Monday, August 16, 2010

Vishnusahasranama 279-282

ವಿಷ್ಣು ಸಹಸ್ರನಾಮ: ಋದ್ಧಃ ಸ್ಪಷ್ಟಾಕ್ಷರೋ ಮಂತ್ರಶ್ಚಂದ್ರಾಂಶುರ್ಭಾಸ್ಕರದ್ಯುತಿಃ
279) ಋದ್ಧಃ
ಋದ್ಧಃ ಎಂದರೆ ಪೂರ್ಣನಾದವನು. ಭಗವಂತನೊಬ್ಬನೇ ಎಂದೆಂದೂ ಪರಿಪೂರ್ಣ. ಅದಕ್ಕಾಗಿ ವೇದದಲ್ಲಿ ಬರುವ ಶಾಂತಿ ಮಂತ್ರಗಳಲ್ಲಿ ಹೀಗೆ ಹೇಳಿದ್ದಾರೆ:
ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ
ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾವಶಿಶ್ಯತೇ
ಓಂ ಶಾಂತಿಃ ಶಾಂತಿಃ ಶಾಂತಿಃ
ಅಂದರೆ ಅದೂ ಪೂರ್ಣ ಹಾಗು ಇದೂ ಪೂರ್ಣ. ಪೂರ್ಣದಿಂದ ಪೂರ್ಣಬರುತ್ತದೆ, ಪೂರ್ಣದಲ್ಲಿ ಪೂರ್ಣ ಸೇರಿ ಪೂರ್ಣವಾಗುತ್ತದೆ. ಇಂತಹ ಭಗವಂತ ಋದ್ಧಃ.
280) ಸ್ಪಷ್ಟಾಕ್ಷರೋ ಮಂತ್ರಃ (ಸ್ಪಷ್ಟಾಕ್ಷರಃ+ಮಂತ್ರಃ)
ಸ್ಪಷ್ಟವಾಗಿ ಭಗವದ್ ವಾಚಕಗಳಾದ ಅಕ್ಷರಗಳುಳ್ಳ ಮಂತ್ರಗಳಿಂದ ವಾಚ್ಯನಾದವನು. ಉದಾಹರಣೆಗೆ ಮೂಲ ಮಂತ್ರವಾದ "ಓಂ ನಮೋ ನಾರಾಯಣಾಯ" ಈ ಅಷ್ಟಾಕ್ಷರಿ ಮಂತ್ರದಲ್ಲಿ 'ಓಂ', 'ನಮೋ', 'ನಾರಾಯಣಾಯ' ಎಲ್ಲವೂ ಭಗವಂತನ ನಾಮ. ಇಷ್ಟೇ ಅಲ್ಲದೆ ಪ್ರತಿಯೊಂದು ಅಕ್ಷರ ಕೂಡಾ ಭಗವಂತನ ನಾಮವನ್ನೇ ಹೇಳುತ್ತದೆ. ಇಂತಹ ಭಗವಂತ ಸ್ಪಷ್ಟಾಕ್ಷರೋ ಮಂತ್ರಃ.
281) ಚಂದ್ರಾಂಶುಃ
'ಚಂದ್ರ' ಮತ್ತು 'ಚಂದ' ಎರಡೂ ಒಂದೇ ಅರ್ಥವನ್ನು ಕೊಡುವ 'ಚದಿ' ಧಾತುವಿನಿಂದ ಬಂದ ಪದ. 'ಚಡಿ' ಧಾತುವಿನಿಂದ ಇದು 'ಚಂಡಾ' ಆಗುತ್ತದೆ. ಚಂದ್ರ ಎಂದರೆ ಬಹಳ ತಂಪಾದ ತುಂಬಾ ಖುಷಿಯನ್ನು ಕೊಡುವ ಅಹ್ಲಾದಕರ ಎಂದರ್ಥ. ಚಂದ್ರ+ಅಂಶ ಎಂದರೆ ಜಗತ್ತಿಗೆಲ್ಲಾ ತಂಪನ್ನೀಯುವವ. ಭಗವಂತನನ್ನು ಧನ್ವಂತರಿಯಲ್ಲಿ ಹೀಗೆ ಹೇಳುತ್ತಾರೆ "ಶೀತಾಂಶು ಮಂಡಲಗತಂ ಸ್ಮರತಾತ್ಮ ಸಂಸ್ತಂ" ಎಂದರೆ ಚಂದ್ರಮಂಡಲದಲ್ಲಿ ಕುಳಿತು ಚಂದ್ರನ ಕಿರಣಗಳ ಮೂಲಕ ಅಮೃತವನ್ನು ಕೆಳಕ್ಕೆ ಹರಿಸಿ ನಮಗೆ ಬದುಕಲು ಬೇಕಾದ ಚೈತನ್ಯ ಶಕ್ತಿ ಕೊಡುವವ. ನಮ್ಮ ಒಳಗೆ ಕತ್ತಲು ತುಂಬಿದೆ. ಆ ಕತ್ತಲನ್ನು ಹೋಗಲಾಡಿಸಲು ಚಂದ್ರಾಂಶುವಾದ ಭಗವಂತನ ಬೆಳದಿಂಗಳು ಅಗತ್ಯ.
282) ಭಾಸ್ಕರದ್ಯುತಿಃ
ಯೋಗಿಗಳಿಗೆ ಭಗವಂತ ಒಳಗಣ್ಣಿನಲ್ಲಿ ಸಾವಿರ ಸೂರ್ಯರು ಏಕಕಾಲದಲ್ಲಿ ಉದಯಿಸಿದರೆ ಎಷ್ಟು ಪ್ರಖರವಾಗಿರುತ್ತದೋ ಅಷ್ಟು ಪ್ರಖರವಾಗಿ ಕಾಣಿಸುತ್ತಾನೆ. ಆದರೆ ಚಂದ್ರಾಂಶುವಾದ ಭಗವಂತ ಅಷ್ಟೇ ತಂಪು ಮತ್ತು ಅಹ್ಲಾದಮಯ. ಸೂರ್ಯನಂತೆ ಪ್ರಖರ ಆದರೆ ಚಂದ್ರನಂತೆ ತಂಪಾದ ಭಗವಂತ ಭಾಸ್ಕರದ್ಯುತಿಃ.

No comments:

Post a Comment