Wednesday, May 26, 2010

Vishnu Sahasranama Preface

ಶ್ರೀ ಗುರುಭ್ಯೋ ನಮಃ | ಹರಿಃ ಓಂ |
ಪೀಠಿಕೆ

ಮಹಾಭಾರತ ಯುದ್ಧ ಮುಗಿದಿದೆ. ಭೀಷ್ಮಾಚಾರ್ಯರು ಶರಶಯ್ಯದಲ್ಲಿದ್ದಾರೆ. ಇತ್ತ ಧರ್ಮರಾಯನ ಪಟ್ಟಾಭಿಷೇಕ ಶ್ರೀಕೃಷ್ಣ ಮತ್ತು  ವ್ಯಾಸರ ಸಮ್ಮುಖದಲ್ಲಿ ನಡೆದಿದೆ. ಒತ್ತಾಯದಲ್ಲಿ ಪಟ್ಟಾಭಿಷೇಕಕ್ಕೆ ಒಪ್ಪಿದ್ದ ಯುಧಿಷ್ಠಿರನ  ಮನಸ್ಸಿಗೆ `ಕಿಂಚಿತ್ತೂ ಸಮಾಧಾನವಿಲ್ಲ. ಎಲ್ಲಾ ವೀರರು, ಹಿರಿಯರು, ಲಕ್ಷ-ಲಕ್ಷ ಮಂದಿ ಸೈನಿಕರ ನಾಶದ ನಂತರ, ಸಿಂಹಾಸನವೇರಿದ ಆತನಿಗೆ ಪಾಪ ಪ್ರಜ್ಞೆ ಕಾಡುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿದ್ದ ಧರ್ಮರಾಯನನ್ನು ಶ್ರೀಕೃಷ್ಣ  ಭೀಷ್ಮಾಚಾರ್ಯರ ಬಳಿಗೆ ಕರೆತಂದು, ಆತನಿಗೆ ಧರ್ಮ ಪಾಠವನ್ನು ಬೋಧಿಸುವಂತೆ  ಕೇಳಿಕೊಳ್ಳುತ್ತಾನೆ. ಧರ್ಮದ ಪರ ಹೋರಾಡಿ ಗೆದ್ದ ಧರ್ಮರಾಯನನ್ನು ಕೊಂಡಾಡಿದ ಭೀಷ್ಮಾಚಾರ್ಯರು, "ಒಂದು ವೇಳೆ  ನೀನು  ಅನ್ಯಾಯದ  ವಿರುದ್ಧದ   ಯುದ್ಧದಲ್ಲಿ  ಹೋರಾಡದೆ ಇದ್ದಿದ್ದರೆನಿನ್ನನ್ನು ಹೇಡಿ ಎನ್ನುತ್ತಿದ್ದೆ" ಎನ್ನುತ್ತಾರೆ.  ಈ ಮಾತಿನಿಂದ  ಧರ್ಮರಾಯನಲ್ಲಿದ್ದ  ಪಾಪ ಪ್ರಜ್ಞೆ ಹೊರಟುಹೋಗಿ  , ತನಗೆ ಧರ್ಮೋಪದೇಶ  ಮಾಡಬೇಕೆಂದು  ಭೀಷ್ಮಾಚಾರ್ಯರಲ್ಲಿ ಕೇಳಿಕೊಳ್ಳುತ್ತಾನೆ. ಈ ರೀತಿ ಭೀಷ್ಮಾಚಾರ್ಯರು ಧರ್ಮರಾಯನಿಗೆ ಧರ್ಮೋಪದೇಶ ಮಾಡಿದ ಮಹಾಭಾರತದ ಅನುಶಾಸನ ಪರ್ವದ ಕೊನೆಯ ಅಪೂರ್ವ ಉಪದೇಶ ಈ ವಿಷ್ಣು  ಸಹಸ್ರನಾಮ.  ವ್ಯಾಸ ಮಹರ್ಷಿಗಳು ಈ ಸಾವಿರ ನಾಮವನ್ನು ಸ್ತೋತ್ರ ರೂಪದಲ್ಲಿ ನಮಗೆ ಕಾಣಿಕೆಯಾಗಿ ನೀಡಿದ್ದಾರೆ.

          ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಗುಣವಾಚಕ ನಾಮಗಳಾಗಿವೆ. ನಮಗೆ ಇರುವ ಹೆಸರು ಗುಣವಾಚಕವಲ್ಲ.  ಕರೆದಾಗ ಓಗೊಡಲು ಇಟ್ಟ ಹೆಸರು. ಆದರೆ ಭಗವಂತನ ಪ್ರತೀ ನಾಮ ಆತನ ಗುಣವನ್ನು ವರ್ಣಿಸುತ್ತದೆ. ನಮ್ಮಲ್ಲಿ ಅನೇಕ ಸಹಸ್ರನಾಮಗಳಿವೆ. ಬಹಳ ಪ್ರಸಿದ್ಧವಾದ ಲಲಿತ ಸಹಸ್ರನಾಮ, ಶಿವ ಸಹಸ್ರನಾಮ, ಗಣೇಶ ಸಹಸ್ರನಾಮ, ನರಸಿಂಹ ಸಹಸ್ರನಾಮ ಇತ್ಯಾದಿ. ಈ ಎಲ್ಲಾ ಸಹಸ್ರನಾಮಗಳಿಗಿಂತ ಹೆಚ್ಚು ವ್ಯಾಖ್ಯಾನವಿರುವ, ಹೆಚ್ಚು ಮಂದಿ ವಿದ್ವಾಂಸರು ಭಾಷ್ಯ ಬರೆದಿರುವ, ಮಹಾಭಾರತದ ಭಾಗವಾಗಿರುವ,  ಸುಪ್ರಸಿದ್ಧ ಸಹಸ್ರನಾಮ ವಿಷ್ಣು ಸಹಸ್ರನಾಮ. ಪದ್ಮ ಪುರಾಣದಲ್ಲಿ ಒಂದು ವಿಷ್ಣು ಸಹಸ್ರನಾಮವನ್ನು ಕಾಣುತ್ತೇವೆ. ಆದರೆ ಅದು ಅಷ್ಟೊಂದು ಪ್ರಚಲಿತದಲ್ಲಿಲ್ಲ.

ವಿಷ್ಣು ಸಹಸ್ರನಾಮದಲ್ಲಿ ಕೆಲವೊಂದು  ನಾಮಗಳು ಒಂದಕ್ಕಿಂತ ಹೆಚ್ಚು ಭಾರಿ ಪುನರಾವರ್ತನೆ ಆಗಿರುವುದನ್ನು ನಾವು ಕಾಣುತ್ತೇವೆ. ವಿಷ್ಣು ಸಹಸ್ರನಾಮದಲ್ಲಿ  ಬರುವ ಒಂದೊಂದು ನಾಮಕ್ಕೆ ನೂರು ಅರ್ಥವಿದೆಯಂತೆ. ಒಂದು ವೇಳೆ ಒಂದು ನಾಮ ಎರಡು ಬಾರಿ ಬಂದರೆ ಆ ನಾಮಕ್ಕೆ ಇನ್ನೂರು ಅರ್ಥಗಳಿವೆ ಎಂದು ತಿಳಿಯಬೇಕಾಗುತ್ತದೆ. ಆದರೆ ಇಷ್ಟೊಂದು ಅರ್ಥವನ್ನು ಕಂಡುಕೊಳ್ಳುವುದು ಸಾಮಾನ್ಯರಿಗೆ ಅಸಾಧ್ಯ.

          ಸಹಸ್ರನಾಮದ ರಾಜ ಮಹಾಭಾರತದ ಅನುಶಾಸನ ಪರ್ವದ ವಿಷ್ಣು ಸಹಸ್ರನಾಮ. ಪ್ರಾಚೀನರು ಹೇಳುವಂತೆ, ಅಧ್ಯಾತ್ಮ ಗ್ರಂಥಗಳಲ್ಲಿ ಶ್ರೇಷ್ಠವಾದದ್ದು ವೇದವ್ಯಾಸರು ರಚಿಸಿದ "ಭಾರತ" ಏಕೆಂದರೆ ಇದು ಭಗವಂತನ ರಚನೆ.

ನಿರ್ಣಯಃ ಸರ್ವಶಾಸ್ತ್ರಾಣಾಂ ಭಾರತಂ ಪರಿಚಕ್ಷತೇ |
   
ಭಾರತಂ ಸರ್ವವೇದಾಶ್ಚ ತುಲಾಮಾರೋಪಿತಾಃ ಪುರಾ ||

ದೇವೈರ್ಬ್ರಹ್ಮಾದಿಭಿಃ ಸರ್ವೈಃ ಋಷಿಭಿಶ್ಚ ಸಮನ್ವಿತೈಃ |
ವ್ಯಾಸಸ್ಯೈವಾಜ್ಞಯಾ ತತ್ರ ತ್ವತ್ಯರಿಚ್ಯತ ಭಾರತಮ್ ||

ಅಂದರೆ ಸರ್ವ ಶಾಸ್ತ್ರಾರ್ಥಗಳಿಗು  ಮಹಾಭಾರತವೇ ನಿರ್ಣಾಯಕ. ಹಿಂದೆ ಮಹಾಭಾರತ ಮತ್ತು ಸಕಲ ವೇದಗಳು, ಶ್ರೀವೇದವ್ಯಾಸರ ಆದೇಶದಂತೆಯೇ, ಬ್ರಹ್ಮಾದಿ ದೇವತೆಗಳಿಂದಲೂ, ಸಕಲ ಋಷಿಗಳಿಂದಲೂ, ಒಂದು ತಕ್ಕಡಿಯಲ್ಲಿ ಇರಿಸಿ ತೂಗಲ್ಪಟ್ಟವು; ಆಗ ಮಹಾಭಾರತವು ವೇದಾದಿ ಇತರ ಸಕಲ ಶಾಸ್ತ್ರಗಳನ್ನು ಮೀರಿಸಿತ್ತು !! ಇಂತಹ ಮಹಾಭಾರತದ ಸಾರ- 700 ಶ್ಲೋಕಗಳನ್ನೊಳಗೊಂಡ ಭಗವದ್ಗೀತೆ ಮತ್ತು ಸಾವಿರ ನಾಮಗಳನ್ನೊಳಗೊಂಡ ವಿಷ್ಣುಸಹಸ್ರನಾಮ.

           ಮಹಾಭಾರತ ಮಹತ್ತಾದ ಅರ್ಥದ ಭಾರವಿರುವ ಗ್ರಂಥ. ಅದು ಮನೋವೈಜ್ಞಾನಿಕವಾಗಿ ನಮ್ಮ ಮನಸ್ಸಿಗೆ ತರಬೇತಿ ಕೊಡುವ ಗ್ರಂಥ. ಪ್ರತಿಯೊಬ್ಬ ಮನುಷ್ಯನ ಒಳಗೆ ನಡೆಯುವ ಜೀವನ್ಮೌಲ್ಯಗಳನ್ನು ಹೇಳುವ ಗ್ರಂಥ. ಇದು ನ್ಯಾಯ- ಅನ್ಯಾಯ, ಧರ್ಮ-ಅಧರ್ಮ, ಒಳ್ಳೆಯತನ-ಕೆಟ್ಟತನಗಳ ನಡುವೆ ನಡೆಯುವ ಹೋರಾಟವನ್ನು ತಿಳಿಸುವ ಗ್ರಂಥ. ಮಹಾಭಾರತದಲ್ಲಿ ಬರುವ ಪಾಂಡವರ  ಏಳು  ಪಾತ್ರಗಳು  ಒಬ್ಬ ಮನುಷ್ಯನಲ್ಲಿರಬೇಕಾದ ಹದಿನೆಂಟು ಗುಣಗಳನ್ನು ಪ್ರತಿನಿಧಿಸುತ್ತವೆ.

೧. ಧರ್ಮರಾಜ - ಧರ್ಮ
೨. ಭೀಮಸೇನ - ಭಕ್ತಿ, ಜ್ಞಾನ, ವೈರಾಗ್ಯ, ಪ್ರಜ್ಞಾ, ಮೇಧಾ, ಧೃತಿ, ಸ್ಥಿತಿ, ಯೋಗ, ಪ್ರಾಣ ಮತ್ತು ಬಲ.
೩. ಅರ್ಜುನ - ಶ್ರವಣ, ಮನನ ಮತ್ತು ನಿದಿಧ್ಯಾಸನ
೪.೫. ನಕುಲ-ಸಹದೇವ - ಶೀಲ ಮತ್ತು ವಿನಯ
೬. ದ್ರೌಪದಿ - ವೇದವಿದ್ಯೆ
೭. ಶ್ರೀಕೃಷ್ಣ ವೇದವೇದ್ಯ

ಹೀಗೆ ಮಹಾಭಾರತದ ಪ್ರತಿಯೊಂದು ಶ್ಲೋಕ, ಪ್ರತಿಯೊಂದು ಪದ, ಪ್ರತಿಯೊಂದು ಅಕ್ಷರ  ಎಲ್ಲಕ್ಕಿಂತ ಎತ್ತರದಲ್ಲಿರುವ ಹದಿನೆಂಟನೆಯವನಾದ ಭಗವಂತನನ್ನು ಹೇಳುತ್ತದೆ. ಭಾರತದಲ್ಲಿ  ಒಂದು ಲಕ್ಷ ಶ್ಲೋಕಗಳಿವೆ. ಅಂದರೆ ಒಟ್ಟಿಗೆ 32 ಲಕ್ಷ ಅಕ್ಷರಗಳಿವೆ. ಪ್ರತಿಯೊಂದು ಅಕ್ಷರ ಭಗವಂತನ ನಾಮವಾಗಿದೆ. ಈ ರೀತಿ ಭಗವಂತನ ಗುಣಗಾನ ಮಾಡುವ ಪದಪುಂಜ ಮಹಾಭಾರತ.  ಸಾಮಾನ್ಯ ಜನರಿಗೆ ಈ ಒಂದು ಲಕ್ಷ ಶ್ಲೋಕವನ್ನು ತಿಳಿಯಲು ಕಷ್ಟವಾಗಬಹುದು ಎಂದು, ಮಹಾಭಾರತದಿಂದ   ಅಮೂಲ್ಯವಾದ  ಎರಡು  ರಸವನ್ನು  ವೇದವ್ಯಾಸರು ನಮ್ಮ ಮುಂದೆ ಇರಿಸಿದ್ದಾರೆ, ಅದೇ ಭಗವದ್ಗೀತೆ ಮತ್ತು ವಿಷ್ಣುಸಹಸ್ರನಾಮ. 

          ವೇದಗಳಿಗೆ ಕನಿಷ್ಠ 3 ಅರ್ಥಗಳಿವೆ, ಮಹಾಭಾರತ ಶ್ಲೋಕಗಳಿಗೆ ಕನಿಷ್ಠ 10 ಅರ್ಥಗಳಿದ್ದರೆ, ವಿಷ್ಣು ಸಹಸ್ರನಾಮದ ಪ್ರತೀ ನಾಮಕ್ಕೆ ಕನಿಷ್ಠ ನೂರು ಅರ್ಥಗಳಿವೆ !! ಈ ಕಾರಣಕ್ಕಾಗಿಯೇ  ಪ್ರಾಚೀನರು  ಭಗವದ್ಗೀತೆ  ಮತ್ತು ವಿಷ್ಣುಸಹಸ್ರನಾಮವನ್ನು  ಅತ್ಯಮೂಲ್ಯ ಗ್ರಂಥವಾಗಿ  ಪರಿಗಣಿಸಿದ್ದಾರೆ.  ವೇದಗಳ ಸಾರವಾದ ಬ್ರಹತೀಸಹಸ್ರದಲ್ಲಿ ಒಂದು ಸಾವಿರ ಮಂತ್ರಗಳಿವೆ, ಹಾಗೂ ಈ ಒಂದು ಸಾವಿರ ಮಂತ್ರದಲ್ಲಿ 72 ,000 ಅಕ್ಷರಗಳಿವೆ. ಈ ಒಂದು ಸಾವಿರ ಮಂತ್ರಗಳ ಸಾರವನ್ನು ಒಂದು ಸಾವಿರ ನಾಮಗಳ ರೂಪದಲ್ಲಿ ವೇದವ್ಯಾಸರು ನಮಗೆ ಕರುಣಿಸಿದ್ದಾರೆ.

        ಮನುಷ್ಯನ ಆಯಸ್ಸು ನೂರು ವರ್ಷ. ಈ ನೂರು ವರ್ಷಗಳಲ್ಲಿ 36 ಸಾವಿರ ಹಗಲು ಮತ್ತು 36 ಸಾವಿರ ರಾತ್ರಿಗಳಿವೆ.   ಮನುಷ್ಯ ದೇಹ 72 ಸಾವಿರ ನಾಡಿಗಳಿಂದಾಗಿದೆ. ಈ ನಾಡಿಗಳಲ್ಲಿ 36 ಸಾವಿರ ನಾಡಿಗಳು ಎಡ ಭಾಗದಲ್ಲೂ ಮತ್ತು 36 ಸಾವಿರ ನಾಡಿಗಳು ನಮ್ಮಬಲಭಾಗಲ್ಲೂ ಇರುತ್ತವೆ. ಈ ನಾಡಿಗಳಲ್ಲಿ ರಕ್ತ ಸಂಚಾರ ಸರಿಯಾಗಿ ಆದರೆ ಮನುಷ್ಯನಿಗೆ ಯಾವುದೇ ರೋಗ  ಬರಲಾರದು.  ಗಾಯತ್ರಿ ಜಪವನ್ನು ಸಾಮಾನ್ಯವಾಗಿ ಒಂದು ಸಾವಿರದಂತೆ ದಿನಕ್ಕೆ ಮೂರು ಬಾರಿ ಮಾಡುತ್ತೇವೆ, ಏಕೆಂದರೆ ಗಾಯತ್ರಿಯಲ್ಲಿ 24  ಅಕ್ಷರಗಳಿವೆ. ಒಮ್ಮೆಗೆ ಒಂದು ಸಾವಿರ ಜಪ ಅಂದರೆ 24 ಸಾವಿರ ಅಕ್ಷರ, ದಿನಕ್ಕೆ ಮೂರು ಬಾರಿ ಅಂದರೆ 72 ಸಾವಿರ ಅಕ್ಷರ!  ಇದಕ್ಕಿಂತ ಹೆಚ್ಚು ಬಾರಿ ಪಾರಾಯಣ ಮಾಡಿದರೆ ಹುಚ್ಚು ಹಿಡಿಯುವ ಸಾಧ್ಯತೆ ಇದೆ !

ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ನಾವು  ಬ್ರಹತೀಸಹಸ್ರದ  72 ಸಾವಿರ ಅಕ್ಷರಗಳನ್ನು ಜಪಿಸಿದಂತಾಗುತ್ತದೆ. ಇದರಿಂದ ನಮ್ಮ 72 ಸಾವಿರ ನಾಡಿಗಳಲ್ಲಿ ಪೂರ್ಣಪ್ರಮಾಣದ ರಕ್ತ ಸಂಚಾರವಾಗುತ್ತದೆ. ಆದ್ದರಿಂದ ವಿಷ್ಣುಸಹಸ್ರನಾಮ ಭವರೋಗ ಪರಿಹಾರಕ. ಆದರೆ ಅರ್ಥ ತಿಳಿದು ಹೃದಯತುಂಬಿ ಭಕ್ತಿಯಿಂದ ಪಾರಾಯಣ ಮಾಡುವುದು ಮುಖ್ಯ. 

      ಇಂತಹ ಅಮೂಲ್ಯವಾದ ಭಗವಂತನ ನಾಮವನ್ನು ಯಾರು ಯಾವಾಗ ಹೇಗೆ ಪಠಿಸಬಹುದು ?

ವಿಷ್ಣು ಸಹಸ್ರನಾಮ ವೇದವ್ಯಾಸರು ಮನುಷ್ಯನಿಗೆ ಕೊಟ್ಟ ಅಮೂಲ್ಯ ಕಾಣಿಕೆ. ಇದನ್ನು ಗಂಡು-ಹೆಣ್ಣು , ಜಾತಿ-ಮತದ ಭೇದವಿಲ್ಲದೆ ಎಲ್ಲರೂ ಎಲ್ಲಾ ಕಾಲದಲ್ಲೂ ಪಠಿಸಬಹುದು. ಬೆಳಿಗ್ಗೆ ಸ್ನಾನದ ಮೊದಲು, ಸ್ನಾನದ ನಂತರ, ಸಂಜೆ, ರಾತ್ರಿ ಯಾವಾಗ ಬೇಕಾದರೂ ಪಠಿಸಬಹುದು. ಅಲ್ಪಪ್ರಾಣ-ಮಹಾಪ್ರಾಣವನ್ನು ಸ್ಪಷ್ಟವಾಗಿಗೌರವಪೂರ್ವಕವಾಗಿ, ನಂಬಿಕೆಯಿಂದ, ಪರಿಶುದ್ಧ  ಮನಸ್ಸಿನಿಂದ  ಪಠಿಸುವುದು ಅತ್ಯಗತ್ಯ. ವಿಷ್ಣು ಸಹಸ್ರನಾಮದಲ್ಲಿ ನಮಗೆ ತಿಳಿಯದೆ ಆಗುವ ಉಚ್ಛಾರ ದೋಷಕ್ಕೆ ಕ್ಷಮೆ ಇದೆ. ಸರ್ವಶಬ್ದ ವಾಚ್ಯನಾದ ಭಗವಂತ ನಾವು ತಿಳಿಯದೆ ಮಾಡಿದ ತಪ್ಪನ್ನು ಕ್ಷಮಿಸುತ್ತಾನೆ.  

ಬನ್ನಿ...ಇಂತಹ ಅಮೂಲ್ಯ ಕೃತಿಯ ಅರ್ಥ ವಿಶ್ಲೇಷಣೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ತೆರೆದು ನೋಡೋಣ.

2 comments:

  1. http://en.wikipedia.org/wiki/Eri-Katha_Ramar_Temple

    ReplyDelete
  2. ದಯವಿಟ್ಟು ವಿಷ್ಣು ಓರ್ ಕೃಷ್ಣ ಪೂಜೆಯನ್ನು shyashtroktavaagi ಮಾಡುವ ವಿಧಾನ ಅನ್ನು ತಿಳಿಸಿ..

    ReplyDelete