Tuesday, November 30, 2010

Vishnu sahasranama 741-744

ವಿಷ್ಣು ಸಹಸ್ರನಾಮ:
ಸುವರ್ಣವರ್ಣೋ ಹೇಮಾಂಗೋ ವರಾಂಗಶ್ಚಂದನಾಂಗದೀ
741) ಸುವರ್ಣವರ್ಣಃ
ಭಗವಂತ ಚಿನ್ನದ ಬಣ್ಣದವನು. ನಾವು ಭಗವಂತನನ್ನು ಕಾಣಬೇಕಾದರೆ ಮೊದಲು ನಮ್ಮ ಮನಸ್ಸನ್ನು ತಟಸ್ಥಗೊಳಿಸಬೇಕು. ಆಗ ನಮ್ಮ ಆತ್ಮ ಕೆಲಸ ಆರಂಭಿಸುತ್ತದೆ.  ಇದು ಸಮಾಧಿ ಸ್ಥಿತಿ. ಈ ಸ್ಥಿತಿಯಲ್ಲಿ ಆತ್ಮ ಸ್ವರೂಪದಿಂದ ಧ್ಯಾನ  ಮಾಡಿದಾಗ ಉದಿಸುವ ಸೂರ್ಯನಂತೆ ಕಂಗೊಳಿಸುವ ಭಗವಂತನ ದರ್ಶನವಾಗುತ್ತದೆ.      
742) ಹೇಮಾಂಗಃ
ಭಗವಂತನ ಅಂಗಾಂಗವೂ ಚಿನ್ನದಂತೆ ಕಂಗೊಳಿಸುತ್ತಿರುತ್ತದೆ. ಆತ ಚಿನ್ನದಂತ ಮೈಯವನು. 
743) ವರಾಂಗಃ
ಭಗವಂತನ ಅಂಗಗಳು ಚಿನ್ನದಂತೆ ಕಂಗೊಳಿಸುತ್ತಿರುತ್ತದೆ. ಆದರೆ ಇದು ಯಾವುದೋ ಆಭರಣದ ಬಣ್ಣವಲ್ಲ. ಅದು ವರಾಂಗ. 'ವಾ' ಅಂದರೆ ಜ್ಞಾನ 'ರಂ' ಅಂದರೆ ಆನಂದ. ಜ್ಞಾನಾನಂದಮಯವಾದ ಅಂಗಗಳುಳ್ಳು ಭಗವಂತ ವರಾಂಗಃ.
744) ಚಂದನಾಂಗದೀ
ಚಂದನ ಬಳಿದು ಅಂಗದ ತೊಟ್ಟವನು, ಸರ್ವಾರಣ ಸುಂದರ ಮೂರ್ತಿ.

Monday, November 29, 2010

Vishnu sahasranama 729-740

ವಿಷ್ಣು ಸಹಸ್ರನಾಮ:
ಏಕೋ ನೈಕಃ ಸವಃ ಕಃ ಕಿಂ ಯತ್ತತ್ಪದಮನುತ್ತಮಮ್ 
ಲೋಕಬಂಧುರ್ಲೋಕನಾಥೋ ಮಾಧವೋ ಭಕ್ತವತ್ಸಲಃ
729) ಏಕಃ
ಯಾರು  ಸರ್ವಕರ್ತನೋ, ಯಾರಿಂದ ಈ ಜಗತ್ತು ಸೃಷ್ಟಿಯಾಗಿದೆಯೋ ಅವನೇ ದೇವರು. ಆತನ ರೂಪ ಹಲವು, ನಾಮ ಹಲವು, ಆದರೆ ದೇವರು ಒಬ್ಬನೆ. ದೇವರು ಒಂದೊಂದು ಮತಕ್ಕೆ, ಒಂದೊಂದು ಬಾಷೆಗೆ,ಒಂದೊಂದು ಜನಾಂಗಕ್ಕೆ, ಒಂದೊಂದು ಜಾತಿಗೆ,ಒಂದೊಂದು ದೇಶಕ್ಕೆ, ಒಬ್ಬೊಬ್ಬ ಅಲ್ಲ. ಆತ ಒಬ್ಬನೆ; ಆತ ಏಕಃ. 
730) ನೈಕಃ
ಭಗವಂತ ಒಬ್ಬಂಟಿಯಲ್ಲ! ಬಿಂಬರೂಪನಾಗಿ ಅನಂತಜೀವರಲ್ಲಿ ನೆಲಸಿ ಒಬ್ಬನೇ ಅನೇಕವಾಗಿದ್ದಾನೆ!
731) ಸವಃ
ಎಲ್ಲಾ ಯಜ್ಞಗಳಿಂದ(ಮಾನಸ, ಧ್ಯಾನ, ಪೂಜೆ, ಪ್ರಾರ್ಥನೆ, ದೈನಂದಿನ ಕರ್ಮ ಇತ್ಯಾದಿ) ಆರಾಧಿಸಲ್ಪಡುವ, ಜ್ಞಾನ ಸ್ವರೂಪ ಭಗವಂತ ಸವಃ.
732) ಕಃ
ಕಃ ಅಂದರೆ 'ಯಾರು' ('Who' is the name of God); ಆನಂದ ಸ್ವರೂಪ ಭಗವಂತ ಕಃ.
733) ಕಿಮ್
ಏನು ಎಂತು ಎಂದು ಎಲ್ಲರೂ ತಿಳಿಯಲು ಬಯಸುವ ವಸ್ತು; ಕಂ ಅಂದರೆ ಆನಂದ, ಕಿಮ್ ಎಂದರೆ ಅತಿಶಯ ಅಥವಾ ಅನಂತ ಆನಂದ ಸ್ವರೂಪ. 
734) ಯತ್
ಎಲ್ಲಾ  ಕಡೆ ತುಂಬಿರುವ, ಎಲ್ಲವನ್ನೂ ಬಲ್ಲ ಭಗವಂತ ಯತ್.
735) ತತ್
ನಮ್ಮ ಒಳಗೆ, ನಮ್ಮ ಹೊರಗೆ ತುಂಬಿರುವ, ಕಾಲತಃ, ದೇಶತಃ, ಗುಣತಃ ಅನಂತವಾಗಿ ವ್ಯಾಪ್ತನಾದ ಭಗವಂತ ತತ್.
736) ಪದಮನುತ್ತಮಮ್ (ಪದಮ್+ಅನುತ್ತಮಮ್)
ಎಲ್ಲರೂ ಕೊನೆಗೆ ಹೋಗಿ ಸೇರಬೇಕಾದ ಕೊನೆಯ ತಾಣ(Last destination of every soul); ಇದಕ್ಕಿಂತ ಉತ್ತಮ ಸ್ಥಾನ ಇನ್ನೊಂದಿಲ್ಲ(ಹಿರಿಯ ಗಮ್ಯ ಸ್ಥಾನ).  

737) ಲೋಕಬಂಧುಃ
ಭಗವಂತ ಜೀವ ಜಾತದ ಬಂಧು;ನಮ್ಮ ಎಲ್ಲಾ ಸಮಸ್ಯೆಗಳನ್ನು ಹೇಳಿಕೊಳ್ಳಬಹುದಾದ ಜಗತ್ತಿನ ಹಿರಿಯ; ಎಲ್ಲರಿಗೂ ಅತ್ಯಂತ ಹತ್ತಿರದ ಗೆಳೆಯ. ನಿಜವಾದ ಗೆಳೆಯರು ಎಂದೂ ತಪ್ಪನ್ನು ಹುಡುಕುವುದಿಲ್ಲ, ದೋಷಗಳನ್ನು ಎತ್ತಿಹಿಡಿಯುವುದಿಲ್ಲ. ಗೆಳೆತನದಲ್ಲಿ ಸ್ವಾರ್ಥವಿರುವುದಿಲ್ಲ. ನಿಸ್ವಾರ್ಥವಾಗಿ, ಕಾರಣವಿಲ್ಲದೆ ಒಬ್ಬರಿಗೊಬ್ಬರು ಸ್ಪಂದಿಸುವವರು 'ಸ್ನೇಹಿತರು'. ಇಂತಹ ನಿಸ್ವಾರ್ಥ ಬಾಂಧವ್ಯ ಗಂಡ-ಹೆಂಡಿರ ನಡುವೆ, ತಂದೆ-ತಾಯಿ-ಮಕ್ಕಳ ನಡುವೆ ಇರುವುದಿಲ್ಲ. ಭಗವಂತ ಒಬ್ಬ ಆತ್ಮೀಯ ಗೆಳೆಯನಂತೆ. ನಮ್ಮ ಸರ್ವದೋಷಗಳನ್ನು ಕಡೆಗಣಿಸಿ ಸ್ವೀಕರಿಸುವ ಕರುಣಾಸಿಂಧು. ತಪ್ಪುಗಳನ್ನು ಕ್ಷಮಿಸಿ ನಮ್ಮನ್ನು ಮೇಲೆತ್ತುವ, ಜಗತ್ತನ್ನು ಉದ್ಧರಿಸುವ ಲೋಕಬಂಧುಃ.
738) ಲೋಕನಾಥಃ
ಎಲ್ಲರನ್ನೂ ಪ್ರೀತಿಸಿ ಸಲಹುವ ಲೋಕದ ಸ್ವಾಮಿ. 
739) ಮಾಧವಃ
'ಮಾ' ಎಂದರೆ 'ಇಲ್ಲ' ; 'ಧವ' ಎಂದರೆ ನಿಯಂತ್ರಿಸತಕ್ಕ ಯಜಮಾನ. ಭಗವಂತನನ್ನು ನಿಯಂತ್ರಿಸುವ ಇನ್ನೊಬ್ಬ ಯಜಮಾನ ಅಥವಾ ಸ್ವಾಮಿ ಯಾರೂ ಇಲ್ಲ.  
740) ಭಕ್ತವತ್ಸಲಃ
ಭಕ್ತಿಗೆ ಕರಗುವ ಭಗವಂತ ಭಕ್ತವತ್ಸಲಃ. ಭಕ್ತಿ ಎಂದರೆ ಸಮರ್ಪಣಾಭಾವ. 'ನಾನು ಏನೂ ಅಲ್ಲ, ನನ್ನನ್ನು ನಿನ್ನ ಪಾದದಲ್ಲಿ ಅರ್ಪಿಸಿಕೊಂಡಿದ್ದೇನೆ,ನನ್ನ ರಕ್ಷಣೆಯ ಭಾರ ನಿನ್ನದು' ಎನ್ನುವ ಅರ್ಪಣಾ ಭಾವ. ಸ್ವಾರ್ಥ ರಹಿತವಾಗಿ ಭಗವಂತನನ್ನು ಪ್ರೀತಿಸುವುದೇ ಭಕ್ತಿ. ಒಬ್ಬ ಸ್ನೇಹಿತ ಇನ್ನೊಬ್ಬ ಸ್ನೇಹಿತನನ್ನು ಹೇಗೆ ನಿಸ್ವಾರ್ಥವಾಗಿ ಪ್ರೀತಿಸುತ್ತಾನೋ ಹಾಗೇ ನಾವು ಭಗವಂತನನ್ನು ಪ್ರೀತಿಸಬೇಕು. ಯಾವ ಕಾರಣಕ್ಕೂ ಸ್ವಾರ್ಥಕ್ಕೆ ಎಡೆ ಇರಬಾರದು. ಭಗವಂತನೆಂದರೆ ಭಯಾನಕ ವಸ್ತು ಎಂದು ಭಯದಿಂದ ಪೂಜಿಸದೇ, ಪ್ರಹಲ್ಲಾದನಂತೆ ಪ್ರೀತಿಯಿಂದ ಮಾಡುವ ಭಕ್ತಿಗೆ ಕರಗುವ ಭಗವಂತ ಭಕ್ತವತ್ಸಲಃ.

Sunday, November 28, 2010

Vishnu sahasranama 721-728

ವಿಷ್ಣು ಸಹಸ್ರನಾಮ:
ವಿಶ್ವಮೂರ್ತಿರ್ಮಹಾಮೂರ್ತಿರ್ದೀಪ್ತಮೂರ್ತಿರಮೂರ್ತಿಮಾನ್
ಅನೇಕಮೂರ್ತಿರವ್ಯಕ್ತಃ ಶತಮೂರ್ತಿಃ ಶತಾನನಃ
721) ವಿಶ್ವಮೂರ್ತಿಃ
ಭಗವಂತ ವಿಶ್ವಮೂರ್ತಿ, ವಿಶ್ವದ ಎಲ್ಲಾ ವಸ್ತುಗಳಲ್ಲೂ ಆತನ ಸನ್ನಿಧಾನವಿದೆ. ನಾವು ಮಾಡುವ ಪ್ರತಿಮೆಗಿಂತ ಹಿರಿಮೆಯುಳ್ಳ ಪ್ರತಿಮೆ ಭಗವಂತನೇ ಮಾಡುವ ಪ್ರತಿಮೆ. ಉದಾಹರಣೆಗೆ ನೇಪಾಳದ ಘಂಡಕಿ ನದಿಯಲ್ಲಿ ಸಿಗುವ ಶಾಲಿಗ್ರಾಮ, ನರ್ಮದಾ ನದಿಯಲ್ಲಿ ಸಿಗುವ ಶಿವಲಿಂಗ ಇತ್ಯಾದಿ. ಇಷ್ಟೇ ಅಲ್ಲದೆ ಬೆಟ್ಟಗಳು, ನದಿಗಳೂ  ಕೂಡಾ ಆತನ ಪ್ರತೀಕ. ಬದರಿಯ ನರ-ನಾರಾಯಣ ಪರ್ವತ, ಹಿಮಾಲಯದ ಕೈಲಾಸ ಪರ್ವತ, ಗಂಗಾತೀರ್ಥ  ಇತ್ಯಾದಿ.  ಅಗ್ನಿಯಲ್ಲಿ ಅಗ್ನಿನಾರಾಯಣ, ಸೂರ್ಯನಲ್ಲಿ ಸೂರ್ಯ ನಾರಾಯಣ, ಮರದಲ್ಲಿ(ಅಶ್ವತ್ಥ), ಗೋವುಗಳಲ್ಲಿ ಹೀಗೆ ಸಮಸ್ಥ ವಿಶ್ವವೇ ಆತನ ಪ್ರತೀಕ.    
722) ಮಹಾಮೂರ್ತಿಃ
ಇಡೀ ಬ್ರಹ್ಮಾಂಡವೇ ಪ್ರತೀಕವಾಗಿರುವ, ಸರ್ವವ್ಯಾಪಿ ರೂಪವುಳ್ಳ ಭಗವಂತ ಮಹಾಮೂರ್ತಿಃ.
723) ದೀಪ್ತಮೂರ್ತಿಃ
ಎಲ್ಲಾ ಕಡೆಯೂ ಬೆಳಕಿನ ಪುಂಜವಾಗಿರುವ, ಪ್ರಕಾಶ ಸ್ವರೂಪ ಭಗವಂತ ದೀಪ್ತಮೂರ್ತಿಃ.
724) ಅಮೂರ್ತಿಮಾನ್
ಭಗವಂತ ಜ್ಞಾನಾನಂದ ಸ್ವರೂಪಿ, ಆತನಿಗೆ ಪಾಂಚಭೌತಿಕವಾದ ರೂಪವಿಲ್ಲ. ಆದ್ದರಿಂದ ಆತ ಅಮೂರ್ತಿಮಾನ್.

725) ಅನೇಕಮೂರ್ತಿಃ
ಭಗವಂತ ಒಂದೊಂದು ಕಡೆ ಒಂದೊಂದು ರೂಪದಲ್ಲಿ ತುಂಬಿದ್ದಾನೆ. ಪಂಚಕೋಶಗಳಲ್ಲಿ, ಕರ್ಮೆಂದ್ರಿಯಗಳಲ್ಲಿ, ಜ್ಞಾನೇಂದ್ರಿಯಗಳಲ್ಲಿ, ಪಂಚಭೂತಗಳಲ್ಲಿ, ಹೀಗೆ ಅನೇಕ ರೂಪದಲ್ಲಿ ನಮ್ಮ ಒಳಗೂ ಹೊರಗೂ ತುಂಬಿರುವ ಭಗವಂತ ಅನೇಕಮೂರ್ತಿಃ.    
726) ಅವ್ಯಕ್ತಃ
ಭಗವಂತ ಸರ್ವವ್ಯಾಪಿಯಾದರೂ ಸಹ ಆತ ವ್ಯಕ್ತನಾಗಿ ಕಾಣಿಸಿಕೊಳ್ಳದ ಅವ್ಯಕ್ತ ಮೂರ್ತಿ
727) ಶತಮೂರ್ತಿಃ
ಅನಂತ ರೂಪಿ ಭಗವಂತ ಶತಮೂರ್ತಿಃ. ಆತನ ಒಂದೊಂದು ಅವತಾರದಲ್ಲೂ ನೂರಾರು ರೂಪಗಳು. ಇದನ್ನು ಕೃಷ್ಣ ಅಷ್ಟೋತ್ತರ ಶತನಾಮದಲ್ಲಿ, ನರಸಿಂಹ ಅಷ್ಟೋತ್ತರ ಶತನಾಮದಲ್ಲಿ ಹಾಗು ರಾಮ ಅಷ್ಟೋತ್ತರ ಶತನಾಮದಲ್ಲಿ ಕಾಣಬಹುದು.ನಾರಾಯಣ ಅಷ್ಟೋತ್ತರದಲ್ಲಿ ಆತನ 108 ರೂಪಗಳ ವರ್ಣನೆಯಿದೆ; ಸಹಸ್ರನಾಮದಲ್ಲಿ  ಆತನ ಸಹಸ್ರ ರೂಪಗಳು, ಹೀಗೆ ನೂರಾರು ರೂಪಗಳುಳ್ಳ ಭಗವಂತ ಶತಮೂರ್ತಿಃ.
728) ಶತಾನನಃ
ಭಗವಂತ ಅನಂತ ಮುಖದವನು. ಚತುರ್ಮುಖ ಬ್ರಹ್ಮ(ಶತಾನಂದ) ಮೊಟ್ಟಮೊದಲು ಸೃಷ್ಟಿಯ ಆದಿಯಲ್ಲಿ ಕಂಡ ವಿಶ್ವರೂಪ. ‘ಸಹಸ್ರ ಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ ಎಂದು ಭಗವಂತನನ್ನು ಪುರುಷಸೂಕ್ತದಲ್ಲಿ   ವರ್ಣಿಸಿದ್ದಾರೆ. ಇಲ್ಲಿ ಬಹುಶಿರ ಎಂದರೆ ಸಹಸ್ರ-ಸಹಸ್ರ ಶಿರಸ್ಸನ್ನು ಹೊಂದಿರುವವನು ಎಂದರ್ಥ.

Vishnu sahasranama 712-720

ವಿಷ್ಣು ಸಹಸ್ರನಾಮ:
ಭೂತಾವಾಸೋ ವಾಸುದೇವಃ ಸರ್ವಾಸುನಿಲಯೋನಲಃ
ದರ್ಪಹಾ ದರ್ಪದೋ ದೃಪ್ತೋ ದುರ್ಧರೋಥಾಪರಾಜಿತಃ
 

712) ಭೂತಾವಾಸಃ
ಎಲ್ಲಾ ಭೂತಗಳ ಒಳಗೆ ಆವಾಸ ಮಾಡುವ ಭಗವಂತ ಭೂತಾವಾಸಃ. ಚೇತನಾಚೇತನ, ಚರಾಚರಾತ್ಮಕ, ಸಮಸ್ತ ಪ್ರಾಣಿಗಳ ಒಳಗೆ, ಪಂಚಭೂತಗಳಲ್ಲಿ ನೆಲೆಸಿರುವ ಭಗವಂತ ಭೂತಾವಾಸಃ.
713) ವಾಸುದೇವಃ
ನಮ್ಮ ಜೀವನದಲ್ಲಿ ಎಚ್ಚರ-ಕನಸು-ನಿದ್ದೆ  ಈ ಮೂರು ಹಂತಗಳು ಯಾವಾಗಲೂ ಇರುತ್ತವೆ.  ಈ ಹಂತಗಳಿಗೆ ಭಗವಂತನ ಅರಿವೂ ಬೇಡ, ಕುಂಡಲಿನಿ ಜಾಗೃತವಾಗುವುದು ಬೇಡ. ಈ ಹಂತಗಳನ್ನು ಸಂಕರ್ಷಣ-ಪ್ರದ್ಯುಮ್ನ-ಅನಿರುದ್ಧರೂಪಿ ಭಗವಂತ ನಿಯಂತ್ರಿಸುತ್ತಾನೆ. ಈ ಮೂರು ಹಂತಗಳ ಆಚೆಗಿನ ಸ್ಥಿತಿ 'ತುರಿಯ'. ಈ ಸ್ಥಿತಿಯನ್ನು ತಲುಪಬೇಕಾದರೆ ಕುಂಡಲಿನಿ ಜಾಗೃತವಾಗಬೇಕು. ಈ ಸ್ಥಿತಿಯನ್ನು ನಿಯಂತ್ರಿಸುವ ಭಗವಂತನ ರೂಪ ವಾಸುದೇವ ರೂಪ. ಜ್ಞಾನಾನಂದದ ಸ್ಪುರಣದೊಂದಿಗೆ, ಅಂತರಂಗದ ಜಾಗೃತಾವಸ್ಥೆಯಲ್ಲಿ, ಅಂತರಾತ್ಮನನ್ನು ಕಾಣುವ ಅನುಭೂತಿಗೊಳಪಡಿಸುವ ಭಗವಂತ ವಾಸುದೇವಃ.
714) ಸರ್ವಾಸುನಿಲಯಃ
ಪ್ರತಿಯೊಂದು ಜೀವದೊಳಗೆ,ಪ್ರತಿಯೊಂದು ಇಂದ್ರಿಯದಲ್ಲಿ ನೆಲೆಸಿರುವ, ಸರ್ವ ಪ್ರಾಣಿಗಳಿಗಾಸರೆಯಾದ ಭಗವಂತ ಸರ್ವಾಸುನಿಲಯಃ
715) ಅನಲಃ
ಮಿತಿಯಿಲ್ಲದ ಶಕ್ತಿ ಸಂಪನ್ನ, ಅಗ್ನಿಯ ಅಂತರ್ಯಾಮಿ ಭಗವಂತ ಅನಲಃ.
716) ದರ್ಪಹಾ
ದರ್ಪ+ಹಾ; ದರ್ಪವನ್ನು ದಮನಿಸುವ(ನಾಶಮಾಡುವ) ಭಗವಂತ ದರ್ಪಹಾ. ಸಾಮಾನ್ಯವಾಗಿ ಮನುಷ್ಯನಿಗೆ ಅನುಕೂಲ, ಅಧಿಕಾರ ಸಿಕ್ಕಾಗ ಅದರಿಂದ ಅಹಂಕಾರ ಬರುತ್ತದೆ. ಶ್ರೀಮಂತಿಕೆಯ-ಮದ, ಯೌವನದ-ಮದ, ಅಧಿಕಾರದ-ಮದ, ವಿದ್ಯೆಯ-ಮದ, ಹೀಗೆ ಅನೇಕ ಕಾರಣದಿಂದಾಗಿ ತಾನು ದೊಡ್ಡ ವ್ಯಕ್ತಿ ಎನ್ನುವ ದರ್ಪ ನಮ್ಮಲ್ಲಿ ಮನೆಮಾಡುತ್ತದೆ. ಇದರ ಪರಿಣಾಮ ನಾವು ಇನ್ನೊಬ್ಬರನ್ನು ಕೀಳಾಗಿ ಕಾಣುತ್ತೇವೆ. ಕೆಲವೊಮ್ಮೆ ಒಳ್ಳೆಯವರೂ ಕೂಡಾ ಇಂತಹ ದರ್ಪಕ್ಕೆ ಬಲಿಬೀಳುತ್ತಾರೆ. ಇಂತಹ ಸಂದರ್ಭದಲ್ಲಿ ಭಗವಂತ ನಮ್ಮ ದರ್ಪ ಹರಣ ಮಾಡುತ್ತಾನೆ. ವಿಷ್ಣು ಪುರಾಣದಲ್ಲಿ ಹೇಳುವಂತೆ "ಯಸ್ಯ ಅನುಗ್ರಹಂ ಇಚ್ಛಾಮಿ ತಸ್ಯ ವಿತ್ತಂ ಹರಾಮ್ಯಹಂ" ಶ್ರೀಮಂತಿಕೆಯಿಂದ ಭಗವಂತನನ್ನು ಮರೆಯುವ ಸಂದರ್ಭ ಬಂದಾಗ ಅಂತವರನ್ನು ದಿವಾಳಿ ಮಾಡಿ ಉದ್ಧರಿಸುವ ಭಗವಂತ ದರ್ಪಹಾ.
ಇದನ್ನೇ ಭಾಗವತದಲ್ಲಿ ಹೀಗೆ ಹೇಳಿದ್ದಾರೆ: 
ಯಸ್ಯಾನುಗ್ರಹಮಿಚ್ಛಾಮಿ ಹರಿಷ್ಯೇ ತದ್ ಧನಂ ಶನೈಃ |
ತತೋsಧನಂ ತ್ಯಜಂತ್ಯಸ್ಯ ಸ್ವಜನಾ ದುಃಖದುಃಖಿನಮ್ ||
ಭಗವಂತನ ಮೊದಲ ಪರೀಕ್ಷೆ ಭಕ್ತನ ಕಿಸೆ ಖಾಲಿ ಮಾಡುವುದು. ಕ್ರಮೇಣ ಕೈಯಲ್ಲಿದ್ದ ದುಡ್ಡೆಲ್ಲ ಕರಗಿತು ಎನ್ನುವಾಗ ಬಂಧು-ಬಾಂಧವರು ದೂರ ಸರಿಯುತ್ತಾರೆ. ದುಡ್ಡಿದ್ದಷ್ಟು ಕಾಲ ಬೆನ್ನ ಹಿಂದೆ ಜನ ತಿರುಗಾಡುತ್ತಾರೆ. ಗೌರವ ಸ್ಥಾನಮಾನ ಸಿಗುತ್ತದೆ. ಇದರಿಂದ ಅಹಂಕಾರ ಬಲಿಯುತ್ತದೆ. ದೇವರ ಸ್ಮರಣೆ ಮರೆಯಾಗುತ್ತದೆ. ದುಡ್ಡಿಲ್ಲದಾಗ, ಎಲ್ಲಾ ಜನ ಕೈಬಿಟ್ಟಾಗ ಭಗವಂತ ಕೈಹಿಡಿಯುತ್ತಾನೆ!     
717) ದರ್ಪದಃ
ನಮ್ಮ ದರ್ಪ ಹರಣ ಮಾಡುವ ಭಗವಂತ, ನಮಗೆ ದರ್ಪದ ಅಗತ್ಯವಿದ್ದಾಗ ಅದನ್ನು ಕೊಡುವವನೂ ಅವನೇ ! ದುಷ್ಟರ ವಿರುದ್ಧ, ಅನ್ಯಾಯದ ವಿರುದ್ಧ ಸೆಟೆದು ನಿಲ್ಲುವ ಕೆಚ್ಚನ್ನು ಕೊಡುವ ಭಗವಂತ ದರ್ಪದಃ. ಆತ ಸೌಜನ್ಯ ಅನ್ಯಾಯಕ್ಕೆ ಶರಣಾಗುವ ಸ್ಥಿತಿಬಂದಾಗ ನಮಗೆ ದರ್ಪವನ್ನು ಕೊಟ್ಟು ಸಲಹುತ್ತಾನೆ.   
718) ದೃಪ್ತಃ
ಯಾರಿಗೂ ಮಣಿಯದ ನಿತ್ಯತೃಪ್ತ ಭಗವಂತ, ದುಷ್ಟರಲ್ಲಿದ್ದು ದರ್ಪ ತೋರಿಸುವ ದೃಪ್ತಃ!
719) ದುರ್ಧರಃ
ಭಗವಂತ ಸುಲಭದಲ್ಲಿ ಧ್ಯಾನಕ್ಕೆ ಸಿಗದವನು. ಆತ 'ಏನು'  'ಎಂತು' ಎಂದು ತಿಳಿಯುವುದು ಕಷ್ಟ. ಆತನನ್ನು ತಿಳಿಯಲು ಅನೇಕ ಜನ್ಮದ ಸಾಧನೆ ಬೇಕು. 
720) ಅಪರಾಜಿತಃ
ಎಂದೂ ಸೋಲರಿಯದ ಭಗವಂತ ಅಪರಾಜಿತಃ.

Friday, November 26, 2010

Vishnu Sahasranama 708-711

ವಿಷ್ಣು ಸಹಸ್ರನಾಮ: ಶೂರಸೇನೋ ಯದುಶ್ರೇಷ್ಠಃ ಸನ್ನಿವಾಸಃ ಸುಯಾಮುನಃ
708) ಶೂರಸೇನ
ಶೂರರಾದ ಸೈನಿಕರ ಪಡೆಯುಳ್ಳವನು  ಶೂರಸೇನ.  ಭಗವಂತನ ಸೇನೆ ದೇವತೆಗಳ ಸೇನೆ. ಭಗವಂತ ದೇವತೆಗಳ ಜೊತೆಗಿರುವ ತನಕ ಅವರಿಗೆ ಎಂದೂ ಸೋಲಿಲ್ಲ. ಆದರೆ ಅಹಂಕಾರದಿಂದ ದೇವರಿಂದ ದೂರ ಸರಿದವರಿಗೆ ಎಂದೂ ಜಯವಿಲ್ಲ!  
709) ಯದುಶ್ರೇಷ್ಠಃ
ಯದುವಂಶದಲ್ಲಿ ಶ್ರೇಷ್ಟನಾಗಿ ಹುಟ್ಟಿಬಂದ, ಎಲ್ಲರಿಗಿಂತ ಹಿರಿಯ ಭಗವಂತ ಯದುಶ್ರೇಷ್ಠಃ
710) ಸನ್ನಿವಾಸಃ
ಸಜ್ಜನರಿಗೆ ಸದಾ ನೆಲೆಯಾದ ಭಗವಂತ ಸದಾ ಅವರಲ್ಲಿ ನಿವಾಸ ಮಾಡುವ ಸನ್ನಿವಾಸಃ.
711) ಸುಯಾಮುನಃ
ಯಮುನೆಯ ನೀರನ್ನು ನಿರ್ದೋಷಗೊಳಿಸಿದ ಭಗವಂತ
ಸುಯಾಮುನಃ. ಯಮುನೆಯ ನೀರು ಕಾಲಿಯನ ವಿಷದಿಂದ ಕೆಟ್ಟು ಹೋದಾಗ, ಆ ಕಾಲಿಯನ ತಲೆಯಮೇಲೆ ನಿಂತು ನಲಿದಾಡಿ ಯಮುನೆಯನ್ನು ಸ್ವಚ್ಚಗೊಳಿಸಿ ಹೊಸ ಚೈತನ್ಯವನ್ನು ಕೊಟ್ಟ ಭಗವಂತ ಸುಯಾಮುನಃ
ನಮ್ಮ ಒಳ ಪ್ರಪಂಚದಲ್ಲೂ ಯಮುನೆ
ಯೊಬ್ಬಳಿದ್ದಾಳೆ. ಇದು ನಮ್ಮೊಳಗಿರುವ ಶಕ್ತಿ ಕೇಂದ್ರಗಳಿಗೆ ಸಂಬಂಧಪಟ್ಟ ವಿಷಯ. ನಮ್ಮ ಮೂಲಾಧಾರದ ಎಡಭಾಗಕ್ಕೆ 'ಇಡಾ' ಹಾಗು ಬಲ ಭಾಗಕ್ಕೆ 'ಪಿಂಗಳ' ಎನ್ನುವ ಎರಡು ನಾಡಿಗಳು ಹಾವಿನಂತೆ ಸುಷಮ್ನಾ ನಾಡಿಯನ್ನು ಹೆಣೆದುಕೊಂಡು ಊರ್ಧ್ವಮುಖವಾಗಿ ಆಜ್ಞಾ ಚಕ್ರದಲ್ಲಿ ಸಂಗಮಿಸುತ್ತವೆ. ಈ ನಾಡಿಗಳನ್ನು ಗಂಗಾ(ಇಡಾ), ಯಮುನಾ(ಪಿಂಗಳ) ಹಾಗು ಸರಸ್ವತಿ(ಸುಷಾಮ್ನಾ) ಎಂದು ಕರೆಯುತ್ತಾರೆ. ಕುಂಡಲಿನಿ ನಿಯಂತ್ರಣ ತಿಳಿಯದವರಿಗೆ ಕುಂಡಲಿನಿ ಜಾಗೃತವಾದರೆ ಹುಚ್ಚುಹಿಡಿಯಬಹುದು! ಇಂತಹ ಸಂದರ್ಭದಲ್ಲಿ ಜಾಗೃತಗೊಂಡ ಕುಂಡಲಿನಿಯ ತಲೆಯಮೇಲೆ ನಿಂತು ನಾಟ್ಯವಾಡಿ ನಮಗೆ ಶಕ್ತಿಯ ಆನಂದವನ್ನು ಕೊಡುವ ಭಗವಂತ ಸುಯಾಮುನಃ.           

Vishnu Sahasranama 703-707

ವಿಷ್ಣು ಸಹಸ್ರನಾಮ: ಸದ್ಗತಿಃ ಸತ್ಕೃತಿಃ ಸತ್ತಾ ಸದ್ಭೂತಿಃ ಸತ್ಪರಾಯಣಃ
703) ಸದ್ಗತಿಃ
ಭಗವಂತನ ಗುಣಗಾನ ಮಾಡುತ್ತಾ ನಾಮ ಜಪ ಮಾಡುತ್ತಾ ಕುಳಿತರೆ ನಮ್ಮ ದೈನಂದಿನ ಚಟುವಟಿಕೆಯನ್ನು ಯಾರು ಮಾಡುತ್ತಾರೆ? ಈ ಪ್ರಶ್ನೆ ಎಲ್ಲರಲ್ಲೂ ಮೂಡುತ್ತದೆ.ನಾವು ಮಾಡುವ ನಮ್ಮ ದೈನಂದಿನ ಕೆಲಸ ಕಾರ್ಯವನ್ನು ಭಗವದರ್ಪ
ಣೆಯಾಗಿ ಮಾಡುವುದೇ ಮಹಾ ಹವನ. ಇದು ಸಜ್ಜನರಿಗೆ ಗಮ್ಯನಾದ ಭಗವಂತನನ್ನು ಸೇರಲು ಇರುವ ಅತ್ಯಂತ  ಸರಳ ವಿಧಾನ. ಹೀಗೆ ಸಜ್ಜನರಿಗೆ, ಜ್ಞಾನಿಗಳಿಗೆ, ಸಾತ್ವಿಕರಿಗೆ ಗಮ್ಯನಾದ ಭಗವಂತ ಸದ್ಗತಿಃ.  
704) ಸತ್ಕೃತಿಃ
ನಮ್ಮಿಂದ ಸಮೀಚೀನವಾದ ಕ್ರಿಯೆಯನ್ನು ಮಾಡಿಸಿ, ನಮ್ಮ ಜ್ಞಾನ ವೃದ್ಧಿ ಮಾಡಿಸುವ ಭಗವಂತ
ಸತ್ಕೃತಿಃ .  
705) ಸತ್ತಾ
'ಸತ್ತಾ' ಅಂದರೆ 'ಇರುವಿಕೆ' (Pure Existence).  ಈ ಜಗತ್ತಿನಲ್ಲಿ ಇರುವ ಏಕಮಾತ್ರ 'ನಿರ್ದೊಶತ್ವವಾದ ಇರುವಿಕೆ' ಕೇವಲ ಭಗವಂತ. ಯಾವ ದೋಷವೂ ಇಲ್ಲದ ಪರಿಶುದ್ಧ ಇರುವಿಕೆಯ ಭಗವಂತ ಸತ್ತಾ.     
706) ಸದ್ಭೂತಿಃ
ಸಜ್ಜನರಿಗೆ ಭೂತಿಯನ್ನು ಕೊಡುವ ಭಗವಂತ,
ಜ್ಞಾನಿಗಳಿಗೆ ಉನ್ನತಿಯನ್ನು ಕೊಟ್ಟು ಎತ್ತರಕ್ಕೇರಿಸುವ ಸದ್ಭೂತಿಃ.
707) ಸತ್ಪರಾಯಣಃ
ಸಜ್ಜನರು ಹೋಗಿ ಸೇರಬೇಕಾದ ಕೊನೆಯ ನಿಲುದಾಣ (Last Destination). ಅಲ್ಲಿಂದ ಮುಂದೆ  ಪ್ರಯಾಣವಿಲ್ಲ. ನಮ್ಮ ಪಯಣದ ಕೊನೆಯ ನಿಲ್ದಾಣ ಭಗವಂತ
ಸತ್ಪರಾಯಣಃ

Wednesday, November 24, 2010

Vishnu sahasranama 698-702

ವಿಷ್ಣು ಸಹಸ್ರನಾಮ:  ವಸುಪ್ರದೋ ವಾಸುದೇವೋ ವಸುರ್ವಸುಮನಾ ಹವಿಃ
698) ವಸುಪ್ರದಃ
ಈ ನಾಮ ಒಂದೇ ಕಡೆ ಎರಡು ಸಾರಿ ಬಂದಿದೆ. ವ +ಸು+ಪ್ರದ; ಇಲ್ಲಿ 'ವ' ಅಂದರೆ ಜ್ಞಾನ, 'ಸು' ಎಂದರೆ ಸುಖ ಅಥವಾ ಆನಂದ. ಆದ್ದರಿಂದ ಮ್ಮೊಳಗಿನಿಂದ ಅರಿವಿನ ಆನಂದವನ್ನು ಅರಳಿಸುವ ಭಗವಂತ ವಸುಪ್ರದಃ. ಒಮ್ಮೆ ನಮ್ಮ ಅಂತರಂಗದ ಅರಿವು ತೆರೆದುಕೊಂಡಾಗ, ಹೊರಗಿನ ಯಾವ ಸಲಕರಣೆಯೂ ಬೇಡ, ಯಾವುದರ ನೆರವೂ ಬೇಡ, ಯಾವ ಪುಸ್ತಕವೂ ಬೇಡ, ಯಾವ ಓದೂ ಬೇಡ. ಮನಸ್ಸಿನ ಈ ಸ್ಥಿತಿಯಲ್ಲಿ ನಮಗೆ ಅಧ್ಯಾತ್ಮದ ಮೇಲೆ ಅಧಿಕಾರ ಬರುತ್ತದೆ. ಇದು ನಮ್ಮ ಹೃದಯ ಮಾತನಾಡುವ ಅದ್ಬುತ  ಸ್ಥಿತಿ. ಇಂತಹ ಸ್ಥಿಯಲ್ಲಿ ನಮಗೆ ಅಧ್ಯಾತ್ಮದ ಬಗ್ಗೆ ಬರೆಯುವ ಹಾಗು ಮಾತನಾಡುವ ಶಕ್ತಿ ಬರುತ್ತದೆ. ಹೀಗೆ ನಮಗೆ ನಮ್ಮ ಹೃದಯದಿಂದ ಅರಿವು ಆನಂದವಾಗಿ ಚಿಮ್ಮುವ  ಸ್ಥಿತಿಯನ್ನು ಕೊಡುವ ಭಗವಂತ ವಸುಪ್ರದಃ. 
699) ವಾಸುದೇವಃ
ವಾಸು+ದೇವ, ಭಗವಂತ ವಾಸು, ಅಂದರೆ ತನ್ನನ್ನು ತಾನು ಮುಚ್ಚಿಕೊಂಡವನು. ಯಾವಾಗ ನಾವು ಹದಿನೈದು ಬೇಲಿಗಳನ್ನು ದಾಟಿ, ಸಮಾದಿ ಸ್ಥಿತಿಯಿಂದ ಆಳಕ್ಕಿಳಿದು, ಹದಿನಾರನೇ ಜೀವಸ್ವರೂಪವನ್ನು ಕಾಣುತ್ತೆವೋ, ಆಗ ಭಗವಂತನ ಸಾಕ್ಷಾತ್ಕಾರವಾಗುತ್ತದೆ; ಈ ಸ್ಥಿತಿಯಲ್ಲಿ ಮುಚ್ಚಿಕೊಂಡ ಭಗವಂತ ದೇವನಾಗಿ ತೆರೆದುಕೊಳ್ಳುತ್ತಾನೆ. ಭಗವಂತನನ್ನು ಕಾಣಬೇಕಾದರೆ ಮೊದಲು ನಾವು ನಮ್ಮನ್ನು ಕಾಣಬೇಕು. ನಮ್ಮ ಅರಿವೇ ನಮಗಿಲ್ಲದೆ ಭಗವಂತನನ್ನು ಕಾಣುವುದು ಅಸಾಧ್ಯ. ನಾವು ನಮ್ಮ ಜೀವಸ್ವರೂಪವನ್ನು ಕಂಡಾಗ, ಅದರೊಳಗಿನಿಂದ ಸಾಕ್ಷಾತ್ಕಾರವಾಗುವ ಭಗವಂತ ದೇವಃ. ನಾವು ನಮ್ಮ ಪಂಚಕೋಶಗಳ(ಅನ್ನಮಯ ಕೋಶ, ಪ್ರಾಣಮಯ ಕೋಶ , ವಿಜ್ಞಾನಮಯ ಕೋಶ, ಮನೋಮಯ ಕೋಶ ಹಾಗೂ ಆನಂದಮಯ ಕೋಶ)  ಪರದೆಯಲ್ಲಿದ್ದಾಗ ವಾಸುವಾಗಿ; ಪರದೆಯಿಂದಾಚೆಗೆ ಬಂದು ಜೀವ ಸ್ವರೂಪವನ್ನು ಕಂಡಾಗ ದೇವನಾಗಿ ದರ್ಶನ ಕೊಡುವ ಭಗವಂತ ವಾಸುದೇವಃ. 
700) ವಸುಃ
ಭಗವಂತ ಸರ್ವೋತ್ಕೃಷ್ಟವಾದ ಜ್ಞಾನಾನಂದ ಸ್ವರೂಪ. ನಮಗಿರುವ ಆನಂದ ಒಂದು ಸೂಕ್ಷ್ಮ ಬಿಂದು ಹಾಗು ಅದು ದುಃಖದ ಜೊತೆಗಿರುವ ಆನಂದ, ಆದರೆ ಭಗವಂತ ಎಂದೂ ದುಃಖಸ್ಪರ್ಶವಿಲ್ಲದ, ಎಂದೂ ಅಳಿವಿರದ, ಅನಂತ ಜ್ಞಾನಾನಂದ ಸ್ವರೂಪ.      
701) ವಸುಮನಾಃ
ಜ್ಞಾನಾನಂದ ಸ್ವರೂಪಭೂತವಾದ ಮನಸ್ಸುಳ್ಳ ಭಗವಂತ ವಸುಮನಾಃ.
702) ಹವಿಃ
'ಹವನ' ಎಂದರೆ ಆಹುತಿ; ಯಾರಿಗೋಸ್ಕರ ನಾವು ಆಹುತಿ ಕೊಡುತ್ತೆವೋ ಆತ ಹವಿಃ.
ನಾವು ಎರಡು ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತೇವೆ. ನಮ್ಮ ಮನಸ್ಸನ್ನು ಕ್ರಿಯೆಯಲ್ಲಿ ತೊಡಗಿಸಿದರೆ ಅದು ಧ್ಯಾನ, ದೈಹಿಕ ಇಂದ್ರಿಯಗಳನ್ನು ಕ್ರಿಯೆಯಲ್ಲಿ ತೊಡಗಿಸಿದರೆ ಅದು ಕರ್ಮ. ನಾವು ನಮ್ಮ ಮನಸ್ಸನ್ನು ಹಾಗು ಕರ್ಮವನ್ನು ಭಗವಂತನತ್ತ ಹರಿದು ಬಿಡಬೇಕು, ಅದೇ ನಿಜವಾದ ಹವನ. "ನಿನ್ನ ಮನಸ್ಸು ಭಗವಂತನನ್ನೇ ನೆನೆಯಲಿ, ಭಗವಂತನ ನಾಮಗಳ ಗುಣಾನುಸಂದಾನದಲ್ಲಿ ಮೈಮರೆಯಲಿ, ನಿನ್ನ ಸಮಸ್ತ ಇಂದ್ರಿಯಗಳು ಭಗವಂತನ ಅರ್ಪಣರೂಪವಾದ ಕರ್ಮದಲ್ಲಿ ತೊಡಗಲಿ ಆಗ ಭಗವಂತ ಹವಿಯಾಗಿ ನಿನ್ನ ರಕ್ಷಣೆ ಮಾಡುತ್ತಾನೆ".           

Tuesday, November 23, 2010

Vishnusahasranama 694-697

ವಿಷ್ಣು ಸಹಸ್ರನಾಮ: ಮನೋಜವಸ್ತೀರ್ಥಕರೋ ವಸುರೇತಾ ವಸುಪ್ರದಃ
694) ಮನೋಜವಃ
ಎಲ್ಲಕ್ಕಿಂತ ವೇಗವಾಗಿ ಹೋಗುವ ವಸ್ತು ಮನಸ್ಸು. ಆದರೆ ಭಗವಂತನ ವೇಗ ಮನಸ್ಸಿನ ವೇಗಕ್ಕಿಂತ ಮಿಗಿಲು. ಇಂತಹ ಭಗವಂತನನ್ನು ತಲುಪಬೇಕಾದರೆ ನಾವು ನಮ್ಮ ಅಹಂಕಾರವನ್ನು ಸಂಪೂರ್ಣವಾಗಿ ಕಳಚಿ ಆತನಲ್ಲಿ ಶರಣಾಗಬೇಕು. ಆಗ ಮಾತ್ರ ನಮ್ಮ ಮನಸ್ಸು ಆತನನ್ನು ಮುಟ್ಟಬಲ್ಲದು.  
695) ತೀರ್ಥಕರಃ
ಭಗವಂತನ ಕಡೆಗೆ ಹೋಗಬೇಕಾದರೆ ಹಂತ-ಹಂತವಾಗಿ ಹೋಗಬೇಕು. ಮೊದಲು ನಮ್ಮ ಮನಸ್ಸು ಒಳ್ಳೆಯ ಕಡೆ ಹರಿಯಬೇಕು. ಮನಸ್ಸಿನಲ್ಲಿ ಬೇಡವಾದ ಪ್ರಾಪಂಚಿಕ ವಿಷಯ ತುಂಬಿಕೊಂಡರೆ ನಾವು ಭಗವಂತನತ್ತ ಪ್ರಯಾಣಿಸಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಭಗವಂತ ದೇವಸ್ತಾನ ಹಾಗು ಪುಣ್ಯ ತೀರ್ಥಗಳ ಸೃಷ್ಟಿ ಮಾಡಿದ. ಗಂಗೆ ಕಾವೇರಿಯಂತಹ ಪವಿತ್ರ ತೀರ್ಥದಲ್ಲಿ ಸ್ನಾನ ಮಾಡುವುದರಿಂದ ನಮ್ಮ ಮನಸ್ಸಿನ ಕಲ್ಮಶ ಹೊರಟು ಹೋಗಿ ಮನಸ್ಸು ಭಗವಂತನೆಡೆಗೆ ಹರಿಯುತ್ತದೆ. ಶಾಸ್ತ್ರಗಳನ್ನೂ ಕೂಡಾ ತೀರ್ಥ ಎಂದು ಕರೆಯುತ್ತಾರೆ. ಸ್ವಚ್ಚ ಮನಸ್ಸಿನಿಂದ ಓದಲು ಶಾಸ್ತ್ರಗಳ ನಿರ್ಮಾಣ ಕೂಡಾ ಭಗವಂತನ ಸೃಷ್ಟಿ. ಇದರಿಂದ ಮನಸ್ಸಿಗೆ ವೇಗ ಸಿಗುತ್ತದೆ. ಹೀಗೆ ಪವಿತ್ರ ತೀರ್ಥಗಳ, ಶಾಸ್ತ್ರಗಳ ಸೃಷ್ಟಿ ಮಾಡಿದ ಭಗವಂತ ತೀರ್ಥಕರಃ
696) ವಸುರೇತಾಃ
'ವಸುಗಳು' ಎಂದರೆ ದೇವತೆಗಳು. ಎಲ್ಲಾ ದೇವತೆಗಳ ಸೃಷ್ಟಿಗೆ ಕಾರಣ ಪುರುಷನಾದ ಭಗವಂತ ವಸುರೇತಾಃ.
697) ವಸುಪ್ರದಃ
ಮೋಕ್ಷವೆಂಬ ಸಿರಿಯನ್ನೀಯುವವ. ನಾವು ದಾರಿತಪ್ಪಿದಾಗ ಎಲ್ಲವನ್ನೂ ಕಸಿದುಕೊಳ್ಳುವವನು. (ಏಕೆಂದರೆ ದೇವರ ಸಾಮ್ರಾಜ್ಯದಲ್ಲಿ ತಪ್ಪಿಗೆ ಸಜೆ ತಪ್ಪಿದ್ದಲ್ಲ)

Vishnusahasranama 689-693

ವಿಷ್ಣು ಸಹಸ್ರನಾಮ:  ಪೂರ್ಣಃ ಪೂರಯಿತಾ ಪುಣ್ಯಃ ಪುಣ್ಯಕೀರ್ತಿರನಾಮಯಃ
689) ಪೂರ್ಣಃ
ನಾವು ಶಾಂತಿ ಮಂತ್ರಗಳಲ್ಲಿ ಈ ರೀತಿ ಹೇಳುತ್ತೇವೆ:
ಓಂ ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೆ. ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಷ್ಯತೆ ! ಓಂ ಶಾಂತಿಃ ಶಾಂತಿಃ ಶಾಂತಿಃ
ಅಂದರೆ "ಅದು ಪೂರ್ಣ, ಇದು ಪೂರ್ಣ, ಪೂರ್ಣದಿಂದ ಪೂರ್ಣ ಉಂಟಾಗುತ್ತದೆ, ಪೂರ್ಣದಿಂದ ಪೂರ್ಣವನ್ನು ತೆಗೆದು ಹಾಕಿದರೆ ಪೂರ್ಣವೇ ಉಳಿಯುತ್ತದೆ" ಎಂದರ್ಥ.  ಭಗವಂತ ನಮ್ಮೊಳಗೂ ಇದ್ದಾನೆ ಹೊರಗೂ ಇದ್ದಾನೆ, ಆತ ಒಳಗೂ ಪೂರ್ಣ, ಹೊರಗೂ ಪೂರ್ಣ. ಆತ ಅವತಾರದಲ್ಲೂ ಪೂರ್ಣ, ಅವತಾರದ ನಂತರವೂ ಪೂರ್ಣ. ಆತ ಹಣತೆಯಂತೆ. ಒಂದು ಹಣತೆಯಿಂದ ಇನ್ನೊಂದು, ಇನ್ನೊಂದರಿಂದ ಮತ್ತೊಂದು ಹೀಗೆ ಸಹಸ್ರಾರು ಹಣತೆಗಳನ್ನು ಹಚ್ಚಿದರೂ, ಮೂಲ ಹಣತೆ ಏನನ್ನೂ ಕಳೆದುಕೊಳ್ಳುವುದಿಲ್ಲ. ಎಲ್ಲಾ ಸದ್ಗುಣಗಳಿಂದ ಪೂರ್ಣನಾದ ಸರ್ವ ಶಬ್ಧವಾಚ್ಯ  ಭಗವಂತ ಪೂರ್ಣಃ.    
690) ಪೂರಯಿತಾ
ನಮಗೆ ಯಥಾರ್ಥ ಜ್ಞಾನ ಕೊಟ್ಟು ಮೊಕ್ಷದತ್ತ ಕೊಂಡೊಯ್ಯುವ ಭಗವಂತ ಪೂರಯಿತಾ.ಭಗವಂತ ಸೂರ್ಯನಾದರೆ ನಾವು ಮಿಂಚು ಹುಳದಂತೆ, ಆತ ಕಡಲಾದರೆ ನಾವು ಕೊಡದಂತೆ. ಕಡಲಿನಿಂದ ನಾವು ನಮ್ಮ ನಮ್ಮ ಕೊಡವನ್ನು ತುಂಬಿಸಿಕೊಳ್ಳಬೇಕು, ಅವರವರ ಯೋಗ್ಯತೆಗೆ ತಕ್ಕಂತೆ ಇದನ್ನು ಮಾಡಿಸುವವನೂ ಅವನೇ.
691) ಪುಣ್ಯಃ
ಪುಣ್ಯ ಎಂದರೆ ಪವಿತ್ರ ಅಥವಾ ಪಾವನ. ಭಗವಂತನ ಜ್ಞಾನ ನಮ್ಮನ್ನು, ನಮ್ಮ ಮನಸ್ಸನ್ನು ಪಾವನ ಗೊಳಿಸುವ ಏಕೈಕ ಸಾಧನ. ಮಾನಸಿಕವಾಗಿ ಗೊಂದಲ, ದುಃಖ, ನಿರಾಶೆಗೊಳಗಾದ ಮನಸ್ಸನ್ನು  ಭಗವಂತನತ್ತ ಹರಿಸಿದಾಗ ಮನಸ್ಸು ನೆಮ್ಮದಿಯಿಂದಿರುತ್ತದೆ. ಇದೇ ಪುಣ್ಯ ಅಥವಾ ಪಾವಿತ್ರ್ಯ. ಲೋಕೋತ್ತರವಾದ ಸುಂದರ ಭಗವಂತನ ಚಿಂತನೆಯಿಂದ ಮನಸ್ಸು ಹೂವಿನಂತೆ ಅರಳುತ್ತದೆ. ಬಾಡುವುದಿಲ್ಲ, ಮುದುಡುವುದಿಲ್ಲ. ಹೀಗೆ ಪವಿತ್ರನೂ ಪರಮ ಸುಂದರನೂ ಆದ ಭಗವಂತ ಪುಣ್ಯಃ
692) ಪುಣ್ಯಕೀರ್ತಿಃ
ಕೀರ್ತನ ಮಾತ್ರದಿಂದ ಎಲ್ಲಾ ಪಾಪಗಳನ್ನು ಕಳೆಯುವ ಭಗವಂತ ಪುಣ್ಯಕೀರ್ತಿಃ. ಅವನ ಗುಣಗಾನ ನಮ್ಮ ಬದುಕನ್ನು ಪಾವನಗೊಳಿಸುತ್ತದೆ. ಭಗವನ್ನಾಮ ನಮ್ಮನ್ನು ಉದ್ಧಾರ ಮಾಡುತ್ತದೆ.
693) ಅನಾಮಯಃ
'ಆಮಯ' ಎಂದರೆ ದೋಷಗಳು. ಬೆಂಕಿಯ ಜೊತೆಗೆ ಹೊಗೆ ಇರುವಂತೆ ನಮ್ಮಲ್ಲಿ ದೋಷಗಳು ಇದ್ದೇ ಇರುತ್ತದೆ. ಆದರೆ ಭಗವಂತನಿಗೆ ಯಾವುದೇ ದೋಷದ ಲೇಪವಿಲ್ಲ. ಆತ ಪೂರ್ಣ ನಿರ್ದೋಷ. ಇಂತಹ ಭಗವಂತ ಅನಾಮಯಃ

Monday, November 22, 2010

Vishnu Sahasranama 683-688

ವಿಷ್ಣು ಸಹಸ್ರನಾಮ: ಸ್ತವ್ಯಃ ಸ್ತವಪ್ರಿಯಃ ಸ್ತೋತ್ರಂ ಸ್ತುತಿಃ ಸ್ತೋತಾ ರಣಪ್ರಿಯಃ
683) ಸ್ತವ್ಯಃ
ಎಲ್ಲಾ ಸ್ತೋತ್ರಗಳಿಂದ ಸ್ತುತಿಸಲ್ಪಬೇಕಾದವನು ಸ್ತವ್ಯಃ. 
684) ಸ್ತವಪ್ರಿಯಃ
ನಾವು ಭಕ್ತಿಯಿಂದ ಸ್ತೋತ್ರ ಮಾಡಿದರೆ ಅದನ್ನು ಪ್ರೀತಿಸುವವನು.
685) ಸ್ತೋತ್ರಮ್
ಸ್ತುತಿಗಳಲ್ಲಿ ವಾಚ್ಯನಾಗಿ ನೆಲೆಸಿದವನು.
686) ಸ್ತುತಿಃ
ಸ್ತವನ ಕ್ರಿಯೆಯಲ್ಲಿ ಇರುವವನು.
687) ಸ್ತೋತಾ
ಸ್ತುತಿಸುವವನೂಳಗಿರುವವನು.  
688) ರಣಪ್ರಿಯಃ
ಗುಣಗಾನ ಮಾಡುವ ವೇದ ಶಬ್ಧವನ್ನು ಮೆಚ್ಚುವವನು. ದುಷ್ಟರ ಜೊತೆಗೆ ಕದನ ಕುತೂಹಲಿ. 

Vishnu sahasranama 679-682

ವಿಷ್ಣು ಸಹಸ್ರನಾಮ:  ಮಹಾಕ್ರತುರ್ಮಹಾಯಜ್ವಾ ಮಹಾಯಜ್ಞೋ ಮಹಾಹವಿಃ
679) ಮಹಾಕ್ರತುಃ
'ಕ್ರತು' ಎಂದರೆ  ಒಂದು ಅರ್ಥದಲ್ಲಿ ಕರ್ಮ ಅಥವಾ ಕ್ರಿಯೆ; ಇನ್ನೊಂದು ಅರ್ಥ ಜ್ಞಾನ. ನಿಶ್ಚಯ ಅಥವಾ ಖಚಿತ ಜ್ಞಾನದಿಂದ ಕರ್ಮ(ಸೃಷ್ಟಿ-ಸ್ಥಿತಿ-ಸಂಹಾರ) ಮಾಡುವ ಭಗವಂತ ಮಹಾಕ್ರತುಃ. ಯಜ್ಞದಲ್ಲಿ ಮೂರುಹೊತ್ತು ಮಾಡತಕ್ಕ ಯಜ್ಞಕರ್ಮ ಕ್ರತು. ನಾವು ಮಾಡುವ ಯಜ್ಞ-ಯಾಗಾದಿಗಳು ಭಗವಂತನಲ್ಲಿ ಅರ್ಪಿತವಾದಾಗ ಅದು ಮಹಾಕ್ರತುವಾಗುತ್ತದೆ. ಹೀಗೆ ನಿಶ್ಚಯ ಜ್ಞಾನದಿಂದ ಮಾಡುವ ಯಜ್ಞವನ್ನು ಸ್ವೀಕರಿಸುವ ಭಗವಂತ ಮಹಾಕ್ರತುಃ.  
680) ಮಹಾಯಜ್ವಾ
'ಯಜ್ವಾ' ಎಂದರೆ ಯಜ್ಞ ಮಾಡಿಸುವ ಯಜಮಾನ. ಭಗವಂತ ಹಿರಿಯ ಯಾಜಕ. ಯಜಮಾನನೊಳಗೆ ನಿಂತು ಎಲ್ಲವನ್ನೂ ಮಾಡಿಸುವ ಆತ ಮಹಾಯಜ್ವಾ.
681) ಮಹಾಯಜ್ಞ
ಯಾರಿಂದ ಯಜ್ಞ ಮಹತ್ತಾಗುತ್ತದೋ ಅವನು ಮಹಾಯಜ್ಞ. ಯಜ್ಞದಲ್ಲಿ ನೆಲೆಸಿ,ಯಜ್ಞಗಳಿಂದ ಆರಾಧ್ಯನಾದ ಭಗವಂತ ಮಹಾಯಜ್ಞ. 
682) ಮಹಾಹವಿಃ
ಯಜ್ಞದಲ್ಲಿ ಅರ್ಪಿಸುವ ಹವಿಸ್ಸನ್ನು ಸ್ವೀಕರಿಸುವ, ಯಾಗದಿಂದ ಆರಾಧಿಸಲ್ಪಡುವ, ದೇವತೆಗಳ ಒಡೆಯ, ಸರ್ವಶಬ್ಧ ವಾಚ್ಯ  ಭಗವಂತ
ಮಹಾಹವಿಃ.

Vishnusahasranama 675-678

ವಿಷ್ಣು ಸಹಸ್ರನಾಮ:    ಮಹಾಕ್ರಮೋ ಮಹಾಕರ್ಮಾ ಮಹಾತೇಜಾ ಮಹೋರಗಃ
675) ಮಹಾಕ್ರಮಃ
ಕ್ರಮ ಎಂದರೆ 'ರೀತಿ' ; ಭಗವಂತನ ಸೃಷ್ಟಿ-ಸ್ಥಿತಿ-ಸಂಹಾರ ಆಕಸ್ಮಿಕವಲ್ಲ, ಅದು ಕ್ರಮಬದ್ಧವಾದ ಕ್ರಿಯೆ.ಎಲ್ಲವನ್ನೂ ಕರಾರುವಕ್ಕಾಗಿ ಗಣಿತಬದ್ಧವಾಗಿ ಮಾಡುವ ಭಗವಂತ
ಮಹಾಕ್ರಮಃ.  ಅನಂತ ಕಾಲದಿಂದ ಈ ಪ್ರಪಂಚ ನೆಡೆದು ಬಂದಿದೆ, ಹಾಗು ಮುಂದುವರಿಯುತ್ತದೆ. ಈವರೆಗೆ ಅನಂತ ಪ್ರಪಂಚ ಸೃಷ್ಟಿಯಾಗಿದೆ ಹಾಗು ಇನ್ನು ಮುಂದೆ ಅನಂತ ಪ್ರಪಂಚ ಸೃಷ್ಟಿಯಾಗಲಿದೆ.ಆದರೆ ಪ್ರತಿಯೊಂದು ಸೃಷ್ಟಿಯೂ ಕ್ರಮಬದ್ಧ. ಪ್ರತಿಯೊಂದಕ್ಕೂ ಒಂದು ಲೆಕ್ಕಾಚಾರವಿದೆ, ಅದರಂತೆಯೇ ನಡೆಯುತ್ತದೆ. ಆದ್ದರಿಂದ ಈ ಪ್ರಪಂಚದಲ್ಲಿ ನಡೆಯುವ ಪ್ರತಿಯೊಂದು ಘಟನೆಯೂ ಪೂರ್ವನಿರ್ಧರಿತ.
676) ಮಹಾಕರ್ಮಾ
ಈ ವಿಶ್ವದಲ್ಲಿ ಮಹತ್ತಾದ ಕರ್ಮ ಎಂದರೆ ಸೃಷ್ಟಿ-ಸ್ಥಿತಿ-ಸಂಹಾರ.  ಇಂತಹ ಮಹಾ ಕರ್ಮವನ್ನು ನಿರ್ವಹಿಸುವ ಭಗವಂತ
ಮಹಾಕರ್ಮಾ. ನಮ್ಮ ಕೈಯಲ್ಲಿ ಮಹತ್ತಾದ ಕರ್ಮವನ್ನು ಮಾಡಿಸುವವನೂ ಅವನೇ.
677) ಮಹಾತೇಜಾಃ
ತೇಜಸ್ಸಿನಲ್ಲಿ ಬೆಳಕಿನ ಶಕ್ತಿಯಿದೆ, ಶಾಖ ಕೊಡುವ ಶಕ್ತಿಯಿದೆ  ಹಾಗು ಸುಡುವ ಶಕ್ತಿಯೂ ಇದೆ. ಇಷ್ಟೇ ಅಲ್ಲದೆ ತೇಜಸ್ಸಿನಲ್ಲಿ ಪಚನ ಶಕ್ತಿಯಿದೆ.ಜಗತ್ತಿನಲ್ಲಿ ನಡೆಯುವ ತೇಜಸ್ಸಿನ ಪ್ರತಿಯೊಂದು ಕ್ರಿಯೆಯ ಮೂಲ ಭಗವಂತ
ಮಹಾತೇಜಾಃ. ಆತ ಎಲ್ಲವನ್ನೂ ಬೆಳಗಿಸುವ ಬೆಳಕು. ಗೀತೆಯಲ್ಲಿ ಹೇಳುವಂತೆ:
ನ ತದ್ ಭಾಸಯತೇ ಸೂರ್ಯೋ ನ ಶಶಾಂಕೋ ನ ಪಾವಕ
ಯದ್ ಗತ್ವಾ ನ ನಿವರ್ತಂತೇ ತದ್ ಧಾಮ ಪರಮಂ ಮಮ (ಅ-೧೫, ಶ್ಲೋ-೦೬)
ಅಂದರೆ "ಅದನ್ನು ಸೂರ್ಯ ಬೆಳಗಿಸಲಾರ; ಚಂದ್ರ ಬೆಳಗಿಸಲಾರ; ಬೆಂಕಿ ಕೂಡಾ. ಅದರತ್ತ ತೆರಳಿದವರು ಮತ್ತೆ ಮರಳುವುದಿಲ್ಲ. ಅದು ನನ್ನ ಹಿರಿಯ ರೂಪ"  ಹೀಗೆ ಬೆಳಕುಗಳಿಗೆ ಬೆಳಕು ನೀಡುವ ಮಹಾ ತೇಜಸ್ಸು ಭಗವಂತ
ಮಹಾತೇಜಾಃ.  
678) ಮಹೋರಗಃ
ಉರಗ ಎಂದರೆ ಹೊಟ್ಟೆ ಹೊಸೆದುಕೊಂಡು ಹೋಗುವ ಪ್ರಾಣಿ; ಅದನ್ನು ಸರ್ಪ ಎನ್ನುತ್ತಾರೆ. ಹೆಡೆ ಇರುವ ಹಾವು 'ನಾಗರ'. ಭಗವಂತ ದೊಡ್ಡ ಉರಗದ ಮೇಲೆ ಮಲಗಿದ ಶೇಷಶಾಹಿ. ಶೇಷಶಾಹಿ ಎಂದರೇನು ಎನ್ನುವುದನ್ನು ನಾವು ನಮ್ಮೊಳಗಿರುವ ದೇವರನ್ನು ಕಾಣಲು ಪ್ರಯತ್ನಿಸಿದಾಗ ಮಾತ್ರ ತಿಳಿಯುತ್ತದೆ. ಈ ಹಿಂದೆ ಹೇಳಿದಂತೆ ನಮ್ಮ ದೇಹದೊಳಗೆ ಮೂಲಾಧಾರದಿಂದ ಸಹಸ್ರಾರದವರೆಗೆ ಬೇರೆ ಬೇರೆ ಶಕ್ತಿ ಕೇಂದ್ರಗಳಿವೆ. ಮೂಲಾಧಾರದಲ್ಲಿ ಮಾಡಿಕೆಹಾಕಿ ತಲೆಯನ್ನು ಕೆಳಗಿಟ್ಟು ಮಲಗಿದ ಉರಗದ ಸ್ಥಿತಿಯಲ್ಲಿ ಕುಂಡಲಿನಿ ಶಕ್ತಿ ಅಡಗಿದೆ. ಕೆಳಮುಖವಾಗಿರುವ ಈ ಶಕ್ತಿ
ಕೇಂದ್ರದಿಂದ ಶಕ್ತಿ ಪಾತವಾಗುತ್ತದೆ. ಇಂತಹ ಹಾವನ್ನು ಕೆಣಕಿದರೆ ಮಾತ್ರ ಅದು ಹೆಡೆ ಎತ್ತುತ್ತದೆ; ಆಗ ಶಕ್ತಿ ಮೇಲ್ಮುಖವಾಗಿ ಸ್ವಾಧಿಷ್ಟಾನ-ಮಣಿಪುರ-ಅನಾಹತ-ವಿಶುದ್ಧಿ-ಆಜ್ಞಾ-ಸಹಸ್ರಾರ, ಹೀಗೆ ಹಂತ ಹಂತವಾಗಿ ಮೇಲೇರುತ್ತದೆ. ನಮ್ಮ ಆಜ್ಞಾ ಚಕ್ರವೇ ಕ್ಷೀರ ಸಾಗರ. ಇಂತಹ ಕ್ಷೀರ ಸಾಗರದಲ್ಲಿ ಸಹಸ್ರಾರದತ್ತ ಹೆಡೆಯತ್ತಿನಿಂತ ಶೇಷ ಶಕ್ತಿ ಹಾಗು ಅದರ ಮೇಲೆ ಮಲಗಿ ದರ್ಶನವನ್ನೀಯುವ ಅನಂತ ಪದ್ಮನಾಭ ಭಗವಂತ ಮಹೋರಗಃ.

Vishnu Sahasranama 665-674

ವಿಷ್ಣು ಸಹಸ್ರನಾಮ:
ಬ್ರಹ್ಮಣ್ಯೋ ಬ್ರಹ್ಮಕೃದ್ಬ್ರಹ್ಮಾ ಬ್ರಹ್ಮ ಬ್ರಹ್ಮವಿವರ್ಧನಃ
ಬ್ರಹ್ಮವಿದ್ಬ್ರಾಹ್ಮಣೋ ಬ್ರಹ್ಮೀ ಬ್ರಹ್ಮಜ್ಞೋ ಬ್ರಾಹ್ಮಣಪ್ರಿಯಃ
665) ಬ್ರಹ್ಮಣ್ಯಃ
ಚತುರ್ಮುಖ ಬ್ರಹ್ಮನಿಗೆ ಬಹಳ ಪ್ರಿಯವಾದವನು (ಹಿತನಾದವನು) ಬ್ರಹ್ಮಣ್ಯಃ, ಬ್ರಹ್ಮ ಎನ್ನುವುದಕ್ಕೆ 'ಜೀವರು', 'ವೇದ' ಎನ್ನುವ ಇತರ ವಿಶೇಷ ಅರ್ಥಗಳಿವೆ. ಸಮಸ್ತ ಜೀವಜಾತಕ್ಕೂ ಹಿತನಾಗಿ, ಸದಾ ಜೊತೆಗೆ ಇರತಕ್ಕ ಗೆಳೆಯ ಭಗವಂತ ಬ್ರಹ್ಮಣ್ಯಃ;  ಸಮಸ್ತ ವೇದಗಳಿಂದ ಪ್ರತಿಪಾಧ್ಯನಾದ ಭಗವಂತ ಬ್ರಹ್ಮಣ್ಯಃ   
666) ಬ್ರಹ್ಮಕೃತ್
ಸೃಷ್ಟಿಯ ಆರಂಭದಲ್ಲಿ ಚತುರ್ಮುಖ ಬ್ರಹ್ಮನನ್ನು ಸೃಷ್ಟಿಸಿ ವೇದೊಪದೇಶ ಮಾಡಿದ ಭಗವಂತ, ಸಮಸ್ತ ಜೀವ ಜಾತಗಳಿಗೆ ಆಯಾ ಜೀವದ ಕರ್ಮಕ್ಕೆ ತಕ್ಕಂತೆ, ಸ್ವರೂಪಕ್ಕೆ ತಕ್ಕಂತೆ, ದೇಹವನ್ನು ಕೊಟ್ಟು ಬದುಕನ್ನು ಕೊಟ್ಟ ಬ್ರಹ್ಮಕೃತ್.
667) ಬ್ರಹ್ಮಾ
ಸೃಷ್ಟಿಗೆ  ಕಾರಣನಾದ ಚತುರ್ಮುಖನೊಳಗಿದ್ದು ಸೃಷ್ಟಿ ಮಾಡುವ ಭಗವಂತ ಬ್ರಹ್ಮಾ (ಈ ನಾಮ ಪುರುಷ ರೂಪದಲ್ಲಿದೆ ಅಥವಾ ಪುಲ್ಲಿಂಗ) 
668) ಬ್ರಹ್ಮ
ಭಗವಂತ ಎಲ್ಲಕ್ಕಿಂತ ದೊಡ್ಡ ತತ್ವ (ಬ್ರಹ್ಮ-ನಪುಂಸಕ ಲಿಂಗ; ಇದು ಸಂಸ್ಕೃತದಲ್ಲಿರುವ ವಿಶೇಷ, ಗಂಡು-ಹೆಣ್ಣಿನ ದೌರ್ಬಲ್ಯದ ಲೇಪವಿಲ್ಲದೆ ನಮ್ಮನ್ನು ಪೂರ್ಣತೆಗೆ ಒಯ್ಯುವ ಎಲ್ಲಕ್ಕಿಂತ ದೊಡ್ಡ ತತ್ವ )  
669) ಬ್ರಹ್ಮವಿವರ್ಧನಃ
ಜೀವಜಾತದ ಭೌದ್ಧಿಕ ಬೆಳವಣಿಗೆಗೆ ಬೇಕಾದ ದೇಹವನ್ನು ಕೊಟ್ಟು ಬೆಳೆಸಿದ ಭಗವಂತ ಬ್ರಹ್ಮವಿವರ್ಧನಃ. ಎಲ್ಲಕ್ಕಿಂತ ದೊಡ್ಡ ಜೀವ ಚತುರ್ಮುಖ ಬ್ರಹ್ಮನನ್ನು ಸೃಷ್ಟಿಮಾಡಿ, ವೇದ ವಿಜ್ಞಾನವನ್ನು ಬೆಳೆಸಿ, ವಿಸ್ತಾರ ಮಾಡಿದ ಭಗವಂತ ಬ್ರಹ್ಮವಿವರ್ಧನಃ
670) ಬ್ರಹ್ಮವಿತ್
ವೇದವನ್ನು ಪೂರ್ಣವಾಗಿ ತಿಳಿದವನು ಬ್ರಹ್ಮವಿತ್. ಭಾರತೀಯ ನಂಬಿಕೆಯ ಪ್ರಕಾರ ವೇದವನ್ನು ಯಾರೂ ನಿರ್ಮಾಣ ಮಾಡಿಲ್ಲ. ಹಾಗಿದ್ದರೆ ವೇದ ಹೇಗೆ ನಿರ್ಮಾಣ ಆಯಿತು ? ಪ್ರಾಚೀನರು ಹೇಳುವಂತೆ ವೇದ ನಮ್ಮ intellectual compilation ಅಲ್ಲ ಅದು intuitional compilation.  ಅಂದರೆ ಜ್ಞಾನಿಗಳಿಗೆ ತನ್ನಷ್ಟಕ್ಕೆ ಹೊಳೆಯುತ್ತದೆ, ಅದರಂತೆ ಹೇಳುತ್ತಾರೆ. ಇದನ್ನೇ ಕುಮಾರವ್ಯಾಸ "ನಾನು ಕೇವಲ ಲಿಪಿಗಾರ, ಭಗವಂತ ಹೇಳಿದ್ದನ್ನು ನಾನು ಬರೆದೆ" ಎಂದಿದ್ದಾನೆ. ನ್ಯೂಟನ್  ಬೀಳುತ್ತಿರುವ ಹಣ್ಣನ್ನು ನೋಡಿ ಗುರುತ್ವಾಕರ್ಷಣ ಶಕ್ತಿಯನ್ನು ಕಂಡು ಹಿಡಿದಂತೆ. ಇದೆಲ್ಲವೂ intuitional flash.
ಗೀತೆಯಲ್ಲಿ ಶ್ರೀಕೃಷ್ಣ ಹೇಳುವಂತೆ:
ವೇದೈಸ್ಚ ಸರ್ವೈರಹಮೇವ ವೇದ್ಯೋ  ವೇದಾಂತಕೃದ್ ವೇದವಿದೇವ ಚಾಹಮ್ || (ಅ-೧೫, ಶ್ಲೋ-೧೫)
ಅಂದರೆ " ವೇದಾಂತ ಸೂತ್ರಗಳನೊರೆದವನು, ವೇದಗಳ ಮರ್ಮವನ್ನರಿತವನು ನಾನೆ" ಆದ್ದರಿಂದ ವೇದವನ್ನು ಸಂಪೂರ್ಣ ತಿಳಿದವನು ಭಗವಂತನೊಬ್ಬನೆ.ಇಂತಹ ಭಗವಂತ ಬ್ರಹ್ಮವಿತ್.
671) ಬ್ರಾಹ್ಮಣಃ
ನಮ್ಮಲ್ಲಿ ಜನಿವಾರ ಹಾಕಿದವರು ಬ್ರಾಹ್ಮಣರು. ಆದರೆ ನಿಜವಾದ ಬ್ರಾಹ್ಮಣ ಎಂದರೆ ವೇದವೇಧ್ಯ. (He who knows Brahman). ವೇದವನ್ನು, ಭಗವಂತನನ್ನು ತಿಳಿದವ ಬ್ರಾಹ್ಮಣ. ಆದರೆ ಭಗವಂತನನ್ನು ಮತ್ತು ವೇದವನ್ನು ಪೂರ್ಣವಾಗಿ ತಿಳಿದವ ಭಗವಂತನೊಬ್ಬನೇ! ವೇದದ ಪೂರ್ಣ ಅರ್ಥ ಭಗವಂತನನ್ನು ಬಿಟ್ಟರೆ ಇನ್ಯಾರಿಗೂ   ತಿಳಿದಿಲ್ಲ. ಆದ್ದರಿಂದ ಭಗವಂತ ಬ್ರಾಹ್ಮಣಃ 
672) ಬ್ರಹ್ಮೀ
ಬ್ರಹ್ಮ ಉಳ್ಳವನು ಬ್ರಹ್ಮೀ. ಎಲ್ಲಕ್ಕಿಂತ ಬೃಹತ್ ಆದ ಈ ವಿಶ್ವದ ಬ್ರಹ್ಮ ಭಗವಂತ ಬ್ರಹ್ಮೀ. ಈ ವಿಶ್ವವನ್ನು ನಿರ್ಮಿಸಿದ ಚತುರ್ಮುಖನ ತಂದೆ, ಇಡೀ ಜಗತ್ತಿನ ಎಲ್ಲಾ ರಹಸ್ಯಗಳನ್ನು ಸೆರೆಹಿಡಿದ ವೇದ ವಾಗ್ಮಯ ಭಗವಂತ ಬ್ರಹ್ಮೀ.  
673) ಬ್ರಹ್ಮಜ್ಞಃ
ಬ್ರಹ್ಮ (ವೇದ)ವನ್ನು ತಿಳಿದವ, ಇಡೀ ವಿಶ್ವವನ್ನು, ಜೀವಜಾತವನ್ನು ತಿಳಿದ ಭಗವಂತ ಬ್ರಹ್ಮಜ್ಞಃ.
674) ಬ್ರಾಹ್ಮಣಪ್ರಿಯಃ
ಬ್ರಹ್ಮ ಜ್ಞಾನಿಗಳಿಗೆ ಪ್ರಿಯನಾದವ ಹಾಗು ಬ್ರಹ್ಮಜ್ಞಾನಿಗಳನ್ನು ಪ್ರೀತಿಸುವ ಭಗವಂತ
ಬ್ರಾಹ್ಮಣಪ್ರಿಯಃ.

Sunday, November 21, 2010

Vishnu Sahasranaama 655-664

ವಿಷ್ಣು ಸಹಸ್ರನಾಮ:
ಕಾಮದೇವಃ ಕಾಮಪಾಲಃ ಕಾಮೀ ಕಾಂತಃ ಕೃತಾಗಮಃ
ಅನಿರ್ದೇಶ್ಯವಪುರ್ವಿಷ್ಣುರ್ವೀರೋನಂತೋ ಧನಂಜಯಃ
655) ಕಾಮದೇವಃ
ಈ ನಾಮದ ಮೇಲ್ನೋಟದ ಅರ್ಥ ಎಲ್ಲರಿಗೂ ಚಿರಪರಿಚಿತ. ಮನುಷ್ಯನ ಬದುಕಿನಲ್ಲಿ ಬಯಕೆ ಹಾಗು ಅರಿವು (desire and wisdom) ಚೈತನ್ಯದ ಮೂಲಭೂತ ಧರ್ಮ.'ಕಾಮ' ಸಂಸ್ಕೃತದಲ್ಲಿ ಸೌಂದರ್ಯದ ಸಂಕೇತ. ಅಂದರೆ ಸುಂದರವಾದದ್ದನ್ನು ಬಯಸುವುದು 'ಕಾಮ'. 'ಸುಂದರ' ಅಂದರೆ ಪ್ರೀಯವಾದದ್ದು. ಸುಂದರವಾದದ್ದನ್ನು, ಅಥವಾ ಪ್ರಿಯವಾದದ್ದನ್ನು ಬಯಸುವುದು ಕಾಮ. ಸೌಂದರ್ಯ ವಸ್ತುವಿನಲ್ಲಿಲ್ಲ, ನಾವು ನೋಡುವ ದೃಷ್ಟಿಯಲ್ಲಿದೆ. ನಮಗೆ ಯಾವುದು ಇಷ್ಟವೋ ಅದು ನಮಗೆ ಸುಂದರವಾಗಿ ಕಾಣುತ್ತದೆ. ಹೀಗೆ ಇರುವ ಕಾಮವನ್ನು ಈಡೇರಿಸುವ ಕಾಮದೇವ (ಮನ್ಮಥ) ನಮ್ಮೊಳಗಿದ್ದು ವಿವಿಧ ರೂಪದ ಬಯಕೆಗಳನ್ನು ಪ್ರಚೋದಿಸಿ, ಕಾಮನೆಗಳನ್ನು ಈಡೇರಿಸಿ, ಆನಂದವನ್ನು ಕೊಟ್ಟು ವಿಹರಿಸುವವ. ಮನ್ಮಥ ವಿಷ್ಣುವಿನ ಮಗ; ಅವನೇ ಶಿವನ ಮಗ ಸ್ಕಂದ (ಷಣ್ಮುಖ), ಅವನೇ ಬ್ರಹ್ಮನ ಮಗ ಸನತ್ಕುಮಾರ. ನಮಗೆ ಕಾಮನೆಗಳನ್ನು ನೀಡುವ ಹಾಗು ಅದನ್ನು ನಿಯಂತ್ರಿಸುವ ಮನ್ಮಥ-ಸನತ್ಕುಮಾರ-ಷಣ್ಮುಖನೊಳಗಿರುವ, ಸರ್ವ ಕಾಮಗಳನ್ನು ಗೆದ್ದ ಭಗವಂತ ಕಾಮದೇವಃ.     
656) ಕಾಮಪಾಲಃ
ನಮ್ಮ ಎಲ್ಲಾ ಬಯಕೆಗಳನ್ನು ರಕ್ಷಣೆ ಮಾಡುವವನು ಭಗವಂತ. ನಮ್ಮ ಬಯಕೆ ನಮ್ಮ ಅಧೀನ ಅಲ್ಲ. ಧರ್ಮ ಕಾರ್ಯ ಮಾಡಬೇಕು ಎನ್ನುವ ಕಾಮ ಇಲ್ಲದಿದ್ದರೆ ಧರ್ಮವಿಲ್ಲ! ಹಣವನ್ನು ಧರ್ಮ ಕಾರ್ಯಕ್ಕೆ ವಿನಿಯೋಗಿಸಬೇಕು ಎನ್ನುವ ಕಾಮನೆ ಇಲ್ಲದಿದ್ದರೆ 'ಅರ್ಥಕ್ಕೆ' ಬೆಲೆಯಿಲ್ಲ. ಕಾಮ ಇಲ್ಲದಿದ್ದರೆ ಎಲ್ಲವೂ ಅಸಾಧ್ಯ. ಬಯಕೆಯೇ ಇಲ್ಲದ ಬದುಕಿಲ್ಲ. ಬಯಕೆ ಕೆಟ್ಟದ್ದಲ್ಲ ಆದರೆ ಕುಸ್ಸಿತವಾದ ಬಯಕೆ ಕೆಟ್ಟದ್ದು. ನಮಗೆ ಒಳ್ಳೆಯ ಬಯಕೆಯನ್ನು ಕೊಟ್ಟು ಅದನ್ನು ಪೂರೈಸಿ ಉದ್ಧರಿಸುವ ಭಗವಂತ ಕಾಮಪಾಲಃ.
657) ಕಾಮೀ
ಕಾಮೀ ಅಂದರೆ ಕಾಮ ಉಳ್ಳವನು ಎಂದರ್ಥವಲ್ಲ. ಕಾಮದ ಒಡೆಯ ಕಾಮೀ. ಜಗತ್ತಿನಲ್ಲಿ ಕಾಮನೆಗಳನ್ನು ಪ್ರೇರೇಪಿಸುವ ಮನ್ಮಥನ ಅಪ್ಪ ಭಗವಂತ ಕಾಮೀ.
658) ಕಾಂತಃ
ರತಿ-ಮನ್ಮಥರಿಗೆ ರೂಪಕೊಟ್ಟ ಭಗವಂತ ಎಲ್ಲರೂ ಬಯಸುವಂತಹ  ಪರಮಸುಂದರ ಮೂರ್ತಿ. ಅತ್ಯಂತ  ಸುಂದರ ಮಾಂಗಲಿಕ ರೂಪ ಆತನದ್ದು. ಇಲ್ಲಿ ಸೌಂದರ್ಯ ಎಂದರೆ ಬಾಹ್ಯ ಸೌಂದರ್ಯವಲ್ಲ, ಪಂಚಭೂತಗಳಿಂದಾದ ಸೌಂದರ್ಯವಲ್ಲ, ಜ್ಞಾನಾನಂದಗಳಿಂದ ತುಂಬಿದ  ಪರಿಪೂರ್ಣ ಸೌಂದರ್ಯ.ಇಂತಹ ಸುಂದರ ಮೂರ್ತಿ ಭಗವಂತ ಕಾಂತಃ.   
659) ಕೃತಾಗಮಃ
ಮೊಟ್ಟ ಮೊದಲು ಜ್ಞಾನವನ್ನು, ವೇದವನ್ನು, ಚತುರ್ಮುಖನಿಗೆ ಉಪದೇಶ ಮಾಡಿ ಜಗತ್ತಿಗೆ ಆಗಮನದ ರೂಪದಲ್ಲಿ ಕೊಟ್ಟವ ಭಗವಂತ. ಆತ ಆಗಮಗಳಿಂದ ಕೃತನಾದವನು. ಸಮಸ್ತ ಆಗಮಗಳಿಂದಲೇ ತಿಳಿಯಬೇಕಾದವನು. ಭೂಮಿಗೆ ಇಳಿದು ಬಂದು, ವೇದ-ಪುರಾಣವನ್ನು ರಚಿಸಿ ಕೊಟ್ಟು, ಶೃತಿ-ಸ್ತುತಿಗಳನ್ನು ನೀಡಿದ ಭಗವಂತ ಕೃತಾಗಮಃ.
660) ಅನಿರ್ದೇಶ್ಯವಪು
ಇಂಥದ್ದೇ ಎಂದು ನಿರೂಪಿಸಲು ಆಗದ ಆಚಿಂತ್ಯ ರೂಪನು. 'ನಿರ್ದೇಶ' ಎಂದರೆ ಇದು ಇಂತದ್ದೇ ಎಂದು ಮನಸ್ಸು ಗ್ರಹಿಸುವ ರೂಪ. ಕೃಷ್ಣನನ್ನು, ರಾಮನನ್ನು, ವ್ಯಾಸರನ್ನು ಕಂಡವರಿದ್ದಾರೆ, ಆದರೆ ಅದು ಕಂಡು ಗ್ರಹಿಸುವ ರೂಪವಲ್ಲ. ಯಾವುದನ್ನು ನಿರೂಪಿಸಲಾಗದೆ ಮಾತು ಮೂಕವಾಗುತ್ತದೋ, ಮನಸ್ಸು ಸ್ವಚ್ಚವಾಗುತ್ತದೋ, ಅಂತಹ ಆನಂದಮಯ ರೂಪ ಎಂದು ಉಪನಿಷತ್ತು ಹೇಳುತ್ತದೆ. ಹೀಗೆ ಮನಸ್ಸಿನ ಚಿಂತನೆಗೆ ಮೀರಿದ ರೂಪವುಳ್ಳ  ಭಗವಂತ  ಅನಿರ್ದೇಶ್ಯವಪು.
661) ವಿಷ್ಣುಃ
ಎಲ್ಲಾ ಕಡೆಯೂ, ಎಲ್ಲರ ಒಳಗೂ-ಹೊರಗೂ ತುಂಬಿರುವ, ಮಾತು ಮನಸ್ಸಿಗೆ ಮೀರಿದ ಅನಂತ ಶಕ್ತಿ ಭಗವಂತ ವಿಷ್ಣುಃ.
662) ವೀರಃ
ಎಲ್ಲವನ್ನೂ ನಿಗ್ರಹಿಸಬಲ್ಲ ಪೌರುಷಶಾಲಿ. 'ವಿ' ಅಂದರೆ ಪಕ್ಷಿ (ಗರುಡ), 'ಈರ' ಅಂದರೆ ಪ್ರಾಣದೇವರು. ಗರುಡ-ಪ್ರಾಣರನ್ನು ನಿಯಂತ್ರಿಸುವ ಪರಾಶಕ್ತಿ ಭಗವಂತ ವೀರ.
663) ಅನಂತಃ
ಅಳತೆಗೆ ಸಿಗದ ಅನಂತ ಶಕ್ತಿ. ಆತ ಕಾಲತಃ, ದೇಶತಃ, ಗುಣತಃ ಅನಂತ.  
664) ಧನಂಜಯಃ
ಅರ್ಜುನನಲ್ಲಿ ಸನ್ನಿಹಿತನಾಗಿ ಅವನನ್ನು ಧನಂಜಯನಾಗಿ ಮಾಡಿದ ಭಗವಂತ
ಧನಂಜಯಃಜಗತ್ತಿನಲ್ಲಿರುವ ಎಲ್ಲಾ ಸಂಪತ್ತು ಆತನ ಸೊತ್ತು. ಆದ್ದರಿಂದ 'ನನ್ನದು' ಎನ್ನುವ ಅಹಂಕಾರ ಬಿಟ್ಟು ಆ ಧನಂಜಯನಲ್ಲಿ ಶರಣಾಗಬೇಕು. 

Vishnu sahasranama 646-654

ವಿಷ್ಣು ಸಹಸ್ರನಾಮ: 
ಕಾಲನೇಮಿನಿಹಾ ವೀರಃ ಶೌರಿಃ ಶೂರಜನೇಶ್ವರಃ 
ತ್ರಿಲೋಕಾತ್ಮಾ ತ್ರಿಲೋಕೇಶಃ ಕೇಶವಃ ಕೇಶಿಹಾ ಹರಿಃ
646) ಕಾಲನೇಮಿನಿಹಾ
ಕಾಲನೇಮಿ ಎನ್ನುವವನು ಒಬ್ಬ ಅಸುರ. ಆತನೇ ಕಂಸನಾಗಿ ಹುಟ್ಟಿದ್ದು. ತಾವು ಬಯಸಿದಂತೆ ಕಾಲವನ್ನು ಬಳಸುವ ಲೋಕ ಕಂಟಕರನ್ನು ಸಂಹಾರ ಮಾಡುವುದಕ್ಕೋಸ್ಕರ ಭೂಮಿಗಿಳಿದು ಬರುವ ಭಗವಂತ ಕಾಲನೇಮಿನಿಹಾ. ಕಾಲವನ್ನು ನಿಯಂತ್ರಿಸುವ ಬ್ರಹ್ಮನನ್ನೂ ಒಂದು ದಿನ ಸಂಹಾರ ಮಾಡುವ (ಮಹಾಪ್ರಳಯದಲ್ಲಿ) ಭಗವಂತ ಕಾಲನೇಮಿನಿಹಾ.
647) ವೀರಃ
ಪರಾಕ್ರಮಶಾಲಿ
648) ಶೌರಿಃ
ಶೂರರಿಗೆಲ್ಲ ಈಶ್ವರ. ಅನ್ಯಾಯದ ವಿರುದ್ಧ ಹೋರಾಡುವ ಎಲ್ಲಾ ಶೂರರೊಳಗಿದ್ದು ದುಷ್ಟ ಸಂಹಾರ ಮಾಡುವ ಭಗವಂತ ಶೌರಿಃ. ಶೂರಸೇನನ(ವಾಸುದೇವನ ತಂದೆ) ವಂಶದಲ್ಲಿ ಹುಟ್ಟಿಬಂದ ಅವತಾರಪುರುಷ ಭಗವಂತ ಶೌರಿಃ 
649) ಶೂರಜನೇಶ್ವರಃ
ಶೂರರಿಗೆಲ್ಲ ಒಡೆಯ.
650) ತ್ರಿಲೋಕಾತ್ಮಾ
ಮೂರು ಲೋಕಗಳ ಎಲ್ಲಾ ಜೀವರೊಳಗಿರುವ ಅಂತರ್ಯಾಮಿ. ಮೂರು ಲೋಕದಲ್ಲಿ ನಿಂತು ಎಲ್ಲವನ್ನೂ ಮಾಡುವ ಭಗವಂತ ತ್ರಿಲೋಕಾತ್ಮಾ.
651) ತ್ರಿಲೋಕೇಶಃ
ಮೂರು ಲೋಕಗಳ ಸ್ವಾಮಿ.
652) ಕೇಶವಃ
ಕೇಶದಿಂದ ಆವಿರ್ಭಾವ ಹೊಂದಿ ಅವತಾರವೆತ್ತಿದ ಗುಂಗುರು ಕೂದಲಿನ ಚೆಲುವ(ಕೃಷ್ಣ). ಸೂರ್ಯನ ಕಿರಣಗಳಲ್ಲಿ ನಿಂತು ಇಡೀ ಜಗತ್ತಿಗೆ ಶಕ್ತಿ ಪ್ರಧಾನ ಮಾಡುವ ಭಗವಂತ ಕೇಶವಃ.
ಕಹ+ಈಶ, ಕಹ ಅಂದರೆ ಬ್ರಹ್ಮಶಕ್ತಿ, ಈಶ ಎಂದರೆ ಶಿವಶಕ್ತಿ. ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯೊಳಗಿನ ಪರಶಕ್ತಿ. ಬೆಳಕಾಗಿ, ಮಳೆಯಾಗಿ, ಸೂರ್ಯಕಿರಣದೊಳಗೆ ಸನ್ನಿಹಿತನಾದ ಭಗವಂತ ಕೇಶವಃ.      
653) ಕೇಶಿಹಾ
ಕೇಶಿ ಎನ್ನುವ ಅಸುರನನ್ನು ಸಂಹಾರ ಮಾಡಿದವನು, ಪ್ರಳಯ ಕಾಲದಲ್ಲಿ ಸೂರ್ಯನನ್ನು, ಪ್ರಾಣತತ್ವವನ್ನೂ  ಸಂಹರಿಸುವವನು.
ಸೂರ್ಯನನ್ನು  ಮುಳುಗುವಾಗ, ಮೂಡುವಾಗ ಮತ್ತು ಗ್ರಹಣಕಾಲದಲ್ಲಿ ನೇರವಾಗಿ ನೋಡಬಾರದು, ನೀರಿನಲ್ಲಿ  ಸೂರ್ಯನ ಪ್ರತಿಬಿಂಬವನ್ನು ನೋಡುವುದು ಕಣ್ಣಿಗೆ ಹಾನಿಕರ. ಏಕೆಂದರೆ ಆ ಕಿರಣಗಳಲ್ಲಿ ದುಷ್ಟ ಶಕ್ತಿಗಳಿರುತ್ತವೆ ಇಂತಹ ದುಷ್ಟಶಕ್ತಿಗಳನ್ನು ಸಂಹಾರ ಮಾಡುವ ಭಗವಂತ ಕೇಶಿಹಾ.
ಬೆಳಿಗ್ಗೆ ಸೂರ್ಯೋದಯವಾದಮೇಲೂ ಮಲಗಿ ನಿದ್ದೆ ಮಾಡುವಂತೆ ಮಾಡುವ ಅಸುರಶಕ್ತಿಯನ್ನು (ಮಂದೇಹನನ್ನು) ನಾಶಮಾಡುವ ಭಗವಂತ ಕೇಶಿಹಾ.
654) ಹರಿಃ
ನಮ್ಮ ಎಲ್ಲಾ ಸಮಸ್ಯೆಗಳನ್ನು,ಸಂಸಾರ ಬಂಧನವನ್ನು ಪರಿಹರಿಸುವ, ಕೊನೆಗೆ ಸಮಸ್ತ ವಿಶ್ವವನ್ನು ಸಂಹರಿಸುವ ಭಗವಂತ
ಹರಿಃ.
ಅನಂತ ರೂಪದಲ್ಲಿ ವಿಶ್ವದೊಳಗೆ ವಿಹರಿಸುವ, ಭಕ್ತಿಯಿಂದ ಅರ್ಪಿಸಿದ ಆಹುತಿಯನ್ನು ಸ್ವೀಕರಿಸುವ ಭಗವಂತ,
ಹರಿದ್ವರ್ಣನಾಗಿ ಇಡೀ ಭೂಮಿಯಲ್ಲಿ ಸಸ್ಯ ಸಮೃದ್ಧಿ ಮಾಡಿದ ಹರಿಃ.   

Saturday, November 20, 2010

Vishnu sahasranama 637-645

ವಿಷ್ಣು ಸಹಸ್ರನಾಮ:
ಅರ್ಚಿಷ್ಮಾನರ್ಚಿತಃ ಕುಂಭೋ ವಿಶುದ್ಧಾತ್ಮಾ ವಿಶೋಧನಃ
ಅನಿರುದ್ಧೋಪ್ರತಿರಥಃ ಪ್ರದ್ಯುಮ್ನೋಮಿತವಿಕ್ರಮಃ
637) ಅರ್ಚಿಷ್ಮಾನ್ 
ಜಗತ್ತಿನಲ್ಲಿ ಯಾವ ಯಾವ ಬೆಳಕುಗಳಿವೆಯೋ ಅದರ ಮೂಲ ಭಗವಂತ ಅರ್ಚಿಷ್ಮಾನ್. ಆತ ಬೆಳಕಿನ ಜ್ವಾಲೆಗಳಿಂದ ಸುತ್ತುವರಿದವನು.
638) ರ್ಚಿತಃ
ಎಲ್ಲರಿಂದ ಪೂಜಿಸಲ್ಪಡುವವನು.
639) ಕುಂಭಃ
ಕುಂಭ ಎಂದರೆ ಮಡಕೆ. ಸ್ವತ್ತನ್ನು ಮುಚ್ಚಿಡುವ ಪಾತ್ರೆ. ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನೂ ತನ್ನೊಳಗೆ ಮುಚ್ಚಿಡುವ ಕುಂಭಃ. ಕುಂಭ ಎನ್ನುವುದಕ್ಕೆ ಭೂಮಿ ಎನ್ನುವ ವಿಶೇಷ ಅರ್ಥ ಕೂಡಾ ಇದೆ. ಭೂಮಿಯನ್ನು ನಿರ್ಮಿಸಿ ಬೆಳಗುವ ಭಗವಂತ ಕುಂಭಃ.
640) ವಿಶುದ್ಧಾತ್ಮಾ
ಭಗವಂತ ಮತ್ಸ್ಯ, ಕೂರ್ಮ, ವರಾಹ ರೂಪದಲ್ಲಿ ಭೂಮಿಗಿಳಿದು ಬಂದರೂ ಕೂಡಾ, ಎಲ್ಲಾ ರೂಪದಲ್ಲೂ ಆತ ಪರಿಶುದ್ಧ ಸ್ವರೂಪ. ಎಲ್ಲಾ ಜೀವರೊಳಗಿರುವ ಭಗವಂತನಿಗೆ ಯಾವ ರೂಪದಲ್ಲೂ ಕೊಳೆಯ ಸ್ಪರ್ಶವಿಲ್ಲ.
641) ವಿಶೋಧನಃ
ವಿಶೋಧನಃ ಎಂದರೆ ಪರಿಶುದ್ಧಗೊಳಿಸುವವನು. ನಮ್ಮ ಮನಸ್ಸಿನ ತುಂಬಾ ಭಗವಂತನನ್ನು ತುಂಬಿಕೊಂಡಾಗ ನಾವು ಶುದ್ಧರಾಗುತ್ತೇವೆ. ಸ್ನಾನ ಮಾಡುವುದರಿಂದಾಗಲಿ, ಒದ್ದೆ ಬಟ್ಟೆಯಿಂದಾಗಲಿ ಮೈಲಿಗೆ ಹೋಗುವುದಿಲ್ಲ, ವಿಶೋಧನನಾದ ಭಗವಂತನನ್ನು ಸದಾ ನೆನೆಯುವುದರಿಂದ ನಾವು ಪಾವನರಾಗುತ್ತೇವೆ.
642) ಅನಿರುದ್ಧಃ
ಅನಿರುದ್ಧಃ ಎಂದರೆ ತಡೆಯಿಲ್ಲದವನು. ಭಗವಂತ ಇಲ್ಲದ ತಾಣವಿಲ್ಲ. ಎಲ್ಲಿಯೂ ಕೂಡಾ ತಡೆ ಇಲ್ಲದೆ ಇರುವ ಅವನಿಗೆ ಪ್ರವೇಶವಿಲ್ಲದ ತಾಣವಿಲ್ಲ. ಆದರೆ ಭಕ್ತವತ್ಸಲನಾದ ಭಗವಂತನನ್ನು 'ಅನಿಗಳು' (ಪ್ರಾಣ ತತ್ವವನ್ನು ಉಪಾಸನೆ ಮಾಡುವ ಸಾಧಕರು) ತಡೆ ಹಿಡಿಯಬಲ್ಲರು.ಆತ ಭಕ್ತರಾಧೀನ. 
643) ಅಪ್ರತಿರಥಃ
ಭಗವಂತನನ್ನು ಎದುರಿಸುವ ಇನ್ನೊಂದು ಶಕ್ತಿಯಿಲ್ಲ. ಆತ ಅಪ್ರತಿರಥಃ
644) ಪ್ರದ್ಯುಮ್ನಃ
'ದ್ಯುಮ್ನ' ಎಂದರೆ ಬೆಳಕು/ಜ್ಞಾನ/ಸಂಪತ್ತು.  ಪ್ರದ್ಯುಮ್ನಃ ಎಂದರೆ ಎಲ್ಲಾ ಸಂಪತ್ತುಗಳ ಸ್ವಾಮಿ, ಸರ್ವಜ್ಞ, ಸರ್ವೇಶ್ವರ, ಜ್ಯೋತಿರ್ಮಯನಾದ ಭಗವಂತ. 
645) ಅಮಿತವಿಕ್ರಮಃ
ಭಗವಂತ ಎಣೆಯಿರದ ಪೌರುಷದವನು, ಅವನ ವಿಕ್ರಮ ಅಮಿತ. ನಾಶವಿಲ್ಲದ,  ಅಳತೆಗೆ ಎಟುಕದ, ನಶ್ವರವಲ್ಲದ, ಅನಂತವಾದ ಪೌರುಷದ ಖನಿಯಾದ ಭಗವಂತ
ಅಮಿತವಿಕ್ರಮಃ.

Vishnu sahasranama 628-636

ವಿಷ್ಣು ಸಹಸ್ರನಾಮ:
ಉದೀರ್ಣಃ ಸರ್ವತಶ್ಚಕ್ಷುರನೀಶಃ ಶಾಶ್ವತಸ್ಥಿರಃ
ಭೂಶಯೋ ಭೂಷಣೋ ಭೂತಿರ್ವಿಶೋಕಃ ಶೋಕನಾಶನಃ
628) ಉದೀರ್ಣಃ
ಉಪ -ಉಪರಿ  ಅಂದರೆ ಎತ್ತರದಲ್ಲಿರುವ ವಸ್ತು (ಇದನ್ನೇ ऊपर ಎಂದು ಹಿಂದಿಯಲ್ಲಿ ಹೇಳುತ್ತಾರೆ, ಇಂಗ್ಲೀಷಿನಲ್ಲಿ ಇದು upper ಆಗಿದೆ). ಓದಿನಲ್ಲಿ, ಅಧ್ಯಾಯನದಲ್ಲಿ ಎತ್ತರದಲ್ಲಿರುವವರು ಉಪಾಧ್ಯಾಯರು, ಭೌಧಿಕವಾಗಿ ಎತ್ತರದಲ್ಲಿರುವವರು ಉದೀರ್ಣರು.  ಗುಣಪೂರ್ಣನಾದ ಭಗವಂತ ಉದೀರ್ಣಃ.
629) ಸರ್ವತಶ್ಚಕ್ಷುಃ
ಚಕ್ಷು ಎಂದರೆ 'ಕಣ್ಣು'; ಎಲ್ಲೆಡೆ ಕಣ್ಣುಳ್ಳವನು ಹಾಗು ಎಲ್ಲೆಡೆ ಕಣ್ಣಿಟ್ಟವನು ಸರ್ವತಶ್ಚಕ್ಷುಃ.
630) ಅನೀಶಃ
ತನಗೆ ಇನ್ನೊಬ್ಬ ಒಡೆಯನಿಲ್ಲದವನು ಅನೀಶಃ. ಭಗವಂತನಿಗಿಂತ ಎತ್ತರದಲ್ಲಿರುವವನು ಇನ್ನೊಬ್ಬನಿಲ್ಲ.
631) ಶಾಶ್ವತಸ್ಥಿರಃ
ಯಾವತ್ತೂ ಒಂದೇ ರೀತಿ ಇರುವವನು
; ಬದಲಾವಣೆ ಇಲ್ಲದೆ ಆಚಲನಾಗಿರುವ  ಭಗವಂತ ಶಾಶ್ವತಸ್ಥಿರಃ.

632) ಭೂಶಯಃ
ಭೂಮಿಯಲ್ಲಿ ವ್ಯಾಪಿಸಿದವ, ನಾನಾ ರೀತಿಯ ಅವತಾರದಿಂದ ಭೂಮಿಯಲ್ಲಿ ಬಂದು ನೆಲೆಸಿದ ಭಗವಂತ ಭೂಶಯಃ.
633) ಭೂಷಣಃ
ಎಲ್ಲಕ್ಕೂ ಚೆಲುವು ನೀಡುವ ಭಗವಂತ ಭೂಷಣಃ. ಅವನ ಅವತಾರ ಭೂಮಿಗೆ ಶೋಭೆ.
634) ಭೂತಿಃ
ಉನ್ನತಿಯ ಸ್ವರೂಪ(ಸಾಕಾರ ಮೂರ್ತಿ)
635) ವಿಶೋಕಃ
ಭಗವಂತನಿಗೆ ಎಂದೂ ದುಃಖವಿಲ್ಲ, ಅವತಾರದಲ್ಲಿ ಮಾತ್ರ ದುಃಖಪಟ್ಟವನಂತೆ ತೋರಿರುವುದನ್ನು ಕಾಣುತ್ತೇವೆ, ಆದರೆ ಇದು ಕೇವಲ ನಟನೆ ಅಷ್ಟೇ. ಮಾನವ ಅವತಾರದಲ್ಲಿದ್ದಾಗ ಮಾನವರಂತೆ ನಟಿಸಿ ಮಾನವನ ನಿಜವಾದ   ಜೀವನ ಶೈಲಿಯನ್ನು ತೋರಿಸಿಕೊಡುವುದಕ್ಕಾಗಿ ಅಂತಹ ಶೋಕವನ್ನು ತೋರ್ಪಡಿಸಿದ್ದಾನೆಯೇ ಹೊರತು, ಅವನಿಗೆ ನಿಜವಾದ ಶೋಕವಿಲ್ಲ.
636) ಶೋಕನಾಶನಃ
ದುಃಖವಿರದಂತೆ ಮಾಡುವವ.