಮಸ್ಥ ಸಂಸ್ಕೃತ ವಾಗ್ಮಯಗಳು ಇರುವುದು ಮೇಲೆ ಹೇಳಿದ ಏಳು ಅಂಶಗಳಲ್ಲಿ. ಭಗವದ್ಗೀತೆಯ ಸುಮಾರು 600 ಶ್ಲೋಕಗಳು 'ಅನುಷ್ಪುಪ್'ನಲ್ಲಿದ್ದರೆ, ಇತರ ಶ್ಲೋಕಗಳು ತ್ರಿಷ್ಪುಪ್ ಮತ್ತು 'ಜಗತೀ'ನಲ್ಲಿದೆ.
ಇಷ್ಟೇ ಅಲ್ಲದೆ ಕಾಲಕ್ಕೆ ಏಳು ವಾರಗಳು(ಭಾನು, ಸೋಮ,ಮಂಗಳ, ಬುಧ, ಗುರು, ಶುಕ್ರ, ಶನಿ); ಹದಿನಾಲ್ಕು ಲೋಕಗಳಲ್ಲಿ ಮೇಲಿನ ಲೋಕಗಳು ಏಳು(ಭೂಃ, ಭುವಃ ಸ್ವಃ ಮಹಃ, ಜನಃ, ತಪಃ, ಸತ್ಯಮ್) ಕೆಳಗಿನ ಲೋಕಗಳು  ಏಳು (ಅತಳ, ವಿತಳ, ಸುತಳ, ತಳಾತಳ, ರಸಾತಳ, ಮಹಾತಳ, ಪಾತಾಳ). ಭೂಲೋಕವನ್ನು ಸುತ್ತುವರಿದಿರುವ ಏಳು ಸೂಕ್ಷ್ಮ ಸಾಗರಗಳು(ಲವಣ, ಇಕ್ಷು, ಸುರಾ, ಘೃತ, ದಧಿ, ಕ್ಷೀರ ಮತ್ತು ಶುದ್ಧೋದಕ ಸಮುದ್ರ).
ನಮ್ಮ  ದೇಹದಲ್ಲಿರುವ ಅಧ್ಯಾತ್ಮ ಚಕ್ರಗಳು(ನಿರ್ನಾಳ ಗ್ರಂಥಿಗಳು) ಏಳು. ಅವುಗಳೆಂದರೆ ಮೂಲಾಧಾರ(Gonad), ಸ್ವಾಧಿಷ್ಟಾನ(Cells of Leydig), ಮಣಿಪೂರ(Adrenal), ಅನಾಹತ(Thymus), ವಿಶುದ್ಧಿ(Thyroid and parathyroid), ಆಜ್ಞಾ(Pineal), ಮತ್ತು ಸಹಸ್ರಾರ(Pituitary).
ಏಳು ಮಹಾ ಪರ್ವತಗಳು(ಹಿಮವಂತ,ಮೇರು,ಹೇಮಕೂಟ, ನಿಷಧ,ಮಾಲ್ಯವಂತ, ಗಂಧಮಾದನ, ಪಾರಿಯಾತ್ರ); ಏಳು ಮಹಾ ನದಿಗಳು (ಗಂಗಾ,ಯಮುನಾ,ಸರಸ್ವತಿ, ಗೋದಾವರಿ, ನರ್ಮದಾ, ಸಿಂಧು, ಕಾವೇರಿ). ಇಷ್ಟೇ ಅಲ್ಲದೆ ಸಪ್ತಗಂಗೆಗಳು, ಸಪ್ತಸಿಂಧುಗಳು, ಸಪ್ತಕ್ಷೇತ್ರಗಳು, ಸಪ್ತ ಮಾತೃಕೆಯರು, ಇತ್ಯಾದಿ.
ಈ ರೀತಿ ಜಗತ್ತನ್ನು ನಿರ್ವಹಿಸುವ ಭಗವಂತನ ಏಳನೇ ಅವತಾರ ರಾಮಾವತಾರ. ಈ ಅವತಾರದಲ್ಲಿ ಭಗವಂತ ಜನಿಸಿದ್ದು ಏಳನೇ ನಕ್ಷತ್ರವಾದ ಪುನರ್ವಸು ನಕ್ಷತ್ರದಲ್ಲಿ. ಇದು ಭಗವಂತನ ಪ್ರಪಂಚ ನಿರ್ವಹಣೆಯ ರೀತಿ ಹಾಗು ಆತನ ವ್ಯವಸ್ಥೆ. ಇಂತಹ ಭಗವಂತ ಸಪ್ತವಾಹನಃ.           

No comments:

Post a Comment