Sunday, August 8, 2010

Vishnusahasranama 257-258


ವಿಷ್ಣು ಸಹಸ್ರನಾಮ: ವೃಷಾಹೀ ವೃಷಭೋ.....
257) ವೃಷಾಹೀ

ಧರ್ಮ ಸಾಧನವಾದ ಯಜ್ಞಗಳಿಂದ ಆರಾಧ್ಯನಾದವನು, ಯಜ್ಞವನ್ನು ಸ್ವೀಕರಿಸಿ ನಮ್ಮ ಅಭೀಷ್ಟವನ್ನು ಪೂರೈಸುವ ಭಗವಂತ ವೃಷಾಹೀ.ಈ ಹಿಂದೆ ಹೇಳಿದಂತೆ ಯಜ್ಞದಲ್ಲಿ ಮೂರು ವಿಧ. ಕಾಲ ಕುಂಡದಲ್ಲಿ ಮಾಡುವ ಯಜ್ಞ, ದೇಹ ಕುಂಡದಲ್ಲಿ ಮಾಡುವ ಯಜ್ಞ ಹಾಗು ಅಗ್ನಿ ಕುಂಡದಲ್ಲಿ ಮಾಡುವ ಯಜ್ಞ. ಈ ರೀತಿ ಭಗವಂತನ ಉಪಾಸನೆ 'ವೃಷಾಹ'. ನಾವು ಮಾಡುವ ಸಮಸ್ತ ಕರ್ಮ, ನಮ್ಮ ಬದುಕಿನ ಪ್ರತಿಯೊಂದು ಕ್ರಿಯೆ ಯಜ್ಞವಾಗಬೇಕು. ಕೆಲವೊಮ್ಮೆ ಶಾಸ್ತ್ರ ಓದುವುದರಿಂದ ಅಜ್ಞಾನಿಗಳಾಗುವ ಹಾಗು ಯಜ್ಞ-ಯಾಗಾದಿಗಳನ್ನು ಮಾಡಿಯೂ ದುರ್ಬುದ್ಧಿ ಬೆಳೆಯುವ ಸಾಧ್ಯತೆ ಇದೆ! ಅದಕ್ಕಾಗಿ ಯಾವುದೇ ಶಾಸ್ತ್ರವನ್ನು ಓದುವ ಮೊದಲು "ಓಂ ಶಾಂತಿಃ ಶಾಂತಿಃ ಶಾಂತಿಃ" ಎಂದು ಶಾಂತಿ ಮಂತ್ರ ಪಠಿಸುತ್ತೇವೆ. ಜ್ಞಾನಾನಂದಗಳ ಪರಾಕಾಷ್ಠೆಯಾದ ಭಗವಂತನೆ, ನನ್ನನ್ನು ಜ್ಞಾನಾನಂದಗಳ(ಶಾ+ಅಂತಿ) ದಾರಿಯಲ್ಲಿ ನೆಡೆಸು ಎನ್ನುವುದು ಈ ಶಾಂತಿ ಮಂತ್ರದ ಅರ್ಥ. ಇದೇ ರೀತಿ ಪ್ರತೀ ಪೂಜೆಯಲ್ಲಿ ಮೊದಲು ಗಣಪತಿ ಪ್ರಾರ್ಥನೆ ಮಾಡುತ್ತೇವೆ. ಏಕೆಂದರೆ ಗಣಪತಿ ಆಕಾಶದ ದೇವತೆ ಹಾಗು ಈ ಆಕಾಶ ಭಗವಂತನ ನಾಭಿಯಿಂದ ಸೃಷ್ಟಿಯಾಗಿದೆ, ಆದ್ದರಿಂದ ಗಣಪತಿ ನಮ್ಮ ನಾಭಿ ದೇವತೆ.

ನಾಭ್ಯ ಆಸೀದಂತರಿಕ್ಷಂ ಶೀರ್ಷ್ನೋಧ್ಯೋ ಸಮವರ್ತತ
ಪದ್ಭ್ಯಾಂ ಭೂಮೀರ್ ದಿಶ ಶ್ರೋತ್ರಾತ್ ತತಾ ಲೋಕಾ ಅಕಲ್ಪಯನ್

ನಮ್ಮ ನಾಭಿಯ ಸಮೀಪ ಇರುವ ಮೂರು ಚಕ್ರಗಳು ಮೂಲಾಧಾರ ,ಸ್ವಾದಿಷ್ಟಾನ ಹಾಗು ಮಣಿಪುರ. ನಾಭಿಯಿಂದ ಮೇಲಕ್ಕೆ ಹ್ರುತ್ಕಮಲದಲ್ಲಿ ನಿಜವಾದ ಸಾಧನೆಯ ಅನಾಹತ ಚಕ್ರವಿದೆ. ಮೂಲಾಧಾರ ,ಸ್ವಾದಿಷ್ಟಾನ ಹಾಗು ಮಣಿಪುರ ಚಕ್ರಗಳನ್ನು ಮೀರಿ ಹೃದಯವನ್ನು ಪ್ರವೇಶಿಸಬೇಕಾದರೆ ನಾಭಿಯ ಬಾಗಿಲನ್ನು ಗಣಪತಿ ತೆರೆಯಬೇಕು.ಅದಕ್ಕಾಗಿ ನಾವು ಗಣಪತಿಯಲ್ಲಿ ಮೊತ್ತಮೊದಲಿಗೆ ಪ್ರಾರ್ಥನೆ ಮಾಡುತ್ತೇವೆ. ಪ್ರತೀ ಯಜ್ಞದ ಮೊದಲು ಗಣಪತಿ ಮಂಡಲ ಬರೆದು ಪೂಜಿಸಿ ಆನಂತರ ಯಜ್ಞ ಪ್ರಾರಂಭಿಸುತ್ತಾರೆ. ಗಣಪತಿ ನಾಭಿಯ ಬಾಗಿಲನ್ನು ತೆರೆದಾಗ ಹ್ರುತ್ಕಮಲ ತಾನೇ-ತಾನಾಗಿ ತೆರೆದುಕೊಳ್ಳುತ್ತದೆ. ಈ ಸ್ಥಿತಿಯನ್ನು 'ವೃಷಾಹ' ಎನ್ನುತ್ತಾರೆ. ಭಗವಂತ ಈ ಸ್ಥಿತಿಯಲ್ಲಿ ನಮ್ಮ ಪೂಜೆಯನ್ನು ವೃಷಾಹೀಯಾಗಿ ಸ್ವೀಕರಿಸಿ ನಮ್ಮನ್ನು ಉದ್ದಾರ ಮಾಡುತ್ತಾನೆ. ಇಂತಹ ಹ್ರುತ್ಕಮಲ ನಿವಾಸಿ ಭಗವಂತ ವೃಷಾಹೀ.
258) ವೃಷಭಃ
ವೃಷಭ ಎಂದರೆ ಗೂಳಿ. ಇದು ಪೌರುಷದ ಸಂಕೇತ. ಯಾವುದಕ್ಕೂ ಬಗ್ಗದೆ ಎದೆ ಸೆಟೆದು ನಿಲ್ಲುವ, ತಮ್ಮ ಎದುರಾಳಿಯನ್ನು ಎದುರಿಸುವ ಕೆಚ್ಚು. ಇದು ಪ್ರಕೃತಿದತ್ತವಾಗಿ ಪುರುಷ ಸ್ವಭಾವ. ಸಾಮಾನ್ಯವಾಗಿ ಈ ಗುಣ ಮಹಿಳೆಯರಿಗಿರುವುದಿಲ್ಲ. ಹೊಂದಿಕೆ, ಸಾಮರಸ್ಯ ಮತ್ತು ಅರ್ಪಣೆ ಸ್ತ್ರೀ ಲಕ್ಷಣ. ಸ್ತ್ರೀಗೆ ಬಾಲ್ಯದಲ್ಲಿ ತಂದೆ-ತಾಯಿ, ಯೌವನದಲ್ಲಿ ಗಂಡ ಹಾಗು ಮುಪ್ಪಿನಲ್ಲಿ ಮಕ್ಕಳ ಸಾಂಗತ್ಯ ಅತ್ಯಗತ್ಯ. ಆದ್ದರಿಂದ ಪೌರುಷದ ಸಂಕೇತವಾದ ಗೂಳಿ, ಸಿಂಹ ಹಾಗು ಹುಲಿಗಳನ್ನು ಕೇವಲ ಪುರುಷರಿಗೆ ಹೋಲಿಸುತ್ತಾರೆ. ಭಗವಂತ ಸರ್ವ ವೀರರ ವೀರ. ಅವನನ್ನು ಎದುರಿಸುವ ವೀರರು ಯಾರೂ ಇಲ್ಲ. ಎಂತಹ ಸಿದ್ಧ ಪುರುಷ ಕೂಡ ಒಮ್ಮೆ ಸಾವಿಗೆ ಶರಣಾಗಬೇಕು. ಆದರೆ ಭಗವಂತ ಎಲ್ಲವನ್ನೂ ಮೀರಿ ನಿಂತ ಸರ್ವ ಶಕ್ತ. ಜಗತ್ತಿನಲ್ಲಿ ಏನು ಕೇಳಿದರೂ ಕೊಡುವಂತಹ ಸಾಮರ್ಥ್ಯವಿರುವ ಭಗವಂತ ವೃಷಭಃ

No comments:

Post a Comment