Friday, October 15, 2010
Vishnu Sahasranama 457-462
"ಸುವ್ರತಃ ಸುಮುಖಃ ಸೂಕ್ಷ್ಮಃ ಸುಘೋಷಃ ಸುಖದಃ ಸುಹೃತ್" ಈ ಶ್ಲೋಕದಲ್ಲಿ ಬರುವ ಎಲ್ಲಾ ನಾಮಗಳು 'ಸು' ಪದದಿಂದ ಆರಂಭವಾಗುತ್ತದೆ. ಭಗವಂತನನ್ನು ಮೂಲ ನಾಮ ವ್ಯಾಹೃತಿಯಲ್ಲಿ 'ಸ್ವಃ' (ಭೂರ್ಭುವಃ ಸ್ವಃ) ಎಂಬ ನಾಮದಿಂದ ಸಂಭೋದಿಸುತ್ತಾರೆ. ಆದ್ದರಿಂದ 'ಸು' ಎಂದರೆ ಸುಂದರ, ಚಲುವ,ಆನಂದಪೂರ್ಣ,ಸುಸ್ಥಿತ, ಸುವ್ಯವಸ್ಥಿತ ಇತ್ಯಾದಿ. ಈ ಅರ್ಥ ಇಲ್ಲಿ ಬರುವ ಎಲ್ಲಾ ನಾಮಗಳಿಗೂ ಅನ್ವಯ.
457) ಸುವ್ರತಃ
ವ್ರತ ಎಂದರೆ ದೀಕ್ಷೆ, ನಿಷ್ಠೆ, ಶಿಸ್ತುಬದ್ಧವಾದ ಕ್ರಿಯೆ. ಇಂದ್ರಿಯ ನಿಗ್ರಹಕ್ಕೆ ಮಾಡುವ ನಿಯತವಾದ ಕ್ರಿಯೆ. ವ್ರತದಲ್ಲಿ ಎರಡು ವಿಧ. ಯಾವುದೋ ಒಂದು ಫಲಾಪೇಕ್ಷೆಯಿಟ್ಟು ಮಾಡುವ ವ್ರತ ಹಾಗು ಭಗವಂತನ ಪ್ರೀತ್ಯರ್ಥವಾಗಿ ಮಾಡುವ ವ್ರತ. ಫಲಾಪೇಕ್ಷೆಯಿಟ್ಟು ಮಾಡುವ ವ್ರತವನ್ನು ಕಾಮ್ಯ ಎನ್ನುತ್ತಾರೆ. ಇದನ್ನು ಶಾಸ್ತ್ರದಲ್ಲಿ ವಿರೋಧಮಾಡುತ್ತಾರೆ. ಭಗವಂತನ ಅನುಗ್ರಹ,ಪ್ರೀತಿಗೋಸ್ಕರ ಮಾಡುವ ವ್ರತ ನಿಷ್ಕಾಮ ವ್ರತ. ಇಲ್ಲಿ ವ್ರತ ಮಾಡುವವರು ಭಗವಂತನ ಪ್ರೀತಿಯನ್ನು ಬಿಟ್ಟು ಇನ್ನೇನನ್ನೂ ಬಯಸುವುದಿಲ್ಲ. ಇದಕ್ಕೆ ಉತ್ತಮ ನಿದರ್ಶನ ಪ್ರಹಲ್ಲಾದನ ವ್ರತ. ತನ್ನ ಮುಂದೆ ಪ್ರತ್ಯಕ್ಷನಾದ ಭಗವಂತ ನಿನಗೇನೂ ಬೇಕು ಎಂದು ಕೇಳಿದಾಗ ಆ ಪುಟ್ಟ ಬಾಲಕ 'ನಾನು ನಿನ್ನನ್ನು ಭಕ್ತಿ ಮಾಡಿದ್ದು ನಿನ್ನಿಂದ ಪ್ರತಿಫಲಪಡೆಯುವುದಕ್ಕಾಗಿ ಅಲ್ಲ, ನನ್ನ ಭಕ್ತಿ ವ್ಯಾಪಾರವಲ್ಲ ಎನ್ನುತ್ತಾನೆ'! ಸೃಷ್ಟಿ-ಸ್ಥಿತಿ-ಸಂಹಾರ ಭಗವಂತನ ನಿಷ್ಕಾಮ ವ್ರತ. ರಾಮಾಯಣದಲ್ಲಿ ಶ್ರೀರಾಮಚಂದ್ರ ಹೇಳುವಂತೆ "ಅಭಯಂ ಸರ್ವ ಭೂತೇಭ್ಯೋ ದದಾಮಿ ಏತದ್ ವ್ರತಂ ಮಮಃ" ಅಂದರೆ 'ಯಾರು ನನ್ನಲ್ಲಿ ಶರಣು ಕೋರಿ ಬರುತ್ತಾರೋ ಅವರಿಗೆ ಜಗತ್ತಿನಿಂದ ರಕ್ಷಣೆ ಕೊಡುವುದು ನನ್ನ ವ್ರತ'. ಇದನ್ನೇ ಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ:
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್
ಅಂದರೆ 'ಬೇರೆಲ್ಲಾ ತೊರೆದು ನನ್ನನ್ನೇ ನೆನೆಯುತ್ತ ಪರಿಪರಿಯಿಂದ ಪೂಜಿಸುವ(ನಿತ್ಯ ನಿಷ್ಕಾಮ ಕರ್ಮ) ಜನರು ಎಲ್ಲೆಲ್ಲೂ ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ-ಕ್ಷೇಮದ ಹೊಣೆ ನನ್ನದು'. ಭಗವಂತ ಎಂದೂ ಹೂಡಿದ ಬಾಣ ಹಿಂದೆ ಪಡೆಯುವುದಿಲ್ಲ, ಆಡಿದ ಮಾತನ್ನು ತಪ್ಪುವುದಿಲ್ಲ. ಆದರೆ ಕೆಲವೊಮ್ಮೆ ಆತನ ನುಡಿ ನೆರವೇರಲು ಅನೇಕ ಜನ್ಮಗಳೇ ಹಿಡಿಯಬಹುದು! ಹೀಗೆ ನಿರಂತರ ರಕ್ಷಣೆಯ ವ್ರತವನ್ನು ಮಾಡುವ ಆನಂದಮಯ ಭಗವಂತ ಸುವ್ರತಃ.
458) ಸುಮುಖಃ
ಮೇಲೆ ಹೇಳಿದ 'ಸು' ಪದದ ಅರ್ಥವನ್ನು 'ಮುಖ' ಪದದೊಂದಿಗೆ ಸೇರಿಸಿದರೆ ಭಗವಂತನ 'ಸುಮುಖಃ' ನಾಮದ ಅರ್ಥ ತೆರೆದುಕೊಳ್ಳುತ್ತದೆ. ಭಗವಂತ ಸುಂದರವಾದ ರೂಪವನ್ನು ಈ ನಾಮ ಹೇಳುತ್ತದೆ. ವಿಶೇಷವಾಗಿ ಕೃಷ್ಣಾವತಾರದಲ್ಲಿ ಭಗವಂತ ತನ್ನ ಸುಮುಖ ರೂಪವನ್ನು ತೋರಿದ್ದಾನೆ.
459) ಸೂಕ್ಷ್ಮಃ
ಭಗವಂತ ಜ್ಞಾನಾನಂದಮಯ. ಆತ ಸೂಕ್ಷ್ಮದಲ್ಲಿ ಸೂಕ್ಷ್ಮ ಹಾಗು ಬೃಹತ್ ರೂಪಿ (Smaller than Smallest and Bigger than Biggest). ಹೀಗಿದ್ದರೂ ಕೂಡಾ ಆತ ಇಷ್ಟಪಟ್ಟರೆ ಭಕ್ತರ ಮುಂದೆ ಕಾಣಿಸಿಕೊಳ್ಳುತ್ತಾನೆ. ರಾಮನ ಕಾಲದಲ್ಲಿದ್ದವರು ರಾಮನನ್ನು, ಕೃಷ್ಣನ ಕಾಲದಲ್ಲಿದ್ದವರು ಕೃಷ್ಣನನ್ನು ಕಂಡಿದ್ದಾರೆ. ಒಳ್ಳೆಯವರು-ಕೆಟ್ಟವರು, ಸಜ್ಜನರು-ದುರ್ಜನರು, ಪಂಡಿತರು-ಪಾಮರರು, ಗಂಡಸರು-ಹೆಂಗಸರು, ಎಳೆಯರು-ಮುದುಕರು, ಹೀಗೆ ಎಲ್ಲರೂ ಕಂಡಿದ್ದಾರೆ. ನಿಜವಾಗಿ ಅವರು ಕಂಡಿದ್ದು ನಮ್ಮ ಕಣ್ಣಿಗೆ ಕಾಣದ ಸೂಕ್ಷ್ಮ ತತ್ವವನ್ನು. ಇಂತಹ ಸೂಕ್ಷ್ಮಾತಿ-ಸೂಕ್ಷ್ಮ ತತ್ವ ಭಗವಂತ ಸೂಕ್ಷ್ಮಃ.
460) ಸುಘೋಷಃ
ಭಗವಂತನ ಮಾತು ಬಹಳ ಸುಂದರ. ಭಗವಂತನ ಆದೇಶ ಪಡೆದು ಭೂಮಿಯಲ್ಲಿ ಹುಟ್ಟಿದ ಮಹಾಪುರುಷರ ಮಾತಿನ ನಾದದಲ್ಲೇ ಭಗವಂತನನ್ನು ದ್ವನಿಸುವ ಶಕ್ತಿ ಇರುತ್ತದೆ.
ಮಂತ್ರಗಳಲ್ಲಿ ಶಕ್ತಿ ಅಡಗಿರುವುದು ಅದರ ನಾದದಲ್ಲಿ. ಮಂತ್ರವನ್ನು ಪಠಿಸುವವರ ಇಷ್ಟಾರ್ಥ ಸಿದ್ಧಿಗಾಗಿ ಅದನ್ನು Compose ಮಾಡಿದ್ದಾರೆ. ಇದರ ಹಿಂದೆ ಶಕ್ತಿಯುತ ಮನೋಬಲ (Will power) ಅಡಗಿದೆ. ಭಗವಂತನ ಭಕ್ತರ ನಾದವೇ ಇಷ್ಟೊಂದು ಶಕ್ತಿಶಾಲಿಯಾಗಿರುವಾಗ ಇನ್ನು ಭಗವಂತನ ನಾದ ಹಾಗು ಮನೋಬಲ ನಮ್ಮಿಂದ ಊಹಿಸುವುದು ಅಸಾಧ್ಯ. ಜಗತ್ತಿನಲ್ಲಿ ಯಾವ ಯಾವ ಘೋಷಗಳಿವೆ ಅವುಗಳೆಲ್ಲವೂ ಸಮೀಚೀನವಾದ ಭಗವಂತನನ್ನೇ ಹೇಳುತ್ತವೆ. ಈ ಪ್ರಪಂಚದಲ್ಲಿರುವ ಎಲ್ಲಾ ನಾದಗಳೂ, ಎಲ್ಲಾ ಬಾಷೆಗಳು ಭಗವಂತನನ್ನೇ ಹೇಳುತ್ತವೆ. ಪಕ್ಷಿಗಳ ಚಿಲಿಪಿಲಿ, ಪ್ರಾಣಿಗಳ ಕೂಗು, ನೀರಿನ ಝುಳು-ಝುಳು, ಸಮುದ್ರದ ಮೊರೆತ, ಗಾಳಿಯ ಸುಯಿಲು, ಎಳೆಗಳ ಮರ್ಮರ ಎಲ್ಲಾ ಸಮಸ್ತ ನಾದವೂ ಕೂಡಾ ಭಗವಂತನ ಗುಣಗಾನ ಮಾಡುವುದರಿಂದ ಆತ ಸುಘೋಷಃ.
461) ಸುಖದಃ
ಭಗವಂತನ ಬಗ್ಗೆ ಕೇಳುವುದೇ ಆನಂದ. ಆನಂದಮಯನಾದ ಆತನ ಚಿಂತನೆ ನಮ್ಮನ್ನು ಆನಂದಮಯರನ್ನಾಗಿ ಮಾಡುತ್ತದೆ. ಆತ ಆನಂದ ಸಾಗರ. ಆತನ ಬಳಿಗೆ ಹೋದವರು ಆನಂದ ಸಾಗರದಲ್ಲಿ ಮುಳುಗಿರುತ್ತಾರೆ. ಇನ್ನೊಂದು ಅರ್ಥದಲ್ಲಿ ಆತ ಸುಖವನ್ನು 'ಧ್ಯತಿಸುವವನು'. ಯಾರು ಅಸತ್ಯದ ದಾರಿಯಲ್ಲಿ ಸಾಗುತ್ತಾರೋ ಅವರ ಸುಖವನ್ನು ಕಸಿದುಕೊಳ್ಳುವ, ಸುಖ-ದುಃಖದ ಮಿಶ್ರಣದ ಬದುಕನ್ನು ಕೊಟ್ಟು ನಮ್ಮನ್ನು ಮುಕ್ತಿಯತ್ತ ಕೊಂಡೊಯ್ಯುವ ಭಗವಂತ ಸುಖದಃ.
462) ಸುಹೃತ್
ಎಲ್ಲಾ ಜೀವ ಜಾತಕ್ಕೆ ಆತ್ಮೀಯ ಗೆಳೆಯ. ಭಗವಂತ ನಮಗೆ ಕೊಡುವ ಕಷ್ಟ ನಮ್ಮ ಒಳಿತಿಗಾಗಿ, ನಮ್ಮ ಜೀವನದಲ್ಲಿ ನಮಗರಿವಿಲ್ಲದಿದ್ದರೂ, ಅವನು ಮಾಡುವ ಉಪಕಾರ ಅಪರಿಮಿತ. ಹೀಗೆ ಆತ್ಮೀಯನಾಗಿ ಎಂದೆಂದೂ ನಮ್ಮೊಂದಿಗಿರುವ ಭಗವಂತ ಸುಹೃತ್.
Monday, September 13, 2010
Vishnu Sahasranama 340-342
ವಿಷ್ಣು ಸಹಸ್ರನಾಮ: ಶೂರಃ ಶೌರಿರ್ಜನೇಶ್ವರಃ
340) ಶೂರಃ
ಈ ಜಗತ್ತಿನಲ್ಲಿ ಯಾರಲ್ಲಿ ಏನೇನು ಪರಾಕ್ರಮವಿದೆ, ಪೌರುಷವಿದೆ, ಅದೆಲ್ಲವೂ ಭಗವಂತನ ಕೊಡುಗೆ. ನಿಜವಾದ ಶೂರ ಭಗವಂತ. ಒಂದು ಶಕ್ತಿಯಾಗಿ ಭಗವಂತ ನಮ್ಮೊಳಗೆ ತುಂಬಿದರೆ ಮಾತ್ರ ಶತ್ರುಗಳನ್ನು ಗೆದೆಯುವ ಸಾಮರ್ಥ್ಯ ನಮಗೆ ಬರುತ್ತದೆ. 'ಶೂ' ಎಂದರೆ ಆನಂದವುಳ್ಳವರು ಅಥವಾ ಮುಕ್ತರು. ಮುಕ್ತರನ್ನು ಸ್ವೀಕರಿಸಿ ತನ್ನ ಬಳಿಯಲ್ಲಿರಿಕೊಂಡು ನಿತ್ಯಾನಂದವನ್ನು ಕೊಡುವ ಭಗವಂತ ಶೂರಃ.
341) ಶೌರಿಃ
ವಾಸುದೇವನ ತಂದೆ ಶೂರಸೇನ; ಈ ವಂಶದಲ್ಲಿ ಅವತರಿಸಿದ ಭಗವಂತನನ್ನು ಶೌರಿ ಎನ್ನುತ್ತಾರೆ. ಶೌರಿ ಎಂದರೆ ಶೂರರಲ್ಲಿ ಇರುವವನು. ಗೀತೆಯಲ್ಲಿ ಹೇಳುವಂತೆ:
ಯದ್ಯದ್ ವಿಭೂತಿಮತ್ ಸತ್ತ್ವಂ ಶ್ರೀಮದೂರ್ಜಿತಮೇವ ವಾ
ತತ್ತದೇವಾವಗಚ್ಛ ತ್ವಂ ಮಮ ತೆಜೋಂಶಸಂಭವಂಮ್ (ಅ-೧೦, ಶ್ಲೋ-೪೧)
"ಏಲ್ಲಿ ಯಾರಲ್ಲಿ ವಿಶಿಷ್ಟ ಶಕ್ತಿಯಿದೆ ಆ ಶಕ್ತಿಯಲ್ಲಿ ನಾನೇ ಅಡಗಿದ್ದೇನೆ ; ನನ್ನ ತೇಜಸ್ಸಿನ ಕಿಡಿ ಆತನ ಶೌರ್ಯವಾಗಿ ಮೂಡಿಬರುತ್ತದೆ" ಎಂಬ ಕೃಷ್ಣನ ನುಡಿ ಆತನ ಈ ನಾಮವನ್ನು ನೆನಪಿಸುತ್ತದೆ. ಪುರಾಣದಲ್ಲಿ ಕಾಣುವ ಪ್ರತಿಯೊಬ್ಬ ಶೂರರ ಶೌರ್ಯಕ್ಕೆ ಮೂಲ ಕಾರಣ ಅವರೊಳಗೆ ಕುಳಿತ 'ಶೌರಿ' ನಾಮಕ ಭಗವಂತನ ವಿಭೂತಿ.
342) ಜನೇಶ್ವರಃ
ಭಗವಂತ ಬರೀ ಶೂರರಲ್ಲಿ ಮಾತ್ರವಲ್ಲ ಈ ಜಗತ್ತಿನಲ್ಲಿ ಜನಿಸುವ ಎಲ್ಲಾ ಜೀವಜಾತದೊಳಗೆ ತುಂಬಿರುವ ಈಶ್ವರ(ನಿಯಾಮಕ ಶಕ್ತಿ). ಈ ಭೂಮಿಯಲ್ಲಿ ಜನಿಸುವ ಪ್ರತಿಯೊಂದು ವಸ್ತುವಿನೊಳಗೆ ಭಗವಂತ ನಿಯಾಮಕ ಶಕ್ತಿಯಾಗಿ ತುಂಬಿದ್ದಾನೆ. ಈ ಜಗತ್ತಿನಲ್ಲಿ ಹುಟ್ಟುವ ಒಂದು ಹುಲ್ಲು ಕಡ್ಡಿ ಕೂಡಾ ವ್ಯರ್ಥವಲ್ಲ, ಅದರಲ್ಲಿ ಭಗವಂತನ ವಿಭೂತಿಯಾದ ವಿಶಿಷ್ಟ ಶಕ್ತಿ ಅಡಗಿರುತ್ತದೆ.
ಉದಾಹರಣೆಗೆ :
(೧)ದರ್ಬೆ:-ಮೇಲ್ನೋಟಕ್ಕೆ ವ್ಯರ್ಥವಾಗಿ ಬೆಳೆಯುವ ಹುಲ್ಲು; ಆದರೆ ವಾತಾವರಣದಲ್ಲಿರುವ ದುಷ್ಟಶಕ್ತಿಯನ್ನು ನಿಯಂತ್ರಿಸುವ ಅಮೋಘ ಶಕ್ತಿ ದರ್ಬೇಗಿದೆ. ಅದಕ್ಕಾಗಿ ಯಜ್ಞ-ಯಾಗದಿಗಳಲ್ಲಿ ದರ್ಬೆಯನ್ನು ಉಂಗುರವಾಗಿ ಧರಿಸುತ್ತಾರೆ ಹಾಗು ದುಷ್ಟ ಶಕ್ತಿ ನಿಯಂತ್ರಕವಾಗಿ ಯಜ್ಞಕುಂಡದ ಸುತ್ತಲೂ ಇಡುತ್ತಾರೆ.
(೨)ಅಶ್ವತ್ತಮರ:-ಮರಗಳಲ್ಲಿ ಅತ್ಯಂತ ಹೆಚ್ಚು ಆಮ್ಲಜನಕ(Oxygen) ಕೊಡುವ ವೃಕ್ಷ ಅಶ್ವತ್ತ. ಇದಕ್ಕಾಗಿ ಈ ಮರವನ್ನು ಸುತ್ತುವುದರಿಂದ ಸ್ತ್ರೀಯರ ಗರ್ಭಕೋಶ ಸ್ವಚ್ಚವಾಗಿ ತಾಯ್ತನದ ಭಾಗ್ಯ ಬರುತ್ತದೆ ಎನ್ನುವ ನಂಬಿಕೆ ಜನರಲ್ಲಿದೆ ಹಾಗು ಇದು ನಿಜ.
(೩)ಮುಟ್ಟಿದರೆ ಮುನಿ ಗಿಡ (Touch me not):- ಯಾರಿಗೂ ಬೇಡವಾಗಿ ಬೆಳೆಯುವ ಈ ಗಿಡದಲ್ಲಿ ಅಮೋಘವಾದ ಔಷಧೀಯ ಗುಣವಿದೆ. ಈ ಗಿಡವನ್ನು (ಹೂ ರಹಿತ) ಜಜ್ಜಿ ಬಟ್ಟೆಯಲ್ಲಿ ಕಟ್ಟಿ ಗಂಜಿಯಲ್ಲಿ ಹಾಕಿ ತಿಂದರೆ ಅಥವಾ ಕಷಾಯಮಾಡಿ ಕುಡಿದರೆ, ಯಾವುದೇ ಶಸ್ತ್ರಚಿಕಿತ್ಸೆ ಇಲ್ಲದೆ ಮೂಲವ್ಯಾದಿ(Piles) ಗುಣಮುಖವಾಗುತ್ತದೆ.
ಹೀಗೆ ಈ ಪ್ರಪಂಚದಲ್ಲಿ ಏನೇನು ಹುಟ್ಟಿದೆ ಅದರೊಳಗೆ ವಿಶಿಷ್ಟ ಶಕ್ತಿಯಾಗಿ ತುಂಬಿರುವ ನಿಯಾಮಕ ಶಕ್ತಿ ಭಗವಂತ ಜನೇಶ್ವರಃ.
Monday, September 6, 2010
Vishnu Sahasranama 324-325
ಅಪಾಂ ನಿಧಿರಧಿಷ್ಠಾನಮಪ್ರಮತ್ತಃ.......
324) ಅಪಾಂನಿಧಿಃ
ಅಪಾಂನಿಧಿಃ ಎಂದರೆ "ನೀರಿನ ನೆಲೆ". ನೀರಿನ ನೆಲೆಯಾದ ಕಡಲಿನಲ್ಲಿ, ಕಡಲಿನ ದೇವತೆಯಾದ ವರುಣನಲ್ಲಿ, ಸಮಸ್ತ ಜಲರಾಶಿಯಲ್ಲಿ ಸನ್ನಿಹಿತನಾದ ಭಗವಂತ ಅಪಾಂನಿಧಿಃ. 'ಆಪ್' ಎಂದರೆ ಪಾನ ಮಾಡುವ ವಸ್ತು. ನಾವು ಬದುಕುವುದಕ್ಕೊಸ್ಕರ ಪಾನ ಮಾಡುವ ವಸ್ತು 'ನೀರು'. ಜ್ಞಾನಿಗಳು ಸದಾ ಪಾನ(ಶ್ರವಣ) ಮಾಡುವ ವಸ್ತು ಭಗವಂತನ 'ಅನಂತ ಗುಣ'. ಅನಂತ ಗುಣಗಳ ನೆಲೆ ಭಗವಂತನೋಬ್ಬನೆ. ಇನ್ನು ನಾವು ಮಾಡುವ ಸತ್ಕರ್ಮ ಕೊನೆಗೆ ಸೇರುವುದು ಭಗವಂತನನ್ನು. ಇದಕ್ಕಾಗಿ ಪ್ರತೀ ಪೂಜೆಯ ಕೊನೆಗೆ "ಕೃಷ್ಣಾರ್ಪಣ ಮಸ್ತು" ಎನ್ನುತ್ತೇವೆ. ಆದ್ದರಿಂದ ಸರ್ವ ಸತ್ಕರ್ಮಗಳ ನೆಲೆ ಭಗವಂತ. ಹೀಗೆ ಕರ್ಮಗಳ, ಗುಣಗಳ, ದೇವತೆಗಳ ಹಾಗೂ ನೀರಿನ ನೆಲೆಯಾದ ಭಗವಂತ ಅಪಾಂನಿಧಿಃ.
325) ಅಧಿಷ್ಟಾನಮ್
ಅಧಿಷ್ಟಾನಮ್ ಎಂದರೆ ಎಲ್ಲವುದಕ್ಕೂ ಆಧಾರ. ಪ್ರತಿಯೊಂದು ವಸ್ತುವಿನ ಮೂಲಾಧಾರ ಭಗವಂತ. ಭೂಮಿಯನ್ನು "ಶೇಷ" ಹೊತ್ತಿದ್ದಾನೆ. ಶೇಷನನ್ನು "ವಾಯು" ಹೊತ್ತಿದ್ದಾನೆ, ವಾಯುವಿಗೆ ಪೂರ್ಣಾಧಾರ ಭಗವಂತ. ಹೀಗೆ ಎಲ್ಲ ವಿಶ್ವಕ್ಕು ಆಧಾರವಾದ, ಎಲ್ಲಕ್ಕೂ ಅಧಿಕವಾದ ಸ್ಥಾನದಲ್ಲಿರುವ ಭಗವಂತ ಅಧಿಷ್ಟಾನಮ್.
Tuesday, August 24, 2010
Vishnu Sahasranama 308-309
ವಿಷ್ಣು ಸಹಸ್ರನಾಮ: ಇಷ್ಟೋ ವಿಶಿಷ್ಟಃ........
308) ಇಷ್ಟಃ
ಯಾವುದೇ ಒಂದು ವಸ್ತುವನ್ನು ಗೌರವಿಸಿ ಆದರಿಸಬೇಕಾದರೆ ಅದು ನಮಗೆ ಇಷ್ಟವಾಗಬೇಕು. ಭಗವಂತನ ರೂಪಗಳು ಹಲವು; ಹಾಗು ಒಬ್ಬೊಬ್ಬರಿಗೆ ಒಂದೊಂದು ರೂಪ ಇಷ್ಟ. ಇಲ್ಲಿ ಇಷ್ಟ ಎಂದರೆ ನಮ್ಮ ಪ್ರೀತಿಗೆ ಪಾತ್ರವಾದ ವಸ್ತು. ಭಗವಂತ ಎಲ್ಲರೂ ಪ್ರೀತಿಸಬೇಕಾದ ವಸ್ತು. ಇನ್ನೊಂದು ಅರ್ಥದಲ್ಲಿ ಇಷ್ಟಃ ಎಂದರೆ ಎಲ್ಲಾ ಯಾಗಗಳಿಂದ ಆರಾದಿಸಲ್ಪಡುವವನು. ಗೀತೆಯಲ್ಲಿ ಹೇಳುವಂತೆ:
ಅಹಂ ಹಿ ಸರ್ವ ಯಜ್ಞಾನಾಂ ಭೂಕ್ತಾ ಚ ಪ್ರಭುರೇವ ಚ
ನಾವು ಯಾವುದೇ ದೇವತೆಯ ಕುರಿತು ಯಾಗ ಮಾಡಿದರೂ ಅದು ಕೊನೆಗೆ ತಲುಪುವುದು ಅಂತರ್ಯಾಮಿ-ಯಾದ ಭಗವಂತನನ್ನೇ. ಹೀಗೆ ಎಲ್ಲಾ ಯಾಗಗಳಿಂದ ಆರಾದಿಸಲ್ಪಡುವ, ಎಲ್ಲಾರಿಗೂ ಇಷ್ಟನಾದ 'ಇಷ್ಟದೇವ' ಭಗವಂತ ಇಷ್ಟಃ.
309) ಅವಿಶಿಷ್ಟಃ (ವಿಶಿಷ್ಟಃ)
ಎಲ್ಲರೊಳಗೆ ಅಂತರ್ಯಾಮಿಯಾಗಿರುವ ಭಗವಂತ ಅವಿಶಿಷ್ಟಃ ; ಆತ ಎಲ್ಲರಿಗಿಂತ ಹೆಚ್ಚು ವಿಶೇಷತೆ ಉಳ್ಳವನು (Extraordinary). ಅಸಾಧಾರಣ ಗುಣವುಳ್ಳ ಸರ್ವೋತ್ಕೃಷ್ಟ ಭಗವಂತ ವಿಶಿಷ್ಟಃ. ಇಲ್ಲಿ ಶಿಷ್ಟ ಎಂದರೆ 'ಶೇಷ' ಎನ್ನುವ ಅರ್ಥವನ್ನೂ ಕೊಡುತ್ತದೆ. ಭಗವಂತ ಮಹಾ ಪ್ರಳಯದ ನಂತರ ಕೊನೆಗೆ ಉಳಿಯುವ ಏಕಮಾತ್ರ ಶಕ್ತಿ. ಪ್ರಪಂಚಕ್ಕೆ ಭಗವಂತನ ಅರಿವನ್ನು ಕೊಟ್ಟವರು ಜ್ಞಾನಿಗಳು. ಜ್ಞಾನಿಗಳ ಉಪದೇಶದಿಂದ ಯಾರನ್ನು ತಿಳಿಯಲು ಸಾದ್ಯವೋ ಅವನು ವಿಶಿಷ್ಟಃ
Friday, August 20, 2010
Vishnu Sahasranamam 294-299
ವಿಷ್ಣು ಸಹಸ್ರನಾಮ: ಕಾಮಹಾ ಕಾಮಕೃತ್ ಕಾಂತಃ ಕಾಮಃ ಕಾಮಪ್ರದಃ ಪ್ರಭುಃ
294) ಕಾಮಹಾ
ಇಲ್ಲಿ ಕಾಮ ಅಂದರೆ ಕಾ+ಅ+ಮ; 'ಕಾ' ಎಂದರೆ ಕುಸ್ಸಿತ, 'ಅ' ಎಂದರೆ ಅಜ್ಞಾನ ಹಾಗು 'ಮ' ಎಂದರೆ ಬಯಕೆ. 'ಹ' ಎಂದರೆ 'ಹಂತಿ ಅಥವಾ ನಾಶ'. ಆದ್ದರಿಂದ ಕಾಮಹಾ ಎಂದರೆ ಅಜ್ಞಾನದಿಂದ ಬರುವ ಕೆಟ್ಟ ಬಯಕೆಯನ್ನು ನಾಶ ಮಾಡುವವನು. ಕೆಟ್ಟ ಕಾಮನೆಗಳನ್ನು ಹೊತ್ತ ದುರ್ಜನರನ್ನು ನಾಶಮಾಡುವವನು ಕಾಮಹಾ. ಕೃಷ್ಣನಾಗಿ ಕಂಸ ಹಾಗು ಜರಾಸಂದನನ್ನು, ರಾಮನಾಗಿ ರಾವಣ-ಕುಂಭಕರ್ಣನನ್ನು, ವರಾಹನಾಗಿ ಹಿರಣ್ಯಾಕ್ಷನನ್ನು, ನರಸಿಂಹನಾಗಿ ಹಿರಣ್ಯಕಷಿಪುವನ್ನು ಸಂಹಾರ ಮಾಡಿದ ಭಗವಂತ ದುಷ್ಟ ಕಾಮನೆಗಳನ್ನು ಎಂದೂ ನೆರವೇರಿಸಿಲ್ಲ. ಭಕ್ತರ ಅಭೀಷ್ಟವನ್ನು ಪೂರೈಸುವ ಆತನಲ್ಲಿ ನಾವು ನಮ್ಮ 'ಕೆಟ್ಟ ಬಯಕೆಗಳಿಂದ' ಮುಕ್ತಿ ಕರುಣಿಸೆಂದು ಬೇಡಬೇಕು.
295) ಕಾಮಕೃತ್
ಸದ್ಬಯಕೆಗಳ ತಂದೆ ಭಗವಂತ ! ಬಯಕೆಗಳ ಅಭಿಮಾನಿ ಕಾಮನನ್ನು ಹುಟ್ಟಿಸಿದವ. ಕೆಟ್ಟ ಕಾಮನೆಗಳ ಅಭಿಮಾನಿ 'ಕಾಲನೇಮಿ' ಕಂಸನನ್ನು ಸಂಹರಿಸಿದ ಭಗವಂತ ಕಾಮಕೃತ್.
296) ಕಾಂತಃ
ಭಗವಂತ ಎಲ್ಲರೂ ಬಯಸುವ ಚಲುವ. ಮನ್ಮಥನಿಗೂ ಸೌಂದರ್ಯವನ್ನು ಕೊಟ್ಟ ಭಗವಂತ ಚಲುವರ ಚಲುವ. ಕಂ+ಅಂತಃ -ಕಾಂತಃ ಇಲ್ಲಿ ಕಂ ಎಂದರೆ ತುದಿ ಆದ್ದರಿಂದ ಕಾಂತಃ ಎಂದರೆ ಆನಂದದ ತುತ್ತ-ತುದಿ. ಭಗವಂತ ಆನಂದದ ಪರಾಕಾಷ್ಟೆ. ಜ್ಞಾನಿಗಳಿಗೆ ಆನಂದವನ್ನು ಕೊಡುವ ಭಗವಂತ ಪಾಪಿಗಳಿಗೆ ಅದರ ಅಂತ! ಪರಂಪರೆಯಲ್ಲಿ ಆನಂದವನ್ನು ಪಡೆದ ಅತೀ ದೊಡ್ಡ ಶತಾನಂದನಿಗಿಂತಲೂ ಆಚೆಗಿನ ಶಕ್ತಿಯಾದ ಭಗವಂತ ಕಾಂತಃ.
297) ಕಾಮಃ
ಭಗವಂತ ಎಲ್ಲರೂ ಬಯಸುವಂತವನು. ಅಳತೆ ಮಾಡಲು ಅಸಾಧ್ಯವಾದ ಜ್ಞಾನಾನಂದಗಳ ಪರಿಪೂರ್ಣ ಸ್ವರೂಪ.
298) ಕಾಮಪ್ರದಃ
ಸದ್ಬಯಕೆಗಳನ್ನು ನಮ್ಮ ಕರ್ಮಫಲಕ್ಕನುಸಾರವಾಗಿ ಈಡೇರಿಸುವ, ಎಲ್ಲಾ ವಿವೇಕಿಗಳು ಬಯಸುವ ಅತ್ಯಂತ ಅಮೂಲ್ಯ ವಸ್ತು ಭಗವಂತ. ಭಕ್ತರ ಬಯಕೆಗಳನ್ನು ಈಡೇರಿಸುವಲ್ಲಿ ಭಗವಂತನಿಗೆ ತೃಪ್ತಿಯೇ ಇಲ್ಲ. ತನ್ನ ಸಹಸ್ರಾರು ತೋಳುಗಳಿಂದ ಭಕ್ತಕೋಟಿಯ ಅಭೀಷ್ಟವನ್ನು ಈಡೇರಿಸುವ ಭಗವಂತ ಕಾಮಪ್ರದಃ.
299) ಪ್ರಭುಃ
ಭಕ್ತಕೋಟಿಯ ಸರ್ವಾಭೀಷ್ಟವನ್ನು ನೆರವೇರಿಸುವ ಭಗವಂತ ಸರ್ವ ಸಮರ್ಥ. ಯಾರಿಗೆ ಯಾವ ಕಾಲದಲ್ಲಿ ಏನನ್ನು ಕೊಡಬೇಕು, ಏನನ್ನು ಕೊಡಬಾರದು ಎನ್ನುವುದು ಅವನಿಗೆ ತಿಳಿದಿದೆ. ನಾವು ನಮ್ಮ ಮಕ್ಕಳು ಬಯಸಿದ್ದನ್ನೆಲ್ಲ ಕೊಡುವುದಿಲ್ಲ. ಏಕೆಂದರೆ ಮಕ್ಕಳಿಗೆ ಯಾವುದೂ ಒಳ್ಳೆಯದು ಹಾಗು ಯಾವುದು ಕೆಟ್ಟದ್ದು ಎನ್ನುವ ಅರಿವಿರುವುದಿಲ್ಲ. ಹೀಗೆ ಭಗವಂತ ತನ್ನ ಭಕ್ತರ ಅಭೀಷ್ಟವನ್ನು ಅವರ ಒಳಿತಿಗನುಗುಣವಾಗಿ ಕೊಟ್ಟು ಉದ್ದರಿಸುವ ಪ್ರಭುಃ.
Wednesday, August 18, 2010
Vishnu Sahasranamam 287-289
ವಿಷ್ಣು ಸಹಸ್ರನಾಮ: ಔಷಧಂ ಜಗತಃ ಸೇತುಃ ಸತ್ಯಧರ್ಮಪರಾಕ್ರಮಃ
287) ಔಷಧಂ
ಇಡೀ ವಿಶ್ವದಲ್ಲಿ ಎಲ್ಲಾ ರೋಗಗಳಿಗೆ, ಮೂಲಭೂತವಾಗಿ ಸಂಸಾರ ಬಂಧನವೆಂಬ ರೋಗಕ್ಕೆ ಔಷಧ ಕೇವಲ ಭಗವಂತ. ಆತ ಭವರೋಗ ವೈದ್ಯ. ಅವನೇ ವೈದ್ಯ, ಅವನೇ ಔಷಧ! ಈ ನಾಮವನ್ನು ಒಡೆದು ನೋಡಿದರೆ ಔಷ+ಧ. ಇಲ್ಲಿ ಔಷ ಎಂದರೆ ಉಷ ಎಂದರೆ ಉಷ್ಣ ಅಥವಾ ಸುಡುವಂತಹದ್ದು ಎನ್ನುವ ಅರ್ಥವನ್ನು ಕೊಡುತ್ತದೆ. ಔಷರು ಎಂದರೆ ಸಂಸಾರ ತಾಪತ್ರಯದಲ್ಲಿ ಸುಟ್ಟು ಹೋಗುತ್ತಿರುವವರು. 'ಧ' ಎಂದರೆ ರಕ್ಷಕ ಅಥವಾ ಗುಣಪಡಿಸುವವ. ಔಷಧಂ ಎಂದರೆ ಸಂಸಾರ ಸಾಗರದಲ್ಲಿ ಸಿಲುಕಿ ಬೆಂದು ಬಸವಳಿದ ಜೀವರ ರಕ್ಷಕನಾದ ವೈದ್ಯ ಹಾಗು ಸ್ವಯಂ ಔಷಧ. He is the Doctor and He is the Medicine!
288) ಜಗತಃ ಸೇತುಃ
ಭಗವಂತ ಜಗತ್ತಿನಿಂದ ಮೋಕ್ಷದ ಕಡೆಗೆ ಬಿಗಿದ ಸೇತುವೆ. ಅವನೇ ಜಗತ್ತೆಂಬ ಕಡಲಿನ ಆಚೆಯ ದಢ. He is the Means and He is the End. He is the Bridge and He is the Destination! 'ಸೇತು' ಎಂದರೆ ಬಂಧನ ಶಕ್ತಿ. ನಮ್ಮನ್ನು ಈ ಸಂಸಾರವೆಂಬ ಬಂಧನದಲ್ಲಿ ಹಾಕಿದವನೂ ಅವನೇ. ಸಂಸಾರ ಸಾಗರವನ್ನು ದಾಟಲು ಸೇತುವು ಅವನೇ. ದಾಟಿದ ನಂತರ ಸೇರಬೇಕಾದ ಗಮ್ಯವು ಅವನೇ. ಇಂತಹ ಭಗವಂತ ಜಗತಃ ಸೇತುಃ
289) ಸತ್ಯಧರ್ಮಪರಾಕ್ರಮಃ
ಭಗವಂತನಲ್ಲಿ ಎರಡು ಮುಖ್ಯವಾದ ಗುಣಗಳನ್ನು ಹೇಳುತ್ತಾರೆ. ಅವುಗಳೆಂದರೆ ಧರ್ಮ ಮತ್ತು ಪರಾಕ್ರಮ. ಇಲ್ಲಿ ಧರ್ಮ ಎಂದರೆ ಧಾರಣ ಶಕ್ತಿ. ದುಷ್ಟ ಶಕ್ತಿಯನ್ನು ನಿರ್ನಾಮ ಮಾಡುವುದು ಪರಾಕ್ರಮ. ಭಗವಂತನ ಮಹಿಮೆ ಯಥಾರ್ಥವಾದದ್ದು ಆದ್ದರಿಂದ ಆತ ಸತ್ಯಧರ್ಮಪರಾಕ್ರಮಃ. ಭಗವಂತ ಸತ್ಯ ಅಂದರೆ ಸೃಷ್ಟಿ-ಸ್ಥಿತಿ-ಸಂಹಾರಕ್ಕೆ ಕಾರಣ ಕರ್ತ. ಆತ ನಮಗೆ ಜ್ಞಾನವನ್ನು ಕೊಡುವವ. ಭಾಗವತದಲ್ಲಿ ಹೇಳುವಂತೆ "ಸತ್ಯಂ ಜ್ಞಾನಂ ಅನಂತಮ್ ಬ್ರಹ್ಮ ಸತ್ಯಂ ಪರಮ್ ಧೀಮಹಿ". ಸತ್ಯ ನಾಮಕನಾದ ಭಗವಂತನನ್ನು ತನ್ನ ಹೃದಯದಲ್ಲಿ ಹೊತ್ತ ಭಕ್ತರಿಗೆ ಜ್ಞಾನವೆಂಬ ಪರಾಕ್ರಮವನ್ನು ಕೊಟ್ಟು ಅನ್ಯಾಯದ ವಿರುದ್ದ ಹೋರಾಡುವ ಪರಾಶಕ್ತಿಯಾದ ಭಗವಂತ ಸತ್ಯಧರ್ಮಪರಾಕ್ರಮಃ.
Sunday, August 15, 2010
Vishnu Sahasranama 276-278
ವಿಷ್ಣು ಸಹಸ್ರನಾಮ: ಓಜಸ್ತೇಜೋದ್ಯುತಿಧರಃ ಪ್ರಕಾಶಾತ್ಮಾ ಪ್ರತಾಪನಃ
276) ಓಜಸ್ತೇಜೋದ್ಯುತಿಧರಃ
ಆತ್ಮಭಲ, ಪರಾಕ್ರಮ ಹಾಗು ಕಾಂತಿಗಳಿಗಾಸರೆಯಾದ ಭಗವಂತ ಓಜಸ್ತೇಜೋದ್ಯುತಿಧರಃ
277) ಪ್ರಕಾಶಾತ್ಮಾ
ಭಗವಂತ ಪ್ರಕಾಶ ಸ್ವರೂಪ; ಪರಿಶುದ್ಧವಾದ ಜ್ಞಾನದ ಬೆಳಕು ನೀಡುವವ. ಗೀತೆಯಲ್ಲಿ ಹೇಳುವಂತೆ:
ಜ್ಞಾನೇನ ತು ತದಜ್ಞಾನಂ ಯೇಷಾಂ ನಾಶಿತಮಾತ್ಮನಃ
ತೇಷಾಮಾದಿತ್ಯವಜ್ ಜ್ಞಾನಂ ಪ್ರಕಾಶಯತಿ ತತ್ ಪರಮ್ (ಅ-೫, ಶ್ಲೋ-೧೬)
ಅಂದರೆ ಭಗವಂತನ ಅರಿವಿನಿಂದ ಅವಿಧ್ಯೆಯನ್ನು ಅಳಿಸಿಕೊಂಡವರ ಆ 'ಅರಿವು' ಸೂರ್ಯನಂತೆ ಪರತತ್ತ್ವವನ್ನು ಬೆಳಗಿಸುತ್ತದೆ. ಹೀಗೆ ಪ್ರಕಾಶ ಸ್ವರೂಪನಾದ ಭಗವಂತ ಪ್ರಕಾಶಾತ್ಮಾ.
278) ಪ್ರತಾಪನಃ
ಶತ್ರುಗಳನ್ನು ಸದೆಬಡಿಯುವ ಪ್ರತಾಪಶಾಲಿ ;ಬೆಂಕಿಯೊಳಗಿರುವವ, ಸೂರ್ಯನೋಳಗಿರುವ ಭಗವಂತ ಪ್ರತಾಪನಃ. ಅರ್ಜುನನಿಗೆ ವಿಶ್ವರೂಪ ದರ್ಶನದಲ್ಲಿ ಭಗವಂತ ಕಾಣಿಸಿದ್ದು ಹೀಗೆ:
ಲೇಲಿ ಹೈಸೇ ಗ್ರಸಮಾನಃ ಸಮಂತಾತ್ ಲೋಕಾನ್ ಸಮಗ್ರಾನ್ ವದನೈರ್ಜ್ವಲದ್ಭಿ:
ತೇಜೋಭಿರಾಪೂರ್ಯ ಜಗತ್ ಸಮಗ್ರಂ ಭಾಸಸ್ತವೋಗ್ರಾ: ಪ್ರತಪಂತಿ ವಿಷ್ಣೋ (ಅ-೧೧,ಶ್ಲೋ-೩೦)
ಎಲ್ಲೆಲ್ಲೂ ತುಂಬಿರುವ, ಬೆಂಕಿ ಕಾರುವ ಬಾಯಿಗಳಿಂದ ಎಲ್ಲಾ ಲೋಕಗಳನ್ನು ಎಲ್ಲೆಡೆಯು ನುಂಗಿ ನೋಣೆಯುತ್ತಿರುವ, ವಿಶ್ವವನ್ನು ಕೋರೈಸಿ ಸುಡುವ ಮೈಯ ಹೊಳಪುಳ್ಳ ಭಗವಂತ. ಇದು ಭಗವಂತನ ದುಷ್ಟ ನಿಗ್ರಹ ರೂಪ. ಇಂತಹ ಭಗವಂತ ಪ್ರತಾಪನಃ.
Saturday, August 14, 2010
Vishnu Sahasranamam 272-275
ವಿಷ್ಣು ಸಹಸ್ರನಾಮ: ನೈಕರೂಪೋ ಬೃಹದ್ರೂಪಃ ಶಿಪಿವಿಷ್ಟಃ ಪ್ರಕಾಶನಃ
272) ನೈಕರೂಪಃ
ನೈಕರೂಪ ಎಂದರೆ ಅನಂತ ರೂಪ. ಭಗವಂತ ಒಬ್ಬೊಬ್ಬರೊಳಗೆ ಬಿಂಬರೂಪನಾಗಿ ಇಡೀ ವಿಶ್ವದಲ್ಲಿ ತುಂಬಿದ್ದಾನೆ. ನಾರಾಯಣ ಸೂಕ್ತದಲ್ಲಿ ಹೇಳುವಂತೆ:
ತಸ್ಯಾಂತೆ ಸುಶಿರಂ ಸೂಕ್ಷ್ಮಂ ತಸ್ಮಿನ್ ಸರ್ವಂ ಪ್ರತಿಷ್ಟಿತಂ
ಅಂದರೆ ನಮ್ಮ ಹೃದಯ ಮಧ್ಯದಲ್ಲಿ ಸೂಜಿಮೊನೆಯಷ್ಟು ಸೂಕ್ಷ್ಮವಾದ ಅತ್ಯಂತ ಪವಿತ್ರವಾದ ಸ್ಥಾನದಲ್ಲಿ ಭಗವಂತನಿದ್ದಾನೆ. ಇಡೀ ಬ್ರಹ್ಮಾಂಡವನ್ನು ಯಾವ ಶಕ್ತಿ ನಿಯಂತ್ರಿಸುತ್ತದೋ ಅದೇ ಸರ್ವಸಮರ್ಥ ಶಕ್ತಿ ನಮ್ಮ ಹೃತ್ಕಮಲದಲ್ಲಡಗಿದೆ. ಇದೇ ಶಕ್ತಿ ಇಡೀ ವಿಶ್ವದಲ್ಲಿ ತುಂಬಿರುವ ಸಮಗ್ರಶಕ್ತಿ. ಹೀಗೆ ಬಿಂಬರೂಪಿಯಾಗಿ ಅನಂತರೂಪಿಯಾಗಿರುವ ಭಗವಂತ ನೈಕರೂಪಃ.
273) ಬೃಹದ್ರೂಪಃ
ಬೃಹತ್ ಎಂದರೆ ನಮಗೆ ಕಾಣುವ ಬೆಳಕುಗಳಲ್ಲೆಲ್ಲಾ ಅತ್ಯಂತ ದೊಡ್ಡ ಬೆಳಕಾದ 'ಸೂರ್ಯ'. ಇಡೀ ಬ್ರಹ್ಮಾಂಡಕ್ಕೆ ಬೆಳಕು ನೀಡುವ ಸೂರ್ಯನೊಳಗಿರುವ ಭಗವಂತ ನಮ್ಮ ಹೃತ್ಕಮಲ ಮಧ್ಯ ನಿವಾಸಿ ಕೂಡಾ ಹೌದು. ಇದನ್ನೇ ಗಾಯತ್ರಿ ಉಪಾಸನೆಯಲ್ಲಿ ಹೀಗೆ ಹೇಳಿದ್ದಾರೆ:
ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ
ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋನಃ ಪ್ರಚೋದಯಾತ್
ಬ್ರಹ್ಮಾಂಡ ಹಾಗೂ ಪಿಂಡಾ೦ಡದ ಸಮನ್ವಯ ಗಾಯತ್ರಿಯಲ್ಲಿದೆ. ಯಾವ ಶಕ್ತಿ ಸೂರ್ಯಮಂಡಲದಲ್ಲಿ ಬೃಹತ್ ಆಗಿ ಇಡೀ ವಿಶ್ವಕ್ಕೆ ಜೀವದಾನ ಮಾಡುತ್ತಿದೆಯೋ ಅದೇ ಶಕ್ತಿ ನನ್ನೊಳಗಿದ್ದು ಸದ್ಬುದ್ಧಿಯನ್ನು ಕೊಡಲಿ, ವಿಶ್ವಕ್ಕೆ ಬದುಕನ್ನು ನೀಡುವ ಶಕ್ತಿ ನನ್ನೊಳಗಿದ್ದು ನನ್ನ ಇಂದ್ರಿಯವನ್ನು ಒಳ್ಳೆಯ ವಿಷಯದತ್ತ ಪ್ರೇರೇಪಿಸಲಿ, ಒಳ್ಳೆಯದಕ್ಕೊಸ್ಕರ ಬದುಕುವಂತೆ ಮಾಡಲಿ ಎನ್ನುವುದೇ ಈ ಪ್ರಾರ್ಥನೆ. ಒಬ್ಬೊಬ್ಬರಿಗೆ ಒಂದೊಂದು ರೂಪದಲ್ಲಿ ಅವತಾರಪುರುಷ ಭಗವಂತ ಕಾಣಿಸಿಕೊಂಡಿದ್ದಾನೆ. ವಾಮನ ರೂಪಿಯಾಗಿ ಬಂದು ಬ್ರಹದ್ರೂಪಿಯಾದ ನಾರಾಯಣ, ವೈವಸ್ವತ ಮನುವಿಗೆ ಚಿಕ್ಕ ಮೀನಿನ ರೂಪದಲ್ಲಿ ಕಾಣಿಸಿಕೊಂಡು ನಂತರ ಮಹಾ ಮತ್ಸ್ಯವಾಗಿ ದರ್ಶನಕೊಟ್ಟ ಭಗವಂತ ಹಾಗು ಅರ್ಜುನನ ಸಾರಥಿಯಾಗಿ ತನ್ನ ವಿಶ್ವರೂಪವನ್ನು ತೋರಿದ ಕೃಷ್ಣ, ತಾಯಿಗೆ ತನ್ನ ಬಾಯಿಯಲ್ಲಿ ಬ್ರಹ್ಮಾಂಡವನ್ನು ತೋರಿದ ಭಗವಂತ ಬೃಹದ್ರೂಪಃ.
274) ಶಿಪಿವಿಷ್ಟಃ
'ಶಿಪಿ' ಎನ್ನುವ ಪದ ಅರ್ವಾಚೀನ ಸಂಸ್ಕೃತ ಭಾಷೆಯಲ್ಲಿ ಪ್ರಚಲಿತದಲ್ಲಿಲ್ಲ. ಇದು ವೈದಿಕ ಪದ. ಶಿಪಿ ಎಂದರೆ ಪ್ರಾಣಿಗಳು. ಶಿಪಿವಿಷ್ಟಃ ಎಂದರೆ ಪ್ರಾಣಿಗಳಲ್ಲಿ ವಿಶಿಷ್ಟವಾಗಿ ಸನ್ನಿಹಿತನಾದ ಭಗವಂತ. ಇದೊಂದು ವಿಶಿಷ್ಟವಾದ ಯಾಜ್ಞಿಕ ಉಪಾಸನೆ. ವೇದದಲ್ಲಿ ವಿಶೇಷವಾಗಿ ಐದು ಪ್ರಾಣಿಗಳನ್ನು ಉಲ್ಲೇಖ ಮಾಡಿದ್ದಾರೆ. ಅವುಗಳೆಂದರೆ ಅಶ್ವ, ಗೋವು, ಕುರಿ ಆಡು ಹಾಗು ಮನುಷ್ಯ. ಈ ಪಂಚ ಪ್ರಾಣಿಗಳಲ್ಲಿ ಪಂಚರೂಪದಲ್ಲಿ ಭಗವಂತ ಸನ್ನಿಹಿತನಾಗಿದ್ದಾನೆ ಪುರುಷ ಸೂಕ್ತದಲ್ಲಿ ಈ ಐದು ಪ್ರಾಣಿಗಳ ಉಲ್ಲೇಖವಿದೆ.
ತಸ್ಮಾದಶ್ವಾ ಅಜಾಯನ್ತ ಯೇ ಕೇ ಚೋಭಯಾದತಃ
ಗಾವೋ ಹ ಜಜ್ಞಿರೇ ತಸ್ಮಾತ್ ತಸ್ಮಾಜ್ಜಾತಾ ಅಜಾವಯಃ
ಯತ್ಪುರುಷಂ ವ್ಯದಧುಃ
ಈ ಐದು ಪ್ರಾಣಿಗಳಲ್ಲಿ ಭಗವಂತನ ಸೃಷ್ಟಿಯ ವೈಶಿಷ್ಟ್ಯ ಕಾಣಬಹುದು. ಅಶ್ವ ಹಾಗು ಎತ್ತು ಮನುಷ್ಯನ ಸಂಚಾರದ ಸಾಧನವಾಗಿದ್ದರೆ, ದನ ಯಜ್ಞದ ಮೂಲ ದ್ರವ್ಯವಾದ ಹಾಲು-ಮೊಸರು-ಬೆಣ್ಣೆ-ತುಪ್ಪವನ್ನು ಕೊಡುವ ಸಾಕು ಪ್ರಾಣಿ. ಅಶ್ವ ತನ್ನ ಜೀವದ ಪಣತೊಟ್ಟು ಯಜಮಾನನ ರಕ್ಷಣೆ ಮಾಡುವ ವಿಶಿಷ್ಟ ಪ್ರಾಣಿ. ಅಶ್ವದಲ್ಲಿ ಕಾಣುವ ಇನ್ನೊಂದು ವಿಶೇಷ ಲಕ್ಷಣವೆಂದರೆ ಅದು ಈ ಪ್ರಪಂಚದಂತೆ ನಿರಂತರ ಚಲನೆಯಲ್ಲಿರುತ್ತದೆ. ಅದು ಎಂದೂ ಚಲನೆ ರಹಿತವಾಗಿರುವುದಿಲ್ಲ. ಇದಕ್ಕಾಗಿ ಈ ಪ್ರಪಂಚವನ್ನು ಅಶ್ವತ್ಥ ಎಂದೂ ಕರೆಯುತ್ತಾರೆ. ಅಶ್ವತ್ಥಮರ ಕೂಡ ಎಂದೂ ಚಲನೆ ರಹಿತವಾಗಿರುವುದಿಲ್ಲ. ಅಶ್ವ ನಿರಂತರ ಎಷ್ಟೇ ದೂರವಾದರೂ ಆಯಾಸವಿಲ್ಲದೆ ಚಲಿಸಬಲ್ಲದು. ಚಲನೆ ಅದರ ಸಹಜ ಕ್ರಿಯೆ. ಅಶ್ವ ಮನುಷ್ಯನ ಚಾಪಲ್ಯದ ಸಂಕೇತ ಕೂಡ ಹೌದು. ಅದಕ್ಕಾಗಿ ಹಿಂದೆ ಅಶ್ವಮೇಧಯಾಗ ಮಾಡಿ ಕುದುರೆಯನ್ನು ಭಲಿ ಕೊಡುತ್ತಿದ್ದರು ಹಾಗು ಆನಂತರ ತಮ್ಮ ಚಾಪಲ್ಯದಿಂದ ಮುಕ್ತಿಯನ್ನು ಪಡೆದು ರಾಜರ್ಶಿಯಾಗಿ ಬದುಕುತ್ತಿದ್ದರು. ಮಾಂಸಹಾರಿಗಳು ತಾವು ತಿನ್ನುವ ಆಹಾರವನ್ನು ದೇವರಿಗೆ ಅರ್ಪಿಸಿ ತಿನ್ನುವುದು ಸಾಮಾನ್ಯ ಹಾಗು ಶಾಸ್ತ್ರ ಸಮ್ಮತ.
ಆಡು ಸೋಮಯಾಗದಲ್ಲಿ ಪ್ರಮುಖ ದ್ರವ್ಯ. ಆದರೆ ಸೋಮಯಾಗವನ್ನು ಕೇವಲ ಮಾಂಸಾಹಾರಿಗಳು ಮಾತ್ರ ಮಾಡಬಹುದು. ಆಡಿನ ಹಾಲನ್ನು ಈಗಲೂ ಆಹಾರವಾಗಿ ಉಪಯೋಗಿಸುತ್ತಾರೆ. ಇನ್ನು ಕುರಿ ಪ್ರಮುಖವಾಗಿ ಮನುಷ್ಯನ ಬಟ್ಟೆಯ ಸಾಧನ. ವೈದಿಕ ಸಂಪ್ರದಾಯ ಬೆಳೆದುಬಂದಿದ್ದು ಹಿಮಾಲಯದಲ್ಲಿ. ಅದಕ್ಕಾಗಿ 'ಸಿಂಧೂ ಕಣಿವೆಯ ಸಂಸ್ಕೃತಿ' ಎನ್ನುವ ಹೆಸರು ಬಂದಿರುವುದು. ಈ ಸಿಂಧೂ ಎನ್ನುವ ಹೆಸರು ಪರ್ಷಿಯನ್ ಭಾಷೆಯಲ್ಲಿ 'ಹಿಂದೂ' ಆಗಿ ನಂತರ ಬ್ರಿಟೀಷರಿಂದ 'ಇಂದು' ಆಗಿ ಇದೀಗ ಇಂಡಿಯಾ ಆಗಿದೆ!
ಈ ಸಿಂಧೂ ಕಣಿವೆಯಲ್ಲಿ ಕೊರೆಯುವ ಚಳಿಗೆ ಮನುಷ್ಯನ ರಕ್ಷಣೆ 'ಕುರಿಯಿಂದ' ತಯಾರಾದ ಬಟ್ಟೆಯಿಂದಾಗುತ್ತಿತ್ತು. ಹೀಗೆ ಈ ಮೇಲಿನ ನಾಲ್ಕು ಪ್ರಾಣಿಗಳಲ್ಲಿ ವಿಶಿಷ್ಟವಾಗಿ ಸನ್ನಿಹಿತನಾದ ಭಗವಂತ ಶಿಪಿವಿಷ್ಟಃ.
275) ಪ್ರಕಾಶನಃ
ಪ್ರಕಾಶನ ಎಂದರೆ ಎಲ್ಲವನ್ನೂ ಬೆಳಗುವವನು. ಗೀತೆಯಲ್ಲಿ ಹೇಳುವಂತೆ :
ಯದಾದಿತ್ಯಗತಂ ತೇಜೋ ಜಗದ್ ಭಾಸಯತೇsಖಿಲಮ್
ಯಚ್ಚಂದ್ರಮಸಿ ಯಚ್ಚಾಗ್ನೋ ತತ್ ತೇಜೋ ವಿದ್ಧಿ ಮಾಮಕಮ್ (ಅ-೧೫ ಶ್ಲೋ-೧೨)
ಅಗ್ನಿ, ನಕ್ಷತ್ರ ಹಾಗು ಪ್ರಪಂಚದ ಸಮಸ್ತ ಬೆಳಕಿನ ಪುಂಜಗಳನ್ನು ಬೆಳಗಿಸುವ ಮೂಲ ಜ್ಯೋತಿ ಭಗವಂತ. ಈ ನಾಮವನ್ನು ಒಡೆದು ನೋಡಿದರೆ 'ಪ್ರಕಾ+ಅಶನ' ಎಂದರೆ ಸರ್ವೋತ್ಕ್ರುಷ್ಟವಾದ ಆನಂದ ಸ್ವರೂಪ. ಪ್ರಕಾಶರು ಎಂದರೆ ಮುಕ್ತಿ ಯೋಗ್ಯ ಜ್ಞಾನಿಗಳು. ಅವರಿಗೆ 'ನಯತಿ' ಎಂದರೆ ಮೋಕ್ಷವನ್ನು ಕೊಡುವವನು ಪ್ರಕಾಶನಃ
Wednesday, August 11, 2010
Vishnu Sahasranamam 266
266) ಸುಭುಜಃ
ಸುಭುಜ ಎಂದರೆ ಸುಂದರವಾದ ತೊಳುಳ್ಳವನು ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ವೇದವ್ಯಾಸರು ಹೇಳುವಂತೆ "ಭಗವಂತನ ತೋಳುಗಳಿಗೆ ಈ ಜಗತ್ತಿನ ರಕ್ಷಣೆಯಲ್ಲದೆ ಇನ್ನೇನು ಕೆಲಸವಿಲ್ಲ!" ನಿರಂತರ ಜಗತ್ತಿನ ರಕ್ಷಣೆಯ ಹೊಣೆ ಹೊತ್ತ ಭಗವಂತನನ್ನು ಸುಭುಜ ಎನ್ನುತ್ತಾರೆ. ನಮ್ಮ ತೋಳಿಗೂ ಹಾಗು ದೇಹದ ಎತ್ತರಕ್ಕೂ ಸಂಭಂದವಿದೆ. ವ್ಯಕ್ತಿಯ ಎರಡು ಕೈಗಳನ್ನು ಚಾಚಿದಾಗ ಅದರ ಒಟ್ಟು ಉದ್ದ ಒಂದು ಮಾರು. ಒಂದು ಮಾರು ಎಂದರೆ ನಾಲ್ಕು ಮೊಳ. ಒಂದು ಮೊಳ ಎಂದರೆ ಇಪ್ಪತ್ನಾಲ್ಕು ಅಂಗುಲ.ವ್ಯಕ್ತಿಯ ಎತ್ತರ ಒಂದು ಮಾರು=ನಾಲ್ಕು ಮೊಳ=ತೊಂಬತ್ತಾರು ಅಂಗುಲ=ಹತ್ತು ಗೇಣು ಉದ್ದವಿದ್ದರೆ ಆತ ಸುಭುಜ. ಸಾಮಾನ್ಯವಾಗಿ ಈ ರೀತಿಯ ವ್ಯಕ್ತಿತ್ವವನ್ನು ಕೇವಲ ಭಗವಂತನ ಅವತಾರದಲ್ಲಿ ಮಾತ್ರ ನೋಡುತ್ತೇವೆ. ಸಾಮಾನ್ಯ ಮಾನವನಲ್ಲಿ ಈ ಮಾಪನ ನೂರಕ್ಕೆ ನೂರು ಸಮನಾಗಿರುವುದಿಲ್ಲ. ಇಷ್ಟೇ ಅಲ್ಲದೆ ವ್ಯಕ್ತಿಯ ಪಾದ ಕೂಡ ದೇಹದ ಎತ್ತರದ ಏಳನೇ ಒಂದರಷ್ಟು ಉದ್ದವಿರುತ್ತದೆ. ಭೂಭುಜರು ಎಂದರೆ ಭೂಮಿಯಲ್ಲಿ ಆಡಳಿತ ಮಾಡುವ ಕ್ಷತ್ರಿಯರು, ಸುಭುಜ ಎಂದರೆ ಜಗತ್ತಿನ ಪಾಲನೆ ಹಾಗು ಸಂಹಾರಕರ್ತ.ಎಂದೂ ಕೆಟ್ಟದ್ದನ್ನು ಬಯಸದ ಸುಖವನ್ನು ಮಾತ್ರ ಭೋಗಿಸುವ ಭಗವಂತ ಸುಭುಜಃ.
Monday, August 9, 2010
Vishnu Sahasranama 259-261
259) ವಿಷ್ಣುಃಈ ನಾಮ ವಿಷ್ಣು ಸಹಸ್ರನಾಮದಲ್ಲಿ ಮೂರು ಬಾರಿ ಪುನರುಕ್ತಿಯಾಗಿದೆ. ಈ ಹಿಂದೆ ಹೇಳಿದಂತೆ ವಿಷತಿ ಇತಿ ವಿಷ್ಣುಃ. ಅಂದರೆ ಯಾರು ಎಲ್ಲರ ಒಳಗೆ ಪ್ರವೇಶಿಸಬಲ್ಲನೋ ಅವನು ವಿಷ್ಣು. ಸರ್ವಾಂತರ್ಯಾಮಿ ಭಗವಂತ. ವಿಷ್ಣು ಸೂಕ್ತದಲ್ಲಿ ಹೇಳಿರುವಂತೆ:
ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ ಸಮೂ(ಲ)ಢಮಸ್ಯ ಪಾಗೇಂಸುರೇಪ್ರಪಂಚದಲ್ಲಿ ಏನೇನು ವಸ್ತುಗಳಿವೆ ಅದರೊಳಗಿರುವ ಹಾಗು ನಮ್ಮೊಳಗಿರುವ ಭಗವಂತ ಒಬ್ಬನೇ. ಹಿಂದೂ-ಮುಸಲ್ಮಾನ್-ಕ್ರಿಸ್ತ ಎಲ್ಲರ ದೇವರು ಒಬ್ಬನೇ. ವೈಷ್ಣವ-ಶೈವ ಅನ್ನುವ ಬೇದ-ಭಾವ ಮನುಷ್ಯನ ಸೃಷ್ಟಿ. ಸರ್ವಾಂತರ್ಯಾಮಿ, ಸರ್ವಗತ ಹಾಗು ಸರ್ವಸಮರ್ಥನಾದ ದೇವರು ಇಬ್ಬರಿರಲು ಸಾದ್ಯವಿಲ್ಲ. ಸರ್ವಶಬ್ದ ವಾಚ್ಯನಾದ ಭಗವಂತನನ್ನು ಯಾವ ಹೆಸರಿನಿಂದ ಕೂಡ ಕರೆಯಬಹುದು, ಹೆಸರಿನ ಹಿಂದಿರುವ ಅರ್ಥ ತಿಳಿದಿರಬೇಕು ಅಷ್ಟೇ! ಮದ್ವಾಚಾರ್ಯರ ಜೀವನ ಚರಿತ್ರೆಯಲ್ಲಿನ ಒಂದು ಘಟನೆ ಇದಕ್ಕೆ ಉತ್ತಮ ನಿದರ್ಶನ. ಒಮ್ಮೆ ಆಚಾರ್ಯರು ಉತ್ತರ ಭಾರತ ಪ್ರವಾಸದಲ್ಲಿದ್ದಾಗ ದಾರಿಯಲ್ಲಿ ಹಿಂದೂ ಸನ್ಯಾಸಿಗಳಿಗೆ ನಿಷಿದ್ಧವಿದ್ದ ಮುಸ್ಲಿಂ ರಾಜ್ಯವನ್ನು ಪ್ರವೇಶಿಸುತ್ತಾರೆ. ಅನುಮತಿ ಇಲ್ಲದೆ ಪ್ರವೇಶಿಸಿದ ತಪ್ಪಿಗಾಗಿ ಅವರನ್ನು ಸೈನಿಕರು ಬಂಧಿಸಿ ರಾಜನ ಮುಂದೆ ಪ್ರಸ್ತುತಿಪಡಿಸುತ್ತಾರೆ. ಪ್ರಶ್ನಿಸಿದ ರಾಜನಿಗೆ ಆಚಾರ್ಯರು ಈ ರೀತಿ ಉತ್ತರ ಕೊಡುತ್ತಾರೆ. "ನೀನು ಪೂಜಿಸುವ ಹಾಗು ನಾನು ಪೂಜಿಸುವ ದೇವರು ಒಬ್ಬನೇ, ಹೆಸರು ಮಾತ್ರ ಬೇರೆ ಬೇರೆ. ಒಂದೇ ದೇವರ ಮಕ್ಕಳಾದ ನಾವು ಸಹೋದರರಲ್ಲವೇ?" ಆಚಾರ್ಯರ ಈ ಮಾತಿನಿಂದ ವಿಸ್ಮಿತನಾದ ರಾಜ ಅವರನ್ನು ತನ್ನ ರಾಜ್ಯದಲ್ಲಿ ನೆಲೆಸುವಂತೆ ಕೇಳಿಕೊಳ್ಳುತ್ತಾನೆ. ಆದರೆ ಆಚಾರ್ಯರು ರಾಜನನ್ನು ಹರಸಿ ತಮ್ಮ ಯಾತ್ರೆಯನ್ನು ಮುಂದುವರಿಸುತ್ತಾರೆ. ಜಾತಿ-ಧರ್ಮ-ದೇವರು ಎಂದು ಕಚ್ಚಾಡುವ ನಮಗೆ ಭಗವಂತನ ಈ ನಾಮ ಮಹತ್ತಾದ ಸಂದೇಶವನ್ನು ಕೊಡುತ್ತದೆ.
ಸೂಕ್ತಗಳನ್ನು ಒಮ್ಮೆ ಕಣ್ಣಾಡಿಸಿ ನೋಡಿದರೆ ಅದರಲ್ಲಿ 'ಷ' ಮತ್ತು 'ಣ' ಇಲ್ಲದ ಸೂಕ್ತಗಳಿಲ್ಲ. ವಿ-ಷ-ಣು ಎಂದರೆ ವಿಶಿಷ್ಟನಾದ(ವಿ),ಸರ್ವಾಂತರ್ಯಾಮಿ(ಷ) ಹಾಗು ಸರ್ವಬಲಪೂರ್ಣನಾದ(ಣು) ಭಗವಂತ.
260) ವೃಶಪರ್ವಾ
'ವೃಶ' ಎಂದರೆ ಬಯಸಿದ್ದನ್ನು ಕೊಡುವ ಶಕ್ತಿ, 'ಪರ್ವ' ಎಂದರೆ ನಮ್ಮ ಅಭೀಷ್ಟಗಳ ಸಾಧಕದ ನಾಲ್ಕು ಮಜಲು. ಧರ್ಮ-ಅರ್ಥ-ಕಾಮ-ಮೋಕ್ಷ ಇವು ನಾಲ್ಕು ಪರ್ವಗಳು. ನಾವು ಧರ್ಮದ ಮೆಟ್ಟಲೇರಿದರೆ ಮಾತ್ರ ಭಗವಂತ ನಮ್ಮ ಸಕಲ ಅಭೀಷ್ಟವನ್ನು ಪೂರೈಸುತ್ತಾನೆ. ಅಧರ್ಮದ ಮಾರ್ಗ ಕ್ಷಣಿಕ. ವೇದವ್ಯಾಸರು "ನಾನು ಕೈಯತ್ತಿ ಹೇಳುತ್ತಿದ್ದೇನೆ-ಧರ್ಮದ ಮಾರ್ಗವನ್ನು ಹಿಡಿದವರ ಹಿಂದೆ ಅರ್ಥ-ಕಾಮ-ಮೊಕ್ಷಗಳು ತಾನೆ ತಾನಾಗಿ ಹಿಂಬಾಲಿಸುತ್ತವೆ" ಎಂದಿದ್ದಾರೆ. ಹೀಗೆ ಧರ್ಮಪರ್ವ, ಅರ್ಥಪರ್ವ, ಕಾಮಪರ್ವ ಹಾಗು ಮೋಕ್ಷಪರ್ವನಾಗಿ ನಮ್ಮ ಅಭೀಷ್ಟವನ್ನು ಪೂರೈಸುವ ಭಗವಂತ ವೃಶಪರ್ವಾ.
261) ವೃಷೋದರಃ
ಇಳೆಗೆ ಮಳೆಯನ್ನು ಕೊಡುವ ಭಗವಂತ ವೃಷೋದರ. ನೆಲದಲ್ಲಿನ ನೀರನ್ನು ಆವಿಯನ್ನಾಗಿ ಮಾಡಿ ಪುನಃ ಮೋಡದಿಂದ ಮಳೆ ಸುರಿಸುವ ಹಾಗು ಈ ಚಕ್ರವನ್ನು ನಿರಂತರ ತಿರುಗಿಸುವ, ದೋಷರಹಿತ-ನಾದ ಅಭೀಷ್ಟಪ್ರದ ಭಗವಂತ ವೃಷೋದರಃ
Saturday, August 7, 2010
Vishnu Sahasranama 253-256
ವಿಷ್ಣು ಸಹಸ್ರನಾಮ: ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ
253) ಸಿದ್ಧಾರ್ಥಃ
ಭಗವಂತ ಸಾಧಿಸಬೇಕಾದ ವಸ್ತುವಲ್ಲ ಅವನು ಸಿದ್ಧ. ವೇದ ಸಿದ್ಧನಾದ ಭಗವಂತನನ್ನು ಹೇಳುತ್ತದೆ. ಈ ಹಿಂದೆ ಹೇಳಿದಂತೆ ಪ್ರತಿಯೊಂದು ನಾಮವೂ ಭಗವಂತನ ಅನ್ವರ್ಥ ನಾಮ. ಎಲ್ಲಾ ನಾಮಗಳ ಅರ್ಥಗಳು ಯಾರಲ್ಲಿ ಪರಿಪೂರ್ಣವಾಗಿ ಸಿದ್ಧವಾಗಿದೆಯೋ ಅವನು ಸಿದ್ಧಾರ್ತ. ಜಗತ್ತಿನಲ್ಲಿರುವ ಪ್ರಸಿದ್ಧವಾದ ಸರ್ವ ಶಾಸ್ತ್ರಗಳಿಂದ ಪ್ರಸಿದ್ಧನಾದ ಪರಮ ಪುರುಷಾರ್ಥ ರೂಪ ಹಾಗು ಸರ್ವವನ್ನು ತೇಜಿಸಿದವರಿಗೂ ಬೇಕಾಗಿರುವ ಅರ್ಥ(ವಸ್ತು) ಸಿದ್ಧಾರ್ಥಃ
254) ಸಿದ್ಧಸಂಕಲ್ಪಃ
ನಾವು ಏನನ್ನಾದರು ನಿರ್ಮಾಣ ಮಾಡಬೇಕಾದರೆ ನಮಗೆ ಇಚ್ಚಾಶಕ್ತಿ, ಜ್ಞಾನಶಕ್ತಿ ಹಾಗು ಕ್ರಿಯಾಶಕ್ತಿ ಬೇಕು.ಆದರೆ ಭಗವಂತ ಕೇವಲ ತನ್ನ ಸಂಕಲ್ಪದಿಂದ ಏನನ್ನಾದರೂ ಸೃಷ್ಟಿ ಮಾಡಬಲ್ಲ. ನೀವು ಸಿದ್ಧ ಪುರುಷರ ಬಗ್ಗೆ ಕೇಳಿರಬಹುದು. ಸಿದ್ಧಪುರುಷರು ಇಚ್ಚಿಸಿದಂತೆ ಅವರ ಸಂಕಲ್ಪ ನೆರವೇರುತ್ತದೆ. ಪ್ರತಿಯೊಬ್ಬರಲ್ಲೂ ಸಹ ಇಂತಹ ಅಪೂರ್ವ ಶಕ್ತಿ (Mind Power) ಇದೆ. ಆದರೆ ಅದು ಜಾಗ್ರತವಾಗಿರುವುದಿಲ್ಲ! ಯಾರು ಏಕಾಗ್ರತೆಯಿಂದ ಮನಸ್ಸಿನ ಶಕ್ತಿಯನ್ನು ಗುರುತಿಸಿಕೊಳ್ಳುತಾರೋ ಅವರು ಸಿದ್ಧರು. ಸಿದ್ಧರ ಸಂಕಲ್ಪ ಯಾರಿಂದ ಈಡೇರುತ್ತದೋ, ಯಾರ ಸಂಕಲ್ಪ ಮಾತ್ರದಿಂದ ಇಡೀ ವಿಶ್ವ ಸೃಷ್ಟಿಯಾಗಿದೆಯೋ ಅವನು ಸಿದ್ಧಸಂಕಲ್ಪಃ
255) ಸಿದ್ಧಿದಃ
ನಾವು ಸಿದ್ಧರಾಗಬೇಕಾದರೆ ಅದನ್ನು ಭಗವಂತ ನಮಗೆ ಕೊಡಬೇಕು. ಅವರವರ ಸ್ವಭಾವ ಹಾಗು ಕರ್ಮಕ್ಕೆ ತಕ್ಕಂತೆ ಸಿದ್ಧಿಯನ್ನು ಕೊಡುವ ಅಥವಾ ಕಸಿದುಕೊಳ್ಳುವ ಭಗವಂತ ಸಿದ್ಧಿದಃ
256) ಸಿದ್ಧಿಸಾಧನಃ
ಮೋಕ್ಷ ಒಂದು ಸಿದ್ಧಿ. ಇಂತಹ ಸಿದ್ಧಿಯನ್ನು ಪಡೆಯಬೇಕಾದರೆ ನಮಗಿರುವ ಏಕಮಾತ್ರ ಸಾಧನ ಭಗವಂತ. ಪರಮ ಪುರುಷಾರ್ಥಕವಾದ ಮೋಕ್ಷಕ್ಕೆ ಸಾಧನಾಭೂತನಾದವ ಭಗವಂತನೊಬ್ಬನೆ. ಸಿದ್ಧಿ ಪಡೆಯಲು ಇರುವ ಸಾಧನ ಭಗವಂತ ಮಾತ್ರ. ಭಗವಂತ ಎಲ್ಲಾ ಸಿದ್ಧಿಗಳ ಸ್ವರೂಪ. ಭಗವಂತನ ಉಪಾಸನೆಯಿಂದ ಮಾತ್ರ ನಾವು ಸಿದ್ಧಿಯನ್ನು ಆಂಶಿಕವಾಗಿ ಪಡೆಯಬಹುದು. ಸಿದ್ಧಿಗಳು ಅನೇಕ. ಅಷ್ಟ ಸಿದ್ಧಿಗಳ ಬಗ್ಗೆ ನೀವು ಕೇಳಿರಬಹುದು. ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯಂ, ಈಶಿತ್ವಂ ಮತ್ತು ವಶಿತ್ವಂ ಇವು ಅಷ್ಟ ಸಿದ್ಧಿಗಳು. ಅಣಿಮಾ ಎಂದರೆ ಅತ್ಯಂತ ಸೂಕ್ಷ್ಮ ರೂಪ ಧಾರಣೆ ಮಾಡುವುದು. ಮಹಿಮಾ ಎಂದರೆ ದೊಡ್ಡಗಾಗುವುದು, ಗರಿಮಾ ಎಂದರೆ ಭಾರವಾಗುವುದು, ಲಘಿಮಾ ಎಂದರೆ ಹಗುರಾಗುವುದು, ಪ್ರಾಪ್ತಿಃ ಎಂದರೆ ಬೇಕಾದ್ದನ್ನು ಪಡೆಯುವುದು, ಪ್ರಾಕಾಮ್ಯಂ ಎಂದರೆ ಬೇಕಾದ ರೂಪ ಧರಿಸುವುದು, ಈಶಿತ್ವಂ ಎಂದರೆ ಒಡೆತನ, ವಶಿತ್ವಂ ಎಂದರೆ ಎಲ್ಲರನ್ನು ಎಲ್ಲವನ್ನು ತನ್ನ ವಶಕ್ಕೆ ಒಳಪಡಿಸಿಕೊಳ್ಳುವುದು. ಈ ಎಲ್ಲಾ ಸಿದ್ಧಿಗಳು ಭಗವಂತನ ಮೂಲಭೂತ ಗುಣಗಳು ಹಾಗು ಭಗವಂತನಲ್ಲಿ ಮಾತ್ರ ಇರತಕ್ಕಂತಹ ಶಕ್ತಿ. ಭಗವಂತನ ಉಪಾಸನೆಯಿಂದ ಸಿದ್ಧಪುರುಷರಿಗೆ ಕಿಂಚಿತ್ ಬರುತ್ತದೆ ಅಷ್ಟೇ. ಸಿದ್ಧಿಯ ಬಗ್ಗೆ ಹೇಳುವಾಗ ಮಧ್ವಾಚಾರ್ಯರ ಜೀವನದಲ್ಲಿ ನಡೆದ ಎರಡು ಘಟನೆಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಒಮ್ಮೆ ಗೋವಾದಲ್ಲಿ ಆಚಾರ್ಯರು ತಂಗಿದ್ದಾಗ "ಸಂಗೀತದಿಂದ ಗಿಡ ಬಳ್ಳಿಗಳು ಚಿಗುರಬಲ್ಲವು" ಎಂದು ಜನರಿಗೆ ತೋರಿಸಿ ಕೊಟ್ಟರು. ಈ ವಿಷಯ ರಾಜನ ಬಳಿಗೆ ತಲುಪಿದಾಗ ಅಹಂಕಾರಿ ರಾಜ ಆಚಾರ್ಯರನ್ನು ಒಂದು ದಿನ ಸೈನಿಕರ ಪಹರೆ ಇರುವ ಒಂದು ಕೋಣೆಯಲ್ಲಿ ಇರಿಸಲು ಆಜ್ಞೆ ಕೊಡುತ್ತಾನೆ! ಹೀಗೆ ಆಚಾರ್ಯರನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಲಾಗುತ್ತದೆ. ಸಿದ್ಧ ಪುರುಷರಾದ ಆಚಾರ್ಯರು ತಮ್ಮ "ಅಣಿಮಾ" ಸಿದ್ಧಿಯಿಂದ ಅಲ್ಲಿಂದ ಹೊರಬಂದು ತಮ್ಮ ಯಾತ್ರೆಯನ್ನು ಮುಂದುವರಿಸುತ್ತಾರೆ. ಇನ್ನೊಮ್ಮೆ ಕಾಂತಾವರದಲ್ಲಿ ಅಹಂಕಾರಿ ಜಟ್ಟಿಗಳನ್ನು ತಮ್ಮ "ಗರಿಮಾ" ಸಿದ್ಧಿಯಿಂದ ಸೋಲಿಸಿದ್ದಲ್ಲದೆ "ಲಘಿಮಾ" ಸಿದ್ದಿಯಿಂದ ಆಚಾರ್ಯರು ಒಬ್ಬ ಪುಟ್ಟ ಬಾಲಕನ ಹೆಗಲ ಮೇಲೆ ಕುಳಿತು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಜಟ್ಟಿಗಳ ಅಹಂಕಾರವನ್ನು ಮುರಿಯುತ್ತಾರೆ. ಭಗವಂತನೊಬ್ಬನೇ ಇಂತಹ ಸಿದ್ಧಿಗಳಿಗೆ ಸಾಧನ. ಭಗವಂತನನ್ನು ಸಂಪೂರ್ಣ ನಂಬಿದವರಿಗೆ ಆತ ಸಿದ್ಧಿಸಾಧನಃ.
Tuesday, June 15, 2010
Vishnu Sahasranama 58
58) ಲೋಹಿತಾಕ್ಷಃ
ಲೋಕ+ಹಿತ+ಅಕ್ಷ - ಅಂದರೆ ಲೋಕದ ಹಿತಕ್ಕಾಗಿ ಭಕ್ತರ ಮನೋಭಿಲಾಷೆ ಪೂರ್ತಿಗಾಗಿ ತಾವರೆಯಂತಹ ಅರಳುಗಣ್ಣು ಉಳ್ಳವನು ಎಂದರ್ಥ.
ಈ ನಾಮದ ಅರ್ಥವನ್ನು ತಿಳಿಯಬೇಕಾದರೆ ನಾವು ಭಗವಂತ ಕೊಪೋದ್ರಿಕ್ತನಾದ ಕೆಲವು ಘಟನೆಗಳನ್ನು
ನೋಡಬೇಕಾಗುತ್ತದೆ.
ಮಹಾಭಾರತ ಯುದ್ದದಲ್ಲಿ ಅರ್ಜುನ ಭೀಷ್ಮ ಪಿತಾಮಹರ ನಡುವೆ ಯುದ್ದ ಪ್ರಾರಂಭವಾದಾಗ ನಡೆದ ಒಂದು ಘಟನೆಯನ್ನು ನೋಡೋಣ. ಅರ್ಜುನ ತನ್ನನ್ನು ಮುದ್ದಿಸಿ ಆಡಿಸಿ ಬೆಳೆಸಿದ ಪಿತಾಮಹನೊಂದಿಗೆ ಮನಸ್ಸಿಲ್ಲದ ಮನಸ್ಸಿನಿಂದ ಯುದ್ದ ಮಾಡುತ್ತಿರುತ್ತಾನೆ. ಇದನ್ನು ಗಮನಿಸಿದ ಸಾರಥಿ ಕೃಷ್ಣ ಕೋಪಗೊಳ್ಳುತ್ತಾನೆ. ಮಹಾಭಾರತ ಯುದ್ದದ ಮೊದಲು ತಾನು ಶಸ್ತ್ರ ಹಿಡಿಯುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದ ಕೃಷ್ಣ,
ಕೋಪಾವೇಶದಿಂದ ಭೀಷ್ಮನನ್ನು ಸಾಯಿಸಲೆಂಬಂತೆ ಚಕ್ರವನ್ನೇ ಹಿಡಿದು ಮುಂದೊತ್ತಿ ಬರುತ್ತಿದ್ದಾನೆ! ಆಗ ಆತನ ಕಣ್ಣು ಕೆಂದಾವರೆ ಹೂವಿನಂತೆ ಕೆಂಪಾಗಿ ಕಾಣುತ್ತಿರುತ್ತದೆ. ಇದನ್ನು ನೋಡಿದ ಬೀಷ್ಮ ಎರಡೂ ಕೈಯನ್ನು ಜೋಡಿಸಿ ಹೀಗೆ ಹೇಳುತ್ತಾನೆ -
" ಓ ಭಗವಂತ; ನಿನ್ನ ಕೈಯಲ್ಲಿ ಚಕ್ರ ಹಿಡಿಸುತ್ತೇನೆ, ಹಾಗೆ ಯುದ್ಧ ಮಾಡುತ್ತೇನೆ ಎಂದು ನಾನು ಪ್ರತಿಜ್ಞೆ ಮಾಡಿದ್ದೆ. ಚಕ್ರ ಹಿಡಿಯುವುದಿಲ್ಲ ಎಂದಿದ್ದೆ ನೀನು. ಆದರೆ ಈಗ ನನ್ನ ಪ್ರತಿಜ್ಞೆಯನ್ನು ಈಡೇರಿಸಲು ನೀನು ಚಕ್ರ ಹಿಡಿದಿರುವೆ. ನಿನ್ನನ್ನೇ ಮರೆತಿರುವೆ, ಆದರೆ ನಿನ್ನ ಭಕ್ತನನ್ನು ಮರೆತಿಲ್ಲ ; ನೀನಲ್ಲದೆ ನಮಗೆ ಗತಿ ಇನ್ನ್ಯಾರು ? " ಎನ್ನುತ್ತಾನೆ . ಈ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತನ ಕೋಪ ಮತ್ತು ಅದರ ಹಿಂದಿರುವ ಕರುಣೆ ವ್ಯಕ್ತವಾಗಿದೆ.
ಇದೇ ರೀತಿ ಇನ್ನೊಂದು ಘಟನೆ ನರಸಿಂಹ ಅವತಾರದಲ್ಲಿ ಕಂಡು ಬರುತ್ತದೆ. ಹಿರಣ್ಯಕಷಿಪುವನ್ನು ಕೊಂದು ಆತನ ಕರುಳನ್ನು ಬಗೆದು ಕೊರಳಿಗೆ ಹಾಕಿಕೊಂಡರೂ, ಶಾಂತನಾಗದ ಭಗವಂತನ ಕೋಪೋದ್ರಿಕ್ತ ರೂಪವನ್ನು ಕಂಡು, ದೇವತೆಗಳೆಲ್ಲರೂ ಭಯಗೊಂಡಾಗ, ಐದು ವರ್ಷದ ಪುಟ್ಟ ಬಾಲಕ ಪ್ರಹಲ್ಲಾದನ ಪ್ರಾರ್ಥನೆಗೆ ಮಣಿದು, ಶಾಂತ ಮೂರ್ತಿಯಾಗುತ್ತಾನೆ.
ಮೇಲಿನ ಘಟನೆಯಲ್ಲಿ ಲೋಕಕಲ್ಯಾಣಕ್ಕಾಗಿ ಭಗವಂತ ದುಷ್ಟರನ್ನು ತನ್ನ ಕೆಂಗಣ್ಣಿನಿಂದ ನಾಶಮಾಡಿ, ಭಕ್ತರ ಅಭಿಲಾಷೆಯನ್ನು ಪೂರ್ತಿ ಮಾಡುವುದು ಕಂಡುಬರುತ್ತದೆ.
ಇಂತಹ ಅರಳುಗಣ್ಣಿನ ಭಗವಂತ ಲೋಹಿತಾಕ್ಷ !
Saturday, June 12, 2010
Vishnu Sahasranama 50
50)ವಿಶ್ವಕರ್ಮಾ...
ವಿಶ್ವಕರ್ಮ ಎಂದರೆ ಈ ವಿಶ್ವದ ವಿನ್ಯಾಸಕಾರ ಎಂದರ್ಥ.
ಪ್ರಾಚೀನ ಗ್ರಂಥಗಳಲ್ಲಿ ಈ ವಿಶ್ವವನ್ನು ಐವತೈದು ಅವಯವಗಳಿರುವ ,ಹಾಗು ಪ್ರವೃತ್ತಿ ಮತ್ತು ನಿವೃತ್ತಿ ಎಂಬ ಎರಡು ಹಣ್ಣುಗಳಿರುವ ಒಂದು ಮರವನ್ನಾಗಿ ವರ್ಣಿಸಿದ್ದಾರೆ.
ಇಲ್ಲಿ ಪ್ರವೃತ್ತಿ ಎಂದರೆ ನಮಗೆ ಬೆನ್ನು ಹಾಕಿ ನಿಂತಿರುವ ಬೌದ್ಧಿಕ ಸುಖದ ಬೆನ್ನು ಹತ್ತುವ ಕರ್ಮ ಜೀವಿ, ಹಾಗು
ನಿವೃತ್ತಿ ಎಂದರೆ ಬೌದ್ಧಿಕ ಸುಖಕ್ಕೆ ಬೆನ್ನು ಹಾಕಿ ಮೊಕ್ಷದತ್ತ ಪ್ರಯಾಣಿಸುತ್ತಿರುವವ ಎಂದರ್ಥ.
ಬನ್ನಿ.... ಭಗವಂತನ ಈ ಅಪೂರ್ವ ವಿನ್ಯಾಸದ ಹಿಂದಿರುವ ಐವತೈದು ಪ್ರಮುಖ ಅಂಗಗಳನ್ನು ಮರದ ಉದಾಹರಣೆಯೊಂದಿಗೆ ನೋಡೋಣ.
1 ) ಏಕಾಯನಹಃ - ಈ ವಿಶ್ವಕ್ಕೆ ಮೂಲ-ಪ್ರಕೃತಿ. ಇದನ್ನೇ ಇಲ್ಲಿ ಮರವೆಂದು ಕರೆದಿರುವುದು.
2-3 ) ವಿಫಲಹಃ -ಮೇಲೆ ಹೇಳಿರುವ ಪ್ರವೃತ್ತಿ ಮತ್ತು ನಿವೃತ್ತಿ ಈ ಮರದಲ್ಲಿರುವ ಎರಡು ಹಣ್ಣುಗಳು.
4 -6 ) ತ್ರಿಮೂಲಹಃ -ಸತ್ವ , ರಜಸ್ಸು ಮತ್ತು ತಮಸ್ಸು ಎಂಬ -ತ್ರಿಮೂಲಗಳು.
7-10 ) ಚತುರಸಹಃ -ಧರ್ಮ , ಅರ್ಥ , ಕಾಮ , ಮತ್ತು ಮೋಕ್ಷವೆಂಬ ನಾಲ್ಕು ರಸಗಳು.
11-15 ) ಪಂಚಶಿಖಃ -ಮಣ್ಣು , ನೀರು , ಬೆಂಕಿ , ಗಾಳಿ ಮತ್ತು ಆಕಾಶವೆಂಬ ಪಂಚಭೂತಗಳು. (ಅಥವಾ-ಶಬ್ದ , ಸ್ಪರ್ಶ ,ರೂಪ , ರಸ ಮತ್ತು ಗಂಧ)
16-21 ) ಷಡಾತ್ಮ - ಆರು ಸ್ವಭಾವಗಳಾದ ಮೋಹ , ಶೋಕ ,ಕ್ಷುತ್ (ಹಸಿವು), ಪಿಪಾಸು(ಬಾಯಾರಿಕೆ) , ಜರ(ಅಜ್ಞಾನ) ಮತ್ತು ವ್ಯಾಧಿ, ಹಾಗು ಆರು ಬೆಳವಣಿಗೆಯ ಹಂತಗಳಾದ- ಅಸ್ತಿ(ಗರ್ಭ ಪ್ರವೇಶಿಸುವ ಹಂತ ), ಜಾಯತೆ (ಹುಟ್ಟುವ ಹಂತ), ವರ್ಧತೆ (ಬೆಳವಣಿಗೆಯ ಹಂತ) , ವಿಪರಿಣಮತೆ( ದೇಹದ ಬದಲಾವಣೆಯ ಹಂತ) ಅಪಕ್ಷೀಯತೆ(ಮುದಿತನ) ಮತ್ತು ಕೊನೆಯದಾಗಿ ನಷ್ಯತೆ -ಇದು ಷಡಾತ್ಮ.
22-28) ಸಪ್ತತ್ವಕ್ -ಏಳು ತೊಗಟೆಗಳಾದ ತ್ವಕ್ (ಚರ್ಮದ ಹೊರ ಪದರು), ಚರ್ಮ(ಒಳಚರ್ಮ), ಮಾಂಸ , ರಕ್ತ , ಮೇದಸ್ಸು ,ಮಜ್ಜ ಮತ್ತು ಅಸ್ತಿ.
29-36) ಅಷ್ಟವಿಟಪಹಃ - ಎಂಟು ಬಗೆಯ ಜೀವ-ಜಾತಗಳು (ಉದಾಹರಣೆಗೆ- ದೇವತೆಗಳು, ರಾಕ್ಷಸರು,ಮನುಷ್ಯರು, ಧಾನವರು.. ಇತ್ಯಾದಿ)
37-45 ) ನವಾಕ್ಷಹಃ -ಒಂಬತ್ತು ಪೊಟರೆಗಳಾದ - ನವದ್ವಾರಗಳು (ಕಣ್ಣು, ಕಿವಿ , ಮೂಗು , ಬಾಯಿ ,ಮಲ-ಮೂತ್ರ ದ್ವಾರ)
45-55) ದಶಸ್ಚದಹಃ -ಹತ್ತು ಎಲೆಗಳು- ಐದು ಜ್ಞಾನೇಂದ್ರಿಯ ಮತ್ತು ಐದು ಕರ್ಮೇಂದ್ರಿಯಗಳು.
ಇಂತಹ ವಾಸ್ತುಶಿಲ್ಪದ ಈ ವಿಶಿಷ್ಟವಾದ ವಿಶ್ವವನ್ನು ವಿನ್ಯಾಸಗೊಳಿಸಿರುವ ಭಗವಂತ ವಿಶ್ವಕರ್ಮ!!
ಇನ್ನು ವಿಶ್ವ ಅನ್ನುವ ಶಬ್ದಕ್ಕೆ 'ಎಲ್ಲಾ' ಎನ್ನುವ ಅರ್ಥವಿದೆ. ಅದ್ದರಿಂದ ವಿಶ್ವಕರ್ಮ ಎಂದರೆ ಸರ್ವ-ಕರ್ಮಗಳ ನಿಯಾಮಕ ಭಗವಂತ.
ಪುರಾಣದಲ್ಲಿ ಕಾಣುವ ದೇವ ಶಿಲ್ಪಿ- ವಿಶ್ವಕರ್ಮ. ದೇವಸ್ಥಾನ ಮತ್ತು ಮನೆಯ ವಾಸ್ತು ವಿನ್ಯಾಸವನ್ನು ದೇವಶಿಲ್ಪಿಯ ಒಳಗೆ ನಿಂತು ನಮಗೆ ಕರುಣಿಸಿದ ಭಗವಂತ ವಿಶ್ವಕರ್ಮ.
Vishnu Sahasranamam 48-49
48)ಪದ್ಮನಾಭ
ತಾವರೆರೂಪದ ಹದಿನಾಲ್ಕು ಲೋಕಗಳುಳ್ಳ ಈ ಬ್ರಹ್ಮಾಂಡ ಯಾರ ನಾಭಿಯಿಂದ ಸೃಷ್ಟಿಯಾಗಿದೆಯೋ , ಅವನು ಪದ್ಮನಾಭ. ಈ ಸೃಷ್ಟಿಯ ಕಾರಣಪುರುಷ.
49)ಅಮರಪ್ರಭುಃ
"ಮರರು" ಅಂದರೆ ಮರಣ ಹೊಂದುವವರು.
"ಅಮರರು" ಅಂದರೆ ಮರಣವಿಲ್ಲದವರು ಎಂದರ್ಥ.
ಮರಣ ಕೇವಲ ಬೌದ್ಧಿಕ ಶರೀರಕ್ಕೆ ಹೊರತು ಸೂಕ್ಷ್ಮ ಶರೀರಕ್ಕಲ್ಲ. ಮುಕ್ತಿ ಪಡೆದ ಎಲ್ಲಾ ಜೀವರು ಅಮರರು.
ಬ್ರಹ್ಮಾದಿ-ದೇವತೆಗಳು ಅಮೃತಪಾನದಿಂದ ಅಮರರೆನಿಸಿದ್ದರೂ ಕೂಡ , ಅವರಿಗೂ ಹಲವು ಕಲ್ಪಗಳ ನಂತರ ಮರಣ-ಮೋಕ್ಷವಿದೆ . ಆದರೆ ಬ್ರಹ್ಮಾದಿ-ದೇವತೆಗಳ ಆಯಸ್ಸು ಧೀರ್ಘವಾದ್ದರಿಂದ ಅವರನ್ನು ಅಮರರು ಎನ್ನುತ್ತಾರೆ.
ಇಲ್ಲಿ ಅಮರಪ್ರಭು ಎಂದರೆ- ಮುಕ್ತಿ ಪಡೆದ ಜೀವ ಹಾಗು ಬ್ರಹ್ಮಾದಿ-ದೇವತೆಗಳ ಒಡೆಯ(ಪ್ರಭು) ಎಂದರ್ಥ.
Friday, June 11, 2010
Vishnu Sahasranama 47
47) ಹೃಷೀಕೇಶಃ
ಭಗವಂತನನ್ನು ಹುಡುಕುತ್ತಾ ಹೋದರೆ, ಆತ ಕ್ಷಿತಿಜದಂತೆ ದೂರ ದೂರ ಹೋಗುತ್ತಾನೆ. ಅದ್ದರಿಂದ ಅವನನ್ನು ಎಲ್ಲೆಲ್ಲೋ ಹುಡುಕುವ ಬದಲು ನಿಂತಲ್ಲೇ ನಿಂತು ನಿನ್ನೊಳಗೆ ಹುಡುಕು. ನಿನ್ನ ಹೃತ್ಕಮಲದಲ್ಲೇ ಅವನಿದ್ದಾನೆ!!!
ಹೃಷೀಕಗಳಿಗೆ ಈಶ ಹೃಷೀಕೇಶ-ಹೃಷೀಕ ಅಂದರೆ ಇಂದ್ರಿಯಗಳು. ಆತ ಇಂದ್ರಿಯಗಳ ಸ್ವಾಮಿ. ಆತನನ್ನು ಇಂದ್ರಿಯದಿಂದ ನೋಡದೆ, ಇಂದ್ರಿಯದಲ್ಲಿ ನೋಡು !!
ಉಪನಿಷತ್ತಿನಲ್ಲಿ ಹೇಳುವಂತೆ- ನಮಗೆ ಪ್ರತಿಯೊಂದು ಇಂದ್ರಿಯಗಳನ್ನು ದಯಪಾಲಿಸಿ , ಅದರಲ್ಲಿ ನಿಂತು ನೆಡೆಸುವವನು ಹೃಷೀಕಗಳ ಈಶನಾದ ಹೃಷೀಕೇಶ.
ಕೇಶ ಅನ್ನುವ ಶಬ್ದಕ್ಕೆ ಸೂರ್ಯಕಿರಣ ಎಂಬ ಅರ್ಥವನ್ನು "ಕೇಶವ" ಎಂಬಲ್ಲಿ ವಿಶ್ಲೇಷಿಸಿದ್ದೇವೆ.
ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆ, ನಮ್ಮ ದೇಹದಲ್ಲಿ ಏಳು ಶಕ್ತಿ ಚಕ್ರಗಳಿವೆ(ಸಹಸ್ರಾರ, ಆಜ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾಧಿಸ್ಟಾನ ಮತ್ತು ಮೂಲಾಧಾರ-Pineal Gland,Pituitary Gland,Thyroid and parathyroid,Adrenal Glands,Pancreas & Gonads). ಅದೇ ರೀತಿ ಅಗ್ನಿಯಲ್ಲಿ ಕೂಡ ಏಳು ಬಣ್ಣವಿದೆ. ನಮ್ಮ ದೇಹದಲ್ಲಿರುವ ಏಳು ಶಕ್ತಿ ಕೇಂದ್ರಗಳಿಂದ ಹೊರಹೊಮ್ಮುವ ಏಳು ಭಾವನೆಗಳನ್ನು ಅಗ್ನಿಯ ಏಳು ಬಣ್ಣಗಳ ಮೂಲಕ ಸೂರ್ಯಕಿರಣದ ಜೊತೆಗೆ ಸಮ್ಮಿಲನ ಮಾಡುವ ಕ್ರೀಯೆಯನ್ನು "ಹೋಮ" ಎನ್ನುತ್ತಾರೆ (ಅದ್ದರಿಂದ ಭಗವಂತನಿಗೆ ಸಲ್ಲಬೇಕಾದ ಯಾವುದೇ ಹೋಮವನ್ನು ರಾತ್ರಿ ಮಾಡುವುದಿಲ್ಲ).
ಈ ಎಲ್ಲಾ ಏಳು ವರ್ಣದಲ್ಲಿ ತುಂಬಿ ಬದುಕಿಗೆ ಹರ್ಷವನ್ನು ಕೊಡತಕ್ಕಂತ ಭಗವಂತ-ಹೃಷೀಕೇಶ.
Thursday, June 10, 2010
Vishnu Sahasranama 43 to 46
43) ಧಾತಾ-
ಧಾತಾ ಅನ್ನುವ ಭಗವಂತನ ನಾಮ ಈ ಕೆಳಗಿನ ಅರ್ಥವನ್ನು ಕೊಡುತ್ತದೆ-
ಅ) ಇಡೀ ಜಗತ್ತನ್ನು ಧಾರಣೆ ಮಾಡುವ ಮತ್ತು ಪೋಷಣೆ ಮಾಡುವ ಶಕ್ತಿ ಉಳ್ಳವನು.
ಆ) ಎಲ್ಲರಿಗೂ ಏನು ಬೇಕೂ ಅದನ್ನು ಕೊಟ್ಟವನು.
ಇ)ಎಲ್ಲಾ ನಾಮವನ್ನು ಧರಿಸಿದವ (ಎಲ್ಲಾ ದೇವತೆಗಳ ಹೆಸರೂ ಅವನ ಹೆಸರು!) ಮತ್ತು ಧಾನ ಮಾಡಿದವನು.
44) ವಿಧಾತಾ-
ಸಂಸಾರ ಅವಸ್ತೆಯಲ್ಲಿ ಮಾತ್ರ ಅಲ್ಲ -ವಿಶಿಷ್ಟ ಅವಸ್ಥೆಯಲ್ಲಿಯೂ ಭಗವಂತ ಧಾತಾ ಅದ್ದರಿಂದ ಆತ ವಿಧಾತಾ.
45) ಧಾತುರುತ್ತಮಃ
ಧಾತುಹು ಎಂದರೆ ಚತುರ್ಮುಖ, ಧಾತುರುತ್ತಮಃ ಅಂದರೆ ಚತುರ್ಮುಖ ಬ್ರಹ್ಮನಿಗಿಂತ ಉತ್ತಮನಾಗಿರುವವನು ಎಂದರ್ಥ.
ಆತ ತ್ರಿಧಾತು-ಮೂರನ್ನು ಧರಿಸಿರುವವನು -ಮೂರು ವೇದಗಳನ್ನು, ಮೂರು ಕಾಲ ಮತ್ತು ಮೂರು ಲೋಕವನ್ನು ಧರಿಸಿರುವ ಎಲ್ಲರಿಗಿಂತ ಶ್ರೇಷ್ಟವಾಗಿರುವ ಸರ್ವಾಧಾರನಾದ ಭಗವಂತ.
46)ಅಪ್ರಮೇಯೋ-
ಅಪ್ರಮೇಯ ಎಂದರೆ ಕೈಗೆಟುಕದ, ನಮ್ಮ ಬುದ್ದಿಯಿಂದ ಅಳೆಯಲು ಅಸಾಧ್ಯವಾದ, ಆದರೂ ತಿಳಿಯಲು ಸಾದ್ಯವಾದವ ಎಂದರ್ಥ !!!!
ಉದಾಹರಣೆಗೆ - ಸಮುದ್ರದ ನೀರು ಸಂಪೂರ್ಣ ನಮ್ಮ ಕೈಗೆಟಕದು. ಆದರೆ ನಮ್ಮಿಂದಾದಷ್ಟು ನಾವು ತಂದು ಮನೆಯಲ್ಲಿ ಶೇಖರಿಸಿಡಬಹುದು ಮತ್ತು ತಿಳಿಯಬಹುದು.
ಒಂದು ಚಮಚ ಸಮುದ್ರದ ನೀರಿನ ರುಚಿ ಉಳಿದ ನೀರಿನ ರುಚಿಗಿಂತ ಬಿನ್ನ ಅಲ್ಲ. ಭಗವಂತ ಕೂಡ ಸಮುದ್ರದ ನೀರಿನಂತೆ ಅದ್ದರಿಂದ ಆತ ಅಪ್ರಮೇಯ!
Wednesday, June 9, 2010
Vishnu Sahasranama 40-42
40)ಪುಷ್ಕರಾಕ್ಷೋ
ಪುಷ್ಕರ ಅಂದರೆ ಕಮಲ, ಅಕ್ಷ ಅಂದರೆ ಕಣ್ಣು.
ಪುಷ್ಕರಾಕ್ಷ ಅಂದರೆ ನೀರನ್ನು ಹೀರುವ ಬಳ್ಳಿಯಲ್ಲಿ ಈಗಷ್ಟೇ ಅರಳಿದ ಕಮಲದಂತೆ ಅರಳುಗಣ್ಣು ಉಳ್ಳವನು.
'ಅರಳುಗಣ್ಣು' ಅಂದರೆ ಆನಂದಮಯ ವ್ಯಕ್ತಿತ್ವ ಎಂದರ್ಥ- ಭಗವಂತ ಅನಂದಮಯಪೂರ್ಣ.
ಕಣ್ಣು ಅರಳುವುದು ಆನಂದದ ಜೊತೆಗೆ ಕಾರುಣ್ಯದ ಸಂಕೇತ ಕೂಡ-ಭಗವಂತ ಕಾರುಣ್ಯಮೂರ್ತಿ.
ಪುಷ್ಟಿಕರ ನೋಟ ಉಳ್ಳವನು. ಅಂದರೆ ನಮ್ಮನ್ನು ಸದಾ ರಕ್ಷಿಸುವ ಕರುಣಾದೃಷ್ಟಿ ಉಳ್ಳವನು ಎಂಬುವುದು ಇನ್ನೊಂದು ಅರ್ಥ.
ಪುಷ್ಕರ ಅಂದರೆ ವೇದಗಳಲ್ಲಿ ಹೇಳುವಂತೆ ಯಾವುದರಲ್ಲಿ ಇಡೀ ಪ್ರಪಂಚ ಹುದುಗಿದೆಯೋ ಅದು - "ಹುಟ್ಟದವನ ಹೊಕ್ಕುಳಲ್ಲಿ ಹುಟ್ಟಿತ್ತು"
ಹೊಕ್ಕುಳಲ್ಲಿ ಹುಟ್ಟಿದ್ದು ತಾವರೆರೂಪದ ಬ್ರಹ್ಮಾಂಡ (ಬ್ರಹ್ಮನ ಮೊಟ್ಟೆ). 14 ಎಸಳುಗಳುಳ್ಳ ತಾವರೆ ಅಂದರೆ ಹದಿನಾಲ್ಕು ಲೋಕಗಳುಳ್ಳ ಬ್ರಹ್ಮಾಂಡ. ಆದ್ದರಿಂದ ಭಗವಂತ ಪುಷ್ಕರದಲ್ಲಿ ತುಂಬಿರುವ ಅಕ್ಷ -ಪುಷ್ಕರಾಕ್ಷ .
41 )ಮಹಾಸ್ವನಃ
ಮಹಾ ಅಂದರೆ ಮಹತ್ತಾದ. ಸ್ವನ ಅಂದರೆ ನಾದ.
ಎಲ್ಲಕ್ಕಿಂತ ಮಹತ್ತಾದ ನಾದವಾದ ವೇದವನ್ನು ಸೃಷ್ಟಿ ಮಾಡಿದವನು ಮಹಾಸ್ವನ.
ಮಹಾ+ಅಸು+ಅನ=ಮಹಾಸ್ವನ.
ಅಸು ಅಂದರೆ 'ಇಂದ್ರಿಯ' , ಮಹಾ-ಅಸು ಅಂದರೆ 'ಅತ್ಯಂತ ಮುಖ್ಯ ಇಂದ್ರಿಯ' ,
ಅನ ಅಂದರೆ 'ಚಲನೆ'
ದೇಹದಲ್ಲಿ ಇರುವ ಎಲ್ಲಾ ಇಂದ್ರಿಯಗಳಲ್ಲಿ ಉಸಿರು (ಪ್ರಾಣ) ಅತ್ಯಂತ ಮುಖ್ಯ ಇಂದ್ರಿಯ.
ಅದ್ದರಿಂದ ಅಸುಗಳಲ್ಲಿ ಮಹಾ ಅಸು-ಉಸಿರು (ಮುಖ್ಯಪ್ರಾಣ).
ಈ ಮುಖ್ಯಪ್ರಾಣನಿಗೂ ಕೂಡ ಚಲನೆ ಕೊಟ್ಟವನು-ಮಹಾಸ್ವನ.
42)ಅನಾದಿನಿಧನಃ
ಆದಿ-ಅಂತ ಇಲ್ಲದವನು , ಹುಟ್ಟು-ಸಾವು ಇಲ್ಲದವನು.
ಪ್ರಾಣ(ಅನ) ನಲ್ಲಿ ಇದ್ದು, ಸೃಷ್ಟಿ-ಸಂಹಾರಕ್ಕೆ ಕಾರಣನಾದವನು- ಅನಾದಿನಿಧನಃ
Tuesday, June 8, 2010
Vishnu Sahasranama 38-39
ಶಂಭುರಾದಿತ್ಯಃ
38)ಶಂಭುಃ
ಶಂ-ಭವತಿ ->ಆನಂದ ರೂಪ,ಶಂ-ಭವತಿ ಅನೇನ ->ಆನಂದ ಕೊಡುವವನು.
(ಶಂ-ಅಂದರೆ ಆನಂದ - ಉದಾಹರಣೆಗೆ : ಹರಿಃ ಓಮ್ ಶಂ ನೋ ಮಿತ್ರಃ ಶಂ ವರುಣಃ ಶಂ ನೋ ಭವತ್ವರ್ಯಮಾ ಶಂ ನ ಇಂದ್ರೋ ಬೃಹಸ್ಪತಿಃ ಶಂ ನೋ ವಿಷ್ಣುರುರುಕ್ರಮಃ)
ಯಾರು ಸ್ವಯಂ ಆನಂದಮಯನೋ , ಯಾರು ಎಲ್ಲರಿಗೂ ಆನಂದವನ್ನು ಕೊಡಬಲ್ಲನೂ ಅವನು ಶಂಭು.ಎಲ್ಲಾ ಶಾಸ್ತ್ರಗಳು ಭಗವಂತನನ್ನು ಆನಂದಮಯನೆಂದು ಹೇಳುತ್ತವೆ. ಆದ್ದರಿಂದ ಭಗವಂತ ಶಂಭು.
39)ಆದಿತ್ಯಃ
ಆದಿತ್ಯ ಅಂದರೆ ಅದಿತಿಯ ಮಗ ಎಂಬುದು ಒಂದು ಅರ್ಥ.
ಅದಿತಿ ಕಶ್ಯಪ ಮಹರ್ಷಿಯ ಹೆಂಡತಿ ಹಾಗು ದೇವತೆಗಳ ತಾಯಿ. ಅದಿತಿಗೆ ಹನ್ನೆರಡು ಮಂದಿ ಮಕ್ಕಳು ಹಾಗು ಅವರನ್ನು ದ್ವಾದಶಾದಿತ್ಯರು ಎಂದು ಕರೆಯುತ್ತಾರೆ -
ವಿವಸ್ವಾನ್ ,ಆರ್ಯಮಾನ್ ,ಪೂಷನ್ ,ತ್ವಷ್ಟೃ , ಸವಿತೃ , ಭಗ ,ಧಾತ, ವಿದಾತ, ವರುಣ , ಮಿತ್ರ ,ಶಕ್ರ, ಉರುಕ್ರಮ -ಇವರೇ ಆ ಹನ್ನೆರಡು ಮಂದಿ ಆದಿತ್ಯರು ಈ ಹನ್ನೆರಡು ದೇವತೆಗಳೇ ವರ್ಷದ ಹನ್ನೆರಡು ಮಾಸದ ದೇವತೆಗಳು.
ಇವರಲ್ಲಿ ಒಬ್ಬ ಸೂರ್ಯ ,ಒಬ್ಬ ವರುಣ , ಮತ್ತೊಬ್ಬ ಮಿತ್ರ ,ಮತ್ತೊಬ್ಬ ಇಂದ್ರ , ಹಾಗೇ ಕೊನೇ ಮಗನೇ ವಿಷ್ಣು -ವಾಮನ ರೂಪಿ ಭಗವಂತ.
ಅವನು ಎಲ್ಲರಿಗಿಂತ ಕೊನೆಗೆ ಹುಟ್ಟಿದರೂ, ಆತ ಆದಿಯಲ್ಲಿ ಇದ್ದವನು . ಆದ್ದರಿಂದ ಆತ ಆದಿತ್ಯಃ
ಆದಿ+ತಿ+ಯ -ಆದಿಯಲ್ಲಿ ಜ್ಞಾನಾನಂದ ಸ್ವರೂಪನಾಗಿದ್ದವ,ಎಲ್ಲಕ್ಕೂ ಕಾರಣಕರ್ತ.
ಸೂರ್ಯ ಮಂಡಲದಲ್ಲಿ (ಆದಿತ್ಯನಲ್ಲಿ) ಸನ್ನಿಹಿತನಾಗಿರುವ ಭಗವಂತ -ಆದಿತ್ಯಃ
Monday, June 7, 2010
Vishnu Sahasranama 37
ಸ್ವಯಂಭೂಃ ಅಂದರೆ ತಾನೇ ತಾನಾಗಿ ಪೂರ್ಣವಾಗಿರುವವನು, ತನ್ನಿಂದ ತಾನೆ ಆವಿರ್ಭೂಥನಾಗುವವನು.
ನಮ್ಮ ಪೂರ್ಣತೆ ಇನ್ನೊಬ್ಬರು ಕೊಟ್ಟರೆ ಮಾತ್ರ, ಆದರೆ ಭಗವಂತ ಸ್ವಯಂಪೂರ್ಣ.
ಭಗವಂತ ಅವತರಿಸಲು ಯಾರು ಕಾರಣ ?
ಅವನು ಹುಟ್ಟಿಬರುವುದಕ್ಕೆ ಯಾರೂ ಕಾರಣರಲ್ಲ , ಆತನು ಸ್ವಯಂಭೂಃ , ಅಂದರೆ ತಾನೇ ತಾನಾಗಿ ಹುಟ್ಟಿ ಬರುವವನು. ಭಕ್ತರ ಬಯಕೆ ಈಡೇರಿಸಲು ಸ್ವಯಂಇಚ್ಛೆಯಿಂದ ಅವತರಿಸಿ ಬರುತ್ತಾನೆ.
ಭಗವಂತ ಜ್ಞಾನದಿಂದ-ಜ್ಞಾನದಂತೆ,ದೀಪದಿಂದ-ದೀಪದಂತೆ. ಒಂದು ದೀಪದಿಂದ ಇನ್ನೊಂದು ದೀಪ ಹಚ್ಚಿದರೆ ಮೂಲ ದೀಪದ ಪ್ರಕಾಶ ಕಡಿಮೆ ಆಗುವದಿಲ್ಲ .ಭಗವಂತ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಅಭಿವ್ಯಕ್ತ ಆಗುತ್ತಾ ಹೋಗುತ್ತಾನೆ, ಆದರೆ ಮೂಲವೂ ಪೂರ್ಣ , ಮೂಲದಿಂದ ಬಂದ ಅವತಾರವೂ ಪೂರ್ಣ.
ಭಗವಂತ ಅವತಾರಕ್ಕೆ ಮೊದಲೂ ಪೂರ್ಣ, ಅವತಾರದಲ್ಲೂ ಪೂರ್ಣ, ಅವತಾರದ ನಂತರ ಮತ್ತೆ ಹೋಗಿ ಪೂರ್ಣತೆಯಲ್ಲೇ ಉಳಿಯುವವನು. ಅದ್ದರಿಂದ ಆತ ಸ್ವಯಂಭೂಃ !
Sunday, June 6, 2010
Vishnu Sahasranama 30-36
ನಿಧಿ ಅಂದರೆ ಕೊಪ್ಪರಿಗೆ (ಹೂತಿಟ್ಟ ಸಂಪತ್ತು), ಭಗವಂತನ ಅರಿವೇ ಅತೀ ದೊಡ್ಡ ಕರಗದ-ಅಳಿಯದ (ಅವ್ಯಯ) ಸಂಪತ್ತು. ನಿಗೂಢವಾದ ಹೃದಯ ಗುಹೆಯೊಳಗೆ ಅಡಗಿರುವ (ಹೃತ್ಕಮಲ ಮದ್ಯ ನಿವಾಸಿ).
ಅಪೂರ್ವ, ಅಮೂಲ್ಯವಾದ ನಿಧಿ.
ಅವನು ಅವಿ ಅಂದರೆ - ಅವತಿ ಅಂದರೆ ರಕ್ಷಕ. ಹೃದಯ ಗುಹೆಯಲ್ಲಿ ಅಡಗಿದ್ದು, ನಮ್ಮ ನಿರಂತರ ರಕ್ಷಣೆ ಮಾಡುವವನು; ಅಯಃ ಅಂದರೆ ಎಲ್ಲಾ ಕಡೆ ಇರುವವನು; ನಮ್ಮ ಕ್ಷೇಮಕ್ಕೊಸ್ಕರ, ನಮ್ಮ ರಕ್ಷಣೆಗೋಸ್ಕರ, ನಮ್ಮಲ್ಲಿ ಅಡಗಿ ಕುಳಿತಿರುವ, ಹಾಗು ಎಲ್ಲಾ ಕಡೆ ಇರುವ ಅಪೂರ್ವ ನಿಧಿ- ನಿಧಿರವ್ಯಯ.
31 )ಸಂಭವೋ
ಸಂಭವಃ ಅಂದರೆ ಭಕ್ತರು ಕರೆದಾಗ ತಾನೇ ತಾನಾಗಿ ಸಂಭವಿಸುವವನು (ಭೂಮಿಗೆ ಇಳಿದು ಬರುವವನು). ಜಗತ್ತಿನ ಸೃಷ್ಟಿಗೆ ಕಾರಣನಾದವನು ಹಾಗು ಜಗತ್ತಿನ ಪಾಲನೆಗೊಸ್ಕರ ತಾನೇ ತಾನಾಗಿ ಅವತರಿಸುವವನು.
ಸಮೀಚೀನಃ ಭವಃ - ಶ್ರೇಷ್ಟವಾದ ಉನ್ನತಿ-ಮುಕ್ತಿ ಯಾರಿಂದ ಸಿಗುತ್ತದೋ ಅವನು ಸಂಭವ
32 )ಭಾವನೋ
ಭಾವನ್-ನಯತೀತಿ- ಭಾವನಃ
ಒಬ್ಬೊಬ್ಬರೊಳಗಿದ್ದು ಅವರ ಭಾವನೆಗಳನ್ನು ನಿಯಂತ್ರಿಸುವ ಶಕ್ತಿ ಭಾವನಃ
ಭಾವಂ+ನಯತಿ-ಭಾವನಃ (ಆನಂದ);ಭಾವಂ+ಅಪನಯತಿ-ಭಾವನಃ(ದುಃಖ) - ನಮ್ಮ ಸುಖ-ದುಃಖಕ್ಕೆ ಕಾರಣನಾದವನು ಭಾವನಃ .
33 )ಭರ್ತಾ
ಭರ್ತಾ ಅಂದರೆ ಎಲ್ಲವನ್ನೂ ಹೊತ್ತವನು. ಇಡೀ ವಿಶ್ವವನ್ನು ಧರಿಸಿದವನು.
34 )ಪ್ರಭವಃ
ಪ್ರ - ಎಲ್ಲಕ್ಕಿಂತ ಪ್ರಕೃಷ್ಟನಾಗಿರುವ ಭಗವಂತ; ವಿ-ಎಲ್ಲಕ್ಕಿಂತ ವಿಶಿಷ್ಟನಾಗಿರುವ ಭಗವಂತ ; ಯಃ- ಜ್ಞಾನ ಸ್ವರೂಪನಾದ ಭಗವಂತ .
ಯಾರು ಎಲ್ಲಕ್ಕಿಂತ ದೊಡ್ಡವನೂ, ಯಾರಿಂದ ಎಲ್ಲರೂ ಎತ್ತರಕ್ಕೆ ಏರಲು ಸಾಧ್ಯವೂ ಅವನು ಪ್ರಭವಃ .
35-36 )ಪ್ರಭುರೀಶ್ವರಃ
ಭಗವಂತ ಎಲ್ಲರ ಪ್ರಭು.
ಈಶರು-ಅಂದರೆ ನಮ್ಮ ದೇಹ ಹಾಗು ಪ್ರಪಂಚಕ್ಕೆ ಸಂಬದ್ದಪಟ್ಟ ಅಭಿಮಾನಿ ದೇವತೆಗಳು.
ಉದಾಹರಣೆಗೆ: ಶನಿ-ಪೃಥ್ವಿಯ ಅಭಿಮಾನಿ ದೇವತೆ; ಬುಧ-ನೀರಿನ ಅಭಿಮಾನಿ ದೇವತೆ; ಗಣಪತಿ-ಆಕಾಶದ ಅಭಿಮಾನಿ ದೇವತೆ;
ಸೂರ್ಯ- ಕಣ್ಣಿನ ಅಭಿಮಾನಿ ದೇವತೆ; ಚಂದ್ರ- ಕಿವಿಯ ಅಭಿಮಾನಿ ದೇವತೆ; ವರುಣ-ನಾಲಗೆಯ ಅಭಿಮಾನಿ ದೇವತೆ; ಅಗ್ನಿ-ಮಾತಿನ ಅಭಿಮಾನಿ ದೇವತೆ; ಇಂದ್ರ-ಕೈಯ ಅಭಿಮಾನಿ ದೇವತೆ; ಯಜ್ಞ- ಕಾಲಿನ ಅಭಿಮಾನಿ ದೇವತೆ;
ಅನಿರುದ್ದ , ಬೃಹಸ್ಪತಿ , ವರುಣ , ಮಿತ್ರ , ಇಂದ್ರ , ಕಾಮ , ಗರುಡ , ಶೇಷ , ರುದ್ರ , ವಾಯು - ಮನಸ್ಸಿನ ಅಭಿಮಾನಿ ದೇವತೆಗಳು ;
ಶ್ರದ್ಧೆಯ ದೇವತೆ- ಸರಸ್ವತಿ ; ಹೀಗೆ ಬೇರೆ ಬೇರೆ ದೇವತೆಗಳ ಸಮುದಾಯವಿದೆ. ಈ ದೇವತೆಗಳ ಸಮೂಹ ನಮ್ಮ ದೇಹದಲ್ಲಿರುವ ಹದಿನೈದು ಬೇಲಿಗಳನ್ನು ನಿಯಂತ್ರಿಸುವ ಈಶರು. ಈ ಎಲ್ಲಾ ದೇವತೆಗಳು ಅಖಂಡವಾದ ಭಗವಂತನ ನೀತಿಗೆ ಬದ್ದರಾಗಿ ಕೆಲಸ ಮಾಡುತ್ತಿರುತ್ತಾರೆ.
ಈ ಎಲ್ಲಾ ಈಶರಿಗೂ ವರನಾದವ, ಶ್ರೇಷ್ಟನಾದವ , ಈ ದೇಹದಲ್ಲಿರುವ ಸರ್ವ-ನಿಯಾಮಕನಾದ ಭಗವಂತ ಈಶ್ವರ-ಪ್ರಭುರೀಶ್ವರ.