62) ಪವಿತ್ರಂ
ಈ ದೇಹದಿಂದ ಭಗವಂತ ಹೊರಟು ಹೋದ ಮೇಲೆ ಈ ದೇಹ ಅಪವಿತ್ರವಾಗುತ್ತದೆ. ಆದ್ದರಿಂದ ಎಲ್ಲವನ್ನು ಪವಿತ್ರಗೊಳಿಸುವ ಶಕ್ತಿಯುಳ್ಳವನು "ಪವಿತ್ರ" . ಆದರೆ ಈ ಬೌದ್ದಿಕ ಶರೀರ ಸಂಪೂರ್ಣ ಪವಿತ್ರವಲ್ಲ. ದೇಹ ಕೆಸರಿನಲ್ಲಿ ಅರಳಿದ ತಾವರೆಯಂತೆ. ಈ ದೇಹದಲ್ಲಿರುವ ಕೆಸರು ಅನೇಕ ! ನಿಜವಾದ ಪಾವಿತ್ರ್ಯತೆ ಸಿಗುವುದು ಈ ದೇಹದಿಂದ ಹೊರಟು ಹೋದ ಮೇಲೆ. ಶಾಶ್ವತವಾದ ಪಾವಿತ್ರ್ಯ ಮೋಕ್ಷದಲ್ಲಿ. ಇಂತಹ ಪಾವಿತ್ರ್ಯವಾದ ಮೋಕ್ಷವನ್ನು ಕರುಣಿಸುವ ಭಗವಂತ "ಪವಿತ್ರಂ"
63) ಮಙ್ಗಲಂ(ಮಂಗಲಂ)ಪರಮ್
ಮಙ್ಗಲಂ ಅಂದರೆ ಕಲ್ಯಾಣ. ಕಲ್ಯಾಣ ಅಂದರೆ ನಮ್ಮನ್ನು ಎತ್ತರಕ್ಕೆ ಕೊಂಡೊಯ್ಯುವುದು ಎಂದರ್ಥ.ಸಾಮಾನ್ಯವಾಗಿ ಮದುವೆಗೆ ಕಲ್ಯಾಣ ಎನ್ನುತ್ತಾರೆ. ಮದುವೆಯ ನಂತರ ಧರಿಸುವ ತಾಳಿಯನ್ನು "ಮಂಗಳ ಸೂತ್ರ" ಎನ್ನುತ್ತಾರೆ. ಆದರೆ ಎಲ್ಲಾ ಮದುವೆಯು ಮಂಗಲವಲ್ಲ !!!
ಯಾವ ವಿವಾಹದಿಂದ ಗಂಡು ಮತ್ತು ಹೆಣ್ಣು ಎತ್ತರಕ್ಕೆ ಏರುತ್ತಾರೋ ಅಂತಹ ಮದುವೆ ಮಾತ್ರ ಕಲ್ಯಾಣ!!!
ನಮ್ಮನ್ನು ಅದಃಪತನಕ್ಕೆ ಒಯ್ಯುವ ಮದುವೆ ಅಮಂಗಲ!!!!
ಜನ-ಸಾಮಾನ್ಯರು ಸಾಮಾನ್ಯವಾಗಿ ಸಾವನ್ನು ಅಮಂಗಲ ಎಂದು ತಿಳಿಯುತ್ತಾರೆ. ಆದರೆ ಮೋಕ್ಷ ಪ್ರಧಾನವಾದ ಸಾವು ಮಂಗಲ. ಆತ್ಮಹತ್ಯೆ ಅಮಂಗಲ.
ಇಹಕರ್ಮ- ಅಂದರೆ ತನ್ನೆಲ್ಲ ಕರ್ಮವನ್ನು ಭಗವಂತನಿಗೆ ಅರ್ಪಿಸುವುದು-ಮಂಗಲ. (ಪಾಂಡವರು ಮಾಡಿದ ಕರ್ಮ); ಪರಕರ್ಮ- ಅಂದರೆ ತನ್ನ ಸ್ವಾರ್ಥಕ್ಕಾಗಿ ಮಾಡುವ ಕರ್ಮ-ಅಮಂಗಲ.
ಕೇವಲ ಮೇಲಕ್ಕೇರುವುದು ಮಂಗಲವಲ್ಲ, ಕೆಳಕ್ಕೆ ಇಳಿಯದ ದಾರಿಯಲ್ಲಿ ಸಾಗುವುದು ಮಂಗಲ-ಅದೇ ಮೋಕ್ಷ.
ಆದ್ದರಿಂದ ಭಗವಂತ ಮಂಗಲ ಮತ್ತು ನಮ್ಮನ್ನು ಮಂಗಲದತ್ತ ನಡೆಸುವವನು- ಅದ್ದರಿಂದ ಆತ ಮಙ್ಗಲಂ ಪರಮ್.
64)ಈಶಾನಃ
ಈಶ ಅಂದರೆ ನಮ್ಮನ್ನು ನಿಯಂತ್ರಿಸುವ ಪರಮ ಶಕ್ತಿಗಳು.
ಈಶಾನಃ ಅಂದರೆ ಈ ಪರಮಶಕ್ತಿಗಳ ಒಡೆಯ.
65) ಪ್ರಾಣದಃ
ಪ್ರಾಣ+ದಃ - ಇಲ್ಲಿ ದಃ ಅನ್ನುವ ಪದಕ್ಕೆ "ಕೊಡುವವನು" ಮತ್ತು "ಕಸಿದುಕೊಳ್ಳುವವನು" ಎನ್ನುವ ತದ್ವಿರುದ್ದವಾದ ಎರಡು ಅರ್ಥವಿದೆ.
ಪ್ರಾಣದಃ ಅಂದರೆ ನಮಗೆ ಈ ದೇಹದಲ್ಲಿ ಪ್ರಾಣಶಕ್ತಿಯನ್ನು ತುಂಬಿ, ಇಂದ್ರಿಯಗಳನ್ನು ಕೊಟ್ಟು , ಬದುಕಿಗೆ ಬೇಕಾದ ಕಲೆಯನ್ನು ದಯಪಾಲಿಸಿ (ಕೊಡುವುದು ); ಕೊನೆಗೆ ಬೌದ್ದಿಕ ಶರೀರವನ್ನು ಕಸಿದುಕೊಂಡು -ಮುಕ್ತಿಯನ್ನು ದಯಪಾಲಿಸುವವನು ಎಂದರ್ಥ.
66) ಪ್ರಾಣೋ
ಪ್ರ+ಆ+ಣ= ಪ್ರಾಣ
ಪ್ರ-ಅಂದರೆ ಪ್ರಕ್ರುಷ್ಟವಾದ,ದುಃಖ ಸ್ಪರ್ಶವಿಲ್ಲದ, ನಿರ್ದಿಷ್ಟವಾದ; ಆ-ಅಂದರೆ ಪರಿಪೂರ್ಣನಾದ; ಣ- ಅಂದರೆ ಅನಂದಮಯನಾದ ಎಂದರ್ಥ. ಆದ್ದರಿಂದ ಭಗವಂತ ಪ್ರಾಣ.
ಇನ್ನು ಆಣ ಅಂದರೆ ವಾಗ್ದೇವಿ ಎಂದರ್ಥ.
ಅದ್ದರಿಂದ ವಾಗ್ದೇವಿಯಲ್ಲಿ ನೆಲೆಸಿ, ಎಲ್ಲಾ ವೇದ ವಾಣಿಗಳಲ್ಲಿ ಸನ್ನಿಹಿತನಾಗಿದ್ದು , ಜಗತ್ತಿನ ಎಲ್ಲಾ ಚೇಷ್ಟೆಗಳನ್ನೂ ನಿಯಂತ್ರಿಸುವ ಭಗವಂತ ಪ್ರಾಣಃ .
67) ಜ್ಯೇಷ್ಠಃ
ಜ್ಯೇಷ್ಠಃ ಅಂದರೆ ಹಿರಿಯ ಎಂದರ್ಥ. ಎಲ್ಲಾ ಪ್ರಾಣ ತತ್ವಗಳನ್ನು ಸೃಷ್ಟಿ ಮಾಡಿ ನಿಯಂತ್ರಿಸುವ ಭಗವಂತ-ಜ್ಯೇಷ್ಟ.
68) ಶ್ರೇಷ್ಠಃ
ಶ್ರೇಷ್ಠತೆ ವಯಸ್ಸಿನಿಂದ ಬರುವುದಲ್ಲ. ಕೆಲವರು ಜ್ಞಾನದಲ್ಲಿ ಶ್ರೇಷ್ಟರು, ಕೆಲವರು ಹಣದಲ್ಲಿ ಶ್ರೇಷ್ಟರು, ಇನ್ನು ಕೆಲವರು ಭಲದಲ್ಲಿ ಶ್ರೇಷ್ಟರು. ಈ ರೀತಿ ಏಲ್ಲಿ ಭಗವಂತನ ವಿಶಿಷ್ಟವಾದ ತೇಜಸ್ಸಿನ ಸನ್ನಿದಾನವಿದೆಯೋ ಅಲ್ಲಿ ಶ್ರೇಷ್ಠತೆ ಇರುತ್ತದೆ. ಇಂತಹ ಶ್ರೇಷ್ಟತೆಯನ್ನು ದಯಪಾಲಿಸುವ ತಂದೆ ಶ್ರೇಷ್ಠಃ
69) ಪ್ರಜಾಪತಿಃ
ಚತುರ್ಮುಖನಿಗೆ ಪ್ರಜಾಪತಿ ಎನ್ನುವ ಹೆಸರಿದೆ. ಅಂತಹ ಚತುರ್ಮುಖನೋಳಗಿದ್ದು ಸಮಸ್ತ ಜೀವಕೋಟಿಯ ಪಾಲನೆ ಮಾಡುವ ಭಗವಂತ ಪ್ರಜಾಪತಿ.
No comments:
Post a Comment