Wednesday, June 23, 2010

Vishnu Sahasranama 95-100(101)


ಅಜಃ ಸರ್ವೇಶ್ವರಃ ಸಿದ್ಧಃ ಸಿದ್ಧಿಃ ಸರ್ವಾದಿರಚ್ಯುತಃ
95)ಅಜಃ
ಅಜಃ ಅಂದರೆ ಯಾರಿಂದಲೂ ಹುಟ್ಟದವನು, ಆದರೆ ಎಲ್ಲರಲ್ಲೂ ಹುಟ್ಟುವವನು ಎಂದರ್ಥ. ತದ್ವಿರುದ್ದವಾದ ಅರ್ಥ ಎನ್ನುತೀರಾ? ಹೌದು, ಭಗವಂತ ಯಾರಿಂದಲೋ ಹುಟ್ಟಿ ಬರುವ ವಸ್ತುವಲ್ಲ. ಆದರೆ ಬಿಂಬ ರೂಪನಾಗಿ ಪ್ರತಿಯೊಂದು ಗರ್ಭದಲ್ಲಿ ನೆಲೆಸಿ ಏಕ ಕಾಲದಲ್ಲಿ ಅನೇಕ ರೂಪಿಯಾಗಿ ಹುಟ್ಟುವವನು. ಗರ್ಭಿಣಿಯ ಹೊಟ್ಟೆ ಹಾಗು ದೇವರ ಗುಡಿಯಲ್ಲಿ ಮುಖ್ಯ ಮೂರ್ತಿ ಇರುವ ಸ್ಥಳ -ಇವೆರಡನ್ನೂ "ಗರ್ಭ" ಎನ್ನುವ ಏಕಪದದಿಂದ ಸಂಬೋದಿಸುತ್ತಾರೆ (ಬೇರೆ ಪದ ಲಬ್ಯವಿಲ್ಲ ). ದೇವಸ್ಥಾನದ ಗರ್ಭಗುಡಿಯಲ್ಲಿರುವ ಮೂರ್ತಿಯಲ್ಲಿ, ಆಹ್ವಾನ ಮಾಡಿದಾಗ ದೇವರ ಆಗಮನವಾದರೆ, ಗರ್ಭಿಣಿಯ ಗರ್ಭದಲ್ಲಿ ಭಗವಂತ ಬಿಂಬರೂಪನಾಗಿ ನೆಲಸಿ ಜನಿಸುತ್ತಾನೆ. ಇಂತಹ ಭಗವಂತ ಅಜಃ .
96)ಸರ್ವೇಶ್ವರಃ
ಯಾರು ತನ್ನನ್ನು ಭಕ್ತಿಯಿಂದ ಕರೆಯುತ್ತಾರೂ ಅಂತವರಿಗೆ ಸದಾಕಾಲ ಲಬ್ಯವಿರುವ, ಎಲ್ಲಾ ಈಶ್ವರರ-ಈಶ್ವರ ಸರ್ವೇಶ್ವರ.
97)ಸಿದ್ಧಃ
ಈ ಜಗತ್ತಿನಲ್ಲಿರುವ ಎಲ್ಲಾ ಶಾಸ್ತ್ರ ಹಾಗು ವೇದಗಳು ಸರ್ವ ಸಿದ್ದನಾದ ಭಗವಂತನನ್ನು ಹಾಗು ಅವನ ತತ್ವಗಳನ್ನು ತಿಳಿಸುತ್ತವೆ. ಈ ಎಲ್ಲಾ ವೇದ-ಶಾಸ್ತ್ರಗಳ ಮೂಲನಾಗಿರುವ, ಭಕ್ತರ ಹೃದಯನಿವಾಸಿ ಭಗವಂತ ಸಿದ್ದ.
98)ಸಿದ್ಧಿಃ
ಸಮಸ್ತ ಪುರುಷಾರ್ಥ ಸಿದ್ದಿ ಯಾರಿಂದ ಆಗುತ್ತದೋ ಅವನು ಸಿದ್ದಿ. ಸಮಸ್ತ ಕಾರ್ಯಗಳ ಸಿದ್ದಿದಾಯಕನಾದ ಭಗವಂತ ಸಿದ್ದಿ.
99)ಸರ್ವಾದಿ
ಎಲ್ಲವುದರ ಆದಿ, ಎಲ್ಲವುದರ ಮೊದಲು ಇರುವವ, ಹಾಗು ಎಲ್ಲವನ್ನೂ ಸ್ವೀಕರಿಸುವ ಭಗವಂತ ಸರ್ವಾದಿ.
100)ಅಚ್ಯುತಃ
ಎಲ್ಲವನ್ನೂ ಸ್ವೀಕರಿಸಿ, ಎಲ್ಲವನ್ನೂ ನಾಶಮಾಡಿ(ಪ್ರಳಯ), ಯಾವುದೇ ಚ್ಯುತಿ ಇಲ್ಲದೇ ಅನಂತವಾಗಿ ಅಖಂಡವಾಗಿ ಇರುವ ಭಗವಂತ ಅಚ್ಯುತ.
ವಿ. ಸೂ: ಸ್ಸ್ಥವಿರೋ ಧ್ರುವಃ ಅನ್ನುವ ನಾಮವನ್ನು ನಾವು ಏಕ ನಾಮವಾಗಿ ವಿಶ್ಲೇಷಿಸಿದ್ದೇವೆ. ಆದರೆ ಇದು ಸ್ಥವಿರ ಹಾಗು ದ್ರುವ ಅನ್ನುವ ಎರಡು ನಾಮ ಕೂಡ ಹೌದು. ಹೀಗೆ ಎರಡು ನಾಮವಾಗಿ ನೋಡಿದಾಗ ಮೇಲಿನ 'ಅಚ್ಯುತ' ನಾಮ ಭಗವಂತನ 101 ನೇ ನಾಮವಾಗುತ್ತದೆ. ಮೊದಲ 12 ನಾಮಗಳು ಅಥರ್ವವೇದವನ್ನೂ, ಇಪ್ಪತ್ನಾಲ್ಕರವರಿಗಿನ ನಾಮ ಋಗ್ವೇದವನ್ನೂ, ಹಾಗು 101 ರ ತನಕ ಬರುವ ನಾಮಗಳು ಯಜುರ್ವೆದವನ್ನೂ ಪ್ರತಿಪಾದಿಸುತ್ತವೆ. ಈ ಮೇಲಿನ 101 ನಾಮಗಳ ಅರ್ಥ ಸಹಿತ ಪಾರಾಯಣ-ಮೂರು ಅಮೂಲ್ಯ ವೇದಗಳ ಪಾರಾಯಣಕ್ಕೆ ಸಮಾನ. ಮುಂದೆ ಬರುವ ನಾಮಗಳು ಸಾಮವೇದವನ್ನು ಪ್ರತಿಪಾದಿಸುತ್ತವೆ. ಮುಂದಿನ ದಿನಗಳಲ್ಲಿ ಉಳಿದ 899 ನಾಮಾರ್ಥವನ್ನು ತಿಳಿಯಲು ಅವಕಾಶ ಮಾಡಿಕೊಡಬೇಕಾಗಿ, ಆ ಪರಬ್ರಹ್ಮ ಮೂರ್ತಿಯಲ್ಲಿ ಬೇಡೋಣ.

ಈ ಅಮೂಲ್ಯ ನಾಮರ್ಥವನ್ನು ಅರಿತ ನಿಮಗೆಲ್ಲರಿಗೂ ಆ ಭಗವಂತನು ಸನ್ಮಂಗಳವನ್ನುಂಟುಮಾಡಲಿ.

2 comments: