Monday, June 28, 2010

Vishnu Sahasranama 114-118


ರುದ್ರೋ ಬಹುಶಿರಾ ಬಭ್ರುರ್ವಿಶ್ವಯೋನಿಃ ಶುಚಿಶ್ರವಾಃ

114) ರುದ್ರ
ರುದ್ರ ಎಂದರೆ ಮೇಲ್ನೋಟಕ್ಕೆ ದುಃಖ ಕೊಡುವವನು, ಸುಡುವವನು, ಎನ್ನುವ ಅರ್ಥವನ್ನು ಕೊಡುತ್ತದೆ.
ವೇದಗಳಲ್ಲಿರುವ ರುದ್ರಸೂಕ್ತಗಳಿಗೆ ಸಾಯಣರು ಅರ್ಥ ಬರೆಯುವಾಗ, ರುದ್ರ ಎಂದರೆ ಅಗ್ನಿ ಎಂದು ಬರೆಯುತ್ತಾರೆ. ಮುಟ್ಟಿದರೆ ಕಣ್ಣೀರು ಬರುವುದು ಪಂಚಭೂತಗಳಲ್ಲಿ ಅಗ್ನಿಯಿಂದ ಮಾತ್ರ. ಆದ್ದರಿಂದ ಅಗ್ನಿ ಕೂಡ ರುದ್ರ. ಆದರೆ ಭಗವಂತ ಏಕೆ ದುಃಖ ಕೊಡುತ್ತಾನೆ? ಭಗವಂತ ದುಃಖ ಕೊಡುವುದು ಪಾಪಿಗಳಿಗೆ ಮಾತ್ರ. ದುಃಖ ಕೊಡುವ ಉದ್ದೇಶ ಶಿಕ್ಷಣ.
ಇನ್ನು ಈ ಪದವನ್ನು ಒಡೆದು ನೋಡಿದಾಗ ರುಕ್+ದ್ರಾ, ಇಲ್ಲಿ 'ರುಕ್' ಅಂದರೆ ಭವರೋಗ, ಹಾಗು 'ದ್ರಾ' ಅಂದರೆ ನಾಶಕ ಅಥವಾ ಪಾರುಮಾಡುವವನು ಎಂದರ್ಥ . ಆದ್ದರಿಂದ ರುದ್ರ ಅಂದರೆ ಭವರೋಗ ನಾಶಕ. ಈ ನಾಮವನ್ನು ನಾವು ರುತ್+ದ್ರಾ ಎಂದೂ ಒಡೆದು ಅರ್ಥೈಸಬಹುದು. ಇಲ್ಲಿ ರುತ್ ಅಂದರೆ ದುಃಖ. ಆದ್ದರಿಂದ ರುದ್ರ ಅಂದರ ದುಃಖನಾಶಕ.
115) ಬಹುಶಿರಾ
'ಸಹಸ್ರ ಶೀರ್ಷಾ ಪುರುಷಃ ಸಹಸ್ರ ಬಾಹೂ ಸಹಸ್ರ ಪಾದ್' ಎಂದು ಭಗವಂತನನ್ನು ವರ್ಣಿಸಿದ್ದಾರೆ. ಇಲ್ಲಿ ಬಹುಶಿರ ಅಂದರೆ ಸಹಸ್ರ-ಸಹಸ್ರ ಶಿರಸ್ಸನ್ನು ಹೊಂದಿರುವವನು ಎಂದರ್ಥ. ಈ ಹಿಂದೆ ಹೇಳಿದಂತೆ ಭಗವಂತ ಬಿಂಬ ರೂಪಿಯಾಗಿ ಪ್ರತಿಯೊಂದೂ ಜೀವರಲ್ಲಿ ತುಂಬಿದ್ದಾನೆ. ಆದ್ದರಿಂದ ಆತ ಬಹುಶಿರಾ.
ತಲೆಯನ್ನು ಐದು ಶ್ರೀಗಳು (ಚಕ್ಷು-ಕಣ್ಣು, ಶ್ರೋತ್ರ-ಕಿವಿ, ಮನಃ-ಮನಸ್ಸು , ವಾಕ್-ಮಾತು, ಪ್ರಾಣ-ಉಸಿರು) ಆಶ್ರಿಸಿರುವುದರಿಂದ ಅದನ್ನು ಶಿರಸ್ಸು ಎನ್ನುತ್ತಾರೆ. ಭಗವಂತ ಸರ್ವಾಶ್ರಾಯದಾತ ಆದ್ದರಿಂದ ಆತ ಬಹುಶಿರಾ.
116) ಬಭ್ರು:
ಈ ನಾಮ ಭಗವಂತನ ಚಿದಾನಂದ ಸ್ವರೂಪವನ್ನು ಹೇಳುತ್ತದೆ. ಭಗವಂತ ಉದಿಸುವ ಸೂರ್ಯನಂತೆ ನಸುಗೆಂಪು ಬಣ್ಣದವನು, ಆತ ನೀಲಮೇಘಶ್ಯಾಮ. ಸಾಮಾನ್ಯವಾಗಿ ದೇವಸ್ತಾನಗಳಲ್ಲಿ ಮೂರ್ತಿ ಕಪ್ಪಗಿದ್ದು(ನೀಲ), ಪ್ರಭಾವಳಿ ಚಿನ್ನದಿಂದ ಮಾಡಿರುತ್ತಾರೆ. ಇಲ್ಲಿ ನೀಲ ಅಘಾದತೆಯನ್ನು, ಅನಂತತೆಯನ್ನು ಸೂಚಿಸುತ್ತದೆ. ನಸುಗೆಂಪು ಜ್ಞಾನಾನಂದದ ಸಂಕೇತ. ಬಭ್ರು ಎನ್ನುವುದು ಬಲಸ್ವರೂಪ(ಬ)-ಪೂರ್ಣಕಾಮ(ಭ್ರು-ಸರ್ವ ಕಾಮನೆಗಳನ್ನು ಈಡೇರಿಸುವವನು), ಎನ್ನುವ ಅರ್ಥವನ್ನೂ ಕೊಡುತ್ತದೆ. ಇಂತಹ ಆಘಾದ, ಅನಂತ, ಜ್ಞಾನಾನಂದಮಯ, ಬಲಸ್ವರೂಪ ಮತ್ತು ಪೂರ್ಣಕಾಮನಾದ ಭಗವಂತ ಬಭ್ರು.
117) ವಿಶ್ವಯೋನಿಃ
ಸಂಸ್ಕ್ರತದಲ್ಲಿ ಯೋನಿ ಅಂದರೆ ಕಾರಣ ಕರ್ತ. ಭಗವಂತ ಇಡೀ ವಿಶ್ವಕ್ಕೆ ಕಾರಣ ಪುರುಷ. ಆದ್ದರಿಂದ ಆತ ವಿಶ್ವಯೋನಿ.
118) ಶುಚಿಶ್ರವಾಃ
ಶ್ರವಸ್ಸು ಅಂದರೆ ಕೀರ್ತಿ. ಭಗವಂತ ಪುಣ್ಯಕೀರ್ತಿ. ಪವಿತ್ರವಾದ ಕೀರ್ತಿಯುಳ್ಳ ಭಗವಂತನನ್ನು ಎಲ್ಲರೂ ಕೀರ್ತನೆ ಮಾಡುತ್ತಾರೆ. ಕೀರ್ತಿ ಅಂದರೆ ಮಾತನಾಡಿಕೊಳ್ಳುವುದು.ಭಗವಂತನ ಗುಣ ಕೀರ್ತನ ಶ್ರವಣದಿಂದ ನಾವು ಪವಿತ್ರವಾಗುತ್ತೇವೆ. ಇಂತಹ ಪವಿತ್ರವಾದ ಹಾಗು ನಮ್ಮನ್ನು ಪವಿತ್ರ ಮಾಡುವ ಭಗವಂತ ಶುಚಿಶ್ರವಾ.

No comments:

Post a Comment