Wednesday, June 23, 2010

Vishnu Sahasranama 90-94

ಅಹಃ ಸಂವತ್ಸರೋ ವ್ಯಾಲಃ ಪ್ರತ್ಯಯಸ್ಸರ್ವದರ್ಶನಃ
90)ಅಹಃ
ಅಹಃ ಅಂದರೆ ಮೇಲ್ನೋಟದ ಅರ್ಥ 'ನಾನು' . ಪ್ರತಿಯೊಂದು ಮಾತಿನಲ್ಲೂ ನಾವು 'ನಾನು' ಅನ್ನುವ ಪದವನ್ನು ಉಪಯೋಗಿಸುತ್ತೇವೆ. ಈಗ 'ನಾನು' ಅನ್ನುವ ಪದವನ್ನು ಸ್ವಲ್ಪ ಆಳವಾಗಿ ಯೋಚಿಸಿ. ನಾನು ಅಂದರೆ ನನ್ನ ಕೈ , ಕಾಲು, ತಲೆ,ಹೃದಯ ....... ನನ್ನ ದೇಹ ?? ಅಲ್ಲ !!! ನನ್ನ ಉಸಿರು? ಅದೂ ಅಲ್ಲ !! ನನ್ನ ಜೀವ ........?? ಅಲ್ಲ. ಏಕೆಂದರೆ ಈ ಜೀವವನ್ನು ನೆಡೆಸುವವನು ಯಾರು ? ಅವನೇ ಬಿಂಬ ರೂಪಿ ಭಗವಂತ. ಆದ್ದರಿಂದ ಆತ ಅಹಃ . ಒಂದು ಕೆಲಸವನ್ನು ನಾನು ಮಾಡಿದೆ... ನನ್ನಿಂದಾಯಿತು ಎಂದು ಜಂಬ ಪಡುವ ನಾವು, ಆ "ನಾನು" ಅಂದರೆ ನನ್ನೊಳಗೆ ಕುಳಿತ ಭಗವಂತ ಅನ್ನುವುದನ್ನು ಸಂಪೂರ್ಣ ಮರೆತಿರುತ್ತೇವೆ!
ಅಹಃ ಅನ್ನುವುದಕ್ಕೆ ಇನ್ನೊಂದು ಅರ್ಥ ಬೆಳಕು. ಅಂದರೆ ಬೆಳಕಿನ ಮೂಲವಾದ ಸೂರ್ಯನಲ್ಲಿ ತುಂಬಿ ಜಗತ್ತನ್ನು ಬೆಳಗುವವವನು.
ಅದ್ದರಿಂದ ಪಿಂಡಾಂಡದಲ್ಲಿ ಬಿಂಬರೂಪಿಯಾಗಿ, ನಿಸರ್ಗದಲ್ಲಿ ಸೂರ್ಯಕಿರಣ ರೂಪದಲ್ಲಿ ತುಂಬಿರುವ ಭಗವಂತ ಅಹಃ.
91)ಸಂವತ್ಸರೋ..
ಸಂವತ್ಸರ ಎಂದರೆ ಸಂಸ್ಕೃತದಲ್ಲಿ ವರ್ಷ ಎಂದು ಅರ್ಥ.ಈ ಒಂದು ಸಂವಸ್ಸರದಲ್ಲಿ 360 ಹಗಲು ಹಾಗು 360 ರಾತ್ರಿಗಳಿರುತ್ತವೆ. ಇಂತಹ ನೂರು ಸಂವಸ್ಸರಗಳು ಮನುಷ್ಯನ ಆಯಸ್ಸು ( 36,000 ಹಗಲು ಹಾಗು 36,೦೦೦ ರಾತ್ರಿ) . ಮನುಷ್ಯ ದೇಹ 72,000 ನಾಡಿಗಳಿಂದ ಹಾಗು 360 ಅಸ್ಥಿಗಳಿಂದ ತುಂಬಿದೆ (ಅದಕ್ಕಾಗಿ ಯಜ್ಞ ಕುಂಡ ತಯಾರಿಸುವಾಗ 360 ಇಟ್ಟಿಗೆಗಳನ್ನು ಉಪಯೋಗಿಸುತ್ತಾರೆ, 360 ಅಸ್ಥಿಗಳಿಂದ ತುಂಬಿದ ಈ ದೇಹವೇ ಒಂದು ಕುಂಡ) . ಈ ಎಲ್ಲಾ ನಾಡಿಗಳಲ್ಲಿ ತುಂಬಿರುವ ಕಾಲನಿಯಾಮಕನಾದ ಹಾಗು ಶರೀರ ನಿಯಾಮಕನಾದ ಭಗವಂತ ಸಂವತ್ಸರ.
92)ವ್ಯಾಲಃ
ನಿಘಂಟಿನಲ್ಲಿ ವ್ಯಾಲ ಅನ್ನುವ ಪದ ಈ ಕೆಳಗಿನ ಅರ್ಥವನ್ನು ಕೊಡುತ್ತದೆ:
- ಮತ್ತೇರಿದ ಆನೆ, ಬುಸುಗುಡುವ ಸರ್ಪ ಅಥವಾ ಹೊಂಚು ಹಾಕಿ ಬಲಿತೆಗೆದುಕೊಳ್ಳಲು ಕಾದಿರುವ ಕ್ರೂರ ವ್ಯಾಘ್ರ !!!!
ಮೇಲಿನ ಅರ್ಥವನ್ನು ಓದಿ ಗಾಬರಿಯಾಗಬೇಡಿ. ಭಗವಂತ ವಿ+ಆ+ಲಾ. ಅಂದರೆ ಎಲ್ಲಾ ದೋಷಗಳನ್ನು ನಾಶ ಮಾಡುವವನು, ಪ್ರಳಯ ಕಾಲದಲ್ಲಿ ಎಲ್ಲವೂ ಅವನಲ್ಲಿ ಲೀನವಾಗುತ್ತವೆ. ಮೇಲ್ನೋಟಕ್ಕೆ ಪ್ರಳಯ ಒಂದು ಭಯಂಕರ ಕ್ರೀಯೆ ಆದರೂ ಕೂಡ, ಈ ಕ್ರಿಯೆಯಲ್ಲಿ ಭಗವಂತ ಎಲ್ಲವನ್ನೂ ಪ್ರೀತಿಯಿಂದ ಸ್ವೀಕರಿಸಿ , ಜೀವಕ್ಕೆ ವಿಶ್ರಾಂತಿ ಕೊಟ್ಟು, ಮರುಸೃಷ್ಟಿ ಕಾಲದಲ್ಲಿ ಪುನಃ ಜೀವರನ್ನು ಈ ಪ್ರಪಂಚಕ್ಕೆ ಪ್ರೀತಿಯಿಂದ ಕಳುಹಿಸಿಕೊಡುತ್ತಾನೆ !
ಇಂತಹ ಅದ್ಬುತವಾದ ಶಕ್ತಿ-ವ್ಯಾಲ.
93)ಪ್ರತ್ಯಯ
ಪ್ರತ್ಯಯ ಅಂದರೆ ಜ್ಞಾನಸ್ವರೂಪನಾಗಿ, ಪ್ರತಿಯೊಂದನ್ನೂ ತಿಳಿದವ ಹಾಗು ಪ್ರತಿಯೊಂದರೊಳಗೂ ಇರುವವನು (Omnipresent , Omniscience )
94)ಸ್ಸರ್ವದರ್ಶನಃ
ಭಗವಂತ ವಿಶ್ವಚಕ್ಷು, ವಿಶ್ವತೂಮುಖ. ಆತ ಪ್ರತಿಯೊಂದನ್ನೂ ಕಣ್ಣಾರೆ ಕಾಣುತ್ತಿರುತ್ತಾನೆ. ಅವನಿಂದ ಯಾವುದನ್ನೂ ಮುಚ್ಚಿಡಲು ಸಾದ್ಯವಿಲ್ಲ. ಸರ್ವ ವೇದ-ಶಾಸ್ತಗಳು ಯಾರನ್ನು ವರ್ಣಿಸುತ್ತವೂ ಅಂತಹ ಭಗವಂತ ಸರ್ವದರ್ಶನಃ.

1 comment:

  1. Amaaaaaaaaaaaaaaaaaaaaaaaaaaaaazing explanation for each Name by Bannanje....

    ReplyDelete