Tuesday, September 28, 2010

Vishnu sahasranama 402-405


ವಿಷ್ಣು ಸಹಸ್ರನಾಮ: ವೀರಃ ಶಕ್ತಿಮತಾಂ ಶ್ರೇಷ್ಠೋ ಧರ್ಮೋ ಧರ್ಮವಿದುತ್ತಮಃ
402) ವೀರಃ

ಇಡೀ ಜಗತ್ತನ್ನು ತನ್ನ ಪರಾಕ್ರಮದಿಂದ ಮಣಿಸಬಲ್ಲ ಶೌರ್ಯ ಉಳ್ಳವನು ವೀರಃ. ಈ ನಾಮವನ್ನು ಬಿಡಿಸಿ ನೋಡಿದಾಗ ವೀ+ಈರ ಎಂದಾಗುತ್ತದೆ. ವೀ ಎಂದರೆ ವಿಶಿಷ್ಟ, ಆದ್ದರಿಂದ ವೀರಃ ಎಂದರೆ ವಿಶಿಷ್ಟ ಜ್ಞಾನವನ್ನು ಪಡೆದ ಅಪರೋಕ್ಷ ಜ್ಞಾನಿಗಳನ್ನೂ ಪ್ರೇರೇಪಿಸುವ ಭಗವಂತ ವೀರಃ. 'ಈರ' ಎಂದರೆ ಅಪರೋಕ್ಷ ಜ್ಞಾನಿಗಳಲ್ಲಿ ಅತೀ ಎತ್ತರದಲ್ಲಿರುವ ಪ್ರಾಣ ದೇವರು. ಇಂತಹ ಪ್ರಾಣದೇವರಿಗೆ ಜ್ಞಾನದ ವಿಶಿಷ್ಟ ಸ್ಥಾನವನ್ನು ಕೊಟ್ಟ ಭಗವಂತ ವೀರಃ. ಸಮಸ್ತ ವೇದಗಳ ಅಭಿಮಾನಿ ದೇವತೆಯಾದ ಗರುಡನನ್ನು 'ವೀ' (ಹಕ್ಕಿ) ಎನ್ನುತ್ತಾರೆ. ಗರುಡ ವಾಹನನಾಗಿ ಬರುವ ವೇದ ವೇಧ್ಯನಾದ ಭಗವಂತನನ್ನು ತಿಳಿಯಬೇಕಾದರೆ ಮೊದಲು ವೇದವನ್ನು ತಿಳಿಯಬೇಕು. ಇಂತಹ ಭಗವಂತ ವೀರಃ.
403) ಶಕ್ತಿಮತಾಂ ಶ್ರೇಷ್ಠಃ
ಜಗತ್ತಿನಲ್ಲಿರುವ ಸರ್ವ ಶಕ್ತಿಗಳ ಮೂಲ ಭಗವಂತ. ಆರ್ಥಿಕಶಕ್ತಿ , ದೈಹಿಕಶಕ್ತಿ, ಬೌದ್ಧಿಕಶಕ್ತಿ, ಜನಶಕ್ತಿ, ಹೀಗೆ ಯಾವುದೇ ರೂಪದ ಶಕ್ತಿಯಿರಲಿ ಅದನ್ನು ನಮಗೆ ಕೊಟ್ಟವ ಭಗವಂತ. ಭಗವಂತನ ಶಕ್ತಿ ನಮ್ಮಂತೆ ಬಾಹ್ಯವಲ್ಲ. ಆತ ಸ್ವರೂಪಭೂತವಾದ, ಶಾಶ್ವತವಾದ, ಅನಂತವಾದ, ಸ್ಥಿರವಾದ ಶಕ್ತಿ. ನಾವು ಭಗವಂತ ನಮಗೆ ಕೊಟ್ಟ ಶಕ್ತಿಯ ಅಹಂಕಾರದಲ್ಲಿ ಬದುಕುತ್ತೇವೆ, ಆದರೆ ನಮ್ಮ ಯಾವ ಶಕ್ತಿಯೂ ಸ್ಥಿರವಲ್ಲ. ಇಡೀ ಜಗತ್ತನ್ನು ಗೆದ್ದವ ಕೂಡಾ ಒಂದು ದಿನ ಸಾವಿಗೆ ಸೋಲಬೇಕು. ಭಗವಂತನ ಕಾಲ ಚಕ್ರ ಬ್ರಹ್ಮಾದಿ ದೇವತೆಗಳನ್ನೂ ಬಿಡುವುದಿಲ್ಲ. ಆದ್ದರಿಂದ ನಮ್ಮ ಶಕ್ತಿ ಕ್ಷಣಿಕ. ಹೀಗೆ ಶಕ್ತಿವಂತರಿಗೆಲ್ಲ ಹಿರಿಯ ಶಕ್ತಿಶಾಲಿ, ಮೂಲಶಕ್ತಿ ಸ್ವರೂಪ ಭಗವಂತ ಶಕ್ತಿಮತಾಂ ಶ್ರೇಷ್ಠಃ.
404) ಧರ್ಮಃ
ಯಾವುದು ನಮ್ಮ ಬದುಕಿಗೆ ಆದಾರವಾಗಿದೆಯೋ ಅದು ಧರ್ಮ; ಆದ್ದರಿಂದ ನಿಜವಾದ ಧರ್ಮ ಭಗವಂತ. ಭಗವಂತ ಒಂದು ವಸ್ತುವಿನ ಸ್ವರೂಪಭೂತವಾದ ಗುಣವನ್ನು ಅಭಿವ್ಯಕ್ತ ಮಾಡಿಸುತ್ತಾನೆ ಹೊರತು ಅಲ್ಲಿ ಇಲ್ಲದ ಗುಣವನ್ನಲ್ಲ. ವೈವಿಧ್ಯತೆ ಪ್ರಪಂಚ ಸೃಷ್ಟಿಯ ಸಹಜ ಕ್ರಿಯೆ. ವಸ್ತುವಿನ ಸಹಜ ಗುಣಕ್ಕನುಗುಣವಾಗಿ ಪ್ರಪಂಚ ಸೃಷ್ಟಿ ಮಾಡಿದ ಭಗವಂತ ಧರ್ಮಃ.
405) ಧರ್ಮವಿದುತ್ತಮಃ
ನಿಜವಾದ ಧರ್ಮಜ್ಞ ಭಗವಂತನೊಬ್ಬನೇ. ಏಕೆಂದರೆ ಧರ್ಮ ಕಾಲ ಬಾದಿತ. ಒಂದು ಕಾಲದ ಧರ್ಮ ಇನ್ನೊಂದು ಕಾಲದಲ್ಲಿ ಅಧರ್ಮವಾಗಬಹುದು. ಒಂದು ವ್ಯಕ್ತಿಗೆ ಧರ್ಮವಾಗಿರುವ ವಿಷಯ ಇನ್ನೊಬ್ಬನಿಗೆ ಅಧರ್ಮವಾಗಬಹುದು, ಒಂದು ದೇಶದ ಧರ್ಮ ಇನ್ನೊಂದು ದೇಶಕ್ಕೆ ಅಧರ್ಮವಾಗಬಹುದು. ಆದ್ದರಿಂದ ಧರ್ಮ ಯಾವುದು ಎಂದು ಸಮಷ್ಟಿಯಾಗಿ ಹೇಳಲಾಗದು. ಧರ್ಮಕ್ಕೆ ಯಾವುದೇ ಮಾನದಂಡವಿಲ್ಲ. ಧರ್ಮ ಯಾವುದು ಎನ್ನುವುದು ಹೊರನೋಟದಿಂದ ಹೇಳಲಾಗದು. ಯಾವ ಕ್ರಿಯೆಯಿಂದ ನಮ್ಮ ಮನಸ್ಸು ಭಗವಂತನೆಡೆಗೆ ಒಲಿಯುತ್ತದೋ ಅದು ಧರ್ಮ. ಯಾವುದರಿಂದ ನಾವು ಭಗವಂತನನ್ನು ಮರೆಯುತ್ತೆವೋ ಅದು ಅಧರ್ಮ. ಮಹಾಭಾರತದಲ್ಲಿ ಶ್ರೀಕೃಷ್ಣ ಧರ್ಮವನ್ನು ವಿಶಿಷ್ಟವಾಗಿ ಎಲ್ಲರಿಗೂ ತಿಳಿಹೇಳಿದ್ದನ್ನು ನಾವು ಕಾಣುತ್ತೇವೆ.ಇನ್ನೊಬ್ಬರ ಒಳಿತಿಗಾಗಿ ನಾವು ಸುಳ್ಳು ಹೇಳಿದರೆ ಅದು ಅಧರ್ಮವಲ್ಲ ಧರ್ಮ ಎನ್ನುವ ವಿಷಯ ಕೃಷ್ಣ ಹೇಳುವ ತನಕ ಇನ್ಯಾರಿಗೂ ತಿಳಿದಿರಲಿಲ್ಲ. ಧರ್ಮವನ್ನು ತಿಳಿದವರಲ್ಲಿ ಉತ್ತಮನು ಭಗವಂತ. ಈ ಕಾರಣದಿಂದ ಧರ್ಮವಿದುತ್ತಮಃ ಎನ್ನುವುದು ಭಗವಂತನಿಗೆ ಅನ್ವರ್ಥ ನಾಮ.

No comments:

Post a Comment