ಅಮೋಘಃ ಪುಂಡರೀಕಾಕ್ಷೋ ವೃಷಕರ್ಮಾ ವೃಷಾಕೃತಿಃ
110) ಅಮೋಘಃ
ಮೋಘ ಅಂದರೆ ವ್ಯರ್ಥ, ಅಮೋಘ ಅಂದರೆ ವ್ಯರ್ಥವಲ್ಲದ್ದು. ಯಾರ ಸಂಕಲ್ಪ ವ್ಯರ್ಥವಾಗುವುದಿಲ್ಲವೋ ಅವನು ಅಮೋಘ. ಭಗವಂತನ ಸಂಕಲ್ಪ ಎಂದೂ ವ್ಯರ್ಥವಾಗಲಾರದು. ಆತನ ಸಂಕಲ್ಪವನ್ನು ಯಾರಿಂದಲೂ ಬದಲಿಸಲು ಅಸಾದ್ಯ. ಭಗವಂತ ಈ ಪ್ರಪಂಚವನ್ನು ಏಕೆ ಸೃಷ್ಟಿ ಮಾಡಿದ? ಅವನಿಗೆ ಇದರಿಂದ ಏನು ಪ್ರಯೋಜನ? ಈ ಪ್ರಪಂಚ ಭಗವಂತನಿಗೆ ಮೋಘ(ವ್ಯರ್ಥ), ಆದರೆ ನಮಗೆ ಅಮೋಘ! ಈ ಪ್ರಪಂಚವನ್ನು ಭಗವಂತ ಎಲ್ಲಾ ಜೀವರಿಗಾಗಿಯೇ ಸೃಷ್ಟಿ ಮಾಡಿರುವುದು. ಇಂತಹ ಭಗವಂತ ಅಮೋಘ.
111) ಪುಂಡರೀಕಾಕ್ಷ
ಅಮರಕೋಶದಲ್ಲಿ ಪುಂಡರೀಕಾಕ್ಷ ಎಂದರೆ ಬಿಳಿ ತಾವರೆಯಂತಹ ಕಣ್ಣುಳ್ಳವನು ಎಂದಿದೆ, ಆದರೆ ಪುಂಡರೀಕಾಕ್ಷ ಎಂದರೆ ಕೆಂದಾವರೆಯಂತಹ ಕಣ್ಣುಳ್ಳವನು ಎಂದರ್ಥ. ಭಗವಂತನ ಕಣ್ಣು ಯಾವಾಗಲೂ ಕೆಂದಾವರೆ ಎಸಳಿನಂತೆ ಅರಳಿ ನಳನಳಿಸುತ್ತಿರುತ್ತದೆ. ಸಾಮಾನ್ಯವಾಗಿ ನಮಗೆ ಅತ್ಯಂತ ಸಂತೋಷವಾದಾಗ ನಮ್ಮ ಕಣ್ಣು ಅರಳುತ್ತವೆ. ಆದರೆ ಭಗವಂತ ಸದಾ ಸಂತೋಷದ ಬುಗ್ಗೆ. ಭಗವಂತನ ಕೈಯಲ್ಲಿ ನಾಲ್ಕು ಆಯುದಗಳಿರುತ್ತವೆ. ಚಕ್ರ, ಶಂಖ, ಗಧಾ, ಪದ್ಮ (ಪುಂಡರೀಕ). ಈ ನಾಲ್ಕು ಆಯುದಗಳು ಕ್ರಮವಾಗಿ ಧರ್ಮ, ಅರ್ಥ, ಕಾಮದ ನಿಯಂತ್ರಣ ಹಾಗು ಮೋಕ್ಷದ ಸಂಕೇತ. ಆದ್ದರಿಂದ ಪುಂಡರೀಕ ಎಂದರೆ ಮೋಕ್ಷಪ್ರದಾಯಕ ಎಂದರ್ಥ.
ಭಗವಂತನ ಹೊಕ್ಕುಳಲ್ಲಿ ಪದ್ಮಕೋಶ ರೂಪದ ಈ ಬ್ರಹ್ಮಾಂಡ ರಚನೆಯಾಗಿದ್ದು, ಆತ ಅದನ್ನು ತನ್ನ ಹೃದಯಕಮಲದಲ್ಲಿ ತುಂಬಿಕೊಂಡಿದ್ದಾನೆ. ಇಂತಹ ಭಗವಂತ ಪುಂಡರೀಕಾಕ್ಷ.
112) ವೃಷಕರ್ಮಾ
ಭಗವಂತನ ಈ ನಾಮವನ್ನು ವಿಶ್ಲೇಷಿಸುವ ಮೊದಲು ಭಗವದ್ಗೀತೆಯ ಈ ಕೆಳಗಿನ ಶ್ಲೋಕವನ್ನು ಒಮ್ಮೆ ನೋಡೋಣ .
ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ
ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಾಂ ಸೃಜಾಮ್ಯಹಂ
ಪರಿತ್ರಾಣಾಯ ಸಾಧೂನಾಂ ವಿನಾಶಾಯಚ ದುಷ್ಕೃತಾಂ
ಧರ್ಮ ಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ
ಧರ್ಮನಾಶವಾದಾಗ, ಧರ್ಮದ ಉದ್ಧಾರಕ್ಕಾಗಿ, ಸಜ್ಜನರನ್ನು ರಕ್ಷಿಸಿ, ದುಷ್ಟರನ್ನು ಶಿಕ್ಷಿಸಿ, ಧರ್ಮ ಸ೦ಸ್ಥಾಪನೆ ಮಾಡುಲು ಪದೇ ಪದೇ ಅವತರಿಬರುತ್ತೇನೆ ಎನ್ನುವುದು ಈ ಶ್ಲೋಕದ ಮುಖ್ಯಾರ್ಥ.
ವೃಷ ಅಂದರೆ ಧರ್ಮ. ವೃಷಕರ್ಮಾ ಅಂದರೆ ಧರ್ಮಕ್ಕಾಗಿ ಕರ್ಮ ಮಾಡುವ ಭಗವಂತ. ಧರ್ಮ ಸ೦ಸ್ಥಾಪನೆಗಾಗಿ ಪದೇ ಪದೇ ಅವತರಿಸಿಬರುವುದು ಭಗವಂತನ ಕರ್ಮ. ಈ ರೀತಿ ಅವತರಿಸಿ ಬಂದು ಭಕ್ತಕೋಟಿಯ ಅಭಿಷ್ಟವನ್ನು ಪೂರೈಸಿ ಧರ್ಮದ ರಕ್ಷಣೆ ಮಾಡುವ ಶ್ರೇಷ್ಠ ಭಗವಂತ ವೃಷಕರ್ಮಾ.
113) ವೃಷಾಕೃತಿಃ
ಮೇಲೆ ಹೇಳಿದಂತೆ ಭಗವಂತ ಅವತರಿಸಿ ಬರುತ್ತಾನೆ. ಈ ರೀತಿ ಧರ್ಮದ ರಕ್ಷಣೆಗಾಗಿ ನಾನಾ ಆಕೃತಿಯಲ್ಲಿ ಧರೆಗಿಳಿದು ಬರುವ ಭಗವಂತ ವೃಷಾಕೃತಿ. ಆತ ಧರಿಸುವ ಎಲ್ಲಾ ಆಕೃತಿಗಳು ಆತನ ಭಕ್ತಕೋಟಿಯ ಅಭಿಷ್ಟಕ್ಕೆ ತಕ್ಕನಾಗಿರುತ್ತದೆ. ಈ ರೀತಿ ಭಕ್ತರ ಕೋರಿಕೆಯಂತೆ ವಿಶಿಷ್ಟ ಆಕೃತಿಯನ್ನು ಧರಿಸುವ ಭಗವಂತ ವೃಷಾಕೃತಿಃ .
No comments:
Post a Comment