Sunday, June 20, 2010

Vishnu Sahasranama 74-79

ಈಶ್ವರೋ ವಿಕ್ರಮೀ ಧನ್ವೀ ಮೇಧಾವೀ ವಿಕ್ರಮಃ ಕ್ರಮಃ

74)ಈಶ್ವರೋ

ವಿಷ್ಣು ಸಹಸ್ರನಾಮದಲ್ಲಿ ಕೆಲವೊಂದು ನಾಮಗಳು ಒಂದಕ್ಕಿಂತ ಹೆಚ್ಚು ಭಾರಿ ಪುನರಾವರ್ತನೆ ಆಗಿರುವುದನ್ನು ನಾವು ಕಾಣುತ್ತೇವೆ.ಈಶ್ವರ ಅನ್ನುವ ನಾಮ ಕೂಡ ಎರಡು ಬಾರಿ ಪುನರಾವರ್ತನೆ ಆಗಿದೆ. ವಿಷ್ಣು ಸಹಸ್ರನಾಮದಲ್ಲಿ ಬರುವ ಒಂದೊಂದು ನಾಮಕ್ಕೆ ನೂರು ಅರ್ಥವಿದೆಯಂತೆ. ಒಂದು ವೇಳೆ ಒಂದು ನಾಮ ಎರಡು ಬಾರಿ ಬಂದರೆ, ಆ ನಾಮಕ್ಕೆ ಇನ್ನೂರು ಅರ್ಥಗಳಿವೆ ಎಂದು ತಿಳಿಯಬೇಕಾಗುತ್ತದೆ. ಆದರೆ ಇಷ್ಟೊಂದು ಅರ್ಥವನ್ನು ಕಂಡುಕೊಳ್ಳುವುದು ಸಾಮಾನ್ಯರಿಗೆ ಅಸಾದ್ಯ.
ಇಲ್ಲಿ ಈಶ್ವರ ಎಂದರೆ ಜಗತ್ತನ್ನು ನಿಯಂತ್ರಿಸುವ ಎಲ್ಲಾ ಶಕ್ತಿಗಳ ಈಶ ಎಂದರ್ಥ.
75)ವಿಕ್ರಮೀ
ಈ ನಾಮದ ವಿಶ್ಲೇಷಣೆ ಮಾಡಲು ನಾವು ಭಗವಂತನ ವಾಮನ ಅವತಾರದ ಕಥೆಯನ್ನು ಒಮ್ಮೆ ಮೆಲುಕು ಹಾಕಬೇಕಾಗುತ್ತದೆ. ನಿಮಗೆ ತಿಳಿದಿರುವಂತೆ ವಾಮನ ರೂಪಿ ಭಗವಂತ, ಮಹಾ ದಾನಿ ಭಲಿಚಕ್ರವರ್ತಿಯಲ್ಲಿ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳುತ್ತಾನೆ. ಶುಕ್ರಾಚಾರ್ಯರ ವಿರೋಧವನ್ನು ಲೆಕ್ಕಿಸದೆ ಭಲಿ ವಾಮನನಿಗೆ ದಾನ ಮಾಡಲು ಮುಂದಾಗುತ್ತಾನೆ .
ಆಗ ವಾಮನನು ತನ್ನ ಮೊದಲ ಹೆಜ್ಜೆಯಿಂದ ಭೂಮಿಯನ್ನೂ ಮತ್ತು ಎರಡನೇ ಹೆಜ್ಜೆಯಿಂದ ಆಕಾಶವನ್ನು ಆವರಿಸಿದಾಗ , ಮೂರನೇ ಹೆಜ್ಜೆಗೆ ಭಲಿ ತನ್ನ ತಲೆಯನ್ನು ಅರ್ಪಿಸಿ ಪಾತಳವನ್ನು ಸೇರಿ ಉದ್ದಾರವಾಗುತ್ತಾನೆ. ಈ ಕಾರಣಕ್ಕಾಗಿ ಭಗವಂತನನ್ನು 'ತ್ರಿವಿಕ್ರಮ' ಎನ್ನುತ್ತಾರೆ.
ಈ ಕಥೆಯನ್ನು ನಾವು ಸ್ವಲ್ಪ ಆಳವಾಗಿ ವಿಶ್ಲೇಷಿಸಿದರೆ ಈ ಕೆಳಗಿನಂತೆ ಅರ್ಥೈಸಬಹುದು.
ಸಂಸಾರ ಸಾಗರದಲ್ಲಿ ಮುಳುಗಿರುವ ನಾವೆಲ್ಲರೂ ಒಂದು ರೀತಿಯಲ್ಲಿ ಭಲಿಗಳು. ಭಗವಂತನ ಸಾಕ್ಷಾತ್ಕಾರವಾಗಲು ನಾವೆಲ್ಲರೂ ಮಾನಸಿಕವಾಗಿ, ಆದ್ಯಾತ್ಮಿಕವಾಗಿ ಬಲಿಷ್ಟರಾಗಬೇಕು.
ಉಪಾಸನೆಯಲ್ಲಿ ಪ್ರಮುಖವಾಗಿ ಮೂರೂ ಹೆಜ್ಜೆಗಳಿವೆ. ಮೊದಲನೆಯದು ಭಗವಂತನ ಪುಟ್ಟ (ವಾಮನ) ಮೂರ್ತಿಯನ್ನು ದೇವರು ಎಂದು ಆರಾದಿಸುವುದು. ಎರಡನೆಯದು ಉಪಾಸನೆ ಮಾಡುತ್ತಾ ಮಾಡುತ್ತಾ , ಭಗವಂತ ಕೇವಲ ಮೂರ್ತಿಯಲ್ಲಿ ಅಲ್ಲದೆ, ಇಡೀ ಲೋಕದಲ್ಲಿ ವ್ಯಾಪಿಸಿರುವ ಶಕ್ತಿ ಎಂದು ತಿಳಿಯುವುದು. ಪ್ರಮುಖವಾದ ಮೂರನೇ ಹೆಜ್ಜೆ- ಭಗವಂತ ಸರ್ವಾಂತರ್ಯಾಮಿ, ಆತ ನನ್ನೊಳಗೂ ತುಂಬಿದ್ದಾನೆ ಎಂದು ತಿಳಿದು, ಆ ಪರಶಕ್ತಿಗೆ ತಲೆಬಾಗುವುದು. ಆಗ ನಮಗೆ ನಿಜವಾದ ಭಗವಂತನ ಸಾಕ್ಷಾತ್ಕಾರವಾಗುತ್ತದೆ, ಹಾಗು ಭಗವಂತ ನಮ್ಮನ್ನು ಉದ್ದರಿಸುತ್ತಾನೆ.
ಈ ಮೇಲಿನ ಮೂರು ವಿಕ್ರಮಗಳಿಂದ ನಮ್ಮನ್ನು ಉದ್ದರಿಸುವ ಭಗವಂತ ವಿಕ್ರಮೀ.
76)ಧನ್ವೀ
ಧನ್ವೀ ಅಂದರೆ ಧನುರ್ಧಾರೀ. ಅಂದರೆ ಧನುಸ್ಸನ್ನು ಕೈಯಲ್ಲಿ ಹಿಡಿದಿರುವವನು. ಇಲ್ಲಿ ಧನುಸ್ಸು ದುಷ್ಟ ನಿಗ್ರಹದ ಸಂಕೇತ. ಧರ್ಮದ ಸಂಸ್ಥಾಪನೆಗಾಗಿ ಕೈಯಲ್ಲಿ ಆಯುದ ಹಿಡಿದಿರುವ ಭಗವಂತ ಧನ್ವೀ. ಭಗವಂತನಿಗೆ ಯಾವುದೇ ವಿಶೇಷ ಆಯುದದ ಅಗತ್ಯವಿಲ್ಲ. ಇಲ್ಲಿ ದುಷ್ಕರ್ಮದ ನಾಶಕನಾಗಿರುವ ಭಗವಂತನನ್ನು ಧನ್ವೀ ಎನ್ನುತ್ತಾರೆ.
77)ಮೇಧಾವೀ
ಮೇಧಾ ಅಂದರೆ ಸ್ಮರಣಶಕ್ತಿ. ಯಾವುದನ್ನು ಕೇಳುತ್ತೇವೂ, ಯಾವುದನ್ನೂ ಓದುತ್ತೇವೂ, ಅದನ್ನು ಶಾಶ್ವತವಾಗಿ ಮಸ್ತಕದಲ್ಲಿಟ್ಟುಕೊಳ್ಳುವುದು.
ಮನಸ್ಸು ಬಯಸುತ್ತದೆ, ಬುದ್ದಿ ನಿಶ್ಚಯವಾಗಿ ಗ್ರಹಿಸುತ್ತದೆ, ಚಿತ್ತ ನೆನಪಿಡುತ್ತದೆ.
ಗ್ರಹಿಸಿದ ವಿಷಯವನ್ನು ಶಾಶ್ವತವಾಗಿ ನೆನಪಿನಲ್ಲಿಡುವವರು ಮೇದಾವಿಗಳು.
ಭಗವಂತ ಸ್ವತಃ ಮೇದಾವಿ ಹಾಗು ನಮಗೆ ಚಿತ್ತವನ್ನು ಕರುಣಿಸುವವ.
78)ವಿಕ್ರಮಃ
ವಿಕ್ರಮ ಅಂದರೆ ಕ್ರಮವಿಲ್ಲದವನು!!! ಅಂದರೆ ಭಗವಂತನು ಯಾವುದೇ ಕ್ರಮದ ನಿರ್ಭಂದಕ್ಕೆ ಒಳಗಾಗಿಲ್ಲ. ಅವನು ನಡೆದ ದಾರಿಯಲ್ಲವೂ ನಮಗೆ ಕ್ರಮ.
79)ಕ್ರಮಃ
ಮೇಲೆ ಹೇಳಿದಂತೆ ಭಗವಂತ ವಿಕ್ರಮ, ಆದರೆ ಆತ ನಿರ್ಮಿಸಿರುವ ಈ ಸೃಷ್ಟಿ ಸಂಪೂರ್ಣ ಕ್ರಮಬದ್ದವಾಗಿದೆ. ಅಂದರೆ ಸಂಪೂರ್ಣ ಗಣಿತಬದ್ದವಾಗಿದೆ.
ಪ್ರತಿಯೊಂದು ಗ್ರಹದ ಚಲನೆ ಗಣಿತಬದ್ದವಾಗಿದೆ. ಯಾವಾಗ ಗ್ರಹಣವಾಗಿದೆ, ಯಾವಾಗ ಗ್ರಹಣವಾಗುತ್ತದೆ ಎನ್ನುವುದನ್ನು ಕರಾರುವತ್ತಾಗಿ ಗಣಿತದಿಂದ ತಿಳಿಯಬಹುದು. ಇಂತಹ ಕ್ರಮಬದ್ದವಾದ ಸೃಷ್ಟಿಯ ಕರ್ತನಾದ ಭಗವಂತ ಕ್ರಮಃ

1 comment: