Wednesday, June 30, 2010

Vishnu Sahasranama 120-122


ಶಾಶ್ವತಃ ಸ್ಥಾಣುರ್ವರಾರೋಹೋ ಮಹಾತಪಾಃ

120)ಶಾಶ್ವತಃ ಸ್ಥಾಣು
ಶಾಶ್ವತ ಎಂದರೆ ಎಂದೆಂದೂ ಬದಲಾವಣೆ ಹೊಂದದೆ, ಒಂದೇ ರೀತಿಯಾಗಿ ಇರುವವನು ಎಂದರ್ಥ. ಸ್ಥಾಣು ಎಂದರೆ ಸ್ಥಿರ.
ನಮಗೆ ಬಾಲ್ಯ, ಯವ್ವನ, ಪ್ರೌಢ ಹಾಗೂ ವೃದ್ದಾಪ್ಯ, ಹೀಗೆ ಒಂದು ರೂಪದಲ್ಲಿ ಅನೇಕ ಬದಲಾವಣೆಗಳಿವೆ. ಆದರೆ ಭಗವಂತ ಬಿಂಬ ರೂಪನಾಗಿ ಎಲ್ಲರ ಒಳಗೂ-ಹೊರಗೂ ತುಂಬಿದ್ದರೂ ಸಹ, ಆತನಿಗೆ ಯಾವುದೇ ತರಹದ ವಿಕಾರವಿಲ್ಲ. ಅವನು ಶಾಶ್ವತ ಮತ್ತು ಸ್ಥಿರ(ಸ್ಥಾಣು).
121)ವರಾರೋಹೋ
ಯಾರು ತನ್ನ ಸಾಧನೆ ಮೂಲಕ ಮೋಕ್ಷಕ್ಕೆ ಅರ್ಹರಾಗುತ್ತಾರೋ , ಅಂತವರನ್ನು ಮೇಲಕ್ಕೆತ್ತುವವ ವರಾರೋಹ.
ವರಂ-ಆರೋಹತಿ, ಅಂದರೆ ಯಾರು ಯಾವ ಪದವಿಗೆ ಅರ್ಹರೋ, ಅಂತವರನ್ನು ಆ ಪದವಿಗೇರಿಸುವವ. ಬ್ರಹ್ಮನಿಗೆ ಸತ್ಯಲೋಕದ ಪದವಿ, ಇಂದ್ರನಿಗೆ ದೇವ ಲೋಕದ ಪದವಿಯನ್ನು ಕರುಣಿಸಿ, ಸ್ವತಃ ತಾನು ಲಕ್ಷ್ಮಿ ಸಮೇತನಾಗಿ ನಿತ್ಯಲೋಕದ ಅದಿಪತಿ ಎನಿಸಿರುವ ಭಗವಂತ ವರಾರೋಹ.
122)ಮಹಾತಪಾಃ
ಯಾವುದೇ ವಿಷಯವನ್ನು ಆಳವಾಗಿ ಚಿಂತಿಸಿ ತಿಳಿಯುವುದು ತಪಸ್ಸು. ಪ್ರತಿಯೊಬ್ಬರ ಆವಿಷ್ಕಾರ ಅವರ ತಪಸ್ಸಿನ ಫಲ. ತಪಸ್ಸಿಗೆ ವೇಷ ಮುಖ್ಯವಲ್ಲ, ಆದರೆ ಆಳವಾದ ಚಿಂತನೆ ಅತ್ಯಗತ್ಯ. ಕಾಮ-ಕ್ರೋದಗಳನ್ನು ಗೆದ್ದು, ಪ್ರಶಾಂತಚಿತ್ತದಿಂದ, ವಿಷಯವನ್ನು ಆಳವಾದ ಚಿಂತನೆ ಮೂಲಕ ತಿಳಿದುಕೊಳ್ಳುವುದು ನಿಜವಾದ ತಪಸ್ಸು. ಸಾಮಾನ್ಯವಾಗಿ ಕಾಮವನ್ನು ಗೆಲ್ಲುವುದು ಸುಲಭ. ಆದರೆ ಕ್ರೋದವನ್ನು ಗೆಲ್ಲುವುದು ತುಂಬಾ ಕಷ್ಟ. ನಮಗೆ ಕೋಪ ಬರಲು ಕಾರಣ ನಮ್ಮಲ್ಲಿ ಹುದುಗಿರುವ ಅಪೇಕ್ಷೆ, ಕಳೆದು ಕೊಳ್ಳುತ್ತೇನೆ ಎನ್ನುವ ಭಯ. ಮಹಾನ್ ಋಷಿ ಮುನಿಗಳು ಕೋಪವನ್ನು ಗೆಲ್ಲಲಿಲ್ಲ. ಉದಾಹರಣೆಗೆ ವಿಶ್ವಾಮಿತ್ರ . ಮೇನಕೆಯ ಪ್ರೇಮ ಪಾಶದಿಂದ ಹೊರಬಂದ ವಿಶ್ವಾಮಿತ್ರ ಪುನಃ ತಪಸ್ಸು ಮಾಡುತ್ತಾನೆ. ಆಗ ರಂಬೆ ಆತನ ತಪಸ್ಸನ್ನು ಕೆಡಿಸಲು ಬರುತ್ತಾಳೆ. ಸಿಟ್ಟಿಗೆದ್ದ ವಿಶ್ವಾಮಿತ್ರ "ನೀನು ಕಲ್ಲಾಗು" ಎಂದು ಆಕೆಗೆ ಶಾಪ ಕೊಡುತ್ತಾನೆ.
ಭಗವಂತ ನಿಜವಾದ ತಪಸ್ಸು ಹೇಗಿರಬೇಕು ಎನ್ನುವುದನ್ನು ಸ್ವತಃ ಲೋಕಕ್ಕೆ ತೋರಿಸಿರುವ ಘಟನೆ ನಮಗೆ ತಿಳಿದಿದೆ. ಧರ್ಮ ಮತ್ತು ಮೂರ್ತಿಯ ಮಕ್ಕಳಾದ (ನಾಲ್ಕು ಮಕ್ಕಳು: ಹರಿ, ಕೃಷ್ಣ, ನರ ಮತ್ತು ನಾರಾಯಣ) ನರ-ನಾರಾಯಣರ ದೀರ್ಘ ತಪಸ್ಸು, ಎಲ್ಲಾ ಋಷಿ-ಮುನಿಗಳಿಗೆ ಒಂದು ಅಮೂಲ್ಯ ದೃಷ್ಟಾಂತ. ನರ-ನಾರಾಯಣರ ತಪಸ್ಸನ್ನು ಕೆಡಿಸಲು ಬಂದ ತಿಲೋತ್ತಮೆಯನ್ನು, ಆದರದಿಂದ ಸತ್ಕರಿಸಿದ ನಾರಾಯಣ, ತನ್ನ ತೊಡೆಯಿಂದ ಉರ್ವಶಿಯನ್ನು ಸೃಷ್ಟಿ ಮಾಡಿ, ಇಂದ್ರನಿಗೆ ಕಾಣಿಕೆಯಾಗಿ ಕಳುಹಿಸುತ್ತಾನೆ. ಕಾಮ ಮತ್ತು ಕ್ರೋದವನ್ನು ಸಂಪೂರ್ಣ ಗೆದ್ದು, ತಪಸ್ಸಿನ ಮೂಲಕ ನಾವು ಕಂಡುಕೊಳ್ಳುವ ಪರಬ್ರಹ್ಮ ಶಕ್ತಿಯಾದ ಭಗವಂತ ಮಹಾತಪಾಃ .
ತಪಸ್ಸಿನ ಅಭಿಮಾನಿ ದೇವತೆ ಶಿವ(ಹರ). ಹರಿ-ಹರ ಶಕ್ತಿಗಳು ಹಾಲಿನಲ್ಲಿ ಬೆಣ್ಣೆ ಇರುವಂತೆ. ಶಿವ ಶಕ್ತಿ ಭಗವಂತನ ಹೃದಯದಿಂದ ಆವಿಷ್ಕಾರ ವಾಗಿರುವುದು. ಇಂತಹ ಭಗವಂತನನ್ನು ಮಹಾತಪಾ ಎನ್ನುತ್ತೇವೆ.

Tuesday, June 29, 2010

Vishnu Sahasranama 119


ಅಮೃತಃ

119 ) ಅಮೃತಃ
ಅಮೃತಃ ಅಂದಾಗ ನಮಗೆ ತಕ್ಷಣ ಹೊಳೆಯುವುದು 'ಎಂದೆಂದೂ ಸಾವಿಲ್ಲದವರು' ಎನ್ನುವ ಅರ್ಥ. ಸಾಮಾನ್ಯವಾಗಿ ಸಂಸ್ಕೃತದಲ್ಲಿ ಮನುಷ್ಯರನ್ನು ಮರ್ತ್ಯರು ಎಂದು ಕರೆಯುತ್ತಾರೆ. ಅಂದರೆ ಒಂದು ದಿನ ಸಾಯುವವನು ಎಂದರ್ಥ !!! ಈ ಸಾವಿನಲ್ಲಿ ನಾಲ್ಕು ವಿಧ.
೧. ಸ್ವರೂಪ ನಾಶ. ಅಂದರೆ ಮಣ್ಣಿನಿಂದ ಮಾಡಿದ ಮಡಿಕೆ ಕೈಜಾರಿ ಬಿದ್ದಾಗ ಅದರ ಸ್ವರೂಪವಾದ ಆಕಾರ ನಾಶವಾಗುತ್ತದೆ.
೨. ದೇಹ ನಾಶ. ಅಂದರೆ ನಮ್ಮ ದೇಹದಿಂದ ಪ್ರಾಣ ಪಕ್ಷಿ ಹಾರಿ ಹೋದಮೇಲೆ ನಮ್ಮ ದೇಹ ನಾಶವಾಗುತ್ತದೆ.
೩. ದುಃಖ ಪ್ರಾಪ್ತಿ ಕೂಡ ಒಂದು ರೀತಿಯ ಸಾವು.
೪. ಅಪೂರ್ಣತೆ (Imperfection is death)
ಆದರೆ ಭಗವಂತ ಈ ನಾಲ್ಕು ರೀತಿಯ ನಾಶವಿಲ್ಲದ ನಿತ್ಯ ಸ್ವರೂಪ. ಆದ್ದರಿಂದ ಆತ ಅಮೃತ.ಉಪನಿಷತ್ತುಗಳು ಹೇಳುವಂತೆ ಭಗವಂತನಿಗೆ ಮೂರು ಸ್ಥಾನಗಳಿವೆ. ಅಮೃತ, ಕ್ಷೇಮ ಹಾಗು ಅಭಯ. ಇಂತಹ ಅಮೃತ ಸ್ಥಾನದಲ್ಲಿರುವ ಭಗವಂತ ಅಮೃತಃ. ಇನ್ನು ದೇವತೆಗಳ ಆಯಸ್ಸು ಅತೀ ದೀರ್ಘ, ಹಾಗು ವಾಯುದೇವರ ಮತ್ತು ಚತುರ್ಮುಖನ ಆಯಸ್ಸು ಕೂಡ ಮತ್ತೂ ದೀರ್ಘ. ಈ ರೀತಿ ಪ್ರಾಣದೇವರಿಗೆ, ಚತುರ್ಮುಖನಿಗೆ, ದೇವತೆಗಳಿಗೆ, ಮುಕ್ತಿ ಪಡೆದ ಜೀವರಿಗೆ, ಅಮರತ್ವವನ್ನು ಕರುಣಿಸಿದ, ಲಕ್ಷ್ಮೀ ಪತಿ ಭಗವಂತ ಅಮೃತಃ.

Monday, June 28, 2010

Vishnu Sahasranama 114-118


ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ

114) ರುದ್ರ
ರುದ್ರ ಎಂದರೆ ಮೇಲ್ನೋಟಕ್ಕೆ ದುಃಖ ಕೊಡುವವನು, ಸುಡುವವನು, ಎನ್ನುವ ಅರ್ಥವನ್ನು ಕೊಡುತ್ತದೆ.
ವೇದಗಳಲ್ಲಿರುವ ರುದ್ರಸೂಕ್ತಗಳಿಗೆ ಸಾಯಣರು ಅರ್ಥ ಬರೆಯುವಾಗ, ರುದ್ರ ಎಂದರೆ ಅಗ್ನಿ ಎಂದು ಬರೆಯುತ್ತಾರೆ. ಮುಟ್ಟಿದರೆ ಕಣ್ಣೀರು ಬರುವುದು ಪಂಚಭೂತಗಳಲ್ಲಿ ಅಗ್ನಿಯಿಂದ ಮಾತ್ರ. ಆದ್ದರಿಂದ ಅಗ್ನಿ ಕೂಡ ರುದ್ರ. ಆದರೆ ಭಗವಂತ ಏಕೆ ದುಃಖ ಕೊಡುತ್ತಾನೆ? ಭಗವಂತ ದುಃಖ ಕೊಡುವುದು ಪಾಪಿಗಳಿಗೆ ಮಾತ್ರ. ದುಃಖ ಕೊಡುವ ಉದ್ದೇಶ ಶಿಕ್ಷಣ.
ಇನ್ನು ಈ ಪದವನ್ನು ಒಡೆದು ನೋಡಿದಾಗ ರುಕ್+ದ್ರಾ, ಇಲ್ಲಿ 'ರುಕ್' ಅಂದರೆ ಭವರೋಗ, ಹಾಗು 'ದ್ರಾ' ಅಂದರೆ ನಾಶಕ ಅಥವಾ ಪಾರುಮಾಡುವವನು ಎಂದರ್ಥ . ಆದ್ದರಿಂದ ರುದ್ರ ಅಂದರೆ ಭವರೋಗ ನಾಶಕ. ಈ ನಾಮವನ್ನು ನಾವು ರುತ್+ದ್ರಾ ಎಂದೂ ಒಡೆದು ಅರ್ಥೈಸಬಹುದು. ಇಲ್ಲಿ ರುತ್ ಅಂದರೆ ದುಃಖ. ಆದ್ದರಿಂದ ರುದ್ರ ಅಂದರ ದುಃಖನಾಶಕ.
115) ಬಹುಶಿರಾ
'ಸಹಸ್ರ ಶೀರ್ಷಾ ಪುರುಷಃ ಸಹಸ್ರ ಬಾಹೂ ಸಹಸ್ರ ಪಾದ್' ಎಂದು ಭಗವಂತನನ್ನು ವರ್ಣಿಸಿದ್ದಾರೆ. ಇಲ್ಲಿ ಬಹುಶಿರ ಅಂದರೆ ಸಹಸ್ರ-ಸಹಸ್ರ ಶಿರಸ್ಸನ್ನು ಹೊಂದಿರುವವನು ಎಂದರ್ಥ. ಈ ಹಿಂದೆ ಹೇಳಿದಂತೆ ಭಗವಂತ ಬಿಂಬ ರೂಪಿಯಾಗಿ ಪ್ರತಿಯೊಂದೂ ಜೀವರಲ್ಲಿ ತುಂಬಿದ್ದಾನೆ. ಆದ್ದರಿಂದ ಆತ ಬಹುಶಿರಾ.
ತಲೆಯನ್ನು ಐದು ಶ್ರೀಗಳು (ಚಕ್ಷು-ಕಣ್ಣು, ಶ್ರೋತ್ರ-ಕಿವಿ, ಮನಃ-ಮನಸ್ಸು , ವಾಕ್-ಮಾತು, ಪ್ರಾಣ-ಉಸಿರು) ಆಶ್ರಿಸಿರುವುದರಿಂದ ಅದನ್ನು ಶಿರಸ್ಸು ಎನ್ನುತ್ತಾರೆ. ಭಗವಂತ ಸರ್ವಾಶ್ರಾಯದಾತ ಆದ್ದರಿಂದ ಆತ ಬಹುಶಿರಾ.
116) ಬಭ್ರು:
ಈ ನಾಮ ಭಗವಂತನ ಚಿದಾನಂದ ಸ್ವರೂಪವನ್ನು ಹೇಳುತ್ತದೆ. ಭಗವಂತ ಉದಿಸುವ ಸೂರ್ಯನಂತೆ ನಸುಗೆಂಪು ಬಣ್ಣದವನು, ಆತ ನೀಲಮೇಘಶ್ಯಾಮ. ಸಾಮಾನ್ಯವಾಗಿ ದೇವಸ್ತಾನಗಳಲ್ಲಿ ಮೂರ್ತಿ ಕಪ್ಪಗಿದ್ದು(ನೀಲ), ಪ್ರಭಾವಳಿ ಚಿನ್ನದಿಂದ ಮಾಡಿರುತ್ತಾರೆ. ಇಲ್ಲಿ ನೀಲ ಅಘಾದತೆಯನ್ನು, ಅನಂತತೆಯನ್ನು ಸೂಚಿಸುತ್ತದೆ. ನಸುಗೆಂಪು ಜ್ಞಾನಾನಂದದ ಸಂಕೇತ. ಬಭ್ರು ಎನ್ನುವುದು ಬಲಸ್ವರೂಪ(ಬ)-ಪೂರ್ಣಕಾಮ(ಭ್ರು-ಸರ್ವ ಕಾಮನೆಗಳನ್ನು ಈಡೇರಿಸುವವನು), ಎನ್ನುವ ಅರ್ಥವನ್ನೂ ಕೊಡುತ್ತದೆ. ಇಂತಹ ಆಘಾದ, ಅನಂತ, ಜ್ಞಾನಾನಂದಮಯ, ಬಲಸ್ವರೂಪ ಮತ್ತು ಪೂರ್ಣಕಾಮನಾದ ಭಗವಂತ ಬಭ್ರು.
117) ವಿಶ್ವಯೋನಿಃ
ಸಂಸ್ಕ್ರತದಲ್ಲಿ ಯೋನಿ ಅಂದರೆ ಕಾರಣ ಕರ್ತ. ಭಗವಂತ ಇಡೀ ವಿಶ್ವಕ್ಕೆ ಕಾರಣ ಪುರುಷ. ಆದ್ದರಿಂದ ಆತ ವಿಶ್ವಯೋನಿ.
118) ಶುಚಿಶ್ರವಾಃ
ಶ್ರವಸ್ಸು ಅಂದರೆ ಕೀರ್ತಿ. ಭಗವಂತ ಪುಣ್ಯಕೀರ್ತಿ. ಪವಿತ್ರವಾದ ಕೀರ್ತಿಯುಳ್ಳ ಭಗವಂತನನ್ನು ಎಲ್ಲರೂ ಕೀರ್ತನೆ ಮಾಡುತ್ತಾರೆ. ಕೀರ್ತಿ ಅಂದರೆ ಮಾತನಾಡಿಕೊಳ್ಳುವುದು.ಭಗವಂತನ ಗುಣ ಕೀರ್ತನ ಶ್ರವಣದಿಂದ ನಾವು ಪವಿತ್ರವಾಗುತ್ತೇವೆ. ಇಂತಹ ಪವಿತ್ರವಾದ ಹಾಗು ನಮ್ಮನ್ನು ಪವಿತ್ರ ಮಾಡುವ ಭಗವಂತ ಶುಚಿಶ್ರವಾ.

Sunday, June 27, 2010

Vishnu Sahasranama 110-113

ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ

110) ಅಮೋಘಃ
ಮೋಘ ಅಂದರೆ ವ್ಯರ್ಥ, ಅಮೋಘ ಅಂದರೆ ವ್ಯರ್ಥವಲ್ಲದ್ದು. ಯಾರ ಸಂಕಲ್ಪ ವ್ಯರ್ಥವಾಗುವುದಿಲ್ಲವೋ ಅವನು ಅಮೋಘ. ಭಗವಂತನ ಸಂಕಲ್ಪ ಎಂದೂ ವ್ಯರ್ಥವಾಗಲಾರದು. ಆತನ ಸಂಕಲ್ಪವನ್ನು ಯಾರಿಂದಲೂ ಬದಲಿಸಲು ಅಸಾದ್ಯ. ಭಗವಂತ ಈ ಪ್ರಪಂಚವನ್ನು ಏಕೆ ಸೃಷ್ಟಿ ಮಾಡಿದ? ಅವನಿಗೆ ಇದರಿಂದ ಏನು ಪ್ರಯೋಜನ? ಈ ಪ್ರಪಂಚ ಭಗವಂತನಿಗೆ ಮೋಘ(ವ್ಯರ್ಥ), ಆದರೆ ನಮಗೆ ಅಮೋಘ! ಈ ಪ್ರಪಂಚವನ್ನು ಭಗವಂತ ಎಲ್ಲಾ ಜೀವರಿಗಾಗಿಯೇ ಸೃಷ್ಟಿ ಮಾಡಿರುವುದು. ಇಂತಹ ಭಗವಂತ ಅಮೋಘ.
111) ಪುಂಡರೀಕಾಕ್ಷ
ಅಮರಕೋಶದಲ್ಲಿ ಪುಂಡರೀಕಾಕ್ಷ ಎಂದರೆ ಬಿಳಿ ತಾವರೆಯಂತಹ ಕಣ್ಣುಳ್ಳವನು ಎಂದಿದೆ, ಆದರೆ ಪುಂಡರೀಕಾಕ್ಷ ಎಂದರೆ ಕೆಂದಾವರೆಯಂತಹ ಕಣ್ಣುಳ್ಳವನು ಎಂದರ್ಥ. ಭಗವಂತನ ಕಣ್ಣು ಯಾವಾಗಲೂ ಕೆಂದಾವರೆ ಎಸಳಿನಂತೆ ಅರಳಿ ನಳನಳಿಸುತ್ತಿರುತ್ತದೆ. ಸಾಮಾನ್ಯವಾಗಿ ನಮಗೆ ಅತ್ಯಂತ ಸಂತೋಷವಾದಾಗ ನಮ್ಮ ಕಣ್ಣು ಅರಳುತ್ತವೆ. ಆದರೆ ಭಗವಂತ ಸದಾ ಸಂತೋಷದ ಬುಗ್ಗೆ. ಭಗವಂತನ ಕೈಯಲ್ಲಿ ನಾಲ್ಕು ಆಯುದಗಳಿರುತ್ತವೆ. ಚಕ್ರ, ಶಂಖ, ಗಧಾ, ಪದ್ಮ (ಪುಂಡರೀಕ). ಈ ನಾಲ್ಕು ಆಯುದಗಳು ಕ್ರಮವಾಗಿ ಧರ್ಮ, ಅರ್ಥ, ಕಾಮದ ನಿಯಂತ್ರಣ ಹಾಗು ಮೋಕ್ಷದ ಸಂಕೇತ. ಆದ್ದರಿಂದ ಪುಂಡರೀಕ ಎಂದರೆ ಮೋಕ್ಷಪ್ರದಾಯಕ ಎಂದರ್ಥ.
ಭಗವಂತನ ಹೊಕ್ಕುಳಲ್ಲಿ ಪದ್ಮಕೋಶ ರೂಪದ ಈ ಬ್ರಹ್ಮಾಂಡ ರಚನೆಯಾಗಿದ್ದು, ಆತ ಅದನ್ನು ತನ್ನ ಹೃದಯಕಮಲದಲ್ಲಿ ತುಂಬಿಕೊಂಡಿದ್ದಾನೆ. ಇಂತಹ ಭಗವಂತ ಪುಂಡರೀಕಾಕ್ಷ.
112) ವೃಷಕರ್ಮಾ
ಭಗವಂತನ ಈ ನಾಮವನ್ನು ವಿಶ್ಲೇಷಿಸುವ ಮೊದಲು ಭಗವದ್ಗೀತೆಯ ಈ ಕೆಳಗಿನ ಶ್ಲೋಕವನ್ನು ಒಮ್ಮೆ ನೋಡೋಣ .
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಾಂ ಸೃಜಾಮ್ಯಹಂ
ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ

ಧರ್ಮನಾಶವಾದಾಗ, ಧರ್ಮದ ಉದ್ಧಾರಕ್ಕಾಗಿ, ಸಜ್ಜನರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸಿ, ಧರ್ಮ ಸ೦ಸ್ಥಾಪನೆ ಮಾಡುಲು ಪದೇ ಪದೇ ಅವತರಿಬರುತ್ತೇನೆ ಎನ್ನುವುದು ಈ ಶ್ಲೋಕದ ಮುಖ್ಯಾರ್ಥ.
ವೃಷ ಅಂದರೆ ಧರ್ಮ. ವೃಷಕರ್ಮಾ ಅಂದರೆ ಧರ್ಮಕ್ಕಾಗಿ ಕರ್ಮ ಮಾಡುವ ಭಗವಂತ. ಧರ್ಮ ಸ೦ಸ್ಥಾಪನೆಗಾಗಿ ಪದೇ ಪದೇ ಅವತರಿಸಿಬರುವುದು ಭಗವಂತನ ಕರ್ಮ. ಈ ರೀತಿ ಅವತರಿಸಿ ಬಂದು ಭಕ್ತಕೋಟಿಯ ಅಭಿಷ್ಟವನ್ನು ಪೂರೈಸಿ ಧರ್ಮದ ರಕ್ಷಣೆ ಮಾಡುವ ಶ್ರೇಷ್ಠ ಭಗವಂತ ವೃಷಕರ್ಮಾ.
113) ವೃಷಾಕೃತಿಃ
ಮೇಲೆ ಹೇಳಿದಂತೆ ಭಗವಂತ ಅವತರಿಸಿ ಬರುತ್ತಾನೆ. ಈ ರೀತಿ ಧರ್ಮದ ರಕ್ಷಣೆಗಾಗಿ ನಾನಾ ಆಕೃತಿಯಲ್ಲಿ ಧರೆಗಿಳಿದು ಬರುವ ಭಗವಂತ ವೃಷಾಕೃತಿ. ಆತ ಧರಿಸುವ ಎಲ್ಲಾ ಆಕೃತಿಗಳು ಆತನ ಭಕ್ತಕೋಟಿಯ ಅಭಿಷ್ಟಕ್ಕೆ ತಕ್ಕನಾಗಿರುತ್ತದೆ. ಈ ರೀತಿ ಭಕ್ತರ ಕೋರಿಕೆಯಂತೆ ವಿಶಿಷ್ಟ ಆಕೃತಿಯನ್ನು ಧರಿಸುವ ಭಗವಂತ ವೃಷಾಕೃತಿಃ .

Saturday, June 26, 2010

Vishnu Sahasranama 107-109

ಸಮಾತ್ಮಾ ಸಂಮಿತಃ ಸಮಃ

107) ಸಮಾತ್ಮಾ
ಭಗವಂತ 'ಸರ್ವೇಶು ಸಮಾತ್ಮಾ' ಅಂದರೆ ಸರ್ವರನ್ನು ಸಮಾನಾಗಿ ತಾರತಮ್ಯ ಇಲ್ಲದೆ ಕಾಣುವವನು.
ಈ ಪ್ರಪಂಚ ಒಂದು ತೋಟವಿದ್ದಂತೆ ಹಾಗು ಭಗವಂತ ಒಬ್ಬ ತೋಟಗಾರ. ಈ ಜೀವರು ಬೀಜಗಳು! ಬೀಜವನ್ನು ಮನೆಯೋಳಗಿಟ್ಟರೆ ಅದು ಫಲ ಕೊಡಲಾರದು, ಅದನ್ನು ಉತ್ತಿ-ಬಿತ್ತಿ ಪಾಲಿಸಿದಾಗ ಆ ಚಿಕ್ಕ ಬೀಜ ಹೆಮ್ಮರವಾಗಿ ಬೆಳೆಯುತ್ತದೆ ಮತ್ತು ತನ್ನ ಗುಣ ಸ್ವಭಾವದಂತೆ ಫಲವನ್ನು ಕೊಡುತ್ತದೆ. ಹುಣಸೆ ಹಣ್ಣು ಹುಳಿಯಾಗಿರುವುದಕ್ಕೆ ತೋಟಗಾರ ಕಾರಣನಲ್ಲ, ಅದರ ಗುಣ ಸ್ವಭಾವ ಕಾರಣ. ಅದೇ ರೀತಿ ಈ ಪ್ರಪಂಚದಲ್ಲಿ ಬೇರೆ ಬೇರೆ ರೀತಿಯ ಜನರನ್ನು ಕಾಣುತ್ತೇವೆ. ಭಗವಂತ ಒಬ್ಬ ತೋಟಗಾರನಂತೆ ಪ್ರತಿಯೊಬ್ಬರನ್ನು ಪಾಲಿಸಿ ಪೋಷಿಸುತ್ತಾನೆ. ಜೀವರು ಭಗವಂತನ ಕೃಪೆಯಿಂದ ತನ್ನ ಜೀವ ಸ್ವಭಾವದಂತೆ, ತನ್ನ ಕರ್ಮಫಲದಂತೆ ಬೆಳೆಯುತ್ತಾರೆ. ಭಗವಂತ ಜೀವರಿಗೆ ಕೊಡುವುದು ಶಿಕ್ಷೆ ಅಲ್ಲ ಶಿಕ್ಷಣ.ಭಗವಂತ ತನ್ನ ಎಲ್ಲಾ ಅವತಾರಗಳಲ್ಲಿ ಎಲ್ಲಾ ಕ್ರಿಯೆಗಳಲ್ಲಿ ಸಮಾತ್ಮ, ಅದರಲ್ಲಿ ಅಂತರವಿಲ್ಲ. ಭಗವಂತ ಅಖಂಡ, ಅಬಿವ್ಯಕ್ತ ಮಾತ್ರ ಬೇರೆ ಬೇರೆಯಾಗಿ ಕಾಣುತ್ತದೆ. ಎಲ್ಲರಲ್ಲೂ ಇರುವ ಬಿಂಬ ಒಂದೇ, ಆದರೆ ಪ್ರತಿಬಿಂಬ ಬೇರೆ ಬೇರೆ. ಇರುವೆ ಒಳಗೆ ಇರುವ ಬಿಂಬ ರೂಪಿ ಭಗವಂತನಿಗೂ ಆನೆಯೊಳಗಿರುವ ಬಿಂಬ ರೂಪಿ ಭಗವಂತನಿಗೂ ಯಾವುದೇ ರೀತಿ ವ್ಯತ್ಯಾಸವಿಲ್ಲ, ಅಬಿವ್ಯಕ್ತ ಮಾತ್ರ ಬೇರೆ ಬೇರೆ . ಅದ್ದರಿಂದ ಭಗವಂತ ಸಮಾತ್ಮಾ.
108) (ಅ)ಸಂಮಿತಃ
ಮೇಲೆ ಹೇಳಿದಂತೆ ಭಗವಂತ ಸಮಾತ್ಮಾ ಎಂದು ಎಲ್ಲಾ ಜ್ಞಾನಿಗಳು ಬಲ್ಲರು ಆದ್ದರಿಂದ ಆತ ಸಂಮಿತ. ಅವನು ಎಲ್ಲಾ ಕಡೆ ಸಮನಾಗಿದ್ದರೂ ಕೂಡ ಆತನಿಗೆ ಸಮನಾದವರು ಇನ್ನೊಬ್ಬರಿಲ್ಲ ಆದ್ದರಿಂದ ಆತ ಅಸಂಮಿತ ಕೂಡ ಹೌದು!!
109) ಸಮಃ

ಸಮಃ ಅನ್ನುವ ಶಬ್ದ ಎಲ್ಲರೂ ಎಲ್ಲಾ ಬಾಷೆಗಳಲ್ಲಿ ಉಪಯೋಗಿಸುವ ಸರ್ವೇಸಾಮಾನ್ಯ ಶಬ್ದ. ಆದರೆ ಇದು ಭಗವಂತನ ನಾಮ ಎಂದು ಹೆಚ್ಚಿನವರಿಗೆ ತಿಳಿದಿಲ್ಲ. ಸಮ ಅಂದರೆ ಎಲ್ಲರನ್ನು ಏಕ ರೂಪದಲ್ಲಿ ನೋಡುವವ ಎನ್ನುವುದು ಎಲ್ಲರಿಗೂ ಹೊಳೆಯುವ ಅರ್ಥ. ಈ ಪದವನ್ನು ಒಡೆದರೆ 'ಸ' ಮತ್ತು 'ಮ' ಎನ್ನುವ ಅಪೂರ್ವ ಅರ್ಥವುಳ್ಳ ಸಂಕ್ಷಿಪ್ತ (Abbreviation) ಪದ ಕಾಣ ಸಿಗುತ್ತದೆ. ಸ ಅಂದರೆ ಸಾರ, ಮ ಎಂದರೆ ಜ್ಞಾನ ಅಥವಾ ಆನಂದ. ಆದ್ದರಿಂದ ಸಮ ಅಂದರೆ ಜ್ಞಾನಾನಂದ ಸ್ವರೂಪ ಎಂದರ್ಥ. ಈ ರೀತಿ ಪದಗಳನ್ನು ಒಡೆದಾಗ ವಿಶಿಷ್ಟ ಅರ್ಥ ಸಂಸ್ಕೃತ ಬಾಷೆ ಮಾತ್ರ ಕೊಡಬಲ್ಲದು. ನೀವು ಕೆಲವು ಆಮಂತ್ರಣ ಪತ್ರಿಕೆಯಲ್ಲಿ 'ಸ-ಕುಟುಂಬ' ಅನ್ನುವ ಪದವನ್ನು ನೋಡಿರಬಹುದು. ಇಲ್ಲಿ 'ಸ' ಅಂದರೆ ಸಹಿತ ಎಂದರ್ಥ. ಇನ್ನು 'ಮಃ' ಎಂದರೆ ಮಾತೆ, ಮಾತು, ವಾಚ್ಯ,,ಮಾನ ಅಥವಾ ಪ್ರಮಾಣ ಎನ್ನುವ ಹಲವು ಅರ್ಥವನ್ನು ಕೊಡುತ್ತದೆ. ಆದ್ದರಿಂದ ಸಮಃ ಅಂದರೆ ಸಮಸ್ತ ವೇದವಾಚ್ಯ, ಸಮಸ್ತ ಶಬ್ದ ವಾಚ್ಯ ಎಂದಾಗುತ್ತದೆ. ಇಂತಹ ಭಗವಂತನ ನಿಜವಾದ ಅನುಭವವಾಗದೆ ಅವನನ್ನು ಯಾವ ಯುಕ್ತಿಯಿಂದ ತಿಳಿಯಲು ಅಸಾದ್ಯ. ಒಮ್ಮೆ ಭಗವಂತನನ್ನು ತಿಳಿದ ಮೇಲೆ ಎಲ್ಲಾ ಯುಕ್ತಿಗಳು ಆತನನ್ನೇ ಹೇಳುತ್ತವೆ. ಇಂತಹ ಭಗವಂತ ಯಾವಾಗಲೂ ಮಾತೆ ಲಕ್ಷ್ಮೀದೇವಿ ಸಮೇತನಾಗಿ ಇರುತ್ತಾನೆ. ಈ ಎಲ್ಲಾ ಕಾರಣದಿಂದಾಗಿ ಭಗವಂತ ಸಮಃ

Friday, June 25, 2010

Vishnu Sahasranama 104-106


ವಸುರ್ವಸುಮನಾಃ ಸತ್ಯಃ

104)ವಸು
ನಿಘಂಟಿನಲ್ಲಿ ವಸು ಅನ್ನುವ ಪದಕ್ಕೆ ಸಿರಿ ಅಥವಾ ಸಂಪತ್ತು ಅನ್ನುವ ಅರ್ಥವಿದೆ. ಸಾಮಾನ್ಯವಾಗಿ ಸಿರಿ-ಸಂಪತ್ತು ಅಂದಾಗ ನಮಗೆ ದುಡ್ಡಿನ ನೆನಪಾಗುತ್ತದೆ. ಆದರೆ ಒಬ್ಬೊಬ್ಬರಿಗೆ ಒಂದೊಂದು ಸಂಪತ್ತು. ನಮಗೆ ಜೀವನದಲ್ಲಿ ಯಾವುದು ಸುಖ-ಸಂತೋಷವನ್ನು ಕೊಡುತ್ತದೋ ಅದನ್ನು ಸಂಪತ್ತು ಎಂದು ತಿಳಿಯುತ್ತೇವೆ. ಕೆಲವರಿಗೆ ಮಣ್ಣು ಸಂಪತ್ತಾಗಿ ಕಾಣಿಸಿದರೆ ಇನ್ನು ಕೆಲವರಿಗೆ ಹೆಣ್ಣು-ಹೊನ್ನು ಸಂಪತ್ತು ಎನ್ನುವ ಬ್ರಮೆ ಇರುತ್ತದೆ.
ಆದರೆ ನಿಜವಾದ ಸಂಪತ್ತು ಯಾವುದು? ಯಾವುದನ್ನು ಹಂಚುವುದರಿಂದ ಬೆಳೆಯುತ್ತಾ ಹೋಗಿ ಸಾವಿರ-ಸಾವಿರ ವರ್ಷಗಳ ತನಕ ಅಜರಾಮರವಾಗಿ ಉಳಿಯುತ್ತದೋ, ಅದು ನಿಜವಾದ ಸಂಪತ್ತು. ಅದೇ ಜ್ಞಾನ.
ಯಾವ್ಯಾವುದೋ ವ್ಯರ್ಥವಾದ ಜ್ಞಾನ ಸಂಪತ್ತಲ್ಲ. ಯಾವುದು ನಮ್ಮನ್ನು ಉದ್ದಾರ ಮಾಡುವ ಶಕ್ತಿಯೋ, ಅದರ ಜ್ಞಾನ ನಿಜವಾದ ಸಂಪತ್ತು. ಆದ್ದರಿಂದ ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಂಪತ್ತು ಭಗವಂತನ ಜ್ಞಾನ. ಆದ್ದರಿಂದ ಭಗವಂತ 'ವಸು'
105)ವಸುಮನಾಃ
ಇಲ್ಲಿ ವಸುಗಳು ಅಂದರೆ ಭಗವಂತನನ್ನು ಅರಿತವರು. ಮುಖ್ಯವಾಗಿ ದೇವತೆಗಳು ಹಾಗು ಯಾರು ತನ್ನ ಹೃದಯದಲ್ಲಿ ಭಗವಂತ ವಾಸವಾಗಿದ್ದಾನೆ ಎಂದು ತಿಳಿದಿದ್ದಾರೋ ಅವರು ವಸುಗಳು.
ವಸುಗಳು ಅಂದರೆ ಪರಿಶುದ್ದವಾದ ಮನಸ್ಸುಳ್ಳವರು ಎನ್ನುವ ಅರ್ಥ ಕೂಡಾ ಇದೆ. ಆದ್ದರಿಂದ ಪರಿಶುದ್ಧವಾದ, ಸತ್ವಗುಣದಿಂದ, ಅನನ್ಯವಾಗಿ ಪ್ರಾರ್ಥಿಸುವ 'ವಸುಗಳಿಗೆ' ಕಾಣಿಸಿಕೊಳ್ಳುವ ಭಗವಂತ ವಸುಮನಾ.
106)ಸತ್ಯಃ
ಸತ್ಹ್ ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಸರ್ವಸೃಷ್ಟ, ಸರ್ವ ನಿಯಾಮಕ, ಸರ್ವ ಸ್ಥಿತಿ ಕಾರಣ , ಸರ್ವ ಸಂಹಾರಕ ಇತ್ಯಾದಿ. ಅದೇ ರೀತಿ ಸತ್ ಅಂದರೆ ಜ್ಞಾನ-ಅಜ್ಞಾನ-ಬಂದ-ಮೋಕ್ಷ.
ಆದ್ದರಿಂದ ಸತ್ಯಃ ಅಂದರೆ ಸೃಷ್ಟಿಪ್ರದ, ಸ್ಥಿತಿಪ್ರದ, ಸಂಹಾರಪ್ರದ, ನಿಯಾಮಕ, ಜ್ಞಾನಪ್ರದ, ಅಜ್ಞಾನಪ್ರದ, ಬಂದಪ್ರದ ಮತ್ತು ಮೊಕ್ಷಪ್ರದನಾದ ಭಗವಂತ.
ಸೃಷ್ಟಿ-ಸ್ಥಿತಿ-ಸಂಹಾರ ನಿಯಾಮಕನಾಗಿ, ಜ್ಞಾನಾಜ್ಞಾನ-ಬಂದ-ಮೋಕ್ಷಗಳಿಗೆ ಕಾರಣನಾಗಿರುವ, ಸದ್ಗುಣ ಸ್ವರೂಪ ಜ್ಞಾನಾನಂದಮಯನಾದ ಭಗವಂತ 'ಸತ್ಯ'.

Thursday, June 24, 2010

Vishnu Sahasranama 101-103

ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಸ್ಸೃತಃ

101)ವೃಷಾಕಪಿ
ಮೇಲ್ನೋಟಕ್ಕೆ ವೃಶ+ಕಪಿ=ವೃಷಾಕಪಿ, ಅಂದರೆ ನಾವು ಬಾಯಾರಿ ಬಳಲಿದಾಗ ನಮ್ಮ ಪೀಪಾಸವನ್ನು ತಣಿಸುವವ.(ವೃಶ ಅಂದರೆ ಮಳೆ ಸುರಿಸುವವನು, ಕಪಿ (ಕಂ+ಪಾಯತೆ) -ಅಂದರೆ ನೀರು ಕುಡಿಸುವವನು).
ವೃಷಾ- 'ಧರ್ಮ ಸ್ವರೂಪ', 'ನಮ್ಮ ಅಭಿಷ್ಟದ ಮಳೆ ಸುರಿಸುವವ' ಎನ್ನುವ ಅರ್ಥವನ್ನೂ ಕೂಡ ಕೊಡುತ್ತದೆ. ಅಕಪಿ ಅಂದರೆ ದುಃಖ ನಿವಾರಕ ಎಂದರ್ಥ.
ಆದ್ದರಿಂದ ವೃಷಾಕಪಿ ಅಂದರೆ ನಮ್ಮ ಮೇಲೆ ಧರ್ಮದ ಮೂಲಕ ಅಭಿಷ್ಟದ ಮಳೆಗರೆದು, ನಮ್ಮ ಮನಸ್ಸಿನ ದುಃಖ ದುಗುಡವನ್ನು ನಿವಾರಿಸಿ, ಪೂರ್ಣಾನಂದವನ್ನು ಕೊಟ್ಟು, ತಾನೂ ಪೂರ್ಣಾನಂದವನ್ನು ಅನುಭವಿಸುವವನು ಎಂದರ್ಥ.
102)ಅಮೇಯಾತ್ಮಾ
ನಮ್ಮ ಮನಸ್ಸು ಬುದ್ದಿಗೆ ಒಂದು ಸೀಮೆ ಇದೆ. ಅದರಿಂದಾಚೆಗೆ ನಾವು ಗ್ರಹಿಸಲಾರೆವು. ಭಗವಂತನನ್ನು ನಮ್ಮ ಬುದ್ದಿಯಿಂದ ಅಳೆಯಲು ಅಸಾದ್ಯ, ಅದ್ದರಿಂದ ಆತ ಅಮೇಯಾತ್ಮಾ.
ಭಗವಂತ ನಮಗೆ ತಿಳಿಯಲು ಅಸಾದ್ಯವಾದರೂ ಕೂಡ ಆತ ಅಣುವಿನಲ್ಲಿ ಅಣುವಾಗಿ ನಮ್ಮೊಳಗೇ ತುಂಬಿದ್ದಾನೆ. ಆತ ಸೂಕ್ಷ್ಮಾತಿ ಸೂಕ್ಷ್ಮನೂ ಹೌದು. ನಮಗೆ ತಿಳಿದಿರುವುದು- ಮಣ್ಣು, ನೀರು, ಬೆಂಕಿ, ಗಾಳಿ ,ಆಕಾಶ, ಹಾಗು ಈ ಪಂಚಭೂತಗಳಿಂದಾದ ವಸ್ತುಗಳು ಮಾತ್ರ. ಆದರೆ ಭಗವಂತ ಇವೆಲ್ಲಕ್ಕಿಂತಲೂ ಬೇರೆ. ಆದ್ದರಿಂದ ನಮ್ಮ ಜೀವಸ್ವರೂಪನಾದ ಭಗವಂತನ ಕಲ್ಪನೆ ನಮಗಿಲ್ಲ. ಭಗವಂತನನ್ನು ನಮ್ಮ ಒಳಗಣ್ಣಿನಿಂದ ನೋಡುವ ಪ್ರಯತ್ನ ಮಾಡಬೇಕೇ ಹೊರತು, ಹೊರ ಪ್ರಪಂಚದಲ್ಲಿ ಹುಡುಕಿ ಪ್ರಯೋಜನವಿಲ್ಲ.
103) ಸರ್ವಯೋಗವಿನಿಸ್ಸೃತಃ
ಇಲ್ಲಿ ಯೋಗ ಅಂದರೆ ಸಂಬಂಧ ಅಥವಾ ಉಪಾಯ ಎನ್ನುವ ಅರ್ಥವನ್ನು ಕೊಡುತ್ತದೆ.
ನಾವು ಏಲ್ಲಿ ಇರುತ್ತೇವೂ ಅದರ ಸಂಬಂಧದಲ್ಲಿರುತ್ತೇವೆ. ಭಗವಂತ ಎಲ್ಲಾಕಡೆ ಇದ್ದಾನೆ, ಆದರೆ ಅವನು ಯಾವುದಕ್ಕೂ ಅಂಟಿಕೊಂಡಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಆಕಾಶ. ಮಣ್ಣು, ನೀರು, ಬೆಂಕಿ ಅಥವಾ ಗಾಳಿ ಇದನ್ನು ಮುಟ್ಟಿದಾಗ ಅಂಟಿಕೊಳ್ಳುತ್ತದೆ, ಆದರೆ ಆಕಾಶ ಎಲ್ಲಾಕಡೆ ಇದ್ದರೂ ಕೂಡಾ, ಯಾವುದಕ್ಕೂ ಅಂಟಿಕೊಂಡಿಲ್ಲ. ಭಗವಂತ ಕೂಡ ಹೀಗೆ. ಎಲ್ಲಾಕಡೆ ಇದ್ದರೂ ಕೂಡ ಯಾವುದನ್ನೂ ಅಂಟಿಸಿಕೊಳ್ಳದವನು. ಆದ್ದರಿಂದ ಭಗವಂತ ಸರ್ವಯೋಗವಿನಿಸ್ಸೃತ.

Wednesday, June 23, 2010

Vishnu Sahasranama 95-100(101)


ಅಜಃ ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ
95)ಅಜಃ
ಅಜಃ ಅಂದರೆ ಯಾರಿಂದಲೂ ಹುಟ್ಟದವನು, ಆದರೆ ಎಲ್ಲರಲ್ಲೂ ಹುಟ್ಟುವವನು ಎಂದರ್ಥ. ತದ್ವಿರುದ್ದವಾದ ಅರ್ಥ ಎನ್ನುತೀರಾ? ಹೌದು, ಭಗವಂತ ಯಾರಿಂದಲೋ ಹುಟ್ಟಿ ಬರುವ ವಸ್ತುವಲ್ಲ. ಆದರೆ ಬಿಂಬ ರೂಪನಾಗಿ ಪ್ರತಿಯೊಂದು ಗರ್ಭದಲ್ಲಿ ನೆಲೆಸಿ ಏಕ ಕಾಲದಲ್ಲಿ ಅನೇಕ ರೂಪಿಯಾಗಿ ಹುಟ್ಟುವವನು. ಗರ್ಭಿಣಿಯ ಹೊಟ್ಟೆ ಹಾಗು ದೇವರ ಗುಡಿಯಲ್ಲಿ ಮುಖ್ಯ ಮೂರ್ತಿ ಇರುವ ಸ್ಥಳ -ಇವೆರಡನ್ನೂ "ಗರ್ಭ" ಎನ್ನುವ ಏಕಪದದಿಂದ ಸಂಬೋದಿಸುತ್ತಾರೆ (ಬೇರೆ ಪದ ಲಬ್ಯವಿಲ್ಲ ). ದೇವಸ್ಥಾನದ ಗರ್ಭಗುಡಿಯಲ್ಲಿರುವ ಮೂರ್ತಿಯಲ್ಲಿ, ಆಹ್ವಾನ ಮಾಡಿದಾಗ ದೇವರ ಆಗಮನವಾದರೆ, ಗರ್ಭಿಣಿಯ ಗರ್ಭದಲ್ಲಿ ಭಗವಂತ ಬಿಂಬರೂಪನಾಗಿ ನೆಲಸಿ ಜನಿಸುತ್ತಾನೆ. ಇಂತಹ ಭಗವಂತ ಅಜಃ .
96)ಸರ್ವೇಶ್ವರಃ
ಯಾರು ತನ್ನನ್ನು ಭಕ್ತಿಯಿಂದ ಕರೆಯುತ್ತಾರೂ ಅಂತವರಿಗೆ ಸದಾಕಾಲ ಲಬ್ಯವಿರುವ, ಎಲ್ಲಾ ಈಶ್ವರರ-ಈಶ್ವರ ಸರ್ವೇಶ್ವರ.
97)ಸಿದ್ಧಃ
ಈ ಜಗತ್ತಿನಲ್ಲಿರುವ ಎಲ್ಲಾ ಶಾಸ್ತ್ರ ಹಾಗು ವೇದಗಳು ಸರ್ವ ಸಿದ್ದನಾದ ಭಗವಂತನನ್ನು ಹಾಗು ಅವನ ತತ್ವಗಳನ್ನು ತಿಳಿಸುತ್ತವೆ. ಈ ಎಲ್ಲಾ ವೇದ-ಶಾಸ್ತ್ರಗಳ ಮೂಲನಾಗಿರುವ, ಭಕ್ತರ ಹೃದಯನಿವಾಸಿ ಭಗವಂತ ಸಿದ್ದ.
98)ಸಿದ್ಧಿಃ
ಸಮಸ್ತ ಪುರುಷಾರ್ಥ ಸಿದ್ದಿ ಯಾರಿಂದ ಆಗುತ್ತದೋ ಅವನು ಸಿದ್ದಿ. ಸಮಸ್ತ ಕಾರ್ಯಗಳ ಸಿದ್ದಿದಾಯಕನಾದ ಭಗವಂತ ಸಿದ್ದಿ.
99)ಸರ್ವಾದಿ
ಎಲ್ಲವುದರ ಆದಿ, ಎಲ್ಲವುದರ ಮೊದಲು ಇರುವವ, ಹಾಗು ಎಲ್ಲವನ್ನೂ ಸ್ವೀಕರಿಸುವ ಭಗವಂತ ಸರ್ವಾದಿ.
100)ಅಚ್ಯುತಃ
ಎಲ್ಲವನ್ನೂ ಸ್ವೀಕರಿಸಿ, ಎಲ್ಲವನ್ನೂ ನಾಶಮಾಡಿ(ಪ್ರಳಯ), ಯಾವುದೇ ಚ್ಯುತಿ ಇಲ್ಲದೇ ಅನಂತವಾಗಿ ಅಖಂಡವಾಗಿ ಇರುವ ಭಗವಂತ ಅಚ್ಯುತ.
ವಿ. ಸೂ: ಸ್ಸ್ಥವಿರೋ ಧ್ರುವಃ ಅನ್ನುವ ನಾಮವನ್ನು ನಾವು ಏಕ ನಾಮವಾಗಿ ವಿಶ್ಲೇಷಿಸಿದ್ದೇವೆ. ಆದರೆ ಇದು ಸ್ಥವಿರ ಹಾಗು ದ್ರುವ ಅನ್ನುವ ಎರಡು ನಾಮ ಕೂಡ ಹೌದು. ಹೀಗೆ ಎರಡು ನಾಮವಾಗಿ ನೋಡಿದಾಗ ಮೇಲಿನ 'ಅಚ್ಯುತ' ನಾಮ ಭಗವಂತನ 101 ನೇ ನಾಮವಾಗುತ್ತದೆ. ಮೊದಲ 12 ನಾಮಗಳು ಅಥರ್ವವೇದವನ್ನೂ, ಇಪ್ಪತ್ನಾಲ್ಕರವರಿಗಿನ ನಾಮ ಋಗ್ವೇದವನ್ನೂ, ಹಾಗು 101 ರ ತನಕ ಬರುವ ನಾಮಗಳು ಯಜುರ್ವೆದವನ್ನೂ ಪ್ರತಿಪಾದಿಸುತ್ತವೆ. ಈ ಮೇಲಿನ 101 ನಾಮಗಳ ಅರ್ಥ ಸಹಿತ ಪಾರಾಯಣ-ಮೂರು ಅಮೂಲ್ಯ ವೇದಗಳ ಪಾರಾಯಣಕ್ಕೆ ಸಮಾನ. ಮುಂದೆ ಬರುವ ನಾಮಗಳು ಸಾಮವೇದವನ್ನು ಪ್ರತಿಪಾದಿಸುತ್ತವೆ. ಮುಂದಿನ ದಿನಗಳಲ್ಲಿ ಉಳಿದ 899 ನಾಮಾರ್ಥವನ್ನು ತಿಳಿಯಲು ಅವಕಾಶ ಮಾಡಿಕೊಡಬೇಕಾಗಿ, ಆ ಪರಬ್ರಹ್ಮ ಮೂರ್ತಿಯಲ್ಲಿ ಬೇಡೋಣ.

ಈ ಅಮೂಲ್ಯ ನಾಮರ್ಥವನ್ನು ಅರಿತ ನಿಮಗೆಲ್ಲರಿಗೂ ಆ ಭಗವಂತನು ಸನ್ಮಂಗಳವನ್ನುಂಟುಮಾಡಲಿ.

Vishnu Sahasranama 90-94

ಅಹಃ ಸಂವತ್ಸರೋ ವ್ಯಾಲಃ ಪ್ರತ್ಯಯಸ್ಸರ್ವದರ್ಶನಃ
90)ಅಹಃ
ಅಹಃ ಅಂದರೆ ಮೇಲ್ನೋಟದ ಅರ್ಥ 'ನಾನು' . ಪ್ರತಿಯೊಂದು ಮಾತಿನಲ್ಲೂ ನಾವು 'ನಾನು' ಅನ್ನುವ ಪದವನ್ನು ಉಪಯೋಗಿಸುತ್ತೇವೆ. ಈಗ 'ನಾನು' ಅನ್ನುವ ಪದವನ್ನು ಸ್ವಲ್ಪ ಆಳವಾಗಿ ಯೋಚಿಸಿ. ನಾನು ಅಂದರೆ ನನ್ನ ಕೈ , ಕಾಲು, ತಲೆ,ಹೃದಯ ....... ನನ್ನ ದೇಹ ?? ಅಲ್ಲ !!! ನನ್ನ ಉಸಿರು? ಅದೂ ಅಲ್ಲ !! ನನ್ನ ಜೀವ ........?? ಅಲ್ಲ. ಏಕೆಂದರೆ ಈ ಜೀವವನ್ನು ನೆಡೆಸುವವನು ಯಾರು ? ಅವನೇ ಬಿಂಬ ರೂಪಿ ಭಗವಂತ. ಆದ್ದರಿಂದ ಆತ ಅಹಃ . ಒಂದು ಕೆಲಸವನ್ನು ನಾನು ಮಾಡಿದೆ... ನನ್ನಿಂದಾಯಿತು ಎಂದು ಜಂಬ ಪಡುವ ನಾವು, ಆ "ನಾನು" ಅಂದರೆ ನನ್ನೊಳಗೆ ಕುಳಿತ ಭಗವಂತ ಅನ್ನುವುದನ್ನು ಸಂಪೂರ್ಣ ಮರೆತಿರುತ್ತೇವೆ!
ಅಹಃ ಅನ್ನುವುದಕ್ಕೆ ಇನ್ನೊಂದು ಅರ್ಥ ಬೆಳಕು. ಅಂದರೆ ಬೆಳಕಿನ ಮೂಲವಾದ ಸೂರ್ಯನಲ್ಲಿ ತುಂಬಿ ಜಗತ್ತನ್ನು ಬೆಳಗುವವವನು.
ಅದ್ದರಿಂದ ಪಿಂಡಾಂಡದಲ್ಲಿ ಬಿಂಬರೂಪಿಯಾಗಿ, ನಿಸರ್ಗದಲ್ಲಿ ಸೂರ್ಯಕಿರಣ ರೂಪದಲ್ಲಿ ತುಂಬಿರುವ ಭಗವಂತ ಅಹಃ.
91)ಸಂವತ್ಸರೋ..
ಸಂವತ್ಸರ ಎಂದರೆ ಸಂಸ್ಕೃತದಲ್ಲಿ ವರ್ಷ ಎಂದು ಅರ್ಥ.ಈ ಒಂದು ಸಂವಸ್ಸರದಲ್ಲಿ 360 ಹಗಲು ಹಾಗು 360 ರಾತ್ರಿಗಳಿರುತ್ತವೆ. ಇಂತಹ ನೂರು ಸಂವಸ್ಸರಗಳು ಮನುಷ್ಯನ ಆಯಸ್ಸು ( 36,000 ಹಗಲು ಹಾಗು 36,೦೦೦ ರಾತ್ರಿ) . ಮನುಷ್ಯ ದೇಹ 72,000 ನಾಡಿಗಳಿಂದ ಹಾಗು 360 ಅಸ್ಥಿಗಳಿಂದ ತುಂಬಿದೆ (ಅದಕ್ಕಾಗಿ ಯಜ್ಞ ಕುಂಡ ತಯಾರಿಸುವಾಗ 360 ಇಟ್ಟಿಗೆಗಳನ್ನು ಉಪಯೋಗಿಸುತ್ತಾರೆ, 360 ಅಸ್ಥಿಗಳಿಂದ ತುಂಬಿದ ಈ ದೇಹವೇ ಒಂದು ಕುಂಡ) . ಈ ಎಲ್ಲಾ ನಾಡಿಗಳಲ್ಲಿ ತುಂಬಿರುವ ಕಾಲನಿಯಾಮಕನಾದ ಹಾಗು ಶರೀರ ನಿಯಾಮಕನಾದ ಭಗವಂತ ಸಂವತ್ಸರ.
92)ವ್ಯಾಲಃ
ನಿಘಂಟಿನಲ್ಲಿ ವ್ಯಾಲ ಅನ್ನುವ ಪದ ಈ ಕೆಳಗಿನ ಅರ್ಥವನ್ನು ಕೊಡುತ್ತದೆ:
- ಮತ್ತೇರಿದ ಆನೆ, ಬುಸುಗುಡುವ ಸರ್ಪ ಅಥವಾ ಹೊಂಚು ಹಾಕಿ ಬಲಿತೆಗೆದುಕೊಳ್ಳಲು ಕಾದಿರುವ ಕ್ರೂರ ವ್ಯಾಘ್ರ !!!!
ಮೇಲಿನ ಅರ್ಥವನ್ನು ಓದಿ ಗಾಬರಿಯಾಗಬೇಡಿ. ಭಗವಂತ ವಿ+ಆ+ಲಾ. ಅಂದರೆ ಎಲ್ಲಾ ದೋಷಗಳನ್ನು ನಾಶ ಮಾಡುವವನು, ಪ್ರಳಯ ಕಾಲದಲ್ಲಿ ಎಲ್ಲವೂ ಅವನಲ್ಲಿ ಲೀನವಾಗುತ್ತವೆ. ಮೇಲ್ನೋಟಕ್ಕೆ ಪ್ರಳಯ ಒಂದು ಭಯಂಕರ ಕ್ರೀಯೆ ಆದರೂ ಕೂಡ, ಈ ಕ್ರಿಯೆಯಲ್ಲಿ ಭಗವಂತ ಎಲ್ಲವನ್ನೂ ಪ್ರೀತಿಯಿಂದ ಸ್ವೀಕರಿಸಿ , ಜೀವಕ್ಕೆ ವಿಶ್ರಾಂತಿ ಕೊಟ್ಟು, ಮರುಸೃಷ್ಟಿ ಕಾಲದಲ್ಲಿ ಪುನಃ ಜೀವರನ್ನು ಈ ಪ್ರಪಂಚಕ್ಕೆ ಪ್ರೀತಿಯಿಂದ ಕಳುಹಿಸಿಕೊಡುತ್ತಾನೆ !
ಇಂತಹ ಅದ್ಬುತವಾದ ಶಕ್ತಿ-ವ್ಯಾಲ.
93)ಪ್ರತ್ಯಯ
ಪ್ರತ್ಯಯ ಅಂದರೆ ಜ್ಞಾನಸ್ವರೂಪನಾಗಿ, ಪ್ರತಿಯೊಂದನ್ನೂ ತಿಳಿದವ ಹಾಗು ಪ್ರತಿಯೊಂದರೊಳಗೂ ಇರುವವನು (Omnipresent , Omniscience )
94)ಸ್ಸರ್ವದರ್ಶನಃ
ಭಗವಂತ ವಿಶ್ವಚಕ್ಷು, ವಿಶ್ವತೂಮುಖ. ಆತ ಪ್ರತಿಯೊಂದನ್ನೂ ಕಣ್ಣಾರೆ ಕಾಣುತ್ತಿರುತ್ತಾನೆ. ಅವನಿಂದ ಯಾವುದನ್ನೂ ಮುಚ್ಚಿಡಲು ಸಾದ್ಯವಿಲ್ಲ. ಸರ್ವ ವೇದ-ಶಾಸ್ತಗಳು ಯಾರನ್ನು ವರ್ಣಿಸುತ್ತವೂ ಅಂತಹ ಭಗವಂತ ಸರ್ವದರ್ಶನಃ.

Tuesday, June 22, 2010

Vishnu Sahasranama 85-89

ಸುರೇಶಃ ಶರಣಂ ಶರ್ಮ ವಿಶ್ವರೇತಾಃ ಪ್ರಜಾಭವಃ
85)ಸುರೇಶಃ

ಸುರರು ಅಂದರೆ ದೇವತೆಗಳು. ಭಗವಂತ ಸುರರ-ಈಶ ಆದ್ದರಿಂದ ಆತ ಸುರೇಶ.
86)ಶರಣಂ
ಶರಣು ಅಂದರೆ ಮೂಲತಃ ಆಶ್ರಯ ಅನ್ನುವ ಅರ್ಥವನ್ನು ಕೊಡುತ್ತದೆ. ಆದರೆ ವಾಡಿಕೆಯಲ್ಲಿ ಈ ಅರ್ಥ ತಪ್ಪಿಹೋಗಿ ವಿಪರೀತ ಅರ್ಥದಲ್ಲಿ ಪ್ರಚಲಿತದಲ್ಲಿದೆ. ಮೂಲ ಅರ್ಥದ ಪ್ರಕಾರ ದೇವರು ನಮಗೆ ಶರಣು ಹೊರತು ನಾವು ದೇವರಿಗೆ ಶರಣಾಗಲು ಸಾದ್ಯವಿಲ್ಲ. ಅಂದರೆ ದೇವರೇ ನಮಗೆ ಆಶ್ರಯದಾತನೇ ಹೊರತು ನಾವು ದೇವರಿಗೆ ಆಶ್ರಯದಾತರಾಗಲು ಸಾದ್ಯವಿಲ್ಲ. ಆದ್ದರಿಂದ ಎಲ್ಲಾ ಜೀವ ಜಂತುಗಳಿಗೂ ಆಶ್ರಯದಾತನಾದ ಭಗವಂತ ಶರಣು.
87)ಶರ್ಮ
ಶರ್ಮ ಅಂದರೆ ಆನಂದ. ಜ್ಞಾನಾನಂದಮಯನಾದ ಭಗವಂತ ಎಂದರ್ಥ.
88)ವಿಶ್ವರೇತಾಃ
ಭಗವಂತನ ರೇತಸ್ಸಿನಿಂದ ಈ ವಿಶ್ವ ಸೃಷ್ಟಿಯಾದ್ದರಿಂದ ಆತನನ್ನು ವಿಶ್ವರೇತಾ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ಆದರೆ ಈ ನಾಮಕ್ಕೆ ಇನ್ನೂ ಹೆಚ್ಚಿನ ಅರ್ಥವಿದೆ.
ರೇತನ್ ಅಂದರೆ ಆನಂದ ರೂಪ ಎಂದರ್ಥ. ವಿಶ್ವರೇತಾ ಎಂದರೆ ಜೀವಕೂಟಿಯ ಆನಂದದಲ್ಲಿ ಪರಿಪೂರ್ಣ ಆನಂದ ರೂಪ ಎಂದರ್ಥ. ರೇತಸ್ಸು ಅಂದರೆ ಸಾರಭೂತವಾದದ್ದು ಎನ್ನುವ ಅರ್ಥವನ್ನೂ ಕೊಡುತ್ತದೆ. ಆದ್ದರಿಂದ ಇಡೀ ಬ್ರಹ್ಮಾಂಡದಲ್ಲಿ ಸಾರಭೂತನಾಗಿರುವ ಭಗವಂತ ವಿಶ್ವರೇತಾ
89)ಪ್ರಜಾಭವಃ
ಧರ್ಮದ ಮಾರ್ಗದಲ್ಲಿ, ಜ್ಞಾನದ ಹಸಿವಿನಿಂದ, ಭಗವಂತನಲ್ಲಿ ಶರಣುಕೂರಿ ಬಂದ ಭಕ್ತರನ್ನು ಇಲ್ಲಿ ಪ್ರಜಾ ಎಂದು ಕರೆದಿದ್ದಾರೆ. ಭವ ಅಂದರೆ ಆನಂದವನ್ನು ದಯಪಾಲಿಸುವುದು ಎಂದರ್ಥ.
ಆದ್ದರಿಂದ ಪ್ರಜಾಭವ ಅಂದರೆ ಧರ್ಮ ಮತ್ತು ಜ್ಞಾನ ಮಾರ್ಗದಲ್ಲಿರುವವರಿಗೆ ಆನಂದಪ್ರದನಾದ ಭಗವಂತ ಎಂದರ್ಥ.

Monday, June 21, 2010

Vishnu Sahasranama 80-84

ಅನುತ್ತಮೋ ದುರಾಧರ್ಷಃ ಕೃತಜ್ಞಃ ಕೃತಿರಾತ್ಮವಾನ್

80)ಅನುತ್ತಮೋ
ಭಗವಂತನ ಹೆಜ್ಜೆ ಆನೆಯ ಹೆಜ್ಜೆಯಂತೆ. ಇತರ ಎಲ್ಲಾ ಹೆಜ್ಜೆಗಳು ಅದರ ವ್ಯಾಪ್ತಿಯ ಒಳಗೆ ಸೀಮಿತ.
ಅನುತ್ತಮ ಅಂದರೆ ಉತ್ತಮರಲ್ಲಿ ಉತ್ತಮ. ಅವನಿಂದ ಉತ್ತಮರು ಯಾರೂ ಇಲ್ಲ.ಅದ್ದರಿಂದ ಆತ ಅನುತ್ತಮ.
81)ದುರಾಧರ್ಷಃ
ಧರ್ಷಣೆಗೆ ನಿಲುಕದೇ ಇರುವುದು ದುರಾಧರ್ಷ. ಭಗವಂತನನ್ನು ನಲುಗಿಸುವುದು, ವಿಚಲಿತಗೊಳಿಸುವುದು ಅಸ್ಸಾದ್ಯ. ಆತ ತನ್ನ ಕ್ರಮದಿಂದ, ತನ್ನ ತೀರ್ಮಾನದಿಂದ, ತನ್ನ ಸ್ಥಾನದಿಂದ ವಿಚಲಿತಗೋಳ್ಳಲಾರ. ಅದ್ದರಿಂದ ಭಗವಂತ ದುರಾಧರ್ಷ.
82)ಕೃತಜ್ಞಃ
ಮೇಲಿನ ಕೆಲವು ನಾಮಗಳಲ್ಲಿ ನಾವು ಭಗವಂತನಿಗೆ ಕ್ರಮವಿಲ್ಲ, ಅವನ ಕ್ರಮವನ್ನು ಯಾರೂ ಮೀರಲಾರರು, ಅವನು ಅನುತ್ತಮ, ದುರಾಧರ್ಷ ... ಇತ್ಯಾದಿ ಅರ್ಥಗಳನ್ನು ನೋಡಿದೆವು. ಇಗ ನಮ್ಮಲ್ಲಿ ಒಂದು ಪ್ರಶ್ನೆ ಮೂಡಬಹುದು. ಭಗವಂತ ಏಕೆ ಪಕ್ಷಪಾತಿ? ಒಬ್ಬ ಬಡವ, ಒಬ್ಬ ಶ್ರೀಮಂತ,ಒಬ್ಬರಿಗೆ ಸುಖ, ಇನ್ನೊಬ್ಬರಿಗೆ ಕಷ್ಟ ... ಏಕೆ ಹೀಗೆ? ಈ ಪ್ರಶ್ನೆಗೆ ಉತ್ತರವೇ ಕ್ರತಜ್ಞ ನಾಮದ ಅರ್ಥ.
ಕ್ರತಜ್ಞ ಎಂದರೆ ಏನನ್ನೂ ಮರೆಯದೆ ಮರಳಿ ಕೊಡುವವನು ಎಂದರ್ಥ. ನಾವು ಏನನ್ನು ಮಾಡಿದ್ದೆವೂ, ಆ ಕರ್ಮ ಫಲಕ್ಕನುಗುಣವಾಗಿ ಫಲವನ್ನು ಕೊಡುವ ಭಗವಂತ ಕ್ರತಜ್ಞ
83)ಕೃತಿ
ಭಗವಂತನ ಜ್ಞಾನ, ಭಲ, ಕ್ರೀಯೆ ಎಲ್ಲವೂ ಆತನ ಸ್ವರೂಪ ಆದ್ದರಿಂದ ಆತ ಕೃತಿ
84)ಆತ್ಮವಾನ್
ಆತ್ಮದ ಸ್ಥೂಲವಾದ ಅರ್ಥ ಶರೀರ. ಭಗವಂತನಿಗೆ ಮಣ್ಣು, ನೀರು ಮತ್ತು ಬೆಂಕಿಯಿಂದಾದ, ಒಂದು ದಿನ ಬಿದ್ದು ಹೋಗುವ ಶರೀರ ಅಥವಾ ಆಕಾರವಿಲ್ಲ. ಅವನು ವಿಶ್ವಾಕಾರ. ಆತ ಯಾವ ರೂಪದಲ್ಲಿ ಕೂಡ ಕಾಣಿಸಿಕೊಳ್ಳಬಲ್ಲ. ಜ್ಞಾನ ಆತನ ಸ್ವರೂಪ. ಆತ ಎಲ್ಲಾ ಆತ್ಮರ ತಂದೆ. ಆದ್ದರಿಂದ ಭಗವಂತ ಆತ್ಮವಾನ್.

Sunday, June 20, 2010

Vishnu Sahasranama 74-79

ಈಶ್ವರೋ ವಿಕ್ರಮೀ ಧನ್ವೀ ಮೇಧಾವೀ ವಿಕ್ರಮಃ ಕ್ರಮಃ

74)ಈಶ್ವರೋ

ವಿಷ್ಣು ಸಹಸ್ರನಾಮದಲ್ಲಿ ಕೆಲವೊಂದು ನಾಮಗಳು ಒಂದಕ್ಕಿಂತ ಹೆಚ್ಚು ಭಾರಿ ಪುನರಾವರ್ತನೆ ಆಗಿರುವುದನ್ನು ನಾವು ಕಾಣುತ್ತೇವೆ.ಈಶ್ವರ ಅನ್ನುವ ನಾಮ ಕೂಡ ಎರಡು ಬಾರಿ ಪುನರಾವರ್ತನೆ ಆಗಿದೆ. ವಿಷ್ಣು ಸಹಸ್ರನಾಮದಲ್ಲಿ ಬರುವ ಒಂದೊಂದು ನಾಮಕ್ಕೆ ನೂರು ಅರ್ಥವಿದೆಯಂತೆ. ಒಂದು ವೇಳೆ ಒಂದು ನಾಮ ಎರಡು ಬಾರಿ ಬಂದರೆ, ಆ ನಾಮಕ್ಕೆ ಇನ್ನೂರು ಅರ್ಥಗಳಿವೆ ಎಂದು ತಿಳಿಯಬೇಕಾಗುತ್ತದೆ. ಆದರೆ ಇಷ್ಟೊಂದು ಅರ್ಥವನ್ನು ಕಂಡುಕೊಳ್ಳುವುದು ಸಾಮಾನ್ಯರಿಗೆ ಅಸಾದ್ಯ.
ಇಲ್ಲಿ ಈಶ್ವರ ಎಂದರೆ ಜಗತ್ತನ್ನು ನಿಯಂತ್ರಿಸುವ ಎಲ್ಲಾ ಶಕ್ತಿಗಳ ಈಶ ಎಂದರ್ಥ.
75)ವಿಕ್ರಮೀ
ಈ ನಾಮದ ವಿಶ್ಲೇಷಣೆ ಮಾಡಲು ನಾವು ಭಗವಂತನ ವಾಮನ ಅವತಾರದ ಕಥೆಯನ್ನು ಒಮ್ಮೆ ಮೆಲುಕು ಹಾಕಬೇಕಾಗುತ್ತದೆ. ನಿಮಗೆ ತಿಳಿದಿರುವಂತೆ ವಾಮನ ರೂಪಿ ಭಗವಂತ, ಮಹಾ ದಾನಿ ಭಲಿಚಕ್ರವರ್ತಿಯಲ್ಲಿ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳುತ್ತಾನೆ. ಶುಕ್ರಾಚಾರ್ಯರ ವಿರೋಧವನ್ನು ಲೆಕ್ಕಿಸದೆ ಭಲಿ ವಾಮನನಿಗೆ ದಾನ ಮಾಡಲು ಮುಂದಾಗುತ್ತಾನೆ .
ಆಗ ವಾಮನನು ತನ್ನ ಮೊದಲ ಹೆಜ್ಜೆಯಿಂದ ಭೂಮಿಯನ್ನೂ ಮತ್ತು ಎರಡನೇ ಹೆಜ್ಜೆಯಿಂದ ಆಕಾಶವನ್ನು ಆವರಿಸಿದಾಗ , ಮೂರನೇ ಹೆಜ್ಜೆಗೆ ಭಲಿ ತನ್ನ ತಲೆಯನ್ನು ಅರ್ಪಿಸಿ ಪಾತಳವನ್ನು ಸೇರಿ ಉದ್ದಾರವಾಗುತ್ತಾನೆ. ಈ ಕಾರಣಕ್ಕಾಗಿ ಭಗವಂತನನ್ನು 'ತ್ರಿವಿಕ್ರಮ' ಎನ್ನುತ್ತಾರೆ.
ಈ ಕಥೆಯನ್ನು ನಾವು ಸ್ವಲ್ಪ ಆಳವಾಗಿ ವಿಶ್ಲೇಷಿಸಿದರೆ ಈ ಕೆಳಗಿನಂತೆ ಅರ್ಥೈಸಬಹುದು.
ಸಂಸಾರ ಸಾಗರದಲ್ಲಿ ಮುಳುಗಿರುವ ನಾವೆಲ್ಲರೂ ಒಂದು ರೀತಿಯಲ್ಲಿ ಭಲಿಗಳು. ಭಗವಂತನ ಸಾಕ್ಷಾತ್ಕಾರವಾಗಲು ನಾವೆಲ್ಲರೂ ಮಾನಸಿಕವಾಗಿ, ಆದ್ಯಾತ್ಮಿಕವಾಗಿ ಬಲಿಷ್ಟರಾಗಬೇಕು.
ಉಪಾಸನೆಯಲ್ಲಿ ಪ್ರಮುಖವಾಗಿ ಮೂರೂ ಹೆಜ್ಜೆಗಳಿವೆ. ಮೊದಲನೆಯದು ಭಗವಂತನ ಪುಟ್ಟ (ವಾಮನ) ಮೂರ್ತಿಯನ್ನು ದೇವರು ಎಂದು ಆರಾದಿಸುವುದು. ಎರಡನೆಯದು ಉಪಾಸನೆ ಮಾಡುತ್ತಾ ಮಾಡುತ್ತಾ , ಭಗವಂತ ಕೇವಲ ಮೂರ್ತಿಯಲ್ಲಿ ಅಲ್ಲದೆ, ಇಡೀ ಲೋಕದಲ್ಲಿ ವ್ಯಾಪಿಸಿರುವ ಶಕ್ತಿ ಎಂದು ತಿಳಿಯುವುದು. ಪ್ರಮುಖವಾದ ಮೂರನೇ ಹೆಜ್ಜೆ- ಭಗವಂತ ಸರ್ವಾಂತರ್ಯಾಮಿ, ಆತ ನನ್ನೊಳಗೂ ತುಂಬಿದ್ದಾನೆ ಎಂದು ತಿಳಿದು, ಆ ಪರಶಕ್ತಿಗೆ ತಲೆಬಾಗುವುದು. ಆಗ ನಮಗೆ ನಿಜವಾದ ಭಗವಂತನ ಸಾಕ್ಷಾತ್ಕಾರವಾಗುತ್ತದೆ, ಹಾಗು ಭಗವಂತ ನಮ್ಮನ್ನು ಉದ್ದರಿಸುತ್ತಾನೆ.
ಈ ಮೇಲಿನ ಮೂರು ವಿಕ್ರಮಗಳಿಂದ ನಮ್ಮನ್ನು ಉದ್ದರಿಸುವ ಭಗವಂತ ವಿಕ್ರಮೀ.
76)ಧನ್ವೀ
ಧನ್ವೀ ಅಂದರೆ ಧನುರ್ಧಾರೀ. ಅಂದರೆ ಧನುಸ್ಸನ್ನು ಕೈಯಲ್ಲಿ ಹಿಡಿದಿರುವವನು. ಇಲ್ಲಿ ಧನುಸ್ಸು ದುಷ್ಟ ನಿಗ್ರಹದ ಸಂಕೇತ. ಧರ್ಮದ ಸಂಸ್ಥಾಪನೆಗಾಗಿ ಕೈಯಲ್ಲಿ ಆಯುದ ಹಿಡಿದಿರುವ ಭಗವಂತ ಧನ್ವೀ. ಭಗವಂತನಿಗೆ ಯಾವುದೇ ವಿಶೇಷ ಆಯುದದ ಅಗತ್ಯವಿಲ್ಲ. ಇಲ್ಲಿ ದುಷ್ಕರ್ಮದ ನಾಶಕನಾಗಿರುವ ಭಗವಂತನನ್ನು ಧನ್ವೀ ಎನ್ನುತ್ತಾರೆ.
77)ಮೇಧಾವೀ
ಮೇಧಾ ಅಂದರೆ ಸ್ಮರಣಶಕ್ತಿ. ಯಾವುದನ್ನು ಕೇಳುತ್ತೇವೂ, ಯಾವುದನ್ನೂ ಓದುತ್ತೇವೂ, ಅದನ್ನು ಶಾಶ್ವತವಾಗಿ ಮಸ್ತಕದಲ್ಲಿಟ್ಟುಕೊಳ್ಳುವುದು.
ಮನಸ್ಸು ಬಯಸುತ್ತದೆ, ಬುದ್ದಿ ನಿಶ್ಚಯವಾಗಿ ಗ್ರಹಿಸುತ್ತದೆ, ಚಿತ್ತ ನೆನಪಿಡುತ್ತದೆ.
ಗ್ರಹಿಸಿದ ವಿಷಯವನ್ನು ಶಾಶ್ವತವಾಗಿ ನೆನಪಿನಲ್ಲಿಡುವವರು ಮೇದಾವಿಗಳು.
ಭಗವಂತ ಸ್ವತಃ ಮೇದಾವಿ ಹಾಗು ನಮಗೆ ಚಿತ್ತವನ್ನು ಕರುಣಿಸುವವ.
78)ವಿಕ್ರಮಃ
ವಿಕ್ರಮ ಅಂದರೆ ಕ್ರಮವಿಲ್ಲದವನು!!! ಅಂದರೆ ಭಗವಂತನು ಯಾವುದೇ ಕ್ರಮದ ನಿರ್ಭಂದಕ್ಕೆ ಒಳಗಾಗಿಲ್ಲ. ಅವನು ನಡೆದ ದಾರಿಯಲ್ಲವೂ ನಮಗೆ ಕ್ರಮ.
79)ಕ್ರಮಃ
ಮೇಲೆ ಹೇಳಿದಂತೆ ಭಗವಂತ ವಿಕ್ರಮ, ಆದರೆ ಆತ ನಿರ್ಮಿಸಿರುವ ಈ ಸೃಷ್ಟಿ ಸಂಪೂರ್ಣ ಕ್ರಮಬದ್ದವಾಗಿದೆ. ಅಂದರೆ ಸಂಪೂರ್ಣ ಗಣಿತಬದ್ದವಾಗಿದೆ.
ಪ್ರತಿಯೊಂದು ಗ್ರಹದ ಚಲನೆ ಗಣಿತಬದ್ದವಾಗಿದೆ. ಯಾವಾಗ ಗ್ರಹಣವಾಗಿದೆ, ಯಾವಾಗ ಗ್ರಹಣವಾಗುತ್ತದೆ ಎನ್ನುವುದನ್ನು ಕರಾರುವತ್ತಾಗಿ ಗಣಿತದಿಂದ ತಿಳಿಯಬಹುದು. ಇಂತಹ ಕ್ರಮಬದ್ದವಾದ ಸೃಷ್ಟಿಯ ಕರ್ತನಾದ ಭಗವಂತ ಕ್ರಮಃ

Saturday, June 19, 2010

Vishnu Sahasranama 70-73

ಹಿರಣ್ಯಗರ್ಭೋ ಭೂಗರ್ಭೋ ಮಾಧವೋ ಮಧುಸೂದನಃ

70)ಹಿರಣ್ಯಗರ್ಭೋ
ಇಲ್ಲಿ ಹಿರಣ್ಯ ಅಂದರೆ ಚಿನ್ನ ಅಥವಾ ಬಂಗಾರ ಎನ್ನುವ ಅರ್ಥವನ್ನು ಕೊಡುತ್ತದೆ .
ಈ ಹಿಂದೆ ಬ್ರಹ್ಮಾಂಡವನ್ನು ಕಮಲ ರೂಪದ ಬ್ರಹ್ಮನ ಮೊಟ್ಟೆ ಎಂದು ವರ್ಣಿಸಿರುವುದನ್ನು ನೋಡಿದ್ದೇವೆ. ಈ ಬ್ರಹ್ಮಾಂಡ ಭಗವಂತನ ಉದರದಿಂದ ನಿರ್ಮಾಣವಾಯಿತು ಎನ್ನುವುದನ್ನು "ನಾಭಿ-ಕಮಲ" ರೂಪದಲ್ಲಿ ಕಲ್ಪಿಸಲಾಗಿದೆ.
ಕವಿಯ ಕಲ್ಪನೆಯಂತೆ, ಈ ಬ್ರಹ್ಮಾಂಡವನ್ನು ದೂರದಲ್ಲಿ ನಿಂತು ನೋಡಿದರೆ - ನೂರು ಸೂರ್ಯರು ಒಮ್ಮೆಲೇ ಉದಯಿಸಿದರೆ ಹೇಗೆ ಕಾಣಬಹುದೋ ಹಾಗೆ ಚಿನ್ನದ ಮೊಟ್ಟೆಯಂತೆ ಕಾಣಬಹುದು.
ಇಂತಹ ಅಪೂರ್ವವಾದ ಸೃಷ್ಟಿಯನ್ನು ತನ್ನ ಉದರಲ್ಲಿ ದರಿಸಿರುವವನು ಹಿರಣ್ಯಗರ್ಭ.
71)ಭೂಗರ್ಭೋ
ಇಲ್ಲಿ ಭೂ ಅಂದರೆ ಪ್ರಕೃತಿ ಹಾಗು ಭೂಮಿ ಎನ್ನುವ ಅರ್ಥವನ್ನು ಕೊಡುತ್ತದೆ.
ಈ ಪ್ರಕೃತಿಯನ್ನು ಹಾಗು ಅದರ ಒಂದು ಭಾಗವಾದ ಭೂಮಿಯನ್ನು ತನ್ನ ಒಡಲಲ್ಲಿ ಹೊತ್ತವನು ಭೂಗರ್ಭ. ಭೂಮಿಯ ಗುರುತ್ವಾಕರ್ಷಣ ಶಕ್ತಿಯನ್ನು ಸಂಕರ್ಷಣ ಶಕ್ತಿ ಎನ್ನುತ್ತಾರೆ. ಸಂಕರ್ಷಣ ಆದಿಶೇಷನ ಅನ್ವರ್ಥ ನಾಮ. ಭಗವಂತನ ಸೇವಕನಾದ ಸಂಕರ್ಷಣ ಈ ಭೂಮಿಯನ್ನು ನಿಯಮಬದ್ದವಾಗಿ ಹಿಡಿದಿಟ್ಟು ಕಾಪಾಡುತ್ತಿದ್ದಾನೆ ಆದ್ದರಿಂದ ಈ ಭೂಮಿಯ ಸೃಷ್ಟಿಕರ್ತ ಹಾಗು ಸಂರಕ್ಷಕನಾದ ಭಗವಂತ ಭೂಗರ್ಭ.
72)ಮಾಧವೋ
'ಮಾ' ಅಂದರೆ ಮಾತೆ ಲಕ್ಷ್ಮಿ, ಆದ್ದರಿಂದ ಮಾಧವ ಅಂದರೆ ಲಕ್ಷ್ಮೀಪತಿ ಭಗವಂತ.
ಇನ್ನು 'ಮಾ' ಅಂದರೆ ಜ್ಞಾನ ಕೂಡ ಹೌದು. ಭಗವಂತ ಜ್ಞಾನದ ಒಡೆಯ ಅದ್ದರಿಂದ ಆತ ಮಾದವ.
ಶ್ರೀಕೃಷ್ಣ ಅವತಾರದಲ್ಲಿ ಭಗವಂತ ಮದುವಂಶದಲ್ಲಿ ಹುಟ್ಟಿ ಬಂದದ್ದರಿಂದ ಆತನನ್ನು ಮಾದವ ಎಂದೂ ಕರೆಯುತ್ತಾರೆ.
ವೇದದಲ್ಲಿ ಮಾತೃ ಎನ್ನುವ ಪದವನ್ನು ಮಾತು ಅಥವಾ ವಾಗ್ಮಯ ಎನ್ನುವ ಅರ್ಥದಲ್ಲಿ ಉಪಯೋಗಿಸಿದ್ದಾರೆ. ಏಳು ಮಹಾನ್ ಗ್ರಂಥಗಳಾದ ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ , ರಾಮಾಯಣ, ಮಹಾಭಾರತ ಹಾಗು ಪುರಾಣಗಳನ್ನು ಮಾತೃ ಎನ್ನುತ್ತಾರೆ.
ಅದ್ದರಿಂದ ಸಮಸ್ತ ವೈದಿಕ ವಾಗ್ಮಯ ಪ್ರತಿಪಾದನಾದ ಭಗವಂತ ಮಾದವ.
73)ಮಧುಸೂದನಃ
ಮಧು ಅಂದರೆ ಕಾಮ(Sex), ಬಯಕೆ(Desire), ಆನಂದ(Ultimate bliss) ಎನ್ನುವ ಅನೇಕ ಅರ್ಥವನ್ನು ಕೊಡುತ್ತದೆ.

ಕಾಮ(ಮಧು)ವೇ ಕ್ರೋದ(ಕೈತಪ)ಕ್ಕೆ ಕಾರಣ. ಈ ಮದು-ಕೈತಪರು ನಮ್ಮೊಳಗಿದ್ದು ನಮ್ಮೆಲ್ಲ ಕಷ್ಟ-ಕಾರ್ಪಣ್ಯಕ್ಕೆ ಮೂಲ ಕಾರಣಕರ್ತರಾಗಿದ್ದರೆ. ಈ ಮಧು-ಕೈತಪರಿಂದ ನಮಗೆ ಮುಕ್ತಿ ದೊರೆಯಬೇಕಿದ್ದರೆ ನಾವು ಭಗವಂತನ ಮೊರೆ ಹೋಗಬೇಕು. ಆತನೊಬ್ಬನೇ ಈ ಮಧುವನ್ನು ಸೂದಿಸಬಲ್ಲ (ನಾಶಮಾಡಬಲ್ಲ) . ಆದ್ದರಿಂದ ಭಗವಂತ ಮಧುಸೂದನ.
ಇನ್ನು ಮಧು ಅಂದರೆ ಆನಂದ ಎನ್ನುವ ಅರ್ಥವನ್ನು ವಿಶ್ಲೇಷಿಸಿದಾಗ- ಮಧುಸೂದನ ಎಂದರೆ ಆನಂದ ನಾಶಕ ಎಂದಾಗುತ್ತದೆ!!!! ಇದೇನಿದು -ಆನಂದ ಸ್ವರೂಪನಾದ ಭಗವಂತ ಆನಂದ ನಾಶಕ ಅನ್ನುತ್ತಾರಲ್ಲಪ್ಪಾ ಎಂದು ಗಾಬರಿಯಾಗಬೇಡಿ! ಆತ- ಧರ್ಮ ಮಾರ್ಗವನ್ನು ಬಿಟ್ಟು, ಅದರ್ಮಿಯಾಗಿ, ಮದ(ಆಹಂಕಾರ)ದಿಂದ ಸಾಗುವವರ ಆನಂದವನ್ನು ನಾಶ ಮಾಡಿ, ಸಜ್ಜನರ ಉದ್ದಾರ ಮಾಡುವ ಆನಂದರೂಪಿ ಭಗವಂತ. ಆದ್ದರಿಂದ ಆತ ಮಧುಸೂದನ.

Friday, June 18, 2010

Vishnu Sahasranama 62-69

ಪವಿತ್ರಂ ಮಙ್ಗಲಂ(ಮಂಗಲಂ)ಪರಮ್, ಈಶಾನಃ ಪ್ರಾಣದಃ ಪ್ರಾಣೋ ಜ್ಯೇಷ್ಠಃ ಶ್ರೇಷ್ಠಃ ಪ್ರಜಾಪತಿಃ

62) ಪವಿತ್ರಂ
ಈ ದೇಹದಿಂದ ಭಗವಂತ ಹೊರಟು ಹೋದ ಮೇಲೆ ಈ ದೇಹ ಅಪವಿತ್ರವಾಗುತ್ತದೆ. ಆದ್ದರಿಂದ ಎಲ್ಲವನ್ನು ಪವಿತ್ರಗೊಳಿಸುವ ಶಕ್ತಿಯುಳ್ಳವನು "ಪವಿತ್ರ" . ಆದರೆ ಈ ಬೌದ್ದಿಕ ಶರೀರ ಸಂಪೂರ್ಣ ಪವಿತ್ರವಲ್ಲ. ದೇಹ ಕೆಸರಿನಲ್ಲಿ ಅರಳಿದ ತಾವರೆಯಂತೆ. ಈ ದೇಹದಲ್ಲಿರುವ ಕೆಸರು ಅನೇಕ ! ನಿಜವಾದ ಪಾವಿತ್ರ್ಯತೆ ಸಿಗುವುದು ಈ ದೇಹದಿಂದ ಹೊರಟು ಹೋದ ಮೇಲೆ. ಶಾಶ್ವತವಾದ ಪಾವಿತ್ರ್ಯ ಮೋಕ್ಷದಲ್ಲಿ. ಇಂತಹ ಪಾವಿತ್ರ್ಯವಾದ ಮೋಕ್ಷವನ್ನು ಕರುಣಿಸುವ ಭಗವಂತ "ಪವಿತ್ರಂ"
63) ಮಙ್ಗಲಂ(ಮಂಗಲಂ)ಪರಮ್
ಮಙ್ಗಲಂ ಅಂದರೆ ಕಲ್ಯಾಣ. ಕಲ್ಯಾಣ ಅಂದರೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು ಎಂದರ್ಥ.ಸಾಮಾನ್ಯವಾಗಿ ಮದುವೆಗೆ ಕಲ್ಯಾಣ ಎನ್ನುತ್ತಾರೆ. ಮದುವೆಯ ನಂತರ ಧರಿಸುವ ತಾಳಿಯನ್ನು "ಮಂಗಳ ಸೂತ್ರ" ಎನ್ನುತ್ತಾರೆ. ಆದರೆ ಎಲ್ಲಾ ಮದುವೆಯು ಮಂಗಲವಲ್ಲ !!!
ಯಾವ ವಿವಾಹದಿಂದ ಗಂಡು ಮತ್ತು ಹೆಣ್ಣು ಎತ್ತರಕ್ಕೆ ಏರುತ್ತಾರೋ ಅಂತಹ ಮದುವೆ ಮಾತ್ರ ಕಲ್ಯಾಣ!!!
ನಮ್ಮನ್ನು ಅದಃಪತನಕ್ಕೆ ಒಯ್ಯುವ ಮದುವೆ ಅಮಂಗಲ!!!!
ಜನ-ಸಾಮಾನ್ಯರು ಸಾಮಾನ್ಯವಾಗಿ ಸಾವನ್ನು ಅಮಂಗಲ ಎಂದು ತಿಳಿಯುತ್ತಾರೆ. ಆದರೆ ಮೋಕ್ಷ ಪ್ರಧಾನವಾದ ಸಾವು ಮಂಗಲ. ಆತ್ಮಹತ್ಯೆ ಅಮಂಗಲ.
ಇಹಕರ್ಮ- ಅಂದರೆ ತನ್ನೆಲ್ಲ ಕರ್ಮವನ್ನು ಭಗವಂತನಿಗೆ ಅರ್ಪಿಸುವುದು-ಮಂಗಲ. (ಪಾಂಡವರು ಮಾಡಿದ ಕರ್ಮ); ಪರಕರ್ಮ- ಅಂದರೆ ತನ್ನ ಸ್ವಾರ್ಥಕ್ಕಾಗಿ ಮಾಡುವ ಕರ್ಮ-ಅಮಂಗಲ.
ಕೇವಲ ಮೇಲಕ್ಕೇರುವುದು ಮಂಗಲವಲ್ಲ, ಕೆಳಕ್ಕೆ ಇಳಿಯದ ದಾರಿಯಲ್ಲಿ ಸಾಗುವುದು ಮಂಗಲ-ಅದೇ ಮೋಕ್ಷ.
ಆದ್ದರಿಂದ ಭಗವಂತ ಮಂಗಲ ಮತ್ತು ನಮ್ಮನ್ನು ಮಂಗಲದತ್ತ ನಡೆಸುವವನು- ಅದ್ದರಿಂದ ಆತ ಮಙ್ಗಲಂ ಪರಮ್.
64)ಈಶಾನಃ
ಈಶ ಅಂದರೆ ನಮ್ಮನ್ನು ನಿಯಂತ್ರಿಸುವ ಪರಮ ಶಕ್ತಿಗಳು.
ಈಶಾನಃ ಅಂದರೆ ಈ ಪರಮಶಕ್ತಿಗಳ ಒಡೆಯ.
65) ಪ್ರಾಣದಃ
ಪ್ರಾಣ+ದಃ - ಇಲ್ಲಿ ದಃ ಅನ್ನುವ ಪದಕ್ಕೆ "ಕೊಡುವವನು" ಮತ್ತು "ಕಸಿದುಕೊಳ್ಳುವವನು" ಎನ್ನುವ ತದ್ವಿರುದ್ದವಾದ ಎರಡು ಅರ್ಥವಿದೆ.
ಪ್ರಾಣದಃ ಅಂದರೆ ನಮಗೆ ಈ ದೇಹದಲ್ಲಿ ಪ್ರಾಣಶಕ್ತಿಯನ್ನು ತುಂಬಿ, ಇಂದ್ರಿಯಗಳನ್ನು ಕೊಟ್ಟು , ಬದುಕಿಗೆ ಬೇಕಾದ ಕಲೆಯನ್ನು ದಯಪಾಲಿಸಿ (ಕೊಡುವುದು ); ಕೊನೆಗೆ ಬೌದ್ದಿಕ ಶರೀರವನ್ನು ಕಸಿದುಕೊಂಡು -ಮುಕ್ತಿಯನ್ನು ದಯಪಾಲಿಸುವವನು ಎಂದರ್ಥ.
66) ಪ್ರಾಣೋ
ಪ್ರ+ಆ+ಣ= ಪ್ರಾಣ
ಪ್ರ-ಅಂದರೆ ಪ್ರಕ್ರುಷ್ಟವಾದ,ದುಃಖ ಸ್ಪರ್ಶವಿಲ್ಲದ, ನಿರ್ದಿಷ್ಟವಾದ; ಆ-ಅಂದರೆ ಪರಿಪೂರ್ಣನಾದ; ಣ- ಅಂದರೆ ಅನಂದಮಯನಾದ ಎಂದರ್ಥ. ಆದ್ದರಿಂದ ಭಗವಂತ ಪ್ರಾಣ.
ಇನ್ನು ಆಣ ಅಂದರೆ ವಾಗ್ದೇವಿ ಎಂದರ್ಥ.
ಅದ್ದರಿಂದ ವಾಗ್ದೇವಿಯಲ್ಲಿ ನೆಲೆಸಿ, ಎಲ್ಲಾ ವೇದ ವಾಣಿಗಳಲ್ಲಿ ಸನ್ನಿಹಿತನಾಗಿದ್ದು , ಜಗತ್ತಿನ ಎಲ್ಲಾ ಚೇಷ್ಟೆಗಳನ್ನೂ ನಿಯಂತ್ರಿಸುವ ಭಗವಂತ ಪ್ರಾಣಃ .
67) ಜ್ಯೇಷ್ಠಃ
ಜ್ಯೇಷ್ಠಃ ಅಂದರೆ ಹಿರಿಯ ಎಂದರ್ಥ. ಎಲ್ಲಾ ಪ್ರಾಣ ತತ್ವಗಳನ್ನು ಸೃಷ್ಟಿ ಮಾಡಿ ನಿಯಂತ್ರಿಸುವ ಭಗವಂತ-ಜ್ಯೇಷ್ಟ.
68) ಶ್ರೇಷ್ಠಃ
ಶ್ರೇಷ್ಠತೆ ವಯಸ್ಸಿನಿಂದ ಬರುವುದಲ್ಲ. ಕೆಲವರು ಜ್ಞಾನದಲ್ಲಿ ಶ್ರೇಷ್ಟರು, ಕೆಲವರು ಹಣದಲ್ಲಿ ಶ್ರೇಷ್ಟರು, ಇನ್ನು ಕೆಲವರು ಭಲದಲ್ಲಿ ಶ್ರೇಷ್ಟರು. ಈ ರೀತಿ ಏಲ್ಲಿ ಭಗವಂತನ ವಿಶಿಷ್ಟವಾದ ತೇಜಸ್ಸಿನ ಸನ್ನಿದಾನವಿದೆಯೋ ಅಲ್ಲಿ ಶ್ರೇಷ್ಠತೆ ಇರುತ್ತದೆ. ಇಂತಹ ಶ್ರೇಷ್ಟತೆಯನ್ನು ದಯಪಾಲಿಸುವ ತಂದೆ ಶ್ರೇಷ್ಠಃ
69) ಪ್ರಜಾಪತಿಃ
ಚತುರ್ಮುಖನಿಗೆ ಪ್ರಜಾಪತಿ ಎನ್ನುವ ಹೆಸರಿದೆ. ಅಂತಹ ಚತುರ್ಮುಖನೋಳಗಿದ್ದು ಸಮಸ್ತ ಜೀವಕೋಟಿಯ ಪಾಲನೆ ಮಾಡುವ ಭಗವಂತ ಪ್ರಜಾಪತಿ.

Thursday, June 17, 2010

Vishnu Sahasranama 61

ತ್ರಿಕಕುಬ್ದಾಮ

61) ತ್ರಿಕಕುಬ್ದಾಮ (ಪ್ರಭೂತಸ್ತ್ರಿಕಕುಬ್ಧಾಮ)
ತ್ರಿ+ ಕಕುತ್+ ಧಾಮ
ತ್ರಿ ಅಂದರೆ ಮೂರು,
ಕಕುತ್ ಅಂದರೆ ಶಿಕೆ ಅಥವಾ ತುತ್ತ-ತುದಿ,
ಧಾಮ ಅಂದರೆ ನೆಲೆಸಿರುವವನು.
ತ್ರಿಕಕುಬ್ದಾಮ ಅಂದರೆ ಮೂರು ಶಿಕೆಗಳಲ್ಲಿ ನೆಲೆಸಿರುವವನು.
ಈಗ ನಾವು ಮೂರು ಶಿಕೆಗಳು ಯಾವುದೆಂದು ನೋಡೋಣ.
ಮೂರು ಲೋಕಗಳು - ಭೂಮಿ , ಅಂತರಿಕ್ಷ ಮತ್ತು ಸ್ವರ್ಗ.
ಈ ಮೂರು ಲೋಕಗಳ ತುದಿಯಲ್ಲಿ ಮೂರು ಸ್ಥಾನಗಳು- ಭೂಮಿಯಲ್ಲಿ-ಶ್ವೇತದ್ವೀಪ, ಅಂತರಿಕ್ಷದಲ್ಲಿ-ಅನಂತಾಸನ, ಸ್ವರ್ಗದಲ್ಲಿ-ವೈಕುಂಠ.
ಮೂರು ತೇಜೋಮಯ ಮೂರ್ತಿಗಳು-ಬ್ರಹ್ಮ, ವಿಷ್ಣು, ಮಹೇಶ್ವರ.
ಮೂರು ಅಕ್ಷರಗಳು -ಅ, ಉ, ಮ್ (ಓಂಕಾರ ಪ್ರತಿಪಾದ್ಯ) .
ಈ ಮೇಲಿನ ಮೂರು ಅಕ್ಷರದಿಂದಾದ ಮೂರು ಪದಗಳು ಭೂ: , ಭುವ: ಸ್ವ: (ಭೂರ್ಭುವ: ಸ್ವ: )

ಈ ಪದಗಳಿಂದಾದ ಮೂರು ಪಾದಗಳು- ತತ್ಸರ್ವಿತುರ್ವರೇಣ್ಯಂ, ಭರ್ಗೋದೇವಸ್ಯ ಧೀಮಹಿ, ಧಿಯೋ ಯೋನ: ಪ್ರಚೋದಯಾತ್.
ಮೇಲಿನ ಮೂರು ಪಾದಗಳಿಂದಾದ ಮೂರು ವರ್ಗ (ಸೂಕ್ತಗಳಲ್ಲಿ ಶ್ರೇಷ್ಟವಾದ ಪುರುಷ ಸೂಕ್ತದಲ್ಲಿ ಮೂರು ವರ್ಗಗಳಿವೆ. ಒಂದರಿಂದ-ಐದು ಮೊದಲ ವರ್ಗ, ಆರರಿಂದ-ಹತ್ತು ಎರಡನೇ ವರ್ಗ, ಹನ್ನೊಂದರಿಂದ-ಹದಿನಾರು ಮೂರನೇ ವರ್ಗ)
ಸೂಕ್ತಗಳಿಂದಾದ ಅತ್ತ್ಯಂತ ಶ್ರೇಷ್ಟವಾದ ಮೂರು ವೇದಗಳು ಋಗ್ವೇದ, ಯಜುರ್ವೇದ ಸಾಮವೇದ,
ಅದ್ದರಿಂದ ತ್ರಿಕಕುಬ್ದಾಮ ಅಂದರೆ:
-ಮೂರು ಲೋಕದಲ್ಲಿ ನೆಲೆಸಿರುವವನು.
-ಮೂರು ಲೋಕದಲ್ಲಿರುವ ಮೂರು ನಿತ್ಯ ಸ್ಥಾನದಲ್ಲಿ ನೆಲೆಸಿರುವವನು.
ಅಲ್ಲಿ ನೆಲೆಸಿರುವ ಮೂರು ತೇಜೋಮಯ ಮೂರ್ತಿಗಳಲ್ಲಿ ನೆಲೆಸಿರುವವನು. ಮೂರು ಅಕ್ಷರಗಳಿಂದ ಓಂಕಾರ ಪ್ರತಿಪಾದ್ಯನಾದ ಭಗವಂತ.
-ಮೂರು ವ್ಯಾಹುತಿಗಳಿಂದ ವಾಚ್ಯನಾದವನು.
-ಗಾಯತ್ರಿಯ ಮೂರು ಪಾದಗಳಲ್ಲಿ ವಾಚ್ಯನಾದವನು.
-ಪುರುಷ ಸೂಕ್ತದ ಮೂರು ವರ್ಗದಿಂದ ವಾಚ್ಯನಾದವನು.
-ಮೂರು ವೇದದಿಂದ ವಾಚ್ಯನಾದವನು.
ಒಟ್ಟಾರೆ ತ್ರಿಕಕುಬ್ದಾಮ ಅಂದರೆ ಮೂರು ಲೋಕದಲ್ಲಿ, ತ್ರಿಮೂರ್ತಿ ರೂಪನಾಗಿ, ಸಮಸ್ತ ಶಬ್ದ ಭಂಡಾರ ಮತ್ತು ಸಮಸ್ತ ಶಾಸ್ತ್ರದಿಂದ ವಾಚ್ಯನಾದ ಭಗವಂತ.

Wednesday, June 16, 2010

Vishnu Sahasranama 59-60

ಪ್ರತರ್ದನಃ ಪ್ರಭೂತ ....

59) ಪ್ರತರ್ದನಃ

ಭಾಷೆಯಲ್ಲಿ, ಬರವಣಿಗೆಯಲ್ಲಿ, 'ಸಂಕ್ಷಿಪ್ತ ' (Abbreviation) ಉಪಯೋಗಿಸುವುದು ಮೂಲತಃ ಬಂದಿದ್ದು ಸಂಸ್ಕೃತದಿಂದ. ಸಂಸ್ಕೃತ ಗ್ರಂಥಗಳಲ್ಲಿ ವಿಶೇಷವಾಗಿ, ಪದದ ಸಂಕ್ಷಿಪ್ತ ರೂಪವನ್ನು ಉಪಯೋಗಿಸುತ್ತಾರೆ .
ಪ್ರತರ್ದನ ಎನ್ನುವ ಪದವನ್ನು ಈ ಕೆಳಗಿನಂತೆ ಬಿಡಿಸಬಹುದು.
1) ಪ್ರ+ತರ್ದನ 2) ಪ್ರ+ತರ್ದ+ನಯತಿ


ಪ್ರ+ತರ್ದನ
ಇಲ್ಲಿ 'ಪ್ರ' ಎನ್ನುವುದು ಪ್ರಕ್ರುಷ್ಟರು ಎನ್ನುವ ಪೂರ್ಣ ಪದದ ಸಂಕ್ಷಿಪ್ತ ರೂಪ.
ಪ್ರತರ್ದನಃ ಅಂದರೆ ಪ್ರಕ್ರುಷ್ಟರಿಗೆ ಹಿಂಸೆ ಕೊಡುವ ದುಷ್ಟ ಶಕ್ತಿಯನ್ನು ನಿರ್ಮೂಲ ಮಾಡುವವನು ಎಂದರ್ಥ.

ಪ್ರ+ತರ್ದ+ನಯತಿ
ಇಲ್ಲಿ 'ಪ್ರ' ಎನ್ನುವುದು ಪ್ರಹ್ಲಾದ ಎನ್ನುವ ಪೂರ್ಣ ಪದದ ಸಂಕ್ಷಿಪ್ತ ರೂಪ.
ತರ್ದ ಎಂದರೆ ಹಿಂಸೆ, ನಯತಿ ಎಂದರೆ ಹೋಗಲಾಡಿಸಿದವನು. ಅದ್ದರಿಂದ ಪ್ರತರ್ದನಃ ಎಂದರೆ ಪ್ರಹ್ಲಾದನಿಗೆ ಹಿಂಸೆ ಕೊಟ್ಟಂತಹ ಹಿರಣ್ಯಕಶಿಪುವನ್ನು ಮರ್ದಿಸಿ, ಆತನ ಕಷ್ಟವನ್ನು ಪರಿಹರಿಸಿ, ಲೋಕವನ್ನು ಹಿಂಸೆಯಿಂದ ಪಾರುಮಾಡಿದವನು ಎಂದಾಗುತ್ತದೆ.

60) ಪ್ರಭೂತ
ಭೂಮ ಎಂದರೆ ಪರಿಪೂರ್ಣತೆ. ಪ್ರಭೂತಿ ಎಂದರೆ ಭೂತಿಗಲ್ಲಿ ಪ್ರಕ್ರುಷ್ಟವಾದ ಸ್ಥಿತಿ.
ಪ್ರಭೂತ ಎಂದರೆ ಪರಿಪೂರ್ಣವಾದ ಆನಂದಸ್ವರೂಪನಾದ ಭಗವಂತ.

Tuesday, June 15, 2010

Vishnu Sahasranama 58

ಲೋಹಿತಾಕ್ಷಃ

58) ಲೋಹಿತಾಕ್ಷಃ


ಲೋಕ+ಹಿತ+ಅಕ್ಷ - ಅಂದರೆ ಲೋಕದ ಹಿತಕ್ಕಾಗಿ ಭಕ್ತರ ಮನೋಭಿಲಾಷೆ ಪೂರ್ತಿಗಾಗಿ ತಾವರೆಯಂತಹ ಅರಳುಗಣ್ಣು ಉಳ್ಳವನು ಎಂದರ್ಥ.
ಈ ನಾಮದ ಅರ್ಥವನ್ನು ತಿಳಿಯಬೇಕಾದರೆ ನಾವು ಭಗವಂತ ಕೊಪೋದ್ರಿಕ್ತನಾದ ಕೆಲವು ಘಟನೆಗಳನ್ನು
ನೋಡಬೇಕಾಗುತ್ತದೆ.
ಮಹಾಭಾರತ ಯುದ್ದದಲ್ಲಿ ಅರ್ಜುನ ಭೀಷ್ಮ ಪಿತಾಮಹರ ನಡುವೆ ಯುದ್ದ ಪ್ರಾರಂಭವಾದಾಗ ನಡೆದ ಒಂದು ಘಟನೆಯನ್ನು ನೋಡೋಣ. ಅರ್ಜುನ ತನ್ನನ್ನು ಮುದ್ದಿಸಿ ಆಡಿಸಿ ಬೆಳೆಸಿದ ಪಿತಾಮಹನೊಂದಿಗೆ ಮನಸ್ಸಿಲ್ಲದ ಮನಸ್ಸಿನಿಂದ ಯುದ್ದ ಮಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಸಾರಥಿ ಕೃಷ್ಣ ಕೋಪಗೊಳ್ಳುತ್ತಾನೆ. ಮಹಾಭಾರತ ಯುದ್ದದ ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ,
ಕೋಪಾವೇಶದಿಂದ ಭೀಷ್ಮನನ್ನು ಸಾಯಿಸಲೆಂಬಂತೆ ಚಕ್ರವನ್ನೇ ಹಿಡಿದು ಮುಂದೊತ್ತಿ ಬರುತ್ತಿದ್ದಾನೆ! ಆಗ ಆತನ ಕಣ್ಣು ಕೆಂದಾವರೆ ಹೂವಿನಂತೆ ಕೆಂಪಾಗಿ ಕಾಣುತ್ತಿರುತ್ತದೆ. ಇದನ್ನು ನೋಡಿದ ಬೀಷ್ಮ ಎರಡೂ ಕೈಯನ್ನು ಜೋಡಿಸಿ ಹೀಗೆ ಹೇಳುತ್ತಾನೆ -
" ಓ ಭಗವಂತ; ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಹಾಗೆ ಯುದ್ಧ ಮಾಡುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದ್ದೆ. ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ಆದರೆ ಈಗ ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ಮರೆತಿರುವೆ, ಆದರೆ ನಿನ್ನ ಭಕ್ತನನ್ನು ಮರೆತಿಲ್ಲ ; ನೀನಲ್ಲದೆ ನಮಗೆ ಗತಿ ಇನ್ನ್ಯಾರು ? " ಎನ್ನುತ್ತಾನೆ . ಈ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತನ ಕೋಪ ಮತ್ತು ಅದರ ಹಿಂದಿರುವ ಕರುಣೆ ವ್ಯಕ್ತವಾಗಿದೆ.
ಇದೇ ರೀತಿ ಇನ್ನೊಂದು ಘಟನೆ ನರಸಿಂಹ ಅವತಾರದಲ್ಲಿ ಕಂಡು ಬರುತ್ತದೆ. ಹಿರಣ್ಯಕಷಿಪುವನ್ನು ಕೊಂದು ಆತನ ಕರುಳನ್ನು ಬಗೆದು ಕೊರಳಿಗೆ ಹಾಕಿಕೊಂಡರೂ, ಶಾಂತನಾಗದ ಭಗವಂತನ ಕೋಪೋದ್ರಿಕ್ತ ರೂಪವನ್ನು ಕಂಡು, ದೇವತೆಗಳೆಲ್ಲರೂ ಭಯಗೊಂಡಾಗ, ಐದು ವರ್ಷದ ಪುಟ್ಟ ಬಾಲಕ ಪ್ರಹಲ್ಲಾದನ ಪ್ರಾರ್ಥನೆಗೆ ಮಣಿದು, ಶಾಂತ ಮೂರ್ತಿಯಾಗುತ್ತಾನೆ.
ಮೇಲಿನ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತ ದುಷ್ಟರನ್ನು ತನ್ನ ಕೆಂಗಣ್ಣಿನಿಂದ ನಾಶಮಾಡಿ, ಭಕ್ತರ ಅಭಿಲಾಷೆಯನ್ನು ಪೂರ್ತಿ ಮಾಡುವುದು ಕಂಡುಬರುತ್ತದೆ.
ಇಂತಹ ಅರಳುಗಣ್ಣಿನ ಭಗವಂತ ಲೋಹಿತಾಕ್ಷ !

Monday, June 14, 2010

Vishnu sahasranama 57

ಕೃಷ್ಣೋ..

57) ಕೃಷ್ಣ

ಕೃಷ್ಣ ಎನ್ನುವುದು ಮೇಲ್ನೋಟಕ್ಕೆ (1)ವಾಸುದೇವ ದೇವಕಿಯರಲ್ಲಿ ಹುಟ್ಟಿದ(ಅವತರಿಸಿದ) ಭಗವಂತನ ಹೆಸರು.
ಆದರೆ (2)ಕೃಷ್ಣ ಎನ್ನುವುದು ಭಗವಂತನ ಮೂಲ ರೂಪದ ಹೆಸರೂ ಹೌದು.
ಗರ್ಗಾಚಾರ್ಯರು ತಾಯಿ ಯಶೋದೆಯಲ್ಲಿ ಮಗುವಿನ ಹೆಸರಿಡುವಾಗ ಹೀಗೆ ಹೇಳುತ್ತಾರೆ "ಈ ಮಗುವಿಗೆ ನಾನು ಹೆಸರಿಡುತ್ತಿಲ್ಲ. ಈ ಜಗತ್ತಿನಲ್ಲಿ ಇರುವ ಎಲ್ಲಾ ಹೆಸರೂ ಇವನದೇ, ಇವನಿಗೆ ಇರುವ ಹೆಸರನ್ನೇ ನಿಮಗೆ
ನೆನಪಿಸುತ್ತಿದ್ದೇನೆ. ಈತ ಶ್ಯಾಮ , ಸುಂದರ, ವಾಸುದೇವ, ಶ್ರೀ ಕೃಷ್ಣ " ಎಂದು ಹೇಳಿ ನಾಮಕರಣ ಮಾಡುತ್ತಾರೆ.
(3)ಚತುರ್ವಂಶ ಮೂರ್ತಿಗಳಲ್ಲಿ ಇಪ್ಪತ್ನಾಲ್ಕುನೆ ರೂಪವೂ "ಕೃಷ್ಣ"
(4)ಧರ್ಮ ದೇವತೆಯಲ್ಲಿ ಹುಟ್ಟಿದ ಒಂದು ರೂಪ "ಕೃಷ್ಣ" (ನರ, ನಾರಾಯಣ , ಹರಿ, ಕೃಷ್ಣ)
(5) ಸಹಸ್ರನಾಮದಲ್ಲಿ ಕೂಡ ಭಗವಂತನಿಗೆ ಕೃಷ್ಣ ಎಂದು ಸಂಬೋದಿಸಿದ್ದಾರೆ.
ಮೇಲಿನ ಐದು ಸಂದರ್ಬಗಳಲ್ಲಿ "ಕೃಷ್ಣ" ನಾಮಕನಾದ ಭಗವಂತನನ್ನು ಕಾಣುತ್ತೇವೆ. ಮೂಲತಃ ಕೃಷ್ಣ ಅಂದರೆ ಕಪ್ಪು - ನೀಲ ಮೇಘ ಶ್ಯಾಮ. ಈ ನೀಲ ಕಪ್ಪು ಅಂದದ ಪ್ರತೀಕ ಹಾಗೂ ಜ್ಞಾನದ ಪ್ರತೀಕ ಕೂಡ ಹೌದು.
ದ್ರೌಪದಿ ಆ ಕಾಲದ ಅತ್ಯಂತ ಅಪೂರ್ವ ಸುಂದರಿ. ಅದ್ದರಿಂದ ಆಕೆಯನ್ನು ಕೃಷ್ಣೆ ಎಂದು ಕರೆಯುತ್ತಿದ್ದರು.
ದ್ರೋಣಾಚಾರ್ಯರು ಬಿಳಿ ಗಡ್ಡದ ಶ್ವೇತ ವಸ್ತ್ರಧಾರಿಯಾಗಿದ್ದ ಕಪ್ಪಗಿನ ಆಕರ್ಷಕ ವ್ಯಕ್ತಿ. ಇಲ್ಲಿ ಕಪ್ಪು ಜ್ಞಾನದ ಸಂಕೇತ. ಅತೀ ಕೋಪಬಂದಾಗ ನಾವು ಕೆಂಪಾಗಿ ಕಾಣುತ್ತೇವೆ. ಅದೇ ರೀತಿ ಸಂಪೂರ್ಣ ಜ್ಞಾನಿ ನೀಲವಾಗಿ ಕಾಣುತ್ತಾನೆ. ಅದ್ದರಿಂದ ಪರಿಪೂರ್ಣ ಜ್ಞಾನಿ ಭಗವಂತ ತನ್ನ ಅವತಾರದಲ್ಲಿ ಕಾಣಿಸಿದ್ದು ನೀಲ ಮೇಘ ಶ್ಯಾಮನಾಗಿ. ಇದೇ ರೀತಿಯಲ್ಲಿ ಇನ್ನೂ ಹಲವೂ ರೂಪದಲ್ಲಿ ಕೃಷ್ಣ ಎನ್ನುವ ನಾಮದ ಅರ್ಥವನ್ನು ಹುಡುಕಬಹುದು.
ಕೃಷ್ಣ ಹುಟ್ಟುವ ಮೊದಲು ದೇವಕಿಯ ಗರ್ಭದಲ್ಲಿ ಸಂಕರ್ಷಣ (ಬಲರಾಮ) ಇದ್ದ. ಸಂಕರ್ಷಣನನ್ನು ಸಂಕರ್ಷಿಸಿ ಆನಂತರ ದೇವಕಿಯ ಅಷ್ಟಮ ಗರ್ಭದಲ್ಲಿ ಹುಟ್ಟಿದ ಕಾರಣಕ್ಕೆ ಆತನನ್ನು ಕೃಷ್ಣ ಎನ್ನುತ್ತಾರೆ.
ಆತ ಹುಟ್ಟಿದ ಮೇಲೆ ಮಾಡಿದ ಪ್ರತಿಯೊಂದು ಕೆಲಸವೂ ಕರ್ಷಣವೇ. ಪೂತನಿ, ಶಕಟಾಸುರ, ಕೇಶಿ, ಕಂಸ .. ಹೀಗೆ ದುಷ್ಟ ಶಕ್ತಿಗಳನ್ನೆಲ್ಲವನ್ನು ಕರ್ಷಣೆ ಮಾಡಿದವ ಕೃಷ್ಣ. ಹಾಗೆ ಜ್ಞಾನ ಮೂರ್ತಿಯಾದ ಆತ ಹಕ್ಕಿಗಳು , ಹಸುಗಳು, ಗೋಪಾಲಕರು, ಗೋಪಿಕೆಯರು ಹಾಗು ಯಮುನಾ ನದಿಯನ್ನೂ ಕೂಡ ತನ್ನ ಸೌಂದರ್ಯದಿಂದ ಆಕರ್ಶಿಸಿ ಉತ್ಕರ್ಷಣೆ ಮಾಡಿದವ. ಅದ್ದರಿಂದ ಆತ 'ಕೃಷ್ಣ' . ಅರ್ಜುನನ ರಥದಲ್ಲಿ ನಿಂತು ಹದಿನೆಂಟು ಅಕ್ಷೋಹಿಣಿ ಸೈನ್ಯವನ್ನು ಕರ್ಷಣೆ ಮಾಡಿದ. ಹೀಗೆ ಅಸುರರನ್ನು ನಿಗ್ರಹಿಸಿ ಭೂ ಬಾರವನ್ನು ಕರ್ಷಣೆ ಮಾಡಿ, ಸಜ್ಜನರ ಹಾಗೂ ಧರ್ಮದ ಉದ್ದಾರಕ್ಕಾಗಿ ಅವತರಿಸಿದ ಭಗವಂತ 'ಕೃಷ್ಣ' .
ಇನ್ನು ಕೃಷ್ಣ ಪದವನ್ನು ಒಡೆದರೆ ಕೃಷಿ+ಣ=ಕೃಷ್ಣ
ಕೃಷಿ ಅಂದರೆ ಭೂಮಿ, ಣ ಅಂದರೆ ಭಲ ಅಥವ ಆನಂದ. ಅದ್ದರಿಂದ ಕೃಷ್ಣ ಅಂದರೆ ಧರ್ಮವನ್ನು ಬಲಪಡಿಸಲು ಭೂಮಿಯಲ್ಲಿ ಅವತರಿಸಿದ ಆನಂದಸ್ವರೂಪ ಭಗವಂತ.

Sunday, June 13, 2010

Vishnu Sahasranama 52-56

..ತ್ವಷ್ಟಾ ಸ್ಥವಿಷ್ಠಸ್ಸ್ಥವಿರೋ ಧ್ರುವಃ ಅಗ್ರಾಹ್ಯಃ ಶಾಶ್ವತಃ ...
52) ತ್ವಷ್ಟೃ
ತ್ವಷ್ಟೃ - ಅಂದರೆ ಉಳಿಯಿಂದ ಮರವನ್ನು ಕೆತ್ತುವ ಶಿಲ್ಪಿ ಎನ್ನುವ ಅರ್ಥವನ್ನು ಕೊಡುತ್ತದೆ.
ಈ ಹಿಂದೆ ವಿಶ್ವಕರ್ಮ ನಾಮಕನಾಗಿ ಭಗವಂತನನ್ನು ಶ್ರೇಷ್ಟ ವಿನ್ಯಾಸಕಾರನಾಗಿ ನೋಡಿದ್ದೇವೆ.
ಇಲ್ಲಿ ತ್ವಷ್ಟೃ ಅಂದರೆ ಮಣ್ಣು , ನೀರು ಮತ್ತು ಬೆಂಕಿಯೆಂಬ ಉಳಿಯಿಂದ , ಅದ್ಬುತ ಸೌಂದರ್ಯದಿಂದ ಕೂಡಿದ ಈ ವಿಶ್ವವನ್ನು ಕೆತ್ತಿದ ಅಪೂರ್ವ ಶಿಲ್ಪಿ ಎಂದರ್ಥ.
53) ಸ್ಥವಿಷ್ಠ

ಸ್ಥವಿಷ್ಠ ಅಂದರೆ ಸ್ಥೂಲಕಾಯ ಎನ್ನುವ ಅರ್ಥವನ್ನು ಕೊಡುತ್ತದೆ.
ಭಗವಂತ ವಿವಿದತೆಯಾತ್-ವಿಷ್ಟಥಿ ಅಂದರೆ ಆಕಾಶದಂತೆ ಸ್ಥೂಲನಾಗಿರುವವ ಆದರೆ , ಅನಂತ ರೂಪದಲ್ಲಿ ಅನಂತ ವಸ್ತುವಿನಲ್ಲಿ ಅದ್ವಿತೀಯ , ಅನನ್ಯ , ಅನುಪಮ ರೂಪಕನಾಗಿ ತುಂಬಿರುವವನು. ಈ ಪ್ರಪಂಚದಲ್ಲಿ ಒಂದು ವಸ್ತುವಿನಂತೆ ಇನ್ನೊಂದು ವಸ್ತುವಿಲ್ಲ.
ಭಗವಂತನ ಅದ್ವಿತೀಯ ಅಖಂಡ ವಿನ್ಯಾಸಕ್ಕೆ ಉತ್ತಮ ಉದಾಹರಣೆ ಮನುಷ್ಯನ ಬೆರಳಚ್ಚು (Finger print) ಒಬ್ಬನ ಬೆರಳಚ್ಚು ಇನ್ನೊಬ್ಬನಿಗಿಂತ ಬಿನ್ನ ! ಇದು ಸಾಮಾನ್ಯ ವಿನ್ಯಾಸವಲ್ಲ.
ಈ ರೀತಿ ಅಖಂಡವಾಗಿ ಉಹಿಸಲೂ ಅಸಾಧ್ಯವಾದ ಅದ್ಭುತ ಕಾಯನಾದ ಭಗವಂತ ಸ್ಥವಿಷ್ಠ.
54) ಸ್ಸ್ಥವಿರೋ ಧ್ರುವಃ

ಸ್ಥವಿರೋ ಧ್ರುವ ಅಂದರೆ- ಮೇಲೆ ಹೇಳಿರುವ ಇಷ್ಟೊಂದು ವೈವಿದ್ಯತೆಗಳಿಂದ ಎಲ್ಲಾ ಆಕಾರದಲ್ಲೂ ಇದ್ದು ನಿರ್ವೀಕಾರನಾಗಿರುವ ಭಗವಂತ.
55) ಅಗ್ರಾಹ್ಯಃ
ಭಗವಂತ ಅನಂತ ವಿಶ್ವದಲ್ಲಿ ಅನಂತ ರೂಪದಲ್ಲಿ ತುಂಬಿದ್ದರೂ ಕೂಡ ಆತ ನಿರ್ವೀಕಾರ!
ಇದನ್ನು ಹೇಗೆ ಊಹಿಸುವುದು ಅನ್ನುತೀರ ? ಇಲ್ಲ , ಮನುಷ್ಯನ ಮನಸ್ಸಿನಿಂದ ಅವನನ್ನು ಸಂಪೂರ್ಣ ಗ್ರಹಿಸಲು ಅಸಾದ್ಯ. ಏಕೆಂದರೆ ಆತ ಅಗ್ರಾಹ್ಯ - ಗ್ರಹಿಸಲು ಅಸಾದ್ಯವಾದವನು.
ಇಷ್ಟೇ ಅಲ್ಲ ಅವನು ಅಗ್ರ-ಅಹ್ಯ ಅಂದರೆ , ಎಲ್ಲಕ್ಕಿಂತ ಮೊದಲು ಇದ್ದವನು , ಎಲ್ಲಕ್ಕಿಂತ ಮೊದಲು ತಿಳಿಯಬೇಕಾದವನು ಮತ್ತು ಎಲ್ಲಕ್ಕಿಂತ ಶ್ರೇಷ್ಟನಾದವನು ಅದ್ದರಿಂದ ಅವನು ಅಗ್ರಾಹ್ಯ !!
56 ) ಶಾಶ್ವತಃ
ಭಗವಂತ ಎಂದೂ ಯಾವುದೇ ಬದಲಾವಣೆಗೆ ಒಳಪಡದೆ, ಎಂದೆಂದೂ ಶಾಶ್ವತವಾಗಿರುವವನು.
ಅದ್ದರಿಂದ ಅವನು ಶಾಶ್ವತ.

Vishnu Sahasranama 51

ಮನುಃ
51) ಮನುಃ
ಮನ್ವಂತರಗಳನ್ನು ಮನು ಎಂದೂ ಕರೆಯುತ್ತಾರೆ.
ಮನುಗಳು (ಮನ್ವಂತರಗಳು) ಹದಿನಾಲ್ಕು. ಅವುಗಳೆಂದರೆ:
1 ) ಸ್ವಾಯಂಭುವ ಮನು, 2) ಸ್ವರೋಚಿಶ ಮನು, 3) ಉತ್ತಮ ಮನು , 4) ತಪಾಸ ಮನು (ಗಜೇಂದ್ರ ಮೋಕ್ಷ) 5) ರೈವತ ಮನು, 6) ಚಕ್ಷುಶ ಮನು , 7) ವೈವಸ್ವತ ಮನು (ಈಗ ನಡೆಯುತ್ತಿರುವುದು) ,8) ಸಾವರಣಿ ಮನು , 9) ದಕ್ಷ ಸಾವರಣಿ ಮನು , 10) ಬ್ರಹ್ಮ ಸಾವರಣಿ ಮನು, 11) ಧರ್ಮ ಸಾವರಣಿ ಮನು ,12) ಮೇರು ಸಾವರಣಿ ಮನು, 13) ದೇವ ಸಾವರಣಿ ಮನು ,14) ಇಂದ್ರ ಸಾವರಣಿ ಮನು.

1 ಮಾನವ ವರ್ಷ= ದೇವತೆಗಳ 1 ದಿನ (ಉತ್ತರಾಯಣ ಹಗಲು ಮತ್ತು ದಕ್ಷಿಣಾಯಣ ರಾತ್ರಿ).

360 ಮಾನವ ವರ್ಷ= ದೇವತೆಗಳ 360 ದಿನ= 1 ದೇವ ವರ್ಷ.
1200 ದೇವ ವರ್ಷ= 4,32,000 ಮಾನವ ವರ್ಷ= 1 ಕಲಿಯುಗದ ಅವಧಿ.
2400 ದೇವ ವರ್ಷ= 8,64,000 ಮಾನವ ವರ್ಷ- 1 ದ್ವಾಪರ ಯುಗದ ಅವಧಿ.
3600 ದೇವ ವರ್ಷ= 12,96,000 ಮಾನವ ವರ್ಷ-1 ತ್ರೇತಾ ಯುಗದ ಅವಧಿ.
4800 ದೇವ ವರ್ಷ= 17,28,000 ಮಾನವ ವರ್ಷ-1 ಕೃತ ಯುಗದ ಅವಧಿ.
12,000 ದೇವ ವರ್ಷ= 43,20,000 ಮಾನವ ವರ್ಷ= 1 ಮಹಾಯುಗ.
ಸುಮಾರು 71 ಮಹಾಯುಗ = 1 `ಮನ್ವಂತರ' ಒಂದು ಮನುವಿನ ವರ್ಷ.
1000 ಮಹಾಯುಗ = 1 ಕಲ್ಪ = ಒಂದು ಬ್ರಹ್ಮ ದಿನ (ಹಗಲು)
720 ಕಲ್ಪ = 1 ಬ್ರಹ್ಮ ವರ್ಷ
ಒಂದು ಬ್ರಹ್ಮನ ಅವದಿ 100 ಬ್ರಹ್ಮ ವರ್ಷ = 4,320,000 x 1000 x 720 x 100 = 31,104,0000000000 ಮಾನವ ವರ್ಷ !!

ಯಾವುದರ ಮೂಲಕ ಮನನ ಮಾಡುತ್ತೇವೋ ಅವನು ಮನು (ಮನನ ಮಾಡುವುದು ಮಂತ್ರಗಳ ಮೂಲಕ )


ಅದ್ದರಿಂದ ಮನು ಅಂದರೆ ಮನುವಿನೊಳಗಿದ್ದು (ಮಂತ್ರಗಳಲ್ಲಿ ಮತ್ತು ಮನ್ವಂತರಗಳಲ್ಲಿ ಇದ್ದು) , ಮನುವಾಗಿ , ಎಲ್ಲವನ್ನೂ ಬಲ್ಲ ಭಗವಂತ!

Saturday, June 12, 2010

Vishnu Sahasranama 50

ವಿಶ್ವಕರ್ಮಾ

50)ವಿಶ್ವಕರ್ಮಾ...
ವಿಶ್ವಕರ್ಮ ಎಂದರೆ ಈ ವಿಶ್ವದ ವಿನ್ಯಾಸಕಾರ ಎಂದರ್ಥ.
ಪ್ರಾಚೀನ ಗ್ರಂಥಗಳಲ್ಲಿ ಈ ವಿಶ್ವವನ್ನು ಐವತೈದು ಅವಯವಗಳಿರುವ ,ಹಾಗು ಪ್ರವೃತ್ತಿ ಮತ್ತು ನಿವೃತ್ತಿ ಎಂಬ ಎರಡು ಹಣ್ಣುಗಳಿರುವ ಒಂದು ಮರವನ್ನಾಗಿ ವರ್ಣಿಸಿದ್ದಾರೆ.
ಇಲ್ಲಿ ಪ್ರವೃತ್ತಿ ಎಂದರೆ ನಮಗೆ ಬೆನ್ನು ಹಾಕಿ ನಿಂತಿರುವ ಬೌದ್ಧಿಕ ಸುಖದ ಬೆನ್ನು ಹತ್ತುವ ಕರ್ಮ ಜೀವಿ, ಹಾಗು
ನಿವೃತ್ತಿ ಎಂದರೆ ಬೌದ್ಧಿಕ ಸುಖಕ್ಕೆ ಬೆನ್ನು ಹಾಕಿ ಮೊಕ್ಷದತ್ತ ಪ್ರಯಾಣಿಸುತ್ತಿರುವವ ಎಂದರ್ಥ.


ಬನ್ನಿ.... ಭಗವಂತನ ಈ ಅಪೂರ್ವ ವಿನ್ಯಾಸದ ಹಿಂದಿರುವ ಐವತೈದು ಪ್ರಮುಖ ಅಂಗಗಳನ್ನು ಮರದ ಉದಾಹರಣೆಯೊಂದಿಗೆ ನೋಡೋಣ.


1 ) ಏಕಾಯನಹಃ - ಈ ವಿಶ್ವಕ್ಕೆ ಮೂಲ-ಪ್ರಕೃತಿ. ಇದನ್ನೇ ಇಲ್ಲಿ ಮರವೆಂದು ಕರೆದಿರುವುದು.
2-3 ) ವಿಫಲಹಃ -ಮೇಲೆ ಹೇಳಿರುವ ಪ್ರವೃತ್ತಿ ಮತ್ತು ನಿವೃತ್ತಿ ಈ ಮರದಲ್ಲಿರುವ ಎರಡು ಹಣ್ಣುಗಳು.
4 -6 ) ತ್ರಿಮೂಲಹಃ -ಸತ್ವ , ರಜಸ್ಸು ಮತ್ತು ತಮಸ್ಸು ಎಂಬ -ತ್ರಿಮೂಲಗಳು.
7-10 ) ಚತುರಸಹಃ -ಧರ್ಮ , ಅರ್ಥ , ಕಾಮ , ಮತ್ತು ಮೋಕ್ಷವೆಂಬ ನಾಲ್ಕು ರಸಗಳು.
11-15 ) ಪಂಚಶಿಖಃ -ಮಣ್ಣು , ನೀರು , ಬೆಂಕಿ , ಗಾಳಿ ಮತ್ತು ಆಕಾಶವೆಂಬ ಪಂಚಭೂತಗಳು. (ಅಥವಾ-ಶಬ್ದ , ಸ್ಪರ್ಶ ,ರೂಪ , ರಸ ಮತ್ತು ಗಂಧ)
16-21 ) ಷಡಾತ್ಮ - ಆರು ಸ್ವಭಾವಗಳಾದ ಮೋಹ , ಶೋಕ ,ಕ್ಷುತ್ (ಹಸಿವು), ಪಿಪಾಸು(ಬಾಯಾರಿಕೆ) , ಜರ(ಅಜ್ಞಾನ) ಮತ್ತು ವ್ಯಾಧಿ, ಹಾಗು ಆರು ಬೆಳವಣಿಗೆಯ ಹಂತಗಳಾದ- ಅಸ್ತಿ(ಗರ್ಭ ಪ್ರವೇಶಿಸುವ ಹಂತ ), ಜಾಯತೆ (ಹುಟ್ಟುವ ಹಂತ), ವರ್ಧತೆ (ಬೆಳವಣಿಗೆಯ ಹಂತ) , ವಿಪರಿಣಮತೆ( ದೇಹದ ಬದಲಾವಣೆಯ ಹಂತ) ಅಪಕ್ಷೀಯತೆ(ಮುದಿತನ) ಮತ್ತು ಕೊನೆಯದಾಗಿ ನಷ್ಯತೆ -ಇದು ಷಡಾತ್ಮ.
22-28) ಸಪ್ತತ್ವಕ್ -ಏಳು ತೊಗಟೆಗಳಾದ ತ್ವಕ್ (ಚರ್ಮದ ಹೊರ ಪದರು), ಚರ್ಮ(ಒಳಚರ್ಮ), ಮಾಂಸ , ರಕ್ತ , ಮೇದಸ್ಸು ,ಮಜ್ಜ ಮತ್ತು ಅಸ್ತಿ.
29-36) ಅಷ್ಟವಿಟಪಹಃ - ಎಂಟು ಬಗೆಯ ಜೀವ-ಜಾತಗಳು (ಉದಾಹರಣೆಗೆ- ದೇವತೆಗಳು, ರಾಕ್ಷಸರು,ಮನುಷ್ಯರು, ಧಾನವರು.. ಇತ್ಯಾದಿ)
37-45 ) ನವಾಕ್ಷಹಃ -ಒಂಬತ್ತು ಪೊಟರೆಗಳಾದ - ನವದ್ವಾರಗಳು (ಕಣ್ಣು, ಕಿವಿ , ಮೂಗು , ಬಾಯಿ ,ಮಲ-ಮೂತ್ರ ದ್ವಾರ)
45-55) ದಶಸ್ಚದಹಃ -ಹತ್ತು ಎಲೆಗಳು- ಐದು ಜ್ಞಾನೇಂದ್ರಿಯ ಮತ್ತು ಐದು ಕರ್ಮೇಂದ್ರಿಯಗಳು.

ಇಂತಹ ವಾಸ್ತುಶಿಲ್ಪದ ಈ ವಿಶಿಷ್ಟವಾದ ವಿಶ್ವವನ್ನು ವಿನ್ಯಾಸಗೊಳಿಸಿರುವ ಭಗವಂತ ವಿಶ್ವಕರ್ಮ!!

ಇನ್ನು ವಿಶ್ವ ಅನ್ನುವ ಶಬ್ದಕ್ಕೆ 'ಎಲ್ಲಾ' ಎನ್ನುವ ಅರ್ಥವಿದೆ. ಅದ್ದರಿಂದ ವಿಶ್ವಕರ್ಮ ಎಂದರೆ ಸರ್ವ-ಕರ್ಮಗಳ ನಿಯಾಮಕ ಭಗವಂತ.


ಪುರಾಣದಲ್ಲಿ ಕಾಣುವ ದೇವ ಶಿಲ್ಪಿ- ವಿಶ್ವಕರ್ಮ. ದೇವಸ್ಥಾನ ಮತ್ತು ಮನೆಯ ವಾಸ್ತು ವಿನ್ಯಾಸವನ್ನು ದೇವಶಿಲ್ಪಿಯ ಒಳಗೆ ನಿಂತು ನಮಗೆ ಕರುಣಿಸಿದ ಭಗವಂತ ವಿಶ್ವಕರ್ಮ.

Vishnu Sahasranamam 48-49

ಪದ್ಮನಾಭೋಮರಪ್ರಭುಃ

48)ಪದ್ಮನಾಭ
ತಾವರೆರೂಪದ ಹದಿನಾಲ್ಕು ಲೋಕಗಳುಳ್ಳ ಈ ಬ್ರಹ್ಮಾಂಡ ಯಾರ ನಾಭಿಯಿಂದ ಸೃಷ್ಟಿಯಾಗಿದೆಯೋ , ಅವನು ಪದ್ಮನಾಭ. ಈ ಸೃಷ್ಟಿಯ ಕಾರಣಪುರುಷ.
49)ಅಮರಪ್ರಭುಃ
"ಮರರು" ಅಂದರೆ ಮರಣ ಹೊಂದುವವರು.
"ಅಮರರು" ಅಂದರೆ ಮರಣವಿಲ್ಲದವರು ಎಂದರ್ಥ.
ಮರಣ ಕೇವಲ ಬೌದ್ಧಿಕ ಶರೀರಕ್ಕೆ ಹೊರತು ಸೂಕ್ಷ್ಮ ಶರೀರಕ್ಕಲ್ಲ. ಮುಕ್ತಿ ಪಡೆದ ಎಲ್ಲಾ ಜೀವರು ಅಮರರು.
ಬ್ರಹ್ಮಾದಿ-ದೇವತೆಗಳು ಅಮೃತಪಾನದಿಂದ ಅಮರರೆನಿಸಿದ್ದರೂ ಕೂಡ , ಅವರಿಗೂ ಹಲವು ಕಲ್ಪಗಳ ನಂತರ ಮರಣ-ಮೋಕ್ಷವಿದೆ . ಆದರೆ ಬ್ರಹ್ಮಾದಿ-ದೇವತೆಗಳ ಆಯಸ್ಸು ಧೀರ್ಘವಾದ್ದರಿಂದ ಅವರನ್ನು ಅಮರರು ಎನ್ನುತ್ತಾರೆ.
ಇಲ್ಲಿ ಅಮರಪ್ರಭು ಎಂದರೆ- ಮುಕ್ತಿ ಪಡೆದ ಜೀವ ಹಾಗು ಬ್ರಹ್ಮಾದಿ-ದೇವತೆಗಳ ಒಡೆಯ(ಪ್ರಭು) ಎಂದರ್ಥ.

Friday, June 11, 2010

Vishnu Sahasranama 47

ಹೃಷೀಕೇಶಃ

47) ಹೃಷೀಕೇಶಃ
ಭಗವಂತನನ್ನು ಹುಡುಕುತ್ತಾ ಹೋದರೆ, ಆತ ಕ್ಷಿತಿಜದಂತೆ ದೂರ ದೂರ ಹೋಗುತ್ತಾನೆ. ಅದ್ದರಿಂದ ಅವನನ್ನು ಎಲ್ಲೆಲ್ಲೋ ಹುಡುಕುವ ಬದಲು ನಿಂತಲ್ಲೇ ನಿಂತು ನಿನ್ನೊಳಗೆ ಹುಡುಕು. ನಿನ್ನ ಹೃತ್ಕಮಲದಲ್ಲೇ ಅವನಿದ್ದಾನೆ!!!
ಹೃಷೀಕಗಳಿಗೆ ಈಶ ಹೃಷೀಕೇಶ-ಹೃಷೀಕ ಅಂದರೆ ಇಂದ್ರಿಯಗಳು. ಆತ ಇಂದ್ರಿಯಗಳ ಸ್ವಾಮಿ. ಆತನನ್ನು ಇಂದ್ರಿಯದಿಂದ ನೋಡದೆ, ಇಂದ್ರಿಯದಲ್ಲಿ ನೋಡು !!
ಉಪನಿಷತ್ತಿನಲ್ಲಿ ಹೇಳುವಂತೆ- ನಮಗೆ ಪ್ರತಿಯೊಂದು ಇಂದ್ರಿಯಗಳನ್ನು ದಯಪಾಲಿಸಿ , ಅದರಲ್ಲಿ ನಿಂತು ನೆಡೆಸುವವನು ಹೃಷೀಕಗಳ ಈಶನಾದ ಹೃಷೀಕೇಶ.
ಕೇಶ ಅನ್ನುವ ಶಬ್ದಕ್ಕೆ ಸೂರ್ಯಕಿರಣ ಎಂಬ ಅರ್ಥವನ್ನು "ಕೇಶವ" ಎಂಬಲ್ಲಿ ವಿಶ್ಲೇಷಿಸಿದ್ದೇವೆ.
ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆ, ನಮ್ಮ ದೇಹದಲ್ಲಿ ಏಳು ಶಕ್ತಿ ಚಕ್ರಗಳಿವೆ(ಸಹಸ್ರಾರ, ಆಜ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾಧಿಸ್ಟಾನ ಮತ್ತು ಮೂಲಾಧಾರ-Pineal Gland,Pituitary Gland,Thyroid and parathyroid,Adrenal Glands,Pancreas & Gonads). ಅದೇ ರೀತಿ ಅಗ್ನಿಯಲ್ಲಿ ಕೂಡ ಏಳು ಬಣ್ಣವಿದೆ. ನಮ್ಮ ದೇಹದಲ್ಲಿರುವ ಏಳು ಶಕ್ತಿ ಕೇಂದ್ರಗಳಿಂದ ಹೊರಹೊಮ್ಮುವ ಏಳು ಭಾವನೆಗಳನ್ನು ಅಗ್ನಿಯ ಏಳು ಬಣ್ಣಗಳ ಮೂಲಕ ಸೂರ್ಯಕಿರಣದ ಜೊತೆಗೆ ಸಮ್ಮಿಲನ ಮಾಡುವ ಕ್ರೀಯೆಯನ್ನು "ಹೋಮ" ಎನ್ನುತ್ತಾರೆ (ಅದ್ದರಿಂದ ಭಗವಂತನಿಗೆ ಸಲ್ಲಬೇಕಾದ ಯಾವುದೇ ಹೋಮವನ್ನು ರಾತ್ರಿ ಮಾಡುವುದಿಲ್ಲ).
ಈ ಎಲ್ಲಾ ಏಳು ವರ್ಣದಲ್ಲಿ ತುಂಬಿ ಬದುಕಿಗೆ ಹರ್ಷವನ್ನು ಕೊಡತಕ್ಕಂತ ಭಗವಂತ-ಹೃಷೀಕೇಶ.

Thursday, June 10, 2010

Vishnu Sahasranama 43 to 46

ಧಾತಾ ವಿಧಾತಾ ಧಾತುರುತ್ತಮಃ,ಅಪ್ರಮೇಯೋ..

43) ಧಾತಾ-
ಧಾತಾ ಅನ್ನುವ ಭಗವಂತನ ನಾಮ ಈ ಕೆಳಗಿನ ಅರ್ಥವನ್ನು ಕೊಡುತ್ತದೆ-
ಅ) ಇಡೀ ಜಗತ್ತನ್ನು ಧಾರಣೆ ಮಾಡುವ ಮತ್ತು ಪೋಷಣೆ ಮಾಡುವ ಶಕ್ತಿ ಉಳ್ಳವನು.
ಆ) ಎಲ್ಲರಿಗೂ ಏನು ಬೇಕೂ ಅದನ್ನು ಕೊಟ್ಟವನು.
ಇ)ಎಲ್ಲಾ ನಾಮವನ್ನು ಧರಿಸಿದವ (ಎಲ್ಲಾ ದೇವತೆಗಳ ಹೆಸರೂ ಅವನ ಹೆಸರು!) ಮತ್ತು ಧಾನ ಮಾಡಿದವನು.
44) ವಿಧಾತಾ-
ಸಂಸಾರ ಅವಸ್ತೆಯಲ್ಲಿ ಮಾತ್ರ ಅಲ್ಲ -ವಿಶಿಷ್ಟ ಅವಸ್ಥೆಯಲ್ಲಿಯೂ ಭಗವಂತ ಧಾತಾ ಅದ್ದರಿಂದ ಆತ ವಿಧಾತಾ.
45) ಧಾತುರುತ್ತಮಃ
ಧಾತುಹು ಎಂದರೆ ಚತುರ್ಮುಖ, ಧಾತುರುತ್ತಮಃ ಅಂದರೆ ಚತುರ್ಮುಖ ಬ್ರಹ್ಮನಿಗಿಂತ ಉತ್ತಮನಾಗಿರುವವನು ಎಂದರ್ಥ.
ಆತ ತ್ರಿಧಾತು-ಮೂರನ್ನು ಧರಿಸಿರುವವನು -ಮೂರು ವೇದಗಳನ್ನು, ಮೂರು ಕಾಲ ಮತ್ತು ಮೂರು ಲೋಕವನ್ನು ಧರಿಸಿರುವ ಎಲ್ಲರಿಗಿಂತ ಶ್ರೇಷ್ಟವಾಗಿರುವ ಸರ್ವಾಧಾರನಾದ ಭಗವಂತ.
46)ಅಪ್ರಮೇಯೋ-

ಅಪ್ರಮೇಯ ಎಂದರೆ ಕೈಗೆಟುಕದ, ನಮ್ಮ ಬುದ್ದಿಯಿಂದ ಅಳೆಯಲು ಅಸಾಧ್ಯವಾದ, ಆದರೂ ತಿಳಿಯಲು ಸಾದ್ಯವಾದವ ಎಂದರ್ಥ !!!!
ಉದಾಹರಣೆಗೆ - ಸಮುದ್ರದ ನೀರು ಸಂಪೂರ್ಣ ನಮ್ಮ ಕೈಗೆಟಕದು. ಆದರೆ ನಮ್ಮಿಂದಾದಷ್ಟು ನಾವು ತಂದು ಮನೆಯಲ್ಲಿ ಶೇಖರಿಸಿಡಬಹುದು ಮತ್ತು ತಿಳಿಯಬಹುದು.
ಒಂದು ಚಮಚ ಸಮುದ್ರದ ನೀರಿನ ರುಚಿ ಉಳಿದ ನೀರಿನ ರುಚಿಗಿಂತ ಬಿನ್ನ ಅಲ್ಲ. ಭಗವಂತ ಕೂಡ ಸಮುದ್ರದ ನೀರಿನಂತೆ ಅದ್ದರಿಂದ ಆತ ಅಪ್ರಮೇಯ!

Wednesday, June 9, 2010

Vishnu Sahasranama 40-42

ಪುಷ್ಕರಾಕ್ಷೋ ಮಹಾಸ್ವನಃ ಅನಾದಿನಿಧನೋ....

40)ಪುಷ್ಕರಾಕ್ಷೋ
ಪುಷ್ಕರ ಅಂದರೆ ಕಮಲ, ಅಕ್ಷ ಅಂದರೆ ಕಣ್ಣು.
ಪುಷ್ಕರಾಕ್ಷ ಅಂದರೆ ನೀರನ್ನು ಹೀರುವ ಬಳ್ಳಿಯಲ್ಲಿ ಈಗಷ್ಟೇ ಅರಳಿದ ಕಮಲದಂತೆ ಅರಳುಗಣ್ಣು ಉಳ್ಳವನು.
'ಅರಳುಗಣ್ಣು' ಅಂದರೆ ಆನಂದಮಯ ವ್ಯಕ್ತಿತ್ವ ಎಂದರ್ಥ- ಭಗವಂತ ಅನಂದಮಯಪೂರ್ಣ.
ಕಣ್ಣು ಅರಳುವುದು ಆನಂದದ ಜೊತೆಗೆ ಕಾರುಣ್ಯದ ಸಂಕೇತ ಕೂಡ-ಭಗವಂತ ಕಾರುಣ್ಯಮೂರ್ತಿ.
ಪುಷ್ಟಿಕರ ನೋಟ ಉಳ್ಳವನು. ಅಂದರೆ ನಮ್ಮನ್ನು ಸದಾ ರಕ್ಷಿಸುವ ಕರುಣಾದೃಷ್ಟಿ ಉಳ್ಳವನು ಎಂಬುವುದು ಇನ್ನೊಂದು ಅರ್ಥ.
ಪುಷ್ಕರ ಅಂದರೆ ವೇದಗಳಲ್ಲಿ ಹೇಳುವಂತೆ ಯಾವುದರಲ್ಲಿ ಇಡೀ ಪ್ರಪಂಚ ಹುದುಗಿದೆಯೋ ಅದು - "ಹುಟ್ಟದವನ ಹೊಕ್ಕುಳಲ್ಲಿ ಹುಟ್ಟಿತ್ತು"
ಹೊಕ್ಕುಳಲ್ಲಿ ಹುಟ್ಟಿದ್ದು ತಾವರೆರೂಪದ ಬ್ರಹ್ಮಾಂಡ (ಬ್ರಹ್ಮನ ಮೊಟ್ಟೆ). 14 ಎಸಳುಗಳುಳ್ಳ ತಾವರೆ ಅಂದರೆ ಹದಿನಾಲ್ಕು ಲೋಕಗಳುಳ್ಳ ಬ್ರಹ್ಮಾಂಡ. ಆದ್ದರಿಂದ ಭಗವಂತ ಪುಷ್ಕರದಲ್ಲಿ ತುಂಬಿರುವ ಅಕ್ಷ -ಪುಷ್ಕರಾಕ್ಷ .
41 )ಮಹಾಸ್ವನಃ
ಮಹಾ ಅಂದರೆ ಮಹತ್ತಾದ. ಸ್ವನ ಅಂದರೆ ನಾದ.
ಎಲ್ಲಕ್ಕಿಂತ ಮಹತ್ತಾದ ನಾದವಾದ ವೇದವನ್ನು ಸೃಷ್ಟಿ ಮಾಡಿದವನು ಮಹಾಸ್ವನ.
ಮಹಾ+ಅಸು+ಅನ=ಮಹಾಸ್ವನ.
ಅಸು ಅಂದರೆ 'ಇಂದ್ರಿಯ' , ಮಹಾ-ಅಸು ಅಂದರೆ 'ಅತ್ಯಂತ ಮುಖ್ಯ ಇಂದ್ರಿಯ' ,
ಅನ ಅಂದರೆ 'ಚಲನೆ'
ದೇಹದಲ್ಲಿ ಇರುವ ಎಲ್ಲಾ ಇಂದ್ರಿಯಗಳಲ್ಲಿ ಉಸಿರು (ಪ್ರಾಣ) ಅತ್ಯಂತ ಮುಖ್ಯ ಇಂದ್ರಿಯ.
ಅದ್ದರಿಂದ ಅಸುಗಳಲ್ಲಿ ಮಹಾ ಅಸು-ಉಸಿರು (ಮುಖ್ಯಪ್ರಾಣ).
ಈ ಮುಖ್ಯಪ್ರಾಣನಿಗೂ ಕೂಡ ಚಲನೆ ಕೊಟ್ಟವನು-ಮಹಾಸ್ವನ.
42)ಅನಾದಿನಿಧನಃ
ಆದಿ-ಅಂತ ಇಲ್ಲದವನು , ಹುಟ್ಟು-ಸಾವು ಇಲ್ಲದವನು.
ಪ್ರಾಣ(ಅನ) ನಲ್ಲಿ ಇದ್ದು, ಸೃಷ್ಟಿ-ಸಂಹಾರಕ್ಕೆ ಕಾರಣನಾದವನು- ಅನಾದಿನಿಧನಃ

Tuesday, June 8, 2010

Vishnu Sahasranama 38-39


ಶಂಭುರಾದಿತ್ಯಃ

38)ಶಂಭುಃ
ಶಂ-ಭವತಿ ->ಆನಂದ ರೂಪ,ಶಂ-ಭವತಿ ಅನೇನ ->ಆನಂದ ಕೊಡುವವನು.
(ಶಂ-ಅಂದರೆ ಆನಂದ - ಉದಾಹರಣೆಗೆ : ಹರಿಃ ಓಮ್ ಶಂ ನೋ ಮಿತ್ರಃ ಶಂ ವರುಣಃ ಶಂ ನೋ ಭವತ್ವರ್ಯಮಾ ಶಂ ನ ಇಂದ್ರೋ ಬೃಹಸ್ಪತಿಃ ಶಂ ನೋ ವಿಷ್ಣುರುರುಕ್ರಮಃ)
ಯಾರು ಸ್ವಯಂ ಆನಂದಮಯನೋ , ಯಾರು ಎಲ್ಲರಿಗೂ ಆನಂದವನ್ನು ಕೊಡಬಲ್ಲನೂ ಅವನು ಶಂಭು.ಎಲ್ಲಾ ಶಾಸ್ತ್ರಗಳು ಭಗವಂತನನ್ನು ಆನಂದಮಯನೆಂದು ಹೇಳುತ್ತವೆ. ಆದ್ದರಿಂದ ಭಗವಂತ ಶಂಭು.
39)ಆದಿತ್ಯಃ
ಆದಿತ್ಯ ಅಂದರೆ ಅದಿತಿಯ ಮಗ ಎಂಬುದು ಒಂದು ಅರ್ಥ.
ಅದಿತಿ ಕಶ್ಯಪ ಮಹರ್ಷಿಯ ಹೆಂಡತಿ ಹಾಗು ದೇವತೆಗಳ ತಾಯಿ. ಅದಿತಿಗೆ ಹನ್ನೆರಡು ಮಂದಿ ಮಕ್ಕಳು ಹಾಗು ಅವರನ್ನು ದ್ವಾದಶಾದಿತ್ಯರು ಎಂದು ಕರೆಯುತ್ತಾರೆ -
ವಿವಸ್ವಾನ್ ,ಆರ್ಯಮಾನ್ ,ಪೂಷನ್ ,ತ್ವಷ್ಟೃ , ಸವಿತೃ , ಭಗ ,ಧಾತ, ವಿದಾತ, ವರುಣ , ಮಿತ್ರ ,ಶಕ್ರ, ಉರುಕ್ರಮ -ಇವರೇ ಆ ಹನ್ನೆರಡು ಮಂದಿ ಆದಿತ್ಯರು ಈ ಹನ್ನೆರಡು ದೇವತೆಗಳೇ ವರ್ಷದ ಹನ್ನೆರಡು ಮಾಸದ ದೇವತೆಗಳು.
ಇವರಲ್ಲಿ ಒಬ್ಬ ಸೂರ್ಯ ,ಒಬ್ಬ ವರುಣ , ಮತ್ತೊಬ್ಬ ಮಿತ್ರ ,ಮತ್ತೊಬ್ಬ ಇಂದ್ರ , ಹಾಗೇ ಕೊನೇ ಮಗನೇ ವಿಷ್ಣು -ವಾಮನ ರೂಪಿ ಭಗವಂತ.
ಅವನು ಎಲ್ಲರಿಗಿಂತ ಕೊನೆಗೆ ಹುಟ್ಟಿದರೂ, ಆತ ಆದಿಯಲ್ಲಿ ಇದ್ದವನು . ಆದ್ದರಿಂದ ಆತ ಆದಿತ್ಯಃ
ಆದಿ+ತಿ+ಯ -ಆದಿಯಲ್ಲಿ ಜ್ಞಾನಾನಂದ ಸ್ವರೂಪನಾಗಿದ್ದವ,ಎಲ್ಲಕ್ಕೂ ಕಾರಣಕರ್ತ.
ಸೂರ್ಯ ಮಂಡಲದಲ್ಲಿ (ಆದಿತ್ಯನಲ್ಲಿ) ಸನ್ನಿಹಿತನಾಗಿರುವ ಭಗವಂತ -ಆದಿತ್ಯಃ

Monday, June 7, 2010

Vishnu Sahasranama 37

ಸ್ವಯಂಭೂಃ
37) ಸ್ವಯಂಭೂಃ
ಸ್ವಯಂಭೂಃ ಅಂದರೆ ತಾನೇ ತಾನಾಗಿ ಪೂರ್ಣವಾಗಿರುವವನು, ತನ್ನಿಂದ ತಾನೆ ಆವಿರ್ಭೂಥನಾಗುವವನು.
ನಮ್ಮ ಪೂರ್ಣತೆ ಇನ್ನೊಬ್ಬರು ಕೊಟ್ಟರೆ ಮಾತ್ರ, ಆದರೆ ಭಗವಂತ ಸ್ವಯಂಪೂರ್ಣ.
ಭಗವಂತ ಅವತರಿಸಲು ಯಾರು ಕಾರಣ ?
ಅವನು ಹುಟ್ಟಿಬರುವುದಕ್ಕೆ ಯಾರೂ ಕಾರಣರಲ್ಲ , ಆತನು ಸ್ವಯಂಭೂಃ , ಅಂದರೆ ತಾನೇ ತಾನಾಗಿ ಹುಟ್ಟಿ ಬರುವವನು. ಭಕ್ತರ ಬಯಕೆ ಈಡೇರಿಸಲು ಸ್ವಯಂಇಚ್ಛೆಯಿಂದ ಅವತರಿಸಿ ಬರುತ್ತಾನೆ.
ಭಗವಂತ ಜ್ಞಾನದಿಂದ-ಜ್ಞಾನದಂತೆ,ದೀಪದಿಂದ-ದೀಪದಂತೆ. ಒಂದು ದೀಪದಿಂದ ಇನ್ನೊಂದು ದೀಪ ಹಚ್ಚಿದರೆ ಮೂಲ ದೀಪದ ಪ್ರಕಾಶ ಕಡಿಮೆ ಆಗುವದಿಲ್ಲ .ಭಗವಂತ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಅಭಿವ್ಯಕ್ತ ಆಗುತ್ತಾ ಹೋಗುತ್ತಾನೆ, ಆದರೆ ಮೂಲವೂ ಪೂರ್ಣ , ಮೂಲದಿಂದ ಬಂದ ಅವತಾರವೂ ಪೂರ್ಣ.
ಭಗವಂತ ಅವತಾರಕ್ಕೆ ಮೊದಲೂ ಪೂರ್ಣ, ಅವತಾರದಲ್ಲೂ ಪೂರ್ಣ, ಅವತಾರದ ನಂತರ ಮತ್ತೆ ಹೋಗಿ ಪೂರ್ಣತೆಯಲ್ಲೇ ಉಳಿಯುವವನು. ಅದ್ದರಿಂದ ಆತ ಸ್ವಯಂಭೂಃ !

Sunday, June 6, 2010

Vishnu Sahasranama 30-36

ನಿಧಿರವ್ಯಯ-ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ
30)ನಿಧಿರವ್ಯಯ
ಸ್ಥಾಣುರ್ಭೂತಾದಿರ್ನಿಧಿರವ್ಯಯಃ (ನಿಧಿರವ್ಯಯ)
ನಿಧಿ+ಅವ್ಯಯಃ -> ನಿಧಿರವ್ಯಯ
ನಿಧಿ ಅಂದರೆ ಕೊಪ್ಪರಿಗೆ (ಹೂತಿಟ್ಟ ಸಂಪತ್ತು), ಭಗವಂತನ ಅರಿವೇ ಅತೀ ದೊಡ್ಡ ಕರಗದ-ಅಳಿಯದ (ಅವ್ಯಯ) ಸಂಪತ್ತು. ನಿಗೂಢವಾದ ಹೃದಯ ಗುಹೆಯೊಳಗೆ ಅಡಗಿರುವ (ಹೃತ್ಕಮಲ ಮದ್ಯ ನಿವಾಸಿ).
ಅಪೂರ್ವ, ಅಮೂಲ್ಯವಾದ ನಿಧಿ.
ಅವನು ಅವಿ ಅಂದರೆ - ಅವತಿ ಅಂದರೆ ರಕ್ಷಕ. ಹೃದಯ ಗುಹೆಯಲ್ಲಿ ಅಡಗಿದ್ದು, ನಮ್ಮ ನಿರಂತರ ರಕ್ಷಣೆ ಮಾಡುವವನು; ಅಯಃ ಅಂದರೆ ಎಲ್ಲಾ ಕಡೆ ಇರುವವನು; ನಮ್ಮ ಕ್ಷೇಮಕ್ಕೊಸ್ಕರ, ನಮ್ಮ ರಕ್ಷಣೆಗೋಸ್ಕರ, ನಮ್ಮಲ್ಲಿ ಅಡಗಿ ಕುಳಿತಿರುವ, ಹಾಗು ಎಲ್ಲಾ ಕಡೆ ಇರುವ ಅಪೂರ್ವ ನಿಧಿ- ನಿಧಿರವ್ಯಯ.

31 )ಸಂಭವೋ
ಸಂಭವಃ ಅಂದರೆ ಭಕ್ತರು ಕರೆದಾಗ ತಾನೇ ತಾನಾಗಿ ಸಂಭವಿಸುವವನು (ಭೂಮಿಗೆ ಇಳಿದು ಬರುವವನು). ಜಗತ್ತಿನ ಸೃಷ್ಟಿಗೆ ಕಾರಣನಾದವನು ಹಾಗು ಜಗತ್ತಿನ ಪಾಲನೆಗೊಸ್ಕರ ತಾನೇ ತಾನಾಗಿ ಅವತರಿಸುವವನು.
ಸಮೀಚೀನಃ ಭವಃ - ಶ್ರೇಷ್ಟವಾದ ಉನ್ನತಿ-ಮುಕ್ತಿ ಯಾರಿಂದ ಸಿಗುತ್ತದೋ ಅವನು ಸಂಭವ
32 )ಭಾವನೋ
ಭಾವನ್-ನಯತೀತಿ- ಭಾವನಃ
ಒಬ್ಬೊಬ್ಬರೊಳಗಿದ್ದು ಅವರ ಭಾವನೆಗಳನ್ನು ನಿಯಂತ್ರಿಸುವ ಶಕ್ತಿ ಭಾವನಃ
ಭಾವಂ+ನಯತಿ-ಭಾವನಃ (ಆನಂದ);ಭಾವಂ+ಅಪನಯತಿ-ಭಾವನಃ(ದುಃಖ) - ನಮ್ಮ ಸುಖ-ದುಃಖಕ್ಕೆ ಕಾರಣನಾದವನು ಭಾವನಃ .

33 )ಭರ್ತಾ
ಭರ್ತಾ ಅಂದರೆ ಎಲ್ಲವನ್ನೂ ಹೊತ್ತವನು. ಇಡೀ ವಿಶ್ವವನ್ನು ಧರಿಸಿದವನು.
34 )ಪ್ರಭವಃ
ಪ್ರ - ಎಲ್ಲಕ್ಕಿಂತ ಪ್ರಕೃಷ್ಟನಾಗಿರುವ ಭಗವಂತ; ವಿ-ಎಲ್ಲಕ್ಕಿಂತ ವಿಶಿಷ್ಟನಾಗಿರುವ ಭಗವಂತ ; ಯಃ- ಜ್ಞಾನ ಸ್ವರೂಪನಾದ ಭಗವಂತ .
ಯಾರು ಎಲ್ಲಕ್ಕಿಂತ ದೊಡ್ಡವನೂ, ಯಾರಿಂದ ಎಲ್ಲರೂ ಎತ್ತರಕ್ಕೆ ಏರಲು ಸಾಧ್ಯವೂ ಅವನು ಪ್ರಭವಃ .
35-36 )ಪ್ರಭುರೀಶ್ವರಃ
ಭಗವಂತ ಎಲ್ಲರ ಪ್ರಭು.
ಈಶರು-ಅಂದರೆ ನಮ್ಮ ದೇಹ ಹಾಗು ಪ್ರಪಂಚಕ್ಕೆ ಸಂಬದ್ದಪಟ್ಟ ಅಭಿಮಾನಿ ದೇವತೆಗಳು.
ಉದಾಹರಣೆಗೆ: ಶನಿ-ಪೃಥ್ವಿಯ ಅಭಿಮಾನಿ ದೇವತೆ; ಬುಧ-ನೀರಿನ ಅಭಿಮಾನಿ ದೇವತೆ; ಗಣಪತಿ-ಆಕಾಶದ ಅಭಿಮಾನಿ ದೇವತೆ;
ಸೂರ್ಯ- ಕಣ್ಣಿನ ಅಭಿಮಾನಿ ದೇವತೆ; ಚಂದ್ರ- ಕಿವಿಯ ಅಭಿಮಾನಿ ದೇವತೆ; ವರುಣ-ನಾಲಗೆಯ ಅಭಿಮಾನಿ ದೇವತೆ; ಅಗ್ನಿ-ಮಾತಿನ ಅಭಿಮಾನಿ ದೇವತೆ; ಇಂದ್ರ-ಕೈಯ ಅಭಿಮಾನಿ ದೇವತೆ; ಯಜ್ಞ- ಕಾಲಿನ ಅಭಿಮಾನಿ ದೇವತೆ;
ಅನಿರುದ್ದ , ಬೃಹಸ್ಪತಿ , ವರುಣ , ಮಿತ್ರ , ಇಂದ್ರ , ಕಾಮ , ಗರುಡ , ಶೇಷ , ರುದ್ರ , ವಾಯು - ಮನಸ್ಸಿನ ಅಭಿಮಾನಿ ದೇವತೆಗಳು ;
ಶ್ರದ್ಧೆಯ ದೇವತೆ- ಸರಸ್ವತಿ ; ಹೀಗೆ ಬೇರೆ ಬೇರೆ ದೇವತೆಗಳ ಸಮುದಾಯವಿದೆ. ಈ ದೇವತೆಗಳ ಸಮೂಹ ನಮ್ಮ ದೇಹದಲ್ಲಿರುವ ಹದಿನೈದು ಬೇಲಿಗಳನ್ನು ನಿಯಂತ್ರಿಸುವ ಈಶರು. ಈ ಎಲ್ಲಾ ದೇವತೆಗಳು ಅಖಂಡವಾದ ಭಗವಂತನ ನೀತಿಗೆ ಬದ್ದರಾಗಿ ಕೆಲಸ ಮಾಡುತ್ತಿರುತ್ತಾರೆ.
ಈ ಎಲ್ಲಾ ಈಶರಿಗೂ ವರನಾದವ, ಶ್ರೇಷ್ಟನಾದವ , ಈ ದೇಹದಲ್ಲಿರುವ ಸರ್ವ-ನಿಯಾಮಕನಾದ ಭಗವಂತ ಈಶ್ವರ-ಪ್ರಭುರೀಶ್ವರ.

Saturday, June 5, 2010

Vishnu Sahasranamam 25 to 29


ಸರ್ವಃ ಶರ್ವಃ ಶಿವಃ ಸ್ಥಾಣುರ್ಭೂತಾದಿ

25>ಸರ್ವಃ
ವಿಶ್ವಂ ಮತ್ತು ಸರ್ವ- ಸಮಾನಾರ್ಥಕವಾದ ನಾಮಗಳು .
ಭಗವಂತ ಸರ್ವ ಅಂದರೆ -ಸರ್ವಸಮರ್ಥ ;ಸರ್ವಗತ ; ಸರ್ವಗುಣ ಪೂರ್ಣ.
ಸರ್ವ ಅಂದರೆ ಎಲ್ಲವನ್ನು ತಿಳಿದವನು , ಎಲ್ಲೆಡೆ ತುಂಬಿರುವವನು ,ಎಲ್ಲಾ ಕಾಲದಲ್ಲೂ ಇರುವವನು , ಎಲ್ಲಕ್ಕೂ ಕಾರಣನಾದವನು, ಪರಿಪೂರ್ಣನಾದವನು.
26> ಶರ್ವಃ
ಶರ್ವ ಅಂದರೆ ಸಮಸ್ತ ಜಗತ್ತನ್ನು ಸಂಹಾರ ಮಾಡುವವನು (ಆದ್ದರಿಂದ ಸಂಹಾರ ಶಕ್ತಿ- ಶಿವನನ್ನೂ ಶರ್ವ ಎಂದು ಕರೆಯುತ್ತಾರೆ) .
ಶರ್ವ ಅಂದರೆ ದುರ್ಜನರಿಗೆ, ಪಾಪಿಗಳಿಗೆ ದುಃಖವನ್ನು ಕೊಡುವವನು!
27> ಶಿವಃ
ಶ ಅಂದರೆ ಸುಖ ; ಶಿವ ಅಂದರೆ ಜ್ಞಾನಾನಂದ ಸ್ವರೂಪ, ಪರಮಮಂಗಳ ಸ್ವರೂಪ.
28 >ಸ್ಥಾಣು
ಸ್ಥಾಣು ಅಂದರೆ ಚಲಿಸದ. ಭಗವಂತ ಸರ್ವಗತ ಅದ್ದರಿಂದ ಆತ ಸ್ಥಾಣು.
ಆತ ಚಲಿಸದೆ ಮಲಗಿದ್ದರೂ, ಎಲ್ಲಾ ಕಡೆ ತಲುಪಬಲ್ಲ. ಏಕೆಂದರೆ ಬಿಂಬ ರೂಪವಾಗಿ ಪ್ರತಿಯೊಂದರಲ್ಲೂ ಭಗವಂತ ಇದ್ದಾನೆ. ಆತ ಆಕಾಶಕ್ಕಿಂತ ದೊಡ್ಡವ , ಪರಮಾಣುಗಿಂತ ಚಿಕ್ಕವ! (it moves and it moves not!!! ಚಲಿಸಿದಂತೆ ಕಾಣುವ ಚಲಿಸದೆ ಇರುವ ಸ್ವರೂಪ)
29>ಭೂತಾದಿ
(ಸ್ಥಾಣುರ್ಭೂತಾದಿ)
ಭೂತಾದಿ ಅಂದರೆ ಎಲ್ಲಾ ಭೂತಗಳ ಆದಿ. ಎಲ್ಲಾ ಜೀವಗಳ, ಎಲ್ಲಾ ಜಡಗಳ ಆದಿ.
ಎಲ್ಲಾ ಚರಾಚರಾತ್ಮಕವಾದ, ಚೇತನಾಚೇತನಾತ್ಮಕವಾದ ಪ್ರಪಂಚಕ್ಕೆ ಆದಿ ಕಾರಣನಾದವ ಭೂತದಿ.
ಅಷ್ಟೇ ಅಲ್ಲ ... ಈ ಎಲ್ಲಾ ಭೂತಗಳನ್ನ ತನ್ನಲ್ಲಿರಿಸಿಕೊಂಡು ಪಾಲನೆ ಮಾಡುವವನು,ಕೊನೆಗೆ ಸಂಹಾರ ಮಾಡುವವನು.
ಆದ್ದರಿಂದ ಸಮಸ್ತ ಚರಾಚರಾತ್ಮಕವಾದ, ಚೇತನಾಚೇತನಾತ್ಮಕವಾದ ಪ್ರಪಂಚದ ಸೃಷ್ಟಿ-ಸ್ತಿತಿ- ಸಂಹಾರಕ್ಕೆ ಕಾರಣನಾದವನು ಭೂತಾದಿ.
ಭೂತರು ಅಂದರೆ ಮುಕ್ತರು-ಮುಕ್ತರಿಗೆ ಮುಕ್ತಿಯನ್ನು ಕರುಣಿಸುವವನು ಭೂತಾದಿ.

Vishnu Sahasranamam 24

ಪುರುಷೋತ್ತಮಃ

24 >ಪುರುಷೋತ್ತಮಃ
ಪುರುಷೋತ್ತಮ ಎನ್ನುವ ನಾಮದ ಅರ್ಥವನ್ನು ಭಗವದ್ಗೀತೆಯಲ್ಲಿ ಕಾಣಬಹುದು.
ಪುರುಷೋತ್ತಮ ಎನ್ನುವ ನಾಮವನ್ನು ಮೂರು-ನಾಲ್ಕು ಬಗೆಯಿಂದ ಪ್ರಯೋಗಿಸುತ್ತಾರೆ.
ಉತ್ತಮ ಪುರುಷ ; ಮಹಾ ಪುರುಷ ; ಪರಮ ಪುರುಷ ,ಪುರುಷೋತ್ತಮ -ಎಲ್ಲವೂ ಸುಮಾರಾಗಿ ಒಂದೇ ಅರ್ಥವನ್ನು ಕೊಡುತ್ತವೆ.
ಉತ್ತಮ ಪುರುಷ ಅಂದರೆ-ಪುರುಷರಲ್ಲಿ ಉತ್ತಮ.
ಕ್ಷರ ಪುರುಷ->ಅಕ್ಷರ ಪುರುಷ->ಪುರುಷೋತ್ತಮ.
ಕ್ಷರ ಪುರುಷ ಅಂದರೆ- ಕ್ಷರವಾದ ಪುರದಲ್ಲಿ ಇರುವ ಎಲ್ಲಾ ಜೀವರು (ನಾಶವಾಗುವ ಶರೀರ ಉಳ್ಳವರು).
ಹದಿನೈದು ಬೇಲಿಯಿಂದ ಬದ್ದನಾದ ಶರೀರದಲ್ಲಿರುವ ಜೀವ->ಕ್ಷರ-ಪುರುಷ.
ಹದಿನೈದು ಬೇಲಿ:
1 >ಶ್ರದ್ದೆಯ ಬೇಲಿ: ಇದರಲ್ಲಿ ಎರಡು ವಿಧ
೧) ಜೀವ ಸ್ವರೂಪಭೂತವಾದ ಬೇಲಿ (ಕಿತ್ತೆಸೆಯಲು ಆಗದ ಬೇಲಿ)- ಜೀವ ಸ್ವಭಾವ ಶ್ರದ್ದೆ
೨)ಕಿತ್ತೆಸೆಯಬೇಕಾದ ಬೇಲಿ-ಮನೆತನ , ಕುಟುಂಬ , ಬೆಳೆದ ವಾತಾವರಣದ ಪ್ರಭಾವದಿಂದ ಬಂದ ಶ್ರದ್ದೆ. ಪರಿಸರದ ಪ್ರಭಾವ, ಮನೆತನದ ಅನುವಂಷಿಕ (ಜೀನ್ಸ್) ಪ್ರಭಾವದಿಂದ ಬಂದ ಶ್ರೆದ್ದೆ ಯನ್ನು ಮೀರಿನಿಂತು ನೋಡಿದಾಗ ಮಾತ್ರ ನಿಜವಾದ ಶ್ರೆದ್ದೆ ಅಂದರೆ ಏನು ಅಂತ ಅರ್ಥವಾಗುತ್ತದೆ.
2 -6 > ಪಂಚಭೂತಗಳ ಬೇಲಿ : ಮಣ್ಣು-ನೀರು( ಅನ್ನಮಯ ಕೋಶ) ಬೆಂಕಿ-ಗಾಳಿ-ಆಕಾಶ(ಪ್ರಾಣಮಯ ಕೋಶ)
7 > ಇಂದ್ರಿಯಗಳ ಬೇಲಿ: ಐದು ಜ್ಞಾನೇಂದ್ರಿಯಗಳು ಐದು ಕರ್ಮೇಂದ್ರಿಯಗಳು (ಕೆಟ್ಟದ್ದನ್ನು ಮಾಡುವ ).
8 > ಅಂತಃಕರಣದ ಬೇಲಿ: ಮನಸ್ಸು (ಕೆಟ್ಟದ್ದನ್ನು ಯೋಚಿಸುವ)
9 > ಅನ್ನದ ಬೇಲಿ: ಆಹಾರ
10 > ವೀರ್ಯದ ಬೇಲಿ: ಶಕ್ತಿ
11-13 > ತಪಃ - ಮಂತ್ರಹ: - ಕರ್ಮಃ
೧>ಹಾಗಾಗಬೇಕು ಹೀಗಾಗಬೇಕು ಅನ್ನುವ ಆಲೋಚನೆ (ತಿರುಕನ ಕನಸಿನಂತೆ)-ತಪಃ .
೨>ತನ್ನ ಕನಸನ್ನು ನನಸು ಮಾಡಲು ಆಡುವ ಮಾತುಗಾರಿಕೆ - ಮಂತ್ರಹ: .
೩>ಮತ್ತು ಅದನ್ನು ಸಾಧಿಸಲು ಮಾಡುವ ಕರ್ಮ - ಕರ್ಮಃ .
14 > ಲೋಕಗಳು : ಸ್ತಿರ-ಚರ ಸೊತ್ತುಗಳು (ನಾನು ಮಾಡಿದ್ದು , ನನ್ನದು ಅನ್ನುವ ಸೊತ್ತುಗಳು)
15 > ನಾಮದ ಬೇಲಿ : Name and fame , ಕೀರ್ತಿ.


ಈ ಮೇಲಿನ ನಾಶವಾಗತಕ್ಕಂತಹ ಹದಿನೈದು ಬೇಲಿ ಒಳಗೆ ಸಿಕ್ಕಿ ಹಾಕಿಕೊಂಡಿರುವುದೇ
ಹದಿನಾರನೇ ಜೀವ(16) . ಜೀವಿಗೆ ಈ ಮೇಲಿನ ಬೇಲಿ ಎನ್ನುವ ಅಂಗಿ ಹಾಕಿ ಈ ಪ್ರಪಂಚಕ್ಕೆ ಕಳಿಸಿರುವ ಚಿತ್ತ್ ಪ್ರಕೃತಿ(17)- ಲಕ್ಷ್ಮಿ-ಅಕ್ಷರಪುರುಷಳು. ಈ ಮೇಲಿನ ಕ್ಷರ-ಅಕ್ಷರಗಳಿಗಿಂತ ಅತೀತನಾದ ,ಸಮತೀತ ಕ್ಷರಅಕ್ಷರನಾದ ಭಗವಂತ ಪುರುಷೋತ್ತಮ(18). ಮೇಲಿನ ಬೇಲಿಯಿಂದ ಜೀವಿಯನ್ನು ಬಿಡಿಸಿ ಮುಕ್ತಿಯನ್ನು ಕರುಣಿಸುವವನು ಪುರುಷೋತ್ತಮ!

Friday, June 4, 2010

Vishnu Sahasranamam 23

ಕೇಶವ

23>ಕೇಶವ ಅಂದರೆ :-ಅತ್ಯಂತ ಸುಂದರವಾದ ಕೂದಲು ಉಳ್ಳವನು ಎಂದರ್ಥ. ಇದು ಭಗವಂತನ ಕೃಷ್ಣಾವತಾರದಲ್ಲಿ ಬಂದ ಹೆಸರು. ಕೃಷ್ಣಾವತಾರದಲ್ಲಿ ಕೃಷ್ಣ ತನ್ನ ಸುಂದರವಾದ ಗುಂಗುರು ಕೂದಲಿನ ಸೌಂದರ್ಯದಿಂದ ಎಲ್ಲರನ್ನು ಆಕರ್ಷಿಸುತ್ತಿದ್ದ. ಗಂಡಸರು , ಹೆಂಗಸರು , ಗೋವುಗಳು ಎಲ್ಲರೂ ಕೃಷ್ಣನಿಂದ ಆಕರ್ಷಣೆಗೆ ಒಳಗಾಗುತ್ತಿದ್ದರು .

-ಕೇಶದಿಂದ ಬಂದವ ಕೇಶವ (ಕೃಷ್ಣಾವತಾರ )

-ಕೇಶಿಯನ್ನು ಕೊಂದವ ಕೇಶವ (ಕೇಶಿ ಕಂಸನ ಧೂತ - ಕೃಷ್ಣನನ್ನು ಕೊಲ್ಲಲು ಕಂಸ ಕೇಶಿಯನ್ನು , ಕುದುರೆ ರೂಪದಲ್ಲಿ ಬೃಂದಾವನಕ್ಕೆ ಕಳುಹಿಸಿಕೊಟ್ಟಿದ್ದ . ಆತನನ್ನು ಕೃಷ್ಣ ಸಂಹಾರ ಮಾಡಿದ್ದ).

-ಕೇಶಿ ಎನ್ನುವ ಧೂತನನ್ನು ಹೊಂದಿದವನನ್ನು (ಕಂಸನನ್ನು) ಕೊಂದವ ಕೇಶವ.

- ಕಾ+ಈಶ+ವ =>ಕಾ ಎಂದರೆ ಸೃಷ್ಟಿಗೆ ಕಾರಣವಾಗಿರುವ ಚತುರ್ಮುಖ ಬ್ರಹ್ಮ ; ಈಶ ಎಂದರೆ ಸಂಹಾರಕ್ಕೆ ಕಾರಣವಾಗಿರುವ ಶಂಕರ; ಕೇಶವ ಅಂದರೆ ಸೃಷ್ಟಿ-ಸಂಹಾರಕ್ಕೆ ಕಾರಣವಾಗಿರುವ ಬ್ರಹ್ಮಶಕ್ತಿ ಮತ್ತು ಶಿವಶಕ್ತಿಯನ್ನು ನಿಯಂತ್ರಿಸುವ ಪರಶಕ್ತಿ.

ಕೇಶ ಅಂದರೆ ಸೂರ್ಯಮಂಡಲದಿಂದ ಭೂಮಿಗೆ ಹರಿದುಬರುವ ಕಿರಣ;

-ಸೌರ ಮಂಡಲದಲ್ಲಿ ನಿಂತು , ಸೌರ ಶಕ್ತಿಯಿಂದ ಈ ಜಗತ್ತನ್ನು ಬೆಳಗಿಸುವ , ಗಾಯತ್ರಿ ಸ್ವರೂಪ ಭಗವಂತ-ಕೇಶವ.

-ಕೇಶವ ಅಂದರೆ ನೀರಿನಲ್ಲಿ ಚಲಿಸುವ ಭಗವಂತ

-ಜ್ಞಾನಾನಂದಗಳ ಒಡೆಯ ಕೇಶವ ... ಇತ್ಯಾದಿ ಇತ್ಯಾದಿ....

Thursday, June 3, 2010

Vishnu Sahasranamam 22

ಶ್ರೀಮಾನ್

22)ಶ್ರೀಮಾನ್
-ಭಗವಂತ ಶ್ರೀಮಂತ ! ; ೧> ಇಡೀ ವಿಶ್ವದ ಒಡೆತನ ಇರುವವನು ಅದ್ದರಿಂದ ಆತ ಶ್ರೀಮಾನ್.
-ಶ್ರೀಹಿ ಅಂದರೆ ವೇದ ವಾಙ್ಮಯ; ೨> ಶ್ರೀಮಾನ್ ಅಂದರೆ ಸಮಸ್ತ ವೇದದಿಂದ ಪ್ರತಿಪಾದ್ಯನಾದವನು.
-ಶ್ರೀ ಅಂದರೆ "ಲಕ್ಷ್ಮಿ" - ೩> ಶ್ರೀಮಾನ್ ಅಂದರೆ ಲಕ್ಷ್ಮೀಪತಿಯದ ಭಗವಂತ.
-ಐತರೇಯ ಉಪನಿಷದ್ ನಲ್ಲಿ ಹೇಳುವಂತೆ "ಕಣ್ಣು ಒಂದು ಶ್ರೀ , ಮನಸ್ಸು ಒಂದು ಶ್ರೀ , ಕಿವಿ ಒಂದು ಶ್ರೀ, ಮಾತು ಒಂದು ಶ್ರೀ ಮತ್ತು ಉಸಿರು ಒಂದು ಶ್ರೀ " ಏಕೆಂದರೆ ಈ ಪಂಚೇಂದ್ರಿಯಗಳು ಶಿರಸ್ಸನ್ನು ಆಶ್ರಯಿಸಿಕೊಂಡಿರುವ ಇಂದ್ರಿಯಗಳು ಅದ್ದರಿಂದ "ಶ್ರೀ" .
ಮನುಷ್ಯ ಅರಿವಿನ ಸಂಪತ್ತನ್ನು ಗಳಿಸುವುದೇ ಕಣ್ಣು- ಕಿವಿಯಿಂದ ; ಕಣ್ಣು-ಕಿವಿ ದೇಹದ ಸೂರ್ಯ-ಚಂದ್ರ ಇದ್ದಂತೆ. ಅಗ್ನಿ ಸ್ವರೂಪವಾಗಿರುವ ಬಾಯಿ (ಮಾತು)- ಮನುಷ್ಯನಿಗೆ ಭಗವಂತ ಕೊಟ್ಟಿರುವ ಅಪೂರ್ವವಾದ ಸಂಪತ್ತು. ಮಾತು ಹೊರಡಬೇಕಿದ್ದರೆ, ನೋಡಿದ್ದನ್ನ ಅನುಭವಿಸಲಿಕ್ಕೆ , ಕೇಳಿದ್ದನ್ನ ಗ್ರಹಿಸಲು ಅತ್ಯಂತ ಮುಖ್ಯವಾಗಿ ಮನಸ್ಸು ಬೇಕು. ಈ ಎಲ್ಲಾ ಇಂದ್ರಿಯಗಳನ್ನೂ ಚಾಲನೆಯಲ್ಲಿಡಲು ಪ್ರಾಣಶಕ್ತಿ ಬೇಕು. ಅದ್ದರಿಂದ ಈ ಪಂಚೇಂದ್ರಿಯಗಳು ಮನುಷ್ಯನಲ್ಲಿರುವ ಅತ್ಯಂತ ಶ್ರೀಮಂತ ಅಂಗ .೪> ಶ್ರೀಮಾನ್ ಅಂದರೆ -ಈ ಪಂಚೇಂದ್ರಿಯಗಳನ್ನು ನಮಗೆ ದಯಪಾಲಿಸಿದ ಹಾಗು, ಪಂಚೇಂದ್ರಿಯಗಳ ಒಡೆಯನಾದ, ಲಕ್ಷ್ಮೀಪತಿಯದ ಆ ಕರುಣಾಮಯೀ ಭಗವಂತ.

Wednesday, June 2, 2010

Vishnu Sahasranamam 21

ನಾರಸಿಂಹವಪುಃ

21)ನಾರಸಿಂಹವಪುಃ
೧. ನರ ಮತ್ತು ಸಿಂಹ ರೂಪದಲ್ಲಿ ಕಂಬದಿಂದ ಉದ್ಭವಿಸಿ ಹಿರಣ್ಯಕಶಿಪುವಿನ ಸಂಹಾರ ಮಾಡಿದ ಭಗವಂತನ ರೂಪ ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ, ಆದರೆ ನಾರಸಿಂಹವಪುಃ ಅನ್ನುವುದಕ್ಕೆ ವಿಶಿಷ್ಟವಾದ ಇತರ ಅರ್ಥವಿದೆ. ನಾರ+ ಸಿಂಹ; ನಾರ ಅಂದರೆ->ನರರಲ್ಲಿ ತುಂಬಿರುವ ಅಜ್ಞಾನ. ಸಿಂಹ ಅಂದರೆ ->ಸಿಮ್ಮತಿ, ಅಂದರೆ ನಿವಾರಿಸುವವನು, ವ- ಅಂದರೆ ಜ್ಞಾನ; ,ಪುಃ ಅಂದರೆ ->ಕರುಣಿಸುವವನು

೨.ನಾರಸಿಂಹವಪುಃ ಅಂದರೆ ನರರಲ್ಲಿ ತುಂಬಿರುವ ಅಜ್ಞಾನವನ್ನು ಅಳಿಸಿ ಜ್ಞಾನದ ಬೀಜ ಬಿತ್ತುವವನು ನಾ+ಅರ =ನಾರ ; ಅರ ಅಂದರೆ ದೋಷ ;ನಾರ ಅಂದರೆ ಯಾವುದೇ ದೋಷವಿಲ್ಲದವನು ;ಸಿಂಹ ಅಂದರೆ- ಭಯಂಕರವಾಗಿ ಸರ್ವ ದೋಷವನ್ನು ನಾಶಮಾಡುವವನು.

೩.ನಾರಸಿಂಹವಪುಃ ಅಂದರೆ ಸರ್ವ ದೋಷವನ್ನು ಭಯಂಕರವಾಗಿ ನಾಶಮಾಡಿಯೂ ಕೂಡ, ಯಾವುದೇ ದೋಷವಿಲ್ಲದಿರುವವನು

೪. ಪ್ರಳಯ ಕಾಲದಲ್ಲಿ ನರವಂಶವನ್ನು ನಾಶಮಾಡಿ, ಸೃಷ್ಟಿಕಾಲದಲ್ಲಿ ಪುನಃ ಬೀಜ ಬಿತ್ತಿ ಸೃಷ್ಟಿಮಾಡುವವನು. ಹೀಗೆ ಮನುಕುಲದ ಸೃಷ್ಟಿ-ಸಂಹಾರಕ್ಕೆ ಕಾರಣವಾದವನು ನಾರಸಿಂಹವಪುಃ

೫. ಅಸುರರನ್ನು ಕೊಂದವ ನಾರಸಿಂಹವಪುಃ ... ಇತ್ಯಾದಿ ಇತ್ಯಾದಿ

Tuesday, June 1, 2010

Vishnu Sahasranamam 18-20

ಯೋಗೋ ಯೋಗವಿದಾಂ ನೇತಾ ಪ್ರಧಾನಪುರುಷೇಶ್ವರಃ
ಯೋಗೋ
-ಜೀವದ ಜೊತೆಗೆ ನಿರಂತರವಾಗಿ ಇರುವ ಆಪ್ತ ಬಂಧು.
ಯೋಗವಿದಾಂ ನೇತಾ
-ಸರ್ವ ವೇದ ಮಂತ್ರಗಳನ್ನು ಬಲ್ಲವನಿಗೆ ನಾಯಕ. ಅಂದರೆ ಬ್ರಹ್ಮಾದಿ ದೇವತೆಗಳ ನಾಯಕ
ಪ್ರಧಾನಪುರುಷೇಶ್ವರಃ
-ಪ್ರಧಾನ ಅಂದರೆ "ಶ್ರೀ " ಅಂದರೆ ಲಕ್ಷ್ಮಿ=> ಲಕ್ಷ್ಮಿಗೂ ಈಶ್ವರ ,ಬ್ರಹ್ಮ ವಾಯುರಿಗೂ ಈಶ್ವರ