Thursday, August 19, 2010

Vishnusahasranama 290-293

ವಿಷ್ಣು ಸಹಸ್ರನಾಮ: ಭೂತಭವ್ಯಭವನ್ನಾಥಃ ಪವನಃ ಪಾವನೋನಲಃ
290) ಭೂತಭವ್ಯಭವನ್ನಾಥಃ

ಭಗವಂತನ ಈ ನಾಮ ಓಂಕಾರದ ಅರ್ಥವನ್ನು ಕೊಡುತ್ತದೆ. ಭೂತ+ಭವ್ಯ+ಭವತ್+ನಾಥ ಅಂದರೆ ಪ್ರಪಂಚ ಸೃಷ್ಟಿಗೆ ಮೊದಲು, ವರ್ತಮಾನ ಹಾಗು ಸೃಷ್ಟಿ ನಿರ್ಮಾಣವಾದಾಗ, ಹೀಗೆ ಎಲ್ಲಾ ಕಾಲದಲ್ಲೂ ಇರುವಂತಹದ್ದು; ಭೂತ ಭವ್ಯ ಹಾಗು ಭವತಿಗಳ ನಾಥ (ನಿಯಾಮಕ ಶಕ್ತಿ). ಓಂಕಾರದಲ್ಲಿ 'ಅ' ಎಂದರೆ ಅತೀತ ಅಂದರೆ ಭೂತಕಾಲ, 'ಉ' ಎಂದರೆ 'ಉತ್ಪನ್ನವಾದ ಕ್ಷಣ' ಹಾಗು 'ಮ್' ಎಂದರೆ ಇನ್ನು ನಿರ್ಮೆಯವಾಗುವ ಕಾಲ. 'ನಾಥ' ಎಂದರೆ ಒಡೆಯ. ನಾವು ಯಾರಿಂದ ಬೇಡಿ ಪಡೆಯಬೇಕೋ ಅವನು 'ನಾಥ'. ನಮ್ಮ ಸಮಸ್ಯೆ-ಗಳಿಗೆ ಏಕೈಕ ಪರಿಹಾರ ಹಾಗು ಏನೇ ಕೇಳಿದರು ಕೊಡಬಲ್ಲ ಶಕ್ತಿ.
ಇನ್ನೊಂದು ವಿಧದಲ್ಲಿ ಈ ನಾಮವನ್ನು ಹೀಗೆ ಬಿಡಿಸಬಹುದು. ಭೂತ+ಭವಿ+ಅಭವತ್+ನಾಥ. ಭಗವಂತ ಎಲ್ಲರ ಒಡೆಯ. 'ಭೂತಿಗಳು' ಎಂದರೆ ಭಗವಂತನೆಡೆಗೆ ಚಲಿಸುವ ಸಾತ್ವಿಕರು; ಭವಿಗಳು ಎಂದರೆ ಭಗವಂತನಿಂದ ನಿರ್ದಿಷ್ಟ ದೂರದಲ್ಲಿದ್ದು ಅಲ್ಲೇ ಸುತ್ತುವ ಸಂಸಾರಿಗಳು ಹಾಗು 'ಅಭವತ್' ಎಂದರೆ ಭಗವಂತನ ವಿರುದ್ದ ಕತ್ತಲಿನೆಡೆಗೆ ಚಲಿಸುವ ತಾಮಸರು; ಎಲ್ಲರಿಗೂ ಆತನೇ ನಾಥ (ಒಡೆಯ).
291) ಪವನಃ
'ಪವನ' ಎನ್ನುವ ಪದದ ಪ್ರಸಿದ್ಧವಾದ ಅರ್ಥ 'ಗಾಳಿ' ಅಥವಾ ವಾಯುದೇವರು. ನಮ್ಮ ಜೀವವನ್ನು ನಿಯಂತ್ರಿಸುವ ವಾಯುದೇವರಲ್ಲಿ ಸನ್ನಿಹಿತನಾಗಿರುವ ಭಗವಂತ ಪವನಃ. ಈ ನಾಮದ ಇನ್ನೊಂದು ಅರ್ಥ 'ಚಲನೆ'. ಪವತೇ ಇತಿ ಪವನಃ ಅಂದರೆ ನಿರಂತರ ಚಲಿಸುವಂತಹದ್ದು. ಎಲ್ಲರ ಒಳಗೂ ಅಂತರ್ಯಾಮಿ-ಯಾಗಿರುವ ಭಗವಂತ ಆಯಾ ವಸ್ತುವಿನಲ್ಲಿ ಆಯಾ ರೂಪದಲ್ಲಿದ್ದು ನಿರಂತರ ಚಲನೆ ಕೊಡುತ್ತಿರುತ್ತಾನೆ. ನಮ್ಮ ದೇಹದಲ್ಲಿ ಆತನ ಚಲನೆ ನಿಂತಾಕ್ಷಣ ನಾವು 'ಶವ' ವಾಗುತ್ತೇವೆ. ಉಪನಿಷತ್ತಿನಲ್ಲಿ ಭಗವಂತನನ್ನು ವನಃ ಎಂದಿದ್ದಾರೆ. ಅವನು ಪ+ವನಃ; ಇಲ್ಲಿ 'ಪ' ಎಂದರೆ 'ಪಾಲನೆ';ನಮ್ಮನ್ನು ಹಾಗು ಸಮಸ್ತ ಬ್ರಹ್ಮಾದಿ ದೇವತೆಗಳನ್ನು ಪಾಲಿಸುವ ಶಕ್ತಿ. ವನಃ ಎಂದರೆ ಎಲ್ಲರೂ ಭಜಿಸಬೇಕಾದ, ಪ್ರೀತಿಯಿಂದ ಉಪಾಸನೆ ಮಾಡತಕ್ಕಂತಹ, ಎಲ್ಲರೂ ಆಶ್ರೈಸಬೇಕಾದ ವಸ್ತು. ಸಹಸ್ರ ರೂಪನಾಗಿ ಸಹಸ್ರ ಜೀವರಲ್ಲಿ ನೆಲೆಸಿ, ನಿರಂತರ ಪಾಲಿಸುವ ಭಗವಂತ ಪವನಃ.
292) ಪಾವನಃ
ಭಗವಂತನಿರುವ ಪ್ರತಿಯೊಂದು ವಸ್ತು ಪಾವನವಾಗಿರುತ್ತದೆ. ಪ್ರಾಣದೇವರಲ್ಲಿ ಸನ್ನಿಹಿತನಾಗಿ ಆತ ನಮ್ಮೊಳಗಿರುವ ತನಕ ನಮ್ಮ ದೇಹ ಪಾವನವಾಗಿರುತ್ತದೆ. ಆತ ಹೊರಟುಹೋದ ಮರುಕ್ಷಣದಲ್ಲಿ ನಮ್ಮ ಮೃತದೇಹ 'ಅಪವಿತ್ರವೆನಿಸುತ್ತದೆ'. ಭಗವಂತ ಪಾ+ವನಃ; ಇಲ್ಲಿ 'ಪಾ' ಎಂದರೆ 'ಪಾನ' ಹಾಗು ವನಃ ಎಂದರೆ ರಕ್ಷಕ. ಸೂರ್ಯನಲ್ಲಿ ಸನ್ನಿಹಿತನಾಗಿದ್ದು; ಸೂರ್ಯಕಿರಣ ರೂಪದಲ್ಲಿ ಭೂಮಿಯಿಂದ ನೀರನ್ನು ಪಾನ ಮಾಡಿ; ಮೋಡಗಳ ಮುಖೇನ ಮಳೆಸುರಿಸಿ, ನಿರಂತರವಾಗಿ ಋತುಗಳ ಮುಖೇನ ನಮ್ಮನ್ನು ರಕ್ಷಿಸುವ ಭಗವಂತ ಪಾವನಃ.
293) ಅನಲಃ
ಅನಲಃ ಎಂದರೆ ಪ್ರಸಿದ್ಧವಾದ ಅರ್ಥ 'ಬೆಂಕಿ'. ಶಾಸ್ತೀಯ ನಿರ್ವಚನದಲ್ಲಿ ಇದಕ್ಕೆ ವಿಶಿಷ್ಟವಾದ ಅರ್ಥವಿದೆ. ಅನಲಃ ಎಂದರೆ ಎಷ್ಟು ಕೊಟ್ಟರೂ ಸಾಕು ಎನ್ನದವನು! ನಮ್ಮಲ್ಲಿ ಎರಡನ್ನು ಅನಲಃ ಎನ್ನುತ್ತಾರೆ. ಒಂದು 'ಬೆಂಕಿ' ಹಾಗು ಇನ್ನೊಂದು 'ಮನುಷ್ಯನ ಆಸೆ' ! ಅಗ್ನಿ ಭೂಮಿಯಲ್ಲಿ ಭಗವಂತನ ಆರಾದನೆಯ ಮುಖ್ಯ ಪ್ರತೀಕ. ಅಗ್ನಿಹೋತ್ರ ಮುಖೇನ ಭಗವಂತನ ಆರಾಧನೆ ಅತ್ಯಂತ ಶ್ರೇಷ್ಠ. ಅಗ್ನಿಗೆ ನಾವು ಎಷ್ಟೇ ಹವಿಸ್ಸುಗಳನ್ನು ಹಾಕಿದರೂ ಅದು ಸ್ವೀಕರಿಸುತ್ತದೆ. ಅಗ್ನಿ ಮಣ್ಣು ಹಾಗು ನೀರಿಗಿಂತ ಶುದ್ಧ. ಇದಕ್ಕಾಗಿ ಶಾಸ್ತ್ರದಲ್ಲಿ ಅಗ್ನಿಗೆ ವಿಶೇಷ ಸ್ಥಾನವಿದೆ. ಋಗ್ವೇದದಲ್ಲಿ "ಅಗ್ನಿಮೀಳೇ ಪುರೋಹಿತಂ " ಎಂದಿದ್ದಾರೆ. ಅಗ್ನಿಯಲ್ಲಿ ಸನ್ನಿಹಿತನಾಗಿ ಆಹುತಿಯನ್ನು ಸ್ವೀಕರಿಸುವ ಜೋತಿರ್ಮಯನಾದ ಭಗವಂತ ಅನಲಃ. ಇನ್ನು ಅನಲಃ ಎಂದರೆ ತೃಪ್ತಿ ಇಲ್ಲದವನು ಎನ್ನುವ ಅರ್ಥವನ್ನೂ ಕೊಡುತ್ತದೆ. ಭಗವಂತ ಭಕ್ತರ ಅಧೀನ; ಭಕ್ತರಿಗೆ ಎಷ್ಟು ಕೊಟ್ಟರೂ ಆತನಿಗೆ ತೃಪ್ತಿ ಇಲ್ಲ! ಆದ್ದರಿಂದ ಭಕ್ತರ ಪರಾದೀನನಾದ ಭಗವಂತ ಅನಲಃ.

No comments:

Post a Comment