ಶಾಶ್ವತಃ ಸ್ಥಾಣುರ್ವರಾರೋಹೋ ಮಹಾತಪಾಃ
120)ಶಾಶ್ವತಃ ಸ್ಥಾಣು
ಶಾಶ್ವತ ಎಂದರೆ ಎಂದೆಂದೂ ಬದಲಾವಣೆ ಹೊಂದದೆ, ಒಂದೇ ರೀತಿಯಾಗಿ ಇರುವವನು ಎಂದರ್ಥ. ಸ್ಥಾಣು ಎಂದರೆ ಸ್ಥಿರ.
ನಮಗೆ ಬಾಲ್ಯ, ಯವ್ವನ, ಪ್ರೌಢ ಹಾಗೂ ವೃದ್ದಾಪ್ಯ, ಹೀಗೆ ಒಂದು ರೂಪದಲ್ಲಿ ಅನೇಕ ಬದಲಾವಣೆಗಳಿವೆ. ಆದರೆ ಭಗವಂತ ಬಿಂಬ ರೂಪನಾಗಿ ಎಲ್ಲರ ಒಳಗೂ-ಹೊರಗೂ ತುಂಬಿದ್ದರೂ ಸಹ, ಆತನಿಗೆ ಯಾವುದೇ ತರಹದ ವಿಕಾರವಿಲ್ಲ. ಅವನು ಶಾಶ್ವತ ಮತ್ತು ಸ್ಥಿರ(ಸ್ಥಾಣು).
121)ವರಾರೋಹೋ
ಯಾರು ತನ್ನ ಸಾಧನೆ ಮೂಲಕ ಮೋಕ್ಷಕ್ಕೆ ಅರ್ಹರಾಗುತ್ತಾರೋ , ಅಂತವರನ್ನು ಮೇಲಕ್ಕೆತ್ತುವವ ವರಾರೋಹ.
ವರಂ-ಆರೋಹತಿ, ಅಂದರೆ ಯಾರು ಯಾವ ಪದವಿಗೆ ಅರ್ಹರೋ, ಅಂತವರನ್ನು ಆ ಪದವಿಗೇರಿಸುವವ. ಬ್ರಹ್ಮನಿಗೆ ಸತ್ಯಲೋಕದ ಪದವಿ, ಇಂದ್ರನಿಗೆ ದೇವ ಲೋಕದ ಪದವಿಯನ್ನು ಕರುಣಿಸಿ, ಸ್ವತಃ ತಾನು ಲಕ್ಷ್ಮಿ ಸಮೇತನಾಗಿ ನಿತ್ಯಲೋಕದ ಅದಿಪತಿ ಎನಿಸಿರುವ ಭಗವಂತ ವರಾರೋಹ.
122)ಮಹಾತಪಾಃ
ಯಾವುದೇ ವಿಷಯವನ್ನು ಆಳವಾಗಿ ಚಿಂತಿಸಿ ತಿಳಿಯುವುದು ತಪಸ್ಸು. ಪ್ರತಿಯೊಬ್ಬರ ಆವಿಷ್ಕಾರ ಅವರ ತಪಸ್ಸಿನ ಫಲ. ತಪಸ್ಸಿಗೆ ವೇಷ ಮುಖ್ಯವಲ್ಲ, ಆದರೆ ಆಳವಾದ ಚಿಂತನೆ ಅತ್ಯಗತ್ಯ. ಕಾಮ-ಕ್ರೋದಗಳನ್ನು ಗೆದ್ದು, ಪ್ರಶಾಂತಚಿತ್ತದಿಂದ, ವಿಷಯವನ್ನು ಆಳವಾದ ಚಿಂತನೆ ಮೂಲಕ ತಿಳಿದುಕೊಳ್ಳುವುದು ನಿಜವಾದ ತಪಸ್ಸು. ಸಾಮಾನ್ಯವಾಗಿ ಕಾಮವನ್ನು ಗೆಲ್ಲುವುದು ಸುಲಭ. ಆದರೆ ಕ್ರೋದವನ್ನು ಗೆಲ್ಲುವುದು ತುಂಬಾ ಕಷ್ಟ. ನಮಗೆ ಕೋಪ ಬರಲು ಕಾರಣ ನಮ್ಮಲ್ಲಿ ಹುದುಗಿರುವ ಅಪೇಕ್ಷೆ, ಕಳೆದು ಕೊಳ್ಳುತ್ತೇನೆ ಎನ್ನುವ ಭಯ. ಮಹಾನ್ ಋಷಿ ಮುನಿಗಳು ಕೋಪವನ್ನು ಗೆಲ್ಲಲಿಲ್ಲ. ಉದಾಹರಣೆಗೆ ವಿಶ್ವಾಮಿತ್ರ . ಮೇನಕೆಯ ಪ್ರೇಮ ಪಾಶದಿಂದ ಹೊರಬಂದ ವಿಶ್ವಾಮಿತ್ರ ಪುನಃ ತಪಸ್ಸು ಮಾಡುತ್ತಾನೆ. ಆಗ ರಂಬೆ ಆತನ ತಪಸ್ಸನ್ನು ಕೆಡಿಸಲು ಬರುತ್ತಾಳೆ. ಸಿಟ್ಟಿಗೆದ್ದ ವಿಶ್ವಾಮಿತ್ರ "ನೀನು ಕಲ್ಲಾಗು" ಎಂದು ಆಕೆಗೆ ಶಾಪ ಕೊಡುತ್ತಾನೆ.
ಭಗವಂತ ನಿಜವಾದ ತಪಸ್ಸು ಹೇಗಿರಬೇಕು ಎನ್ನುವುದನ್ನು ಸ್ವತಃ ಲೋಕಕ್ಕೆ ತೋರಿಸಿರುವ ಘಟನೆ ನಮಗೆ ತಿಳಿದಿದೆ. ಧರ್ಮ ಮತ್ತು ಮೂರ್ತಿಯ ಮಕ್ಕಳಾದ (ನಾಲ್ಕು ಮಕ್ಕಳು: ಹರಿ, ಕೃಷ್ಣ, ನರ ಮತ್ತು ನಾರಾಯಣ) ನರ-ನಾರಾಯಣರ ದೀರ್ಘ ತಪಸ್ಸು, ಎಲ್ಲಾ ಋಷಿ-ಮುನಿಗಳಿಗೆ ಒಂದು ಅಮೂಲ್ಯ ದೃಷ್ಟಾಂತ. ನರ-ನಾರಾಯಣರ ತಪಸ್ಸನ್ನು ಕೆಡಿಸಲು ಬಂದ ತಿಲೋತ್ತಮೆಯನ್ನು, ಆದರದಿಂದ ಸತ್ಕರಿಸಿದ ನಾರಾಯಣ, ತನ್ನ ತೊಡೆಯಿಂದ ಉರ್ವಶಿಯನ್ನು ಸೃಷ್ಟಿ ಮಾಡಿ, ಇಂದ್ರನಿಗೆ ಕಾಣಿಕೆಯಾಗಿ ಕಳುಹಿಸುತ್ತಾನೆ. ಕಾಮ ಮತ್ತು ಕ್ರೋದವನ್ನು ಸಂಪೂರ್ಣ ಗೆದ್ದು, ತಪಸ್ಸಿನ ಮೂಲಕ ನಾವು ಕಂಡುಕೊಳ್ಳುವ ಪರಬ್ರಹ್ಮ ಶಕ್ತಿಯಾದ ಭಗವಂತ ಮಹಾತಪಾಃ .
ತಪಸ್ಸಿನ ಅಭಿಮಾನಿ ದೇವತೆ ಶಿವ(ಹರ). ಹರಿ-ಹರ ಶಕ್ತಿಗಳು ಹಾಲಿನಲ್ಲಿ ಬೆಣ್ಣೆ ಇರುವಂತೆ. ಶಿವ ಶಕ್ತಿ ಭಗವಂತನ ಹೃದಯದಿಂದ ಆವಿಷ್ಕಾರ ವಾಗಿರುವುದು. ಇಂತಹ ಭಗವಂತನನ್ನು ಮಹಾತಪಾ ಎನ್ನುತ್ತೇವೆ.
Great work here... daily sum lines from vishnu sahasranamam...
ReplyDeletebannaje govindacharya avardu bekadastu pravachana audios idhe thanks to kannadaaudio.com.
Wud be coming back on a regular basis