Wednesday, September 22, 2010

Vishnusahasranama 374-378

ವಿಷ್ಣು ಸಹಸ್ರನಾಮ: ಉದ್ಭವಃ, ಕ್ಷೋಭಣೋ ದೇವಃ ಶ್ರೀಗರ್ಭಃ ಪರಮೇಶ್ವರಃ 374) ಉದ್ಭವಃ ಇಡೀ ವಿಶ್ವ ಪ್ರಳಯಕಾಲದಲ್ಲಿ ಸೂಕ್ಷ್ಮ ರೂಪದಲ್ಲಿ ಭಗವಂತನೊಳಗಿರುತ್ತದೆ. ಸೃಷ್ಟಿ ಕಾಲದಲ್ಲಿ ಸ್ಪೋಟವಾಗಿ ಈ ಬ್ರಹ್ಮಾಂಡ ಭಗವಂತನ ನಾಭಿಯಿಂದ ಉದ್ಭವವಾಗುತ್ತದೆ. ಹೀಗೆ ನಾಮ ರೂಪಾತ್ಮಕವಾದ ಈ ಪ್ರಪಂಚವನ್ನು ಸೃಷ್ಟಿಸುವ ಭಗವಂತ ಉದ್ಭವಃ. 375) ಕ್ಷೋಭಣಃ ದುಷ್ಟರನ್ನು ಕ್ಷೋಭೆಗೊಳಿಸುವ ಭಗವಂತ ಕ್ಷೋಭಣಃ. 376) ದೇವಃ ಈ ನಾಮ ಎಲ್ಲರಿಗೂ ಚಿರ ಪರಿಚಿತ. ಜಾತಿ ಧರ್ಮ ಭೇದವಿಲ್ಲದೆ ಎಲ್ಲರೂ ಭಗವಂತನನ್ನು 'ದೇವ' ಎಂದು ಸಂಭೋದಿಸುತ್ತಾರೆ. ವಿಶೇಷವೆಂದರೆ ಚಿರಪರಿಚಿತವಾದ ಈ ನಾಮದ ಹಿಂದಿನ ಅರ್ಥ ಮಾತ್ರ ಎಲ್ಲರಿಗೂ ಅಪರಿಚಿತ! ಈಗ ದೇವ ಪದದ ಅರ್ಥವೇನು ಎನ್ನುವುದನ್ನು ನೋಡೋಣ. ದೇವಃ ಎನ್ನುವ ಪದ ಮೂಲತಃ 'ದಿವು' ಎನ್ನುವ ದಾತುವಿನಿಂದ ಹುಟ್ಟಿದ ಶಬ್ದ. ಪ್ರಾಚೀನ ದಾತು ಪಾಠದಲ್ಲಿ ಈ ದಾತುವಿಗೆ ಏಳು ಅರ್ಥವನ್ನು ನೋಡಬಹುದು; ಅವುಗಳೆಂದರೆ: ೧) ಧ್ಯುತಿ ೨) ವಿಜಿಗೀಶ ೩) ಕಾಂತಿ ೪) ಸ್ತುತಿ ೫) ವ್ಯವಹಾರ ೬) ಕ್ರೀಡಾ ೭) ಗತಿಶು. ಇತ್ತೀಚೆಗೆ ಮೋದ, ಮದ ಮತ್ತು ಸ್ವಪ್ನ ಎನ್ನುವ ಇನ್ನೂ ಮೂರು ಅರ್ಥವನ್ನು ಸೇರಿಸಿದ್ದಾರೆ. ಆದರೆ ಇದು ಪ್ರಾಚೀನ ದಾತುಪಾಠದಲ್ಲಿ ಇಲ್ಲ. ಈಗ ಸಂಕ್ಷಿಪ್ತವಾಗಿ ಮೇಲಿನ ಏಳು ಅರ್ಥಗಳನ್ನು ನೋಡೋಣ. ೧) ಧ್ಯುತಿ : ಧ್ಯುತಿ ಅಂದರೆ ಬೆಳಕಿನ ಸ್ವರೂಪ. ಬೆಳಕಿನ ಪುಂಜವಾದ ಸೂರ್ಯ ಚಂದ್ರಾದಿಗಳಿಗೆ ಬೆಳಕನ್ನೀಯುವ ಭಗವಂತ ನಮ್ಮೊಳಗೆ ಜ್ಞಾನದ ಬೆಳಕನ್ನು ತುಂಬುತ್ತಾನೆ. ೨) ವಿಜಿಗೀಶ: ಭಗವಂತ ಎಲ್ಲರಿಗಿಂತ ಎತ್ತರದಲ್ಲಿರುವವನು ಹಾಗು ಗೆಲುವಿನ ಸ್ವರೂಪ. ೩) ಕಾಂತಿ: ಕೇವಲ ಇಚ್ಚೆಯಿಂದ ಸೃಷ್ಟಿ ಮಾಡಬಲ್ಲವ. ನಮಗೆ ಇಚ್ಚೆಯನ್ನು ಕೊಟ್ಟವ ಹಾಗು ಅದನ್ನು ಅವರವರ ಯೋಗ್ಯತೆಗೆ ತಕ್ಕಂತೆ ಪೂರೈಸುವವ. ೪) ಸ್ತುತಿ: ಎಲ್ಲರಿಂದ ಸ್ತುತನಾದವನು; ಎಲ್ಲರೂ ಯಾರನ್ನು ಸ್ತುತಿಸುತ್ತಾರೋ ಅವನು ಸರ್ವಶಬ್ದ ವಾಚ್ಯನಾದ ಭಗವಂತ. ೫) ವ್ಯವಹಾರ: ಜಗತ್ತಿನ ಸಮಸ್ತ ವ್ಯವಹಾರವನ್ನು ನಿರ್ವಹಿಸುವವ. ೬) ಕ್ರೀಡಾ: ಸೃಷ್ಟಿ-ಸ್ಥಿತಿ-ಸಂಹಾರ ಇದು ಭಗವಂತನಿಗೊಂದು ಕ್ರೀಡೆ. ಹುಟ್ಟು-ಸಾವು, ಸರ್ವ ವ್ಯವಹಾರಗಳು ಆತನಿಗೊಂದು ಕ್ರೀಡೆ. ೭) ಗತಿಶು: ಚಲನೆ ಮತ್ತು ಜ್ಞಾನ ಕೊಟ್ಟವ. ಯಾರು ಎಲ್ಲಾ ಕಡೆ ಗತನಾಗಿದ್ದಾನೋ; ಎಲ್ಲವನ್ನೂ ತಿಳಿದಿದ್ದಾನೋ; ಎಲ್ಲರೊಳಗೆ ಬಿಂಬ ರೂಪದಲ್ಲಿ ನೆಲೆಸಿದ್ದಾನೋ ಅವನು 'ದೇವ' ಹೀಗೆ ಅನೇಕ ಅರ್ಥಗಳನ್ನು 'ದೇವ' ಎನ್ನುವ ನಾಮದಲ್ಲಿ ಕಂಡುಕೊಳ್ಳಬಹುದು. "ಓ ದೇವರೇ" ಎನ್ನುವಾಗ ಮೇಲಿನ ಅರ್ಥವನ್ನು ಒಮ್ಮೆ ನೆನೆದರೆ ಅದರಿಂದಾಗುವ ಆನಂದ ಅಪರಿಮಿತ. ಭಗವಂತನ ನಾಮದಲ್ಲಿ ಅಷ್ಟೊಂದು ಬಲವಿದೆ. ಅದಕ್ಕಾಗಿ ಪುರಂದರ ದಾಸರು 'ನೀನ್ಯಾಕೋ ನಿನ್ನ ಹಂಗ್ಯಾಕೋ ನಿನ್ನ ನಾಮದ ಭಲ ಒಂದಿದ್ದರೆ ಸಾಕೋ" ಎಂದು ಭಗವಂತನನ್ನು ವಿನೋದ ಮಾಡಿದ್ದಾರೆ". 377) ಶ್ರೀಗರ್ಭಃ 'ಶ್ರೀ' ಎಂದರೆ ಸಂಪತ್ತು. ಎಲ್ಲಾ ಸಂಪತ್ತು ಭಗವಂತನ ಒಡಲಿಂದ ಉದ್ಭವವಾದದ್ದು. ಸಮಸ್ತ ವೇದಗಳು ಯಾರ ಗರ್ಭದಿಂದ ಉದ್ಭವವಾಯಿತೋ ಅವನು ಶ್ರೀಗರ್ಭಃ. ಸಮಸ್ತ ವೇದದ, ಸರ್ವ ಸಂಪತ್ತಿನ ಅಭಿಮಾನಿಯಾದ ಲಕ್ಷ್ಮಿಗೆ ನೆಲೆಯಾಗಿರುವ ಭಗವಂತ ಶ್ರೀಗರ್ಭಃ 378) ಪರಮೇಶ್ವರಃ ಈಶ, ಈಶ್ವರ, ಪರಮೇಶ ಹಾಗು ಪರಮೇಶ್ವರ ಎಲ್ಲವೂ ಸುಮಾರಾಗಿ ಒಂದೇ ಅರ್ಥವನ್ನು ಕೊಡುವ ಪದಗಳು. ಈಶ ಎಂದರೆ ಸಮರ್ಥ. ನಮ್ಮನ್ನು ನಿಯಂತ್ರಿಸುವ ದೇವತೆಗಳು ಈಶರು. ಅವರನ್ನು ನಿಯಂತ್ರಿಸುವವರು ಅಂತಃಕರಣ ಹಾಗು ಜೀವಕಲಾಭಿಮಾನಿ ದೇವತೆಗಳಾದ ಗರುಡ, ಶೇಷ ರುದ್ರ ಹಾಗು ಬ್ರಹ್ಮ-ವಾಯು. ಈ ತತ್ವಾಭಿಮಾನಿ ದೇವತೆಗಳ ನಿಯಮಕನಾದ, ಎಲ್ಲಕ್ಕಿಂತ ಎತ್ತರದಲ್ಲಿರುವ, ಎಲ್ಲರ ಒಡೆಯ ಭಗವಂತ ಪರಮೆಶ್ವರಃ.

No comments:

Post a Comment