Wednesday, September 8, 2010

Vishnu sahasranama 328-330


ವಿಷ್ಣು ಸಹಸ್ರನಾಮ: ಸ್ಕಂದಃ ಸ್ಕಂದಧರೋ ಧುರ್ಯೋ.....
328) ಸ್ಕಂದಃ

ಶಿವ ಪುತ್ರನಾದ ಕಾರ್ತಿಕೇಯ ,ಸುಬ್ರಹ್ಮಣ್ಯ ಅಥವಾ ಷಣ್ಮುಖನನ್ನು ಸ್ಕಂದ ಎನ್ನುತ್ತಾರೆ; ಇದು ರೂಢಾರ್ಥ. ಸ್ಕಂದ ಎಂದರೆ ಚಲಿಸುವುದು, ಹೊರಹೊಮ್ಮುವುದು ಹಾಗೂ ಚಿಮ್ಮುವುದು ಎನ್ನುವ ಅನೇಕ ಅರ್ಥವನ್ನು ಕೊಡುತ್ತದೆ.ಯಾರ ನಾಭಿಯಿಂದ ಈ ಜಗತ್ತು ಹೊರಹೊಮ್ಮಿತೋ ಅವನು ಸ್ಕಂದಃ. ಈ ನಾಮವನ್ನು ಒಡೆದು ನೋಡಿದರೆ ಸ+ಕ+ದ; ಈ ಹಿಂದೆ ಹೇಳಿದಂತೆ 'ಸ' ಎಂದರೆ ಸಾರ ಅಥವಾ ಜ್ಞಾನ; 'ಕ' ಅಥವಾ 'ಕಂ' ಎಂದರೆ ಆನಂದ; 'ದ' ಎಂದರೆ ಕೊಡುವವನು ಅಥವಾ ಕೊಡದೇ ಇರುವವನು. ಆದ್ದರಿಂದ ಸ್ಕಂದಃ ಎಂದರೆ ಸಾತ್ವಿಕರಿಗೆ ಸದಾ ಜ್ಞಾನಾನಂದವನ್ನು ಕೊಡುವವನು ಹಾಗೂ ದುಷ್ಟರನ್ನು ಜ್ಞಾನಾನಂದದಿಂದ ದೂರವಿರಿಸುವವನು.
329) ಸ್ಕಂದಧರಃ
ಸ್ಕಂದಧರಃ ಎಂದರೆ ಸ್ಕಂದನನ್ನು ಧರಿಸಿದವನು. ಸ್ಕಂದ ಶಿವನಲ್ಲಿ 'ಷಣ್ಮುಖನಾಗಿ', ಚತುರ್ಮುಖನಲ್ಲಿ 'ಸನತ್ ಕುಮಾರನಾಗಿ' ಹಾಗೂ ವಿಷ್ಣುವಿನಲ್ಲಿ 'ಕಾಮನಾಗಿ' ಹುಟ್ಟದ. ಹೀಗೆ ಸ್ಕಂದನನ್ನು ಧರಿಸಿ ಆತನನ್ನು ಮಗನಾಗಿ ಪಡೆದ ಭಗವಂತ ಸ್ಕಂದಧರಃ. ಮೇಲೆ ಹೇಳಿದಂತೆ ಸ್ಕಂದ ಎಂದರೆ ಜ್ಞಾನಾನಂದವನ್ನು ಕೊಡುವವರು. ನಮಗೆ ಜ್ಞಾನಾನಂದದ ಅನುಭವವನ್ನು ಕೊಡುವವರು ನಮ್ಮ ಆತ್ಮಾಭಿಮಾನಿ ದೇವತೆಗಳಾದ ಚತುರ್ಮುಖ ಹಾಗೂ ಪ್ರಾಣ. ಈ ಜೀವಾಭಿಮಾನಿ ದೇವತೆಗಳನ್ನು ಧರಿಸಿದ ಭಗವಂತ ಸ್ಕಂದಧರಃ.
330) ಧುರ್ಯಃ
ಧುರ್ಯ ಎಂದರೆ 'ಮುಂದಾಳು'. ಈ ಪ್ರಪಂಚದಲ್ಲಿನ ಪ್ರತಿಯೊಂದು ಪ್ರಾಣಿಸಂಕುಲದಲ್ಲಿ ಒಬ್ಬ ಮುಂದಾಳುವನ್ನು ಕಾಣುತ್ತೇವೆ. ಆನೆಗಳ ಗುಂಪಿನಲ್ಲಿ ಒಂದು ಆನೆ ಮುಂದಾಳಾಗಿರುತ್ತದೆ ಹಾಗೂ ಇತರ ಆನೆಗಳು ಅದನ್ನು ಅನುಸರಿಸುತ್ತವೆ. ಮಂಗಗಳ ಗುಂಪನ್ನು ಒಂದು ಮುಂದಾಳು ಮಂಗ ಮುನ್ನೆಡೆಸುತ್ತದೆ ಹಾಗೂ ಇತರೆ ಮಂಗಗಳು ಅದನ್ನು ಅನುಸರಿಸುತ್ತವೆ. ವೈರಿಯನ್ನು ಸದೆಬಡಿಯುವಾಗ 'ಮುಂದಾಳು' ಎದೆಯೊಡ್ಡಿ ಹೋರಾಡಿದರೆ ಇತರರು ಆತನ ಅಪ್ಪಣೆಯಂತೆ ಹೋರಾಟ ಮಾಡುತ್ತಾರೆ; ಮಹಾಭಾರತ ಯುದ್ಧದಲ್ಲಿ ಭೀಮಾರ್ಜುನರು 'ಮುಂದಾಳಾಗಿದ್ದು' ಹೋರಾಟ ಮಾಡಿ ಧರ್ಮರಾಯನಿಗೆ ಜಯವನ್ನು ತಂದುಕೊಡುತ್ತಾರೆ; ಅರ್ಜುನನ ರಥದ 'ಧುರ್ಯ' ಸ್ವಯಂ ಶ್ರೀಕೃಷ್ಣನಾಗಿದ್ದ. ಹೀಗೆ ಭಗವಂತ ಪ್ರತಿಯೊಂದು ಮುಂದಾಳುವಿನಲ್ಲಿ 'ಧುರ್ಯ' ರೂಪನಾಗಿ ಸನ್ನಿಹಿತನಾಗಿರುತ್ತಾನೆ. ಪ್ರತಿಯೊಂದು ಮಹತ್ಕಾರ್ಯವನ್ನು ಮುಂದಾಳಾಗಿ ಮಾಡುವ ಹಾಗೂ ಮಾಡಿಸುವ ಭಗವಂತ ಧುರ್ಯಃ

No comments:

Post a Comment