Tuesday, December 14, 2010

Vishnu Sahasranama 817-820

ವಿಷ್ಣು ಸಹಸ್ರನಾಮ:
ಅಮೃತಾಶೋಮೃತವಪುಃ ಸರ್ವಜ್ಞಃ ಸರ್ವತೋಮುಖಃ
817) ಅಮೃತಾಶಃ
ಇಲ್ಲಿ ಅಮೃತ ಎಂದರೆ ನಿತ್ಯಾನಂದ. ಮೋಕ್ಷದಲ್ಲಿ  ನಮಗೆ ಎಂದೂ ಕೊನೆಯಿಲ್ಲದ ನಿರಂತರ ಆನಂದವನ್ನು ಉಣ್ಣಿಸುವ, ನಾಶವಿಲ್ಲದ ಆನಂದ ಸ್ವರೂಪಿ ಭಗವಂತ ಅಮೃತಾಶಃ. ಮೋಕ್ಷದಲ್ಲಿ ಅಮೃತವಾಗಿರುವ ಜೀವಜಾತಗಳು ಯಾರ ಅಂಶವೋ ಅವನು ಅಮೃತಾಂಶ.  
818) ಅಮೃತವಪುಃ
ಎಂದೂ ನಾಶವಿಲ್ಲದ, ಜ್ಞಾನಾನಂದಮಯವಾದ, ಹುಟ್ಟು-ಸಾವಿಗೆ ಬದ್ಧವಲ್ಲದ ಶರೀರವುಳ್ಳ ಭಗವಂತ ಅಮೃತವಪುಃ. ಭಗವಂತನ ದೇಹ ಪಾಂಚಬೌತಿಕವಾದುದ್ದಲ್ಲ. ಅವತಾರ ರೂಪದಲ್ಲಿ ಆತ ನಮಗೆ ಕಾಣಿಸುವುದು ಸಾಮಾನ್ಯ ಮಾನವ ಶರೀರ ರೂಪದಲ್ಲಿ. ಆದರೆ ಭಗವಂತನಿಗೂ ಕೂಡಾ ನಮ್ಮಂತೆ ಪಾಂಚಬೌತಿಕಶರೀರವಿದೆ, ಅದು ಒಂದು ದಿನ ಬಿದ್ದುಹೋಗುತ್ತದೆ ಎಂದು ತಿಳಿಯುವುದು ತಪ್ಪು. ಇದನ್ನು ಶ್ರೀಕೃಷ್ಣ ಗೀತೆಯಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ:
ಅವಜಾನಂತಿ  ಮಾಂ ಮೂಢಾ ಮಾನುಷೀಂ ತನುಮಾಶ್ರಿತಮ್ ।
ಪರಂ ಭಾವಮಜಾ
ನಂತೋ ಮಮ ಭೂತಮಹೇಶ್ವರಮ್    (ಅ-೯, ಶ್ಲೋ-೧೧)
ಅಂದರೆ "ಮನುಷ್ಯರಂತೆ ಕಾಣಿಸಿಕೊಂಡು ಮೈದಾಳಿದ ನನ್ನನ್ನು ಮನುಷ್ಯನೆಂದು ಬಗೆದು ಕಡೆಗಣಿಸುತ್ತಾರೆ - ಎಂದೆಂದೂ ಎಲ್ಲಡೆಯು ಇರುವ ಹಿರಿದಕ್ಕು ಹಿರಿದಾದ ನನ್ನ ಹಿರಿಮೆಯನ್ನರಿಯದ ತಿಳಿಗೇಡಿಗಳು"   ಹೀಗೆ ಹುಟ್ಟು-ಸಾವಿಗೆ ಬದ್ಧವಲ್ಲದ, ಅಳಿವಿಲ್ಲದ ಶರೀರವುಳ್ಳ ಭಗವಂತ ಅಮೃತವಪುಃ
819) ಸರ್ವಜ್ಞಃ
ನಮ್ಮ ಆತ್ಮ 'ಜ್ಞಾನಾನಂದ' ಸ್ವರೂಪ. ಆದರೆ ಆ ಜ್ಞಾನ ಹಾಗು ಆನಂದದ ಅನುಭವ ಆಗದಂತೆ ಮುಚ್ಚಿಟ್ಟಿರುವುದು ಈ ಶರೀರ. ಲಿಂಗಶರೀರ, ಸೂಕ್ಷ್ಮಶರೀರ ಹಾಗು ಸ್ಥೂಲಶರೀರ. ಈ ಮೂರು ಮುಚ್ಚಳಗಳಿಂದ ಮುಚ್ಚಿರುವ ನಮ್ಮ ಆತ್ಮಕ್ಕೆ ಅಭಿವ್ಯಕ್ತವಿಲ್ಲ. ಆದರೆ ಭಗವಂತ ಜ್ಞಾನಾನಂದ ಸ್ವರೂಪ. ಆತನ ಜ್ಞಾನಕ್ಕೆ ಯಾವುದೇ ರೀತಿಯ ಮುಚ್ಚಳವಿಲ್ಲ. ಅವನಿಗೆ ತಿಳಿಯದ ವಿಷಯವೊಂದಿಲ್ಲ. ಆತ ಸರ್ವಜ್ಞಃ.          
820) ಸರ್ವತೋಮುಖಃ
ಈ ನಾಮವನ್ನು ಕೇಳಿದಾಗ ನಮಗೆ ಪುರುಷಸೂಕ್ತದ ಈ ಸಾಲುಗಳು ನೆನಪಿಗೆ ಬರುತ್ತದೆ.
‘ಸಹಸ್ರ ಶೀರ್ಷಾ ಪುರುಷಃ | ಸಹಸ್ರಾಕ್ಷಃ ಸಹಸ್ರಪಾತ್ ಎಂದು ಭಗವಂತನನ್ನು ಪುರುಷಸೂಕ್ತದಲ್ಲಿ   ವರ್ಣಿಸಿದ್ದಾರೆ. ಇಲ್ಲಿ ಬಹುಶಿರ ಎಂದರೆ ಸಹಸ್ರ-ಸಹಸ್ರ ಶಿರಸ್ಸನ್ನು ಹೊಂದಿರುವವನು ಎಂದರ್ಥ. ಭಗವಂತನಿಗೆ ನಮ್ಮಂತೆ ಒಂದು ಮುಖವಲ್ಲ. ಜ್ಞಾನಾನಂದ ಸ್ವರೂಪಿಯಾದ ಆತನ ಶರೀರ ಎಲ್ಲ ಕಡೆ ವ್ಯಾಪಿಸಿದೆ. ಆತ
ಸರ್ವತೋಮುಖಃ

No comments:

Post a Comment