Monday, December 20, 2010

Vishnu Sahasranama 907-915

ವಿಷ್ಣು ಸಹಸ್ರನಾಮ:
ಅರೌದ್ರಃ ಕುಂಡಲೀ ಚಕ್ರೀ ವಿಕ್ರಮ್ಯೂರ್ಜಿತಶಾಸನಃ
ಶಬ್ದಾತಿಗಃ ಶಬ್ದಸಹಃ ಶಿಶಿರಃ ಶರ್ವರೀಕರಃ 
907) ಅರೌದ್ರಃ
'ರೌದ್ರ' ಎಂದರೆ ಉಗ್ರ ಸ್ವಭಾವ. ಭಗವಂತ ಅರೌದ್ರಃ, ಅಂದರೆ ಆತ ಮಹಾ ಕರುಣಾಳು. ಪರಮ ಸೌಮ್ಯ ಸ್ವಭಾವದವನು. ಇಂತಹ ಭಗವಂತ ಜ್ಞಾನದ, ಧರ್ಮದ, ದ್ವೇಷಿಗಳಿಗೆ(ಅರಿಗಳಿಗೆ) ಪರಮ ನಿಷ್ಠುರ (ಅರಿ ದ್ರವತಿ ಇತಿ ಅರೌದ್ರಃ)     
908) ಕುಂಡಲೀ
ಕುಂಡಲೀ ಎಂದರೆ ಕಿವಿಯಲ್ಲಿ ಧರಿಸುವ ಆಭರಣ. ಸೂರ್ಯನಲ್ಲಿ ಸನ್ನಿಹಿತನಾದ ಗಾಯತ್ರಿ ಪ್ರತಿಪಾಧ್ಯ ಭಗವಂತನನ್ನು ಧ್ಯಾನ ಮಾಡುವಾಗ ಈ ರೀತಿ ಹೇಳುತ್ತಾರೆ:
ದೇಹ್ಯಸದಾ ಸವಿತ್ರಮಂಡಲ ಮಧ್ಯವರ್ತೀ 
ನಾರಾಯಣಃ  ಸರಸಿ
ಜಾಸನ ಸನ್ನಿವಿಷ್ಟಃ   
ಕೇಯೂರವಾನ್ ಮಕರಕುಂಡಲವಾನ್  
ಕಿರೀಟೀಹಾರಿ
ಹಿರಣ್ಮಯವಪುಹುಃ ದೃತ ಶಂಖ ಚಕ್ರಃ.
ಇದು ಗ್ವಿದಾನದಲ್ಲಿದೆ. ಈ ಶ್ಲೋಕ ನರಸಿಂಹ ಪುರಾಣದಲ್ಲಿದೆ. ಇದು ಗಾಯತ್ರಿಯ ಧ್ಯಾನ ಶ್ಲೋಕ. ಇಲ್ಲಿ ಹೇಳುವಂತೆ ಧ್ಯಾನ ಮಾಡುವಾಗ ಭಗವಂತನನ್ನು ಈ ರೀತಿ ಕಲ್ಪಿಸಿಕೊಳ್ಳುತ್ತಾರೆ. " ಸೂರ್ಯ ಮಂಡಲದ ಮಧ್ಯದಲ್ಲಿ ಸರ್ವಾಭರಣಭೂಶಿತನಾಗಿ ಪದ್ಮಾಸನದಲ್ಲಿ ಭಗವಂತ ಕುಳಿತಿದ್ದಾನೆ, ಆತ ಕೈಗೆ ತೊಳ್ಭಂದಿ ಕಿವಿಯಲ್ಲಿ ಕರ್ಣ ಕುಂಡಲ ಧರಿಸಿದ್ದಾನೆ. ಎರಡು ಕೈಯಲ್ಲಿ ಶಂಖ ಚಕ್ರ ಹಿಡಿದು ಕಿರೀಟ ತೊಟ್ಟು ಸರ್ವಾಭರಣ ಭೂಶಿತನಾಗಿದ್ದಾನೆ". ಇಲ್ಲಿ ಭಗವಂತ ಮಕರ ಕುಂಡಲ  ಧರಿಸಿದ್ದಾನೆ ಎನ್ನುತ್ತಾರೆ. ಮಕರ ಎಂದರೆ ಮೊಸಳೆ. ಮೊಸಳೆಯ ಬಾಲ ಮತ್ತು ಬಾಯಿಯನ್ನು ಜೋಡಿಸಿ ಮಾಡುವ ಆಭರಣ ಮಕರಕುಂಡಲ. ಮಕರ ಕಾಮದೇವ ಮನ್ಮಥನ ವಾಹನ ಕೂಡಾ ಹೌದು(ಇಲ್ಲಿ ಕಾಮ(Desire) ಎಷ್ಟು ಪವಿತ್ರವೋ ಅಷ್ಟೇ ಅಪಾಯಕಾರಿ ಎನ್ನುವುದನ್ನು ಮನ್ಮಥನ ವಾಹನ ಮಕರ ಪ್ರತಿನಿಧಿಸುತ್ತದೆ). ಈ ರೀತಿ ಕುಂಡಲೀ-ಭಗವಂತ ಧರಿಸುವ ಆಭರಣದ ಒಂದು ಮುಖ.
ಅಗ್ನಿ ಕುಂಡದಲ್ಲಿ ಲೀನವಾಗಿರುವ ಅಗ್ನಿಯ ಅಂತರ್ಯಾಮಿ ಭಗವಂತ ಕುಂಡಲೀ.
909) ಚಕ್ರೀ
ಭಕ್ತರ ರಕ್ಷಣೆಗೋಸ್ಕರ ಅಧರ್ಮದ ನಾಶಕ್ಕೋಸ್ಕರ ಚಕ್ರಧಾರಿಯಾಗಿ ಭೂಮಿಗೆ ಇಳಿದು ಬರುವ ಭಗವಂತ ಚಕ್ರೀ. ಈ ಬ್ರಹ್ಮಾಂಡವೆಂಬ ವಿಶ್ವ ಚಕ್ರವನ್ನು ತನ್ನ ಹಿಡಿತದಲ್ಲಿಟ್ಟುಕೊಂಡ ಭಗವಂತ ಚಕ್ರೀ. ಸರ್ವ ಆಕಾಶ ಕಾಯಗಳನ್ನು ಧ್ರುವ ಮಂಡಲ ಮಧ್ಯದಲ್ಲಿದ್ದು ನಿರ್ವಹಿಸುವ ಭಗವಂತ ಚಕ್ರೀ.
910) ವಿಕ್ರಮೀ
ಎಲ್ಲವನ್ನು ಮಣಿಸುವ ಪರಾಕ್ರಮವುಳ್ಳ, ವಿಶಿಷ್ಟವಾದ ಮೂರು ಹೆಜ್ಜೆಗಳುಳ್ಳ, ಇಡೀ ವಿಶ್ವವನ್ನು ಕ್ಷಣಮಾತ್ರದಲ್ಲಿ ಕಬಳಿಸಬಲ್ಲ ಭಗವಂತ ವಿಕ್ರಮೀ.
911) ಊರ್ಜಿತಶಾಸನಃ
ಭಗವಂತನ ಶಾಸನ ಎಂದೂ ಅನೂರ್ಜಿತವಾಗುವುದಿಲ್ಲ. ಆತನ ಆಜ್ಞೆಯನ್ನು ಉಲ್ಲಂಗಿಸುವುದು ಅಸಾಧ್ಯ. ಆತನ ಅಣತಿಯಂತೆ ಸರ್ವ ದೇವತೆಗಳು ಕ್ರಮಬದ್ಧವಾಗಿ ಕಾರ್ಯ ನಿರ್ವಹಿಸುತ್ತಾರೆ.  ಇಂತಹ ಅಭೇಧ್ಯ ಶಾಸನದಿಂದ ಲೋಕ ರಕ್ಷಣೆ ಮಾಡುವ ಭಗವಂತ ಊರ್ಜಿತಶಾಸನಃ.    
912) ಶಬ್ದಾತಿಗಃ
ಭಗವಂತನನ್ನು ಹೀಗೆ ಎಂದು ಯಾವ ಶಬ್ಧದಿಂದ ಹೇಳಲು ಅಸಾಧ್ಯ. ತೈತ್ತಿರೀಯ ಉಪನಿಷತ್ತಿನಲ್ಲಿ  ಹೀಗೆ ಹೇಳುತ್ತಾರೆ:
ಯತೋ  ವಾಚೋ  ನಿವರ್ತಂತೆ  ಅಪ್ರಾಪ್ಯ  ಮನಸಾ  ಸಹ |
ಅಂದರೆ ಮಾತು ಮನಸ್ಸಿಗೆ ಮುಟ್ಟದ ಶಬ್ಧಕ್ಕೆ ಎಟುಕದ ಸ್ವರೂಪ.
913) ಶಬ್ದಸಹಃ
ಯಾವ ಶಬ್ಧಕ್ಕೂ ಸಿಗದ ಭಗವಂತ, ನಾವು ಯಾವ ಶಬ್ಧದಿಂದ ಕರೆದರೂ ಅದನ್ನು ಸಹಿಸಿಕೊಳ್ಳುತ್ತಾನೆ. ಇಂತಹ ಸರ್ವ ಶಬ್ಧ ವಾಚ್ಯ ಭಗವಂತ ಶಬ್ದಸಹಃ. ಆದ್ದರಿಂದ ಆತನನ್ನು ಯಾವ ಹೆಸರಿನಿಂದ ಕೂಡಾ ಕರೆಯಬಹುದು. 
914) ಶಿಶಿರಃ
'ಶ' ಎಂದರೆ ಆನಂದ. ಅತಿಶಯವನ್ನು ವ್ಯಕ್ತಪಡಿಸುವಾಗ ನಾವು ಸಾಮಾನ್ಯವಾಗಿ ಮೂರನೇ ಪದವನ್ನು ಬಳಸುತ್ತೇವೆ (ಶ, ಶಾ, ಶಿ). ಇಲ್ಲಿ 'ಶಿ' ಎಂದರೆ ಅತಿಶಯವಾದ ಆನಂದ. 'ರ' ಎಂದರೆ ಕೊಡುವವನು, ರಮಿಸುವವನು. ಶಿಶಿರಃ ಎಂದರೆ ಅತಿಶಯವಾದ ಮಹದಾನಂದವನ್ನು ಕೊಡುವ, ಭೂಮಿಗೆ ತಂಪನ್ನು ಸುರಿಸುವ  ಆನಂದದ ಪರಾಕಾಷ್ಠೆಯಲ್ಲಿ ರಮಿಸುವ ಭಗವಂತ.
915) ಶರ್ವರೀಕರಃ
ಶರ್ವರೀಕರಃ ಎಂದರೆ ರಾತ್ರಿಯನ್ನು ಮಾಡುವವನು !  ಚಂದ್ರನೊಳಗಿದ್ದು ಈ ಭೂಮಿಗೆ ಅದ್ಭುತವಾದ ಬೆಳದಿಂಗಳನ್ನು ಉಣಿಸುವ ಭಗವಂತ ಶರ್ವರೀಕರಃ. ರಾತ್ರಿಯಲ್ಲಿ ಕ್ರಿಯಾತ್ಮಕವಾಗಿರುವ ಪ್ರಾಣಿ-ಪಕ್ಷಿಗಳಿಗೆ, ಗಿಡ-ಗಂಟಿಗಳಿಗೆ ಚೈತನ್ಯವನ್ನು ಕೊಡುವ ಭಗವಂತ ಶರ್ವರೀಕರಃ.

No comments:

Post a Comment