Saturday, December 18, 2010

Vishnu Sahasranaama 861-870

ವಿಷ್ಣು ಸಹಸ್ರನಾಮ:
ಧನುರ್ಧರೋ ಧನುರ್ವೇದೋ ದಂಡೋ ದಮಯಿತಾ ದಮಃ
ಅಪರಾಜಿತಸ್ಸರ್ವಸಹೋ ನಿಯಂತಾ ನಿಯಮೋ ಯಮಃ
861) ಧನುರ್ಧರಃ
ಭಗವಂತ ನಮ್ಮನ್ನು  ರಕ್ಷಣೆ ಮಾಡುವುದಕ್ಕೋಸ್ಕರ ಒಮ್ಮೊಮ್ಮೆ ಬಿಲ್ಲನ್ನು ಹಿಡಿದು ಅವತಾರ ರೂಪದಲ್ಲಿ ಬರುತ್ತಾನೆ. ಹೀಗೆ ಧನುಸ್ಸನ್ನು ಧರಿಸಿ ನಮ್ಮನ್ನು ರಕ್ಷಣೆ ಮಾಡುವ ಕೋದಂಡಪಾಣಿ ಭಗವಂತ ಧನುರ್ಧರಃ.
862) ಧನುರ್ವೇದಃ
ಭಗವಂತ   ಕೇವಲ ಬಿಲ್ವಿದ್ಯೆ ತಿಳಿದವನಷ್ಟೇ ಅಲ್ಲ, ಗುರುವಾಗಿ  ಜಗತ್ತಿಗೆ  ಬಿಲ್ವಿದ್ಯೆಯನ್ನು ಕಳಿಸಿ ಕೊಟ್ಟವನು ಪರಶುರಾಮ ರೂಪಿ ಭಗವಂತ. ಆತ ದ್ರೋಣಾಚಾರ್ಯ, ಭೀಷ್ಮ ಹಾಗು ಕರ್ಣರಿಗೆ ಬಿಲ್ವಿದ್ಯೆಯನ್ನು ಕಳಿಸಿಕೊಟ್ಟ ಗುರು. ಇತರರು ಬಿಲ್ವಿದ್ಯೆಯನ್ನು ಕಲಿತದ್ದು ದ್ರೋಣಾಚಾರ್ಯರಿಂದ. ಭಗವಂತ ಗುರುವಿನ ಗುರು.
ನಾಲ್ಕು ಉಪವೇದಗಳಲ್ಲಿ ಧನುರ್ವೇದ ಕೂಡಾ ಒಂದು. ಬದುಕಿಸುವ ಶಾಸ್ತ್ರ ಆಯುರ್ವೇದ ಹಾಗು ಸಾಯಿಸುವ ಶಾಸ್ತ್ರ ಧನುರ್ವೇದ. ಬದುಕಿ ಸಾಯುವ ತನಕ ಲಲಿತ ಕಲೆಗಳ ಹವ್ಯಾಸಕ್ಕಾಗಿ ಸಂಗೀತಕ್ಕೆ ಸಂಬಂಧಪಟ್ಟ ಗಾಂದರ್ವವೇದ ಹಾಗು ಶಿಲ್ಪಿಕಲೆ ಮತ್ತು ಚಿತ್ರಕಲೆಗೆ ಸಂಬಂಧಪಟ್ಟ ಸ್ಥಾಪತ್ಯವೇದ.  ಈ ನಾಲ್ಕು ಉಪವೇದಗಳಲ್ಲಿ ಧನುರ್ವೇದ ಕೇವಲ ಸಾಯಿಸುವ ವೇದವಷ್ಟೇ ಅಲ್ಲ, ಜಗತ್ತಿನ ದುಷ್ಟ ಶಕ್ತಿಗಳ ನಿರ್ನಾಮ ಮಾಡಿ ಸಜ್ಜನರು ಬದುಕುವಂತೆ ಮಾಡುವ ಆಯುರ್ವೇದಕ್ಕೆ ಪೂರಕವಾದ ವೇದ. ಇಂತಹ ವೇದವನ್ನು ಪ್ರವರ್ತನೆ ಮಾಡಿ ಜಗತ್ತಿನ ಆರೋಗ್ಯಕ್ಕೂ ಹಾಗು ಸುವ್ಯವಸ್ಥೆಗೂ ಕಾರಣನಾದ ಭಗವಂತ ಧನುರ್ವೇದಃ      
863) ದಂಡಃ
ದಂಡ ಎಂದರೆ ಶಿಕ್ಷೆ. ಸಂಸ್ಕೃತದಲ್ಲಿ ಶಿಕ್ಷೆ ಎನ್ನುವುದಕ್ಕೆ ಶಿಕ್ಷಣ ಎನ್ನುವ ಅರ್ಥವಿದೆ. ಆದರೆ ಇಲ್ಲಿ ದಂಡ ಎಂದರೆ ದಂಡಿಸುವುದು(Punishment). ತಪ್ಪು ಮಾಡಿದವರಿಗೆ ದೇವರ ರಾಜ್ಯದಲ್ಲಿ ಕ್ಷಮೆ ಇಲ್ಲ. ನಾವು ಮಾಡಿದ ಕರ್ಮವನ್ನು ನಾವು ಅನುಭವಿಸಲೇಬೇಕು. ತಪ್ಪು ಮಾಡಿದವರಿಗೆ ನಿರ್ಧಾಕ್ಷಿಣ್ಯ ಹಾಗು ನಿಷ್ಟುರವಾದ ದಂಡನೆಯನ್ನು ಕೊಡುವ ಭಗವಂತ ದಂಡಃ.
864) ದಮಯಿತಾ
ಯಾರು ಸಮಾಜ ಕಂಟಕರು, ಯಾರು ಧರ್ಮದ ವಿರುದ್ಧ ನಡೆಯುತ್ತಾರೋ ಅಂಥವರನ್ನು ದಮನ ಮಾಡುವ ಭಗವಂತ ದಮಯಿತಾ. ಇದಕ್ಕೋಸ್ಕರ ಆತ ಅನೇಕ ರೂಪ ಧರಿಸಿ ಭೂಮಿಯಲ್ಲಿ ಅವತರಿಸುತ್ತಾನೆ. ನಾವು ಕೃಷ್ಣಾಷ್ಟಮಿಯಂದು ಕೃಷ್ಣನಿಗೆ ಅರ್ಘ್ಯವನ್ನು ಕೊಡುವಾಗ ಈ ರೀತಿ ಹೇಳುತ್ತೇವೆ:
ಜಾತಃ ಕಂಸ ವಧಾರ್ಥಾಯ ಭೂಭಾರ ಹರಣಾಯ ಚ |
ಕೌರವಾಣಾಂ ವಿನಾಶಾಯ ದೈತ್ಯಾನಾಂ ನಿಧನಾಯ ಚ ||
ಪಾಂಡವಾನಾಂ ಹಿತಾರ್ಥಾಯ ಧರ್ಮ ಸಂಸ್ಥಾಪನಾಯಚ |
ಗೃಹಾಣಾರ್ಘ್ಯಂ ಮಯಾ ದತ್ತಂ ದೇವಕ್ಯಾ ಸಹಿತೋ ಹರೇ ||
 
ಎಲ್ಲಾ  ದುಷ್ಟ ಶಕ್ತಿಗಳ ದಮನ ಮಾಡಿ ಭೂಮಿಯ ಭಾರವನ್ನು ಇಳಿಸುವುದಕ್ಕೊಸ್ಕರ ಭಗವಂತ ಇಳಿದು ಬರುತ್ತಾನೆ. ಈ ಕಾರಣಕ್ಕಾಗಿ ಆತನನ್ನು ದಮಯಿತಾ ಎನ್ನುತ್ತಾರೆ. ಇದನ್ನೇ ಗೀತೆಯಲ್ಲಿ ಶ್ರೀಕೃಷ್ಣ ಹೀಗೆ ಹೇಳಿದ್ದಾನೆ:
ಯದಾಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ    ।
ಅಭ್ಯುತ್ಥಾನಮಧರ್ಮಸ್ಯ ತದಾssತ್ಮಾನಂ ಸೃಜಾಮ್ಯಹಮ್    (ಅ-೪; ಶ್ಲೋ-೭)
865) ದಮಃ
'ದಮ' ಎಂದರೆ ಇಂದ್ರಿಯ ನಿಗ್ರಹ. ಅವತಾರ ರೂಪದಲ್ಲಿ ಇಂದ್ರಿಯ ನಿಗ್ರಹದ ಪರಾಕಾಷ್ಠೆಯನ್ನು ತೋರಿಸಿಕೊಟ್ಟ ಭಗವಂತ ದಮಃ. ನರ-ನಾರಾಯಣ ರೂಪದಲ್ಲಿ, ಸನತ್ಕುಮಾರನಾಗಿ, ಕಪಿಲನಾಗಿ, ದತ್ತಾತ್ರಯನಾಗಿ, ಹೀಗೆ ಅನೇಕ ಅವತಾರದಲ್ಲಿ ಭಗವಂತ ಇಂದ್ರಿಯ ನಿಗ್ರಹದ ಪರಾಕಾಷ್ಠೆಯನ್ನು ತೋರಿಸಿಕೊಟ್ಟಿದ್ದಾನೆ.    
866) ಅಪರಾಜಿತಃ
ಭಗವಂತನನ್ನು  ಯಾರಿಂದಲೂ ಸೋಲಿಸಲು ಅಸಾಧ್ಯ. ಇದಕ್ಕೊಂದು ಅಪವಾದವೆಂದರೆ "ಭಗವಂತ ಭಕ್ತ ಪರಾಧೀನ" !  ಯಾವುದಕ್ಕೂ ಸೋಲದ ಎಲ್ಲಕ್ಕಿಂತ ಎತ್ತರದಲ್ಲಿರುವ ಭಕ್ತ ವಾತ್ಸಲ ಭಗವಂತ ಅಪರಾಜಿತಃ
867) ಸರ್ವಸಹಃ
ಅಸಹನೆಯಿಲ್ಲದೆ, ಎಲಾ ಹೊಣೆಗಾರಿಕೆಯನ್ನು ಹೊರುವ ಸಹನಾಮೂರ್ತಿ ಭಗವಂತ ಸರ್ವಸಹಃ.
868) ನಿಯಂತಾ
ಸಮಸ್ಥ ಪ್ರಪಂಚವನ್ನು, ಚರಾಚರಾತ್ಮಕವಾದ ವಿಶ್ವವನ್ನು ನಿಯಮನ ಮಾಡುವ ಶಕ್ತಿ ಭಗವಂತ ನಿಯಂತಾ.
869) ನಿಯಮಃ(ಅನಿಯಮಃ)
ಜಗತ್ತಿನಲ್ಲಿ  ಯಾವುದು ಸರಿ, ಯಾವುದು ತಪ್ಪು ಎಂದು ನಿಯಮ ಮಾಡಿದವನು, ಆ ನಿಯಮದಂತೆ ಶಿಕ್ಷೆ ಕೊಟ್ಟು, ರಕ್ಷೆ ಕೊಟ್ಟು, ಪಾಲನೆ ಮಾಡುವ ಭಗವಂತ ನಿಯಮಃ. ಇಂತಹ ಭಗವಂತ ಇನ್ನೊಂದು ನಿಯಮಕ್ಕೆ ಬದ್ಧನಲ್ಲ. ಆದ್ದರಿಂದ ಆತ ನಿಯಮಃ. ಆತ ತನ್ನ ನಿಯತಿಗೆ ತಕ್ಕಂತೆ ತಾನೇ ಬದ್ಧನಾಗಿ ನಡೆಯುತ್ತಾನೆ.   
870) ಯಮಃ(ಅಯಮಃ)
ಯೋಗಶಾಸ್ತ್ರದಲ್ಲಿ ಯಮ ಎನ್ನುವ ಪದವನ್ನು ವಿಶಿಷ್ಟ ಅರ್ಥದಲ್ಲಿ ಬಳಸಿದ್ದಾರೆ. ಅದು ನಾವು ಮಾಡಬಾರದ ಐದು ನಿಯಮಗಳನ್ನು ಹೇಳುತ್ತದೆ. (೧) ಹಿಂಸೆ, (೨) ಸುಳ್ಳು ಹೇಳುವುದು,(೩) ಕದಿಯುವುದು,(೪) ಅತಿಯಾದ ಕಾಮ ಮತ್ತು (೫) ಇನ್ನೊಬ್ಬರ ಮುಂದೆ ಕೈಚಾಚುವುದು. ಭಗವಂತನ ಉಪಾಸನೆಯ ಮಾರ್ಗದಲ್ಲಿ ಬಿಡಬೇಕಾದ ಈ ಐದು ನಿಯಮಗಳನ್ನು ಕೊಟ್ಟ ಭಗವಂತ
ಯಮಃ. ಇಡೀ ಜಗತ್ತನ್ನು ನಿಯಂತ್ರಿಸುವ, ಯಮಧರ್ಮನನ್ನೂ ನಿಯಂತ್ರಿಸುವ ಭಗವಂತ ಯಮಃ. ಇಂತಹ ಭಗವಂತನಿಗೆ ಇನ್ನೊಬ್ಬ ಯಮನಿಲ್ಲ ಆದ್ದರಿಂದ ಆತ ಯಮಃ.

No comments:

Post a Comment