Saturday, December 4, 2010

Vishnusahasranama 761-763

ವಿಷ್ಣು ಸಹಸ್ರನಾಮ:
ತೇಜೋವೃಷೋ ದ್ಯುತಿಧರಃ ಸರ್ವಶಸ್ತ್ರಭೃತಾಂವರಃ
761) ತೇಜೋವೃಷಃ
ಇದು ಅಪೂರ್ವವಾದ ಶಬ್ಧ. ತೇಜಸ್ಸು ಅಂದರೆ ಬೆಳಕು ಅಥವಾ ಪ್ರಕಾಶ; ವೃಷ ಅಂದರೆ ಧರ್ಮ. ನಮಗೆ ತೇಜಸ್ಸನ್ನು, ವೃವನ್ನು ಕೊಡುವ ಭಗವಂತ ತೇಜೋವೃಷಃ. ನಮಗೆ ಅಧ್ಯಯನದಿಂದ, ಯೋಗ ಸಾಧನೆಯಿಂದ, ಪ್ರಾಣಾಯಾಮದಿಂದ ವರ್ಚಸ್ಸನ್ನು ಗಳಿಸಬೇಕು ಎನ್ನುವ ಆಸೆ ಇರಬಹುದು. ಆದರೆ ಆ ವರ್ಚಸ್ಸನ್ನು ಕರುಣಿಸುವವನು ಭಗವಂತ. ಅದೇ ರೀತಿ ನಮಗೆ ಧರ್ಮದ ದಾರಿಯಲ್ಲಿ ನಡೆಯಬೇಕು ಎನ್ನುವ ಆಸೆ ಇರಬಹುದು, ಆದರೆ ಯಾವುದು ಧರ್ಮ, ಯಾವುದು ಅಧರ್ಮ ಎನ್ನುವ ಜ್ಞಾನ ಕೊಟ್ಟು ಆ ನಡೆಯನ್ನು ತೊರಿಸುವವನು ಭಗವಂತ.   
762) ದ್ಯುತಿಧರಃ
ಎಲ್ಲಾ ಬಗೆಯ ಪ್ರಕಾಶವನ್ನು ಧರಿಸಿರುವ ಜ್ಯೋತಿರ್ಮಯಸ್ವರೂಪ ಭಗವಂತ ದ್ಯುತಿಧರಃ
ಗೀತೆಯಲ್ಲಿ ಹೇಳುವಂತೆ:
ಯದಾದಿತ್ಯ ಗತಂ  ತೇಜೋ ಜಗದ್ ಭಾಸಯತೇsಖಿಲಮ್ |
ಯಚ್ಚಂದ್ರ ಮಸಿ ಯಚ್ಚ ಗೌನ ತತ್  ತೇಜೋ ವಿದ್ದಿ ಮಾಮಕಮ್  || (ಅ-೧೫, ಶ್ಲೋ-೧೨)
ಅಂದರೆ "ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ  ಕೂಡ, ಅದು ನನ್ನದೇ ಬೆಳಕೆಂದು ತಿಳಿ". ಈ ರೀತಿ  ಹೊರಗೂ ಒಳಗೂ ತುಂಬಿರುವ, ಎಲ್ಲಾ ಬೆಳಕನ್ನು ಬೆಳಗಿಸುವ ಮಹಾ ಬೆಳಕು  ಭಗವಂತ ದ್ಯುತಿಧರಃ
763) ಸರ್ವಶಸ್ತ್ರಭೃತಾಂವರಃ
ಎಲ್ಲಾ ಶಸ್ತ್ರಧಾರಿಗ
ಳಿಗಿಂತಲೂ ಉತ್ತಮವಾದ ಶಸ್ತ್ರವನ್ನು ಹಿಡಿದು ಧರ್ಮ ಸ್ಥಾಪನೆ ಮಾಡುವ ಭಗವಂತ ಸರ್ವಶಸ್ತ್ರಭೃತಾಂವರಃ.
ಈ ಹಿಂದೆ ಹೇಳಿದಂತೆ ಹಿಂದಿನ ಕಾಲದಲ್ಲಿ ಯಜ್ಞ ಮಾಡುವಾಗ ಮೂರು ಹೊತ್ತು ಆಹುತಿ ಕೊಡುತ್ತಿದ್ದರು. ಮೂರು ಹೊತ್ತು ದೇವರನ್ನು ಋಗ್ವೇದದ ಮಂತ್ರಗಳಿಂದ ಸ್ತೋತ್ರ ಮಾಡುತ್ತಿದ್ದರು, ಈ ರೀತಿ ಭಗವಂತನ ಗುಣಗಾನ ಮಾಡುವ ಮಂತ್ರವನ್ನು 'ಶಸ್ತ್ರ' ಎನ್ನುತ್ತಾರೆ. ಇಂತಹ ವೇದ ಮಂತ್ರಗಳಲ್ಲಿ ಬೇರೆ ಬೇರೆ ದೇವತೆಗಳ ಮಂತ್ರವಿದೆ.  ಒಂದೊಂದು ಮಂತ್ರ ಒಂದೊಂದು ದೇವತೆಗಳನ್ನು ಹೇಳುತ್ತದೆ. ದೇವತೆಗಳು ಅನೇಕ, ಆದರೆ ದೇವರು ಒಬ್ಬನೇ. ಅಗ್ನಿಮಂತ್ರದಿಂದ ಕರೆದರೆ ಅಗ್ನಿಯಲ್ಲಿರತಕ್ಕಂತಹ ಭಗವಂತ, ವಾಯು ಮಂತ್ರದಿಂದ ಕರೆದರೆ ವಾಯುವಿನಲ್ಲಿರತಕ್ಕಂತಹ ಭಗವಂತ, ಇಂದ್ರ ಮಂತ್ರದಿಂದ ಕರೆದರೆ
ಇಂದ್ರನೊಳಗಿರತಕ್ಕಂತಹ ಭಗವಂತ. ಹೀಗೆ ಸಮಸ್ತ ದೇವತೆಗಳಲ್ಲಿರುವ, ಸರ್ವ ಶಸ್ತ್ರಗಳಲ್ಲಿ(ಭಗವಂತನ ಗುಣಗಾನ ಮಾಡುವ ಸಮಸ್ತ ಮಂತ್ರಗಳಲ್ಲಿ) ಶ್ರೇಷ್ಟನಾಗಿ ಧಾರಣೆ ಮಾಡಿರುವ ಭಗವಂತ ಸರ್ವಶಸ್ತ್ರಭೃತಾಂವರಃ.

No comments:

Post a Comment