Saturday, September 11, 2010

Vishnu sahasranama 334-336


ವಿಷ್ಣು ಸಹಸ್ರನಾಮ: ಬೃಹದ್ಭಾನುರಾದಿದೇವಃ ಪುರಂದರಃ

334) ಬೃಹದ್ಭಾನುಃ
ಈ ಜಗತ್ತಿನಲ್ಲಿ ಇರುವ ಎಲ್ಲಾ ಬೃಹತ್ತಾದ ಬೆಳಕುಗಳನ್ನು ಬೆಳಗಿಸುವವ ಬೃಹದ್ಭಾನು. ಹೊರಪ್ರಪಂಚದಲ್ಲಿ ಹಾಗು ನಮ್ಮೊಳಗೆ ಐದು ಪ್ರಮುಖವಾದ ಬೆಳಕುಗಳಿವೆ. (೧) ಮನುಷ್ಯನ ಕಣ್ಣಿಗೆ ಗೋಚರವಾಗುವ ಅತೀ ದೊಡ್ಡ ಬೆಳಕು ಸೂರ್ಯ; ಆತನೇ ನಮ್ಮ ಕಣ್ಣಿನ ಅಭಿಮಾನಿ ದೇವತೆ. (೨) ತಂಪಾದ ಆಹ್ಲಾದಕರ ಬೆಳದಿಂಗಳನ್ನೀಯುವ ಹಾಗು ನಮ್ಮ ಕಿವಿಯ ಅಭಿಮಾನಿ ದೇವತೆ ಚಂದ್ರ. (೩) ಭೂಮಿಯಲ್ಲಿರುವ ಅತ್ಯಂತ ಮಹತ್ತಾದ ಬೆಳಕು ಹಾಗು ನಮ್ಮ ಬಾಯಿಯ ಅಭಿಮಾನಿ ದೇವತೆ ಬೆಂಕಿ. (೪)ಚಂದ್ರನ ಸುತ್ತಲೂ ಇರುವ ನಕ್ಷತ್ರಗಳು; ನಾವು ನಮ್ಮ ಕಣ್ಣಿನಿಂದ ನೋಡುವ ಮುಖೇನ, ಕಿವಿಯಿಂದ ಕೇಳುವ ಮುಖೇನ ಹಾಗೂ ಬಾಯಿಯಿಂದ ಜ್ಞಾನವನ್ನು ಇನ್ನೊಬ್ಬರಿಗೆ ಹೇಳುವ ಮುಖೇನ, ನಮ್ಮೊಳಗೆ ತಿಳುವಳಿಕೆಯ ನಕ್ಷತ್ರಗಳು ಬೆಳಗುತ್ತವೆ. ಹೀಗೆ ಜ್ಞಾನ ವೃದ್ದಿಯಾಗಿ ನಮ್ಮಲ್ಲಿ ಅತ್ಯಂತ ಪ್ರಮುಖವಾದ ಐದನೇ ಬೆಳಕು ಚಿಮ್ಮುತ್ತದೆ. (೫) ಈ ಐದನೇ ಅತ್ಯಂತ ಪ್ರಮುಖ ಬೆಳಕು 'ಮಿಂಚು' ಅದೇ ನಮ್ಮೊಳಗಿನ ಸತ್ಯದ ಸ್ಪೂರಣ. ಹೀಗೆ ನಮ್ಮಲ್ಲಿನ ಕಣ್ಣು, ಕಿವಿ, ಬಾಯಿ,ಮನೋವೃತ್ತಿ ಮತ್ತು ಅಂತಃಸ್ಪೂರಣ ಹಾಗು ಹೊರಗಿನ ಸೂರ್ಯ, ಚಂದ್ರ, ಅಗ್ನಿ ನಕ್ಷತ್ರ ಮತ್ತು ಮಿಂಚನ್ನು ಬೆಳಗುವ ಭಗವಂತ ಬೃಹದ್ಭಾನುಃ.
335) ಆದಿದೇವಃ
ಸೃಷ್ಟಿಯ ಪೂರ್ವದಲ್ಲಿದ್ದವ, ಆದಿತ್ಯನೊಳಗೆ ಅಂತಃರ್ಯಮಿಯಾಗಿದ್ದು ಬೆಳಗುವ ಹಾಗು ಎಲ್ಲಕ್ಕೂ ಮೂಲಕಾರಣನಾದ ಭಗವಂತ ಆದಿದೇವಃ.
336) ಪುರಂದರಃ
ಚತುರ್ಮುಖನ ಪುರ ಈ ಬ್ರಹ್ಮಾಂಡ, ನಮ್ಮ ಪುರ ಈ ನಮ್ಮ ದೇಹ. ಪ್ರಳಯ ಕಾಲದಲ್ಲಿ ಈ ಬ್ರಹ್ಮಾಂಡವನ್ನು ಬೇಧಿಸುವವನು; ನಮ್ಮ ಗತಿಗನುಗುಣವಾಗಿ ನಮ್ಮ ಶರೀರವೆಂಬ ಪುರವನ್ನು ಬೇಧಿಸುವವ; ಮೋಕ್ಷ ಯೋಗ್ಯರ ಸೂಕ್ಷ್ಮ ಶರೀರವನ್ನು ಭೇಧಿಸಿ ನಮ್ಮ ಸ್ವರೂಪ ರೂಪಿ ಆತ್ಮವನ್ನು ಧಾರಣೆ ಮಾಡುವವ; ಶತ್ರುಗಳ ಪುರವನ್ನು ಪುಡಿಗಟ್ಟುವ ಭಗವಂತ ಪುರಂದರಃ.

No comments:

Post a Comment