Thursday, August 12, 2010

Vishnusahasranama 267

ವಿಷ್ಣು ಸಹಸ್ರನಾಮ: ದುರ್ಧರಃ
267) ದುರ್ಧರಃ
ಭಗವಂತನನ್ನು ನಮ್ಮ ಮನಸ್ಸಿನಲ್ಲಿ ಧಾರಣೆ ಮಾಡುವುದು ಸುಲಭದ ಕೆಲಸವಲ್ಲ. ಆತನನ್ನು ನಮ್ಮ ಒಳಗಣ್ಣಿನಿಂದ ನೋಡಬೇಕಾದರೆ ಬಹಳ ಕಷ್ಟ. ಇದಕ್ಕಾಗಿ ಹಠಬೇಕು. ಧ್ಯಾನ ಮಾಡದೆ ಆತ ಮನಸ್ಸಿಗೆ ಕಾಣಿಸಿಕೊಳ್ಳುವುದಿಲ್ಲ. ಸಾಮಾನ್ಯವಾಗಿ ನಾವು ಧ್ಯಾನಕ್ಕೆ ಕುಳಿತಾಗ ನಮಗೆ ಧ್ಯಾನಕ್ಕೆ ಬಾಧಕವಾದ ನೂರಾರು ಸಂಗತಿಗಳು(Running thoughts) ಕಾಣಿಸುತ್ತವೆ. ಇದಕ್ಕೆ ಕಾರಣವೇನೆಂದರೆ ನಾವು ನಮ್ಮೊಳಗೆ ಬೇಡವಾದ ನೂರಾರು ವಿಚಾರಗಳನ್ನು ತುಂಬಿಸಿ ಮನಸ್ಸನ್ನು ಬೇಡವಾದ ರೀತಿಯಲ್ಲಿ ತರಬೇತಿಗೊಳಿಸಿರುತ್ತೇವೆ. ಮನಸ್ಸು ನಮ್ಮ ತರಬೇತಿಗೆ ತಕ್ಕಂತೆ ಪೋಳಗಿರುತ್ತದೆ ಹಾಗು ಅದನ್ನು ಭಗವಂತನತ್ತ ಒಮ್ಮೆಗೆ ತಿರುಗಿಸುವುದು ಕಷ್ಟ. ಹಠ ಬಿಡದೆ ನಿರಂತರ ದೇವರ ಜ್ಞಾನ ನಮಗೆ ದೇವರ ದರ್ಶನ ಮಾಡಬಲ್ಲದು. ದ್ಯಾನಕ್ಕೆ ಕುಳಿತಾಗ ನಮಗೆ ಕೆಟ್ಟ ವಿಚಾರ ಬಂದರೆ ಅದಕ್ಕಾಗಿ ಚಿಂತೆ ಮಾಡುವ ಅಗತ್ಯವಿಲ್ಲ. ಒಳಗೆ ತುಂಬಿರುವ ಕೆಟ್ಟ ವಿಚಾರ ಹೊರ ಹೋಗುವಾಗ ಹೀಗಾಗುತ್ತದೆ. ಒಮ್ಮೆ ಒಳಗೆ ತುಂಬಿದ್ದ ಕೊಳೆ ಹೊರ ಹೋದ ಮೇಲೆ ಮನಸ್ಸು ನಿರ್ಮಲವಾಗುತ್ತದೆ ಹಾಗು ಈ ಸ್ಥಿತಿಯಲಿ ಧ್ಯಾನ ಸುಲಭ. ಮನಸ್ಸಿನ ಕೊಳೆಯನ್ನು ತೆಗೆಯುವ ಏಕೈಕ ಸಾಧನ ನಿರಂತರ ಭಗವದ್ ಚಿಂತನೆ. ಪ್ರತಿಯೊಂದು ಕರ್ಮದಲ್ಲಿ, ಪ್ರತಿಯೊಂದು ವಸ್ತುವಿನಲ್ಲಿ ಭಗವಂತನನ್ನು, ಆತನ ವಿಶಿಷ್ಟ ಸೃಷ್ಟಿಯನ್ನು ಕಾಣುವ ಪ್ರಯತ್ನಮಾಡಿದರೆ ಫಲ ನಿಶ್ಚಯ. ಭಗವಂತನನ್ನು ಕಾಣುವುದು ಒಂದು ಜನ್ಮದ ಸಾಧನೆಯಲ್ಲ ಅದಕ್ಕಾಗಿ ಅನೇಕಾನೇಕ ಜನ್ಮದ ಸಾಧನೆ ಅಗತ್ಯ. ಆದರೆ ಪ್ರತಿ ಜನ್ಮದ ಸಾಧನೆಯ ಒಂದು ಹೆಜ್ಜೆ ಕೂಡಾ ವ್ಯರ್ಥವಲ್ಲ. ಗೀತೆಯಲ್ಲಿ ಹೇಳುವಂತೆ:


ನೇಹಾಭಿಕ್ರ ಮನಾಶೋSಸ್ತಿ ಪ್ರತ್ಯವಾಯೋ ನ ವಿದ್ಯತೇ
ಸ್ವಲ್ಪಮಪ್ಯಸ್ಯ ಧರ್ಮಸ್ಯ ತ್ರಾಯತೇ ಮಹತೋ ಭಯಾತ್ (ಅ-೨ ಶ್ಲೋ-೪೦)

ಅಂದರೆ ಇಲ್ಲಿ ತೊದಲು ಹೆಜ್ಜೆ ಕೂಡಾ ಹಾಳಾಗದು. ಇಲ್ಲಿ ತೊಡರುಗಳಿಲ್ಲ. ಈ ಧರ್ಮದ ತುಣುಕು ಕೂಡಾ ದೊಡ್ಡ ಆಘಾತ ಅಥವಾ ಭಯದಿಂದ ನಮ್ಮನ್ನು ಪಾರುಮಾಡಬಲ್ಲದು.

ಮನುಷ್ಯಾಣಾಂ ಸಹಸ್ರೇಷು ಕಶ್ಚಿದ್ ಯತತಿ ಸಿದ್ಧಯೇ
ಯತತಾಮಪಿ ಸಿದ್ಧಾನಾಂ ಕಶ್ಚಿನ್ಮಾಂ ವೇತ್ತಿ ತತ್ತ್ವತಃ (ಅ-೦೭ ಶ್ಲೋ-೦೩)

ಅಂದರೆ ಸಾವಿರಾರು ಮಂದಿಯಲ್ಲಿ ಒಬ್ಬ ಸಿದ್ಧಿಗಾಗಿ ಪ್ರಯತ್ನಿಸುತ್ತಾನೆ. ಪ್ರಯತ್ನಿಸಿದವರಲ್ಲಿ, ಪ್ರಯತ್ನಿಸಿ ಗುರಿ ಮುಟ್ಟಿದವರಲ್ಲಿ ಯಾರೋ ಒಬ್ಬ ಭಗವಂತನನ್ನು ಸರಿಯಾಗಿ ಅರಿತುಕೊಳ್ಳುತ್ತಾನೆ. ಆದ್ದರಿಂದ ಭಗವಂತನನ್ನು ನೋಡುವುದು ದುರ್ಧರ. ಸರ್ವಾಂಗ ಸುಂದರನಾದ ಆತನನ್ನು ನೋಡಬೇಕಾದರೆ ಎಷ್ಟೋ ಜನ್ಮದ ಕರ್ಮಬೇಕು.

No comments:

Post a Comment