Friday, December 17, 2010

Vishnu Sahasranama 834-838

ವಿಷ್ಣು ಸಹಸ್ರನಾಮ:
ಅಮೂರ್ತಿರನಘೋಚಿಂತ್ಯೋ ಭಯಕೃದ್ಭಯನಾಶನಃ
834) ಅಮೂರ್ತಿಃ
ಭಗವಂತನಿಗೆ ನಮ್ಮಂತೆ ಅಪೂರ್ಣವಾದ, ಸ್ವರೂಪಕ್ಕಿಂತ ಭಿನ್ನವಾದ, ಹುಟ್ಟಿ-ಸಾಯುವ ಶರೀರವಿಲ್ಲ.  ಅವನು ಪ್ರಾಕೃತ ದೇಹ(ಮೂರ್ತಿ)ವಿರದವನು. ಎಲ್ಲಾ ಕಡೆ ತುಂಬಿರುವ ಸ್ವರೂಪವುಳ್ಳ ಭಗವಂತ ಅಮೂರ್ತಿಃ.    
835) ಅನಘಃ
ಪಾಪ ಲೇಪವಿಲ್ಲದ ಭಗವಂತ ಅನಘಃ. ನಮಗೆ ಪಾಂಚಬೌತಿಕ ದೇಹ ಬಂದಿರುವುದು ನಮ್ಮ ಪಾಪದ ಫಲದಿಂದ. ಹಿಂದಿನ ಜನ್ಮದ ಫಲ ಈ ಜನ್ಮದಲ್ಲಿ ಹಾಗು ಈ ಜನ್ಮದ ಫಲ ಮುಂದಿನ ಜನ್ಮದಲ್ಲಿ.ಆದರೆ 'ಅಮೂರ್ತಿಃ'ಯಾದ  ಭಗವಂತನಿಗೆ ಯಾವ ಪಾಪದ ಲೇಪವೂ ಇಲ್ಲ.  
836) ಅಚಿಂತ್ಯಃ
ಯಾವ ಚಿಂತನೆಗೂ ನಿಲುಕದ ಭಗವಂತ ಅಚಿಂತ್ಯಃ. ಯಾವುದೇ ವಿಶಿಷ್ಟ ಆಕಾರಕ್ಕೆ ಬದ್ಧನಾಗಿರದ, ಪಾಂಚಬೌತಿಕ ಮೂರ್ತಿ ಇಲ್ಲದ ಭಗವಂತನನ್ನು ಚಿತ್ರಿಸಲು ಅಸಾಧ್ಯ. ಆದ್ದರಿಂದ ನಮಗೆ ಆತನ ಚಿಂತನೆ ಮಾಡುವುದು ಅಸಾಧ್ಯ. ಆತ ಆಕಾಶದಂತೆ ಎಲ್ಲಾ ಕಡೆ ತುಂಬಿರುವವನು, ಚಿಂತಿಸಲು ಆಗದವನು, ಆದರೂ ಕೂಡಾ ಚಿಂತಿಸಬೇಕಾದವನು! 
837) ಭಯಕೃತ್
ಭಯ ಬರಿಸುವ ಭಗವಂತ ಭಯಕೃತ್! ಇಲ್ಲಿ ಭಯ ಎಂದರೆ ಹೆದರಿಕೆಯಷ್ಟೇ ಅಲ್ಲ. ಭಯದ ಸರಮಾಲೆಯಲ್ಲಿರುವ ಈ ಸಂಸಾರ. ಈ ಸಂಸಾರಕ್ಕೆ ನಮ್ಮನ್ನು ತಂದ ಭಗವಂತ ಭಯಕೃತ್. ಈ ಸಂಸಾರದಲ್ಲಿ ನಾವು ಭಯದಿಂದಲೇ ಬದುಕುತ್ತೇವೆ. ಶ್ರೀಮಂತನಿಗೆ ಕಳ್ಳ ಕಾಕರ ಭಯವಾದರೆ, ಬಡವನಿಗೆ ಹೊಟ್ಟೆಯ ಹಿಟ್ಟಿನ ಭಯ, ದುರ್ಬಲರಿಗೆ ಬಲಿಷ್ಟರ ಭಯ, ಬಲಿಷ್ಠರಿಗೆ ಸಾಮರ್ಥ್ಯ ಕಳೆದುಕೊಳ್ಳುವ ಭಯ. ಭಯವೇ ಇಲ್ಲದ ಸ್ಥಿತಿ ಮೋಕ್ಷ. ಆದ್ದರಿಂದ ನಮಗೆ ಹುಟ್ಟು ಸಾವಿನ ಈ ಸಂಸಾರ ಕೊಟ್ಟ ಭಗವಂತ ಭಯಕೃತ್.   
838) ಯನಾಶನಃ
ಭಗವಂತ ಭಯ ಕಳೆಯುವವನು. ಈ ಸಂಸಾರಕ್ಕೆ ನಮ್ಮನ್ನು ತಂದ ಭಗವಂತ ಒಂದು ದಿನ ಈ ಸಂಸಾರದಿಂದ ಪಾರುಮಾಡುತ್ತಾನೆ. ಸಂಸಾರದಲ್ಲಿ ಇಟ್ಟವನೇ ಸಂಸಾರದಿಂದ ಪಾರು ಮಾಡುವವನು. ಮೋಕ್ಷಪ್ರದನಾದ ಭಗವಂತ
ಯನಾಶನಃ.

No comments:

Post a Comment