Friday, August 6, 2010

Vishnu sahasranama 248-252


ವಿಷ್ಣು ಸಹಸ್ರನಾಮ: ಅಸಂಖ್ಯೇಯೋsಪ್ರಮೇಯಾತ್ಮಾ ವಿಶಿಷ್ಟಃ ಶಿಷ್ಟಕೃಚ್ಛುಚಿಃ
248) ಅಸಂಖ್ಯೇಯಃ

ಸಂಖ್ಯೆಗೆ ಒಳಪಡದವನು ಅಸಂಖ್ಯೇಯಃ. ಭಗವಂತನ ರೂಪ ಅನಂತ. ಅದು ನಮ್ಮ ಎಣಿಕೆಗೊಳಪಟ್ಟದ್ದಲ್ಲ. ಗಣಿತದಿಂದ ಅಳೆಯಲು ಅಸಾಧ್ಯವಾದ ಗುಣ ಕ್ರಿಯೆ ಮಹಿಮೆ ಭಗವಂತನದ್ದು. ವೇದದಲ್ಲಿ ಹೇಳುವಂತೆ " ಈ ಭೂಮಿ ಎಷ್ಟು ಪರಮಾಣುಗಳಿಂದಾಗಿದೆ ಎಂದು ಲೆಕ್ಕ ಹಾಕಿದರೂ ಹಾಕಬಹುದು ಆದರೆ ಭಗವಂತನನ್ನು, ಆತನ ಗುಣ, ರೂಪ, ಕ್ರಿಯೆ, ಯಾವುದನ್ನೂ ಲೆಕ್ಕ ಹಾಕುವುದು ಅಸಾದ್ಯ. ಪ್ರತಿಯೊಂದು ಜೀವದಲ್ಲಿ, ಪಂಚ ಜ್ಞಾನೇದ್ರಿಯದಲ್ಲಿ, ಪಂಚ ಕರ್ಮೇಂದ್ರಿಯದಲ್ಲಿ, ಪಂಚ ಭೂತಗಳಲ್ಲಿ, ಪಂಚ ಕೋಶದಲ್ಲಿ, ಸಪ್ತ ಧಾತುವಿನಲ್ಲಿ, ಸರ್ವ ನರಕೋಶದಲ್ಲಿ, ಹೀಗೆ ಅನಂತ ರೂಪನಾಗಿ ನಮ್ಮೊಳಗೆ ನಮ್ಮ ಹೊರಗೆ ಅನಂತ ಶಕ್ತಿಯಾಗಿ ಭಗವಂತನಿದ್ದಾನೆ. ಭಗವಂತನ ಸೃಷ್ಟಿ ಕೂಡ ಅನಂತ. ರಾತ್ರಿ ಹೊತ್ತು ಆಕಾಶದಲ್ಲಿ ಕಾಣುವ ಅನಂತ ನಕ್ಷತ್ರಮಂಡಲ ಭಗವಂತನ ಸೃಷ್ಟಿ. ವಿಜ್ಞಾನಕ್ಕೆ ತಿಳಿದಿರುವುದು ಕೇವಲ ಭೂಮಿಯ ಹತ್ತಿರದಲ್ಲಿರುವ ಗ್ರಹ ಗೋಲಗಳ ಪರಿಚಯ ಮಾತ್ರ. ಅದರಿಂದಾಚೆಗಿನ ಭಗವಂತನ ಸೃಷ್ಟಿ ಅನಂತ. ಹೀಗೆ ಭಗವಂತನ ಸೃಷ್ಟಿಯನ್ನೇ ತಿಳಿಯಲು ಅಸಾದ್ಯವಾಗಿರುವಾಗ, ಆತನನ್ನು ಗಣಿತದ ಮಿತಿಯಲ್ಲಿ ಅಳೆಯುವುದು ಎಂದಿಗೂ ಸಾದ್ಯವಿಲ್ಲ.
ಇನ್ನು ಸಂಸ್ಕೃತದಲ್ಲಿ 'ಸಂಖ್ಯಾ' ಎನ್ನುವ ಪದದ ಮೂಲಾರ್ಥ ಜ್ಞಾನಿ, ಪಂಡಿತ, ವಿದ್ವಾಂಸ ಇತ್ಯಾದಿ. ವೇದದಲ್ಲಿ ಹಾಗು ಗೀತೆಯಲ್ಲಿ ಹೆಚ್ಚಾಗಿ 'ಸಂಖ್ಯಾ' ಎನ್ನುವ ಪದವನ್ನು ಈ ಮೇಲಿನ ಅರ್ಥದಲ್ಲಿ ಬಳಸಲಾಗಿದೆ. 'ಅ' ಎನ್ನುವುದು 'ಅನಂತ', 'ಅಪಾರ' ಎನ್ನುವ ಅನೇಕ ಅರ್ಥವನ್ನು ಕೊಡುವ ಓಂಕಾರದ ಮೊದಲ ಅಕ್ಷರ. ಆದ್ದರಿಂದ ಅಸಂಖ್ಯೇಯಃ ಎಂದರೆ ಅನಂತಜ್ಞಾನ ಸಾಗರ. ಅಜ್ಞಾನಿಗಳಿಗೆ ಜ್ಞಾನವನ್ನು, ಜ್ಞಾನಿಗಳಿಗೆ ಮೋಕ್ಷವನ್ನು ಕೊಡುವ ಭಗವಂತ ಅಸಂಖ್ಯೇಯಃ
249) ಅಪ್ರಮೇಯಾತ್ಮಾ
ಅಪ್ರಮೇಯಾತ್ಮಾ ಎಂದರೆ ತಿಳಿಯಲಾಗದ ಅಥವಾ ಅಳೆಯಲಾಗದ ಸ್ವರೂಪ. ಭಗವಂತ ಸಂಪೂರ್ಣವಾಗಿ ನಮ್ಮ ತಿಳಿವಿಗೆ ಗೋಚರವಾಗುವ ವಸ್ತುವಲ್ಲ, ಆತನನ್ನು ಸಂಪೂರ್ಣ ತಿಳಿಯುವುದು ಅಸಾದ್ಯ. ದೋಷರಹಿತನಾದ, ಪರಿಪೂರ್ಣ ಹಾಗು ಎಲ್ಲರೂ ತಿಳಿಯಬೇಕಾಗಿರುವ ಭಗವಂತ ಅಪ್ರಮೇಯಾತ್ಮಾ.
250) ವಿಶಿಷ್ಟಃ
ವಿಶಿಷ್ಟ ಎಂದರೆ "Something Unique and Extraordinary". ಎಲ್ಲರಿಗಿಂತ ಮಿಗಿಲಾದವನು, ವಿಲಕ್ಷಣ ರೂಪವುಳ್ಳವನು. ಆತನ ವಿಶಿಷ್ಟತೆಯನ್ನು ಆತನ ಅವತಾರದ ಘಟನೆಗಳಲ್ಲಿ ನೋಡಬಹುದು. ಕಂಬವನ್ನೊಡೆದು ಬಂದ ನಾರಸಿಂಹ, ಗೋವರ್ದನ ಬೆಟ್ಟವನ್ನೆತ್ತಿದ ಸಾಮಾನ್ಯ ಗೋಪಾಲ ರೂಪಿ ಭಗವಂತ, ಮತ್ಸ್ಯವತಾರದಲ್ಲಿ ಮನುವಿನ ಮೂಲಕ ಜೀವದ ಮರುಸೃಷ್ಟಿಮಾಡಿದ ಭಗವಂತ, ಹೀಗೆ ಆತನ ವಿಶಿಷ್ಟತೆಯನ್ನು ನಾವು ಲೆಕ್ಕ ಹಾಕಲು ಬರುವುದಿಲ್ಲ. ಹೀಗೆ ಎಲ್ಲರಿಗಿಂತ ವಿಶಿಷ್ಟವಾಗಿದ್ದು, ಸಧಾಭಿಚಾರದಲ್ಲಿರುವವರನ್ನು ರಕ್ಷಿಸಿ ಉದ್ದರಿಸುವ ಭಗವಂತ ವಿಶಿಷ್ಟಃ
251) ಶಿಷ್ಟಕೃತ್
'ಶಿಷ್ಟ' ಎಂದರೆ ಶಾಸ್ತ್ರದ ಮರ್ಮವನ್ನು ತಿಳಿದು ಅದನ್ನು ತಮ್ಮ ಜೀವನದಲ್ಲಿ ಅನುಷ್ಠಾನ ಮಾಡಿಕೊಂಡವರು. ಇಂತಹ 'ಶಿಷ್ಟರನ್ನು' ಪಾಲಿಸಿ ಉದ್ದಾರ ಮಾಡುವ ಹಾಗು ವೇದಗಳ ಮೂಲಕ ಧರ್ಮ ಶಾಸನವನ್ನು ಮಾಡಿದ ಭಗವಂತ ಶಿಷ್ಟಕೃತ್.
252) ಶುಚಿಃ
ಶುಚಿ ಎಂದರೆ ಶುದ್ದ, ಪವಿತ್ರ, ಪ್ರಕಾಶ, ಬೆಳಕು, ನಿರ್ಮಲ ಇತ್ಯಾದಿ ಅರ್ಥವನ್ನು ಕೊಡುತ್ತದಾದರೂ, ಮೂಲ ಅರ್ಥ 'ಬೆಂಕಿ'. ಅಗ್ನಿ ಮೂಲಭೂತವಾಗಿ ಪವಿತ್ರ ಹಾಗು ನಿರ್ಮಲವಾಗಿದ್ದು, ಬೆಳಕನ್ನು ಕೊಡುತ್ತದೆ. ಬೆಂಕಿ ಶುದ್ದ ಹಾಗು ಬೆಂಕಿಗೆ ಹಾಕಿದ ಅಶುದ್ದ ಕೂಡ ಶುದ್ದವಾಗುತ್ತದೆ. ಬೆಂಕಿ ಯಾವಾಗಲೂ ಊರ್ದ್ವಮುಖವಾಗಿ ಉರಿಯುತ್ತದೆ. ಆದ್ದರಿಂದ ಅಗ್ನಿ ಸತ್ವಗುಣದ ಸಂಕೇತ. ಭಗವಂತ ಯಾವುದೇ ಹವಿಸ್ಸನ್ನು ನೇರವಾಗಿ ಸ್ವೀಕರಿಸುವುದು ಅಗ್ನಿ ಮುಖೇನ. ಅಗ್ನಿ ಪ್ರತೀಕದಲ್ಲಿ ಮಾಡುವ ಪೂಜೆ ಅತಿಶ್ರೇಷ್ಠ. ಅಗ್ನಿಯಲ್ಲಿ ವಿಶೇಷವಾಗಿ ಸನ್ನಿಹಿತನಾಗಿರುವ ಭಗವಂತ ಶುಚಿಃ.

No comments:

Post a Comment