Friday, June 25, 2010

Vishnu Sahasranama 104-106


ವಸುರ್ವಸುಮನಾಃ ಸತ್ಯಃ

104)ವಸು
ನಿಘಂಟಿನಲ್ಲಿ ವಸು ಅನ್ನುವ ಪದಕ್ಕೆ ಸಿರಿ ಅಥವಾ ಸಂಪತ್ತು ಅನ್ನುವ ಅರ್ಥವಿದೆ. ಸಾಮಾನ್ಯವಾಗಿ ಸಿರಿ-ಸಂಪತ್ತು ಅಂದಾಗ ನಮಗೆ ದುಡ್ಡಿನ ನೆನಪಾಗುತ್ತದೆ. ಆದರೆ ಒಬ್ಬೊಬ್ಬರಿಗೆ ಒಂದೊಂದು ಸಂಪತ್ತು. ನಮಗೆ ಜೀವನದಲ್ಲಿ ಯಾವುದು ಸುಖ-ಸಂತೋಷವನ್ನು ಕೊಡುತ್ತದೋ ಅದನ್ನು ಸಂಪತ್ತು ಎಂದು ತಿಳಿಯುತ್ತೇವೆ. ಕೆಲವರಿಗೆ ಮಣ್ಣು ಸಂಪತ್ತಾಗಿ ಕಾಣಿಸಿದರೆ ಇನ್ನು ಕೆಲವರಿಗೆ ಹೆಣ್ಣು-ಹೊನ್ನು ಸಂಪತ್ತು ಎನ್ನುವ ಬ್ರಮೆ ಇರುತ್ತದೆ.
ಆದರೆ ನಿಜವಾದ ಸಂಪತ್ತು ಯಾವುದು? ಯಾವುದನ್ನು ಹಂಚುವುದರಿಂದ ಬೆಳೆಯುತ್ತಾ ಹೋಗಿ ಸಾವಿರ-ಸಾವಿರ ವರ್ಷಗಳ ತನಕ ಅಜರಾಮರವಾಗಿ ಉಳಿಯುತ್ತದೋ, ಅದು ನಿಜವಾದ ಸಂಪತ್ತು. ಅದೇ ಜ್ಞಾನ.
ಯಾವ್ಯಾವುದೋ ವ್ಯರ್ಥವಾದ ಜ್ಞಾನ ಸಂಪತ್ತಲ್ಲ. ಯಾವುದು ನಮ್ಮನ್ನು ಉದ್ದಾರ ಮಾಡುವ ಶಕ್ತಿಯೋ, ಅದರ ಜ್ಞಾನ ನಿಜವಾದ ಸಂಪತ್ತು. ಆದ್ದರಿಂದ ಜಗತ್ತಿನಲ್ಲಿ ಅತ್ಯಂತ ದೊಡ್ಡ ಸಂಪತ್ತು ಭಗವಂತನ ಜ್ಞಾನ. ಆದ್ದರಿಂದ ಭಗವಂತ 'ವಸು'
105)ವಸುಮನಾಃ
ಇಲ್ಲಿ ವಸುಗಳು ಅಂದರೆ ಭಗವಂತನನ್ನು ಅರಿತವರು. ಮುಖ್ಯವಾಗಿ ದೇವತೆಗಳು ಹಾಗು ಯಾರು ತನ್ನ ಹೃದಯದಲ್ಲಿ ಭಗವಂತ ವಾಸವಾಗಿದ್ದಾನೆ ಎಂದು ತಿಳಿದಿದ್ದಾರೋ ಅವರು ವಸುಗಳು.
ವಸುಗಳು ಅಂದರೆ ಪರಿಶುದ್ದವಾದ ಮನಸ್ಸುಳ್ಳವರು ಎನ್ನುವ ಅರ್ಥ ಕೂಡಾ ಇದೆ. ಆದ್ದರಿಂದ ಪರಿಶುದ್ಧವಾದ, ಸತ್ವಗುಣದಿಂದ, ಅನನ್ಯವಾಗಿ ಪ್ರಾರ್ಥಿಸುವ 'ವಸುಗಳಿಗೆ' ಕಾಣಿಸಿಕೊಳ್ಳುವ ಭಗವಂತ ವಸುಮನಾ.
106)ಸತ್ಯಃ
ಸತ್ಹ್ ಅನ್ನುವ ಪದಕ್ಕೆ ಅನೇಕ ಅರ್ಥಗಳಿವೆ. ಸರ್ವಸೃಷ್ಟ, ಸರ್ವ ನಿಯಾಮಕ, ಸರ್ವ ಸ್ಥಿತಿ ಕಾರಣ , ಸರ್ವ ಸಂಹಾರಕ ಇತ್ಯಾದಿ. ಅದೇ ರೀತಿ ಸತ್ ಅಂದರೆ ಜ್ಞಾನ-ಅಜ್ಞಾನ-ಬಂದ-ಮೋಕ್ಷ.
ಆದ್ದರಿಂದ ಸತ್ಯಃ ಅಂದರೆ ಸೃಷ್ಟಿಪ್ರದ, ಸ್ಥಿತಿಪ್ರದ, ಸಂಹಾರಪ್ರದ, ನಿಯಾಮಕ, ಜ್ಞಾನಪ್ರದ, ಅಜ್ಞಾನಪ್ರದ, ಬಂದಪ್ರದ ಮತ್ತು ಮೊಕ್ಷಪ್ರದನಾದ ಭಗವಂತ.
ಸೃಷ್ಟಿ-ಸ್ಥಿತಿ-ಸಂಹಾರ ನಿಯಾಮಕನಾಗಿ, ಜ್ಞಾನಾಜ್ಞಾನ-ಬಂದ-ಮೋಕ್ಷಗಳಿಗೆ ಕಾರಣನಾಗಿರುವ, ಸದ್ಗುಣ ಸ್ವರೂಪ ಜ್ಞಾನಾನಂದಮಯನಾದ ಭಗವಂತ 'ಸತ್ಯ'.

No comments:

Post a Comment