Wednesday, August 4, 2010

Vishnusahasranama 237-241

ವಿಷ್ಣು ಸಹಸ್ರನಾಮ: ಸುಪ್ರಸಾದಃ ಪ್ರಸನ್ನಾತ್ಮಾ ವಿಶ್ವಧೃಗ್ವಿಶ್ವಭುಗ್ವಿಭುಃ
237) ಸುಪ್ರಸಾದಃ
ಪ್ರಸಾದ ಎಂದರೆ ಒಳಮನಸ್ಸಿನ ಆನಂದ (Internal Bliss). ಪೂರ್ಣಪ್ರಮಾಣದ ಸ್ವರೂಪಾನಂದನಾದ ಭಗವಂತ ಸುಪ್ರಸಾದಃ. ಭಗವಂತನಿಗೆ ದುಃಖದ ಸ್ಪರ್ಶವೇ ಇಲ್ಲ. ಆತನನ್ನು ಸ್ವಚ್ಛ ಮನಸ್ಸಿನಿಂದ, ಫಲಾಪೇಕ್ಷೆ ಇಲ್ಲದೆ ಉಪಾಸನೆ ಮಾಡುವವರಿಗೆ ಸದಾ ಆನಂದವನ್ನು ಕೊಡುತ್ತಾನೆ. 'ಸುಪ್ರ' ಎಂದರೆ ಪೂರ್ಣತೆ ಪಡೆದವರು ಅಥವಾ ಜ್ಞಾನಿಗಳು. ಇಂತಹ ಜ್ಞಾನಿಗಳನ್ನು ಸಂಸಾರಬಂಧನದಿಂದ ಪಾರು ಮಾಡುವವನು ಸುಪ್ರಸಾದಃ. ಸುಪ್ರ+ಸಾದಃ-ಅಂದರೆ ಆನಂದದಿಂದ ಸಂಹಾರ ಮಾಡುವವನು! ಭಗವಂತ ಸಂಹಾರ ಮಾಡುವುದು ಬೇಸರದಿಂದ ಹಾಗು ದ್ವೇಷದಿಂದಲ್ಲ. ಸಂಹಾರ ಆತನ ಕರುಣಾಮಯ ಕರ್ಮ ಹಾಗು ಆತ ಅದನ್ನು ಯಾವಾಗಲೂ ಆನಂದ ಸ್ವರೂಪನಾಗಿ ಮಾಡುತ್ತಾನೆ.
238) ಪ್ರಸನ್ನಾತ್ಮಾ
ತಿಳಿಯಾದ ಬಗೆಯವನು ಹಾಗು ರೋಷ ರಹಿತನು ಆದ ಭಗವಂತ ಪ್ರಸನ್ನಾತ್ಮಾ .ಇಂಗ್ಲೀಷಿನ " Pleasant" ಎನ್ನುವ ಪದದ ಮೂಲ ಪದ ಭಾಗಶಃ ಸಂಸ್ಕೃತದ 'ಪ್ರಸನ್ನ' ಎನ್ನುವ ಪದದಿಂದ ಬಂದಿರಬಹುದು! ಭಗವಂತ ಭಕ್ತರಿಗೆ ಎಂದೂ ರೋಷಚಿತ್ತನಲ್ಲ. ಎಂದೆಂದೂ ಪ್ರಸನ್ನತೆಯ ಭಾವದಿಂದ ಸದಾ ಭಕ್ತರ ರಕ್ಷಣೆ ಮಾಡುವ ಭಗವಂತ ಪ್ರಸನ್ನಾತ್ಮಾ. ಭಗವಂತನ ಪ್ರಸನ್ನಚಿತ್ತ ರೂಪಕ್ಕೆ ಆತನ ಕೃಷ್ಣಾವತಾರವೇ ಸಾಕ್ಷಿ. ಕೃಷ್ಣಾವತಾರದಲ್ಲಿ ಭಗವಂತ ಯಾವಾಗಲೂ ನಗುನಗುತ್ತ ತನ್ನ ಪ್ರಸನ್ನತೆಯ ಸ್ವರೂಪವನ್ನು ತನ್ನ ಭಕ್ತಕೋಟಿಗೆ ತೋರಿಸಿಕೊಟ್ಟಿದ್ದಾನೆ.
239) ವಿಶ್ವಧೃಕ್
ಈ ಹಿಂದೆ ವಿಶ್ಲೇಶಿಸಿದಂತೆ ಬ್ರಹ್ಮಾಂಡದ ಸೃಷ್ಟಿಕರ್ತನಾದ ಬ್ರಹ್ಮನನ್ನು 'ವಿಶ್ವ' ಎನ್ನುತ್ತಾರೆ. ಈ ಬ್ರಹ್ಮಾಂಡವೆಂಬ ಕಮಲವನ್ನು ತನ್ನ ನಾಭಿಯಲ್ಲಿ ಧರಿಸಿರುವ ಸರ್ವಧಾರಕ ಭಗವಂತ ವಿಶ್ವಧೃಕ್.

240) ವಿಶ್ವಭುಕ್
ಪ್ರಳಯ ಕಾಲದಲ್ಲಿ ಈ ವಿಶ್ವವನ್ನು ಸಂಪೂರ್ಣವಾಗಿ ಸಂಹಾರಮಾಡಿ ( ಭೋಕ್ತಾ) ತನ್ನ ಉದರದಲ್ಲಿ ಸಲಹುವವನು. ವಿಶ್ವವನ್ನು ಪಾಲಿಸಿ ನಂತರ ಕಬಳಿಸುವ ಭಗವಂತ ವಿಶ್ವಭುಕ್.
241) ವಿಭುಃ
ವಿವಿಧ+ಭವತಿ- ಅಂದರೆ ವಿವಿಧ ರೂಪ ತೊಟ್ಟ ಅನಂತರೂಪಿ. ಸರ್ವಸಮರ್ಥನಾಗಿ ಪ್ರಪಂಚದಲ್ಲೆಲ್ಲಾ ತುಂಬಿರುವ ಭಗವಂತ ವಿಭುಃ
.

No comments:

Post a Comment