Showing posts with label ಬನ್ನಂಜೆ. Show all posts
Showing posts with label ಬನ್ನಂಜೆ. Show all posts

Thursday, August 26, 2010

Vishnusahasranama 314-316

ವಿಷ್ಣು ಸಹಸ್ರನಾಮ : ಕ್ರೋಧಹಾ ಕ್ರೋಧಕೃತ್ಕರ್ತಾ

314) ಕ್ರೋಧಹಾ
ಮನುಷ್ಯ ಕಾಮವನ್ನಾದರೂ ಗೆಲ್ಲಬಹುದು ಆದರೆ ಕ್ರೋದವನ್ನು ಗೆಲ್ಲುವುದು ಅತೀ ಕಷ್ಟ. ಕ್ರೋಧ ನಮಗೆ ಇಷ್ಟವಿಲ್ಲದಿದ್ದರೂ ಕೂಡ ನಮ್ಮನ್ನು ಅಂಟಿಕೊಂಡಿರುತ್ತದೆ. ಈ ಸಮಸ್ಯೆ ಋಷಿ ಮುನಿಗಳನ್ನೂ ಬಿಟ್ಟಿಲ್ಲ. ಕಾಮವನ್ನು ಗೆದ್ದ ವಿಶ್ವಾಮಿತ್ರರು ರಂಬೆ ಬಂದಾಗ ಕೋಪಗೊಂಡು 'ಕಲ್ಲಾಗು' ಎಂದು ಶಾಪ ಕೊಟ್ಟು ಕ್ರೋಧದ ಬಲೆಗೆ ಬೀಳುತ್ತಾರೆ. ನಮ್ಮ ಕ್ರೋಧವನ್ನು ಭಗವಂತನೊಬ್ಬನೇ ಹರಣ ಮಾಡಬಲ್ಲ. ನಾವು ಕ್ರೋಧದಿಂದ ಮುಕ್ತಿ ಪಡೆಯಬೇಕಾದರೆ ಭಗವಂತನಲ್ಲಿ ಶರಣಾಗುವುದೊಂದೇ ನಮಗಿರುವ ಮಾರ್ಗ. ನಮ್ಮ ಕ್ರೋಧವನ್ನು ಕಳೆವವನು ಹಾಗು ಕ್ರೋಧದ ಪಡೆಯಾದ ರಾಕ್ಷಸರನ್ನು ಸಂಹಾರ ಮಾಡುವ ಭಗವಂತ ಕ್ರೋಧಹಾ.
315) ಕ್ರೋಧಕೃತ್
ದುಷ್ಟ ಸಂಹಾರದಲ್ಲಿ ಭಗವಂತ ಸ್ವಯಂ ಕ್ರೋಧ ರೂಪಿ. ಭಗವಂತನ ನರಸಿಂಹ ಅವತಾರ ಆತನ ಕ್ರೋಧ ರೂಪದ ಒಂದು ಉದಾಹರಣೆ. ನಮಗೆ ಕೋಪವನ್ನು ಕೊಡುವವನು ಭಗವಂತನೇ! ಮಹಾತ್ಮರ ಕೋಪ ಮಹತ್ಕಾರ್ಯವಾಗಿ ಮಾರ್ಪಾಟಾಗುತ್ತದೆ. ಸನಕಾದಿಗಳು ಜಯ-ವಿಜಯರ ಮೇಲೆ ಕೋಪಗೊಂಡು ಶಾಪ ಕೊಟ್ಟ ಪರಿಣಾಮ ಭಗವಂತ ಭೂಮಿಯಲ್ಲಿ ಹಲವು ಅವತಾರವನ್ನು ತೊಟ್ಟು ಸಜ್ಜನರ ಉದ್ದಾರ ಮಾಡುವಂತಾಯಿತು. ಹೀಗೆ ದುರ್ಜನರ ಮೇಲೆ ಕೋಪಗೊಳ್ಳುವ ಭಗವಂತ ಕ್ರೋಧಕೃತ್.
316) ಕರ್ತಾ
ಕರ್ತಾ ಎಂದರೆ 'ಮಾಡುವವನು' ಅಥವಾ 'ಕತ್ತರಿಸುವವನು'. ಸೃಷ್ಟಿ ಕಾಲದಲ್ಲಿ ಎಲ್ಲವನ್ನೂ ಸೃಷ್ಟಿ 'ಮಾಡುವ' ಭಗವಂತ ಸಂಹಾರ ಕಾಲದಲ್ಲಿ ಎಲ್ಲವನ್ನೂ 'ಕತ್ತರಿಸುತ್ತಾನೆ' ಹೀಗೆ ಯಾವ ಯಾವ ಕಾಲದಲ್ಲಿ ಏನೇನು ಆಗಬೇಕೋ ಅದನ್ನು ಮಾಡುವ ಹಾಗು ಯಾವ ಕಾಲದಲ್ಲಿ ಯಾವುದು ಇರಬಾರದೋ ಅದನ್ನು ಕತ್ತರಿಸಿ ತೆಗೆಯುವ ಭಗವಂತ ಕರ್ತಾ

Wednesday, August 25, 2010

Vishnu sahasranama 310-313


ವಿಷ್ಣು ಸಹಸ್ರನಾಮ: ಶಿಷ್ಟೇಷ್ಟಃ ಶಿಖಂಡೀ ನಹುಷೋ ವೃಷಃ
310) ಶಿಷ್ಟೇಷ್ಟಃ

ಶಿಷ್ಟರು ಎಂದರೆ ಸಂಪ್ರದಾಯದಿಂದ ಬಂದ ಸತ್ಯದ ಅರಿವನ್ನು ಪಡೆದವರು; ಗುರೂಪದೇಶದಂತೆ ಸತ್ಯದ ಮಾರ್ಗದಲ್ಲಿ ನಡೆಯುವವರು. ಬಲ್ಲವರಿಗೆ ಇಷ್ಟವಾದ ಹಾಗು ಬಲ್ಲವರಿಂದ ಪೂಜೆತನಾಗುವ ಭಗವಂತ ಶಿಷ್ಟೇಷ್ಟಃ.
311) ಶಿಖಂಡೀ
ಸಾಮಾಜಿಕವಾಗಿ ಈ ಪದಕ್ಕೆ ತಪ್ಪಾದ ಅರ್ಥ ರೂಢಿಯಲ್ಲಿದೆ. ಆದರೆ ಶಿಖಂಡೀ ಎಂದರೆ ಮೂಲಭೂತವಾಗಿ ಶಿಖಂಡ ಉಳ್ಳವನು. ಶಿಖ+ಅಂಡ ಇಲ್ಲಿ ಶಿಖ ಎಂದರೆ ತಲೆಕೂದಲು. ತಲೆಕೂದಲನ್ನು ಚನ್ನಾಗಿ ಬಾಚಿ ಹಿಂದೆ ಮೊಟ್ಟೆಯಂತೆ ಕಟ್ಟುವವರು ಶಿಖಂಡಿಗಳು. ಕೃಷ್ಣ ಬಾಲಕನಿದ್ದಾಗ ತಾಯಿ ಯಶೋದೆ ಆತನ ಕೂದಲನ್ನು ಈ ರೀತಿ ಕಟ್ಟುತ್ತಿದ್ದಳು ಈ ಕಾರಣಕ್ಕಾಗಿ ಆತನನ್ನು ಶಿಖಂಡೀ ಎಂದು ಕರೆಯುತ್ತಿದ್ದರು. ನವಿಲು ಗರಿಯನ್ನು ತಲೆಯಲ್ಲಿ ಧರಿಸುವವರನ್ನು ಕೂಡ ಶಿಖಂಡೀ ಎಂದು ಕರೆಯುತ್ತಿದ್ದರು. ಕೃಷ್ಣ ಬಾಲಕನಿದ್ದಾಗ ಇತರ ಗೋಪಾಲಕರ ಜೊತೆ ನವಿಲುಗರಿ ಧರಿಸುತ್ತಿದ್ದ ಆ ಕಾರಣಕ್ಕಾಗಿ ಆತನನ್ನು ಶಿಖಂಡೀ ಎನ್ನುವುದು ವಾಡಿಕೆ.
ಈ ನಾಮವನ್ನು ಒಡೆದು ನೋಡಿದರೆ ಶಿ+ಖಂಡಿ; ಇಲ್ಲಿ ಶಿ ಎಂದರೆ ಸದಾ ಅಜ್ಞಾನದ ನಿದ್ದೆಯಲ್ಲಿರುವವರು, ಇಂತವರನ್ನು ಖಂಡಿಸುವ ಭಗವಂತ ಶಿಖಂಡೀ, ಶಂ ಎಂದರೆ ಸುಖ, ಸ್ವಯಂ ಆನಂದ ಸ್ವರೂಪನಾಗಿದ್ದು ದುಃಖಮಯವಾದ ಸಂಸಾರವನ್ನು ಖಂಡಿಸಿ ಮುಕ್ತಿ ಕೊಡುವವನು; ಸುಖಕ್ಕೆ ಅಯೋಗ್ಯರಾದವರ ಸುಖವನ್ನು ಖಂಡಿಸುವ ಭಗವಂತ ಶಿಖಂಡೀ.
312) ನಹುಷಃ
ನಮ್ಮನ್ನು ಸಂಸಾರ ಬಂಧನದಲ್ಲಿ ಸಿಲುಕಿಸುವ, ಕೊನೆಗೆ ಸಂಸಾರ ಬಂಧದಿಂದ ಬಿಡಿಸಿ ಮೋಕ್ಷ ಕರುಣಿಸುವ ಭಗವಂತ ನಹುಷಃ.
ನಾವು ಅನೇಕ ಬಂಧನಗಳ ಸರಮಾಲೆಗಳಿಂದ ಬಂಧಿಸಲ್ಪಟ್ಟಿರುತ್ತೇವೆ. ಒಬ್ಬರು ಇನ್ನೊಬ್ಬರನ್ನು ಪ್ರೀತಿಸುವುದಕ್ಕೆ ಅವರೊಳಗಿರುವ ಯಾವುದೋ ಒಂದು ಶಕ್ತಿ ಕಾರಣವಾಗಿರುತ್ತದೆ. ಯಾವುದೇ ಸ್ವಾರ್ಥವಿಲ್ಲದೆ ಅಪರಿಚಿತರಾಗಿ ಬಂದು ಸ್ನೇಹದ ಬಂಧನದಲ್ಲಿ ಸಿಲುಕುವುದು, ಪತಿ-ಪತ್ನಿಯಾಗಿ ಪ್ರೀತಿಯ ಬಂಧನದಲ್ಲಿ ಬಂಧಿಸಲ್ಪಡುವುದು, ಎಲ್ಲವೂ ಭಗವಂತನ ನಿಯಮದಂತೆ. ಒಬ್ಬ ವ್ಯಕ್ತಿಯ ಸಹವಾಸದಲ್ಲಿ ನಮ್ಮ ಹೃದಯ ಅರಳುವಂತೆ ಮಾಡುವವ ಭಗವಂತ. ಇದರಿಂದ ಸ್ನೇಹ ಬೆಳೆಯುತ್ತದೆ. ಸ್ನೇಹ-ಪ್ರೇಮದ ನಂಟನ್ನು ಬೆಳೆಸುವವ ಹಾಗು ಬೆಸೆಯುವವ ಹಾಗು ಬೇರ್ಪಡಿಸುವವ ಭಗವಂತ. ನಮ್ಮನ್ನು ಬಂಧನಕ್ಕೆ ಸಿಲುಕಿಸುವ ಭಗವಂತ ಯಾವಾಗ ಬೇರ್ಪಡಿಸುತ್ತಾನೆ ಎಂದು ತಿಳಿಯುವುದು ಕಷ್ಟ. ಪ್ರೀತಿಗಾಗಿ ಬೇರ್ಪಡುವ, ದ್ವೇಷದಿಂದ ಬೇರ್ಪಡುವ ಜನರನ್ನು ಸಾಮಾನ್ಯವಾಗಿ ನಾವು ಕಾಣುತ್ತೇವೆ. ಹೀಗೆ ಬಂಧನದಲ್ಲಿ ಸಿಲುಕಿಸುವವ ಹಾಗು ಬಂಧನದಿಂದ ಬೇರ್ಪಡಿಸುವ ಭಗವಂತ ನಹುಷಃ. ಗ್ರಹ-ಗೊಲಗಳನ್ನು ಒಂದಕ್ಕೊಂದು ಸಂಕರ್ಷಣ ಶಕ್ತಿಯಿಂದ ಬಂಧಿಸಿಟ್ಟಿರುವ ಭಗವಂತ ಪ್ರಳಯಕಾಲದಲ್ಲಿ ಎಲ್ಲವನ್ನೂ ಬೇರ್ಪಡಿಸುತ್ತಾನೆ. ಇದು ಆತನ ನಿಯಮ.


313) ವೃಷಃ
ರೂಢಿಯಲ್ಲಿ ವೃಷಃ ಎಂದರೆ ಗೂಳಿ ಎನ್ನುವ ಅರ್ಥವಿದೆ. ಆದರೆ ವೈದಿಕವಾಗಿ ವೃಷಃ ಎಂದರೆ 'ಸುರಿಸುವುದು' ಎನ್ನುವ ಅರ್ಥವನ್ನು ಕೊಡುತ್ತದೆ. ಭಕ್ತರ ಹಾಗು ಜ್ಞಾನಿಗಳ ಮೇಲೆ ಅಭೀಷ್ಟದ ಮಳೆ ಸುರಿಸುವ ಭಗವಂತ ವೃಷಃ. ಈ ನಾಮದ ಇನ್ನೊಂದು ಅರ್ಥ 'ಧರ್ಮ'; ಸಮಾಜವನ್ನು ಧಾರಣೆ ಮಾಡುವುದು ಧರ್ಮ ಹಾಗು ಇದು ಭಗವಂತನ ಪ್ರತೀಕ. ವೃ+ಷಃ ಇಲ್ಲಿ 'ಷ' ಎಂದರೆ ಷಡ್ಗುಣಾಃ; ಭಗವಂತನ ಉಪಾಸನೆ ಮಾಡುವ ಆರು ಮೂಲ ಗುಣ. ಐಶ್ವರ್ಯ, ವೀರ್ಯ, ಯಶಸ್ಸು, ಸಂಪತ್ತು , ಜ್ಞಾನ ಹಾಗು ವೈರಾಗ್ಯ. ಯಾರಲ್ಲಿ ಈ ಆರು ಗುಣಗಳು ಪೂರ್ಣವಾಗಿದೆಯೋ ಅವನು ವೃಷಃ .

Wednesday, June 9, 2010

Vishnu Sahasranama 40-42

ಪುಷ್ಕರಾಕ್ಷೋ ಮಹಾಸ್ವನಃ ಅನಾದಿನಿಧನೋ....

40)ಪುಷ್ಕರಾಕ್ಷೋ
ಪುಷ್ಕರ ಅಂದರೆ ಕಮಲ, ಅಕ್ಷ ಅಂದರೆ ಕಣ್ಣು.
ಪುಷ್ಕರಾಕ್ಷ ಅಂದರೆ ನೀರನ್ನು ಹೀರುವ ಬಳ್ಳಿಯಲ್ಲಿ ಈಗಷ್ಟೇ ಅರಳಿದ ಕಮಲದಂತೆ ಅರಳುಗಣ್ಣು ಉಳ್ಳವನು.
'ಅರಳುಗಣ್ಣು' ಅಂದರೆ ಆನಂದಮಯ ವ್ಯಕ್ತಿತ್ವ ಎಂದರ್ಥ- ಭಗವಂತ ಅನಂದಮಯಪೂರ್ಣ.
ಕಣ್ಣು ಅರಳುವುದು ಆನಂದದ ಜೊತೆಗೆ ಕಾರುಣ್ಯದ ಸಂಕೇತ ಕೂಡ-ಭಗವಂತ ಕಾರುಣ್ಯಮೂರ್ತಿ.
ಪುಷ್ಟಿಕರ ನೋಟ ಉಳ್ಳವನು. ಅಂದರೆ ನಮ್ಮನ್ನು ಸದಾ ರಕ್ಷಿಸುವ ಕರುಣಾದೃಷ್ಟಿ ಉಳ್ಳವನು ಎಂಬುವುದು ಇನ್ನೊಂದು ಅರ್ಥ.
ಪುಷ್ಕರ ಅಂದರೆ ವೇದಗಳಲ್ಲಿ ಹೇಳುವಂತೆ ಯಾವುದರಲ್ಲಿ ಇಡೀ ಪ್ರಪಂಚ ಹುದುಗಿದೆಯೋ ಅದು - "ಹುಟ್ಟದವನ ಹೊಕ್ಕುಳಲ್ಲಿ ಹುಟ್ಟಿತ್ತು"
ಹೊಕ್ಕುಳಲ್ಲಿ ಹುಟ್ಟಿದ್ದು ತಾವರೆರೂಪದ ಬ್ರಹ್ಮಾಂಡ (ಬ್ರಹ್ಮನ ಮೊಟ್ಟೆ). 14 ಎಸಳುಗಳುಳ್ಳ ತಾವರೆ ಅಂದರೆ ಹದಿನಾಲ್ಕು ಲೋಕಗಳುಳ್ಳ ಬ್ರಹ್ಮಾಂಡ. ಆದ್ದರಿಂದ ಭಗವಂತ ಪುಷ್ಕರದಲ್ಲಿ ತುಂಬಿರುವ ಅಕ್ಷ -ಪುಷ್ಕರಾಕ್ಷ .
41 )ಮಹಾಸ್ವನಃ
ಮಹಾ ಅಂದರೆ ಮಹತ್ತಾದ. ಸ್ವನ ಅಂದರೆ ನಾದ.
ಎಲ್ಲಕ್ಕಿಂತ ಮಹತ್ತಾದ ನಾದವಾದ ವೇದವನ್ನು ಸೃಷ್ಟಿ ಮಾಡಿದವನು ಮಹಾಸ್ವನ.
ಮಹಾ+ಅಸು+ಅನ=ಮಹಾಸ್ವನ.
ಅಸು ಅಂದರೆ 'ಇಂದ್ರಿಯ' , ಮಹಾ-ಅಸು ಅಂದರೆ 'ಅತ್ಯಂತ ಮುಖ್ಯ ಇಂದ್ರಿಯ' ,
ಅನ ಅಂದರೆ 'ಚಲನೆ'
ದೇಹದಲ್ಲಿ ಇರುವ ಎಲ್ಲಾ ಇಂದ್ರಿಯಗಳಲ್ಲಿ ಉಸಿರು (ಪ್ರಾಣ) ಅತ್ಯಂತ ಮುಖ್ಯ ಇಂದ್ರಿಯ.
ಅದ್ದರಿಂದ ಅಸುಗಳಲ್ಲಿ ಮಹಾ ಅಸು-ಉಸಿರು (ಮುಖ್ಯಪ್ರಾಣ).
ಈ ಮುಖ್ಯಪ್ರಾಣನಿಗೂ ಕೂಡ ಚಲನೆ ಕೊಟ್ಟವನು-ಮಹಾಸ್ವನ.
42)ಅನಾದಿನಿಧನಃ
ಆದಿ-ಅಂತ ಇಲ್ಲದವನು , ಹುಟ್ಟು-ಸಾವು ಇಲ್ಲದವನು.
ಪ್ರಾಣ(ಅನ) ನಲ್ಲಿ ಇದ್ದು, ಸೃಷ್ಟಿ-ಸಂಹಾರಕ್ಕೆ ಕಾರಣನಾದವನು- ಅನಾದಿನಿಧನಃ

Tuesday, June 8, 2010

Vishnu Sahasranama 38-39


ಶಂಭುರಾದಿತ್ಯಃ

38)ಶಂಭುಃ
ಶಂ-ಭವತಿ ->ಆನಂದ ರೂಪ,ಶಂ-ಭವತಿ ಅನೇನ ->ಆನಂದ ಕೊಡುವವನು.
(ಶಂ-ಅಂದರೆ ಆನಂದ - ಉದಾಹರಣೆಗೆ : ಹರಿಃ ಓಮ್ ಶಂ ನೋ ಮಿತ್ರಃ ಶಂ ವರುಣಃ ಶಂ ನೋ ಭವತ್ವರ್ಯಮಾ ಶಂ ನ ಇಂದ್ರೋ ಬೃಹಸ್ಪತಿಃ ಶಂ ನೋ ವಿಷ್ಣುರುರುಕ್ರಮಃ)
ಯಾರು ಸ್ವಯಂ ಆನಂದಮಯನೋ , ಯಾರು ಎಲ್ಲರಿಗೂ ಆನಂದವನ್ನು ಕೊಡಬಲ್ಲನೂ ಅವನು ಶಂಭು.ಎಲ್ಲಾ ಶಾಸ್ತ್ರಗಳು ಭಗವಂತನನ್ನು ಆನಂದಮಯನೆಂದು ಹೇಳುತ್ತವೆ. ಆದ್ದರಿಂದ ಭಗವಂತ ಶಂಭು.
39)ಆದಿತ್ಯಃ
ಆದಿತ್ಯ ಅಂದರೆ ಅದಿತಿಯ ಮಗ ಎಂಬುದು ಒಂದು ಅರ್ಥ.
ಅದಿತಿ ಕಶ್ಯಪ ಮಹರ್ಷಿಯ ಹೆಂಡತಿ ಹಾಗು ದೇವತೆಗಳ ತಾಯಿ. ಅದಿತಿಗೆ ಹನ್ನೆರಡು ಮಂದಿ ಮಕ್ಕಳು ಹಾಗು ಅವರನ್ನು ದ್ವಾದಶಾದಿತ್ಯರು ಎಂದು ಕರೆಯುತ್ತಾರೆ -
ವಿವಸ್ವಾನ್ ,ಆರ್ಯಮಾನ್ ,ಪೂಷನ್ ,ತ್ವಷ್ಟೃ , ಸವಿತೃ , ಭಗ ,ಧಾತ, ವಿದಾತ, ವರುಣ , ಮಿತ್ರ ,ಶಕ್ರ, ಉರುಕ್ರಮ -ಇವರೇ ಆ ಹನ್ನೆರಡು ಮಂದಿ ಆದಿತ್ಯರು ಈ ಹನ್ನೆರಡು ದೇವತೆಗಳೇ ವರ್ಷದ ಹನ್ನೆರಡು ಮಾಸದ ದೇವತೆಗಳು.
ಇವರಲ್ಲಿ ಒಬ್ಬ ಸೂರ್ಯ ,ಒಬ್ಬ ವರುಣ , ಮತ್ತೊಬ್ಬ ಮಿತ್ರ ,ಮತ್ತೊಬ್ಬ ಇಂದ್ರ , ಹಾಗೇ ಕೊನೇ ಮಗನೇ ವಿಷ್ಣು -ವಾಮನ ರೂಪಿ ಭಗವಂತ.
ಅವನು ಎಲ್ಲರಿಗಿಂತ ಕೊನೆಗೆ ಹುಟ್ಟಿದರೂ, ಆತ ಆದಿಯಲ್ಲಿ ಇದ್ದವನು . ಆದ್ದರಿಂದ ಆತ ಆದಿತ್ಯಃ
ಆದಿ+ತಿ+ಯ -ಆದಿಯಲ್ಲಿ ಜ್ಞಾನಾನಂದ ಸ್ವರೂಪನಾಗಿದ್ದವ,ಎಲ್ಲಕ್ಕೂ ಕಾರಣಕರ್ತ.
ಸೂರ್ಯ ಮಂಡಲದಲ್ಲಿ (ಆದಿತ್ಯನಲ್ಲಿ) ಸನ್ನಿಹಿತನಾಗಿರುವ ಭಗವಂತ -ಆದಿತ್ಯಃ

Sunday, June 6, 2010

Vishnu Sahasranama 30-36

ನಿಧಿರವ್ಯಯ-ಸಂಭವೋ ಭಾವನೋ ಭರ್ತಾ ಪ್ರಭವಃ ಪ್ರಭುರೀಶ್ವರಃ
30)ನಿಧಿರವ್ಯಯ
ಸ್ಥಾಣುರ್ಭೂತಾದಿರ್ನಿಧಿರವ್ಯಯಃ (ನಿಧಿರವ್ಯಯ)
ನಿಧಿ+ಅವ್ಯಯಃ -> ನಿಧಿರವ್ಯಯ
ನಿಧಿ ಅಂದರೆ ಕೊಪ್ಪರಿಗೆ (ಹೂತಿಟ್ಟ ಸಂಪತ್ತು), ಭಗವಂತನ ಅರಿವೇ ಅತೀ ದೊಡ್ಡ ಕರಗದ-ಅಳಿಯದ (ಅವ್ಯಯ) ಸಂಪತ್ತು. ನಿಗೂಢವಾದ ಹೃದಯ ಗುಹೆಯೊಳಗೆ ಅಡಗಿರುವ (ಹೃತ್ಕಮಲ ಮದ್ಯ ನಿವಾಸಿ).
ಅಪೂರ್ವ, ಅಮೂಲ್ಯವಾದ ನಿಧಿ.
ಅವನು ಅವಿ ಅಂದರೆ - ಅವತಿ ಅಂದರೆ ರಕ್ಷಕ. ಹೃದಯ ಗುಹೆಯಲ್ಲಿ ಅಡಗಿದ್ದು, ನಮ್ಮ ನಿರಂತರ ರಕ್ಷಣೆ ಮಾಡುವವನು; ಅಯಃ ಅಂದರೆ ಎಲ್ಲಾ ಕಡೆ ಇರುವವನು; ನಮ್ಮ ಕ್ಷೇಮಕ್ಕೊಸ್ಕರ, ನಮ್ಮ ರಕ್ಷಣೆಗೋಸ್ಕರ, ನಮ್ಮಲ್ಲಿ ಅಡಗಿ ಕುಳಿತಿರುವ, ಹಾಗು ಎಲ್ಲಾ ಕಡೆ ಇರುವ ಅಪೂರ್ವ ನಿಧಿ- ನಿಧಿರವ್ಯಯ.

31 )ಸಂಭವೋ
ಸಂಭವಃ ಅಂದರೆ ಭಕ್ತರು ಕರೆದಾಗ ತಾನೇ ತಾನಾಗಿ ಸಂಭವಿಸುವವನು (ಭೂಮಿಗೆ ಇಳಿದು ಬರುವವನು). ಜಗತ್ತಿನ ಸೃಷ್ಟಿಗೆ ಕಾರಣನಾದವನು ಹಾಗು ಜಗತ್ತಿನ ಪಾಲನೆಗೊಸ್ಕರ ತಾನೇ ತಾನಾಗಿ ಅವತರಿಸುವವನು.
ಸಮೀಚೀನಃ ಭವಃ - ಶ್ರೇಷ್ಟವಾದ ಉನ್ನತಿ-ಮುಕ್ತಿ ಯಾರಿಂದ ಸಿಗುತ್ತದೋ ಅವನು ಸಂಭವ
32 )ಭಾವನೋ
ಭಾವನ್-ನಯತೀತಿ- ಭಾವನಃ
ಒಬ್ಬೊಬ್ಬರೊಳಗಿದ್ದು ಅವರ ಭಾವನೆಗಳನ್ನು ನಿಯಂತ್ರಿಸುವ ಶಕ್ತಿ ಭಾವನಃ
ಭಾವಂ+ನಯತಿ-ಭಾವನಃ (ಆನಂದ);ಭಾವಂ+ಅಪನಯತಿ-ಭಾವನಃ(ದುಃಖ) - ನಮ್ಮ ಸುಖ-ದುಃಖಕ್ಕೆ ಕಾರಣನಾದವನು ಭಾವನಃ .

33 )ಭರ್ತಾ
ಭರ್ತಾ ಅಂದರೆ ಎಲ್ಲವನ್ನೂ ಹೊತ್ತವನು. ಇಡೀ ವಿಶ್ವವನ್ನು ಧರಿಸಿದವನು.
34 )ಪ್ರಭವಃ
ಪ್ರ - ಎಲ್ಲಕ್ಕಿಂತ ಪ್ರಕೃಷ್ಟನಾಗಿರುವ ಭಗವಂತ; ವಿ-ಎಲ್ಲಕ್ಕಿಂತ ವಿಶಿಷ್ಟನಾಗಿರುವ ಭಗವಂತ ; ಯಃ- ಜ್ಞಾನ ಸ್ವರೂಪನಾದ ಭಗವಂತ .
ಯಾರು ಎಲ್ಲಕ್ಕಿಂತ ದೊಡ್ಡವನೂ, ಯಾರಿಂದ ಎಲ್ಲರೂ ಎತ್ತರಕ್ಕೆ ಏರಲು ಸಾಧ್ಯವೂ ಅವನು ಪ್ರಭವಃ .
35-36 )ಪ್ರಭುರೀಶ್ವರಃ
ಭಗವಂತ ಎಲ್ಲರ ಪ್ರಭು.
ಈಶರು-ಅಂದರೆ ನಮ್ಮ ದೇಹ ಹಾಗು ಪ್ರಪಂಚಕ್ಕೆ ಸಂಬದ್ದಪಟ್ಟ ಅಭಿಮಾನಿ ದೇವತೆಗಳು.
ಉದಾಹರಣೆಗೆ: ಶನಿ-ಪೃಥ್ವಿಯ ಅಭಿಮಾನಿ ದೇವತೆ; ಬುಧ-ನೀರಿನ ಅಭಿಮಾನಿ ದೇವತೆ; ಗಣಪತಿ-ಆಕಾಶದ ಅಭಿಮಾನಿ ದೇವತೆ;
ಸೂರ್ಯ- ಕಣ್ಣಿನ ಅಭಿಮಾನಿ ದೇವತೆ; ಚಂದ್ರ- ಕಿವಿಯ ಅಭಿಮಾನಿ ದೇವತೆ; ವರುಣ-ನಾಲಗೆಯ ಅಭಿಮಾನಿ ದೇವತೆ; ಅಗ್ನಿ-ಮಾತಿನ ಅಭಿಮಾನಿ ದೇವತೆ; ಇಂದ್ರ-ಕೈಯ ಅಭಿಮಾನಿ ದೇವತೆ; ಯಜ್ಞ- ಕಾಲಿನ ಅಭಿಮಾನಿ ದೇವತೆ;
ಅನಿರುದ್ದ , ಬೃಹಸ್ಪತಿ , ವರುಣ , ಮಿತ್ರ , ಇಂದ್ರ , ಕಾಮ , ಗರುಡ , ಶೇಷ , ರುದ್ರ , ವಾಯು - ಮನಸ್ಸಿನ ಅಭಿಮಾನಿ ದೇವತೆಗಳು ;
ಶ್ರದ್ಧೆಯ ದೇವತೆ- ಸರಸ್ವತಿ ; ಹೀಗೆ ಬೇರೆ ಬೇರೆ ದೇವತೆಗಳ ಸಮುದಾಯವಿದೆ. ಈ ದೇವತೆಗಳ ಸಮೂಹ ನಮ್ಮ ದೇಹದಲ್ಲಿರುವ ಹದಿನೈದು ಬೇಲಿಗಳನ್ನು ನಿಯಂತ್ರಿಸುವ ಈಶರು. ಈ ಎಲ್ಲಾ ದೇವತೆಗಳು ಅಖಂಡವಾದ ಭಗವಂತನ ನೀತಿಗೆ ಬದ್ದರಾಗಿ ಕೆಲಸ ಮಾಡುತ್ತಿರುತ್ತಾರೆ.
ಈ ಎಲ್ಲಾ ಈಶರಿಗೂ ವರನಾದವ, ಶ್ರೇಷ್ಟನಾದವ , ಈ ದೇಹದಲ್ಲಿರುವ ಸರ್ವ-ನಿಯಾಮಕನಾದ ಭಗವಂತ ಈಶ್ವರ-ಪ್ರಭುರೀಶ್ವರ.