Tuesday, June 15, 2010

Vishnu Sahasranama 58

ಲೋಹಿತಾಕ್ಷಃ

58) ಲೋಹಿತಾಕ್ಷಃ


ಲೋಕ+ಹಿತ+ಅಕ್ಷ - ಅಂದರೆ ಲೋಕದ ಹಿತಕ್ಕಾಗಿ ಭಕ್ತರ ಮನೋಭಿಲಾಷೆ ಪೂರ್ತಿಗಾಗಿ ತಾವರೆಯಂತಹ ಅರಳುಗಣ್ಣು ಉಳ್ಳವನು ಎಂದರ್ಥ.
ಈ ನಾಮದ ಅರ್ಥವನ್ನು ತಿಳಿಯಬೇಕಾದರೆ ನಾವು ಭಗವಂತ ಕೊಪೋದ್ರಿಕ್ತನಾದ ಕೆಲವು ಘಟನೆಗಳನ್ನು
ನೋಡಬೇಕಾಗುತ್ತದೆ.
ಮಹಾಭಾರತ ಯುದ್ದದಲ್ಲಿ ಅರ್ಜುನ ಭೀಷ್ಮ ಪಿತಾಮಹರ ನಡುವೆ ಯುದ್ದ ಪ್ರಾರಂಭವಾದಾಗ ನಡೆದ ಒಂದು ಘಟನೆಯನ್ನು ನೋಡೋಣ. ಅರ್ಜುನ ತನ್ನನ್ನು ಮುದ್ದಿಸಿ ಆಡಿಸಿ ಬೆಳೆಸಿದ ಪಿತಾಮಹನೊಂದಿಗೆ ಮನಸ್ಸಿಲ್ಲದ ಮನಸ್ಸಿನಿಂದ ಯುದ್ದ ಮಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಸಾರಥಿ ಕೃಷ್ಣ ಕೋಪಗೊಳ್ಳುತ್ತಾನೆ. ಮಹಾಭಾರತ ಯುದ್ದದ ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ,
ಕೋಪಾವೇಶದಿಂದ ಭೀಷ್ಮನನ್ನು ಸಾಯಿಸಲೆಂಬಂತೆ ಚಕ್ರವನ್ನೇ ಹಿಡಿದು ಮುಂದೊತ್ತಿ ಬರುತ್ತಿದ್ದಾನೆ! ಆಗ ಆತನ ಕಣ್ಣು ಕೆಂದಾವರೆ ಹೂವಿನಂತೆ ಕೆಂಪಾಗಿ ಕಾಣುತ್ತಿರುತ್ತದೆ. ಇದನ್ನು ನೋಡಿದ ಬೀಷ್ಮ ಎರಡೂ ಕೈಯನ್ನು ಜೋಡಿಸಿ ಹೀಗೆ ಹೇಳುತ್ತಾನೆ -
" ಓ ಭಗವಂತ; ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಹಾಗೆ ಯುದ್ಧ ಮಾಡುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದ್ದೆ. ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ಆದರೆ ಈಗ ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ಮರೆತಿರುವೆ, ಆದರೆ ನಿನ್ನ ಭಕ್ತನನ್ನು ಮರೆತಿಲ್ಲ ; ನೀನಲ್ಲದೆ ನಮಗೆ ಗತಿ ಇನ್ನ್ಯಾರು ? " ಎನ್ನುತ್ತಾನೆ . ಈ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತನ ಕೋಪ ಮತ್ತು ಅದರ ಹಿಂದಿರುವ ಕರುಣೆ ವ್ಯಕ್ತವಾಗಿದೆ.
ಇದೇ ರೀತಿ ಇನ್ನೊಂದು ಘಟನೆ ನರಸಿಂಹ ಅವತಾರದಲ್ಲಿ ಕಂಡು ಬರುತ್ತದೆ. ಹಿರಣ್ಯಕಷಿಪುವನ್ನು ಕೊಂದು ಆತನ ಕರುಳನ್ನು ಬಗೆದು ಕೊರಳಿಗೆ ಹಾಕಿಕೊಂಡರೂ, ಶಾಂತನಾಗದ ಭಗವಂತನ ಕೋಪೋದ್ರಿಕ್ತ ರೂಪವನ್ನು ಕಂಡು, ದೇವತೆಗಳೆಲ್ಲರೂ ಭಯಗೊಂಡಾಗ, ಐದು ವರ್ಷದ ಪುಟ್ಟ ಬಾಲಕ ಪ್ರಹಲ್ಲಾದನ ಪ್ರಾರ್ಥನೆಗೆ ಮಣಿದು, ಶಾಂತ ಮೂರ್ತಿಯಾಗುತ್ತಾನೆ.
ಮೇಲಿನ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತ ದುಷ್ಟರನ್ನು ತನ್ನ ಕೆಂಗಣ್ಣಿನಿಂದ ನಾಶಮಾಡಿ, ಭಕ್ತರ ಅಭಿಲಾಷೆಯನ್ನು ಪೂರ್ತಿ ಮಾಡುವುದು ಕಂಡುಬರುತ್ತದೆ.
ಇಂತಹ ಅರಳುಗಣ್ಣಿನ ಭಗವಂತ ಲೋಹಿತಾಕ್ಷ !

No comments:

Post a Comment