Thursday, August 26, 2010

Vishnusahasranama 314-316

ವಿಷ್ಣು ಸಹಸ್ರನಾಮ : ಕ್ರೋಧಹಾ ಕ್ರೋಧಕೃತ್ಕರ್ತಾ

314) ಕ್ರೋಧಹಾ
ಮನುಷ್ಯ ಕಾಮವನ್ನಾದರೂ ಗೆಲ್ಲಬಹುದು ಆದರೆ ಕ್ರೋದವನ್ನು ಗೆಲ್ಲುವುದು ಅತೀ ಕಷ್ಟ. ಕ್ರೋಧ ನಮಗೆ ಇಷ್ಟವಿಲ್ಲದಿದ್ದರೂ ಕೂಡ ನಮ್ಮನ್ನು ಅಂಟಿಕೊಂಡಿರುತ್ತದೆ. ಈ ಸಮಸ್ಯೆ ಋಷಿ ಮುನಿಗಳನ್ನೂ ಬಿಟ್ಟಿಲ್ಲ. ಕಾಮವನ್ನು ಗೆದ್ದ ವಿಶ್ವಾಮಿತ್ರರು ರಂಬೆ ಬಂದಾಗ ಕೋಪಗೊಂಡು 'ಕಲ್ಲಾಗು' ಎಂದು ಶಾಪ ಕೊಟ್ಟು ಕ್ರೋಧದ ಬಲೆಗೆ ಬೀಳುತ್ತಾರೆ. ನಮ್ಮ ಕ್ರೋಧವನ್ನು ಭಗವಂತನೊಬ್ಬನೇ ಹರಣ ಮಾಡಬಲ್ಲ. ನಾವು ಕ್ರೋಧದಿಂದ ಮುಕ್ತಿ ಪಡೆಯಬೇಕಾದರೆ ಭಗವಂತನಲ್ಲಿ ಶರಣಾಗುವುದೊಂದೇ ನಮಗಿರುವ ಮಾರ್ಗ. ನಮ್ಮ ಕ್ರೋಧವನ್ನು ಕಳೆವವನು ಹಾಗು ಕ್ರೋಧದ ಪಡೆಯಾದ ರಾಕ್ಷಸರನ್ನು ಸಂಹಾರ ಮಾಡುವ ಭಗವಂತ ಕ್ರೋಧಹಾ.
315) ಕ್ರೋಧಕೃತ್
ದುಷ್ಟ ಸಂಹಾರದಲ್ಲಿ ಭಗವಂತ ಸ್ವಯಂ ಕ್ರೋಧ ರೂಪಿ. ಭಗವಂತನ ನರಸಿಂಹ ಅವತಾರ ಆತನ ಕ್ರೋಧ ರೂಪದ ಒಂದು ಉದಾಹರಣೆ. ನಮಗೆ ಕೋಪವನ್ನು ಕೊಡುವವನು ಭಗವಂತನೇ! ಮಹಾತ್ಮರ ಕೋಪ ಮಹತ್ಕಾರ್ಯವಾಗಿ ಮಾರ್ಪಾಟಾಗುತ್ತದೆ. ಸನಕಾದಿಗಳು ಜಯ-ವಿಜಯರ ಮೇಲೆ ಕೋಪಗೊಂಡು ಶಾಪ ಕೊಟ್ಟ ಪರಿಣಾಮ ಭಗವಂತ ಭೂಮಿಯಲ್ಲಿ ಹಲವು ಅವತಾರವನ್ನು ತೊಟ್ಟು ಸಜ್ಜನರ ಉದ್ದಾರ ಮಾಡುವಂತಾಯಿತು. ಹೀಗೆ ದುರ್ಜನರ ಮೇಲೆ ಕೋಪಗೊಳ್ಳುವ ಭಗವಂತ ಕ್ರೋಧಕೃತ್.
316) ಕರ್ತಾ
ಕರ್ತಾ ಎಂದರೆ 'ಮಾಡುವವನು' ಅಥವಾ 'ಕತ್ತರಿಸುವವನು'. ಸೃಷ್ಟಿ ಕಾಲದಲ್ಲಿ ಎಲ್ಲವನ್ನೂ ಸೃಷ್ಟಿ 'ಮಾಡುವ' ಭಗವಂತ ಸಂಹಾರ ಕಾಲದಲ್ಲಿ ಎಲ್ಲವನ್ನೂ 'ಕತ್ತರಿಸುತ್ತಾನೆ' ಹೀಗೆ ಯಾವ ಯಾವ ಕಾಲದಲ್ಲಿ ಏನೇನು ಆಗಬೇಕೋ ಅದನ್ನು ಮಾಡುವ ಹಾಗು ಯಾವ ಕಾಲದಲ್ಲಿ ಯಾವುದು ಇರಬಾರದೋ ಅದನ್ನು ಕತ್ತರಿಸಿ ತೆಗೆಯುವ ಭಗವಂತ ಕರ್ತಾ

1 comment: