Saturday, August 7, 2010

Vishnu Sahasranama 253-256



ವಿಷ್ಣು ಸಹಸ್ರನಾಮ: ಸಿದ್ಧಾರ್ಥಃ ಸಿದ್ಧಸಂಕಲ್ಪಃ ಸಿದ್ಧಿದಃ ಸಿದ್ಧಿಸಾಧನಃ
253) ಸಿದ್ಧಾರ್ಥಃ

ಭಗವಂತ ಸಾಧಿಸಬೇಕಾದ ವಸ್ತುವಲ್ಲ ಅವನು ಸಿದ್ಧ. ವೇದ ಸಿದ್ಧನಾದ ಭಗವಂತನನ್ನು ಹೇಳುತ್ತದೆ. ಈ ಹಿಂದೆ ಹೇಳಿದಂತೆ ಪ್ರತಿಯೊಂದು ನಾಮವೂ ಭಗವಂತನ ಅನ್ವರ್ಥ ನಾಮ. ಎಲ್ಲಾ ನಾಮಗಳ ಅರ್ಥಗಳು ಯಾರಲ್ಲಿ ಪರಿಪೂರ್ಣವಾಗಿ ಸಿದ್ಧವಾಗಿದೆಯೋ ಅವನು ಸಿದ್ಧಾರ್ತ. ಜಗತ್ತಿನಲ್ಲಿರುವ ಪ್ರಸಿದ್ಧವಾದ ಸರ್ವ ಶಾಸ್ತ್ರಗಳಿಂದ ಪ್ರಸಿದ್ಧನಾದ ಪರಮ ಪುರುಷಾರ್ಥ ರೂಪ ಹಾಗು ಸರ್ವವನ್ನು ತೇಜಿಸಿದವರಿಗೂ ಬೇಕಾಗಿರುವ ಅರ್ಥ(ವಸ್ತು) ಸಿದ್ಧಾರ್ಥಃ
254) ಸಿದ್ಧಸಂಕಲ್ಪಃ
ನಾವು ಏನನ್ನಾದರು ನಿರ್ಮಾಣ ಮಾಡಬೇಕಾದರೆ ನಮಗೆ ಇಚ್ಚಾಶಕ್ತಿ, ಜ್ಞಾನಶಕ್ತಿ ಹಾಗು ಕ್ರಿಯಾಶಕ್ತಿ ಬೇಕು.ಆದರೆ ಭಗವಂತ ಕೇವಲ ತನ್ನ ಸಂಕಲ್ಪದಿಂದ ಏನನ್ನಾದರೂ ಸೃಷ್ಟಿ ಮಾಡಬಲ್ಲ. ನೀವು ಸಿದ್ಧ ಪುರುಷರ ಬಗ್ಗೆ ಕೇಳಿರಬಹುದು. ಸಿದ್ಧಪುರುಷರು ಇಚ್ಚಿಸಿದಂತೆ ಅವರ ಸಂಕಲ್ಪ ನೆರವೇರುತ್ತದೆ. ಪ್ರತಿಯೊಬ್ಬರಲ್ಲೂ ಸಹ ಇಂತಹ ಅಪೂರ್ವ ಶಕ್ತಿ (Mind Power) ಇದೆ. ಆದರೆ ಅದು ಜಾಗ್ರತವಾಗಿರುವುದಿಲ್ಲ! ಯಾರು ಏಕಾಗ್ರತೆಯಿಂದ ಮನಸ್ಸಿನ ಶಕ್ತಿಯನ್ನು ಗುರುತಿಸಿಕೊಳ್ಳುತಾರೋ ಅವರು ಸಿದ್ಧರು. ಸಿದ್ಧರ ಸಂಕಲ್ಪ ಯಾರಿಂದ ಈಡೇರುತ್ತದೋ, ಯಾರ ಸಂಕಲ್ಪ ಮಾತ್ರದಿಂದ ಇಡೀ ವಿಶ್ವ ಸೃಷ್ಟಿಯಾಗಿದೆಯೋ ಅವನು ಸಿದ್ಧಸಂಕಲ್ಪಃ
255) ಸಿದ್ಧಿದಃ
ನಾವು ಸಿದ್ಧರಾಗಬೇಕಾದರೆ ಅದನ್ನು ಭಗವಂತ ನಮಗೆ ಕೊಡಬೇಕು. ಅವರವರ ಸ್ವಭಾವ ಹಾಗು ಕರ್ಮಕ್ಕೆ ತಕ್ಕಂತೆ ಸಿದ್ಧಿಯನ್ನು ಕೊಡುವ ಅಥವಾ ಕಸಿದುಕೊಳ್ಳುವ ಭಗವಂತ ಸಿದ್ಧಿದಃ

256) ಸಿದ್ಧಿಸಾಧನಃ
ಮೋಕ್ಷ ಒಂದು ಸಿದ್ಧಿ. ಇಂತಹ ಸಿದ್ಧಿಯನ್ನು ಪಡೆಯಬೇಕಾದರೆ ನಮಗಿರುವ ಏಕಮಾತ್ರ ಸಾಧನ ಭಗವಂತ. ಪರಮ ಪುರುಷಾರ್ಥಕವಾದ ಮೋಕ್ಷಕ್ಕೆ ಸಾಧನಾಭೂತನಾದವ ಭಗವಂತನೊಬ್ಬನೆ. ಸಿದ್ಧಿ ಪಡೆಯಲು ಇರುವ ಸಾಧನ ಭಗವಂತ ಮಾತ್ರ. ಭಗವಂತ ಎಲ್ಲಾ ಸಿದ್ಧಿಗಳ ಸ್ವರೂಪ. ಭಗವಂತನ ಉಪಾಸನೆಯಿಂದ ಮಾತ್ರ ನಾವು ಸಿದ್ಧಿಯನ್ನು ಆಂಶಿಕವಾಗಿ ಪಡೆಯಬಹುದು. ಸಿದ್ಧಿಗಳು ಅನೇಕ. ಅಷ್ಟ ಸಿದ್ಧಿಗಳ ಬಗ್ಗೆ ನೀವು ಕೇಳಿರಬಹುದು. ಅಣಿಮಾ, ಮಹಿಮಾ, ಗರಿಮಾ, ಲಘಿಮಾ, ಪ್ರಾಪ್ತಿ, ಪ್ರಾಕಾಮ್ಯಂ, ಈಶಿತ್ವಂ ಮತ್ತು ವಶಿತ್ವಂ ಇವು ಅಷ್ಟ ಸಿದ್ಧಿಗಳು. ಅಣಿಮಾ ಎಂದರೆ ಅತ್ಯಂತ ಸೂಕ್ಷ್ಮ ರೂಪ ಧಾರಣೆ ಮಾಡುವುದು. ಮಹಿಮಾ ಎಂದರೆ ದೊಡ್ಡಗಾಗುವುದು, ಗರಿಮಾ ಎಂದರೆ ಭಾರವಾಗುವುದು, ಲಘಿಮಾ ಎಂದರೆ ಹಗುರಾಗುವುದು, ಪ್ರಾಪ್ತಿಃ ಎಂದರೆ ಬೇಕಾದ್ದನ್ನು ಪಡೆಯುವುದು, ಪ್ರಾಕಾಮ್ಯಂ ಎಂದರೆ ಬೇಕಾದ ರೂಪ ಧರಿಸುವುದು, ಈಶಿತ್ವಂ ಎಂದರೆ ಒಡೆತನ, ವಶಿತ್ವಂ ಎಂದರೆ ಎಲ್ಲರನ್ನು ಎಲ್ಲವನ್ನು ತನ್ನ ವಶಕ್ಕೆ ಒಳಪಡಿಸಿಕೊಳ್ಳುವುದು. ಈ ಎಲ್ಲಾ ಸಿದ್ಧಿಗಳು ಭಗವಂತನ ಮೂಲಭೂತ ಗುಣಗಳು ಹಾಗು ಭಗವಂತನಲ್ಲಿ ಮಾತ್ರ ಇರತಕ್ಕಂತಹ ಶಕ್ತಿ. ಭಗವಂತನ ಉಪಾಸನೆಯಿಂದ ಸಿದ್ಧಪುರುಷರಿಗೆ ಕಿಂಚಿತ್ ಬರುತ್ತದೆ ಅಷ್ಟೇ. ಸಿದ್ಧಿಯ ಬಗ್ಗೆ ಹೇಳುವಾಗ ಮಧ್ವಾಚಾರ್ಯರ ಜೀವನದಲ್ಲಿ ನಡೆದ ಎರಡು ಘಟನೆಗಳನ್ನು ಇಲ್ಲಿ ನೆನಪಿಸಿಕೊಳ್ಳಬೇಕು. ಒಮ್ಮೆ ಗೋವಾದಲ್ಲಿ ಆಚಾರ್ಯರು ತಂಗಿದ್ದಾಗ "ಸಂಗೀತದಿಂದ ಗಿಡ ಬಳ್ಳಿಗಳು ಚಿಗುರಬಲ್ಲವು" ಎಂದು ಜನರಿಗೆ ತೋರಿಸಿ ಕೊಟ್ಟರು. ಈ ವಿಷಯ ರಾಜನ ಬಳಿಗೆ ತಲುಪಿದಾಗ ಅಹಂಕಾರಿ ರಾಜ ಆಚಾರ್ಯರನ್ನು ಒಂದು ದಿನ ಸೈನಿಕರ ಪಹರೆ ಇರುವ ಒಂದು ಕೋಣೆಯಲ್ಲಿ ಇರಿಸಲು ಆಜ್ಞೆ ಕೊಡುತ್ತಾನೆ! ಹೀಗೆ ಆಚಾರ್ಯರನ್ನು ಒಂದು ಕೋಣೆಯಲ್ಲಿ ಕೂಡಿ ಹಾಕಲಾಗುತ್ತದೆ. ಸಿದ್ಧ ಪುರುಷರಾದ ಆಚಾರ್ಯರು ತಮ್ಮ "ಅಣಿಮಾ" ಸಿದ್ಧಿಯಿಂದ ಅಲ್ಲಿಂದ ಹೊರಬಂದು ತಮ್ಮ ಯಾತ್ರೆಯನ್ನು ಮುಂದುವರಿಸುತ್ತಾರೆ. ಇನ್ನೊಮ್ಮೆ ಕಾಂತಾವರದಲ್ಲಿ ಅಹಂಕಾರಿ ಜಟ್ಟಿಗಳನ್ನು ತಮ್ಮ "ಗರಿಮಾ" ಸಿದ್ಧಿಯಿಂದ ಸೋಲಿಸಿದ್ದಲ್ಲದೆ "ಲಘಿಮಾ" ಸಿದ್ದಿಯಿಂದ ಆಚಾರ್ಯರು ಒಬ್ಬ ಪುಟ್ಟ ಬಾಲಕನ ಹೆಗಲ ಮೇಲೆ ಕುಳಿತು ದೇವಸ್ಥಾನಕ್ಕೆ ಪ್ರದಕ್ಷಿಣೆ ಬಂದು ಜಟ್ಟಿಗಳ ಅಹಂಕಾರವನ್ನು ಮುರಿಯುತ್ತಾರೆ. ಭಗವಂತನೊಬ್ಬನೇ ಇಂತಹ ಸಿದ್ಧಿಗಳಿಗೆ ಸಾಧನ. ಭಗವಂತನನ್ನು ಸಂಪೂರ್ಣ ನಂಬಿದವರಿಗೆ ಆತ ಸಿದ್ಧಿಸಾಧನಃ.

No comments:

Post a Comment