ವಿಷ್ಣು ಸಹಸ್ರನಾಮ:
ಸುಲಭಃ ಸುವ್ರತಃ ಸಿದ್ಧಃ ಶತ್ರುಜಿಚ್ಛತ್ರುತಾಪನಃ
821) ಸುಲಭಃ
ಭಗವಂತ ನಮ್ಮೊಳಗೇ ಇದ್ದಾನೆ, ಆತ ಎಲ್ಲಾ ಕಡೆ ತುಂಬಿದ್ದಾನೆ ಎನ್ನುವ ಅರಿವು ನಮ್ಮಲ್ಲಿ ಮೂಡಿದಾಗ ಭಗವಂತ ಭಕ್ತರಿಗೆ ಸುಲಭನಾಗುತ್ತಾನೆ. ಇದನ್ನು ಪ್ರಹಲ್ಲಾದ ನಮಗೆ ತೋರಿಸಿಕೊಟ್ಟಿದ್ದಾನೆ. ನಾವು ಪ್ರಹಲ್ಲಾದ-ದ್ರುವನಂತೆ ನಿಷ್ಕಲ್ಮಶವಾದ ಭಕ್ತಿಯಿಂದ ಮಗುವಿನಂತೆ ಭಗವಂತನನ್ನು ಭಜಿಸಿದರೆ ಆತ ಸುಲಭಃ.
822) ಸುವ್ರತಃ
ಭಕ್ತನ ರಕ್ಷಣೆಯೇ ಭಗವಂತನ ವ್ರತ. ರಾಮಾಯಣದಲ್ಲಿ ಶ್ರೀರಾಮ ಈ ರೀತಿ ಹೇಳಿದ್ದಾನೆ. "ನಾನು ನಿನ್ನವ, ನನ್ನನ್ನು ಕೈಬಿಡಬೇಡ ಎಂದು ಯಾರು ಒಂದು ಭಾರಿ ನನ್ನ ಹತ್ತಿರ ಭಕ್ತಿಯಿಂದ ಬೇಡಿಕೊಳ್ಳುತ್ತಾರೋ ಅಂತವರನ್ನು ಎಂದೂ ಕೈಬಿಡುವುದಿಲ್ಲ" ಇದು ಭಗವಂತನ ವ್ರತ. ಇದನ್ನೇ ಶ್ರೀಕೃಷ್ಣ ಭಗವದ್ಗೀತೆಯಲ್ಲಿ ಈ ರೀತಿ ಹೇಳಿದ್ದಾನೆ:
ಅನನ್ಯಾಶ್ಚಿಂತಯಂತೋ ಮಾಂ ಯೇ ಜನಾಃ ಪರ್ಯುಪಾಸತೇ ।
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ (ಅ-೯, ಶ್ಲೋ:೨೨)
ತೇಷಾಂ ನಿತ್ಯಾಭಿಯುಕ್ತಾನಾಂ ಯೋಗಕ್ಷೇಮಂ ವಹಾಮ್ಯಹಮ್ (ಅ-೯, ಶ್ಲೋ:೨೨)
ಅಂದರೆ "ಯಾವುದೋ ಬೇಡವಾದ ವಿಷಯ ಚಿಂತನೆ ಬಿಟ್ಟು, ನನ್ನನ್ನು ಪರಿಪರಿಯಿಂದ ಪೂಜಿಸುವ ಜನರು ಎಲ್ಲೆಲ್ಲೂ ನನ್ನ ಸೇವೆಗೆ ಮುಡಿಪಾದವರು. ಅವರ ಯೋಗ-ಕ್ಷೇಮದ ಹೊಣೆ ನನ್ನದು". ಈ ರೀತಿ ಯಾರು ಭಗವಂತನನ್ನು ನಂಬಿ ಬರುತ್ತಾರೋ ಆತ ಅಂತವರ ಕೈ ಎಂದೂ ಬಿಡಲಾರ. ಇದು ಅವನ ವ್ರತ. ಇಂತಹ ಸು-ವ್ರತವುಳ್ಳ ಭಗವಂತ ಸುವ್ರತಃ.
823) ಸಿದ್ಧಃ
ನಾವು ಯಾವಾಗಲೂ ಶ್ರೀಮಂತರಾಗಬೇಕು, ಇಲ್ಲದ್ದನ್ನು ಪಡೆಯುಬೇಕು ಎನ್ನುವ ಬಯಕೆಯಲ್ಲಿ ನಮ್ಮ ಜೀವನವನ್ನು ಹಾಳು ಮಾಡಿಕೊಳ್ಳುತ್ತೇವೆ. ಆದರೆ ನಮ್ಮೊಳಗೇ ಸಿದ್ಧನಾಗಿರುವ ಭಗವಂತನನ್ನು ಅರಿಯುವ ಪ್ರಯತ್ನ ಎಂದೂ ಮಾಡುವುದಿಲ್ಲ. ಭಗವಂತನನ್ನು ಸಾಧಿಸಬೇಕಾಗಿಲ್ಲ. ಆತ ನಮ್ಮೊಳಗೇ ಸದಾ ಸಿದ್ಧನಾಗಿದ್ದಾನೆ, ಆತ ಸಿದ್ಧಃ.
824) ಶತ್ರುಜಿತ್
ಈ ಹಿಂದೆ ಹೇಳಿದಂತೆ ಧರ್ಮವನ್ನು ದ್ವೇಷಿಸುವವರು ಭಗವಂತನ ಶತ್ರುಗಳು. ಇಂತಹ ಅರಿಗಳನ್ನು ಗೆದ್ದ ಭಗವಂತ ಶತ್ರುಜಿತ್.
825) ಶತ್ರುತಾಪನಃಅರಿಗಳನ್ನು ಪರಿಪರಿಯಾಗಿ ಗೋಳಾಡಿಸುವ ಭಗವಂತ ಶತ್ರುತಾಪನಃ !
No comments:
Post a Comment