Wednesday, September 15, 2010

Vishnu sahasranama 351-355


ವಿಷ್ಣು ಸಹಸ್ರನಾಮ : ಮಹರ್ದ್ಧಿರೃದ್ಧೋ ವೃದ್ಧಾತ್ಮಾ ಮಹಾಕ್ಷೋ ಗರುಡಧ್ವಜಃ
351) ಮಹರ್ದ್ಧಿಃ

ಮಹರ್ದ್ಧಿ ಎಂದರೆ ಪೂರ್ಣತೆಯ ಪರಾಕಾಷ್ಠೆ. ಪೂರ್ಣತೆಯಲ್ಲಿ ಎರಡು ವಿಧ; ಒಂದು ಸಾಪೇಕ್ಷವಾದ ಪೂರ್ಣತೆ ಹಾಗು ಇನ್ನೊಂದು ನಿರಪೇಕ್ಷವಾದ ಅಥವಾ ಅನಂತವಾದ ಪೂರ್ಣತೆ. ಬಿಂದಿಗೆಯಲ್ಲಿ ನೀರನ್ನು ತುಂಬಿಸಿದರೆ ಅದು ಪೂರ್ಣ ಆದರೆ ಭಗವಂತನ ಪೂರ್ಣತೆ ಸಮುದ್ರದಂತೆ (ಇಲ್ಲಿ ಸಮುದ್ರ ಎನ್ನುವುದು ಕೇವಲ ದೃಷ್ಟಾಂತ); ಅನಂತವಾದ ಪೂರ್ಣತೆ.
352) ಋದ್ಧಃ
ಎಲ್ಲಾ ಸಮೃದ್ದಿಗಳಿಂದ ಪೂರ್ಣನಾದವನು ಋದ್ಧ. ಒಂದು ಅಮೂಲ್ಯವಾದ ಗಿಡಮೂಲಿಕೆಯನ್ನೂ ಕೂಡಾ ಋದ್ಧ ಎನ್ನುತ್ತಾರೆ; ಹಾಗೆ ಕುಟ್ಟಿ ಮಾಡಿದ ತೌಡು ಮಿಶ್ರಿತ ಪೋಷಕಾಂಶಗಳಿಂದ ಕೂಡಿದ ಅಕ್ಕಿ ಕೂಡಾ ಋದ್ಧ. ಗಿಡಮೂಲಿಕೆಯಲ್ಲಿ, ಕುಟ್ಟಣದ ಅಕ್ಕಿಯಲ್ಲಿ ಭಗವಂತನ ವಿಶೇಷವಾದ ವಿಭೂತಿ ಅಡಗಿದೆ. ಆತ ಪರಿಪೂರ್ಣ ಅದಕ್ಕಾಗಿ ಋದ್ಧಃ.
353) ವೃದ್ಧಾತ್ಮಾ
ಭಗವಂತ ಇಂದ್ರಿಯಗಳಿಗೆ ಎಟುಕದವನು. ಆತನ ದೇಹ ಎಲ್ಲಾ ಕಡೆ ಆಕಾಶದಂತೆ ತುಂಬಿದೆ. ಆಕಾಶಕ್ಕೂ ಭಗವಂತನಿಗೂ ಇರುವ ಒಂದು ವೆತ್ಯಾಸ ಎಂದರೆ ಆಕಾಶಕ್ಕೆ ಆತ್ಮವಿಲ್ಲ ಭಗವಂತನಿಗೆ ಇದೆ. ಭಗವಂತನ ದೇಹ ಪಂಚಭೂತಗಳಿಂದಾದದ್ದಲ್ಲ. ಅದು ಜ್ಞಾನಾನಂದಗಳಿಂದಾದ ಶರೀರ. ಮನುಷ್ಯ ತನ್ನ ಸಾಧನೆ ಮುಖೇನ ತನ್ನ ಸ್ವರೂಪವನ್ನು ತಿಳಿದಾಗಮಾತ್ರ ಈ ಸಂಗತಿ ಅರ್ಥವಾಗುತ್ತದೆ. ಭಗವಂತನ ಬಣ್ಣ ಆಕಾರ ಎಲ್ಲವೂ ಜ್ಞಾನಾನಂದಮಯವಾದದ್ದು. ಆತ ತುಂಬಿದ ಅನಾದಿಮೂರ್ತಿ. ಹೀಗೆ ಜ್ಞಾನಾನಂದಮಯವಾದ ಶರೀರ ಮತ್ತು ಆತ್ಮದಿಂದ ಎಲ್ಲೆಡೆ ವ್ಯಾಪ್ತನಾಗಿರುವ ಭಗವಂತ ವೃದ್ಧಾತ್ಮಾ.
ವೃದ್ಧರು ಎಂದರೆ ತಲೆ ಹಣ್ಣಾದವರು. ಇಲ್ಲಿ ತಲೆ ಎಂದರೆ ಒಳಗಿನ ತಲೆ. ಹಣ್ಣಾಗುವುದು ಎಂದರೆ ಜ್ಞಾನದ ಉತ್ತುಂಗಕ್ಕೇರುವುದು; ಆದ್ದರಿಂದ ವೃದ್ಧಾ ಎಂದರೆ ಜ್ಞಾನಿ. ಹೀಗೆ ಸ್ವಯಂ ಪೂರ್ಣಜ್ಞಾನಿ ಹಾಗು ಯಾರಲ್ಲಿ ಜ್ಞಾನವಿದೆ ಅವರನ್ನು ಪ್ರೀತಿಸುವ ಭಗವಂತ ವೃದ್ಧಾತ್ಮಾ.
354) ಮಹಾಕ್ಷಃ
ಎಲ್ಲೆಡೆಯೂ ಕಣ್ಣಿಟ್ಟವನು; ಸರ್ವಗತವಾದ ಕಣ್ಣಿನವನು; ಭಗವಂತನಿಗೆ ತಿಳಿಯದಂತೆ ಯಾವುದೇ ಕ್ರಿಯೆ ನಡೆಯಲು ಅಸಾಧ್ಯ. ಭಗವಂತ ಸರ್ವಗತವಾದ ಇಂದ್ರಿಯಗಳುಳ್ಳವನು.
355) ಗರುಡದ್ವಜಃ
ಗರುಡನ ಮೇಲೇರಿ ವಿಹರಿಸುವವನು. ಗರುಡಾರೂಢ ಭಗವಂತನ ಅನೇಕ ರೂಪದ ಉಪಾಸನೆ ನಮ್ಮಲ್ಲಿ ರೂಢಿಯಲ್ಲಿದೆ. ಇದರಲ್ಲಿ ಒಂದು "ಶ್ರೀಕರ" ರೂಪ. ಎರಡು ಕೈಗಳಿಂದ ಸುವರ್ಣವನ್ನೀಯುವ ಗರುಡಾರೂಢ ಭಗವಂತನ ಮೂರ್ತಿ. ಇಲ್ಲಿ "ಸು-ವರ್ಣ" ಎಂದರೆ ಅಕ್ಷರಗಳ ಮೂಲಕ ಅಕ್ಷರನಾದ ಭಗವಂತನನ್ನು ತಿಳಿಯುವ ಜ್ಞಾನ. ಇಂತಹ ಭಗವಂತನ ಅರಿವನ್ನು ಕೊಡತಕ್ಕ ರೂಪ ಗರುಡಾರೂಢ ಸಂಸ್ಥಿತಿ.
ನಮ್ಮ ದೇಹವನ್ನು ನಿಯಂತ್ರಿಸುವ ಅನೇಕ ಶಕ್ತಿಗಳನ್ನು ಪ್ರಾಚೀನರು ಗುರುತಿಸಿದರು. ಮುಖ್ಯವಾಗಿ ನಾಲ್ಕು ಪುರುಷರು ನಮ್ಮ ದೇಹವನ್ನು ನಿಯಂತ್ರಿಸುತ್ತಾರೆ. ಶರೀರ ನಿಯಂತ್ರಿಸುವ 'ಶರೀರಪುರುಷ' ಶಿವ; ಪ್ರಾಣಮಯ ಕೋಶವನ್ನು ನಿಯಂತ್ರಿಸಿ ನಮ್ಮ ಮಾತನ್ನು ನಿಯಂತ್ರಿಸುವ "ಛಂದಪುರುಷ" ಶೇಷ; ನಮ್ಮ ಮನೋಮಯ ಕೋಶವನ್ನು ನಿಯಂತ್ರಿಸುವ "ವೇದ ಪುರುಷ" ಗರುಡ. ಆದ್ದರಿಂದ ಗರುಡ "ವೇದ-ಜ್ಞಾನದ" ಸಂಕೇತ. ಗರುಡ ದ್ವಜ ಎಂದರೆ ಸಾಕ್ಷಾತ್ ವೇದಗಳ ಮೇಲೆ ಸವಾರಿ ಮಾಡಿಕೊಂಡು ಬರುವವ. ಇಂತಹ ಭಗವಂತನನ್ನು ತಿಳಿಯ ಬೇಕಾದರೆ ವೇದದ ಅರಿವೊಂದೇ ನಮಗಿರುವ ಮಾರ್ಗ.

No comments:

Post a Comment