Sunday, December 19, 2010

Vishnu sahasranama 879-887

ವಿಷ್ಣು ಸಹಸ್ರನಾಮ:
ವಿಹಾಯಸಗತಿರ್ಜ್ಯೋತಿಃ ಸುರುಚಿರ್ಹುತಭುಗ್ವಿಭುಃ
ರವಿರ್ವಿರೋಚನಃ ಸೂರ್ಯಃ ಸವಿತಾ ರವಿಲೋಚನಃ
ವಿಷ್ಣು ಸಹಸ್ರನಾಮದ ಈ ಶ್ಲೋಕ ಪ್ರಮುಖವಾಗಿ ವಿಶ್ವದಲ್ಲಿನ ಬೆಳಕಿಗೆ ಸಂಬಂಧಪಟ್ಟಿದ್ದು. ಇಲ್ಲಿ ಬರುವ ನಾಮಗಳನ್ನು ವಿವರವಾಗಿ ವಿಶ್ಲೇಷಿಸುವ ಮೊದಲು ಜಗತ್ತಿನಲ್ಲಿ ನಮಗೆ ಬೆಳಕನ್ನು ಕೊಡುವ ಬೆಳಕಿನ ಮೂಲದ ಬಗ್ಗೆ ಸ್ವಲ್ಪ ವಿವರವನ್ನು ನೋಡೋಣ. ನಮಗೆ ತಿಳಿದಿರುವ ಬೆಳಕಿನ ಮೂಲಗಳೆಂದರೆ ಸೂರ್ಯ, ಚಂದ್ರ, ನಕ್ಷತ್ರ, ಮಿಂಚು ಹಾಗು ಅಗ್ನಿ. ಸೂರ್ಯನನ್ನು ರವಿ, ಸವಿತಾ ಇತ್ಯಾದಿ ಅನೇಕ ಹೆಸರಿನಿಂದ ಕರೆಯುತ್ತಾರೆ. ಈ ಎಲ್ಲಾ ಬೆಳಕಿನ ಪುಂಜಗಳಿಗೆ ಬೆಳಕನ್ನು ಕೊಟ್ಟವನು ಭಗವಂತ. ಕಠೋಪನಿಷತ್ತಿನಲ್ಲಿ ನಚಿಕೇತನಿಗೆ ಯಮಧರ್ಮ ಈ ರೀತಿ ಹೇಳುತ್ತಾನೆ: 
‘न तत्र सूर्यो भाति न चन्द्रतारकं नेमा विद्युतो भान्ति कुतोऽयमग्निः।
तमेव भान्तमनुभाति सर्वं तस्य भासा सर्वमिदं विभाति॥’
ನ ತತ್ರ ಸೂರ್ಯೋ ಭಾತಿ ನ ಚಂದ್ರತಾರಕಂ ನೇಮಾ ವಿದ್ಯುತೋ ಭಾಂತಿ ಕುತೋಯಮಾಗ್ನಿಃ |
ತಮೇವ ಭಾನ್ತಮನುಭಾತಿ ಸರ್ವಂ ತಸ್ಸ್ಯ ಭಾಸಾ ಸರ್ವಮಿದಂ ವಿಭಾತಿ ||  
ಅಂದರೆ "ಸೂರ್ಯನಿಂದಹಿಡಿದು, ಚಂದ್ರ ತಾರೆಗಳಾಗಲಿ, ಆಕಾಶದಲ್ಲಿ ಬೆಳಗುವ ಮಿಂಚಿರಲಿ ಅಥವಾ ಉರಿಯುವ  ಅಗ್ನಿಯಾಗಲಿ, ಈ ಎಲ್ಲಾ ಬೆಳಕಿನ ಪುಂಜಗಳು ಬೆಳಗುವುದು ಭಗವಂತನೆಂಬ ಮೂಲ ಬೆಳಕಿನಿಂದ." ಇದನ್ನೇ ಶ್ರೀಕೃಷ್ಣ ಗೀತೆಯಲ್ಲಿ ಹೀಗೆ ಹೇಳಿದ್ದಾನೆ:
ಯದಾದಿತ್ಯಗತಂ ತೇಜೋ ಜಗದ್ಭಾಸಯತೇಖಿಲಮ್ ।
ಯಚ್ಚನ್ದ್ರಮಸಿ ಯಚ್ಚಾಗ್ನೌ ತತ್ ತೇಜೋ ವಿದ್ಧಿ ಮಾಮಕಮ್    ॥ಅ-೧೫, ಶ್ಲೋ-೧೨॥
ಅಂದರೆ "ಸೂರ್ಯನಲ್ಲಿದ್ದು ವಿಶ್ವವನ್ನೆಲ್ಲ ಬೆಳಗುವ ಬೆಳಕು, ಚಂದ್ರನಲ್ಲಿ, ಬೆಂಕಿಯಲ್ಲಿ  ಕೂಡ, ಅದು ನನ್ನದೇ ಬೆಳಕೆಂದು ತಿಳಿ". ಆದ್ದರಿಂದ ಸ್ವಂತ ಬೆಳಕು ಯಾವುದಕ್ಕೂ ಇಲ್ಲ. ಎಲ್ಲಾ ಬೆಳಕುಗಳು ಭಗವಂತ ಪ್ರತಿಫಲನ. ಈ ಹಿನ್ನೆಲೆಯಲ್ಲಿ ಇಲ್ಲಿ ಬರುವ ನಾಮಗಳ ಅರ್ಥವನ್ನು ಇನ್ನೂ ವಿವರವಾಗಿ ನೋಡೋಣ. 
879) ವಿಹಾಯಸಗತಿಃ
ವಿಹಾಯಸನ್ ಅಂದರೆ ಆಕಾಶ; ವಿಹಾಯಸಗತಿಃ ಎಂದರೆ ಆಕಾಶದಲ್ಲಿ ಚಲಿಸುವವ. ಉಪನಿಷತ್ತಿನಲ್ಲಿ ಹೇಳಿದಂತೆ   ಭಗವಂತ ಸೃಷ್ಟಿ ಪೂರ್ವದಲ್ಲಿ ತನಗೊಬ್ಬ ಆತ್ಮೀಯ ಜೊತೆಗಾರ ಬೇಕು ಎಂದು ನಿರ್ಧರಿಸಿದನಂತೆ. ಹಾಗೆ ನಿರ್ಧರಿಸಿ ಪ್ರಾಣದೇವರ ಸೃಷ್ಟಿ ಮಾಡಿದನಂತೆ. ಭಗವಂತ ಸದಾ ಪ್ರಾಣದೇವರ ಜೊತೆಗಾರ. ಪ್ರಾಣನಿದ್ದಲ್ಲಿ  ಭಗವಂತ, ಭಗವಂತನಿದ್ದಲ್ಲಿ ಪ್ರಾಣ. ಆದ್ದರಿಂದ ವಾಯುದೇವರು ಭಗವಂತನ ಜೊತೆಗಿರುವ ಜೊತೆಗಾರ. ವಾಯು ಅಂದರೆ ಸದಾ ಆಕಾಶದಲ್ಲಿ ಸಂಚರಿಸುವ ಗಾಳಿ. ಇಂತಹ ಪ್ರಾಣಶಕ್ತಿಯೊಳಗಿದ್ದು,ಆಕಾಶದಲ್ಲಿ ಚಲಿಸುವ ಭಗವಂತ ವಿಹಾಯಸಗತಿಃ.
ಇನ್ನು ಈ ನಾಮವನ್ನು ಒಡೆದು ನೋಡಿದಾಗ ವಿಹಾ+ಯಸ+ಗತಿಃ; 'ವಿಹಾ' ಎಂದರೆ ಸರ್ವ ಗುಣಗಳಿಂದ ಪೂರ್ಣವಾದ, ಸರ್ವ ದೋಷಗಳಿಂದ ದೂರವಾದ ತತ್ವ.  'ಯಸ' ಎಂದರೆ ಜ್ಞಾನಾನಂದ ಸ್ವರೂಪ. 'ಗತಿಃ' ಎಂದರೆ 'ಗಚ್ಛತಿ', ಭಗವಂತ ಸರ್ವಾಂತರ್ಯಾಮಿ, ಎಲ್ಲಾ ಕಡೆಯಲ್ಲೂ ಇರುವ, ಇಡೀ ವಿಶ್ವಕ್ಕೆ ಆಶ್ರಯ ಕೊಡುವ ನಿಲುದಾಣ.           
880) ಜ್ಯೋತಿಃ
ಸೂರ್ಯನಿಗಿಂತಲೂ ಪ್ರಖರವಾದ ಬೆಳಕುಳ್ಳವನು. ಆತ ಸೂರ್ಯನಿಗಿಂತಲೂ ಪ್ರಖರ ಆದರೆ ಚಂದ್ರನಿಗಿಂತ ತಂಪು. ಗೂಬೆ ಹೇಗೆ ಸೂರ್ಯನನ್ನು ನೋಡಲಾರದೋ ಹಾಗೆ ಇಂತಹ ಬೆಳಕನ್ನು ನಾವು ನಮ್ಮ ಹೊರಗಣ್ಣಿನಿಂದ ಎಂದೂ ನೋಡಲಾರೆವು. ಆತನನ್ನು ನಮ್ಮ ಸ್ವರೂಪದ ಕಣ್ಣಿನಿಂದ ಮಾತ್ರ ಕಾಣಲು ಸಾಧ್ಯ.
ಜ್ಯಾ+ಊತಿ-ಜ್ಯೋತಿ, ಇಲ್ಲಿ 'ಜ್ಯಾ' ಎಂದರೆ ಭೂಮಿ.'ಊತಿ' ಎಂದರೆ ರಕ್ಷಣೆ.ಈ ಭೂಮಿ, ಆಕಾಶದಲ್ಲಿ ನಿರಾಲಂಭವಾಗಿ ನಿಲ್ಲುವಂತೆ ಮಾಡಿದ ಸಂಕರ್ಷಣ ಶಕ್ತಿಯ ಅಂತರ್ಯಾಮಿ ಭಗವಂತ ಜ್ಯೋತಿಃ
881) ಸುರುಚಿಃ
ಇಲ್ಲಿ ರುಚಿ ಎಂದರೆ 'ಬೆಳಕು'. ಸುರುಚಿ ಎಂದರೆ ಸುಖಕರವಾದ ಬೆಳಕು. ನಮಗೆ ಆನಂದದ ಬೆಳಕನ್ನು ಕೊಟ್ಟು ಎತ್ತರಕ್ಕೆ ಕೊಂಡೊಯ್ಯುವ ಭಗವಂತ ಸುರುಚಿಃ.
882) ಹುತಭುಗ್ವಿಭುಃ
ಬೆಂಕಿಗೆ ಹಾಕಿದ ಆಹುತಿಯನ್ನು ಸ್ವೀಕರಿಸುವ ಅಗ್ನಿಯ ಒಡೆಯ.
883) ರವಿಃ
ಸೂರ್ಯನೊಳಗಿದ್ದು ರವಿ ಎನಿಸಿಕೊಂಡವನು. ರವ+ಇ-ರವಿ. ಮಂತ್ರದ ನಾದದಿಂದ ಸೂರ್ಯ ಮಂಡಲದಲ್ಲಿರುವ ರವಿ ನಾಮಕ ಭಗವಂತನ ಉಪಾಸನೆಯಲ್ಲಿ ಭಗವಂತನ ಈ ನಾಮ ಬಳಕೆಯಾಗಿದೆ. ಹಿಂದೆ ಬೆಳಿಗ್ಗೆ ಸುಮಾರು ನಾಲ್ಕು ಗಂಟೆಗೆ ಎದ್ದು ಸ್ನಾನ ಮಾಡಿ ಮುಖ್ಯವಾಗಿ ಗಾಯತ್ರಿ ಜಪ ಮಾಡುತ್ತಿದ್ದರು. ಅದೇ ರೀತಿ ಸಂಜೆ ಸೂರ್ಯಾಸ್ತಕ್ಕೆ ಮೊದಲು ಕೂಡಾ ಧ್ಯಾನದಲ್ಲಿ ತೊಡಗುತ್ತಿದ್ದರು. ಕಾರಣವೆಂದರೆ, ಮುಂಜಾವಿನ ಹಾಗು ಸಂಜೆಯ ಕೆಂಪಾದ ಸೂರ್ಯ ಕಿರಣದಲ್ಲಿ ನಮ್ಮ ಬುದ್ಧಿ ಶಕ್ತಿಯನ್ನು ಕುಂದಿಸುವ ಶಕ್ತಿ ಇರುತ್ತದೆ.ಅಂತಹ ಕೆಟ್ಟ ಶಕ್ತಿಯ ನಿರೋಧಕ್ಕಾಗಿ ಈ ರೀತಿ ಧ್ಯಾನ ಮಾಡುತ್ತಿದ್ದರು. ಸೂರ್ಯನ ಮುಂಜಾವಿನ ಹಾಗು ಸಂಜೆಯ ಕಿರಣ, ಗ್ರಹಣ ಕಾಲದ ಕಿರಣ ಮತ್ತು ನೀರಿನಿಂದ ಪ್ರತಿಫಲಿಸಿ ಕಾಣುವ ಸೂರ್ಯ ಕಿರಣ ವಿಷಕಾರಿ. ಮುಂಜಾವಿನ ಮತ್ತು ಸಂಜೆಯ ಕಿರಣ ಮಾನಸಿಕವಾಗಿ  ಪರಿಣಾಮ ಬೀರಿದರೆ, ಗ್ರಹಣದ ಕಿರಣ ನಮಗೆ ದೈಹಿಕವಾಗಿ ಕೆಟ್ಟದ್ದು. ಆದರೆ ಗ್ರಹಣ ಕಾಲದಲ್ಲಿ ನಮ್ಮ ಮೆದುಳು ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಅದಕ್ಕಾಗಿ ಹಿಂದೆ ಗ್ರಹಣ ಕಾಲದಲ್ಲಿ ಉಪವಾಸವಿದ್ದು ಪಾರಾಯಣ ಮಾಡುತ್ತಿದ್ದರು. ಗ್ರಹಣ ಕಾಲದಲ್ಲಿ ಒಂದು ಬಾರಿ ಮಾಡುವ ಪಾರಾಯಣ ಬೇರೆ ಸಮಯದ ನೂರಕ್ಕೂ ಹೆಚ್ಚು ಪಾರಾಯಣಕ್ಕೆ ಸಮನಾಗಿರುತ್ತದೆ. ಹೊಟ್ಟೆ ಖಾಲಿಯಿದ್ದು ಪಾರಾಯಣ ಮಾಡಿದರೆ ಇದರ ಪರಿಣಾಮ ಇನ್ನೂ ಹೆಚ್ಚು. ಅದಕ್ಕಾಗಿ ಉಪವಾಸವಿದ್ದು ಪಾರಾಯಣ ಮಾಡುತ್ತಿದ್ದರು. ಹೀಗೆ ಸೂರ್ಯ ಮಂಡಲದಲ್ಲಿ ಅಡಗಿರುವ ಅಪೂರ್ವ ಶಕ್ತಿ ಭಗವಂತ ರವಿಃ.             
884) ವಿರೋಚನಃ
ರೋಚನ ಎಂದರೆ ಬೆಳಗಿಸುವ ವಸ್ತು. ವಿಶಿಷ್ಟವಾದ ಬೆಳಕನ್ನು ಜಗತ್ತಿಗೆ ನೀಡುವ ಭಗವಂತ ವಿರೋಚನಃ. ನಮ್ಮ ಹೃದಯ ಗುಹೆಯಲ್ಲಿ ಕುಳಿತು ನಮಗೆ ಜ್ಞಾನದ ಬೆಳಕನ್ನು ನೀಡುವ ಜ್ಯೋತಿರ್ಮಯರೂಪಿ ಭಗವಂತ ವಿರೋಚನಃ.
885) ಸೂರ್ಯಃ
ಸೂರಿಭಿಃ ಈಯತೇ ಇತಿ ಸೂರ್ಯಃ; ಅಂದರೆ ಸೂರಿಗಳಿಗೆ(ಜ್ಞಾನಿಗಳಿಗೆ) ಗೋಚರವಾಗುವ,ಸೂರ್ಯನೊಳಗಿದ್ದು ಸೂರ್ಯನೆನಿಸಿಕೊಂಡ ಭಗವಂತ ಸೂರ್ಯಃ
886) ಸವಿತಾ
ಸೂತೇ ಇತಿ ಸವಿತಾ; ಇಡೀ ಜಗತ್ತನ್ನು ತನ್ನ ಒಡಲಲ್ಲಿ ಹೊತ್ತು, ಸೃಷ್ಟಿ ಕಾಲದಲ್ಲಿ ತನ್ನ ನಾಭಿ ಕಮಲದಿಂದ ಹೆತ್ತ ಜಗತ್ತಿನ ತಂದೆ ಸವಿತಾ; ಗಾಯತ್ರಿ ಪ್ರತಿಪಾಧ್ಯನಾದ ಸೂರ್ಯನಲ್ಲಿ ಸನ್ನಿಹಿತನಾಗಿರುವ ಸವಿತಾ ನಾಮಕ ಭಗವಂತ ಸವಿತಾ.
887) ರವಿಲೋಚನಃ
ಭಗವಂತನ ಕಿಡಿನೋಟದ ಒಂದು ಚಿಕ್ಕ ಕಿಡಿ ಆ ಸೂರ್ಯ. ಯಾರಿಂದ ಆ ಸೂರ್ಯ ಹುಟ್ಟಿ ಬಂದನೋ, ಯಾರಲ್ಲಿ ಸೇರಿ ಕಣ್ಮರೆಯಾಗುತ್ತಾನೋ ಅವನು ರವಿಲೋಚನಃ.

No comments:

Post a Comment