Monday, August 23, 2010

Vishnusahasranama 304-307

ವಿಷ್ಣು ಸಹಸ್ರನಾಮ: ಅದೃಶ್ಯೋ ವ್ಯಕ್ತರೂಪಶ್ಚ ಸಹಸ್ರಜಿದನಂತಜಿತ್
304) ಅದೃಶ್ಯಃ

ಅದೃಶ್ಯಃ ಎಂದರೆ ಕಾಣಸಿಗದವನು. ಭಗವಂತ ಜೀವನ ನಾಟಕದ ಸೂತ್ರದಾರ ಆದರೆ ಆತ ಕಾಣ-ಸಿಗುವುದಿಲ್ಲ. ಇದಕ್ಕೆ ವಿಶೇಷ ಕಾರಣವಿದೆ. ನಮ್ಮ ಕಣ್ಣಿಗೆ ಕಾಣುವುದು ಕೇವಲ ಮಣ್ಣು-ನೀರು-ಬೆಂಕಿಯಿಂದಾದ ವಸ್ತು ಮಾತ್ರ. ಭಗವಂತನ ಆಕಾರ ಮಣ್ಣು-ನೀರು-ಬೆಂಕಿಯಿಂದಾಗಿಲ್ಲ. ಅವನು ಸ್ವಯಂ ಕಾಣಿಸಿಕೊಳ್ಳಬೇಕು ಎಂದು ಬಯಸದೇ ಕಾಣಿಸಿಕೊಳ್ಳುವುದಿಲ್ಲ.
305) ವ್ಯಕ್ತರೂಪಃ (ಅವ್ಯಕ್ತರೂಪಃ)
ಭಗವಂತನ ರೂಪ ಜ್ಞಾನಾನಂದ ಸ್ವರೂಪ. ಆನಂದ, ದುಃಖ, ಸುಖ, ಜ್ಞಾನ, ಅಜ್ಞಾನ, ಇತ್ಯಾದಿ ಕಣ್ಣಿಗೆ ಕಾಣುವ ವಸ್ತುಗಳಲ್ಲ. ಭಗವಂತ ಜ್ಞಾನಾನಂದಮಯ ಅವನ ರೂಪ ಅವ್ಯಕ್ತ. ಆದರೆ ಆತ ಬಯಸಿದರೆ ವ್ಯಕ್ತನಾಗಬಲ್ಲ. ಆತ ಒಲಿದನೆಂದರೆ ತನ್ನ ರೂಪವನ್ನು ತೆರೆದು ತೋರಿಸುತ್ತಾನೆ. ಅವತಾರರೂಪನಾಗಿ ಬಂದಾಗ ಭಗವಂತ ಎಲ್ಲರಿಗೂ ಕಾಣಿಸಿಕೊಳ್ಳುತ್ತಾನೆ. ಸೂತ್ರದಾರನಾದ ಭಗವಂತ ಸ್ವಯಂ ತನ್ನ ಪಾತ್ರವನ್ನು ನಿಭಾಯಿಸಲು ಅವತಾರ ರೂಪಿಯಾಗಿ ಭೂಮಿಗಿಳಿದು ಬರುತ್ತಾನೆ. ಹೊರಗಣ್ಣಿಗೆ ಕಾಣದ ಭಗವಂತ ಸಾಧಕರಿಗೆ ಧ್ಯಾನದಲ್ಲಿ ಕಾಣಿಸಿಕೊಳ್ಳುತ್ತಾನೆ. ಸಾಧಕ ಧ್ಯಾನದಲ್ಲಿ ತನ್ನ ಮನಸ್ಸನ್ನು ಅಣಿಗೊಳಿಸುತ್ತಾನೆ. ಆದರೆ ಇದು ಸುಲಭದ ಕೆಲಸವಲ್ಲ. ಮನಸ್ಸನ್ನು ನಿಯಂತ್ರಿಸಿ, ಬುದ್ಧಿಯನ್ನು ನಿಯಂತ್ರಣ ಮಾಡಿ ಅದರಾಚೆಗಿನ ಅಹಂಕಾರ, ಚಿತ್ತ, ಚೇತನ ಎಲ್ಲವನ್ನೂ ನಿಯಂತ್ರಣ ಮಾಡಿ, ಒಂದು ಬಿಂದುವಿನಲ್ಲಿ ಏಕಾಗ್ರನಾದಾಗ ಮನಸ್ಸು ಆತನ ಪ್ರತೀಕವನ್ನು ಕಡೆಯುತ್ತದೆ. ಆದರೆ ಇದು ಕೇವಲ ನಮ್ಮ ಸಂಸ್ಕಾರದ ಪ್ರತಿಮೆ ಹೊರತು ಭಗವಂತನಲ್ಲ. ಸಾಕ್ಷಾತ್ ಭಗವಂತನನ್ನು ಕಾಣಬೇಕಾದರೆ ನಾವು ನಮ್ಮ ಪಂಚ ಕೋಶಗಳಿಂದ ಈಚೆ ಬಂದು ಜ್ಞಾನಾನಂದಮಯರಾಗಬೇಕು. ಈ ಸ್ಥಿತಿಯಲ್ಲಿ ಮನಸ್ಸು ಕೆಲಸ ಮಾಡುವುದನ್ನು ನಿಲ್ಲಿಸಿ ಆತ್ಮವೇ ಯೋಚಿಸಲು ಆರಂಭಿಸುತ್ತದೆ. ಆಗ ಜ್ಞಾನಾನಂದ ರೂಪನಾದ ಭಗವಂತನನ್ನು ಕಾಣಬಹುದು. ಈ ಕಾರಣಕ್ಕಾಗಿ ಭಗವಂತನ ರೂಪ ವ್ಯಕ್ತ ಹಾಗು ಅವ್ಯಕ್ತ!
306) ಸಹಸ್ರಜಿತ್
ಭಗವಂತ ಸಾವಿರ ರೂಪವನ್ನು ತೊಟ್ಟವ. ವ್ಯಕ್ತಿ ಒಂದೇ ಆದರೂ ಅವತಾರದಲ್ಲಿ ಅಭಿವ್ಯಕ್ತಿ ಬೇರೆ ಬೇರೆ. ವ್ಯಕ್ತಿ ಏಕ ಅಭಿವ್ಯಕ್ತಿ ಅನಂತ. ಸೃಷ್ಟಿಯ ಆದಿಯಲ್ಲಿ ನಾಲ್ಕು ರೂಪದಲ್ಲಿ ವ್ಯಕ್ತನಾದ (ಪ್ರದ್ಯುಮ್ನ ಅನಿರುದ್ಧ ಸಂಕರ್ಷಣ ವಾಸುದೇವ) ನಂತರ ಪಂಚರೂಪ, ನಂತರ ಕೇಶವಾದಿ ದ್ವಾದಶರೂಪ, ನಂತರ ಸಂಕರ್ಷಣಾದಿ ಇಪ್ಪತ್ನಾಲ್ಕು ರೂಪ ಆನಂತರ ನಾರಾಯಣಾದಿ 108 ರೂಪ ಆ ಮೇಲೆ ವಿಶ್ವಾದಿ ಸಹಸ್ರರೂಪ. ಈ ವಿಷ್ಣು ಸಹಸ್ರನಾಮದಲ್ಲಿ ಬರುವ ಸಾವಿರ ನಾಮಗಳು ಭಗವಂತನ ಒಂದೊಂದು ರೂಪದ ಪ್ರತೀಕ. ಸಹಸ್ರಾರು ದೇವತೆಗಳನ್ನು ತನ್ನ ವಶದಲ್ಲಿಟ್ಟುಕೊಂಡಿರುವ ಭಗವಂತನಿಗೆ ಪ್ರಾಣತತ್ವ ಸದಾ ಜೊತೆಗಾರ. ಸಹಸ್ರಾರು ದುಷ್ಟ ರಾಕ್ಷಸರನ್ನು ಸಂಹಾರ ಮಾಡಿದ ಭಗವಂತ ಸಹಸ್ರಜಿತ್.
307) ಅನಂತಜಿತ್
ಭಗವಂತ ಅನಂತವನ್ನು ಗೆದ್ದವನು ಹಾಗು ಅನಂತದ ಜೊತೆಗಿರುವವನು. ಗೀತೆಯಲ್ಲಿ ಹೇಳುವಂತೆ:
ಅನಂತಸ್ಚಾಸ್ಮಿ ನಾಗಾನಾಂ ವರುಣೋ ಯಾದಸಾಮಹಮ್
ಪಿತ ಣಾಮರ್ಯಮಾ ಚಾಸ್ಮಿ ಯಮಃ ಸಂಯಮ ತಾಮಹಮ್ (ಅ-೧೦ ಶ್ಲೋ-೨೯)
ನಾಗರ ಹಾವುಗಳಲ್ಲಿ ಶೇಷ ನಾನು (ಅಳಿವಿರದ್ದರಿಂದ 'ಅನಂತ' ಎನ್ನಿಸಿ ಶೇಷನಲ್ಲಿದ್ದೇನೆ). ಜಲಚರಗಳ ಒಡೆಯ ವರುಣ ನಾನು, ಪಿತೃ ದೇವತೆಗಳಲ್ಲಿ ಆರ್ಯಮ ನಾನು , ದಂಡಿಸುವವರಲ್ಲಿ ಯಮ ನಾನು. ಹೀಗೆ ನಾಗರನಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಶೇಷಶಯನನಾದ ಅನಂತಜಿತ್.

No comments:

Post a Comment