ವಿಷ್ಣುರ್ವಷಟ್ಕಾರೋ ಭೂತಭವ್ಯಭವತ್ಪ್ರಭುಃ
2)ವಿಷ್ಣು
ಸಾಮಾನ್ಯವಾಗಿ ವಿಷ್ಣು ಅನ್ನುವ ನಾಮ ಒಬ್ಬ ವ್ಯಕ್ತಿಗೆ ಸಂಬಂದಿಸಿದ್ದು ಎಂದು ತಿಳಿಯುವವರೇ ಹೆಚ್ಚು. ಆದರೆ ಹಿಂದೂ-ಮುಸ್ಲಿಂ-ಕ್ರೈಸ್ತ ಧರ್ಮದಲ್ಲಿ ದೇವರು ಎನ್ನುವುದಕ್ಕೆ ಯಾವ ವಿಶ್ಲೇಷಣೆ ಇದೆಯೋ ಅದರ ಸಂಸ್ಕ್ರತ ಪದ ವಿಷ್ಣು !! ವಿಷ್ಣು ಅಂದರೆ ಸರ್ವಶಬ್ದ ವಾಚ್ಯನಾದ, ಸರ್ವಗತನಾದ ಭಗವಂತ (omnipotent and omnipresent) ಎಂದರ್ಥ. ಇದು ಜಾತಿ ಧರ್ಮವನ್ನು ಮೀರಿ ಎಲ್ಲರೂ ಒಪ್ಪುವಂತ ಅರ್ಥ. ಇನ್ನು ಈ ಪದವನ್ನು ಒಡೆದು ನೋಡಿದರೆ ವಿ-ಷ-ಣು ಆಗುತ್ತದೆ. ವಿಷಣು ಎಂದರೆ-ವಿಶಿಷ್ಟವಾದ ಜ್ಞಾನ(ವಿ) ಕೊಡುವವನು. ಒಳಗೆ ಇದ್ದು, ಸಂಸಾರ ವಿಷವನ್ನು ಪರಿಹರಿಸಿ, ನಮ್ಮ ಕ್ರಿಯೆಯನ್ನು ನಿಯಂತ್ರಿಸುವ ಪರಿಪೂರ್ಣವಾದ (ಷ) ಪ್ರಾಣಶಕ್ತಿ . ಹಾಗೂ ಎಲ್ಲರನ್ನು ರಕ್ಷಿಸುವ ಬಲ ಇರುವ (ಣ) ಸರ್ವ ಶಕ್ತ ಭಗವಂತ ವಿಷ್ಣು.
3) ವಷಟ್ಕಾರ
ಭಗವಂತನನ್ನು ವಷಟ್ಕಾರ ಎಂದು ಕರೆಯುತ್ತಾರೆ ಎನ್ನುವ ವಿಷಯ ಹೆಚ್ಚಿನವರಿಗೆ ತಿಳಿದಿಲ್ಲ. ಹಿಂದಿನ ಕಾಲದಲ್ಲಿ ವೈದಿಕ ಸಂಪ್ರದಾಯವಿರುವ ಪ್ರತಿಯೊಂದು ಮನೆಗಳಲ್ಲಿ ಅಗ್ನಿಹೋತ್ರ ಮಾಡುವುದು ನಿತ್ಯ ಕರ್ಮವಾಗಿತ್ತು. ಅಗ್ನಿಹೋತ್ರದಲ್ಲಿ ಭಗವಂತನಿಗೆ ಐದು ಮಂತ್ರಗಳಿಂದ (ಯಜ್ಞ ನಾಮಕ , ಯಜ್ಞ ಪುರುಷ , ಯಜ್ಞೇಶ್ವರ , ಯಜ್ಞ ಭಾವನ , ಯಜ್ಞ ಭೋಕ್ತ ) ಆಹುತಿಯನ್ನು ಕೊಡುತ್ತಿದ್ದರು. ಈ ಮಂತ್ರದಲ್ಲಿ ಬರುವ ಐದನೇ ಹೆಸರು ಭಗವಂತನ ವಷಟ್ಕಾರ ಅನ್ನುವ ಹೆಸರು.
ಏಕೆ ಅವನು ವಷಟ್ಕಾರ ? ಏಕೆಂದರೆ ತಾನು ಇಚ್ಚಿಸಿದಂತೆ ಜಗತ್ತನ್ನು ಸೃಷ್ಟಿ ಮಾಡಿ ಈ ಕೆಳಗಿನ ಆರು ಮುಖದಲ್ಲಿ ಜಗತ್ತಿನಾದ್ಯಂತ ತುಂಬಿರುವವನು ವಷಟ್ಕಾರ.
೧. ಜ್ಞಾನ- ಒಂದು ವಸ್ತುವನ್ನು ಸೃಷ್ಟಿ ಮಾಡುವ ಸರ್ವಜ್ಞ ಜ್ಞಾನ ಶಕ್ತಿ ಇರುವವನು.
೨. ಶಕ್ತಿ-ಕರ್ತೃತ್ವ ಶಕ್ತಿ ಉಳ್ಳವನು.
೩. ಬಲ-ರಕ್ಷಣೆ ಮಾಡುವ ತಾಕತ್ತು ( ಧಾರಣ ಶಕ್ತಿ ) ಇರುವವನು
೪. ಐಶ್ವರ್ಯ- ಒಡೆತನ
೫. ವೀರ್ಯ- ಪರಾಕ್ರಮ-ದುಷ್ಟ ಶಕ್ತಿಯನ್ನು ಸಂಹಾರ ಮಾಡುವ ಶಕ್ತಿ ಉಳ್ಳವನು
೬. ತೇಜಸ್ಸು - ಜಗತ್ತನ್ನು ಬೆಳಗಿಸುವ ಬೆಳಕು.
ಈ ಮೇಲಿನ ಆರು ಗುಣಗಳಿಂದ ಜಗತ್ತಿನ ಸೃಷ್ಟಿ-ಸ್ಥಿತಿ-ಸಂಹಾರಗಳಿಗೆ ಕಾರಣನಾದ ಪರಬ್ರಹ್ಮ -ವಷಟ್ಕಾರ.
4)ಭೂತಭವ್ಯಭವತ್ಪ್ರಭುಃ
ಭಗವಂತ ಎಲ್ಲಾ ಕಾಲದಲ್ಲೂ ಈ ಲೋಕವನ್ನು ರಕ್ಷಿಸುತ್ತಿರುತ್ತಾನೆ. ಹಿಂದೆ ಅನಂತವಾಗಿ ಇದ್ದದ್ದು (ಭೂತಕಾಲದಲ್ಲಿ) ಮುಂದೆ ಬರುವ ಅನಂತ ಭವಿಷ್ಯತ್ ಕಾಲ ಹಾಗು ವರ್ತಮಾನ ಕಾಲದಲ್ಲಿ ಈ ಲೋಕವನ್ನು ರಕ್ಷಿಸುವವನು. ಈ ನಾಮವನ್ನು ನಾವು ಒಡೆದು ನೋಡಿದಾಗ ಭೂತ+ಭವಿ+ಭವಂತಿ+ಪ್ರಭು ಎನ್ನುವ ನಾಲ್ಕು ಪದಗಳನ್ನು ನೋಡಬಹುದು. ಭೂತಿಯನ್ನು ಪಡೆದವರು ಭೂತಗಳು ಅಂದರೆ ಮುಕ್ತಿಗೆ ಯೋಗ್ಯರಾದ ಸಾತ್ವಿಕರು , ಭವಿಗಳು ಎಂದರೆ ಸಂಸಾರಿಗಳು ಅಥವಾ ರಾಜಸರು , ಭವಂತಿ ಎಂದರೆ ಜೀವನದಲ್ಲಿ ಎತ್ತರಕ್ಕೆ ಏರದ ತಾಮಸರು. ಆದ್ದರಿಂದ ಭೂತಭವ್ಯಭವತ್ಪ್ರಭುಃ ಎಂದರೆ ಸಾತ್ವಿಕರಿಗೂ , ರಾಜಸರಿಗೂ ಹಾಗು ತಾಮಸರಿಗೂ ಪ್ರಭು ಎಂದರ್ಥ.
ಈ ರೀತಿ ಹಿಂದೆ ಇದ್ದವನು, ಈಗಲೂ ಇರುವವನು, ಮುಂದೆ ಎಂದೆಂದೂ ಎಲ್ಲರ ಪ್ರಭುವಾಗಿ ಸರ್ವ ಜೀವ ರಕ್ಷಕನಾಗಿರುವ ಭಗವಂತ ಭೂತಭವ್ಯಭವತ್ಪ್ರಭುಃ
No comments:
Post a Comment