Showing posts with label Bannanje. Show all posts
Showing posts with label Bannanje. Show all posts

Wednesday, September 8, 2010

Vishnu sahasranama 328-330


ವಿಷ್ಣು ಸಹಸ್ರನಾಮ: ಸ್ಕಂದಃ ಸ್ಕಂದಧರೋ ಧುರ್ಯೋ.....
328) ಸ್ಕಂದಃ

ಶಿವ ಪುತ್ರನಾದ ಕಾರ್ತಿಕೇಯ ,ಸುಬ್ರಹ್ಮಣ್ಯ ಅಥವಾ ಷಣ್ಮುಖನನ್ನು ಸ್ಕಂದ ಎನ್ನುತ್ತಾರೆ; ಇದು ರೂಢಾರ್ಥ. ಸ್ಕಂದ ಎಂದರೆ ಚಲಿಸುವುದು, ಹೊರಹೊಮ್ಮುವುದು ಹಾಗೂ ಚಿಮ್ಮುವುದು ಎನ್ನುವ ಅನೇಕ ಅರ್ಥವನ್ನು ಕೊಡುತ್ತದೆ.ಯಾರ ನಾಭಿಯಿಂದ ಈ ಜಗತ್ತು ಹೊರಹೊಮ್ಮಿತೋ ಅವನು ಸ್ಕಂದಃ. ಈ ನಾಮವನ್ನು ಒಡೆದು ನೋಡಿದರೆ ಸ+ಕ+ದ; ಈ ಹಿಂದೆ ಹೇಳಿದಂತೆ 'ಸ' ಎಂದರೆ ಸಾರ ಅಥವಾ ಜ್ಞಾನ; 'ಕ' ಅಥವಾ 'ಕಂ' ಎಂದರೆ ಆನಂದ; 'ದ' ಎಂದರೆ ಕೊಡುವವನು ಅಥವಾ ಕೊಡದೇ ಇರುವವನು. ಆದ್ದರಿಂದ ಸ್ಕಂದಃ ಎಂದರೆ ಸಾತ್ವಿಕರಿಗೆ ಸದಾ ಜ್ಞಾನಾನಂದವನ್ನು ಕೊಡುವವನು ಹಾಗೂ ದುಷ್ಟರನ್ನು ಜ್ಞಾನಾನಂದದಿಂದ ದೂರವಿರಿಸುವವನು.
329) ಸ್ಕಂದಧರಃ
ಸ್ಕಂದಧರಃ ಎಂದರೆ ಸ್ಕಂದನನ್ನು ಧರಿಸಿದವನು. ಸ್ಕಂದ ಶಿವನಲ್ಲಿ 'ಷಣ್ಮುಖನಾಗಿ', ಚತುರ್ಮುಖನಲ್ಲಿ 'ಸನತ್ ಕುಮಾರನಾಗಿ' ಹಾಗೂ ವಿಷ್ಣುವಿನಲ್ಲಿ 'ಕಾಮನಾಗಿ' ಹುಟ್ಟದ. ಹೀಗೆ ಸ್ಕಂದನನ್ನು ಧರಿಸಿ ಆತನನ್ನು ಮಗನಾಗಿ ಪಡೆದ ಭಗವಂತ ಸ್ಕಂದಧರಃ. ಮೇಲೆ ಹೇಳಿದಂತೆ ಸ್ಕಂದ ಎಂದರೆ ಜ್ಞಾನಾನಂದವನ್ನು ಕೊಡುವವರು. ನಮಗೆ ಜ್ಞಾನಾನಂದದ ಅನುಭವವನ್ನು ಕೊಡುವವರು ನಮ್ಮ ಆತ್ಮಾಭಿಮಾನಿ ದೇವತೆಗಳಾದ ಚತುರ್ಮುಖ ಹಾಗೂ ಪ್ರಾಣ. ಈ ಜೀವಾಭಿಮಾನಿ ದೇವತೆಗಳನ್ನು ಧರಿಸಿದ ಭಗವಂತ ಸ್ಕಂದಧರಃ.
330) ಧುರ್ಯಃ
ಧುರ್ಯ ಎಂದರೆ 'ಮುಂದಾಳು'. ಈ ಪ್ರಪಂಚದಲ್ಲಿನ ಪ್ರತಿಯೊಂದು ಪ್ರಾಣಿಸಂಕುಲದಲ್ಲಿ ಒಬ್ಬ ಮುಂದಾಳುವನ್ನು ಕಾಣುತ್ತೇವೆ. ಆನೆಗಳ ಗುಂಪಿನಲ್ಲಿ ಒಂದು ಆನೆ ಮುಂದಾಳಾಗಿರುತ್ತದೆ ಹಾಗೂ ಇತರ ಆನೆಗಳು ಅದನ್ನು ಅನುಸರಿಸುತ್ತವೆ. ಮಂಗಗಳ ಗುಂಪನ್ನು ಒಂದು ಮುಂದಾಳು ಮಂಗ ಮುನ್ನೆಡೆಸುತ್ತದೆ ಹಾಗೂ ಇತರೆ ಮಂಗಗಳು ಅದನ್ನು ಅನುಸರಿಸುತ್ತವೆ. ವೈರಿಯನ್ನು ಸದೆಬಡಿಯುವಾಗ 'ಮುಂದಾಳು' ಎದೆಯೊಡ್ಡಿ ಹೋರಾಡಿದರೆ ಇತರರು ಆತನ ಅಪ್ಪಣೆಯಂತೆ ಹೋರಾಟ ಮಾಡುತ್ತಾರೆ; ಮಹಾಭಾರತ ಯುದ್ಧದಲ್ಲಿ ಭೀಮಾರ್ಜುನರು 'ಮುಂದಾಳಾಗಿದ್ದು' ಹೋರಾಟ ಮಾಡಿ ಧರ್ಮರಾಯನಿಗೆ ಜಯವನ್ನು ತಂದುಕೊಡುತ್ತಾರೆ; ಅರ್ಜುನನ ರಥದ 'ಧುರ್ಯ' ಸ್ವಯಂ ಶ್ರೀಕೃಷ್ಣನಾಗಿದ್ದ. ಹೀಗೆ ಭಗವಂತ ಪ್ರತಿಯೊಂದು ಮುಂದಾಳುವಿನಲ್ಲಿ 'ಧುರ್ಯ' ರೂಪನಾಗಿ ಸನ್ನಿಹಿತನಾಗಿರುತ್ತಾನೆ. ಪ್ರತಿಯೊಂದು ಮಹತ್ಕಾರ್ಯವನ್ನು ಮುಂದಾಳಾಗಿ ಮಾಡುವ ಹಾಗೂ ಮಾಡಿಸುವ ಭಗವಂತ ಧುರ್ಯಃ

Tuesday, September 7, 2010

Vishnu sahasranama 326-327

ವಿಷ್ಣು ಸಹಸ್ರನಾಮ: ಅಪ್ರಮತ್ತಃ ಪ್ರತಿಷ್ಠಿತಃ
326) ಅಪ್ರಮತ್ತಃ

ಅಪ್ರಮತ್ತಃ ಎಂದರೆ ಎಂದೂ ಎಚ್ಚರ ತಪ್ಪದವನು. ಭಗವಂತ ಎಂದೂ ಎಚ್ಚರ ತಪ್ಪುವುದಿಲ್ಲ, ಎಂದೂ ಪ್ರಮಾದ ಮಾಡುವುದಿಲ್ಲ. ಸದಾ ನಮ್ಮನ್ನು ಪ್ರಮಾದದಿಂದ ಪಾರುಮಾಡುವ ಭಗವಂತ ಗುಣಾತೀತ ಹಾಗೂ ಆನಂದಮಯ.
327) ಪ್ರತಿಷ್ಠಿತಃ

ಭಗವಂತ ತನ್ನಲ್ಲೇ ತಾನು ನೆಲೆನಿಂತವನು; ಎಲ್ಲವೂ ಆತನಲ್ಲಿ ಪ್ರತಿಷ್ಟಿತ. ಪ್ರತಿಯೊಂದು ಜೀವರೊಳಗೂ ಭಗವಂತ ಬಿಂಬ ರೂಪದಲ್ಲಿ ಪ್ರತಿಷ್ಟಿತ. ನಮ್ಮೊಳಗೆ ನಮ್ಮ ಅತರ್ಯಾಮಿಯಾಗಿದ್ದು, ನಮ್ಮ ಸ್ವರೂಪದೊಳಗೆ ನಮ್ಮ ಬಿಂಬರೂಪನಾಗಿ ಅತ್ಯಂತ ಸಮೀಪದಲ್ಲಿರುವವನು ಆತ. ಹೀಗೆ ಪ್ರತಿಯೊಂದು ಜೀವರೊಳಗೆ ಅಂತರ್ಯಾಮಿಯಾಗಿ ಪ್ರತಿಷ್ಟಿತನಾಗಿರುವ ಭಗವಂತ ಪ್ರತಿಷ್ಠಿತಃ

Monday, September 6, 2010

Vishnu Sahasranama 324-325


ಅಪಾಂ ನಿಧಿರಧಿಷ್ಠಾನಮಪ್ರಮತ್ತಃ.......
324) ಅಪಾಂನಿಧಿಃ

ಅಪಾಂನಿಧಿಃ ಎಂದರೆ "ನೀರಿನ ನೆಲೆ". ನೀರಿನ ನೆಲೆಯಾದ ಕಡಲಿನಲ್ಲಿ, ಕಡಲಿನ ದೇವತೆಯಾದ ವರುಣನಲ್ಲಿ, ಸಮಸ್ತ ಜಲರಾಶಿಯಲ್ಲಿ ಸನ್ನಿಹಿತನಾದ ಭಗವಂತ ಅಪಾಂನಿಧಿಃ. 'ಆಪ್' ಎಂದರೆ ಪಾನ ಮಾಡುವ ವಸ್ತು. ನಾವು ಬದುಕುವುದಕ್ಕೊಸ್ಕರ ಪಾನ ಮಾಡುವ ವಸ್ತು 'ನೀರು'. ಜ್ಞಾನಿಗಳು ಸದಾ ಪಾನ(ಶ್ರವಣ) ಮಾಡುವ ವಸ್ತು ಭಗವಂತನ 'ಅನಂತ ಗುಣ'. ಅನಂತ ಗುಣಗಳ ನೆಲೆ ಭಗವಂತನೋಬ್ಬನೆ. ಇನ್ನು ನಾವು ಮಾಡುವ ಸತ್ಕರ್ಮ ಕೊನೆಗೆ ಸೇರುವುದು ಭಗವಂತನನ್ನು. ಇದಕ್ಕಾಗಿ ಪ್ರತೀ ಪೂಜೆಯ ಕೊನೆಗೆ "ಕೃಷ್ಣಾರ್ಪಣ ಮಸ್ತು" ಎನ್ನುತ್ತೇವೆ. ಆದ್ದರಿಂದ ಸರ್ವ ಸತ್ಕರ್ಮಗಳ ನೆಲೆ ಭಗವಂತ. ಹೀಗೆ ಕರ್ಮಗಳ, ಗುಣಗಳ, ದೇವತೆಗಳ ಹಾಗೂ ನೀರಿನ ನೆಲೆಯಾದ ಭಗವಂತ ಅಪಾಂನಿಧಿಃ.
325) ಅಧಿಷ್ಟಾನಮ್
ಅಧಿಷ್ಟಾನಮ್ ಎಂದರೆ ಎಲ್ಲವುದಕ್ಕೂ ಆಧಾರ. ಪ್ರತಿಯೊಂದು ವಸ್ತುವಿನ ಮೂಲಾಧಾರ ಭಗವಂತ. ಭೂಮಿಯನ್ನು "ಶೇಷ" ಹೊತ್ತಿದ್ದಾನೆ. ಶೇಷನನ್ನು "ವಾಯು" ಹೊತ್ತಿದ್ದಾನೆ, ವಾಯುವಿಗೆ ಪೂರ್ಣಾಧಾರ ಭಗವಂತ. ಹೀಗೆ ಎಲ್ಲ ವಿಶ್ವಕ್ಕು ಆಧಾರವಾದ, ಎಲ್ಲಕ್ಕೂ ಅಧಿಕವಾದ ಸ್ಥಾನದಲ್ಲಿರುವ ಭಗವಂತ ಅಧಿಷ್ಟಾನಮ್.

Friday, September 3, 2010

Vishnusahasranama 320

ವಿಷ್ಣು ಸಹಸ್ರನಾಮ: ಪ್ರಥಿತಃ

320) ಪ್ರಥಿತಃ
ಪ್ರಥಿತಃ ಎಂದರೆ ವಿಖ್ಯಾತನಾದವನು. ಭಗವದ್ ಗೀತೆಯಲ್ಲಿ ಶ್ರೀ ಕೃಷ್ಣ ಹೇಳುವಂತೆ:
ಯಾಸ್ಮಾತ್ ಕ್ಷರಮತೀತೋssಹಮಕ್ಷರಾದಪಿ ಚೋತ್ತಮಃ
ಅತೋssಸ್ಮಿ ಲೊಕೇ ವೇದೇ ಚ ಪ್ರಥಿತಃ ಪುರುಷೋತ್ತಮಃ (ಅ-೧೫ ಶ್ಲೋ-೧೮)
ಅಂದರೆ "ನಾನು ಕ್ಷರವನ್ನು ಮೀರಿನಿಂತವನು. ಅಕ್ಷರಕ್ಕಿಂತಲೂ ಹಿರಿಯನು. ಅದಕ್ಕೆಂದೇ ಲೋಕದಲ್ಲೂ, ವೇದದಲ್ಲೂ 'ಪುರುಷೋತ್ತಮ' ಎಂದೇ ಹೆಸರಾಗಿದ್ದೇನೆ". ಹೀಗೆ ಸರ್ವ ಆತ್ಮಗಳಲ್ಲಿ ಶ್ರೇಷ್ಠ ಆತ್ಮ, ಸರ್ವ ವೇದ ವಾಚ್ಯ ಹಾಗೂ ಸರ್ವ ಶಬ್ದ ವಾಚ್ಯ ಭಗವಂತ ಪ್ರಥಿತಃ.

Thursday, September 2, 2010

Vishnu sahasranama 319


ವಿಷ್ಣು ಸಹಸ್ರನಾಮ: ಅಚ್ಯುತಃ...

319) ಅಚ್ಯುತಃ
ಭಗವಂತನ ಈ ನಾಮ ಸಹಸ್ರನಾಮದಲ್ಲಿ ಮೂರು ಭಾರಿ ಪುನರುಕ್ತಿಯಾಗಿದೆ (100,319 ಹಾಗೂ 556). ನಮ್ಮಲ್ಲಿ ಯಾವುದೇ ಮಂತ್ರ, ಜಪ ಪಾರಾಯಣ ಮಾಡಿ ಮುಗಿಸಿದ ಮೇಲೆ ಸ್ವರ-ವರ್ಣದ ಲೋಪದ ಪ್ರಾಯಶ್ಚಿತಕ್ಕಾಗಿ ಹೇಳುವ ಪ್ರಾಯಶ್ಚಿತ ಮಂತ್ರದಲ್ಲಿನ ಮೂರು ನಾಮಗಳಲ್ಲಿ ಈ ನಾಮವೂ ಒಂದು ‘ಅಚ್ಯುತಾಯ ನಮಃ ಅನಂತಾಯ ನಮಃ ಗೋವಿಂದಾಯ ನಮಃ ಅಚ್ಯುತಾನಂತ ಗೋವಿಂದೇಭ್ಯೋ ನಮಃ’ ಚ್ಯುತಿ ಇಲ್ಲದ ಅಚ್ಚುತ ನಾಮಕ ಭಗವಂತ ನಮ್ಮ ಸರ್ವಉಚ್ಚಾರ ದೋಷಹರ. ಇಷ್ಟೇ ಅಲ್ಲದೆ ಪುರಾಣದಲ್ಲಿ ವೇದವ್ಯಾಸರು ಹೇಳಿದಂತೆ :
"ಅಚ್ಯುತಾನಂತ ಗೋವಿಂದ ನಾಮೋಚ್ಚಾರಣ ಬೀಶಿತಾಃ ನಶ್ಯಂತಿ ಸಕಲಾಃ ರೋಗಾಃ ಸತ್ಯಂ ಸತ್ಯಂವದಾಮ್ಯಹಂ" ಎಂದರೆ ಭಗವಂತನ ಈ ನಾಮೋಚ್ಚಾರಣೆಯಿಂದ ಸರ್ವ ರೋಗಗಳು ಹೆದರಿ ಬಿಟ್ಟೋಡುತ್ತವೆ ಇದು ಸತ್ಯ. ಇದಕ್ಕಾಗಿ ನಮಗೆ ಭಗವಂತನಲ್ಲಿ ಅಗಾಧವಾದ ನಂಬಿಕೆ(Involvement) ಹಾಗು ಸ್ವೀಕರಿಸುವ ಸಾಮರ್ಥ್ಯ(Receiving Power) ಬೇಕು. ಪರಿಪೂರ್ಣನಾದ ಭಗವಂತ ಸರ್ವ ರೋಗಹರ. ಹೀಗೆ ಸ್ವಯಂ ಚ್ಯುತಿ ಇಲ್ಲದ, ಭಕ್ತರ ಚ್ಯುತಿಯನ್ನು ಹರಣ ಮಾಡುವ ಭಗವಂತ ಅಚ್ಯುತಃ.

Wednesday, September 1, 2010

Vishnu Sahasranama 317-318

ವಿಷ್ಣು ಸಹಸ್ರನಾಮ: ವಿಶ್ವಬಾಹುರ್ಮಹೀಧರಃ
317) ವಿಶ್ವಬಾಹುಃ
ಮೇಲ್ನೋಟಕ್ಕೆ ವಿಶ್ವಬಾಹು ಎಂದರೆ ಪರಿಪೂರ್ಣವಾದ ತೋಳು ಉಳ್ಳವನು ಎನ್ನುವ ಅರ್ಥವನ್ನು ಕೊಡುತ್ತದೆ. ಭಗವಂತ ಅನಂತ ಹಾಗು ಪರಿಪೂರ್ಣವಾದ ತೊಳುಗಳುಳ್ಳವನು. ಇಲ್ಲಿ ಅನಂತ ಎಂದರೆ ಪರಿಪೂರ್ಣವಾದ ಸ್ವರೂಪಭೂತವಾದ ತೋಳು. ಭಗವಂತ ಹಾಗು ಅವನ ತೋಳುಗಳು ಭಿನ್ನವಲ್ಲ, ಆತನಿಗೆ ಬೌತಿಕವಾದ ಅಂಗಗಳಿಲ್ಲ. ನಮಗೆ ಬೌತಿಕವಾದ ಎರಡು ಕೈಗಳು; ನಮ್ಮೊಳಗಿರುವ ಸೂಕ್ಷ್ಮ ಶರೀರಕ್ಕೆ ಎರಡು ತೋಳುಗಳು; ಲಿಂಗ ಶರೀರಕ್ಕೆ ಎರಡು ತೋಳುಗಳು ಹಾಗು ನಮ್ಮ ಜೀವ ಸ್ವರೂಪಕ್ಕೆ ಎರಡು ಭುಜಗಳು. ನಮ್ಮ ಬೌತಿಕ ಇಂದ್ರಿಯ ಶಾಶ್ವತವಲ್ಲ ಆದರೆ ಸ್ವರೂಪಭೂತವಾದ ಇಂದ್ರಿಯ ಮೊಕ್ಷದಲ್ಲೂ ನಮ್ಮೊಂದಿಗಿರುತ್ತದೆ. ಭಗವಂತನ ಅನಂತ ಅವಯವಗಳು ಸ್ವರೂಪಭೂತವಾದದ್ದು ಹಾಗು ಪರಿಪೂರ್ಣವಾದದ್ದು. ಇಲ್ಲಿ ವಿಶ್ವ ಬಾಹು ಎಂದರೆ ಇಡೀ ವಿಶ್ವವನ್ನು ರಕ್ಷಣೆ ಮಾಡುವ ತೋಳು. ಪ್ರಾಣದೇವರ ಮುಖೇನ ಇಡೀ ವಿಶ್ವವನ್ನು ಧಾರಣೆ ಮಾಡಿದ ಭಗವಂತ ವಿಶ್ವಬಾಹುಃ.
318) ಮಹೀಧರಃ
'ಮಹೀ' ಎಂದರೆ ಭೂಮಿ. ಭಗವಂತ ಇಡೀ ಜಗತ್ತನ್ನು ಧರಿಸಿರುವುದಷ್ಟೇ ಅಲ್ಲದೆ ಪ್ರತಿಯೊಂದು ವಸ್ತುವಿನೊಳಗಿದ್ದು ಅದನ್ನು ಪ್ರತ್ಯೇಕವಾಗಿ ಧರಿಸಿದ್ದಾನೆ. ಭೂಮಿಯೊಳಗಿದ್ದು ಭೂಮಿಯನ್ನು ಧರಿಸಿರುವ ಭಗವಂತ ಮಹೀಧರಃ. ಗಾಯತ್ರಿಯಲ್ಲಿ ನಾವು ಉಪಾಸನೆ ಮಾಡುವ ಭಗವಂತನ ಒಂದು ರೂಪ 'ಮಹೀರೂಪ'. ಗಾಯತ್ರಿಯಲ್ಲಿ ಸಮಸ್ತ ವಾಗ್ಮಯಗಳಿಗೆ ಕಾರಣನಾದ ವಾಕ್ ನಾಮಕ ಭಗವಂತನ ರೂಪ, ಪ್ರಥ್ವಿಯಲ್ಲಿರುವ ಪ್ರಥ್ವಿ ನಾಮಕ ಭಗವಂತನ ರೂಪ, ನಮ್ಮೊಳಗಿರುವ ಬಿಂಬರೂಪಿ ಭಗವಂತನ ರೂಪ ಹಾಗು ಸೂರ್ಯಮಂಡಲದಲ್ಲಿ ಸನ್ನಿಹಿತನಾದ ಭಗವಂತನ ರೂಪವನ್ನು ಸ್ತ್ರೀ ಹಾಗು ಪುರುಷ ರೂಪದಲ್ಲಿ ಉಪಾಸನೆ ಮಾಡುತ್ತಾರೆ. ಹೀಗೆ ಗಾಯತ್ರಿ ಪ್ರತಿಪಾದ್ಯನಾದ, ತನ್ನ ಎದೆ ಹಾಗು ತೊಡೆಯಲ್ಲಿ ಲಕ್ಷ್ಮಿಯನ್ನು ಧರಿಸಿರುವ ಭಗವಂತ ಮಹೀಧರಃ.

Friday, June 11, 2010

Vishnu Sahasranama 47

ಹೃಷೀಕೇಶಃ

47) ಹೃಷೀಕೇಶಃ
ಭಗವಂತನನ್ನು ಹುಡುಕುತ್ತಾ ಹೋದರೆ, ಆತ ಕ್ಷಿತಿಜದಂತೆ ದೂರ ದೂರ ಹೋಗುತ್ತಾನೆ. ಅದ್ದರಿಂದ ಅವನನ್ನು ಎಲ್ಲೆಲ್ಲೋ ಹುಡುಕುವ ಬದಲು ನಿಂತಲ್ಲೇ ನಿಂತು ನಿನ್ನೊಳಗೆ ಹುಡುಕು. ನಿನ್ನ ಹೃತ್ಕಮಲದಲ್ಲೇ ಅವನಿದ್ದಾನೆ!!!
ಹೃಷೀಕಗಳಿಗೆ ಈಶ ಹೃಷೀಕೇಶ-ಹೃಷೀಕ ಅಂದರೆ ಇಂದ್ರಿಯಗಳು. ಆತ ಇಂದ್ರಿಯಗಳ ಸ್ವಾಮಿ. ಆತನನ್ನು ಇಂದ್ರಿಯದಿಂದ ನೋಡದೆ, ಇಂದ್ರಿಯದಲ್ಲಿ ನೋಡು !!
ಉಪನಿಷತ್ತಿನಲ್ಲಿ ಹೇಳುವಂತೆ- ನಮಗೆ ಪ್ರತಿಯೊಂದು ಇಂದ್ರಿಯಗಳನ್ನು ದಯಪಾಲಿಸಿ , ಅದರಲ್ಲಿ ನಿಂತು ನೆಡೆಸುವವನು ಹೃಷೀಕಗಳ ಈಶನಾದ ಹೃಷೀಕೇಶ.
ಕೇಶ ಅನ್ನುವ ಶಬ್ದಕ್ಕೆ ಸೂರ್ಯಕಿರಣ ಎಂಬ ಅರ್ಥವನ್ನು "ಕೇಶವ" ಎಂಬಲ್ಲಿ ವಿಶ್ಲೇಷಿಸಿದ್ದೇವೆ.
ಸೂರ್ಯನ ಕಿರಣದಲ್ಲಿ ಏಳು ಬಣ್ಣವಿದೆ, ನಮ್ಮ ದೇಹದಲ್ಲಿ ಏಳು ಶಕ್ತಿ ಚಕ್ರಗಳಿವೆ(ಸಹಸ್ರಾರ, ಆಜ್ಞ, ವಿಶುದ್ಧ, ಅನಾಹತ, ಮಣಿಪುರ, ಸ್ವಾಧಿಸ್ಟಾನ ಮತ್ತು ಮೂಲಾಧಾರ-Pineal Gland,Pituitary Gland,Thyroid and parathyroid,Adrenal Glands,Pancreas & Gonads). ಅದೇ ರೀತಿ ಅಗ್ನಿಯಲ್ಲಿ ಕೂಡ ಏಳು ಬಣ್ಣವಿದೆ. ನಮ್ಮ ದೇಹದಲ್ಲಿರುವ ಏಳು ಶಕ್ತಿ ಕೇಂದ್ರಗಳಿಂದ ಹೊರಹೊಮ್ಮುವ ಏಳು ಭಾವನೆಗಳನ್ನು ಅಗ್ನಿಯ ಏಳು ಬಣ್ಣಗಳ ಮೂಲಕ ಸೂರ್ಯಕಿರಣದ ಜೊತೆಗೆ ಸಮ್ಮಿಲನ ಮಾಡುವ ಕ್ರೀಯೆಯನ್ನು "ಹೋಮ" ಎನ್ನುತ್ತಾರೆ (ಅದ್ದರಿಂದ ಭಗವಂತನಿಗೆ ಸಲ್ಲಬೇಕಾದ ಯಾವುದೇ ಹೋಮವನ್ನು ರಾತ್ರಿ ಮಾಡುವುದಿಲ್ಲ).
ಈ ಎಲ್ಲಾ ಏಳು ವರ್ಣದಲ್ಲಿ ತುಂಬಿ ಬದುಕಿಗೆ ಹರ್ಷವನ್ನು ಕೊಡತಕ್ಕಂತ ಭಗವಂತ-ಹೃಷೀಕೇಶ.

Tuesday, June 8, 2010

Vishnu Sahasranama 38-39


ಶಂಭುರಾದಿತ್ಯಃ

38)ಶಂಭುಃ
ಶಂ-ಭವತಿ ->ಆನಂದ ರೂಪ,ಶಂ-ಭವತಿ ಅನೇನ ->ಆನಂದ ಕೊಡುವವನು.
(ಶಂ-ಅಂದರೆ ಆನಂದ - ಉದಾಹರಣೆಗೆ : ಹರಿಃ ಓಮ್ ಶಂ ನೋ ಮಿತ್ರಃ ಶಂ ವರುಣಃ ಶಂ ನೋ ಭವತ್ವರ್ಯಮಾ ಶಂ ನ ಇಂದ್ರೋ ಬೃಹಸ್ಪತಿಃ ಶಂ ನೋ ವಿಷ್ಣುರುರುಕ್ರಮಃ)
ಯಾರು ಸ್ವಯಂ ಆನಂದಮಯನೋ , ಯಾರು ಎಲ್ಲರಿಗೂ ಆನಂದವನ್ನು ಕೊಡಬಲ್ಲನೂ ಅವನು ಶಂಭು.ಎಲ್ಲಾ ಶಾಸ್ತ್ರಗಳು ಭಗವಂತನನ್ನು ಆನಂದಮಯನೆಂದು ಹೇಳುತ್ತವೆ. ಆದ್ದರಿಂದ ಭಗವಂತ ಶಂಭು.
39)ಆದಿತ್ಯಃ
ಆದಿತ್ಯ ಅಂದರೆ ಅದಿತಿಯ ಮಗ ಎಂಬುದು ಒಂದು ಅರ್ಥ.
ಅದಿತಿ ಕಶ್ಯಪ ಮಹರ್ಷಿಯ ಹೆಂಡತಿ ಹಾಗು ದೇವತೆಗಳ ತಾಯಿ. ಅದಿತಿಗೆ ಹನ್ನೆರಡು ಮಂದಿ ಮಕ್ಕಳು ಹಾಗು ಅವರನ್ನು ದ್ವಾದಶಾದಿತ್ಯರು ಎಂದು ಕರೆಯುತ್ತಾರೆ -
ವಿವಸ್ವಾನ್ ,ಆರ್ಯಮಾನ್ ,ಪೂಷನ್ ,ತ್ವಷ್ಟೃ , ಸವಿತೃ , ಭಗ ,ಧಾತ, ವಿದಾತ, ವರುಣ , ಮಿತ್ರ ,ಶಕ್ರ, ಉರುಕ್ರಮ -ಇವರೇ ಆ ಹನ್ನೆರಡು ಮಂದಿ ಆದಿತ್ಯರು ಈ ಹನ್ನೆರಡು ದೇವತೆಗಳೇ ವರ್ಷದ ಹನ್ನೆರಡು ಮಾಸದ ದೇವತೆಗಳು.
ಇವರಲ್ಲಿ ಒಬ್ಬ ಸೂರ್ಯ ,ಒಬ್ಬ ವರುಣ , ಮತ್ತೊಬ್ಬ ಮಿತ್ರ ,ಮತ್ತೊಬ್ಬ ಇಂದ್ರ , ಹಾಗೇ ಕೊನೇ ಮಗನೇ ವಿಷ್ಣು -ವಾಮನ ರೂಪಿ ಭಗವಂತ.
ಅವನು ಎಲ್ಲರಿಗಿಂತ ಕೊನೆಗೆ ಹುಟ್ಟಿದರೂ, ಆತ ಆದಿಯಲ್ಲಿ ಇದ್ದವನು . ಆದ್ದರಿಂದ ಆತ ಆದಿತ್ಯಃ
ಆದಿ+ತಿ+ಯ -ಆದಿಯಲ್ಲಿ ಜ್ಞಾನಾನಂದ ಸ್ವರೂಪನಾಗಿದ್ದವ,ಎಲ್ಲಕ್ಕೂ ಕಾರಣಕರ್ತ.
ಸೂರ್ಯ ಮಂಡಲದಲ್ಲಿ (ಆದಿತ್ಯನಲ್ಲಿ) ಸನ್ನಿಹಿತನಾಗಿರುವ ಭಗವಂತ -ಆದಿತ್ಯಃ

Monday, June 7, 2010

Vishnu Sahasranama 37

ಸ್ವಯಂಭೂಃ
37) ಸ್ವಯಂಭೂಃ
ಸ್ವಯಂಭೂಃ ಅಂದರೆ ತಾನೇ ತಾನಾಗಿ ಪೂರ್ಣವಾಗಿರುವವನು, ತನ್ನಿಂದ ತಾನೆ ಆವಿರ್ಭೂಥನಾಗುವವನು.
ನಮ್ಮ ಪೂರ್ಣತೆ ಇನ್ನೊಬ್ಬರು ಕೊಟ್ಟರೆ ಮಾತ್ರ, ಆದರೆ ಭಗವಂತ ಸ್ವಯಂಪೂರ್ಣ.
ಭಗವಂತ ಅವತರಿಸಲು ಯಾರು ಕಾರಣ ?
ಅವನು ಹುಟ್ಟಿಬರುವುದಕ್ಕೆ ಯಾರೂ ಕಾರಣರಲ್ಲ , ಆತನು ಸ್ವಯಂಭೂಃ , ಅಂದರೆ ತಾನೇ ತಾನಾಗಿ ಹುಟ್ಟಿ ಬರುವವನು. ಭಕ್ತರ ಬಯಕೆ ಈಡೇರಿಸಲು ಸ್ವಯಂಇಚ್ಛೆಯಿಂದ ಅವತರಿಸಿ ಬರುತ್ತಾನೆ.
ಭಗವಂತ ಜ್ಞಾನದಿಂದ-ಜ್ಞಾನದಂತೆ,ದೀಪದಿಂದ-ದೀಪದಂತೆ. ಒಂದು ದೀಪದಿಂದ ಇನ್ನೊಂದು ದೀಪ ಹಚ್ಚಿದರೆ ಮೂಲ ದೀಪದ ಪ್ರಕಾಶ ಕಡಿಮೆ ಆಗುವದಿಲ್ಲ .ಭಗವಂತ ಒಂದು ರೂಪದಿಂದ ಇನ್ನೊಂದು ರೂಪಕ್ಕೆ ಅಭಿವ್ಯಕ್ತ ಆಗುತ್ತಾ ಹೋಗುತ್ತಾನೆ, ಆದರೆ ಮೂಲವೂ ಪೂರ್ಣ , ಮೂಲದಿಂದ ಬಂದ ಅವತಾರವೂ ಪೂರ್ಣ.
ಭಗವಂತ ಅವತಾರಕ್ಕೆ ಮೊದಲೂ ಪೂರ್ಣ, ಅವತಾರದಲ್ಲೂ ಪೂರ್ಣ, ಅವತಾರದ ನಂತರ ಮತ್ತೆ ಹೋಗಿ ಪೂರ್ಣತೆಯಲ್ಲೇ ಉಳಿಯುವವನು. ಅದ್ದರಿಂದ ಆತ ಸ್ವಯಂಭೂಃ !