ವಿಷ್ಣು ಸಹಸ್ರನಾಮ:
ಚತುರ್ಮೂರ್ತಿಶ್ಚತುರ್ಬಾಹುಶ್ಚತುರ್ವ್ಯೂಹಶ್ಚತುರ್ಗತಿಃ
769) ಚತುಮೂರ್ತಿಃ
ವಿಶ್ವ, ತೈಜಸ, ಪ್ರಾಜ್ಞ ಹಾಗು ತುರಿಯ ಎನ್ನುವ ನಾಲ್ಕು ರೂಪದಲ್ಲಿ ನಮ್ಮ ನಾಲ್ಕು ಸ್ಥಿತಿಯನ್ನು ನಿಯಂತ್ರಿಸುವ ಭಗವಂತ ಚತುಮೂರ್ತಿಃ. ಎಚ್ಚರ ಸ್ಥಿತಿಯಲ್ಲಿ ನಮ್ಮ ಕಣ್ಣಿನ ಮಧ್ಯ (ಭ್ರೂ-ಮಧ್ಯ) ಬಲಗಣ್ಣಿಗೆ ಒತ್ತಿಕೊಂಡು ಇರುವ ಶಕ್ತಿ ಕೇಂದ್ರದಲ್ಲಿ (ಆಜ್ಞಾಚಕ್ರ) ಇದ್ದು, ನಮ್ಮ ಎಚ್ಚರ ಸ್ಥಿತಿಯನ್ನು ನಿಯಂತ್ರಿಸುವ ವಿಶ್ವ ರೂಪಿ ಭಗವಂತ; ಕಂಠದಲ್ಲಿ ಕಿರುನಾಲಿಗೆಯ ಕೆಳಗೆ ಸೂಜಿ ಮೊನೆಯಷ್ಟು ಸೂಕ್ಷ್ಮವಾಗಿರುವ, ವಿಶುದ್ಧಿಚಕ್ರದಲ್ಲಿದ್ದು ನಮ್ಮ ಕನಸಿನ ಸ್ಥಿತಿಯನ್ನು ನಿಯಂತ್ರಿಸುವ ತೈಜಸ ರೂಪಿ ಭಗವಂತ; ನಿದ್ರೆಯನ್ನು ನಿಯಂತ್ರಿಸುವ ಪ್ರಾಜ್ಞಾ ನಾಮಕ ಭಗವಂತ; ಈ ಮೂರು ಸ್ಥಿತಿಳಿಂದಾಚೆಗಿನ ನಾಲ್ಕನೇ ಸ್ಥಿತಿ (ತುರಿಯ-ಧ್ಯಾನದಲ್ಲಿ ದೇವರನ್ನು ಕಾಣುವ ಸ್ಥಿತಿ)ಯನ್ನು ನಿಯಂತ್ರಿಸುವ ಭಗವಂತ ಚತುಮೂರ್ತಿಃ.
770) ಚತುರ್ಬಾಹುಃ
ಭಗವಂತ ತನ್ನ ಭಕ್ತರಿಗೆ ದರ್ಶನ ಕೊಟ್ಟಾಗಲೆಲ್ಲಾ ನಾಲ್ಕು ಬಾಹುವಿನೊಂದಿಗೆ ಕಾಣಿಸಿಕೊಂಡಿದ್ದಾನೆ. ವಿಶ್ವರೂಪ ದರ್ಶನವನ್ನು ನೋಡಿ ಭಯಭೀತನಾದ ಅರ್ಜುನ "ನಿನ್ನ ಚತುರ್ಭುಜ ರೂಪವನ್ನು ತೋರು" ಎಂದು ಶ್ರೀಕೃಷ್ಣನಲ್ಲಿ ಈ ರೀತಿ ಅಂಗಲಾಚುತ್ತಾನೆ. ಕಿರೀಟಿನಂ ಗದಿನಂ ಚಕ್ರಹಸ್ತಮಿಚ್ಛಾಮಿ ತ್ವಾಂ ದ್ರಷ್ಟುಮಹಂ ತಥೈವ ।
ತೇನೈವ ರೂಪೇಣ ಚತುರ್ಭುಜೇನ ಸಹಸ್ರಬಾಹೋ ಭವ ವಿಶ್ವಮೂರ್ತೇ (ಅ-೧೧; ಶ್ಲೋ-೪೬)
ತೇನೈವ ರೂಪೇಣ ಚತುರ್ಭುಜೇನ ಸಹಸ್ರಬಾಹೋ ಭವ ವಿಶ್ವಮೂರ್ತೇ (ಅ-೧೧; ಶ್ಲೋ-೪೬)
ಅಂದರೆ "ಮುಕುಟವಿಟ್ಟ, ಕೈಯಲ್ಲಿ ಗದೆ-ಚಕ್ರ ತೊಟ್ಟ ನಿನ್ನನ್ನು ಆ ರೂಪದಲ್ಲೇ ಕಾಣಬಯಸುತ್ತೇನೆ. ಸಾವಿರ ತೋಳಿನ ವಿಶ್ವರೂಪನೇ, ಮತ್ತೊಮ್ಮೆ ನಾಲ್ಕು ತೋಳಿನ ಅದೇ ರೂಪದಿಂದ ಕಾಣಿಸಿಕೋ"
ಭಗವಂತನ ನಾಲ್ಕು ತೋಳು ಧರ್ಮ ಅರ್ಥ ಕಾಮ ಮೋಕ್ಷದ ಸಂಕೇತ. ಇದಕ್ಕನುಗುಣವಾಗಿ ನಾಲ್ಕು ಆಯುಧಗಳು ಅಥವಾ ಅಭಯ ಹಾಗು ಧ್ಯಾನ ಮುದ್ರೆ. ಭಗವಂತನು ಹಿಡಿದಿರುವ ಆಯುಧದ ಮಹತ್ವವನ್ನು ನಾವು ಈ ಹಿಂದೆ ವಿಶ್ಲೇಷಿಸಿದ್ದೇವೆ. ಇನ್ನು ಧ್ಯಾನ ಮುದ್ರೆ; ತೋರು ಬೆರಳು ಉಳಿದ ಮೂರು ಬೆರಳುಗಳಿಂದ ಮುಂದಕ್ಕೆ ಬಾಗಿ ಹೆಬ್ಬೆರಳನ್ನು ಸ್ಪರ್ಶಿರುವುದು. ಇಲ್ಲಿ ತೋರು ಬೆರಳು ಜೀವರನ್ನು, ಹೆಬ್ಬೆರಳು ಭಗವಂತನನ್ನು ಪ್ರತಿಪಾದಿಸುತ್ತದೆ. ಉಳಿದ ಮೂರು ಬೆರಳು ಅವಿಧ್ಯ, ಕಾಮ ಕರ್ಮವನ್ನು ಸೂಚಿಸುತ್ತದೆ. ಈ ರೀತಿ ಅವಿಧ್ಯ, ಕಾಮ, ಕರ್ಮವನ್ನು ಬಿಟ್ಟು ಜ್ಞಾನ, ಭಕ್ತಿ, ಮೊಕ್ಷವಾದ ಭಗವಂತನನ್ನು ಸೇರುವುದನ್ನು ಧ್ಯಾನಮುದ್ರೆ ಪ್ರತಿಪಾದಿಸುತ್ತದೆ. ಇನ್ನು ಅಭಯ, ಅಭಯ ಭಗವಂತನ ಪಾದವನ್ನು ತೋರಿಸುತ್ತದೆ. ಅಂದರೆ ಭಗವಂತನ ಪಾದದಲ್ಲಿ ಶರಣಾಗತಿಯನ್ನು ಬೇಡಿ ಬಂದ ಭಕ್ತರನ್ನು ಭಗವಂತ ಎಂದೂ ಕೈ ಬಿಡುವುದಿಲ್ಲ ಎಂದರ್ಥ.
771) ಚತುರ್ವ್ಯೂಹಃ
ವಾಸುದೇವ , ಸಂಕರ್ಷಣ, ಪ್ರದ್ಯುಮ್ನ, ಅನಿರುದ್ಧ ಎಂಬ ನಾಲ್ಕು ರೂಪಗಳ ಗುಂಪು ಉಳ್ಳವನು. ಶರೀರಪುರುಷ ಶಿವ, ಛಂದಃಪುರುಷ ಶೇಷ, ವೇದ ಪುರುಷ ಗರುಡ, ಮಹಾ ಪುರುಷ ಬ್ರಹ್ಮವಾಯು, ಹೀಗೆ ನಾಲ್ಕು ಗುಂಪಿನ ದೇವತೆಗಳ ಪರಿವಾರ ಉಳ್ಳವನು ಚತುರ್ವ್ಯೂಹಃ.
772) ಚತುರ್ಗತಿಃ
772) ಚತುರ್ಗತಿಃ
ನಾಲ್ಕು ಆಶ್ರಮಗಳಿಗೆ ಆಸರೆಯಾದವನು ಚತುರ್ಗತಿಃ. ಮೋಕ್ಷದಲ್ಲಿ ನಾಲ್ಕು ವಿಧ. (೧) ಸಾಲೋಕ್ಯ (೨) ಸಾಮೀಪ್ಯ (೩) ಸಾರೂಪ್ಯ ಹಾಗು (೪) ಸಾಯುಜ್ಯ. ಸಾಲೋಕ್ಯ ಎಂದರೆ ಭಗವಂತ ಇರುವ ಲೋಕದಲ್ಲಿ ನಾವಿರುವುದು; ಸಾಮೀಪ್ಯ ಎಂದರೆ ಭಗವಂತನ ಪಕ್ಕದಲ್ಲಿರುವುದು; ಸಾರೂಪ್ಯ ಎಂದರೆ ಭಗವಂತನಿಗೆ ಸಮನಾಗಿರುವುದು, ಸಾಯುಜ್ಯ ಎಂದರೆ ಹಾಲು-ನೀರು ಬೆರೆತಂತೆ ಭಗವಂತನಲ್ಲಿ ಬೆರೆತಿರುವುದು. ಈ ರೀತಿ ನಾಲ್ಕು ವಿಧದ ಮುಕ್ತಿಯನ್ನು ಕರುಣಿಸುವ ಭಗವಂತ ಚತುರ್ಗತಿಃ. ಮನುಷ್ಯನಿಗೆ ಇನ್ನೊಂದು ರೀತಿಯಲ್ಲಿ ನಾಲ್ಕು ಗತಿಗಳಿವೆ. ಭೂಮಿಯಲ್ಲಿದ್ದು ಪುಣ್ಯ ಮಾಡಿದವರಿಗೆ ಸ್ವರ್ಗ, ಪಾಪ ಮಾಡಿದವರಿಗೆ ನರಕ. ಆಸುರ ಸ್ವಭಾವದವರಿಗೆ ತಮಸ್ಸು, ಸಾತ್ವಿಕರಿಗೆ ಮುಕ್ತಿ. ಹೀಗೆ ತಮಸ್ಸು, ಮುಕ್ತಿ, ಸ್ವರ್ಗ ಹಾಗು ನರಕಗಳೆಂಬ ಚತುರ್ಗತಿಗಳಿಗಾಸರೆಯಾದ ಭಗವಂತ ಚತುರ್ಗತಿಃ.
No comments:
Post a Comment