Friday, August 13, 2010

Vishnusahasranama 268-271

ವಿಷ್ಣು ಸಹಸ್ರನಾಮ: ...ವಾಗ್ಮೀ ಮಹೇಂದ್ರೋ ವಸುದೋ ವಸುಃ
268) ವಾಗ್ಮೀ
ವಾಗ್ಮೀ ಎಂದರೆ ಮಾತುಬಲ್ಲ ಮಾತುಗಾರ ನಿಜವಾದ ವಾಗ್ಮಿ ಮಿತಭಾಷಿಯಾಗಿದ್ದು ಹೆಚ್ಚು ಮಾತನಾಡುವುದಿಲ್ಲ ಆದರೆ ಆಡುವ ಮಾತನ್ನು ಎಲ್ಲಿ ಹೇಗೆ ಎಷ್ಟು ಮಾತನಾಡಬೇಕೆಂದು ತಿಳಿದಿರುತ್ತಾರೆ. ಮಾತು ನಮಗೆ ಗೊತ್ತಿರುವ ವಿಷಯವನ್ನು ಅಭಿವ್ಯಕ್ತ ಮಾಡುವ ಸಾಧನ. ಎಲ್ಲವನ್ನೂ ತಿಳಿದವ ಮಾತ್ರ ಎಲ್ಲಾ ವಿಷಯವನ್ನು ನಿರರ್ಗಳವಾಗಿ ಮಾತನಾಡಬಲ್ಲ ಕೆಲವೊಮ್ಮೆ ವಿಷಯ ತಿಳಿದಿದ್ದರೂ ಮಾತನಾಡುವುದು ಕಷ್ಟ! ಭಗವಂತನೊಬ್ಬನೇ ಎಲ್ಲವನ್ನೂ ತಿಳಿದವ, ಎಲ್ಲರ ನಾಲಿಗೆಯಲ್ಲಿ ಕುಳಿತು ನುಡಿಸುವವನೂ ಅವನೇ ಸಾಧಕನ ಅತೀ ದೊಡ್ಡ ಬಯಕೆ ದೇವರ ಜೊತೆ ಮಾತನಾಡಬೇಕು ಎನ್ನುವುದು. ಆದರೆ ಅದಕ್ಕಾಗಿ ಕಲ್ಪಗಳನ್ನೇ ಕಾಯಬೇಕಾಗಬಹುದು. ಸಮಸ್ತ ವೇದವನ್ನು ಬ್ರಹ್ಮನಿಗೆ ಮೊಟ್ಟಮೊದಲು ಉಪದೇಶ ಮಾಡಿದ ಭಗವಂತನ ಇನ್ನೊಂದು ಹೆಸರು 'ವಾಗೀಶ' ಅಂದರೆ ಮಾತುಗಳ ಒಡೆಯ. ಎಲ್ಲಾ ವೇದಗಳನ್ನು ನೀಡಿದ, ಎಲ್ಲರೊಳಗಿದ್ದು ಎಲ್ಲಾ ನುಡಿಗಳನ್ನು ನುಡಿಸುವ ಮಾತುಗಾರ ಭಗವಂತ ವಾಗ್ಮೀ.
269) ಮಹೇಂದ್ರಃಸಂಸ್ಕೃತದಲ್ಲಿ 'ಇಂದ್ರ' ಎಂದರೆ ಸರ್ವಸಮರ್ಥ (Omnipotent). ಭಗವಂತ ಸರ್ವಸಮರ್ಥ ಪರಮೇಶ್ವರ. ದೇವತೆಗಳ ರಾಜ 'ಇಂದ್ರನಿಗೆ' ಆ ಪದವಿಯನ್ನು ಕೊಟ್ಟ ಭಗವಂತ ಮಹೇಂದ್ರ. ಒಡೆಯರಿಗೂ ಒಡೆಯ; ಸಮರ್ಥರಿಗೂ ಸಮರ್ಥ ಭಗವಂತ ಮಹೇಂದ್ರಃ.
270) ವಸುದಃ
ವಸುದ ಎಂದರೆ ಸಂಪತ್ತನ್ನು ಕೊಡುವವ. ಹಿಂದೆ ಹೇಳಿದಂತೆ ಸಂಪತ್ತಿನಲ್ಲಿ ಎರಡು ವಿಧ. ಒಂದು ಬಾಹ್ಯ ಸಂಪತ್ತು ಹಾಗು ಇನ್ನೊಂದು ಅಂತರಂಗದ ಸಂಪತ್ತು. ಜ್ಞಾನ ಅಂತರಂಗದ ಸಂಪತ್ತು. ನಮಗೆ ನಮ್ಮ ಕರ್ಮಕ್ಕನುಗುಣವಾಗಿ ಬಡತನ-ಶ್ರೀಮಂತಿಕೆ, ಜ್ಞಾನ-ಅಜ್ಞಾನ ಕೊಡುವ ಭಗವಂತ ವಸುದಃ. ಜ್ಞಾನ ಗಳಿಸಬೇಕಾದರೆ ನಮಗೆ ಇಚ್ಚಾಶಕ್ತಿ, ಗ್ರಹಣಶಕ್ತಿ ಹಾಗು ಧಾರಣಶಕ್ತಿ ಬೇಕು. ಎಲ್ಲವನ್ನೂ ಕೊಡುವ ಭಗವಂತ ವಸುದಃ. ಗೀತೆಯಲ್ಲಿ ಹೇಳುವಂತೆ:
ಮತ್ತಃ ಸ್ಮೃತಿರ್ಜ್ಞಾನ ಮಪೋಹನಂ ಚ (ಅ-೧೫ ಶ್ಲೋ-೧೫) ಎಂದರೆ 'ನೆನಪು, ಅರಿವು, ಮರೆವು ಎಲ್ಲಾ ಭಗವಂತನ ಕೊಡುಗೆ'. ಅಷ್ಟೇ ಅಲ್ಲದೆ ಭಗವಂತನನ್ನು ನಂಬಿದ ಭಕ್ತರ ಯೋಗ-ಕ್ಷೇಮದ ಹೊಣೆ ಭಗವಂತನದ್ದು.

ಅನನಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯಪಾಸತೇ
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ (ಅ-೯, ಶ್ಲೋ-೨೨)

ಜ್ಞಾನದ ಬಾಗಿಲನ್ನು ತೆರೆದು ಮೋಕ್ಷವನ್ನು ಕರುಣಿಸುವ, ಭಕ್ತರ ಯೋಗ-ಕ್ಷೇಮದ ಹೊಣೆ ಹೊತ್ತಿರುವ ಭಗವಂತ ವಸುದಃ.
271) ವಸುಃ
ದೇವತೆಗಳಲ್ಲಿ ವಸು ಎನ್ನುವ ಗಣವಿದೆ ಹಾಗು ಅವರನ್ನು ಅಷ್ಟವಸುಗಳೆನ್ನುತ್ತಾರೆ. ಇವರಲ್ಲಿ ಅಗ್ನಿ ಪ್ರಮುಖನಾದವನು. ಅಗ್ನಿಯಲ್ಲಿ ಭಗವಂತನ ಮುಖ್ಯ ಪ್ರತೀಕವಿದೆ. ಭೂಮಿಯಲ್ಲಿ ಭಗವಂತನ ಉಪಾಸನೆಯನ್ನು ಪ್ರಮುಖವಾಗಿ ಅಗ್ನಿಸ್ತರದಲ್ಲಿ ಮಾಡುತ್ತಾರೆ. ಅಗ್ನಿಗೆ ಈ ಸ್ಥಾನವನ್ನು ಕೊಟ್ಟ ಭಗವಂತ ವಸುಃ. ಭಕ್ತರಿಗೆ ಹಿರಿಯ ಸಂಪತ್ತಾದ ಹಾಗು ಆಕಾಶದಲ್ಲಿ ತುಂಬಿ ನಿಂತರುವ ಭಗವಂತ ವಸುಃ.

No comments:

Post a Comment