57) ಕೃಷ್ಣ
ಕೃಷ್ಣ ಎನ್ನುವುದು ಮೇಲ್ನೋಟಕ್ಕೆ (1)ವಾಸುದೇವ ದೇವಕಿಯರಲ್ಲಿ ಹುಟ್ಟಿದ(ಅವತರಿಸಿದ) ಭಗವಂತನ ಹೆಸರು.
ಆದರೆ (2)ಕೃಷ್ಣ ಎನ್ನುವುದು ಭಗವಂತನ ಮೂಲ ರೂಪದ ಹೆಸರೂ ಹೌದು.
ಗರ್ಗಾಚಾರ್ಯರು ತಾಯಿ ಯಶೋದೆಯಲ್ಲಿ ಮಗುವಿನ ಹೆಸರಿಡುವಾಗ ಹೀಗೆ ಹೇಳುತ್ತಾರೆ "ಈ ಮಗುವಿಗೆ ನಾನು ಹೆಸರಿಡುತ್ತಿಲ್ಲ. ಈ ಜಗತ್ತಿನಲ್ಲಿ ಇರುವ ಎಲ್ಲಾ ಹೆಸರೂ ಇವನದೇ, ಇವನಿಗೆ ಇರುವ ಹೆಸರನ್ನೇ ನಿಮಗೆ
ನೆನಪಿಸುತ್ತಿದ್ದೇನೆ. ಈತ ಶ್ಯಾಮ , ಸುಂದರ, ವಾಸುದೇವ, ಶ್ರೀ ಕೃಷ್ಣ " ಎಂದು ಹೇಳಿ ನಾಮಕರಣ ಮಾಡುತ್ತಾರೆ.
(3)ಚತುರ್ವಂಶ ಮೂರ್ತಿಗಳಲ್ಲಿ ಇಪ್ಪತ್ನಾಲ್ಕುನೆ ರೂಪವೂ "ಕೃಷ್ಣ"
(4)ಧರ್ಮ ದೇವತೆಯಲ್ಲಿ ಹುಟ್ಟಿದ ಒಂದು ರೂಪ "ಕೃಷ್ಣ" (ನರ, ನಾರಾಯಣ , ಹರಿ, ಕೃಷ್ಣ)
(5) ಸಹಸ್ರನಾಮದಲ್ಲಿ ಕೂಡ ಭಗವಂತನಿಗೆ ಕೃಷ್ಣ ಎಂದು ಸಂಬೋದಿಸಿದ್ದಾರೆ.
ಮೇಲಿನ ಐದು ಸಂದರ್ಬಗಳಲ್ಲಿ "ಕೃಷ್ಣ" ನಾಮಕನಾದ ಭಗವಂತನನ್ನು ಕಾಣುತ್ತೇವೆ. ಮೂಲತಃ ಕೃಷ್ಣ ಅಂದರೆ ಕಪ್ಪು - ನೀಲ ಮೇಘ ಶ್ಯಾಮ. ಈ ನೀಲ ಕಪ್ಪು ಅಂದದ ಪ್ರತೀಕ ಹಾಗೂ ಜ್ಞಾನದ ಪ್ರತೀಕ ಕೂಡ ಹೌದು.
ದ್ರೌಪದಿ ಆ ಕಾಲದ ಅತ್ಯಂತ ಅಪೂರ್ವ ಸುಂದರಿ. ಅದ್ದರಿಂದ ಆಕೆಯನ್ನು ಕೃಷ್ಣೆ ಎಂದು ಕರೆಯುತ್ತಿದ್ದರು.
ದ್ರೋಣಾಚಾರ್ಯರು ಬಿಳಿ ಗಡ್ಡದ ಶ್ವೇತ ವಸ್ತ್ರಧಾರಿಯಾಗಿದ್ದ ಕಪ್ಪಗಿನ ಆಕರ್ಷಕ ವ್ಯಕ್ತಿ. ಇಲ್ಲಿ ಕಪ್ಪು ಜ್ಞಾನದ ಸಂಕೇತ. ಅತೀ ಕೋಪಬಂದಾಗ ನಾವು ಕೆಂಪಾಗಿ ಕಾಣುತ್ತೇವೆ. ಅದೇ ರೀತಿ ಸಂಪೂರ್ಣ ಜ್ಞಾನಿ ನೀಲವಾಗಿ ಕಾಣುತ್ತಾನೆ. ಅದ್ದರಿಂದ ಪರಿಪೂರ್ಣ ಜ್ಞಾನಿ ಭಗವಂತ ತನ್ನ ಅವತಾರದಲ್ಲಿ ಕಾಣಿಸಿದ್ದು ನೀಲ ಮೇಘ ಶ್ಯಾಮನಾಗಿ. ಇದೇ ರೀತಿಯಲ್ಲಿ ಇನ್ನೂ ಹಲವೂ ರೂಪದಲ್ಲಿ ಕೃಷ್ಣ ಎನ್ನುವ ನಾಮದ ಅರ್ಥವನ್ನು ಹುಡುಕಬಹುದು.
ಕೃಷ್ಣ ಹುಟ್ಟುವ ಮೊದಲು ದೇವಕಿಯ ಗರ್ಭದಲ್ಲಿ ಸಂಕರ್ಷಣ (ಬಲರಾಮ) ಇದ್ದ. ಸಂಕರ್ಷಣನನ್ನು ಸಂಕರ್ಷಿಸಿ ಆನಂತರ ದೇವಕಿಯ ಅಷ್ಟಮ ಗರ್ಭದಲ್ಲಿ ಹುಟ್ಟಿದ ಕಾರಣಕ್ಕೆ ಆತನನ್ನು ಕೃಷ್ಣ ಎನ್ನುತ್ತಾರೆ.
ಆತ ಹುಟ್ಟಿದ ಮೇಲೆ ಮಾಡಿದ ಪ್ರತಿಯೊಂದು ಕೆಲಸವೂ ಕರ್ಷಣವೇ. ಪೂತನಿ, ಶಕಟಾಸುರ, ಕೇಶಿ, ಕಂಸ .. ಹೀಗೆ ದುಷ್ಟ ಶಕ್ತಿಗಳನ್ನೆಲ್ಲವನ್ನು ಕರ್ಷಣೆ ಮಾಡಿದವ ಕೃಷ್ಣ. ಹಾಗೆ ಜ್ಞಾನ ಮೂರ್ತಿಯಾದ ಆತ ಹಕ್ಕಿಗಳು , ಹಸುಗಳು, ಗೋಪಾಲಕರು, ಗೋಪಿಕೆಯರು ಹಾಗು ಯಮುನಾ ನದಿಯನ್ನೂ ಕೂಡ ತನ್ನ ಸೌಂದರ್ಯದಿಂದ ಆಕರ್ಶಿಸಿ ಉತ್ಕರ್ಷಣೆ ಮಾಡಿದವ. ಅದ್ದರಿಂದ ಆತ 'ಕೃಷ್ಣ' . ಅರ್ಜುನನ ರಥದಲ್ಲಿ ನಿಂತು ಹದಿನೆಂಟು ಅಕ್ಷೋಹಿಣಿ ಸೈನ್ಯವನ್ನು ಕರ್ಷಣೆ ಮಾಡಿದ. ಹೀಗೆ ಅಸುರರನ್ನು ನಿಗ್ರಹಿಸಿ ಭೂ ಬಾರವನ್ನು ಕರ್ಷಣೆ ಮಾಡಿ, ಸಜ್ಜನರ ಹಾಗೂ ಧರ್ಮದ ಉದ್ದಾರಕ್ಕಾಗಿ ಅವತರಿಸಿದ ಭಗವಂತ 'ಕೃಷ್ಣ' .
ಇನ್ನು ಕೃಷ್ಣ ಪದವನ್ನು ಒಡೆದರೆ ಕೃಷಿ+ಣ=ಕೃಷ್ಣ
ಕೃಷಿ ಅಂದರೆ ಭೂಮಿ, ಣ ಅಂದರೆ ಭಲ ಅಥವ ಆನಂದ. ಅದ್ದರಿಂದ ಕೃಷ್ಣ ಅಂದರೆ ಧರ್ಮವನ್ನು ಬಲಪಡಿಸಲು ಭೂಮಿಯಲ್ಲಿ ಅವತರಿಸಿದ ಆನಂದಸ್ವರೂಪ ಭಗವಂತ.
No comments:
Post a Comment