ವೃಷಾಕಪಿರಮೇಯಾತ್ಮಾ ಸರ್ವಯೋಗವಿನಿಸ್ಸೃತಃ
101)ವೃಷಾಕಪಿ
ಮೇಲ್ನೋಟಕ್ಕೆ ವೃಶ+ಕಪಿ=ವೃಷಾಕಪಿ, ಅಂದರೆ ನಾವು ಬಾಯಾರಿ ಬಳಲಿದಾಗ ನಮ್ಮ ಪೀಪಾಸವನ್ನು ತಣಿಸುವವ.(ವೃಶ ಅಂದರೆ ಮಳೆ ಸುರಿಸುವವನು, ಕಪಿ (ಕಂ+ಪಾಯತೆ) -ಅಂದರೆ ನೀರು ಕುಡಿಸುವವನು).
ವೃಷಾ- 'ಧರ್ಮ ಸ್ವರೂಪ', 'ನಮ್ಮ ಅಭಿಷ್ಟದ ಮಳೆ ಸುರಿಸುವವ' ಎನ್ನುವ ಅರ್ಥವನ್ನೂ ಕೂಡ ಕೊಡುತ್ತದೆ. ಅಕಪಿ ಅಂದರೆ ದುಃಖ ನಿವಾರಕ ಎಂದರ್ಥ.
ಆದ್ದರಿಂದ ವೃಷಾಕಪಿ ಅಂದರೆ ನಮ್ಮ ಮೇಲೆ ಧರ್ಮದ ಮೂಲಕ ಅಭಿಷ್ಟದ ಮಳೆಗರೆದು, ನಮ್ಮ ಮನಸ್ಸಿನ ದುಃಖ ದುಗುಡವನ್ನು ನಿವಾರಿಸಿ, ಪೂರ್ಣಾನಂದವನ್ನು ಕೊಟ್ಟು, ತಾನೂ ಪೂರ್ಣಾನಂದವನ್ನು ಅನುಭವಿಸುವವನು ಎಂದರ್ಥ.
102)ಅಮೇಯಾತ್ಮಾ
ನಮ್ಮ ಮನಸ್ಸು ಬುದ್ದಿಗೆ ಒಂದು ಸೀಮೆ ಇದೆ. ಅದರಿಂದಾಚೆಗೆ ನಾವು ಗ್ರಹಿಸಲಾರೆವು. ಭಗವಂತನನ್ನು ನಮ್ಮ ಬುದ್ದಿಯಿಂದ ಅಳೆಯಲು ಅಸಾದ್ಯ, ಅದ್ದರಿಂದ ಆತ ಅಮೇಯಾತ್ಮಾ.
ಭಗವಂತ ನಮಗೆ ತಿಳಿಯಲು ಅಸಾದ್ಯವಾದರೂ ಕೂಡ ಆತ ಅಣುವಿನಲ್ಲಿ ಅಣುವಾಗಿ ನಮ್ಮೊಳಗೇ ತುಂಬಿದ್ದಾನೆ. ಆತ ಸೂಕ್ಷ್ಮಾತಿ ಸೂಕ್ಷ್ಮನೂ ಹೌದು. ನಮಗೆ ತಿಳಿದಿರುವುದು- ಮಣ್ಣು, ನೀರು, ಬೆಂಕಿ, ಗಾಳಿ ,ಆಕಾಶ, ಹಾಗು ಈ ಪಂಚಭೂತಗಳಿಂದಾದ ವಸ್ತುಗಳು ಮಾತ್ರ. ಆದರೆ ಭಗವಂತ ಇವೆಲ್ಲಕ್ಕಿಂತಲೂ ಬೇರೆ. ಆದ್ದರಿಂದ ನಮ್ಮ ಜೀವಸ್ವರೂಪನಾದ ಭಗವಂತನ ಕಲ್ಪನೆ ನಮಗಿಲ್ಲ. ಭಗವಂತನನ್ನು ನಮ್ಮ ಒಳಗಣ್ಣಿನಿಂದ ನೋಡುವ ಪ್ರಯತ್ನ ಮಾಡಬೇಕೇ ಹೊರತು, ಹೊರ ಪ್ರಪಂಚದಲ್ಲಿ ಹುಡುಕಿ ಪ್ರಯೋಜನವಿಲ್ಲ.
103) ಸರ್ವಯೋಗವಿನಿಸ್ಸೃತಃ
ಇಲ್ಲಿ ಯೋಗ ಅಂದರೆ ಸಂಬಂಧ ಅಥವಾ ಉಪಾಯ ಎನ್ನುವ ಅರ್ಥವನ್ನು ಕೊಡುತ್ತದೆ.
ನಾವು ಏಲ್ಲಿ ಇರುತ್ತೇವೂ ಅದರ ಸಂಬಂಧದಲ್ಲಿರುತ್ತೇವೆ. ಭಗವಂತ ಎಲ್ಲಾಕಡೆ ಇದ್ದಾನೆ, ಆದರೆ ಅವನು ಯಾವುದಕ್ಕೂ ಅಂಟಿಕೊಂಡಿಲ್ಲ. ಇದಕ್ಕೆ ಉತ್ತಮ ಉದಾಹರಣೆ ಎಂದರೆ ಆಕಾಶ. ಮಣ್ಣು, ನೀರು, ಬೆಂಕಿ ಅಥವಾ ಗಾಳಿ ಇದನ್ನು ಮುಟ್ಟಿದಾಗ ಅಂಟಿಕೊಳ್ಳುತ್ತದೆ, ಆದರೆ ಆಕಾಶ ಎಲ್ಲಾಕಡೆ ಇದ್ದರೂ ಕೂಡಾ, ಯಾವುದಕ್ಕೂ ಅಂಟಿಕೊಂಡಿಲ್ಲ. ಭಗವಂತ ಕೂಡ ಹೀಗೆ. ಎಲ್ಲಾಕಡೆ ಇದ್ದರೂ ಕೂಡ ಯಾವುದನ್ನೂ ಅಂಟಿಸಿಕೊಳ್ಳದವನು. ಆದ್ದರಿಂದ ಭಗವಂತ ಸರ್ವಯೋಗವಿನಿಸ್ಸೃತ.
Krishnam onde Jagadgurum....
ReplyDelete