Monday, August 9, 2010

Vishnu Sahasranama 259-261

ವಿಷ್ಣು ಸಹಸ್ರನಾಮ: ವಿಷ್ಣುರ್ವೃಷಪರ್ವಾ ವೃಷೋದರಃ
259) ವಿಷ್ಣುಃ
ಈ ನಾಮ ವಿಷ್ಣು ಸಹಸ್ರನಾಮದಲ್ಲಿ ಮೂರು ಬಾರಿ ಪುನರುಕ್ತಿಯಾಗಿದೆ. ಈ ಹಿಂದೆ ಹೇಳಿದಂತೆ ವಿಷತಿ ಇತಿ ವಿಷ್ಣುಃ. ಅಂದರೆ ಯಾರು ಎಲ್ಲರ ಒಳಗೆ ಪ್ರವೇಶಿಸಬಲ್ಲನೋ ಅವನು ವಿಷ್ಣು. ಸರ್ವಾಂತರ್ಯಾಮಿ ಭಗವಂತ. ವಿಷ್ಣು ಸೂಕ್ತದಲ್ಲಿ ಹೇಳಿರುವಂತೆ:

ಇದಂ ವಿಷ್ಣುರ್ವಿಚಕ್ರಮೇ ತ್ರೇಧಾ ನಿದಧೇ ಪದಮ್ ಸಮೂ(ಲ)ಢಮಸ್ಯ ಪಾಗೇಂಸುರೇಪ್ರಪಂಚದಲ್ಲಿ ಏನೇನು ವಸ್ತುಗಳಿವೆ ಅದರೊಳಗಿರುವ ಹಾಗು ನಮ್ಮೊಳಗಿರುವ ಭಗವಂತ ಒಬ್ಬನೇ. ಹಿಂದೂ-ಮುಸಲ್ಮಾನ್-ಕ್ರಿಸ್ತ ಎಲ್ಲರ ದೇವರು ಒಬ್ಬನೇ. ವೈಷ್ಣವ-ಶೈವ ಅನ್ನುವ ಬೇದ-ಭಾವ ಮನುಷ್ಯನ ಸೃಷ್ಟಿ. ಸರ್ವಾಂತರ್ಯಾಮಿ, ಸರ್ವಗತ ಹಾಗು ಸರ್ವಸಮರ್ಥನಾದ ದೇವರು ಇಬ್ಬರಿರಲು ಸಾದ್ಯವಿಲ್ಲ. ಸರ್ವಶಬ್ದ ವಾಚ್ಯನಾದ ಭಗವಂತನನ್ನು ಯಾವ ಹೆಸರಿನಿಂದ ಕೂಡ ಕರೆಯಬಹುದು, ಹೆಸರಿನ ಹಿಂದಿರುವ ಅರ್ಥ ತಿಳಿದಿರಬೇಕು ಅಷ್ಟೇ! ಮದ್ವಾಚಾರ್ಯರ ಜೀವನ ಚರಿತ್ರೆಯಲ್ಲಿನ ಒಂದು ಘಟನೆ ಇದಕ್ಕೆ ಉತ್ತಮ ನಿದರ್ಶನ. ಒಮ್ಮೆ ಆಚಾರ್ಯರು ಉತ್ತರ ಭಾರತ ಪ್ರವಾಸದಲ್ಲಿದ್ದಾಗ ದಾರಿಯಲ್ಲಿ ಹಿಂದೂ ಸನ್ಯಾಸಿಗಳಿಗೆ ನಿಷಿದ್ಧವಿದ್ದ ಮುಸ್ಲಿಂ ರಾಜ್ಯವನ್ನು ಪ್ರವೇಶಿಸುತ್ತಾರೆ. ಅನುಮತಿ ಇಲ್ಲದೆ ಪ್ರವೇಶಿಸಿದ ತಪ್ಪಿಗಾಗಿ ಅವರನ್ನು ಸೈನಿಕರು ಬಂಧಿಸಿ ರಾಜನ ಮುಂದೆ ಪ್ರಸ್ತುತಿಪಡಿಸುತ್ತಾರೆ. ಪ್ರಶ್ನಿಸಿದ ರಾಜನಿಗೆ ಆಚಾರ್ಯರು ಈ ರೀತಿ ಉತ್ತರ ಕೊಡುತ್ತಾರೆ. "ನೀನು ಪೂಜಿಸುವ ಹಾಗು ನಾನು ಪೂಜಿಸುವ ದೇವರು ಒಬ್ಬನೇ, ಹೆಸರು ಮಾತ್ರ ಬೇರೆ ಬೇರೆ. ಒಂದೇ ದೇವರ ಮಕ್ಕಳಾದ ನಾವು ಸಹೋದರರಲ್ಲವೇ?" ಆಚಾರ್ಯರ ಈ ಮಾತಿನಿಂದ ವಿಸ್ಮಿತನಾದ ರಾಜ ಅವರನ್ನು ತನ್ನ ರಾಜ್ಯದಲ್ಲಿ ನೆಲೆಸುವಂತೆ ಕೇಳಿಕೊಳ್ಳುತ್ತಾನೆ. ಆದರೆ ಆಚಾರ್ಯರು ರಾಜನನ್ನು ಹರಸಿ ತಮ್ಮ ಯಾತ್ರೆಯನ್ನು ಮುಂದುವರಿಸುತ್ತಾರೆ. ಜಾತಿ-ಧರ್ಮ-ದೇವರು ಎಂದು ಕಚ್ಚಾಡುವ ನಮಗೆ ಭಗವಂತನ ಈ ನಾಮ ಮಹತ್ತಾದ ಸಂದೇಶವನ್ನು ಕೊಡುತ್ತದೆ.
ಸೂಕ್ತಗಳನ್ನು ಒಮ್ಮೆ ಕಣ್ಣಾಡಿಸಿ ನೋಡಿದರೆ ಅದರಲ್ಲಿ 'ಷ' ಮತ್ತು 'ಣ' ಇಲ್ಲದ ಸೂಕ್ತಗಳಿಲ್ಲ. ವಿ-ಷ-ಣು ಎಂದರೆ ವಿಶಿಷ್ಟನಾದ(ವಿ),ಸರ್ವಾಂತರ್ಯಾಮಿ(ಷ) ಹಾಗು ಸರ್ವಬಲಪೂರ್ಣನಾದ(ಣು) ಭಗವಂತ.
260) ವೃಶಪರ್ವಾ
'ವೃಶ' ಎಂದರೆ ಬಯಸಿದ್ದನ್ನು ಕೊಡುವ ಶಕ್ತಿ, 'ಪರ್ವ' ಎಂದರೆ ನಮ್ಮ ಅಭೀಷ್ಟಗಳ ಸಾಧಕದ ನಾಲ್ಕು ಮಜಲು. ಧರ್ಮ-ಅರ್ಥ-ಕಾಮ-ಮೋಕ್ಷ ಇವು ನಾಲ್ಕು ಪರ್ವಗಳು. ನಾವು ಧರ್ಮದ ಮೆಟ್ಟಲೇರಿದರೆ ಮಾತ್ರ ಭಗವಂತ ನಮ್ಮ ಸಕಲ ಅಭೀಷ್ಟವನ್ನು ಪೂರೈಸುತ್ತಾನೆ. ಅಧರ್ಮದ ಮಾರ್ಗ ಕ್ಷಣಿಕ. ವೇದವ್ಯಾಸರು "ನಾನು ಕೈಯತ್ತಿ ಹೇಳುತ್ತಿದ್ದೇನೆ-ಧರ್ಮದ ಮಾರ್ಗವನ್ನು ಹಿಡಿದವರ ಹಿಂದೆ ಅರ್ಥ-ಕಾಮ-ಮೊಕ್ಷಗಳು ತಾನೆ ತಾನಾಗಿ ಹಿಂಬಾಲಿಸುತ್ತವೆ" ಎಂದಿದ್ದಾರೆ. ಹೀಗೆ ಧರ್ಮಪರ್ವ, ಅರ್ಥಪರ್ವ, ಕಾಮಪರ್ವ ಹಾಗು ಮೋಕ್ಷಪರ್ವನಾಗಿ ನಮ್ಮ ಅಭೀಷ್ಟವನ್ನು ಪೂರೈಸುವ ಭಗವಂತ ವೃಶಪರ್ವಾ.
261) ವೃಷೋದರಃ
ಇಳೆಗೆ ಮಳೆಯನ್ನು ಕೊಡುವ ಭಗವಂತ ವೃಷೋದರ. ನೆಲದಲ್ಲಿನ ನೀರನ್ನು ಆವಿಯನ್ನಾಗಿ ಮಾಡಿ ಪುನಃ ಮೋಡದಿಂದ ಮಳೆ ಸುರಿಸುವ ಹಾಗು ಈ ಚಕ್ರವನ್ನು ನಿರಂತರ ತಿರುಗಿಸುವ, ದೋಷರಹಿತ-ನಾದ ಅಭೀಷ್ಟಪ್ರದ ಭಗವಂತ ವೃಷೋದರಃ

No comments:

Post a Comment