Saturday, December 11, 2010

Vishnusahasranama 773-776

ವಿಷ್ಣು ಸಹಸ್ರನಾಮ:
ಚತುರಾತ್ಮಾ ಚತುರ್ಭಾವಶ್ಚತುರ್ವೇದವಿದೇಕಪಾತ್
773) ಚತುರಾತ್ಮಾ
ನಮ್ಮ ದೇಹದೊಳಗಿನ ಜೀವಸ್ವರೂಪದಲ್ಲಿ ಆತ್ಮ-ಅಂತರಾತ್ಮ-ಪರಮಾತ್ಮ-ಜ್ಞಾನಾತ್ಮ ಎಂಬ ನಾಲ್ಕು ರೂಪಗಳಿಂದ ನಮ್ಮನ್ನು ನಿಯಂತ್ರಿಸುವ ಭಗವಂತ ಚತುರಾತ್ಮಾ.
774) ಚತುರ್ಭಾವಃ
ಈ ನಾಮದಲ್ಲಿ ಓಂಕಾರಕ್ಕೆ ಸಂಬಂಧಪಟ್ಟ ವಿಷಯ ಅಡಗಿದೆ. 'ಅ'ಕಾರ , 'ಉ'ಕಾರ, 'ಮ'ಕಾರ ಹಾಗು 'ನಾದ' ಈ ನಾಲ್ಕು ಅಕ್ಷರಗಳಿಂದ ಭಾವಿಸಲ್ಪಡುವ ಭಗವಂತ ಚತುರ್ಭಾವಃ. 'ಅ'ಕಾರಕ್ಕೆ ಸಂಬಂಧಪಟ್ಟ ರೂಪ 'ಕೃಷ್ಣ'; 'ಉ'ಕಾರಕ್ಕೆ ಸಂಬಂಧಪಟ್ಟ ರೂಪ 'ರಾಮ'; 'ಮ'ಕಾರಕ್ಕೆ ಸಂಬಂಧಪಟ್ಟ ರೂಪ 'ನರಸಿಂಹ' ಹಾಗು 'ನಾದ'ಕ್ಕೆ ಸಂಬಂಧಪಟ್ಟ ರೂಪ 'ವರಾಹ'. ಇವೇ ನಾಲ್ಕು ಭಾವಗಳು. ಈ ನಾಲ್ಕು ಅವತಾರಗಳು ಜಯ-ವಿಜಯರ ಆಸುರೀ ಶಕ್ತಿಯ ಸಂಹಾರಕ್ಕೆ ಭಗವಂತ ತಳೆದ ರೂಪ. ಹಿರಣ್ಯಾಕ್ಷನನ್ನು 'ವರಾಹ'ನಾಗಿ, ಹಿರಣ್ಯಕಶಿಪುವನ್ನು 'ನರಸಿಂಹ' ನಾಗಿ; ರಾವಣ-ಕುಂಭಕರ್ಣರನ್ನು 'ರಾಮ'ನಾಗಿ; ಶಿಶುಪಾಲ-ದಂತವಕ್ರರನ್ನು 'ಕೃಷ್ಣ'ನಾಗಿ ಭಗವಂತ ಸಂಹಾರ ಮಾಡಿ ಜಯ-ವಿಜಯರನ್ನು ಅವರ ಆಸುರೀ ರೂಪದಿಂದ ಬಿಡುಗಡೆ ಮಾಡಿದ. ಜಯ-ವಿಜಯರು 'ಶೇಷನ' ಮಕ್ಕಳು. ಇವರನ್ನು ಭಗವಂತನ ಅರಮನೆಯ ಬಾಗಿಲು ಕಾಯುವ ಸೇವಕರು ಎಂದು ಹೇಳುತ್ತಾರೆ. ನಮ್ಮ ದೇಹದಲ್ಲಿ ಭಗವಂತನ ಅರಮನೆ 'ಹೃತ್ಕಮಲ', ಈ ಹೃತ್ಕಲವನ್ನು ಕಾಯುವ ಶಕ್ತಿಗಳಾದ ಜಯ-ವಿಜಯರು ಆಸುರೀ ರೂಪ ತೊಟ್ಟರೆ ನಾವು ನಮ್ಮ ಸ್ಥಿಮಿತವನ್ನು ಕಳೆದುಕೊಳ್ಳುತ್ತೇವೆ. ನಿರಂತರ ಓಂಕಾರದ ಉಪಾಸನೆಯಿಂದ ಅಥವಾ ರಾಮ-ಕೃಷ್ಣ-ನರಸಿಂಹ-ವರಾಹರೂಪಿ ಭಗವಂತನ ಉಪಾಸನೆಯಿಂದ ನಾವು ಮೋಕ್ಷವನ್ನು ಕಾಣಬಹುದು.
ನಾಲ್ಕು   ಪುರುಷಾರ್ಥಗಳನ್ನು, ನಾಲ್ಕು ವರ್ಣಗಳನ್ನು ಹುಟ್ಟಿಸಿದ ಭಗವಂತ ಚತುರ್ಭಾವಃ.
775) ಚತುರ್ವೇದಃ
ನಾಲ್ಕು ವೇದಗಳ ಅಂತರಂಗದ ಸಂಪೂರ್ಣ ಅರ್ಥವನ್ನು ಬಲ್ಲ ಭಗವಂತ ತುರ್ವೇದಃ. ವೇದವೆಂಬ ಕಡಲಿನಲ್ಲಿ ಮುಳುಗಿ, ಅಲ್ಲಿರುವ ಮುತ್ತುಗಳನ್ನು ಹೆಕ್ಕಿ ತರಬಲ್ಲವರು ನಿಜವಾದ ವೇದಪಾರಂಗತರು. ನಾವು ಎಷ್ಟೇ ತಿಳಿದರೂ ಅದು ಅಪೂರ್ಣ. ವೇದವನ್ನು ಸಂಪೂರ್ಣ ತಿಳಿದವನು ಭಗವಂತನೊಬ್ಬನೇ. ಇದನ್ನು ಗೀತೆಯಲ್ಲಿ ಹೀಗೆ ಹೇಳಿದ್ದಾರೆ:      
     ಸರ್ವಸ್ಯ ಚಾಹಂ ಹೃದಿ ಸನ್ನಿವಿಷ್ಟೋ ಮತ್ತಃ ಸ್ಮೃತಿರ್ಜ್ಞಾನಮಪೋಹನಂ ಚ ।
ವೇದೈಶ್ಚ ಸರ್ವೈರಹಮೇವ ವೇದ್ಯೋ ವೇ
ದಾಂತಕೃದ್ ವೇದವಿದೇವ ಚಾಹಮ್ (ಅ-೧೫; ಶ್ಲೋ-೧೫)
ಅಂದರೆ "ಎಲ್ಲರ ಹೃದಯದಲ್ಲಿ ನಾನು ನೆಲೆಸಿರುವೆ, ನೆನಪು, ಅರಿವು,ಮರೆವು ಎಲ್ಲವೂ ನನ್ನ ಕೊಡುಗೆ. ಎಲ್ಲಾ ವೇದಗಳಿಂದ ಅರಿಯಬೇಕಾದವನು ನಾನೇ. ವೇದಾಂತಸೂತ್ರಗಳನೊರೆದವನು, ವೇದಗಳ ಮರ್ಮವನ್ನರಿತವನು ನಾನೆ"   
776) ಏಕಪಾತ್
ಭಗವಂತನ ರೂಪ ಹಲವು. ಅನಂತ ರೂಪಿ ಭಗವಂತ ಏಕರೂಪದವನಾದವನು. ಅಖಂಡ ಅಭಿನ್ನ ಸ್ವರೂಪದಿಂದ ಸರ್ವ ಜೀವಜಾತವನ್ನು ಆವರಿಸಿರುವ ಭಗವಂತ ಏಕಪಾತ್.

No comments:

Post a Comment