Wednesday, August 11, 2010

Vishnu Sahasranamam 266

ವಿಷ್ಣು ಸಹಸ್ರನಾಮ: ಸುಭುಜಃ
266) ಸುಭುಜಃ
ಸುಭುಜ ಎಂದರೆ ಸುಂದರವಾದ ತೊಳುಳ್ಳವನು ಎನ್ನುವುದು ಮೇಲ್ನೋಟಕ್ಕೆ ಕಾಣುವ ಅರ್ಥ. ವೇದವ್ಯಾಸರು ಹೇಳುವಂತೆ "ಭಗವಂತನ ತೋಳುಗಳಿಗೆ ಈ ಜಗತ್ತಿನ ರಕ್ಷಣೆಯಲ್ಲದೆ ಇನ್ನೇನು ಕೆಲಸವಿಲ್ಲ!" ನಿರಂತರ ಜಗತ್ತಿನ ರಕ್ಷಣೆಯ ಹೊಣೆ ಹೊತ್ತ ಭಗವಂತನನ್ನು ಸುಭುಜ ಎನ್ನುತ್ತಾರೆ. ನಮ್ಮ ತೋಳಿಗೂ ಹಾಗು ದೇಹದ ಎತ್ತರಕ್ಕೂ ಸಂಭಂದವಿದೆ. ವ್ಯಕ್ತಿಯ ಎರಡು ಕೈಗಳನ್ನು ಚಾಚಿದಾಗ ಅದರ ಒಟ್ಟು ಉದ್ದ ಒಂದು ಮಾರು. ಒಂದು ಮಾರು ಎಂದರೆ ನಾಲ್ಕು ಮೊಳ. ಒಂದು ಮೊಳ ಎಂದರೆ ಇಪ್ಪತ್ನಾಲ್ಕು ಅಂಗುಲ.ವ್ಯಕ್ತಿಯ ಎತ್ತರ ಒಂದು ಮಾರು=ನಾಲ್ಕು ಮೊಳ=ತೊಂಬತ್ತಾರು ಅಂಗುಲ=ಹತ್ತು ಗೇಣು ಉದ್ದವಿದ್ದರೆ ಆತ ಸುಭುಜ. ಸಾಮಾನ್ಯವಾಗಿ ಈ ರೀತಿಯ ವ್ಯಕ್ತಿತ್ವವನ್ನು ಕೇವಲ ಭಗವಂತನ ಅವತಾರದಲ್ಲಿ ಮಾತ್ರ ನೋಡುತ್ತೇವೆ. ಸಾಮಾನ್ಯ ಮಾನವನಲ್ಲಿ ಈ ಮಾಪನ ನೂರಕ್ಕೆ ನೂರು ಸಮನಾಗಿರುವುದಿಲ್ಲ. ಇಷ್ಟೇ ಅಲ್ಲದೆ ವ್ಯಕ್ತಿಯ ಪಾದ ಕೂಡ ದೇಹದ ಎತ್ತರದ ಏಳನೇ ಒಂದರಷ್ಟು ಉದ್ದವಿರುತ್ತದೆ. ಭೂಭುಜರು ಎಂದರೆ ಭೂಮಿಯಲ್ಲಿ ಆಡಳಿತ ಮಾಡುವ ಕ್ಷತ್ರಿಯರು, ಸುಭುಜ ಎಂದರೆ ಜಗತ್ತಿನ ಪಾಲನೆ ಹಾಗು ಸಂಹಾರಕರ್ತ.ಎಂದೂ ಕೆಟ್ಟದ್ದನ್ನು ಬಯಸದ ಸುಖವನ್ನು ಮಾತ್ರ ಭೋಗಿಸುವ ಭಗವಂತ ಸುಭುಜಃ.

No comments:

Post a Comment